Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಚನ್ನಮಲ್ಲಪ್ಪಾ ಪರಗೌಡ ನಾಗೌಡ

ಕಲಾ ಬದುಕನ್ನು ಉಸಿರಾಗಿಸಿಕೊಂಡ ತುಂಬು ಬಾಳಿನ ಚನ್ನಮಲ್ಲಪ್ಪಾ ಪರಗೌಡ ನಾಗೌಡ ಹಿರಿಯ ಚಿತ್ರಕಲಾವಿದರು. ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಶ್ರೀ ಚನ್ನಮಲ್ಲಪ್ಪಾ ಪರಗೌಡ ನಾಗೌಡಾ ಅವರು ೧೯೧೪ರಲ್ಲಿ ಜನಿಸಿದರು. ಕೊಲ್ಲಾಪುರದಲ್ಲಿ ಶ್ರೀ ಗಣಪತರಾವ್ ವಡಣಗೇಕರ್‌ ಅವರಿಂದ ಹಾಗೂ ಮುಂಬಯಿಯಲ್ಲಿ ಶ್ರೀ ದಂಡಾವತಿಮಠ ಅವರಿಂದ ಚಿತ್ರಕಲೆಯ ಶಿಕ್ಷಣ ಪಡೆದರು. ಅನಂತರ ಕಲಾಮಹರ್ಷಿ ಅಬಾಲಾಲ ರೆಹಮಾನ್, ಬಾಬಾಗಜಬರ್, ಬಾಬುರಾವ್‌ ಪೇಂಟರ್, ಮಾಧವರಾವ್ ಬಾಗಲ್, ಎಸ್.ಎಂ. ಪಂಡಿತ್, ಕೆ.ಕೆ. ಹೆಬ್ಬಾರರಂಥ ಮಹಾನ್ ಕಲಾವಿದರ ಸಾನ್ನಿಧ್ಯ ಮತ್ತು ಸಂಪರ್ಕದಿಂದ ಚಿತ್ರಕಲೆಯಲ್ಲಿ ಪರಿಣತಿ ಪಡೆದರು.

ಮುಖ್ಯವಾಗಿ ಪೆನ್ಸಿಲ್‌ವರ್ಕ್, ಜಲವರ್ಣ ಮತ್ತು ತೈಲವರ್ಣದಲ್ಲಿ ಪ್ರಭುತ್ವ ಪಡೆದ ಶ್ರೀಯುತರ ಕಲಾಕೃತಿಗಳು ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿವೆ. ವಿವಿಧ ಮಾಧ್ಯಮಗಳಿಂದ ಪ್ರಶಂಸೆ ಪಡೆದಿವೆ.

ಪ್ರಾರಂಭದಲ್ಲಿ ಸಿನಿಮಾಕ್ಕೂ ಕಲಾನಿರ್ದೆಶಕರಾಗಿ ಕಾರ್ಯನಿರ್ವಹಿಸಿದ ಶ್ರೀಯುತರ ಕಲಾಪ್ರೌಢಿಮೆ ಹಾಗೂ ಶ್ರದ್ಧೆಯ ಫಲವಾಗಿ ಇವರನ್ನು ಅರಸಿ ಬಂದಿರುವ ಬಿರುದು, ಪ್ರಶಸ್ತಿಗಳು ಹಲವು. ಅವುಗಳಲ್ಲಿ ಸಿರಿಗನ್ನಡಗೌರವ, ಸಂಕೇಶ್ವರ ಕಲಾಸಿರಿ, ಕುಂಚದರಸ ಬಿರುದುಗಳು ಮುಖ್ಯವಾದವು.

ಮನೆಯಲ್ಲಿ ಸ್ವಂತ ಆರ್ಟ್ ಗ್ಯಾಲರಿಯನ್ನು ಹೊಂದಿರುವ ಇವರು ಸಂಕೇಶ್ವರದಲ್ಲಿ ಅಂಬೇಡ್ಕರ್ ಸಂಸ್ಥೆಯ ಚಿತ್ರಕಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.