Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ. ಚಂದ್ರಶೇಖರ ಮಾಲೂರು

– ನಾಗಸ್ವರ ಒಂದು ಮಂಗಳವಾದ್ಯ, ಇದು ಸುಶಿರವಾದ್ಯವೂ ಹೌದು. ಒಂದು ಕಾಲದಲ್ಲಿ ಇದು ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಮೆರವಣಿಗೆ, ಉತ್ಸವಾದಿಗಳಲ್ಲಿ ಮಾತ್ರ ನುಡಿಸುವ ವಾದ್ಯವಾಗಿದ್ದು. ಸಾರ್ವಜನಿಕವಾಗಿ ಇದಕ್ಕೊಂದು ಸೂಕ್ತ ವೇದಿಕೆ ಇದ್ದಿರಲಿಲ್ಲ. ಕ್ರಮೇಣ ದೊಡ್ಡ ದೊಡ್ಡ ನಗರಗಳಲ್ಲಿ ಇದಕ್ಕೆ ವೇದಿಕೆ ದೊರೆತು, ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶವೂ ದೊರೆಯಿತು ಆದರೆ ತಾಲ್ಲೂಕು ಮಟ್ಟದಲ್ಲಿ ಈ ಸುಧಾರಣೆ ಬರಲಿಲ್ಲ, ಇದನ್ನು ಮನಗಂಡು ಇಂಥ ಸ್ಥಳಗಳಲ್ಲಿ ಇದಕ್ಕೆ ವೇದಿಕೆ ಸಿಗಬೇಕೆಂದು ಶ್ರಮಿಸಿ ಯಶಕಂಡವರು ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.
ತಮ್ಮ ನಿರಂತರ ಪರಿಶ್ರಮದಿಂದ ಈ ನಾಗಸ್ವರ ವಾದನ ಕಲೆಗೆ ಜೀವತುಂಬಿ ಅದಕ್ಕೆ ಒಂದು ರೂಪವನ್ನು ಕೊಟ್ಟವರು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಕುಡಿಯನೂರು ಗ್ರಾಮದಲ್ಲಿ ಜನಿಸಿದ ಇವರಿಗೆ ಈ ಕಲೆ ಪಾರಂಪರಿಕವಾಗಿ ಬಂದದ್ದು. ತಮ್ಮ ತಂದೆ ವಿದ್ವಾನ್ ಕೃಷ್ಣಪ್ಪನವರಲ್ಲೇ ಶಿಕ್ಷಣ ಪಡೆದು ಮುಂದೆ ತಮ್ಮ ಸ್ವಯಂ ಪ್ರತಿಭೆಯಿಂದ ಅದನ್ನೇ ರೂಡಿಸಿಕೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಮುಖವಾಗಿ ಆಂಧ್ರ, ತಮಿಳುನಾಡು, ಕೇರಳ, ಪಾಂಡಿಚೇರಿಗಳಲ್ಲಿ ತಮ್ಮ ಪ್ರತಿಭೆ ಬೆಳಗಿದ್ದಾರೆ. ಆಕಾಶವಾಣಿ-ದೂರದರ್ಶನಗಳಿಂದಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಗುರು-ಶಿಷ್ಯ ಪರಂಪರೆಯಲ್ಲಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ರಸಿಕ ವೃಂದವನ್ನು ತಮ್ಮ ವಾದನದ ಸಂಮೋಹಕತೆಗೆ ಒಳಗಾಗಿಸುವ ಇವರಿಗೆ ಸಂದ ಬಿರುದು ಗೌರವ ಪ್ರಶಸ್ತಿಗಳು ಆಪಾರ. ಈ ಕಲೆಯನ್ನೇ ತಮ್ಮ ಜೀವನಾಡಿಯಾಗಿ ಮಾಡಿಕೊಂಡು ಜನಪ್ರಿಯ ಕಲಾವಿದರೆನಿಸಿದ್ದಾರೆ ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.