Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ

ಬದುಕಿನ ಮಾಟದಲ್ಲಿ ಬಯಲಾಟವನ್ನೇ ಜೀವಭಾವವಾಗಿಸಿಕೊಂಡವರು ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ, ಕಲಾರಂಗದ ನಾದಸೇವಕರು, ಹಳ್ಳಿಗರ ಮನಗೆದ್ದ ದೊಡ್ಡಾಟದ ಹಾಮ್ಮೋನಿಯಂ ವಾದಕ, ಪಾತ್ರಧಾರಿ, ಸ್ವರಸಂಯೋಜಕ, ಶಂಕರಪ್ಪ ಕೊಪ್ಪಳ ಜಿಲ್ಲೆಯ ಪ್ರತಿಭೆ, ಕೊಪ್ಪಳ ತಾಲ್ಲೂಕಿನ ಸಾ.ಮೋರನಾಳದ ಉಪ್ಪಿನ ಬೆಟಗೇರಿ ಹುಟ್ಟೂರು. ನಾದದೊಲುಮೆ ಅಪ್ಪನಿಂದ ಬಂದ ಬಳುವಳಿ, ಕಲಾಪ್ರೇಮ ಊರುಕೇರಿ ಬೆಸೆದ ಭಾವ. ಹರೆಯದಲ್ಲಿ ಮನವೇರಿದ ನಾದದ ಗುಂಗು. ೨೭ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಕಲಾರಂಗಪ್ರವೇಶ. ಪಕ್ಕವಾದ್ಯಪಟುವಾಗಿ ಕಲಾಸೇವೆಗೈಯುತ್ತಲೇ ಬಣ್ಣ ಹಚ್ಚಿ ಕಲಾವಿದನಾದ ಹಿರಿಮೆ, ಬಯಲಾಟಗಳ ನಿರ್ದೇಶಕನಾಗಿಯೂ ಮೇಲೆ ಬರೋಬ್ಬರಿ ೧೮೦ ಬಯಲಾಟಗಳಿಗೆ ಸ್ವರಸಂಯೋಜನೆ ಮಾಡಿದ ಹೆಗ್ಗಳಿಕೆ, ಕೊಪ್ಪಳ ಜಿಲ್ಲೆಯಿಂದ ಹಿಡಿದು ನಾಡಿನ ಹಲವೆಡೆ ಬಯಲಾಟಗಳಿಗೆ ನಾದದ ರಂಗುತುಂಗ ಸೈ ಎನಿಸಿಕೊಂಡು ಕಲಾನಿಪುಣ, ೪೨ ವರ್ಷಗಳಿಂದ ಅವಿರತವಾಗಿ ಕಲಾಸೇವಾನಿರತರಾಗಿರುವ ಶಂಕರಪ್ಪಗೆ ಬದುಕೇ ಬಯಲಾಟ, ಬಯಲಾಟವೇ ಬದುಕು. ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ಶಂಕರಪ್ಪ ಹಳ್ಳಿಗಾಡಿನ ಕಲಾವಂತಿಕೆ, ಸಮರ್ಪಣಾಭಾವ ಮತ್ತು ನಿಸ್ಪೃಹ ಕಲಾಸೇವೆಯ ನಿಜಪ್ರತೀಕ.