Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ಎಚ್.ಎಸ್. ಪಾರ್ವತಿ

ಭಾರತದ ವಿವಿಧ ಭಾಷೆಗಳಲ್ಲಿ ರಚಿತವಾದ ನೂರಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಕಾಶವಾಣಿಯ ರಾಷ್ಟ್ರೀಯ ನಾಟಕಗಳ ಪ್ರಸಾರದಲ್ಲಿ ಚಿರಪರಿಚಿತರಾದವರು ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.
೧೯೩೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಎಚ್.ಎಸ್. ಪಾರ್ವತಿ ಅವರು ತಮ್ಮ ಹದಿನೆಂಟನೆ ವಯಸ್ಸಿನಲ್ಲಿಯೇ ಬರವಣಿಗೆ ಆರಂಭಿಸಿ ಜೊತೆ ಜೊತೆಗೇ ಆಕಾಶವಾಣಿ ಕಲಾವಿದರಾಗಿ, ಭಾಷಾಂತರಕಾರರಾಗಿ ಕಾರ್ಯಕ್ರಮ ನಿರ್ವಾಹಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದವರು. ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ನಾಟಕ, ಅನುವಾದ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಶ್ರೀಮತಿ ಪಾರ್ವತಿ ಅವರು ಲೇಖಕಿಯಾದಂತೆ ಕನ್ನಡ ಲೇಖಕಿಯರ ಸಂಘಟನೆಗೂ ದುಡಿದ ಹಿರಿಯ ಚೇತನ. ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಸೇವೆ ಸಲ್ಲಿಸುತ್ತಲೇ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಇವರ ಸಾಹಿತ್ಯ ಸೇವೆಗೆ ಸಂದ ಗೌರವ ಸಮ್ಮಾನಗಳು ಹತ್ತಾರು. ಬದುಕು ಬರಹದಲ್ಲಿ ಸದಾ ಸ್ತ್ರೀ ಪರವಾದ ದನಿ ಎತ್ತುವ ಹಿರಿಯ ಲೇಖಕಿ ಶ್ರೀಮತಿ ಎಚ್.ಎಸ್. ಪಾರ್ವತಿ ಅವರು.