Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಅದಮ್ಯ ಚೇತನ

ಅನ್ನ-ಅಕ್ಷರ,ಆರೋಗ್ಯ-ಪ್ರಕೃತಿ-ಸಂಸ್ಕೃತಿ ಎಂಬ ಪ್ರಮುಖ ಧೈಯಗಳಡಿಯಲ್ಲಿ ಸೇವಾನಿರತವಾಗಿರುವ ಸಂಸ್ಥೆ ಅದಮ್ಯ ಚೇತನ. ೧೯೯೭ ರಲ್ಲಿ ಆರಂಭವಾದ ಈ ಸಂಸ್ಥೆ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಡಿಯಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಶಾಲಾಮಕ್ಕಳ ಹಸಿವನ್ನು ನೀಗಿಸಲು ‘ಅನ್ನಪೂರ್ಣ’ಬಿಸಿಯೂಟದ ಯೋಜನೆಯಡಿಯಲ್ಲಿ ಬೆಂಗಳೂರು, ಹುಬ್ಬಳ್ಳಿ,ಕಲಬುರಗಿ, ಅಡುಗೆ ಕೇಂದ್ರಗಳಿಂದ ಶುಚಿಯಾದ ಪೌಷ್ಟಿಕವಾದ ಮಧ್ಯಾಹ್ನದ ಬಿಸಿಯೂಟವನ್ನು ಉಣಬಡಿಸುತ್ತಿದೆ. ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ. ಜೊತೆಗೆ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಅಲೆಯ ಸಂದರ್ಭದಲ್ಲಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ, ಸಾವಿರಾರು ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.
ಅದಮ್ಯ ಚೇತನವು ಗ್ರಾಮಗಳನ್ನು ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಸಬಲೀಕರಿಸಿ ಮಾದರಿ ಗ್ರಾಮವನ್ನಾಗಿ ಮಾಡುತ್ತಿದೆ. ಜೊತೆಗೆ ಸಸ್ಯಾಗ್ರಹ ಯೋಜನೆಯಡಿಯಲ್ಲಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ.