Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ಕೆ. ಉಪೇಂದ್ರ ಭಟ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಕಿರಾನಾ ಘರಾಣೆಯ ಯಶಸ್ವಿ ಗಾಯಕ ಪಂಡಿತ್ ಕೆ.ಉಪೇಂದ್ರ ಭಟ್ ಅವರ ಸಾಧನೆಯಷ್ಟೇ ಅವರ ವ್ಯಕ್ತಿತ್ವವೂ ಶಿಖರ ಸದೃಶ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಶ್ರೀಯುತರು ಸಂಗೀತ ಪಯಣ ಆರಂಭಿಸಿದ್ದು ಮಂಗಳೂರಿನ ಶ್ರೀ ಪಂಡಿತ್ ನಾರಾಯಣ ಪೈ ಅವರ ಬಳಿ, ಆ ಬಳಿಕ ಪಂಡಿತ ಮಾಧವ ಗುಡಿ ಮತ್ತು ಖ್ಯಾತ ಹಿಂದೂಸ್ತಾನಿ ಹಾಡುಗಾರ ಪಂಡಿತ್ ಭೀಮಸೇನ ಜೋಷಿ ಅವರ ಕಾವಲಿನಲ್ಲಿ ನಿಯಮಿತ ತರಬೇತಿ ಪಡೆದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವರು. ಸದ್ಯ ಪೂಜ್ಯ ಭೀಮಸೇನ ಜೋಷಿ ಅವರೊಂದಿಗೆ ಪುಣೆಯಲ್ಲಿ ಅವರ ವಾಸ.
ಮುಂಬಯಿಯ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ‘ಸಂಗೀತ ವಿಶಾರದ ಮತ್ತು ಸಂಗೀತ ಅಲಂಕಾರ’ ವಿಷಯದಲ್ಲಿ ಸ್ನಾತಕೋತ್ತರ ಪದವಿ, ದೈವದತ್ತವಾಗಿ ಒಲಿದ ಕಂಠ ಸಿರಿಯ ಉಪೇಂದ್ರರ ಹಾಡುಗಾರಿಕೆಯಲ್ಲಿ ವ್ಯವಸ್ಥಿತ ರಾಗದ ಆಲಾಪನೆಗಳು, ಸ್ಪಷ್ಟ ಉಚ್ಚಾರ, ಶಕ್ತಿಶಾಲಿ ತಾನಗಳ ಸೊಬಗುಂಟು.
ಜಲಂಧರ್‌ನ ಹರಿವಲ್ಲಭ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವಗಳಲ್ಲಿ, ಇಂಗ್ಲೆಂಡ್, ಅಮೆರಿಕ, ದುಬೈ, ಬಕ್ರೇನ್ ಮುಂತಾದೆಡೆ ಅಲ್ಲಿನ ಪ್ರಸಿದ್ದ ಸಭೆ-ಸಮಾರಂಭಗಳಲ್ಲೂ ಉಪೇಂದ್ರ ಭಟ್ ಅವರ ಸಂಗೀತ ಮಾಧುರ್ಯದ ಕಂಪು ಪಸರಿಸಿದೆ.
೧೯೯೬ರಲ್ಲಿ ಜರುಗಿದ ಸಂತ ಜ್ಞಾನೇಶ್ವರರ ೭ನೇ ಜನ್ಮ ಶತಾಬ್ಬಿ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮದಲ್ಲಿ ಪಂಡಿತ್‌ ಉಪೇಂದ್ರರ ಸಂಗೀತ ಪ್ರೌಢಿಮೆಗೆ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರಿಂದ ಶ್ಲಾಘನೆ. ೨೦೦೦ದಲ್ಲಿ ಉತ್ತರ ಅಮೆರಿಕಾ ವತಿಯಿಂದ ‘ಮ್ಯೂಜಿಷಿಯನ್ ಆಫ್ ದಿ ಇಯರ್’ ಗೌರವಕ್ಕೆ ಅವರು ಪಾತ್ರರು.
ಸುಮಧುರ ಸಂಗೀತದಿಂದ ಜನಮೆಚ್ಚುಗೆ ಪಡೆದ ಶಾಸ್ತ್ರೀಯ ಹಾಡುಗಾರರು ಶ್ರೀ ಕೆ. ಉಪೇಂದ್ರ ಭಟ್.