Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ವಿಜಯ ಸಂಕೇಶ್ವರ

ಉದ್ಯಮ ರಂಗದಲ್ಲಿ ಅದ್ವಿತೀಯ ಸಾಧನೆ ಮೂಲಕ ಅಚ್ಚಳಿಯದ ಛಾಪು ಮೂಡಿಸಿದವರು ವಿಜಯ ಸಂಕೇಶ್ವರ. ಪ್ರತಿಷ್ಠಿತ ವಿಆರ್‌ ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಯಶಸ್ವಿ ಉದ್ಯಮಿ.
ಉತ್ತರಕರ್ನಾಟಕದ ಗದಗ ಜಿಲ್ಲೆಯ ಸಂಕೇಶ್ವರ ವಿಜಯ ಸಂಕೇಶ್ವರರ ಹುಟ್ಟೂರು. ೧೯೫೦ರ ಆಗಸ್ಟ್ ೨ರಂದು ಜನನ, ಗದಗಿನ ಆದರ್ಶ ಶಿಕ್ಷಣ ಸಮಿತಿಯಲ್ಲಿ ಅಕ್ಷರಾಭ್ಯಾಸ, ವಾಣಿಜ್ಯ ಪದವೀಧರರು. ಬಾಲ್ಯದಿಂದಲೂ ವಾಣಿಜ್ಯೋದಮದಲ್ಲಿ ವಿಶೇಷ ಆಸಕ್ತಿ. ೧೯೭೬ರಲ್ಲಿ ಗದಗಿನಲ್ಲಿ ಏಕೈಕ ಟ್ರಕ್‌ನೊಂದಿಗೆ ವಿಆರ್‌ಲ್‌ ಗ್ರೂಪ್ ಸ್ಥಾಪನೆ. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಕಾರ್ಯಕ್ಷೇತ್ರ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗೆ ವಿಸ್ತರಣೆ.ಕೆಲವೇ ದಶಕಗಳಲ್ಲಿ ಪಾರಮ್ಯ ಮೆರೆಯುವಿಕೆ. ಸರಕು ಸಾಗಾಣಿಕೆ, ಪಾರ್ಸಲ್ ಸಾಗಾಣಿಕೆ ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯ ಸಂಪಾದನೆ, ಗಿನ್ನಿಸ್ ಪುಸ್ತಕದಲ್ಲಿ ನವೀನ ದಾಖಲೆ ಸ್ಥಾಪನೆ. ದೇಶಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವುದು ಮಹತ್ಸಾಧನೆ. ಶಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮಿಯೂ ಸಹ. ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಯನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಹೆಗ್ಗಳಿಕೆ. ಇದೀಗ ದಿಗ್ವಿಜಯ ಸುದ್ದಿವಾಹಿನಿಯೂ ಚಾಲ್ತಿಯಲ್ಲಿದ್ದು ಉದ್ಯಮದ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇರುವುದು ನಾಡಿಗೆ ಹೆಮ್ಮೆ ತರುವ ಸಂಗತಿ.