Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶ್ರಮಿಕ ವಲಯ

ಶ್ರೀಮತಿ ರತ್ನಮ್ಮ ಶಿವಪ್ಪ

ಯಾದಗಿರಿ ನಗರಸಭೆಯ ಪೌರಕಾರ್ಮಿಕ ಮಹಿಳೆ ರತ್ನಮ್ಮ ಶಿವಪ್ಪ ಬದಲಾದ ೩೫ ವರ್ಷಗಳ ಕಾಲ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಡುವ ಕೆಲಸದಲ್ಲಿ ಮೇಲು ಕೀಳು ಅನ್ನುವ ತಾರತಮ್ಯ ತೋರದೇ ಶೀಮತಿ ರತ್ನಮ್ಮ ಸ್ವಚ್ಛತಾ ಕಾರ್ಯವನ್ನು ಶ್ರದ್ಧೆಯಿಂದ ಮಾಡಿ ತಮ್ಮ ವೃತ್ತಿಬದ್ಧತೆಯನ್ನು ಮೆರೆದಿದ್ದಾರೆ. ಜೀವನದ ನಡುದಾರಿಯಲ್ಲಿ ಗಂಡನನ್ನು ಕಳೆದುಕೊಂಡರೂ ಎದೆಗುಂದದೆ ತಮ್ಮ ಐವರು ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಇವರ ಕರ್ತವ್ಯ ಪ್ರಜ್ಞೆ ದೊಡ್ಡದು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶ್ರಮಿಕ ವಲಯ

ಶ್ರೀ ಎಂ ಎಸ್ ಮುತ್ತುರಾಜ್

ಕ್ಷೌರಿಕ ವೃತ್ತಿಯನ್ನು ಸಾಮಾಜಿಕ ಬದಲಾವಣೆಯ ಸಾಧನವನ್ನಾಗಿ ಪರಿವರ್ತಿಸಿದ ಅಪರೂಪದ ಸಮಾಜಸೇವಕ ಶ್ರೀ ಎಂ ಎಸ್ ಮುತ್ತುರಾಜ್ ಅವರು.

ಸಮಾಜದ ಒಳಿತಿನ ಬಗ್ಗೆ, ಅಸಮಾನತೆಯನ್ನು ಸುಧಾರಿಸುವ ಬಗ್ಗೆ ಅನೇಕರು ವಿವಿಧ ಸಾಧನ ಮಾರ್ಗಗಳನ್ನು ಕಂಡುಕೊಂಡು ಯಶಸ್ವಿಯಾಗಿದ್ದಾರೆ. ಅಂತಹ ಯಶಸ್ವಿಗಳ ಮಾರ್ಗಗಳಲ್ಲಿ ಶ್ರೀ ಎಂ ಎಸ್ ಮುತ್ತುರಾಜ್ ಅನುಸರಿಸಿ ಸಾಧಿಸುತ್ತಿರುವ ಮಾರ್ಗ ಬಹು ಭಿನ್ನ; ಅತಿ ವಿಶಿಷ್ಟ ಅಸ್ಪಶ್ಯರೆನಿಸಿಕೊಂಡು ದಲಿತ ವರ್ಗದವರು ಕ್ಷೌರ ಮಾಡಿಸಿಕೊಳ್ಳುವುದು ದುಸ್ತರವಾಗಿರುವ ಸಂದರ್ಭದಲ್ಲಿ ಶ್ರೀ ಮುತ್ತುರಾಜರು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಾವಿರಾರು ಅಸ್ಪೃಶ್ಯರಿಗೆ ಅವರವರ ಹಳ್ಳಿಗಳಿಗೆ ಹೋಗಿ, ಕೊಳೆಗೇರಿ ನಿವಾಸಿಗಳ ಬಳಿಗೆ ಹೋಗಿ ಉಚಿತವಾಗಿ ಕ್ಷೌರ ಮಾಡಿ ಅವರ ಪ್ರೀತಿಯನ್ನು ಸಂಪಾದಿಸಿ ಸಮಾಜವಾದದ ನಿಜವಾದ ಭಾಷ್ಯವನ್ನು ಬರೆಯುತ್ತಿರುವ ಸಾಹಸಿರಾಜ.

ಡಾ. ನೆಲ್ಸನ್ ಮಂಡೇಲಾ ಅವರ ಹುಟ್ಟುಹಬ್ಬವನ್ನು ತಮ್ಮ ಜನರ ತಂಡವನ್ನು ಬಳಿಸಿ ೫೦೦೦ ಮಂದಿಗೆ ಸಮಭಾವ ಕ್ಷೌರವನ್ನು ಮಾಡುವುದರ ಮೂಲಕ ವಿನೂತನ ಹಾದಿ ಹಿಡಿದ ಸಾಧಕ, ಕ್ಷೌರಿಕ ಕಾಯಕವನ್ನು ವೃತ್ತಿ ಮತ್ತು ಪ್ರವೃತ್ತಿ ಮಾಡಿಕೊಂಡ ಶ್ರೀ ಮುತ್ತುರಾಜ್ ಲೇಖಕ ಹಾಗೂ ಜನಪ್ರಿಯ ಕಲಾವಿದ ಕೂಡ. ಶ್ರೀಯುತರು ಹಜಾಮ ಅಲ್ಲವೋ ನಿಜಾಮ, ನಾಯಿಂದ ಕ್ರಾಂತಿ ಗೀತೆಗಳು, ಶೂದ್ರ ಕ್ಷೌರಿಕ ಮೊದಲಾದ ಕೃತಿಗಳನ್ನು ಬರೆದಿರುವುದಲ್ಲದೆ ೨೦ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೩೦ಕ್ಕೂ ಹೆಚ್ಚು ದೂರದರ್ಶನ ಸರಣಿ ಮಾಲಿಕೆಗಳಲ್ಲಿ ನಟಿಸಿದ್ದಾರೆ.

ಕಾಯಕವೇ ಕೈಲಾಸವೆಂಬ ಬಸವಣ್ಣನವರ ಸಂದೇಶವನ್ನು ತಮ್ಮ ನಿಜ ಬದುಕಿಗೆ ಅನ್ವಯಿಸಿಕೊಂಡ ಅಪರೂಪದ ವ್ಯಕ್ತಿ ಶ್ರೀ ಮುತ್ತುರಾಜ್ ಅವರು.