Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೃಷ್ಣಪ್ರಸಾದ್. ಕೆ

ಕತ್ತಲೆಯಲ್ಲಿರುವವರ ಬಾಳು ಬೆಳಗಿದ ದೀಪವಾದವರು ಹೆಸರಾಂತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್.ಕೆ. ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಜಾಗೃತಿ ಮೂಡಿಸಲೆಂದೇ ಬದುಕು ಮೀಸಲಿಟ್ಟಿರುವ ವೈದ್ಯಶಿರೋಮಣಿ.
ಉಡುಪಿ ಜಿಲ್ಲೆಯವರಾದ ಕೃಷ್ಣಪ್ರಸಾದ್ ನೇತ್ರ ಚಿಕಿತ್ಸೆಯಲ್ಲಿ ಅದ್ವಿತೀಯ ಸಾಧನೆಗೈದವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಎಂ.ಎಸ್. ಪೂರೈಸಿದವರು. ಅದೇ ಕಾಲೇಜಿನ ಪ್ರಾಧ್ಯಾಪಕ, ಉಡುಪಿ ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಆಸ್ಪತ್ರೆಯ ಗೌರವ ಪ್ರಾಧ್ಯಾಪಕರಾಗಿ, ಸುಪ್ರಸಿದ್ಧ ಪ್ರಸಾದ್ ನೇತ್ರಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ಕಣ್ಣಿನ ಚಿಕಿತ್ಸೆಯಲ್ಲಿ ಅಪೂರ್ವ ಸೇವೆ ಕೃಷ್ಣಪ್ರಸಾದ್‌ ಹಿರಿಮೆ. ೨೦ ಲಕ್ಷ ಜನರ ಕಣ್ಣಿನ ತಪಾಸಣೆ, ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಸೇವೆ, ೬೦ ಸಾವಿರಕ್ಕೂ ಮಿಗಿಲಾದ ಕಣ್ಣಿನ ಶಸ್ತ್ರಚಿಕಿತ್ಸೆ, ೩.೭೫ ಲಕ್ಷ ಜನರಿಗೆ ಉಚಿತ ಕನ್ನಡ ವಿತರಣೆ, ಉಚಿತ ನೇತ್ರ ತಪಾಸಣಾ ಶಿಬಿರಗಳು, ಕಣ್ಣಿನ ಆರೋಗ್ಯದ ಬಗ್ಗೆ ಜನಸಾಮಾನ್ಯರು-ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ ಮುಂತಾದವು ಕೃಷ್ಣಪ್ರಸಾದ್‌ ಸಾಧನೆಯ ಮೈಲಿಗಲ್ಲುಗಳು. ಹತ್ತಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಉಪನ್ಯಾಸದ ಹೆಗ್ಗಳಿಕೆ.ರಾಜ್ಯ, ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಂದಲೂ ಭೂಷಿತರಾಗಿರುವ ಕೃಷ್ಣಪ್ರಸಾದ್ ವೈದ್ಯಲೋಕದ ನಕ್ಷತ್ರಗಳಲ್ಲಿ ಒಬ್ಬರೆಂಬುದಕ್ಕೆ ಅವರ ಸಾಧನೆಯೇ ಜ್ವಲಂತ ಸಾಕ್ಷಿ.