Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕೆ. ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರು-ಎಂ.ಆರ್.ಜಿ ಗ್ರೂಪ್

ಹೋಟೆಲ್ ಉದ್ಯಮದಲ್ಲಿ ಅದ್ವಿತೀಯ ಸಾಧನೆ-ಯಶಸ್ಸು ಪಡೆದ ಉದ್ಯಮಿ ಕೆ. ಪ್ರಕಾಶ್‌ ಶೆಟ್ಟಿ, ಬಡವರಾಗಿ ಹುಟ್ಟಿದರೂ ಬಡವರಾಗಿಯೇ ಸಾಯಬೇಕಿಲ್ಲ ಎಂಬ ಮಾತನ್ನು ನಿಜವಾಗಿಸಿದ ಛಲವಂತರು.
ಪ್ರಕಾಶ್‌ ಶೆಟ್ಟಿ ಉಡುಪಿ ಜಿಲ್ಲೆಯವರು. ಸಾಮಾನ್ಯ ಕುಟುಂಬದ ಕುಡಿ.ಬಾಲ್ಯದ ಬಡತನ ಯಶಸ್ಸಿನ ಹಂಬಲ ಹುಟ್ಟುಹಾಕಿದ್ದು ಸಹಜವೇ. ಅತಿಥಿ ಸತ್ಕಾರದ ಕನಸು. ೧೯೯೩ರಲ್ಲಿ ಬಂಜಾರ ಹೋಟೆಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಕ್ಕೆ ಪ್ರವೇಶ. ಆನಂತರ ತಿರುಗಿ ನೋಡಿದ್ದೇ ಇಲ್ಲ. ದಶಕಗಳ ಅಂತರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಸೋಜಿಗ, ಶುದ್ದ ಸಾಹಸಯಾತ್ರೆ ಪ್ರತಿಷ್ಠಿತ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾಗಿರುವ ಪ್ರಕಾಶ್‌ ಶೆಟ್ಟಿ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿನಲ್ಲಿರುವ ಗೋಲ್ಡನ್ ಫಿಂಚ್ ಹೋಟೆಲ್, ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳು ಪ್ರಕಾಶ್‌ ಶೆಟ್ಟಿ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿವೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ, ನಾಲ್ಕು ಮತ್ತು ಐದನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಊಟ-ವಸತಿ ಒದಗಿಸಿದ ಹಿರಿಮೆ ಅವರದ್ದು ಬಡಮಕ್ಕಳ ಶಾಲಾ ಕಾಲೇಜು ವೆಚ್ಚ ಭರಿಸುವ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿರುವುದು ಅವರೊಳಗಿನ ಸಮಾಜಮುಖಿತ್ವದ ದ್ಯೋತಕವಾಗಿದೆ.