Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಂತ ಮುನ್ನೊಳ್ಳಿ

ವರ್ಣಚಿತ್ರಕಲೆಯಲ್ಲಿ ತಮ್ಮದೇ ಅಚ್ಚಳಿಯದ ಛಾಪು ಮೂಡಿಸಿದ ಕಲಾಕುಸುಮ ಜಯಂತ ಮುನ್ನೊಳ್ಳಿ. ವೈವಿಧ್ಯಮಯ ಕಲಾಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ಸಂಚಲನ ಮೂಡಿಸಿದ ಸಾಧಕ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ಜಯಂತ ಮುನ್ನೊಳ್ಳಿ ಬಹುಭಾಷಾ ಪ್ರವೀಣರು. ಆಫ್ರಿಕನ್ ಭಾಷೆಯನ್ನೂ ಬಲ್ಲವರು. ೧೯೪೦ರ ಡಿಸೆಂಬರ್ ೧೦ರಂದು ಜನಿಸಿದ ಮುನ್ನೊಳ್ಳಿ ೬೪ರಲ್ಲಿ ಮದ್ರಾಸ್ ರಾಜ್ಯದ ಸೇಲಂನಲ್ಲಿ ಹ್ಯಾಂಡ್‌ಲೂಮ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಕಲಿತವರು. ಪೂರ್ವ ಆಫ್ರಿಕಾದ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು. ಕ್ರಿಯೇಟಿವ್ ಪೇಟಿಂಗ್ ಮತ್ತು ಆಯಿಲ್ ಪೇಟಿಂಗ್‌ನಲ್ಲಿ ವಿಶೇಷ ಪರಿಣಿತಿಯುಳ್ಳವರು. ಮುಂಬಯಿನ ಎಲಿಮೆಂಟ್ರಿ ಡ್ರಾಯಿಂಗ್ ಕಾಂಪಿಟೇಶನ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭಾವಂತರು. ಮುಂಬಯಿನ ಜಹಾಂಗೀರ ಆರ್ಟ್‌ ಗ್ಯಾಲರಿಯಲ್ಲಿ ಹತ್ತು ಬಾರಿ ಸೇರಿ ದೇಶದ ವಿವಿಧೆಡೆ ೫೦ಕ್ಕೂ ಹೆಚ್ಚು ಏಕವ್ಯಕ್ತಿ ಕಲಾಪ್ರದರ್ಶನದ ಹೆಗ್ಗಳಿಕೆ ಇವರದ್ದು. ಪ್ರತಿ ಪ್ರದರ್ಶನದಲ್ಲೂ ನವೀನ ಕಲಾಕೃತಿಗಳ ಮೂಲಕ ಕಲಾಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಕಲಾವಂತಿಕೆ ಜಯಂತ ಅವರ ವಿಶೇಷತೆ. ೮೦ರ ಆಸುಪಾಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವ ಅವರು ಕಲಾಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಬಂದಿವೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹಲವು ಗೌರವಗಳಿಗೆ ಭಾಜನರು.