Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಮಾರೆಪ್ಪ ಮಾರೆಪ್ಪ ದಾಸರ

ಜನಪದ ಸಂಗೀತವನ್ನೇ ತಮ್ಮ ಬದುಕನ್ನಾಗಿಸಿಕೊಂಡು ಹಸಿವು ಬಡತನಗಳಿಂದ ನಲುಗಿದ್ದರೂ, ಹಾಡುತ್ತಲೇ ಹಾಡನ್ನಷ್ಟೇ ನೀಡುತ್ತಿರುವ ಜನಪದ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.
ಶ್ರೀ ಮಾರೆಪ್ಪ ದಾಸರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ತುಮ್ಮರಗುಬ್ಬಿಯೆಂಬ ಪುಟ್ಟ ಗ್ರಾಮದಲ್ಲಿ ಜೀವನದುದ್ದಕ್ಕೂ ಅಲೆಮಾರಿ ಜೀವನ. ಬೀದಿಬೀದಿಗಳಲ್ಲಿ ಹಾಡುತ್ತಾ, ಬೇಡುತ್ತಾ, ತತ್ವಪದ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಬಳ್ಳಾರಿ ಶಿಶುಹತ್ಯಾ ಲಾವಣಿ, ಬಂಜೆ ಪದ ಹೀಗೆ ನೂರಾರು ಪದಗಳನ್ನು ರಾತ್ರಿಯಲ್ಲಿ ಹಾಡುತ್ತಾ, ಮೂರು ತಂತಿಯ ಏಕತಾರಿ, ಚೌಟಕಿತಾಳ, ಪಿಟೀಲು ಬಾರಿಸುತ್ತಾ ಉತ್ತರ ಕರ್ನಾಟಕದ ಮನೆ ಮಾತಾಗಿರುವ ಶ್ರೀ ಮಾರೆಪ್ಪ ದಾಸರ ಪದ ಎಂದರೆ ಜನ ಜಮಾಯಿಸುತ್ತಾರೆ. ತಂತಿವಾದ್ಯಗಳ ಮಧುರ ಧ್ವನಿಯೊಡನೆ ರಾಗ ಕೂಡಿಸುತ್ತಾ ಹಾಡುವ ಶ್ರೀಯುತರ ಗಾಯನ ಎಂಥವರನ್ನೂ ಮರುಳು ಮಾಡುತ್ತದೆ.
ಶ್ರೀ ಮಾರೆಪ್ಪ ದಾಸರ ಜನಪದ ಗಾಯನಕ್ಕೆ ಅನೇಕ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ದೊರೆತಿವೆ. ೧೯೮೫ರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಧಾರವಾಡದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರಶಸ್ತಿ ಇವು ಅವರಿಗೆ ಸಂದ ಕೆಲವು ಗೌರವಗಳು.
ಜನಪದ ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟ ಅಲೆಮಾರಿ ಜನಪಢ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ. ಚಂದ್ರಶೇಖರ ಮಾಲೂರು

– ನಾಗಸ್ವರ ಒಂದು ಮಂಗಳವಾದ್ಯ, ಇದು ಸುಶಿರವಾದ್ಯವೂ ಹೌದು. ಒಂದು ಕಾಲದಲ್ಲಿ ಇದು ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಮೆರವಣಿಗೆ, ಉತ್ಸವಾದಿಗಳಲ್ಲಿ ಮಾತ್ರ ನುಡಿಸುವ ವಾದ್ಯವಾಗಿದ್ದು. ಸಾರ್ವಜನಿಕವಾಗಿ ಇದಕ್ಕೊಂದು ಸೂಕ್ತ ವೇದಿಕೆ ಇದ್ದಿರಲಿಲ್ಲ. ಕ್ರಮೇಣ ದೊಡ್ಡ ದೊಡ್ಡ ನಗರಗಳಲ್ಲಿ ಇದಕ್ಕೆ ವೇದಿಕೆ ದೊರೆತು, ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶವೂ ದೊರೆಯಿತು ಆದರೆ ತಾಲ್ಲೂಕು ಮಟ್ಟದಲ್ಲಿ ಈ ಸುಧಾರಣೆ ಬರಲಿಲ್ಲ, ಇದನ್ನು ಮನಗಂಡು ಇಂಥ ಸ್ಥಳಗಳಲ್ಲಿ ಇದಕ್ಕೆ ವೇದಿಕೆ ಸಿಗಬೇಕೆಂದು ಶ್ರಮಿಸಿ ಯಶಕಂಡವರು ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.
ತಮ್ಮ ನಿರಂತರ ಪರಿಶ್ರಮದಿಂದ ಈ ನಾಗಸ್ವರ ವಾದನ ಕಲೆಗೆ ಜೀವತುಂಬಿ ಅದಕ್ಕೆ ಒಂದು ರೂಪವನ್ನು ಕೊಟ್ಟವರು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಕುಡಿಯನೂರು ಗ್ರಾಮದಲ್ಲಿ ಜನಿಸಿದ ಇವರಿಗೆ ಈ ಕಲೆ ಪಾರಂಪರಿಕವಾಗಿ ಬಂದದ್ದು. ತಮ್ಮ ತಂದೆ ವಿದ್ವಾನ್ ಕೃಷ್ಣಪ್ಪನವರಲ್ಲೇ ಶಿಕ್ಷಣ ಪಡೆದು ಮುಂದೆ ತಮ್ಮ ಸ್ವಯಂ ಪ್ರತಿಭೆಯಿಂದ ಅದನ್ನೇ ರೂಡಿಸಿಕೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಮುಖವಾಗಿ ಆಂಧ್ರ, ತಮಿಳುನಾಡು, ಕೇರಳ, ಪಾಂಡಿಚೇರಿಗಳಲ್ಲಿ ತಮ್ಮ ಪ್ರತಿಭೆ ಬೆಳಗಿದ್ದಾರೆ. ಆಕಾಶವಾಣಿ-ದೂರದರ್ಶನಗಳಿಂದಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಗುರು-ಶಿಷ್ಯ ಪರಂಪರೆಯಲ್ಲಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ರಸಿಕ ವೃಂದವನ್ನು ತಮ್ಮ ವಾದನದ ಸಂಮೋಹಕತೆಗೆ ಒಳಗಾಗಿಸುವ ಇವರಿಗೆ ಸಂದ ಬಿರುದು ಗೌರವ ಪ್ರಶಸ್ತಿಗಳು ಆಪಾರ. ಈ ಕಲೆಯನ್ನೇ ತಮ್ಮ ಜೀವನಾಡಿಯಾಗಿ ಮಾಡಿಕೊಂಡು ಜನಪ್ರಿಯ ಕಲಾವಿದರೆನಿಸಿದ್ದಾರೆ ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆರ್.ಕೆ. ಪದ್ಮನಾಭ

ಸಂಗೀತ ಕಾಶಿ ಎಂದೇ ಹೆಸರಾದ ರುದ್ರಪಟ್ಟಣದ ಸಂಗೀತ ಪರಂಪರೆಗೊಂದು ಮುಕುಟಮಣಿ ಗಾನಕಲಾ ಭೂಷಣ ಶ್ರೀಯುತ ಆರ್.ಕೆ. ಪದ್ಮನಾಭ ಅವರು.
ಬಾಲಕ ಪದ್ಮನಾಭರ ಸಂಗೀತಾಸಕ್ತಿಯನ್ನು ಊರಿನ ಸಂಗೀತ ಪರಂಪರೆಯೇ ಗಟ್ಟಿಗೊಳಿಸಿತು. ಭೌತಶಾಸ್ತ್ರದಲ್ಲಿ ಪದವಿ ಪಡೆದು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಅವರ ಪ್ರವೃತ್ತಿ ಶಾಸ್ತ್ರೀಯ ಸಂಗೀತವಾಗಿತ್ತು. ಮೈಸೂರು ನಂಜುಂಡಸ್ವಾಮಿ, ವಿದ್ವಾನ್ ಸೀತಾರಾಮಶಾಸ್ತ್ರಿ, ಹೆಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಶಾಸ್ತ್ರೀಯ ಶಿಕ್ಷಣ ಪಡೆದ ಬಹುಮುಖ ಪ್ರತಿಭಾ ಸಂಪನ್ನ ಸಂಗೀತಗಾರರಿವರು.
ಶುದ್ಧ ಶಾರೀರ, ಆಳವಾದ ಸಂಗೀತ ಜ್ಞಾನದಿಂದ ಕರ್ನಾಟಕ ಶೈವ ಹಾಗೂ ಹಿಂದೂಸ್ತಾನಿ ಶೈಲಿ ಎರಡರಲ್ಲಿಯೂ ಪ್ರಾವೀಣ್ಯತೆ ಪಡೆದ ಇವರ ಸಂಗೀತ ಕಚೇರಿಗಳು ದೇಶದೆಲ್ಲೆಡೆಯಷ್ಟೇ ಅಲ್ಲದೆ ದೇಶದಾಚೆಗೂ ಅಪಾರ ಶೋತೃವೃಂದವನ್ನು ಸೃಷ್ಟಿಸಿವೆ. ಶಾರದಾ ಕಲಾಕೇಂದ್ರ ಎಂಬ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಪ್ರತಿಭೆಗಳನ್ನು ಬೆಳೆಸಿದ ಶ್ರೀಯುತರ ಸಂಗೀತ ಸಾಧನೆಯನ್ನು ಅರಸಿಬಂದ ಪ್ರಶಸ್ತಿ ಬಿರುದುಗಳು ಹಲವಾರು. ಗಾನಕಲಾ ಭೂಷಣ, ಸಂಗೀತ ಭೂಷಣ, ಸಂಗೀತ ಸೇವಾ ಮಣಿ, ಶ್ರೇಷ್ಠ ಗಾಯಕ, ಭಕ್ತಿಗಾನ ಸುಧಾಕರ, ನಾದತಪಸ್ವಿ, ಮುಂತಾದ ಬಿರುದು, ಸನ್ಮಾನಗಳು ಅನೇಕ ಸಂಘ ಸಂಸ್ಥೆಗಳಿಂದ ಸಂದಿವೆ.
ಅದ್ವಿತೀಯ ಸಂಗೀತಗಾರರಾಗಿ ಅಪಾರ ಶೋತೃಗಳನ್ನು ಪಡೆದಿರುವಂತೆ ಅನುಭವಿ ಗುರುವಾಗಿ ಅಸಂಖ್ಯ ಶಿಷ್ಯರನ್ನೂ ಪಡೆದಿರುವ ಸಂಗೀತ ನಿಧಿ ಶ್ರೀ ಆರ್.ಕೆ. ಪದ್ಮನಾಭ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಪರಮೇಶ್ವರ ಹೆಗಡೆ

ಪಂ.ಡಾ.ಬಸವರಾಜ ರಾಜಗುರು ಅವರ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದವರೆಂದರೆ ಗಾಯಕ ಪರಮೇಶ್ವರ ಹೆಗಡೆಯವರು. “ಅವನ ಗಾಯನದಾಗೆ ಉಳಿದವರಕ್ಕಿಂತ ಭಿನ್ನವಾದುದೇನೋ ಐತಿ” ಎಂದು ಗುರುಗಳಿಂದಲೇ ಪ್ರಶಂಸೆಗಿಟ್ಟಿಸಿದ ಪ್ರತಿಭಾವಂತ ಗಾಯಕ. ಮರೆಯಲ್ಲಿ ಕೇಳಿದರೆ ಪಂ. ರಾಜಗುರುಗಳೇ ಹಾಡುತ್ತಿದ್ದಾರೇನೋ ಎಂಬ ಭಾವನೆ ಬರುವಷ್ಟು ಧ್ವನಿ ಅನುಕರಣೆ ಇರುವ ವಿಶಿಷ್ಠ ಶೈಲಿಯ ಗಾಯಕರು ಶ್ರೀಯುತ ಪರಮೇಶ್ವರ ಹೆಗಡೆಯವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿ ಬಸವರಾಜ ರಾಜಗುರುಗಳಲ್ಲಿ ಗಾಯನಾಭ್ಯಾಸ ಮಾಡಿದ ಶ್ರೀಯುತರು ಹಿಂದೂಸ್ತಾನಿ ಗಾಯನದಲ್ಲಿ ಮಾಡಿದ ಸಾಧನೆ, ಏರಿದ ಎತ್ತರ ನಾಡಿನ ಸಂಗೀತ ಲೋಕ ಅಚ್ಚರಿಪಡುವಂಥದ್ದು. ರಾಷ್ಟ್ರಾದ್ಯಂತ ತಮ್ಮ ಸಂಗೀತ ಕಚೇರಿಗಳಿಂದ ರಸಿಕ ಜನವನ್ನು ಸೂಜಿಗಲ್ಲಿನಂತೆ ಸೆಳೆದ ಶ್ರೀಯುತರು ಅಮೆರಿಕಾ, ಲಂಡನ್, ಕೆನಡಾ, ಗಲ್ಫ್ ದೇಶಗಳ ಜನರ ಹೃದಯದೊಳಗೂ ತಮ್ಮ ಗಾಯನದ ಅಲೆಗಳು ಅನುರಣಿಸುವಂತೆ
ಮಾಡಿದವರು.
ಸಂಗೀತದ ಗುರುವಾಗಿ, ಸಂಘಟಕರಾಗಿ, ಅನೇಕ ಯುವಪ್ರತಿಭೆಗಳನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಲ್ಲದೆ ತಮ್ಮ ಗುರುಗಳ ನೆನಪಿನಲ್ಲಿ ರಾಜಗುರು ಸ್ಮೃತಿ ಟ್ರಸ್ಟನ್ನು ಸ್ಥಾಪಿಸಿ ತಮ್ಮ ಮೆಚ್ಚಿನ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದ ಶ್ರೀ ಪರಮೇಶ್ವರ ಹೆಗಡೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ ಸೋಮನಾಥ ಮರಡೂರ

ವೃತ್ತಿ ಪ್ರವೃತ್ತಿಗಳಿಂದ ಪ್ರಸಿದ್ಧರಾಗಿರುವ ಹಿಂದೂಸ್ತಾನಿ ಗಾಯಕ ಪಂಡಿತ ಸೋಮನಾಥ ಮರಡೂರ ಅವರು.
೧೯೪೪ರಲ್ಲಿ ಹಾವೇರಿ ಜಿಲ್ಲೆಯ ಮರಡೂರಿನಲ್ಲಿ ಜನನ. ಬಾಲ್ಯದಿಂದಲೆ ಸಂಗೀತಾಭ್ಯಾಸ ಆರಂಭವಾಗಿ ಗದಗಿನ ಶ್ರೀ ಪುಟ್ಟರಾಜ ಗವಾಯಿಗಳವರ ಬಳಿ ಶಿಕ್ಷಣದ ಮುಂದುವರಿಕೆ. ಪಂಡಿತ ಬಸವರಾಜ ರಾಜಗುರುಗಳಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತಾಭ್ಯಾಸ.
ನಾಡಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಮುಂಬೈ, ದಿಲ್ಲಿ, ಭೂಪಾಲ, ಗೋವಾ ಮುಂತಾದ ಕಡೆಗಳಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರತಿಭಾವಂತ ಗಾಯಕರಾದ ಶ್ರೀ ಮರಡೂರ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಅಖಿಲ ಭಾರತ ಆಕಾಶವಾಣಿ, ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದಿದ್ದಾರೆ. ಮುಂಬಯಿ ಸೂರಸಿಂಗಾರ ಸಂಸದ್ನ ಸುರ್ಮಣಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಕಿರಾಣ ಪರಂಪರೆಯ ಗಾಯಕರು ಪಂಡಿತ ಸೋಮನಾಥ ಮರಡೂರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಫಕೀರೇಶ ಕಣವಿ

ಸಂಗೀತ ಮನೆತನದ ಪರಂಪರೆಯಲ್ಲಿ ಬೆಳೆದುಬಂದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.
೧೯೫೫ರಲ್ಲಿ ಗದಗ ಜಿಲ್ಲೆಯ ಕಣವಿ ಗ್ರಾಮದಲ್ಲಿ ಜನನ. ತಂದೆ ಹಾಗೂ ಸೋದರ ಮಾವಂದಿರಲ್ಲಿ ಸಂಗೀತದ ಮೊದಲ ಪಾಠಗಳು. ಅನಂತರ ಡಾ. ಪುಟ್ಟರಾಜ ಗವಾಯಿಗಳವರ ಹತ್ತಿರ ಸಂಗೀತದ ಅಧ್ಯಯನ.
ಸಂಗೀತ ಸಾಧನೆಗೆ ಕಾಶಿ ಎನಿಸಿದ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ, ಕೂಡ್ಲಿಗಿಯ ರೇಣುಕಾ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಗುಲಬರ್ಗಾ ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಮತ್ತು ಸುಗಮ ಸಂಗೀತದ ‘ಬಿ’ ಹೈ ಶ್ರೇಣಿಯ ನಿಲಯ ಕಲಾವಿದರಾಗಿರುವ ಶ್ರೀ ಫಕೀರೇಶ ಕಣವಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಕೇಂದ್ರ ಸಂಸ್ಕೃತಿ ಇಲಾಖೆಯ ಸುಗಮ ಸಂಗೀತ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರದ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಸ್ಥಾನ, ಗಂಧರ್ವ ಮಹಾವಿದ್ಯಾಲಯದ ವಿಶಾರದ ಪರೀಕ್ಷೆಯಲ್ಲಿ ಮೊದಲ ಬಹುಮಾನ ಪಡೆದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಹೆಚ್. ಮರಿದೇವರು

ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿರುವವರು ಪ್ರೊ. ಸಿ.ಹೆಚ್. ಮರಿದೇವರು ಅವರು.
೧೯೩೫ರಲ್ಲಿ ಜನಿಸಿದ ಪ್ರೊ. ಸಿ.ಹೆಚ್. ಮರಿದೇವರು ಅವರು. ಎಂ.ಎ., ಎಂ.ಎಡ್. ಪದವಿ ಪಡೆದು ಖಾದಿ ಮಂಡಳಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು.ನಂತರ ಪ್ರೌಡಶಾಲೆಯೊಂದರಲ್ಲಿ ಸಹಶಿಕ್ಷಕರಾಗಿ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕರಾಗಿ ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕವಿತೆಗಳು ಹುಟ್ಟಬೇಕು, ಶಬ್ದಪಾಕ (ಕವನ ಸಂಕಲನ) ಮಹಾಚೈತ್ರವನ್ನು ಕುರಿತು ವಿಮರ್ಶೆ, ಅಂಡಮಾನ್ ದ್ವೀಪದರ್ಶಿನಿ, ನೇಪಾಳ ಒಂದು ಭೂಸ್ವರ್ಗ, ಲಕ್ಷದ್ವೀಪಗಳಲ್ಲಿ ಮರಿದೇವರು (ಪ್ರವಾಸ ಸಾಹಿತ್ಯ), ಥಾಮಸ್ ಆಲ್ವ ಎಡಿಸನ್, ಡಾ. ಆಲ್ಬರ್ಟ್ ಐನ್ಸ್ಟಿನ್, ಡಾ. ಹೋಮಿ ಜಹಾಂಗೀರ್ ಬಾಬಾ (ಭಾಷಾಂತರಿಸಿದ ಕೃತಿಗಳು),ಶ್ರೀಯತರು ರಚಿಸಿದ ಪ್ರಮುಖ ಕೃತಿಗಳು. ಅಲ್ಲದೆ ಪ್ರೊ. ಸಿ.ಹೆಚ್. ಮರಿದೇವರು ಅವರಿಗೆ ಶಿಕ್ಷಣ ತತ್ವಶಾಸ್ತ್ರಕ್ಕೆ ಶ್ರೀ ದೇವರಾಜ ಬಹದ್ದೂರ್ ಪ್ರಶಸ್ತಿ, ಮುನ್ನಡೆದ ಶಿಕ್ಷಣ ಮನಶಾಸ್ತ್ರಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಶಬ್ದಪಾಕ ಕವನ ಸಂಕಲನಕ್ಕೆ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಲಭಿಸಿವೆ.
ಪ್ರೊ. ಸಿ.ಹೆಚ್. ಮರಿದೇವರು ತೆಂಗು ಬೆಳೆಗಾರರ ಸಂಘ ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತುಮಕೂರು ತಾಲ್ಲೂಕು ತೆಂಗು ಅಡಿಕೆ ಬೆಳೆಗಾರರ ಸಂಘ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ತು ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಸಿದ್ದಾರೆ.
ಅಧ್ಯಯನ, ಅಧ್ಯಾಪನ ಎರಡರಲ್ಲೂ ತೊಡಗಿಸಿಕೊಂಡಿರುವ ಚಿಂತನಶೀಲ ಬರಹಗಾರ ಶ್ರೀ ಸಿ.ಹೆಚ್. ಮರಿದೇವರು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಖಲೀಲ್ ಉರ್ ರೆಹಮಾನ್

ಆಧುನಿಕ ಉರ್ದು ಕವಿ ಹಾಗೂ ಉತ್ತಮ ಭಾಷಾಂತರಕಾರರು ಶ್ರೀ ಖಲೀಲ್ ಉ ರೆಹಮಾನ್ ಅವರು.
ಬೆಂಗಳೂರಿನಲ್ಲಿ ೧೯೪೮ರಲ್ಲಿ ಜನನ. ಕಳೆದ ೩೦ ವರ್ಷಗಳಿಂದ ಉರ್ದು ಭಾಷೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಶ್ರೀ ಖಲೀಲ್ ಉರ್ ರೆಹಮಾನ್ ಅವರ ಕಾವ್ಯನಾಮ ಖಲೀಲ್ ಮೆಮೂನ್. ಶ್ರೀಯುತರ ಕವನಗಳು ಭಾರತ ಮತ್ತು ವಿದೇಶದ ಹಲವು ಉರ್ದು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಹಿಂದಿ, ಮೊದಲಾದ ಭಾಷೆಗಳಿಂದ ಹಲವಾರು ಕವನಗಳು ಹಾಗೂ ಪ್ರಬಂಧಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ‘ಲಿಸಾನ್ ಫಾಲೈಪ್ ಕೆ ಐನೆ ಮೇನ್’, ‘ಕನ್ನಡ ಆದಾಬ್, ‘ಉನೀಸ್ ಲೈಲಾಹಿ ನಾಮೆನ್’, ‘ನಿಶಾತ್ ಇ-ಗಮ್’ ಎಂಬ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಉರ್ದು ಅಕಾಡೆಮಿ ಸದಸ್ಯರಾಗಿ ಎರಡು ಬಾರಿ ಸೇವೆ ಸಲ್ಲಿಸಿರುವ ಶ್ರೀಯುತರು ಆಕಾಶವಾಣಿ, ದೆಹಲಿ ಹಾಗೂ ಬೆಂಗಳೂರು ಕೇಂದ್ರಗಳಿಗೂ ಹಲವಾರು ನಾಟಕಗಳನ್ನು ಬರೆದಿದ್ದಾರೆ. ‘ಆದಾಬ್’ ತ್ರೈಮಾಸಿಕ ಪತ್ರಿಕೆಯ ಸಂಪಾದಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯರಾಗಿ, ಉತ್ತಮ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಉರ್ದು ಸಾಹಿತ್ಯದ ವಿದ್ವಾಂಸರೂ ಹಾಗೂ ದೇಶದಲ್ಲಿ ಉರ್ದು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿರುವವರು ಶ್ರೀ ಖಲೀಲ್ ಉರ್ ರೆಹಮಾನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಬಿ.ವಿ. ವೀರಭದ್ರಪ್ಪ

೧೯೩೫ರಲ್ಲಿ ಚಿತ್ರದುರ್ಗ ಜಿಲ್ಲೆಯ ಘಟಪರ್ತಿಯಲ್ಲಿ ಜನಿಸಿದ ಪ್ರೊ.ಬಿ.ವಿ.ವೀರಭದ್ರಪ್ಪನವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಗಳಿಸಿ ದಾವಣಗೆರೆಯ ಎ.ಆರ್.ಬಿ. ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರಾದವರು. ಉತ್ತಮ ಬೋಧಕರು, ದಕ್ಷ ಆಡಳಿತಗಾರರೂ ಎಂಬ ಖ್ಯಾತಿಗೆ ಭಾಜನರಾದ ಶ್ರೀಯುತರು ನಾಡಿನ ಒಬ್ಬ ವಿಶಿಷ್ಟ ವಿಚಾರವಾದಿಯಾಗಿ, ಪ್ರಸಿದ್ಧ ಲೇಖಕರಾಗಿ ಹೆಸರುಗಳಿಸಿದ್ದಾರೆ. ಭಾಷಾ ವಿಜ್ಞಾನ, ಕಿರಿಯರ ವಿಚಾರ ಸಾಹಿತ್ಯ, ಮಾನವಿಕ ವೈಚಾರಿಕ ಸಾಹಿತ್ಯ ಮುಂತಾಗಿ ಸುಮಾರು ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಪ್ರೊ. ಬಿ.ವಿ. ವೀರಭದ್ರಪ್ಪ ಅವರಿಗೆ ‘ವೇದಾಂತ ರೆಜಿಮೆಂಟ್’ ಮತ್ತು ‘ಇತರ ವೈಚಾರಿಕ ಬರಹಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಭಗವದ್ಗೀತೆ, ಒಂದು ವೈಚಾರಿಕ ಒಳನೋಟ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎಚ್.ಎನ್. ದತ್ತಿನಿಧಿ ಪ್ರಶಸ್ತಿ ಮತ್ತು ಮುಂಬಯಿ ಕರ್ನಾಟಕ ಸಂಘದ ಅ.ಸು. ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ದೊರಕಿದೆ.
ಶಿಕ್ಷಣ ತಜ್ಞರೂ, ಚಿಂತಕರೂ ಆಗಿ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವವರು ಪ್ರೊ. ಬಿ.ವಿ. ವೀರಭದ್ರಪ್ಪ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಮೂರ್ತಿ ಪೆಂಡಕೂರು

ಪ್ರವಾಸ ಸಾಹಿತ್ಯ, ಅನುವಾದ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಡಾ. ಗುರುಮೂರ್ತಿ ಪೆಂಡಕೂರು ಅವರು.
ಬಳ್ಳಾರಿ ಜಿಲ್ಲೆಯ ನಾರಾಯಣ ದೇವರ ಕೆರೆಯಲ್ಲಿ ೧೯೩೮ರಲ್ಲಿ ಜನನ, ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್), ಬಿ.ಕಾಂ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ.ಹಾಗೂ’ ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು’ ವಿಷಯ ಕುರಿತ ಸಂಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಬಹುರೂಪಾ ವಸುಂಧರಾ, ಆಂಧ್ರಪ್ರಪಂಚ, ಓ ಕೆನಡಾ, ಅವಕಾಶಗಳ ಅಮರಾವತಿ ಅಮೆರಿಕಾ (ಪ್ರವಾಸ ಸಾಹಿತ್ಯ), ದಿಗಂಬರ ಕಾವ್ಯ, ತೆಲುಗು ಕಾವ್ಯಮಾಲೆ, ಪಂಚಮವೇದ, ಕಲ್ಯಾಣ ಸಂಸ್ಕೃತಿ, ಸಮಗ್ರ ದಿಗಂಬರ ಕಾವ್ಯ ನೀರವ ನಿಮಿಷಗಳು (ಅನುವಾದ) ಕಂಠೀಸರ ಪಂಪಾ ತುಂತುರು, ಜಾನಪದ ಸಂಚಯ (ಸಂಪಾದನೆ) ಇವು ಶ್ರೀಯುತರ ಪ್ರಮುಖ ಕೃತಿಗಳು.
ಯೂರೋಪ್, ಮಧ್ಯಪ್ರಾಚ್ಯ, ದಕ್ಷಿಣ ಏಶಿಯಾ, ಅಮೆರಿಕಾ, ಕೆನಡಾ, ಜಪಾನ್ ಇಲ್ಲೆಲ್ಲ ಪ್ರವಾಸ ಮಾಡಿರುವ ಶ್ರೀಯುತರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಯುವಕರ ಸಂಘ ಪ್ರಕಾಶನ ಸಂಸ್ಥೆ ಸ್ಥಾಪಕರಾಗಿದ್ದು, ಆ ಸಂಸ್ಥೆಯು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಉತ್ತಮ ಪ್ರಕಾಶನ ಸಂಸ್ಥೆ ಮನ್ನಣೆ ಪಡೆದಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಅರವಿಂದ ನಾಡಕರ್ಣಿ

ಮುಂಬಯಿಯ ನಾಕ ನರಕಗಳೆರಡರ ಜೊತೆಗೆ ಮುಂಬಯಿ ಮಹಾನಗರವನ್ನು ತಮ್ಮ ಕಾವ್ಯದ ಕೇಂದ್ರವಾಗಿಸಿಕೊಂಡ ಪ್ರಖರ ನಗರಪ್ರಜ್ಞೆಯ ನವ್ಯ ಕವಿ ಶ್ರೀ ಅರವಿಂದ ನಾಡಕರ್ಣಿ ಅವರು.
ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ೧೯೨೧ರಲ್ಲಿ ಜನನ. ಜರಾಸಂಧ, ನಾ ಭಾರತೀಕುಮಾರ, ನಗರಾಯಣ, ಆಹತ ಇವು ಶ್ರೀಯುತರ ಪ್ರಮುಖ ಕೃತಿಗಳು.
ನಗರಪ್ರಜ್ಞೆಯ ಅನೇಕ ಸ್ಥಳಗಳ ಸಂಪೂರ್ಣ ಅಭಿವ್ಯಕ್ತಿಗೆ ತೊಡಗಿದ ನಾಡಕರ್ಣಿ ಅವರ ಕಾವ್ಯದಲ್ಲಿ ನಗರದ ಗಂಧರ್ವಲೋಕ, ರಾಕ್ಷಸ ಲೋಕಗಳೆರಡೂ ಮೈದಳೆದಿವೆ. ಮಹಾನಗರದ ನಾಡಿಬಡಿತಕ್ಕೆ ತೀವ್ರವಾಗಿ ಸ್ಪಂದಿಸಿದ ಅವರ ನಗರಾಯಣ ಕನ್ನಡದ ವೇಸ್ಟ್ ಲ್ಯಾಂಡ್ ಎನ್ನಬಹುದು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ನವ್ಯದ ಮುಖ್ಯ ಕವಿಗಳಲ್ಲೊಬ್ಬರು ಶ್ರೀಯುತ ನಾಡಕರ್ಣಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಕುಂ. ವೀರಭದ್ರಪ್ಪ

ಉತ್ತರ ಕರ್ನಾಟಕದ ದಲಿತ ಬದುಕಿನ ದಟ್ಟ ಅನುಭವಗಳಿಗೆ ಪ್ರಾದೇಶಿಕ ಭಾಷೆಯ ಸೊಗಡನ್ನು ನೀಡಿದ ತಾಜಾ ಪ್ರತಿಭೆ ಕಥೆ, ಕಾದಂಬರಿಕಾರ ಕುಂ. ವೀರಭದ್ರಪ್ಪ,
‘ಕುಂ.ವೀ’. ಎಂಬ ಸಂಕ್ಷಿಪ್ತ ನಾಮದಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕುಂಬಾರ ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ೧೯೫೩ರಲ್ಲಿ ಜನಿಸಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಯುತರು ಶಾಲಾ ಉಪಾಧ್ಯಾಯರಾಗಿ ಸೇವಾವಧಿಯ ಬಹುಪಾಲನ್ನು ಆಂಧ್ರಪ್ರದೇಶದಲ್ಲಿ ಕಳೆದವರು.
ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಅನುವಾದ, ಜೀವನಚರಿತ್ರೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಅರ್ಥಪೂರ್ಣ ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ, ಮುದ್ದಣ, ರತ್ನಾಕರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
ಪಾತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಬಲ್ಲ ಅದ್ಭುತ ಕಥನ ಶಿಲ್ಪಿ ಹಾಗೂ ವಿಶಿಷ್ಟ ನಿರೂಪಣಾ ಶೈಲಿಯಿಂದ ವೈಯಕ್ತಿಕ ಛಾಪನ್ನುಂಟುಮಾಡಿರುವ ಅನನ್ಯ ಸೃಜನಶೀಲ ಲೇಖಕರು ಶ್ರೀ ಕುಂ. ವೀರಭದ್ರಪ್ಪ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಎಚ್.ಎಸ್. ಪಾರ್ವತಿ

ಭಾರತದ ವಿವಿಧ ಭಾಷೆಗಳಲ್ಲಿ ರಚಿತವಾದ ನೂರಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಕಾಶವಾಣಿಯ ರಾಷ್ಟ್ರೀಯ ನಾಟಕಗಳ ಪ್ರಸಾರದಲ್ಲಿ ಚಿರಪರಿಚಿತರಾದವರು ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.
೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಎಚ್.ಎಸ್. ಪಾರ್ವತಿ ಅವರು ತಮ್ಮ ಹದಿನೆಂಟನೆ ವಯಸ್ಸಿನಲ್ಲಿಯೇ ಬರವಣಿಗೆ ಆರಂಭಿಸಿ ಜೊತೆ ಜೊತೆಗೇ ಆಕಾಶವಾಣಿ ಕಲಾವಿದರಾಗಿ, ಭಾಷಾಂತರಕಾರರಾಗಿ ಕಾರ್ಯಕ್ರಮ ನಿರ್ವಾಹಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದವರು. ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ನಾಟಕ, ಅನುವಾದ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಶ್ರೀಮತಿ ಪಾರ್ವತಿ ಅವರು ಲೇಖಕಿಯಾದಂತೆ ಕನ್ನಡ ಲೇಖಕಿಯರ ಸಂಘಟನೆಗೂ ದುಡಿದ ಹಿರಿಯ ಚೇತನ. ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಸೇವೆ ಸಲ್ಲಿಸುತ್ತಲೇ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಇವರ ಸಾಹಿತ್ಯ ಸೇವೆಗೆ ಸಂದ ಗೌರವ ಸಮ್ಮಾನಗಳು ಹತ್ತಾರು. ಬದುಕು ಬರಹದಲ್ಲಿ ಸದಾ ಸ್ತ್ರೀ ಪರವಾದ ದನಿ ಎತ್ತುವ ಹಿರಿಯ ಲೇಖಕಿ ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ನಿರುಪಮಾ

ಮಹಿಳೆಯರು ಗೃಹಕೃತ್ಯದಿಂದ ಹೊರಬರದ ಕಾಲದಲ್ಲೇ ಲೇಖಕಿಯಾಗಿ, ಲೇಖಕಿಯರ ಸಂಘಟಕಿಯಾಗಿ, ಪ್ರಕಾಶಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟು ಸುದೀರ್ಘ ಕಾಲ ಸಾಹಿತ್ಯದಲ್ಲೇ ಮಾಗಿದ ಹಿರಿಯ ಲೇಖಕಿ ಡಾ. ನಿರುಪಮಾ ಅವರು.
ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಕತೆ, ಕಾದಂಬರಿ, ಸಂಶೋಧನೆ, ಅನುವಾದ, ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಹೀಗೆ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ನಿರುಪಮಾ ಅವರು ಕನ್ನಡದ ಲೇಖಕಿಯರಲ್ಲೇ ಅತಿ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಪುಸ್ತಕ ಪ್ರಕಾಶಕಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯೆ, ಕಾರ್ಯದರ್ಶಿ, ಅಧ್ಯಕ್ಷೆಯಾಗಿ ಅವರು ಸಲ್ಲಿಸಿದ ಸೇವೆ ಅಪಾರ. ಸಮಕಾಲೀನ ಸಾಹಿತ್ಯ ಸಮೀಕ್ಷೆಗಾಗಿ ಇಡೀ ದೇಶವನ್ನು ಸುತ್ತಿರುವ ಡಾ. ನಿರುಪಮಾ ಅವರು ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಪ್ರಕಟಿಸಿದ ಭಾರತೀಯ ಮಕ್ಕಳ ಸಾಹಿತ್ಯ ಸಮೀಕ್ಷೆ ಭಾರತೀಯ ಭಾಷೆಗಳಲ್ಲೇ ಒಂದು ದಾಖಲೆಯಾಗಿ ಉಳಿಯುವ ಕೃತಿ.
ದಕ್ಷಿಣ ಭಾರತದ ಅತ್ಯುತ್ತಮ ಲೇಖಕಿ (೧೯೭೫), ಅತ್ಯುತ್ತಮ ಲೇಖಕಿ (೧೯೭೮), ಯುನಿಸೆಫ್ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೯೮), ಸದೋದಿತಾ ಪ್ರಶಸ್ತಿ (೧೯೯೬), ರಾಷ್ಟ್ರೀಯ ಪ್ರಶಸ್ತಿ (೧೯೯೮) ಮುಂತಾದ ಪ್ರಶಸ್ತಿ ಸನ್ಮಾನಗಳು ನಿರುಪಮಾ ಅವರ ಸಾಹಿತ್ಯ ಸೇವೆಗೆ ಸಂದ ಗೌರವದ ಗರಿಗಳು. ಪರ ವಿಚಾರಗಳು ಮತ್ತು ಮಕ್ಕಳ ಸಾಹಿತ್ಯ ಅಭಿವೃದ್ಧಿಗಾಗಿ ಈ ಹಿರಿಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಅಪರೂಪದ ಲೇಖಕಿ ಡಾ. ನಿರುಪಮಾ.

Categories
ಕನ್ನಡ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ನಾ. ಮೊಗಸಾಲೆ

ಡಾ. ನಾರಯಣ ಮೊಗಸಾಲೆಯವರು.
ಕಾರ್ಕಳ ತಾಲೂಕಿನ ಕಾಂತಾವರ ಎಂಬ ಹಿಂದುಳಿದ ಪ್ರದೇಶದಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವ ಮೊಗಸಾಲೆಯವರು ಜೊತೆಜೊತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸಂಘಟಕರಾಗಿ ತಮ್ಮನ್ನು ತೊಡಗಿಸಿಕೊಂಡವರು. ಕಾಂತಾವರದಲ್ಲಿ ಕನ್ನಡ ಸಂಘವನ್ನು ಹುಟ್ಟುಹಾಕಿ ತನ್ಮೂಲಕ ‘ಮುದ್ರಣ ಕಾವ್ಯ ಪ್ರಶಸ್ತಿ’, ರಾಜ್ಯಮಟ್ಟದ ವರ್ಧಮಾನ ಪ್ರಶಸ್ತಿ ಪೀಠದಿಂದ ವರ್ಧಮಾನ ಪ್ರಶಸ್ತಿ ಸ್ಥಾಪಿಸಿದ ಅಧ್ವರ್ಯ ಡಾ. ಮೊಗಸಾಲೆಯವರು. ಎರಡು ಬಾರಿ ೧೯೯೪ ಹಾಗು ೧೯೯೬ರಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಿದ ಸಾಹಸಿ.
೧೯೮೦-೮೩ರ ಅವಧಿಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಶ್ರೀಯುತರು ಕಥೆ, ಕವನ, ಕಾದಂಬರಿ, ಪ್ರವಾಸ ಕಥನ ಮುಂತಾಗಿ ಅನೇಕ ಕೃತಿ ರಚನಕಾರರಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಇವರ ಅನೇಕ ಕೃತಿಗಳು ಮಲಯಾಳ, ಹಿಂದಿ ಹಾಗು ಆಂಗ್ಲ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ.
ರಾಜ್ಯ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪ್ರಶಸ್ತಿಗಳನ್ನು ಪಡೆದಿರುವ ವೈದ್ಯ – ಸಾಹಿತಿ ಡಾ. ನಾ. ಮೊಗಸಾಲೆ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಕೆ. ಅನಂತರಾಮು

ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ಪ್ರತಿಭೆ ಬೆಳಗಿಸಿದ ಅನಂತರಾಮು ಅವರು ಒಳ್ಳೆಯ ಅಧ್ಯಯನಶೀಲ ವಿದ್ಯಾರ್ಥಿಯೆನಿಸಿ ಅಂದಿನ ಮೈಸೂರು ಸರ್ಕಾರದಿಂದ ಜಪಾನಿನಲ್ಲಿ ನಡೆದ ‘ಎಕ್ಸ್ಪ್ರೆ ೭೦’ ಮೇಳಕ್ಕೆ ಆಯ್ಕೆಗೊಂಡ ಪ್ರತಿಭಾವಂತ.
ಲೌಕಿಕ ಶಿಕ್ಷಣದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾದರೂ ಭಾಷಾಶಾಸ್ತ್ರದ ಕಡೆಗೆ ಮನವೊಲಿದು ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ.ಪದವಿಗಳಿಸಿ ಅನಂತರ “ಕವಿಬ್ರಹ್ಮಶಿವ ಒಂದು ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ. ಗಳಿಕೆ. ಮುಂದೆ ಸಾಹಿತಿಯಾಗಿ, ಸಂಶೋಧಕರಾಗಿ, ಸಾಹಿತ್ಯ ಸೋಪಾನವನ್ನು ಏರುತ್ತಲೇ ಹೋದರು. ಜಪಾನ್ ಪ್ರವಾಸ ಕಥನ, ಉದಯರವಿ ನಾಡಿನಲ್ಲಿ’, ಮಂಡ್ಯದ ಹಳ್ಳಿಗಳನ್ನು ಸುತ್ತಿ ರಚಿಸಿದ ‘ಸಕ್ಕರೆ ಸೀಮೆ’, ದಕ್ಷಿಣ ಕನ್ನಡ ಜಿಲ್ಲೆಯ ಕುರಿತು ‘ದಕ್ಷಿಣದ ಸಿರಿ’ ಗ್ರಂಥಗಳಿಗೆ ಸತತವಾಗಿ ಮೂರು ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಿಟ್ಟಿಸಿ ಹ್ಯಾಟ್ರಿಕ್ ಪಡೆದ ಅಪರೂಪದ ಸಾಹಿತಿ ಡಾ. ಕೆ. ಅನಂತರಾಮು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ಗುರುಲಿಂಗ ಕಾಪಸೆ

೧೯೨೮ರಲ್ಲಿ ಬಿಜಾಪುರ ಜಿಲ್ಲೆಯ ಹಿರೇಲೋಣಿ ಎಂಬ ಕುಗ್ರಾಮದಲ್ಲಿ ಬಡ ರೈತ ಮಗನಾಗಿ ಜನಿಸಿದ ಡಾ. ಗುರುಲಿಂಗ ಕಾಪಸೆಯವರು ಎಲೆಮರೆಯ ಫಲದಂತೆ ಬೆಳೆದುಬಂದ ಸರಳ-ಸಜ್ಜನಿಕೆಯ ಅಪರೂಪದ ಸಾಹಿತಿ.
ವಿಮರ್ಶೆ, ಜೀವನಚರಿತ್ರೆ, ಪ್ರವಾಸ ಕಥನ, ಸಂಪಾದನೆ, ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕ್ಷೇತ್ರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ಗುರುಲಿಂಗ ಕಾಪಸೆಯವರು ವಿಶೇಷ ಸಂಚಿಕೆ ಹಾಗೂ ನಿಯತಕಾಲಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಡಾ. ಗುರುಲಿಂಗ ಕಾಪಸೆಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್, ಮುಂಬೈ ಕರ್ನಾಟಕ ಸಂಘದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಮೌಲಿಕವಾದ ಯೋಜನೆಗಳ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೀಡಿದ ಶ್ರೀ ಕಾಪಸೆಯವರು ಪ್ರಚಾರಗಳಿಂದ ಗಾವುದ ದೂರವೇ ಉಳಿಯುವವರು.
ಮೃದು ಸ್ವಭಾವ, ಶಿಷ್ಯವಾತ್ಸಲ್ಯ, ಕನ್ನಡ-ಮರಾಠಿ ಭಾಷಾ ಬಾಂಧವ್ಯವನ್ನು ಬೆಳೆಸುತ್ತಿರುವ ಹಾಗೂ ಬರಹ, ಭಾಷಣಗಳಲ್ಲಿ ಅಪಾರವಾದ ಒಳನೋಟಗಳನ್ನು ನೀಡುವ ಮೂಲಕ ತಲಸ್ಪರ್ಶಿಯಾದ ವಿದ್ವತ್ ವಿವೇಚನೆಗೆ ಹೆಸರಾದ ವಿದ್ವಾಂಸರಾದ ಡಾ. ಗುರುಲಿಂಗ ಕಾಪಸೆಯವರು.