Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಖುಷಿ

ಯೋಗದಿಂದ ಸುಯೋಗ ಎಂಬ ಲೋಕನುಡಿಯನ್ನು ನಿಜವಾಗಿಸಿರುವ ಕುಮಾರಿ ಖುಷಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಅತ್ಯುತ್ತಮ ಯೋಗಪಟು.
ಮೈಸೂರಿನ ವಿಜಯವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಖುಷಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತಹ ಪ್ರತಿಭೆ. ಉಸಿರಾಟದ ತೊಂದರೆ ನಿವಾರಣೆಗೆಂದು ಆರಂಭಿಸಿದ ಯೋಗವೇ ಸಾಧನೆಯ ಮಾರ್ಗವಾಗಿದ್ದು ವಿಶೇಷ, ಮೈಸೂರು ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ.ಪಿ.ಎನ್. ಗಣೇಶ್‌ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದ ಖುಷಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯದ ಕೀರ್ತಿ ಬೆಳಗಿದವರು. ನಿರಾಳಂಬ ಪೂರ್ಣಚಕ್ರಾಸನವನ್ನು ನಿಮಿಷಕ್ಕೆ ಹದಿನಾಲ್ಕು ಬಾರಿ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಸಾಧಕಿ. ಆರು ಬಾರಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಪದಕ ಗೆದ್ದ ಯೋಗಪಟು. ಕರ್ನಾಟಕ ಕಲಾಶ್ರೀ, ಅಸಾಧಾರಣ ಪ್ರತಿಭೆ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಭೂಷಿತೆ, ಯೋಗಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಂಡು ದೇಶದ ಉತ್ತಮ ಯೋಗಶಿಕ್ಷಕಿಯಾಗುವ ಕನಸೊತ್ತಿರುವ ಈಕೆ ಆ ಗುರಿ ಮುಟ್ಟುವುದು ನಿಶ್ಚಿತವೆಂಬ ಭರವಸೆ ಮೂಡಿಸಿರುವ ಪ್ರತಿಭಾಶೀಲೆ.