Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಪರಮೇಶ್ವರ ಹೆಗಡೆ

ಪಂ.ಡಾ.ಬಸವರಾಜ ರಾಜಗುರು ಅವರ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದವರೆಂದರೆ ಗಾಯಕ ಪರಮೇಶ್ವರ ಹೆಗಡೆಯವರು. “ಅವನ ಗಾಯನದಾಗೆ ಉಳಿದವರಕ್ಕಿಂತ ಭಿನ್ನವಾದುದೇನೋ ಐತಿ” ಎಂದು ಗುರುಗಳಿಂದಲೇ ಪ್ರಶಂಸೆಗಿಟ್ಟಿಸಿದ ಪ್ರತಿಭಾವಂತ ಗಾಯಕ. ಮರೆಯಲ್ಲಿ ಕೇಳಿದರೆ ಪಂ. ರಾಜಗುರುಗಳೇ ಹಾಡುತ್ತಿದ್ದಾರೇನೋ ಎಂಬ ಭಾವನೆ ಬರುವಷ್ಟು ಧ್ವನಿ ಅನುಕರಣೆ ಇರುವ ವಿಶಿಷ್ಠ ಶೈಲಿಯ ಗಾಯಕರು ಶ್ರೀಯುತ ಪರಮೇಶ್ವರ ಹೆಗಡೆಯವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿ ಬಸವರಾಜ ರಾಜಗುರುಗಳಲ್ಲಿ ಗಾಯನಾಭ್ಯಾಸ ಮಾಡಿದ ಶ್ರೀಯುತರು ಹಿಂದೂಸ್ತಾನಿ ಗಾಯನದಲ್ಲಿ ಮಾಡಿದ ಸಾಧನೆ, ಏರಿದ ಎತ್ತರ ನಾಡಿನ ಸಂಗೀತ ಲೋಕ ಅಚ್ಚರಿಪಡುವಂಥದ್ದು. ರಾಷ್ಟ್ರಾದ್ಯಂತ ತಮ್ಮ ಸಂಗೀತ ಕಚೇರಿಗಳಿಂದ ರಸಿಕ ಜನವನ್ನು ಸೂಜಿಗಲ್ಲಿನಂತೆ ಸೆಳೆದ ಶ್ರೀಯುತರು ಅಮೆರಿಕಾ, ಲಂಡನ್, ಕೆನಡಾ, ಗಲ್ಫ್ ದೇಶಗಳ ಜನರ ಹೃದಯದೊಳಗೂ ತಮ್ಮ ಗಾಯನದ ಅಲೆಗಳು ಅನುರಣಿಸುವಂತೆ
ಮಾಡಿದವರು.
ಸಂಗೀತದ ಗುರುವಾಗಿ, ಸಂಘಟಕರಾಗಿ, ಅನೇಕ ಯುವಪ್ರತಿಭೆಗಳನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಲ್ಲದೆ ತಮ್ಮ ಗುರುಗಳ ನೆನಪಿನಲ್ಲಿ ರಾಜಗುರು ಸ್ಮೃತಿ ಟ್ರಸ್ಟನ್ನು ಸ್ಥಾಪಿಸಿ ತಮ್ಮ ಮೆಚ್ಚಿನ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದ ಶ್ರೀ ಪರಮೇಶ್ವರ ಹೆಗಡೆ.