Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ನಿರುಪಮಾ

ಮಹಿಳೆಯರು ಗೃಹಕೃತ್ಯದಿಂದ ಹೊರಬರದ ಕಾಲದಲ್ಲೇ ಲೇಖಕಿಯಾಗಿ, ಲೇಖಕಿಯರ ಸಂಘಟಕಿಯಾಗಿ, ಪ್ರಕಾಶಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟು ಸುದೀರ್ಘ ಕಾಲ ಸಾಹಿತ್ಯದಲ್ಲೇ ಮಾಗಿದ ಹಿರಿಯ ಲೇಖಕಿ ಡಾ. ನಿರುಪಮಾ ಅವರು.
ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಕತೆ, ಕಾದಂಬರಿ, ಸಂಶೋಧನೆ, ಅನುವಾದ, ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಹೀಗೆ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ನಿರುಪಮಾ ಅವರು ಕನ್ನಡದ ಲೇಖಕಿಯರಲ್ಲೇ ಅತಿ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಪುಸ್ತಕ ಪ್ರಕಾಶಕಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯೆ, ಕಾರ್ಯದರ್ಶಿ, ಅಧ್ಯಕ್ಷೆಯಾಗಿ ಅವರು ಸಲ್ಲಿಸಿದ ಸೇವೆ ಅಪಾರ. ಸಮಕಾಲೀನ ಸಾಹಿತ್ಯ ಸಮೀಕ್ಷೆಗಾಗಿ ಇಡೀ ದೇಶವನ್ನು ಸುತ್ತಿರುವ ಡಾ. ನಿರುಪಮಾ ಅವರು ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಪ್ರಕಟಿಸಿದ ಭಾರತೀಯ ಮಕ್ಕಳ ಸಾಹಿತ್ಯ ಸಮೀಕ್ಷೆ ಭಾರತೀಯ ಭಾಷೆಗಳಲ್ಲೇ ಒಂದು ದಾಖಲೆಯಾಗಿ ಉಳಿಯುವ ಕೃತಿ.
ದಕ್ಷಿಣ ಭಾರತದ ಅತ್ಯುತ್ತಮ ಲೇಖಕಿ (೧೯೭೫), ಅತ್ಯುತ್ತಮ ಲೇಖಕಿ (೧೯೭೮), ಯುನಿಸೆಫ್ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೯೮), ಸದೋದಿತಾ ಪ್ರಶಸ್ತಿ (೧೯೯೬), ರಾಷ್ಟ್ರೀಯ ಪ್ರಶಸ್ತಿ (೧೯೯೮) ಮುಂತಾದ ಪ್ರಶಸ್ತಿ ಸನ್ಮಾನಗಳು ನಿರುಪಮಾ ಅವರ ಸಾಹಿತ್ಯ ಸೇವೆಗೆ ಸಂದ ಗೌರವದ ಗರಿಗಳು. ಪರ ವಿಚಾರಗಳು ಮತ್ತು ಮಕ್ಕಳ ಸಾಹಿತ್ಯ ಅಭಿವೃದ್ಧಿಗಾಗಿ ಈ ಹಿರಿಯ ವಯಸ್ಸಿನಲ್ಲೂ ಶ್ರಮಿಸುತ್ತಿರುವ ಅಪರೂಪದ ಲೇಖಕಿ ಡಾ. ನಿರುಪಮಾ.