Categories
ಪತ್ರಿಕೋದ್ಯಮ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಬಿ.ವಿ. ಮಲ್ಲಿಕಾರ್ಜುನಯ್ಯ

ಪತ್ರಿಕೋದ್ಯಮದ ಹಲವು ಸ್ತರಗಳಲ್ಲಿ ದಕ್ಷತೆ ಮೆರೆದವರು ಬಿ.ವಿ.ಮಲ್ಲಿಕಾರ್ಜುನಯ್ಯ. ಐದು ದಶಕಗಳ ಸುದೀರ್ಘ ಸೇವೆಯ ಪತ್ರಕರ್ತರು, ಪತ್ರಿಕಾ ಸಂಘಟನೆಗಳಲ್ಲೂ ಕ್ರಿಯಾಶೀಲರು.
ತುಮಕೂರು ಜಿಲ್ಲೆಯ ಬ್ರಹ್ಮಸಂದ್ರದವರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಕನ್ನಡಪ್ರಭ ಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭ.ಉಪಸಂಪಾದಕ ಸ್ಥಾನದಿಂದ ಸಂಪಾದಕ ಹುದ್ದೆವರೆಗೆ ವಿವಿಧ ಸ್ಥಾನಗಳಲ್ಲಿ ಅಕ್ಷರಸೇವೆ. ಉದಯವಾಣಿಯಲ್ಲಿಯೂ ಆರು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ, ಸುವರ್ಣ ನ್ಯೂಸ್‌ನಲ್ಲಿ ಒಂದೂಕಾಲು ವರ್ಷ ವಾರ್ತಾ ಸಂಯೋಜಕರಾಗಿ ಸೇವೆ. ಬರವಣಿಗೆಯ ಜೊತೆಗೆ ಪತ್ರಿಕಾ ಸಂಘಟನೆಗಳಲ್ಲೂ ಪರಿಶ್ರಮ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೇಂದ್ರ ಪತ್ರಿಕಾ ಮಾನ್ಯತಾ ಸಮಿತಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ರಾಜ್ಯ ಪತ್ರಿಕಾ ಅಕಾಡೆಮಿ, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮುಂತಾದ ಸಂಘಟನೆಗಳಲ್ಲಿ ಉನ್ನತ ಹುದ್ದೆಗಳನ್ನಲಂಕರಿಸಿ ದುಡಿದವರು.ಪತ್ರಿಕೋದ್ಯಮದ ಉನ್ನತ ಅಧ್ಯಯನಕ್ಕಾಗಿ ವಿದೇಶಗಳ ಪ್ರವಾಸ ಕೈಗೊಂಡವರು.ಸದ್ಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾಗಿ ಸೇವಾನಿರತರಾಗಿರುವ ಮಲ್ಲಿಕಾರ್ಜುನಯ್ಯ ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೂ ಭಾಜನರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕೆ. ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರು-ಎಂ.ಆರ್.ಜಿ ಗ್ರೂಪ್

ಹೋಟೆಲ್ ಉದ್ಯಮದಲ್ಲಿ ಅದ್ವಿತೀಯ ಸಾಧನೆ-ಯಶಸ್ಸು ಪಡೆದ ಉದ್ಯಮಿ ಕೆ. ಪ್ರಕಾಶ್‌ ಶೆಟ್ಟಿ, ಬಡವರಾಗಿ ಹುಟ್ಟಿದರೂ ಬಡವರಾಗಿಯೇ ಸಾಯಬೇಕಿಲ್ಲ ಎಂಬ ಮಾತನ್ನು ನಿಜವಾಗಿಸಿದ ಛಲವಂತರು.
ಪ್ರಕಾಶ್‌ ಶೆಟ್ಟಿ ಉಡುಪಿ ಜಿಲ್ಲೆಯವರು. ಸಾಮಾನ್ಯ ಕುಟುಂಬದ ಕುಡಿ.ಬಾಲ್ಯದ ಬಡತನ ಯಶಸ್ಸಿನ ಹಂಬಲ ಹುಟ್ಟುಹಾಕಿದ್ದು ಸಹಜವೇ. ಅತಿಥಿ ಸತ್ಕಾರದ ಕನಸು. ೧೯೯೩ರಲ್ಲಿ ಬಂಜಾರ ಹೋಟೆಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಕ್ಕೆ ಪ್ರವೇಶ. ಆನಂತರ ತಿರುಗಿ ನೋಡಿದ್ದೇ ಇಲ್ಲ. ದಶಕಗಳ ಅಂತರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಸೋಜಿಗ, ಶುದ್ದ ಸಾಹಸಯಾತ್ರೆ ಪ್ರತಿಷ್ಠಿತ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾಗಿರುವ ಪ್ರಕಾಶ್‌ ಶೆಟ್ಟಿ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿನಲ್ಲಿರುವ ಗೋಲ್ಡನ್ ಫಿಂಚ್ ಹೋಟೆಲ್, ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳು ಪ್ರಕಾಶ್‌ ಶೆಟ್ಟಿ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿವೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ, ನಾಲ್ಕು ಮತ್ತು ಐದನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಊಟ-ವಸತಿ ಒದಗಿಸಿದ ಹಿರಿಮೆ ಅವರದ್ದು ಬಡಮಕ್ಕಳ ಶಾಲಾ ಕಾಲೇಜು ವೆಚ್ಚ ಭರಿಸುವ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿರುವುದು ಅವರೊಳಗಿನ ಸಮಾಜಮುಖಿತ್ವದ ದ್ಯೋತಕವಾಗಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ನಾ.ಸೋಮೇಶ್ವರ

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕವೇ ಜನಪ್ರಿಯರಾಗಿರುವ ಸಾಧಕರು ನಾ. ಸೋಮೇಶ್ವರ, ವೈದ್ಯರು, ಲೇಖಕರು, ರಸಪ್ರಶ್ನೆ ತಜ್ಞರಾಗಿ ಅವರದ್ದು ನಾಡಿಗೆ ನಾಡೇ ಮೆಚ್ಚುವಂತಹ ಬಹುಶ್ರುತ ಸಾಧನೆ.
ಬೆಂಗಳೂರು ಮೂಲದವರಾದ ನಾ.ಸೋಮೇಶ್ವರ ಹುಟ್ಟಿದ್ದು ೧೯೫೫ರ ಮೇ ೧೪ ರಂದು. ನಾರಪ್ಪ ಮತ್ತು ಅಂಜನಾ ದಂಪತಿ ಸುಪುತ್ರರು, ಅಧ್ಯಯನ, ಕ್ರಿಯಾಶೀಲತೆ ಮತ್ತು ಪ್ರತಿಭಾಸಂಪನ್ನತೆ ಹುಟ್ಟಿನಿಂದಲೇ ಬಂದ ಗುಣವಿಶೇಷ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನದಿ’ ಮಾಸಿಕ ಪತ್ರಿಕೆ ಹೊರತಂದ ಪ್ರತಿಭಾವಂತರು. ಬಿಎಸ್ಸಿ ಪದವಿ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದವರು.ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಫಾರ್ಮಸಿಟಿಕಲ್ ಕಂಪನಿಯ ಸಲಹೆಗಾರರೂ ಕೂಡ.ಬರವಣಿಗೆ-ಸಾಮಾಜಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ.ಅವರೊಳಗಿನ ಜ್ಞಾನಶೀಲತೆ ಬೆಳಕಿಗೆ ಬಂದಿದ್ದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಲೇ. ೨೦೦೪ರಲ್ಲಿ ಚಂದನ ವಾಹಿನಿಯಲ್ಲಿ ಆರಂಭವಾದ ಈ ಜ್ಞಾನ ಪ್ರಸರಣದ ರಸಪ್ರಶ್ನೆ ಕಾರ್ಯಕ್ರಮ ೧೫ ವರ್ಷಗಳಿಂದಲೂ ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದು ೩೨೦೦ಕ್ಕೂ ಹೆಚ್ಚು ಕಂತುಗಳನ್ನು ದಾಟಿ ಮುನ್ನಡೆದಿರುವುದು ವಿದ್ಯುನ್ಮಾನ ಮಾಧ್ಯಮದ ಇತಿಹಾಸದಲ್ಲೇ ಅದ್ವಿತೀಯ ದಾಖಲೆ. ಲೇಖಕರಾಗಿಯೂ ಹಲವು ಪುಸ್ತಕಗಳನ್ನು ಹೊರತಂದಿರುವ ನಾ. ಸೋಮೇಶ್ವರ ಅವರು ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ ಪ್ರಸಾದ್

ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಬಿಳಿಗೆರಿ ನಾರಾಯಣ ಭಟ್ ಮಹವೀರ್ ಪ್ರಸಾದ್ ಅವರ ಅನುಪಮ ಸಾಧಕರು. ಸೇವಾ ಮತ್ತು ವಿಶಿಷ್ಟ ಸೇವಾ ಪದಕ ವಿಜೇತರು.
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಬಿ.ಎನ್.ಬಿ.ಎಂ ಪ್ರಸಾದ್, ಮಡಿಕೇರಿ ತಾಲ್ಲೂಕಿನ ಬಿಳಿಗರಿ ಹುಟ್ಟೂರು.ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಪುಣೆಯಲ್ಲಿ ಸ್ನಾತಕೋತ್ತರ ಪದವಿ, ಹಲವು ಡಿಪ್ಲೋಮಾಗಳನ್ನು ಪಡೆದವರು. ಆನಂತರ ಭಾರತೀಯ ಭೂಸೇನೆಗೆ ಸೇರ್ಪಡೆ. ಭೂಸೇನೆಯ ಆಸ್ಪತ್ರೆ ಸೇವೆಗಳ ಪ್ರಧಾನ ನಿರ್ದೇಶಕರು, ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾಗಿ ಅನನ್ಯ ಸೇವೆ, ಸೇನಾ ವೈದ್ಯರಿಗೆ ಸೂಚನಾ ಕೋರ್ಸ್‌ಗಳನ್ನು ಕೈಗೊಂಡವರು. ಮಾನವೀಯ ಸೇವೆಗೆ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾದ ಶಸ್ತ್ರಚಿಕಿತ್ಸಕರು. ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿಯನ್ನೂ ಪಡೆದವರಾದ ಬಿ.ಎನ್.ಬಿ.ಎಂ ಪ್ರಸಾದ್ ಅವರು ಲೆಫ್ಟಿನೆಂಟ್ ಜನರಲ್ ಆಗಿಯೂ ಸೇವೆಗೈದವರು.ರಾಷ್ಟ್ರಪತಿಗಳ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾದ ಬಿ.ಎನ್.ಬಿ.ಎಂ ಪ್ರಸಾದ್ ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ ವೈದ್ಯಶಿರೋಮಣಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು

ಆನ್ನೋದ್ಧಾರದ ಜೊತೆಗೆ ಲೋಕೋದ್ಧಾರವನ್ನು ಕೈಗೊಂಡ ಸಂತಪರಂಪರೆಯನ್ನು ಬೆಳಗಿದ ಪುಣ್ಯಪುರುಷರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು.ವಚನ ಸಾಹಿತ್ಯದ ಪ್ರಚಾರದಲ್ಲಿ ಮಹತ್ವದ ಕಾಣೆಯಿತ್ತವರು.
ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠಾಧೀಶರಾದ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿಯೇ ಬದುಕು ಮೀಸಲಿಟ್ಟಿರುವವರು. ೧೯೬೩ರ ಜುಲೈ ಒಂದರಂದು ಜನಿಸಿದ ಶ್ರೀಗಳು ಶಿಶುವಿದ್ದಾಗಲೇ ಶಿವಸಂಕಲ್ಪದಂತೆ ಹಾರಕೂಡ ಸಂಸ್ಥಾನಮಠದ ಭಾವೀ ಪೀಠಾಧಿಪತಿಯೆಂದು ಘೋಷಿಸಲ್ಪಟ್ಟವರು ಕಲ್ಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತದ ಪದವೀಧರರು ಶ್ರೀಮಠದ ಪೀಠಾಧಿಪತಿಯಾದ ಮೇಲೆ ಕೈಗೊಂಡ ಕಾರ್ಯಗಳೆಲ್ಲವೂ ಮಹತ್ತರವಾದುದೇ. ಶ್ರೀ ಚೆನ್ನರೇಣುಕ ಬಸವ ರಾಜ್ಯ ಮಟ್ಟದ ಪ್ರಶಸ್ತಿ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠರ ಗುರುತಿಸಲೆಂದೇ ಚನ್ನಶ್ರೀ ಪ್ರಶಸ್ತಿಗಳ ಸ್ಥಾಪನೆಯ ಮೈಲುಗಲ್ಲು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತು ಬೃಹತ್ ಹತ್ತು ಬೃಹತ್ ಸಂಪುಟಗಳ ಪ್ರಕಟಣಾ ಕಾರ್ಯ ಬಹುಕಾಲದವರೆಗೂ ನೆನಪಿನಲ್ಲುಳಿಯುವಂತಹುದು. ಶಿಕ್ಷಣ, ಧರ್ಮ, ಚಿಂತನೆ, ಪ್ರವಚನ, ಸಂಗೀತ, ಸಾಹಿತ್ಯ, ಕಲೆ ಹೀಗೆ ಹತ್ತಾರು ಸಾಂಸ್ಕೃತಿಕ ಕ್ಷೇತ್ರಗಳಿಗೆ ಶ್ರೀಗಳು ಸಲ್ಲಿಸಿದ ಸೇವೆ ಅಪಾರ. ಗುಲ್ಬರ್ಗಾ ವಿ.ವಿ ಯ ಗೌರವ ಡಾಕ್ಟರೇಟ್, ಶಿವಾಚಾರ್ಯರತ್ನ, ಧರ್ಮರತ್ನ ಮತ್ತಿತರ ಗೌರವಗಳು ಶ್ರೀಗಳ ನಿಜಸೇವೆಗೆ ಸಂದ ಮಹಾಗೌರವವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್.ಟಿ. ಶಾಂತಗಂಗಾಧರ

ಸಮಾಜಸೇವೆಯಲ್ಲೇ ದಿವ್ಯಾನುಭೂತಿ ಅನುಭವಿಸಿದ ವಿರಳ ಸೇವಾನಿರತರಲ್ಲಿ ಶಾಂತಗಂಗಾಧರ್ ಸಹ ಒಬ್ಬರು. ಸಾಹಿತ್ಯ-ಸಂಸ್ಕೃತಿ-ಸಮಾಜಸೇವೆ-ಕನ್ನಡ ಸೇವೆ. ಹೀಗೆ ಬಹುರಂಗದಲ್ಲಿ ಬಹುಶ್ರುತ ಸಾಧನೆ ಅವರದ್ದು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳುವಿನಲ್ಲಿ ಜನಿಸಿದ ಶಾಂತ ಗಂಗಾಧರ ವಿದ್ಯಾರ್ಥಿ ದೆಸೆಯಲ್ಲೇ ಚರ್ಚಾ ಸ್ಪರ್ಧೆ-ಪ್ರಬಂಧ ಸ್ಪರ್ಧೆಗಳಲ್ಲಿ ಪಾರಿತೋಷಕಗಳನ್ನು ಗೆದ್ದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.ಸಿಂಡಿಕೇಟ್ ಬ್ಯಾಂಕ್ ಶಿರಾಳಕೊಪ್ಪ ಶಾಖೆಯಲ್ಲಿ ನೌಕರಿಗೆ ಸೇರ್ಪಡೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದಲ್ಲೇ ವ್ಯವಹರಿಸಿದ ದಾಖಲೆ. ಬ್ಯಾಂಕಿಂಗ್ ಕನ್ನಡ ಶಬ್ದಕೋಶದಲ್ಲಿ ಕೊಡುಗೆಯಿತ್ತವರು. ಹವ್ಯಾಸಿ ರಂಗಕಲಾವಿದನಾಗಿ ಸೈ ಎನಿಸಿಕೊಂಡವರು. ಧಾರಾವಾಹಿಯಲ್ಲೂ ನಟಿಸಿ ಹಿರಿಮೆ ಮೆರೆದವರು.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿದ್ದ ಶಾಂತಗಂಗಾಧರ ಶಿಕಾರಿಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ. ಕವನ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟ. ಸಾಹಿತ್ಯ-ಸಾಂಸ್ಕೃತಿಕ ಮತ್ತು ಸಮಾಜಸೇವಾ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ಕ್ರಿಯಾಶೀಲರಾಗಿರುವ ಶಾಂತಗಂಗಾಧರ್ ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೂ ಭಾಜನರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ವಿಜಯ ಸಂಕೇಶ್ವರ

ಉದ್ಯಮ ರಂಗದಲ್ಲಿ ಅದ್ವಿತೀಯ ಸಾಧನೆ ಮೂಲಕ ಅಚ್ಚಳಿಯದ ಛಾಪು ಮೂಡಿಸಿದವರು ವಿಜಯ ಸಂಕೇಶ್ವರ. ಪ್ರತಿಷ್ಠಿತ ವಿಆರ್‌ ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಯಶಸ್ವಿ ಉದ್ಯಮಿ.
ಉತ್ತರಕರ್ನಾಟಕದ ಗದಗ ಜಿಲ್ಲೆಯ ಸಂಕೇಶ್ವರ ವಿಜಯ ಸಂಕೇಶ್ವರರ ಹುಟ್ಟೂರು. ೧೯೫೦ರ ಆಗಸ್ಟ್ ೨ರಂದು ಜನನ, ಗದಗಿನ ಆದರ್ಶ ಶಿಕ್ಷಣ ಸಮಿತಿಯಲ್ಲಿ ಅಕ್ಷರಾಭ್ಯಾಸ, ವಾಣಿಜ್ಯ ಪದವೀಧರರು. ಬಾಲ್ಯದಿಂದಲೂ ವಾಣಿಜ್ಯೋದಮದಲ್ಲಿ ವಿಶೇಷ ಆಸಕ್ತಿ. ೧೯೭೬ರಲ್ಲಿ ಗದಗಿನಲ್ಲಿ ಏಕೈಕ ಟ್ರಕ್‌ನೊಂದಿಗೆ ವಿಆರ್‌ಲ್‌ ಗ್ರೂಪ್ ಸ್ಥಾಪನೆ. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಕಾರ್ಯಕ್ಷೇತ್ರ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗೆ ವಿಸ್ತರಣೆ.ಕೆಲವೇ ದಶಕಗಳಲ್ಲಿ ಪಾರಮ್ಯ ಮೆರೆಯುವಿಕೆ. ಸರಕು ಸಾಗಾಣಿಕೆ, ಪಾರ್ಸಲ್ ಸಾಗಾಣಿಕೆ ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯ ಸಂಪಾದನೆ, ಗಿನ್ನಿಸ್ ಪುಸ್ತಕದಲ್ಲಿ ನವೀನ ದಾಖಲೆ ಸ್ಥಾಪನೆ. ದೇಶಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವುದು ಮಹತ್ಸಾಧನೆ. ಶಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮಿಯೂ ಸಹ. ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಯನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಹೆಗ್ಗಳಿಕೆ. ಇದೀಗ ದಿಗ್ವಿಜಯ ಸುದ್ದಿವಾಹಿನಿಯೂ ಚಾಲ್ತಿಯಲ್ಲಿದ್ದು ಉದ್ಯಮದ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇರುವುದು ನಾಡಿಗೆ ಹೆಮ್ಮೆ ತರುವ ಸಂಗತಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಗುರುರಾಜ ಕರ್ಜಗಿ

ನಾಡಿನ ಹೆಸರಂತ ಶಿಕ್ಷಣ ತಜ್ಞರು, ಪ್ರಖರ ವಾಗಿ, ಉಪನ್ಯಾಸಕರು ಅಂಕಣಕಾರರು ಹಾಗೂ ಆಧ್ಯಾತ್ಮಿಕ ಚಿಂತಕರಾಗಿ ಡಾ.ಗುರುರಾಜ ಕರ್ಜಗಿ ಅವರದ್ದು ಬಹುಶ್ರುತ ಸಾಧನೆ.
ಧಾರವಾಡದವರಾದ ಡಾ. ಗುರುರಾಜ ಕರ್ಜಗಿ ಕರ್ನಾಟಕ ವಿ.ವಿ ಯಿಂದ ಡಾಕ್ಟರೇಟ್ ಪದವಿ ಪಡೆದವರು. ಬೆಂಗಳೂರಿನ ವಿವಿಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ವಿವಿಎಸ್ ಶೈಕ್ಷಣಿಕ-ಆಡಳಿತ ಮಹಾವಿದ್ಯಾಲಯದ ನಿರ್ದೇಶಕರು, ಜೈನ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಸಂಸ್ಥಾಪಕ ನಿರ್ದೇಶಕರು, ಅನೇಕ ವೈದ್ಯಕೀಯ ವಿ.ವಿ ಗಳ ಹಾಗೂ ಅಂತಾರಾಷ್ಟ್ರೀಯ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಅವರದ್ದು ಅನನ್ಯ ಶೈಕ್ಷಣಿಕ ಸೇವೆ. ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ೮೫ಕ್ಕೂ ಹೆಚ್ಚು ಶಾಲೆಗಳ ನಿರ್ಮಾಣದ ಕಾರಣೀಕರ್ತರು, ಕರ್ನಾಟಕ ಜ್ಞಾನ ಆಯೋಗದ ಸದಸ್ಯರೂ ಆಗಿರುವ ಕರ್ಜಗಿ ಅತ್ಯುತ್ತಮ ಬರಹಗಾರರೂ ಕೂಡ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ೧೦೦ಕ್ಕೂ ಹೆಚ್ಚು ಲೇಖನ, ೧೭೦೦ಕ್ಕೂ ಅಧಿಕ ಅಂಕಣ ಬರಹ, ಆಂಗ್ಲ ಮತ್ತು ಕನ್ನಡದಲ್ಲಿ ಕಥೆ, ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರು. ಕರುಣಾಳು ಬಾ ಬೆಳಕೆ ಅವರ ಮಹೋನ್ನತ ಜನಪ್ರಿಯ ಕೃತಿ. ಅವರ ವಿದ್ವತ್ತೂರ್ಣ ಮಾತು-ಬರಹಗಳು ಯುವಜನತೆಗೆ ಮಾದರಿ, ನಾಡಿಗೆ ಹೆಮ್ಮೆಯ ವಿಷಯ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೆ. ಚಿದಾನಂದಗೌಡ

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದಗೌಡರು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಕಂಡ ಅಪ್ರತಿಮ ಪ್ರತಿಭೆ. ಶಿಕ್ಷಣ ತಜ್ಞ ಆಡಳಿತಗಾರ, ಲೇಖಕರಾಗಿ ಅವರದ್ದು ವಿದ್ವತ್ತೂರ್ಣ ಸಾಧನೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಚೊಕ್ಕಾಡಿ ಚಿದಾನಂದಗೌಡರ ಹುಟ್ಟೂರು. ಬಾಲ್ಯದಲ್ಲೇ ಪ್ರಖರ ಬುದ್ಧಿವಂತಿಕೆ. ಯುವಿಸಿಇಯಲ್ಲಿ ಇಂಜಿನಿಯರಿಂಗ್, ಬರೋಡಾದಲ್ಲಿ ಸ್ನಾತಕೋತ್ತರ ಪದವಿ, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌ ಡಿ ಪಡೆದವರು. ಅಮೇರಿಕಾದ ನಾಸಾ, ಫ್ರಾನ್ಸ್‌ನ ಇನಿಯಾದ ಫೆಲೋಶಿಪ್ ಪುರಸ್ಕೃತರು. ಉಪನ್ಯಾಸಕರಾಗಿ ಆರಂಭವಾದ ವೃತ್ತಿ ಬದುಕು ಪ್ರಾಧ್ಯಾಪಕ, ಪ್ರಾಂಶುಪಾಲಗಿರಿ ದಾಟಿ ಮೈಸೂರು ವಿವಿಯ ಕುಲಪತಿ ಸ್ಥಾನದವರೆಗೂ ವಿಸ್ತಾರಗೊಂಡಿದ್ದು ಚಿದಾನಂದಗೌಡರ ದೈತ್ಯ ಪ್ರತಿಭೆಯ ಪ್ರತೀಕ. ಹಲವು ವಿವಿಗಳ ಶೈಕ್ಷಣಿಕ- ಆಡಳಿತಾತ್ಮಕ ಸಮಿತಿಗಳಲ್ಲಿ ಪ್ರಮುಖ ಹುದ್ದೆಗಳ ನಿರ್ವಹಣೆ-ಮಾರ್ಗದರ್ಶನ. ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಮಂಡನೆ, ಹತ್ತಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಉಪನ್ಯಾಸ, ಪ್ರಪಂಚದ ಉದ್ದಗಲಕ್ಕೂ ಸಂಚಾರ ಚಿದಾನಂದಗೌಡರ ಜ್ಞಾನದ ಆಳಕ್ಕೆ ಸಾಕ್ಷಿ. ಪುಟಾಣಿಗಳ ವಿಜ್ಞಾನ ಪದ್ಯಗಳು, ವಿಜ್ಞಾನ ವಚನಗಳು, ಪತ್ತೇದಾರಿ ಪದ್ಯಗಳು ಸೇರಿ ಹಲವು ಕೃತಿಗಳ ರಚಿಸಿರುವ ಚಿದಾನಂದಗೌಡರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೇಜಗೌ ಸಾಹಿತ್ಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಟಿ. ಶಿವಣ್ಣ

ಶಿಕ್ಷಣದ ಬಹು ಅಂಗಗಳಲ್ಲಿ ಮಾದರಿಯಾದ ಕಾರ್ಯಗಳನ್ನು ಕೈಗೊಂಡ ಶಿಕ್ಷಣ ತಜ್ಞರು ಪ್ರೊಟಿ. ಶಿವಣ್ಣ. ಅಧ್ಯಯನ, ಅಧ್ಯಾಪನ, ಸಮುದಾಯದ ಸೇವೆ ಮತ್ತು ಬರವಣಿಗೆಯಲ್ಲಿ ಸಾಧನೆಯ ಮೈಲುಗಲ್ಲು ಮುಟ್ಟಿದವರು.
ಸಕ್ಕರೆಯ ನಾಡಿನ ಗಟ್ಟಿ ಪ್ರತಿಭೆ ಪ್ರೊ.ಟಿ. ಶಿವಣ್ಣ. ಮದ್ದೂರು ಜನ್ಮಸ್ಥಳ. ೧೯೩೦ರ ಸೆಪ್ಟೆಂಬರ್ ೨ರಂದು ಜನಿಸಿದ ಶಿವಣ್ಣ ಅವರು ಬಿ.ಎ ಹಾನರ್ ಪದವೀಧರರು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕ, ರೀಡರ್, ಪ್ರಾಚಾರ್ಯ ಮತ್ತು ಪ್ರಾಂಶುಪಾಲರಾಗಿ ಶೈಕ್ಷಣಿಕ ಸೇವೆ. ಎನ್‌ಸಿ ಅಧಿಕಾರಿಯಾಗಿ ರಾಷ್ಟ್ರ ಮಟ್ಟದಲ್ಲಿ ಬೆಳಗಿದ ಪ್ರತಿಭಾವಂತರು. ಬೆಂಗಳೂರು ವಿ.ವಿ ಯ ಶೈಕ್ಷಣಿಕ ಮಂಡಳಿ, ಸೆನೆಟ್, ಸಿಂಡಿಕೇಟ್ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿಯೂ ಸೇವೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮಾಜವಿಜ್ಞಾನ ಪುಸ್ತಕಗಳ ರಚನೆ, ರಂಗನಟನೆ, ಹಿಂದೂಸ್ತಾನಿ, ಪಾಶ್ಚಿಮಾತ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯನ, ವಿದೇಶ ಪ್ರವಾಸಗಳು ನೆಚ್ಚಿನ ಹವ್ಯಾಸ ಮಾತ್ರವಲ್ಲ ಅವರ ಬಹುಮುಖಿ ಆಸಕ್ತಿ-ಸಾಧನೆಗೆ ಸಾಕ್ಷಿ. ಆರು ದಶಕದಲ್ಲಿ ವಿದೇಶಗಳಲ್ಲಿ ಅನೇಕ ಚಟುವಟಿಕೆಗಳನ್ನು ಕೈಗೊಂಡು ಭಾಷಣಕಾರರಾಗಿ ವಿದ್ವತ್ ಮೆರೆದ ಪ್ರೊಟಿ.ಶಿವಣ್ಣರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿಗಳು ಸಂದಿದ್ದು ೯೦ರ ಆಸುಪಾಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ಸಾಧಕರಿಗೆ ಅವರ ಬದುಕೇ ನೈಜ ಪ್ರೇರಣೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಎಸ್.ಆರ್. ಗುಂಜಾಳ

ಪ್ರಾಧ್ಯಾಪಕ, ಸಂಶೋಧಕ ಲೇಖಕ ಹಾಗೂ ಆಡಳಿತಗಾರರಾಗಿ ಡಾ.ಎಸ್‌.ಆರ್.ಗುಂಜಾಳ ಅವರದು ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖಿ ಸಾಧನೆ. ಹೊಸತಲೆಮಾರಿಗೆ ಮಾದರಿಯಾದಂತಹ ವ್ಯಕ್ತಿತ್ವ.
ಧಾರವಾಡ ಜಿಲ್ಲೆಯ ಕೋಳಿವಾಡದವರಾದ ಡಾ. ಶಿವಪುತ್ರಪ್ಪ ರಾಯಪ್ಪ ಗುಂಜಾಳ್ ಹುಟ್ಟಿದ್ದು ೧೯೩೨ರ ಜೂನ್ ೨೫ರಂದು, ಅಕ್ಷರದಿಂದ ಅರಳಿದ ಪ್ರತಿಭೆ. ಸ್ನಾತಕೋತ್ತರ ಪದವಿ, ದೆಹಲಿ ವಿ.ವಿ ಯಿಂದ ಎಂ.ಲಿಟ್.ಎಸ್.ಸಿ, ಪಿಎಚ್‌ಡಿ ಪದವೀಧರರು, ಗ್ರಂಥಪಾಲ, ಡೆಪ್ಯೂಟಿ ಗ್ರಂಥಪಾಲ, ಪ್ರಾಧ್ಯಾಪಕ, ಮುಖ್ಯಸ್ಥರಾಗಿ ದುಡಿದವರು. ಅಧ್ಯಾಪನದ ಜೊತೆಗೆ ಸಂಶೋಧನೆ-ಬರವಣಿಗೆ, ಗ್ರಂಥಾಲಯ ವಿಜ್ಞಾನ ಗ್ರಂಥಗಳೂ ಸೇರಿದಂತೆ ೭೨ ಕೃತಿಗಳು, ೧೫೦ ಲೇಖನಗಳ ರಚನಕಾರರು.೨೫ ರಾಷ್ಟ್ರೀಯ-ಪ್ರಾಂತೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆ, ೨೦ ವಿ.ವಿ ಗಳ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಗುಲ್ಬರ್ಗಾ ವಿ.ವಿ ಸಮಾಜವಿಜ್ಞಾನ ವಿಭಾಗದ ಡೀನ್ ಆಗಿ ಶೈಕ್ಷಣಿಕ ಸೇವೆ. ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಂದ ಭೂಷಿತರಾದ ಗುಂಜಾಳ್ ನಿಯತಕಾಲಿಕೆಗಳ ಸಂಪಾದಕರು, ಪಿಎಚ್‌ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿಯೂ ಸೇವೆಗೈದ ಸಾಧಕಮಣಿ.

Categories
ಕಿರುತೆರೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಜಯಕುಮಾರ ಕೊಡಗನೂರು

ವೃತ್ತಿ ರಂಗಭೂಮಿಯನ್ನೇ ಬದುಕಿನ ಕರ್ಮಭೂಮಿಯಾಗಿಸಿಕೊಂಡ ಅಭಿಜಾತ ಕಲಾವಿದ ಜಯಕುಮಾ‌ ಕೊಡಗನೂರು.ಕಿರುತೆರೆ-ಬೆಳ್ಳಿತೆರೆಯಲ್ಲೂ ಛಾಪೊತ್ತಿದ ಕಲಾಚೇತನ.
ದಾವಣಗೆರೆ ಜಿಲ್ಲೆಯ ಕೊಡಗನೂರು ಜಯಕುಮಾರ್ ಹುಟ್ಟೂರು. ಹತ್ತನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು. ಹಳ್ಳಿಗಾಡಿನ ನಾಟಕಗಳಲ್ಲಿ ನಟಿಸುತ್ತಿದ್ದವರಿಗೆ ತಿರುವು ಸಿಕ್ಕಿದ್ದು ಸದಾರಾಮೆ ನಾಟಕದ ಮೂಲಕ. ೭೦ರ ದಶಕದಿಂದ ಇವರಿಗೆ ಬಣ್ಣವೇ ಬದುಕು, ಪಾತ್ರವೇ ಜೀವ. ಗುಬ್ಬಿ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಸಂಗಮೇಶ್ವರ ನಾಟಕ ಸಂಘ, ಕೆ.ಬಿ.ಆರ್. ಡ್ರಾಮಾ ಕಂಪನಿ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ತರಹೇವಾರಿ ಪಾತ್ರ ನಿರ್ವಹಿಸಿ ರಂಗಪ್ರಿಯರ ಮನಗೆದ್ದವರು. ದೇವಿ ಮಹಾತ್ಮಯ ಮಹಿಷಾಸುರ, ರೇಣುಕಾದೇವಿ ಮಹಾತ್ಮಯ ಕಾರ್ತ್ಯವೀರಾರ್ಜುನ, ಮದಕರಿನಾಯಕ, ಪೊಲೀಸನ ಮಗಳಲ್ಲಿನ ಎಸ್ಪಿ ಚಂದ್ರಶೇಖರ್ ಜಯಕುಮಾರ್‌ಗೆ ಹೆಸರು ತಂದುಕೊಟ್ಟ ಪಾತ್ರಗಳು. ಕಿರುತೆರೆಯ ಸಂಕ್ರಾಂತಿ, ಮಹಾಮಾಯೆ, ಕೆಳದಿ ಚೆನ್ನಮ್ಮ, ಭಾಗೀರಥಿ ಸೇರಿ ಹತ್ತಾರು ಧಾರಾವಾಹಿಗಳು, ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಹಿರಿಮೆ.ಎಲ್ಲಾ ಬಗೆಯ ಪಾತ್ರಗಳಲ್ಲೂ ಸೈ ಎನಿಸಿಕೊಂಡ ಕಲಾನಿಪುಣ. ಐದು ದಶಕಗಳ ಸಾರ್ಥಕ ಕಲಾಸೇವೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿ, ಹತ್ತಾರು ಬಿರುದುಗಳಿಂದ ಭೂಷಿತರು.

Categories
ಚಲನಚಿತ್ರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶೈಲಶ್ರೀ

‘ಸಂಧ್ಯಾರಾಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಶೈಲಶ್ರೀ. ಬೆಳ್ಳಿತೆರೆಗೆ ಬರುವ ಮುನ್ನ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದವರು.
ಮನಸ್ಸಿದ್ದರೆ ಮಾರ್ಗ, ಬಂಗಾರದ ಹೂವು, ಜಾಣರ ಜಾಣ ಮುಂತಾದ ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಗಮನಸೆಳೆದಿದ್ದ ಶೈಲಶ್ರೀ ಅವರು ಆರ್.ಎನ್. ಸುದರ್ಶನ್ ನಾಯಕರಾಗಿದ್ದ ‘ನಗುವ ಹೂವು’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದ ನಟಿ, ಸುವರ್ಣಭೂಮಿ, ಬೋಕರ್ ಭೀಷ್ಮಾಚಾರಿ, ಕಾಡಿನರಹಸ್ಯ, ಮಕ್ಕಳೇ ಮನೆಗೆ ಮಾಣಿಕ್ಯ, ವಂಶಜ್ಯೋತಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶೈಲಶ್ರೀ ಅವರದ್ದು. ಮದರಾಸಿನಲ್ಲಿ ನೃತ್ಯಶಾಲೆ ನಡೆಸಿದ ಭರತನಾಟ್ಯ ಕಲಾವಿದೆ. ಪತಿ ಸುದರ್ಶನ್‌ ರೊಡಗೂಡಿ ನಾಟಕಗಳನ್ನು ಪ್ರದರ್ಶಿಸಿದ ಅಭಿನೇತ್ರಿ ಮಕ್ಕಳಿಗಾಗಿ ‘ಯೂತ್ ಪೀಸ್ ಷೋರ್ಸ್’ ತಂಡ ಕಟ್ಟಿ ಅಭಿನಯ ಕಲೆ ಧಾರೆಯೆರೆದ ಗುರು. ಮಹಿಳೆಯರಿಗಾಗಿ ಸಲಹಾಕೇಂದ್ರವನ್ನೂ ನಡೆಸಿದ ಸಮಾಜಮುಖಿ, ಕನ್ನಡ, ತಮಿಳು, ತೆಲುಗು, ಮಲೆಯಾಳ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ಪಂಚಭಾಷಾ ನಟಿ ಕಿರುತೆರೆಯಲ್ಲೂ ಚಿರಪರಿಚಿತರಾಗಿರುವ ಕಲಾವಿದೆ.

Categories
ಬಯಲಾಟ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವೈ. ಮಲ್ಲಪ್ಪ ಗವಾಯಿ

ಜಾನಪದ ದೊಡ್ಡಾಟದ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿ ಹಿರಿಮೆ ಮೆರೆದವರು ವೈ. ಮಲ್ಲಪ್ಪ ಗವಾಯಿ, ಗಾಯಕರು, ಪಕ್ಕವಾದ್ಯಗಾರರಾಗಿ ಅವರದ್ದು ಮಾದರಿ ಕಲಾಸೇವೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತಿಪ್ಪೆಗುಂಡಿಯವರ ಓಣಿಯಲ್ಲಿ ೧೯೫೫ರ ಜನವರಿ ಒಂದರಂದು ಜನಿಸಿದ ವೈ.ಮಲ್ಲಪ್ಪ ಗವಾಯಿ ಅವರಿಗೆ ಕಲೆ ಪರಂಪಾರಗತ. ತಂದೆ ರುದ್ರಪ್ಪ ಬಾಲ್ಯದಲ್ಲೇ ಬಯಲಾಟ ಕಲೆಯ ಮೋಹಿತರಾದ ಮಲ್ಲಪ್ಪ ಅದನ್ನೇ ಬದುಕಿನ ಬುತ್ತಿ, ಸಾಧನೆಯ ಪ್ರವೃತ್ತಿಯಾಗಿಸಿಕೊಂಡವರು. ಬಯಲಾಟದ ಕಲಾವಿದರಾಗಿ, ದೊಡ್ಡಾಟದ ಗಾಯಕರಾಗಿ ಅವರದ್ದು ಅನುಪಮ ಸೇವೆ. ಎರಡೂವರೆ ದಶಕಕ್ಕೂ ಮೀರಿದ ಅವಧಿಯಿಂದಲೂ ಬಯಲಾಟದ ಪ್ರದರ್ಶನವನ್ನು ನೀಡುತ್ತಾ ಆ ಕಲಾಪ್ರಕಾರದ ಏಳೆಗೆ ಶ್ರಮಿಸುತ್ತಿರುವ ಕಲಾವಿದರು. ಹಂಪಿ ಉತ್ಸವ, ಮೈಸೂರು ದಸರಾ, ಹೊಸಪೇಟೆಯ ಆಕಾಶವಾಣಿಯಲ್ಲಿ ಜಾನಪದ ಸಿರಿ, ದೊಡ್ಡಾಟದ ಹಾಡುಗಳು, ರಂಗಗೀತೆಗಳನ್ನು ಪ್ರಸ್ತುತಪಡಿಸುತ್ತಾ ಬಂದಿರುವುದು ಕಲಾಪಯಣದ ಹೆಗ್ಗುರುತು. ಹಾರೋನಿಯಂ, ತಬಲ ಮತ್ತು ಮೃದುಂಗ ನುಡಿಸುವಲ್ಲಿಯೂ ನಿಷ್ಣಾತರು. ಸೋಗಿಯ ಶ್ರೀ ವೀರೇಶ್ವರ ಜಾನಪದ ದೊಡ್ಡಾಟ ಸಂಘದ ಸದಸ್ಯ ಕಾರ್ಯದರ್ಶಿ, ಇದೀಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಪ್ಪ ಗವಾಯಿ ಬಯಲಾಟ ಕ್ಷೇತ್ರವನ್ನು ಸಂಪನ್ನಗೊಳಿಸಿದ ಕಲಾಚೇತನ.

Categories
ಯಕ್ಷಗಾನ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಧರ್ ಭಂಡಾರಿ ಪುತ್ತೂರು

ಯಕ್ಷಗಾನ ಕಲೆಯನ್ನೇ ಸಾಧನಾ ಪಥವಾಗಿಸಿಕೊಂಡ ಹಿರಿಯ ಕಲಾಚೇತನ ಡಾ. ಶ್ರೀಧರ್ ಭಂಡಾರಿ. ಯಕ್ಷಗಾನ ಕಲಾವಿದ, ಶಿಕ್ಷಕ, ಸಂಘಟಕ ಹಾಗೂ ಮೇಳದ ಮುಖ್ಯಸ್ಥರಾಗಿ ಮಹತ್ವಪೂರ್ಣ ಸೇವೆ.
ಯಕ್ಷಗಾನ ಕಲೆ ಶ್ರೀಧರ್ ಭಂಡಾರಿ ಅವರಿಗೆ ರಕ್ತಗತ. ತಂದೆ ಶೀನಪ್ಪ ಭಂಡಾರಿ ಯಕ್ಷಗಾನದ ದಂತಕಥೆ. ೧೯೪೫ರ ಅಕ್ಟೋಬರ್ ಒಂದರಂದು ಜನಿಸಿದ ಶ್ರೀಧರ್ ಭಂಡಾರಿ ೯ನೇ ವಯಸ್ಸಿಗೆ ತೆಂಕುತಿಟ್ಟಿನ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ. ಐದನೇ ತರಗತಿವರಗಷ್ಟೇ ವಿದ್ಯಾಭ್ಯಾಸ. ೧೧ರ ಹರೆಯದಿಂದಲೂ ಯಕ್ಷಗಾನವೇ ಬದುಕು-ಭಾವ. ಹೆಸರಾಂತ ಮೇಳಗಳಾದ ಶ್ರೀ ಬಳ್ಳಂಬೆಟ್ಟ ಮೇಲ, ಶ್ರೀ ಧರ್ಮಸ್ಥಳ ಮೇಳ, ಶ್ರೀ ಮಹಾಲಿಂಗೇಶ್ವರ ಮೇಳ, ಕಾಂತೇಶ್ವರ ಮೇಳಗಳಲ್ಲಿ ೬೫ ವರ್ಷಗಳ ಕಾಲ ನಿರಂತರ ಕಲಾಸೇವೆ. ವೃತ್ತಿ ಕಲಾವಿದರಾಗಿ, ಸಂಘಟಕರಾಗಿ ಅನನ್ಯ ದುಡಿಮೆ. ನೂರಾರು ಬಾರಿ ಭಾರತದ ಉದ್ದಗಲಕ್ಕೂ ಯಕ್ಷಗಾನ ಪ್ರದರ್ಶನ. ೬೨ರ ಇಳಿವಯಸ್ಸಿನಲ್ಲಿ ಮೂರು ನಿಮಿಷಗಳಲ್ಲಿ ೧೪೮ ಬಾರಿ ಗಿರಕಿಗಳನ್ನು ಹೊಡೆದು ದಾಖಲೆ ಸ್ಥಾಪಿಸಿರುವ ಅಪೂರ್ವ ಕಲಾವಿದ, ಯಕ್ಷಗಾನ ಮೇಳಗಳ ಯಶಸ್ವಿ ಆಯೋಜನೆ. ದೇಶ-ವಿದೇಶಗಳಲ್ಲಿ ಪ್ರದರ್ಶನ, ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಅಮೆರಿಕದ ಹೂಸ್ಟನ್ ವಿ.ವಿ ಯಿಂದ ಗೌರವ ಡಾಕ್ಟರೇಟ್ ಸೇರಿ ೬೦೦ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾದ ಅಭಿಜಾತ.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಖುಷಿ

ಯೋಗದಿಂದ ಸುಯೋಗ ಎಂಬ ಲೋಕನುಡಿಯನ್ನು ನಿಜವಾಗಿಸಿರುವ ಕುಮಾರಿ ಖುಷಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಅತ್ಯುತ್ತಮ ಯೋಗಪಟು.
ಮೈಸೂರಿನ ವಿಜಯವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಖುಷಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತಹ ಪ್ರತಿಭೆ. ಉಸಿರಾಟದ ತೊಂದರೆ ನಿವಾರಣೆಗೆಂದು ಆರಂಭಿಸಿದ ಯೋಗವೇ ಸಾಧನೆಯ ಮಾರ್ಗವಾಗಿದ್ದು ವಿಶೇಷ, ಮೈಸೂರು ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ.ಪಿ.ಎನ್. ಗಣೇಶ್‌ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದ ಖುಷಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯದ ಕೀರ್ತಿ ಬೆಳಗಿದವರು. ನಿರಾಳಂಬ ಪೂರ್ಣಚಕ್ರಾಸನವನ್ನು ನಿಮಿಷಕ್ಕೆ ಹದಿನಾಲ್ಕು ಬಾರಿ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಸಾಧಕಿ. ಆರು ಬಾರಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಪದಕ ಗೆದ್ದ ಯೋಗಪಟು. ಕರ್ನಾಟಕ ಕಲಾಶ್ರೀ, ಅಸಾಧಾರಣ ಪ್ರತಿಭೆ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಭೂಷಿತೆ, ಯೋಗಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಂಡು ದೇಶದ ಉತ್ತಮ ಯೋಗಶಿಕ್ಷಕಿಯಾಗುವ ಕನಸೊತ್ತಿರುವ ಈಕೆ ಆ ಗುರಿ ಮುಟ್ಟುವುದು ನಿಶ್ಚಿತವೆಂಬ ಭರವಸೆ ಮೂಡಿಸಿರುವ ಪ್ರತಿಭಾಶೀಲೆ.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವನಿತಕ್ಕ

ಭಾರತೀಯ ಸನಾತನ ಯೋಗ ಪದ್ಧತಿಯನ್ನು ಹೊಸ ತಲೆಮಾರಿಗೆ ಪರಿಚಯಿಸಿ ಪ್ರಚುರಪಡಿಸಿದ ಹಿರಿಮೆಯ ಯೋಗಗುರು ವನಿತಕ್ಕ ನಾಲ್ಕೂವರೆ ದಶಕದಿಂದಲೂ ಯೋಗಶಿಕ್ಷಣದಲ್ಲಿ ನಿರತ ಸಾಧಕಿ.
ಶಿವಮೊಗ್ಗ ಜಿಲ್ಲೆ ಹೊಸನಗರ ವನಿತಾ ಅವರ ಹುಟ್ಟೂರು. ಓದು-ಸನಾತನ ಪರಂಪರೆಯ ಅಧ್ಯಯನ ಮತ್ತು ಯೋಗ ಬಾಲ್ಯದಲ್ಲೇ ಮನ ಆವರಿಸಿಕೊಂಡ ಆಸಕ್ತಿಯ ಕ್ಷೇತ್ರಗಳು. ವಾಣಿಜ್ಯ ಪದವೀಧರರು. ಚರಿತ್ರೆ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಿಶು ಶಿಕ್ಷಣ ತರಬೇತಿ ಮತ್ತು ಮಕ್ಕಳ ಮನಃಶಾಸ್ತ್ರವನ್ನು ಅಧ್ಯಯನಿಸಿರುವ ವನಿತಾ ಹರೆಯದಲ್ಲೇ ಸಮಾಜಸೇವೆಗೆ ಬದುಕು ಮುಡುಪಿಟ್ಟವರು. ಯೋಗದ ತುಡಿತದಿಂದ ವ್ಯಯಕ್ತಿಕ ಬದುಕಿನ ವ್ಯಾಮೋಹ ತೊರೆದ ವನಿತಕ್ಕ ರಾಘವೇಂದ್ರ ಸ್ವಾಮಿ ಮಲ್ಲಾಡಿಹಳ್ಳಿ, ಅಜಿತ್‌ಕುಮಾರ್, ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಯೋಗ ಶಿಕ್ಷಣ ಕಲಿತವರು. ಬೆಂಗಳೂರಿನ ಗಿರಿನಗರದಲ್ಲಿ ಯೋಗಶ್ರೀ ಸಂಸ್ಥೆ ಸ್ಥಾಪನೆ. ಹೊಸ ಪೀಳಿಗೆಗೆ ಯೋಗಶಿಕ್ಷಣ, ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ಪಂದನೆಯನ್ನೇ ಸಾಧನಮಾರ್ಗವಾಗಿಸಿಕೊಂಡು ೪೫ ವರ್ಷಗಳಿಂದಲೂ ಸೇವಾನಿರತರು. ಶಿಷ್ಯರು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಚಿರಪರಿಚಿತರಾಗಿರುವ ವನಿತಾ ಅವರು ಬದುಕು-ಭಾವವೆಲ್ಲವೂ ಯೋಗ ಶಿಕ್ಷಣಕ್ಕೆ ಅಂದಿಗೂ
ಇಂದಿಗೂ ಎಂದೆಂದಿಗೂ ಮೀಸಲು,

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನಂದಿತ ನಾಗನಗೌಡ‌

ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಬೆಳಗಿದ ಹೆಮ್ಮೆಯ ಪರ್ವತಾರೋಹಿ ನಂದಿತ ನಾಗನಗೌಡರ್‌, ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಏಕೈಕ ಕನ್ನಡತಿ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಯಾದ ನಂದಿತಾ ನಾಗನಗೌಡರ್ ಅವರದ್ದು ಬಾಲ್ಯದಿಂದಲೂ ಸಾಹಸ ಪ್ರವೃತ್ತಿ. ಓದಿದ್ದು ಎಂಬಿಎ. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಪರ್ವತಾರೋಹಿ, ಅತಿ ಎತ್ತರದ ಹಿಮಾಲಯ ಪರ್ವತ ಏರುವ ಮೂಲಕ ಪರ್ವತಾರೋಹಣದ ಸಾಹಸ ಆರಂಭಿಸಿದ ನಂದಿತ ಆನಂತರ ಏರಿದ ಪರ್ವತಗಳು ಸಾಕಷ್ಟು. ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಕಾರ್ಸ್‌ಟೆನ್ಸ್ ಪಿರಮಿಡ್ ಏರುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ೧೭,೦೦೦ ಅಡಿ ಎತ್ತರದ ಕಡಿದಾದ ಬಂಡೆಗಳಿಂದ ಕೂಡಿರುವ ಈ ಪರ್ವತವನ್ನು ಏರಿದ ಮೊದಲ ಮಹಿಳೆಯೆಂಬುದು ನಾಡೇ ಹೆಮ್ಮೆ ಪಡುವ ವಿಷಯ ಇದಲ್ಲದೆ, ಯುರೋಪ್‌ನ ಅತಿ ಎತ್ತರದ ೧೮,೬೦೦ ಅಡಿ ಎತ್ತರದ ಎಲಬಸ್ ಪರ್ವತವನ್ನೂ ಏರಿದ ಮೊದಲ ಭಾರತೀಯ ಮಹಿಳೆ. ಇದಲ್ಲದೆ, ಆಫ್ರಿಕಾದ ಅತಿ ಎತ್ತರದ ಕಿಲಿಮಾಂಜರೋ ಪರ್ವತವನ್ನೂ ಏರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಕಡಿದಾದ, ಅತ್ಯಂತ ಅಪಾಯಕರವಾದ ಪರ್ವತಗಳನ್ನು ಏರುತ್ತಿರುವ ನಂದಿತ ನಾಗನಗೌಡ‌ ಅವರು ಭವಿಷ್ಯದಲ್ಲೂ ಇನ್ನೂ ಎತ್ತರೆತ್ತರದ ಪರ್ವತವನ್ನು ಏರುವ ಗುರಿ ಹೊಂದಿದ್ದಾರೆ. ಸ್ತ್ರೀ ಧೀಶಕ್ತಿಯ ದ್ಯೋತಕವಾಗಿರುವ ನಂದಿತ ಅವರ ಸಾಧನೆ-ಸಾಹಸ ಇಡೀ ನಾರಿ ಕುಲಕ್ಕೇ ಮಾದರಿಯಾಗಿರುವುದಂತೂ ಹೌದು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಚೆನ್ನಂಡ ಎ ಕುಟ್ಟಪ್ಪ

ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ಅತ್ಯುತ್ತಮ ಬ್ಯಾಕ್ಸಿಂಗ್ ಪಟು. ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಕೋಚ್.
ಮೈಸೂರು ಮೂಲದವರಾದ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ೧೯೭೯ರ ಮಾರ್ಚ್ ೫ರಂದು ಜನಿಸಿದವರು.ಬಿ.ಎ ಪದವೀಧರರು. ಬಾಲ್ಯದಿಂದಲೂ ಬೆನ್ನತ್ತಿದ್ದ ಕ್ರೀಡಾಸಕ್ತಿಯನ್ನೇ ಸಾಧನೆಯ ದಾರಿದೀಪ ಮಾಡಿಕೊಂಡವರು. ಬ್ಯಾಕ್ಸಿಂಗ್ ಅಂದರೆ ಪಂಚಪ್ರಾಣ. ಬ್ಯಾಕ್ಸಿಂಗ್‌ನಲ್ಲಿ ಎನ್‌ಐಎಸ್ ಡಿಪ್ಲೋಮಾ, ರೋಟಿಕ್‌ನಲ್ಲಿ ಎಐಬಿಎ ಸ್ಟಾರ್ ೨ ಕೋಚಿಂಗ್‌ ಹಾಗೂ ಉಚ್ಚೇಕಿಸ್ತಾನ್‌ನಲ್ಲಿ ಎಐಬಿಎ ಕುಟಮನ್ ಕೋರ್ಸ್‌ಗಳನ್ನು ಪೂರೈಸಿದವರು.ಆನಂತರ ಭಾರತೀಯ ಸೇನೆಗೆ ಸೇರ್ಪಡೆಯಾದ ಕುಟ್ಟಪ್ಪ ವೃತ್ತಿಯಲ್ಲಿ ಸುಭೆದಾರ್, ಪ್ರವೃತ್ತಿಯಲ್ಲಿ ಬ್ಯಾಕ್ಸಿಂಗ್ ಕೋಚ್. ರಾಷ್ಟ್ರಮಟ್ಟದ ೨೩ ಬ್ಯಾಕ್ಸಿಂಗ್‌ ಸ್ಪರ್ಧೆಗಳಲ್ಲಿ ೯ ಬಾರಿ ಚಿನ್ನದ ಪದಕ, ನಾಲ್ಕು ಬಾರಿ ರಜತ ಹಾಗೂ ಕಂಚಿನ ಪದಕ ಪಡೆದಿರುವ ಕ್ರೀಡಾಪ್ರತಿಭೆ, ಜರ್ಮನಿ, ಬ್ಯಾಂಕಾಕ್, ಕ್ಯೂಬಾ, ಬ್ರಿಜಿಲ್, ಜೆಕ್ ಗಣರಾಜ್ಯ, ಥ್ಯಾಯ್ಲೆಂಡ್, ಐಲ್ಯಾಂಡ್, ಚೀನಾ, ಇಂಗ್ಲೆಂಡ್, ಸ್ಕಾಟ್ಯಾಂಡ್ ಮುಂತಾದೆಡೆ ಜರುಗಿದ ಸುಮಾರು ೪೦ಕ್ಕೂ ಹೆಚ್ಚು ಬ್ಯಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತೀಯ ಬ್ಯಾಕ್ಸಿಂಗ್ ತಂಡದ ಕೋಚ್ ಆಗಿ ತಂಡದ ಯಶಸ್ಸಿಗೆ ದುಡಿದು ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಹಿರಿಮೆಯ ಕುಟ್ಟಪ್ಪ ನಿಜಕ್ಕೂ ಮಾದರಿ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವನಾಥ್ ಭಾಸ್ಕರ್ ಗಾಣಿಗ

ದೇಶದ ಕ್ರೀಡಾರಂಗಕ್ಕೆ ಕರ್ನಾಟಕದ ಶ್ರೇಷ್ಠ ಕೊಡುಗೆಗಳಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ ಒಬ್ಬರು. ಪವರ್ ಲಿಫ್ಟಿಂಗ್‌ನಲ್ಲಿ ಪದಕಗಳ ಭೇಟೆಯಾಡುತ್ತಿರುವ ಚಿನ್ನದ ಹುಡುಗ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ಹುಟ್ಟೂರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ತಾಲೂಕಿನ ನೆಂಪುವಿನಲ್ಲಿ ಪಿಯು ಶಿಕ್ಷಣ ಪೂರೈಸಿದ ವಿಶ್ವನಾಥ್ ಬಿಸಿಎ ಪದವೀಧರರು. ಸಾಪ್ಟವೇರ್ ಕಂಪನಿಯೊಂದರ ಉದ್ಯೋಗಿ ವಿಶ್ವನಾಥ್ ಅವರಲ್ಲಿ ಕ್ರೀಡಾಸಕ್ತಿ ಮೊಳಕೆಯೊಡೆದದ್ದು ತೀರಾ ಆಕಸ್ಮಿಕ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದವಗೆ ಭಾರ ಎತ್ತುವ ಸ್ಪರ್ಧೆಯತ್ತ ಚಿತ್ತ ಹರಿದದ್ದು ಯೋಗವೇ ಸರಿ. ಆನಂತರದ್ದು ಕಠಿಣ ಪರಿಶ್ರಮದ ಕ್ರೀಡಾಯಾನ. ಕುಂದಾಪುರದವರೇ ಆದ ಪ್ರಶಾಂತ್ ಶೇರಿಗಾರ್‌ರಿಂದ ಸ್ಪೂರ್ತಿ- ಮಾರ್ಗದರ್ಶನ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಮೊದಲನೇ ಏಷ್ಯನ್ ಪವರ್‌ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವುದರೊಂದಿಗೆ ಮುಂಚೂಣಿಗೆ, ಕೆಲವೇ ವರ್ಷಗಳ ಕ್ರೀಡಾ ಜೀವನದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ೬ ಚಿನ್ನ, ೪ ರಜತ, ೩ ಕಂಚಿನ ಪದಕಗಳು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ೧೭ ಚಿನ್ನ, ೫ ರಜತ ಹಾಗೂ ೩ ಕಂಚಿನ ಪದಕಗಳನ್ನು ಗೆದ್ದು ಮುನ್ನಡೆದಿರುವ ವಿಶ್ವನಾಥ್ ನಾಡಿನ ಅತ್ಯಂತ ಭರವಸೆಯ ಕ್ರೀಡಾಚೇತನ.