Categories
ಕಿರುತೆರೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಜಯಕುಮಾರ ಕೊಡಗನೂರು

ವೃತ್ತಿ ರಂಗಭೂಮಿಯನ್ನೇ ಬದುಕಿನ ಕರ್ಮಭೂಮಿಯಾಗಿಸಿಕೊಂಡ ಅಭಿಜಾತ ಕಲಾವಿದ ಜಯಕುಮಾ‌ ಕೊಡಗನೂರು.ಕಿರುತೆರೆ-ಬೆಳ್ಳಿತೆರೆಯಲ್ಲೂ ಛಾಪೊತ್ತಿದ ಕಲಾಚೇತನ.
ದಾವಣಗೆರೆ ಜಿಲ್ಲೆಯ ಕೊಡಗನೂರು ಜಯಕುಮಾರ್ ಹುಟ್ಟೂರು. ಹತ್ತನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದವರು. ಹಳ್ಳಿಗಾಡಿನ ನಾಟಕಗಳಲ್ಲಿ ನಟಿಸುತ್ತಿದ್ದವರಿಗೆ ತಿರುವು ಸಿಕ್ಕಿದ್ದು ಸದಾರಾಮೆ ನಾಟಕದ ಮೂಲಕ. ೭೦ರ ದಶಕದಿಂದ ಇವರಿಗೆ ಬಣ್ಣವೇ ಬದುಕು, ಪಾತ್ರವೇ ಜೀವ. ಗುಬ್ಬಿ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಸಂಗಮೇಶ್ವರ ನಾಟಕ ಸಂಘ, ಕೆ.ಬಿ.ಆರ್. ಡ್ರಾಮಾ ಕಂಪನಿ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ತರಹೇವಾರಿ ಪಾತ್ರ ನಿರ್ವಹಿಸಿ ರಂಗಪ್ರಿಯರ ಮನಗೆದ್ದವರು. ದೇವಿ ಮಹಾತ್ಮಯ ಮಹಿಷಾಸುರ, ರೇಣುಕಾದೇವಿ ಮಹಾತ್ಮಯ ಕಾರ್ತ್ಯವೀರಾರ್ಜುನ, ಮದಕರಿನಾಯಕ, ಪೊಲೀಸನ ಮಗಳಲ್ಲಿನ ಎಸ್ಪಿ ಚಂದ್ರಶೇಖರ್ ಜಯಕುಮಾರ್‌ಗೆ ಹೆಸರು ತಂದುಕೊಟ್ಟ ಪಾತ್ರಗಳು. ಕಿರುತೆರೆಯ ಸಂಕ್ರಾಂತಿ, ಮಹಾಮಾಯೆ, ಕೆಳದಿ ಚೆನ್ನಮ್ಮ, ಭಾಗೀರಥಿ ಸೇರಿ ಹತ್ತಾರು ಧಾರಾವಾಹಿಗಳು, ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಹಿರಿಮೆ.ಎಲ್ಲಾ ಬಗೆಯ ಪಾತ್ರಗಳಲ್ಲೂ ಸೈ ಎನಿಸಿಕೊಂಡ ಕಲಾನಿಪುಣ. ಐದು ದಶಕಗಳ ಸಾರ್ಥಕ ಕಲಾಸೇವೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿ, ಹತ್ತಾರು ಬಿರುದುಗಳಿಂದ ಭೂಷಿತರು.