Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ರಾಜ್‌ಕುಮಾರ್, ಬೆಹರಿನ್

ವಿದೇಶದಲ್ಲಿ ಕನ್ನಡದ ಕಂಪು ಹರಿಸಿ ಕರುನಾಡಿನ ಕೀರ್ತಿ ಬೆಳಗಿದವರು ರಾಜ್‌ಕುಮಾರ್, ಬೆಹರಿನ್ ಕನ್ನಡ ಸಂಘದ ಆದ್ಯ ಪ್ರವರ್ತಕರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ರೂವಾರಿ, ಉಡುಪಿ ಜಿಲ್ಲೆ ಅಂಬಲಪಾಡಿಯಲ್ಲಿ ೧೯೯೨ರ ಜನವರಿಯಲ್ಲಿ ಜನಿಸಿದ ರಾಜ್‌ಕುಮಾರ್ ಬದುಕು ಅರಸಿ ದ್ವೀಪ ರಾಷ್ಟ್ರ ಬೆಹರಿನ್‌ಗೆ ಗುಳೆ ಹೋದವರು. ವೃತ್ತಿಯಲ್ಲಿ ಉದ್ಯಮಿ, ಪ್ರವೃತ್ತಿಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಾರಕ. ನಾಲ್ಕು ದಶಕಗಳಿಂದಲೂ ಬೆಹರಿನ್‌ನಲ್ಲಿ ನೆಲೆನಿಂತಿರುವ ರಾಜ್‌ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಹರಿನ್ ಕನ್ನಡ ಸಂಘವನ್ನು ಹತ್ತು ವರ್ಷಗಳಿಗೂ ಮಿಗಿಲು ಮುನ್ನಡೆಸಿದವರು. ಸಂಘಕ್ಕೊಂದು ಸುಸಜ್ಜಿತ ಕನ್ನಡಭವನ ನಿರ್ಮಾಣಕ್ಕೆ ಕಾರಣರಾದವರು. ವಿದೇಶಿ ನೆಲದಲ್ಲಿ ಎರಡು ಬಾರಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಿದ ಹೆಗ್ಗಳಿಕೆ, ಆಳ್ವಾಸ್ ನುಡಿಸಿರಿ ಕಾರ್ಯಕ್ರಮ, ಅಂಧರ ಸಾಂಸ್ಕೃತಿಕ ಕಾರ್ಯಕ್ರಮ, ಪುನೀತ್‌ನಮನ ಮುಂತಾದ ಕನ್ನಡತನದ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸಿದವರು. ಬೆಹರೈನ್ ಬಿಲ್ವಾಸ್ ಸಂಸ್ಥಾಪಕ, ಐದು ಬಾಲ ಅಧ್ಯಕ್ಷರಾಗಿ ಸಮುದಾಯದ ಸೇವೆಗೈದವರು. ಧಾರ್ಮಿಕ, ಸಾಹಿತ್ಯಕ, ಜಾನಪದ ಮತ್ತು ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿದ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದ ನೈಜ ಭಾಷಾಪ್ರತಿನಿಧಿ, ಮಾದರಿ ಸಮಾಜಸೇವಕರು.