Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀಮತಿ ಸುನೀತಾ ಎಂ. ಶೆಟ್ಟಿ

ಹೊರನಾಡ ಕನ್ನಡಿಗರಲ್ಲಿ ಅಪರೂಪದ ಸಾಧನೆ ಮಾಡಿದವರು ಶ್ರೀಮತಿ ಸುನೀತಾ. ಎಂ. ಶೆಟ್ಟಿ. ಮುಂಬೈ ನಲ್ಲಿ ಅನಿವಾಸಿ ಕನ್ನಡಿಗರಾಗಿದ್ದು, ಮೂವತ್ತಾರು ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ. ಮುಂಬಯಿ ವಿ.ವಿ. ಮತ್ತು ಮಹಾರಾಷ್ಟ್ರ ಸರ್ಕಾರದ ಕನ್ನಡ ಭಾಷಾಮಂಡಳ ಸದಸ್ಯೆಯಾಗಿದ್ದು, ಶಾಲಾ ಕಾಲೇಜುಗಳಿಗೆ ಪಠ್ಯಪುಸ್ತಕ ರಚನೆ, ಆಯ್ಕೆಯ ಕೆಲಸ ನಿರ್ವಹಿಸಿದ್ದಾರೆ. ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ತುಳು ಪಠ್ಯಗಳಲ್ಲಿ ಕವಿತೆ ಹಾಗೂ ಲೇಖನಗಳು ಸೇರ್ಪಡೆಯಾಗಿವೆ. ಇವರು ಒಟ್ಟು ೪೦ ಕೃತಿಗಳನ್ನು ಬರೆದಿದ್ದು ಸ್ವತಂತ್ರ ಕೃತಿಗಳು, ಸಂಪಾದಿತ ಕೃತಿಗಳು, ವ್ಯಕ್ತಿ ವಿಶೇಷ ಗ್ರಂಥಗಳು, ಆತ್ಮಕಥನಗಳು ಸೇರಿವೆ. ಹಲವು ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಹಾಗೂ ವಿಷಯ ಮಂಡನೆ ಮಾಡಿದ್ದಾರೆ.
ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಅತಿಮಬ್ಬೆ ಪ್ರಶಸ್ತಿ, ಮುಂಬಯಿ ಕರ್ನಾಟಕ ಸಂಘದಿಂದ ಸಾಧನಾ ಸಾಧಕ ಪ್ರಶಸ್ತಿ ಲಭಿಸಿದೆ.

Categories
ಯಕ್ಷಗಾನ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ

ಶ್ರೀ ಗೋಪಾಲ ಆಚಾರ್ಯ ಹಿರಿಯ ಯಕ್ಷಗಾನ ಪ್ರತಿಭೆ, ಇವರ ಹುಟ್ಟೂರು ತೀರ್ಥಹಳ್ಳಿ. ಸುಮಾರು ೫೫ ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು, ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಲ್ಲಿ ಒಬ್ಬರು. ಇವರ ಬಬ್ರುವಾಹನ, ಲವ-ಕುಶ, ಲಕ್ಷಣ, ಅಭಿಮನ್ಯು ಪಾತ್ರಗಳು ಹೆಸರುವಾಸಿಯಾಗಿವೆ.
ಯಕ್ಷಗಾನದಲ್ಲಿ ಹಲವಾರು ಅನುವಾದ, ನಿಘಂಟು ರಚನೆ, ವೇಷಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಯಕ್ಷಗಾನದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ತಮ್ಮ ಯಕ್ಷಗಾನ ರಸದೌತಣವನ್ನು ಮಸ್ಕತ್ನಲ್ಲಿಯೂ ಕೂಡ ಉಣಬಡಿಸಿ, ಬಡಗುತಿಟ್ಟಿನ ನಿಜವೈಭವ ವಿಜೃಂಭಿಸುವಂತೆ ಮಾಡಿದ್ದಾರೆ.
ಐದು ದಶಕಗಳ ಕಾಲ ಯಕ್ಷಕಲೆಯನ್ನು ಉಳಿಸಿಕೊಂಡು, ಇಳಿವಯಸ್ಸಿನಲ್ಲೂ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಪ್ರಶಸ್ತಿಗಳು ಸನ್ಮಾನಗಳು ಅವರನ್ನು ಹುಡುಕಿ ಬಂದಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸೇನೆ

ಶ್ರೀ ನವೀನ್ ನಾಗಪ್ಪ

ಕ್ಯಾಪ್ಟನ್ ನವೀನ್ ನಾಗಪ್ಪ, ಭಾರತೀಯ ಸೇನೆಯ ದಿಟ್ಟ ಹೋರಾಟಗಾರ, ಕಾರ್ಗಿಲ್ ಯುದ್ಧದಲ್ಲಿ ಎದೆಗುಂದದೆ ಹೋರಾಟ ನಡೆಸಿ ವೈರಿಗಳನ್ನು ಮಣಿಸುವ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯಲ್ಲಿ, ೬೦ ಗಂಟೆಗಳ ಕಾಲ ತೀವ್ರ ಸಂಕಟ ಅನುಭವಿಸಿದರು. ಕಾರ್ಗಿಲ್ ಯುದ್ಧದ ಕೊನೆಯಲ್ಲಿ ತೀವ್ರವಾಗಿ ಗಾಯಗೊಂಡ ಶ್ರೀ ನವೀನ್ ನಾಗಪ್ಪ, ಪರಿಣಾಮವಾಗಿ ೨೧ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸೇನೆಗೆ ಅರ್ಹರಲ್ಲವೆಂದ ಬಳಿಕ ತಾಯ್ಯಾಡಿಗೆ ಮರಳಿದರು. ಕಾರ್ಗಿಲ್ ಯುದ್ಧದಲ್ಲಿನ ಅವರ ಧೈರ್ಯ ಶೌರ್ಯಗಳನ್ನ
ಪ್ರಶಂಸಿಸಿ ಅವರಿಗೆ ‘ಸೇನಾ ಮೇಡಲ್’ ಪ್ರದಾನ ಮಾಡಲಾಗಿದೆ.

Categories
ಆಡಳಿತ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹೆಚ್. ಆರ್. ಕಸ್ತೂರಿ ರಂಗನ್

ನಿವೃತ್ತ ಐಪಿಎಸ್ ಅಧಿಕಾರಿ ಹೆಚ್.ಆರ್. ಕಸ್ತೂರಿ ರಂಗನ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ೧೯೭೨ ರಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ವಿಭಾಗದ ಡಿವೈಎಸ್ಪಿ ಯಾಗಿ ತಮ್ಮ ಸೇವೆ ಆರಂಭಿಸಿದರು. ತಮ್ಮ ಸೇವೆಗೆ ಮತ್ತು ತಮ್ಮ ದಕ್ಷ ಕಾರ್ಯ ನಿರ್ವಹಣೆಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯ ಅಧೀನ ಪೊಲೀಸ್ ಆಯುಕ್ತರಾಗಿ, ಮೈಸೂರಿನಲ್ಲಿ ಹೆಚ್ಚುವರಿ ಎಸ್.ಪಿ ಆಗಿ, ಎರಡು ಬಾರಿ ಜಾಗೃತದಳದ ಎಸ್.ಪಿ ಆಗಿ ಹಾಗು ಕೊಡಗು ಜಿಲ್ಲೆಯ ಎಸ್.ಪಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಲವು ಹುದ್ದೆಗಳನ್ನು ಅಲಂಕರಿಸಿ, ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ಐ.ಜಿ.ಪಿ ಆಗಿ ನಿವೃತ್ತಿ ಹೊಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಅತ್ಯುತ್ತಮ ಕೆಲಸಕ್ಕಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ನಗದು ಬಹುಮಾನ ದೊರೆತಿದೆ. ೧೯೮೮ ರಲ್ಲ ರಾಷ್ಟ್ರಪತಿಗ ಪೊಲೀಸ್ ಚಿನ್ನದ ಪದಕ ದೊರೆತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಸವಪ್ರಭು ಲಕಮ ಗೌಡ ಪಾಟೀಲ್

ದೇವದಾಸಿ ಮುಗ್ಧ ಹೆಣ್ಣು ಮಕ್ಕಳ ವಿಮೋಚನೆ ಹಾಗೂ ಪುನರ್ವಸತಿಗಾಗಿ ಶ್ರೀ ಬಸವಪ್ರಭು ಲಕಮಗೌಡ ಪಾಟೀಲರು ಹಗಲಿರುಳು ದುಡಿದು ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘವನ್ನು ಕಟ್ಟಿದರು.
ಮೂಲತ: ವಕೀಲರಾಗಿರುವ ಪಾಟೀಲರು ಅಥಣಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ದೇವದಾಸಿಯರಿಗೆ ‘ವಿಮೋಚನಾ ಸಂಸ್ಥೆಯಿಂದ ನೆಲೆ ಒದಗಿಸಿಕೊಟ್ಟಿದ್ದಾರೆ. ತಾಲ್ಲೂಕಿನ ೭೦ ಕ್ಕೂ ಮೀರಿ ಹೆಚ್ಚಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳನ್ನು ಆಯ್ದುಕೊಂಡು ಅವರ ರಕ್ಷಣೆಯ ಭಾರ ಹೊರಲಾಗಿದೆ. ದೇವದಾಸಿಯರಿಗೆ ವಿದ್ಯಾಭ್ಯಾಸ, ಹೊಲಿಗೆ, ಹೈನುಗಾರಿಕೆ, ಕಸೂತಿ ಮುಂತಾದ ತರಬೇತಿಗಳನ್ನು ಕೊಟ್ಟು ಅವರು ಸ್ವಾವಲಂಬಿ ಬದುಕನ್ನು ನಡೆಸಲು ಅನುವು ಮಾಡಿಕೊಡಲಾಗಿದೆ. ದೇವದಾಸಿಯರ ಹೆಣ್ಣು ಮಕ್ಕಳಿಗೆ ಪಾಟೀಲರು ಮದುವೆ ಮಾಡಿಸಿ ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ದೇಶದ ಏಕೈಕ ದೇವದಾಸಿ ಮಕ್ಕಳ ವಸತಿ ಶಾಲೆ ಕಟ್ಟಿಸಿದ್ದು ಅದು ೩೦ ವರ್ಷಗಳನ್ನು ದಾಟಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಮುನಿಯಪ್ಪ ದೊಮ್ಮಲೂರು

ಲೆಕ್ಕವಿಲ್ಲದಷ್ಟು ಶವಗಳು ತಮಗೆ ಅಂತ್ಯಕ್ರಿಯೆ ಮಾಡುವವರಿಲ್ಲದೇ ಅನಾಥವಾಗುತ್ತವೆ. ಅಂಥ ಅನಾಥಶವಗಳ ಬಂಧುವಾಗಿ ದೊಮ್ಮಲೂರು ಮುನಿಯಪ್ಪ ಅಂತ್ಯಕ್ರಿಯೆ ನೆರವೇರಿಸಿ ಋಣ ಕಳೆದುಕೊಳ್ಳುತ್ತಾರೆ. ಸಾವಿರಾರು ಅನಾಥಶವಗಳಿಗೆ ದಿಕ್ಕಾದ ಮುನಿಯಪ್ಪ ಸ್ಮಶಾನವಾಸಿಯಾಗಿದ್ದು ಹರನಂತೆ ಸ್ಮಶಾನದಲ್ಲೇ ನೆಲೆಸಿದ್ದಾರೆ.

Categories
ಆದಿವಾಸಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮದಲ್ಲಿ ಮಾದಯ್ಯ

ಮೈಸೂರು ಜಿಲ್ಲೆ. ಎಚ್.ಡಿ.ಕೋಟೆ ತಾಲ್ಲೂಕಿನ ಜಾಗನಕೋಟೆಯ ಮದಲ್ಲಿ ಮಾದಯ್ಯ ಅವರು ಬೆಟ್ಟಕುರುಬ ಆದಿವಾಸಿ ಗಿರಿಜನ ಸಮುದಾಯದ ಯಜಮಾನರಾಗಿದ್ದಾರೆ. ಪಾರಂಪರಿಕವಾಗಿ ಬಂದ ಕಲೆ,ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ಬೆಟ್ಟ ಕುರುಬ ಜನಾಂಗವನ್ನು ಈಗಿನ ಜಾಗನಕೋಟೆ ಹಾಡಿಗೆ ಅರಣ್ಯ ಇಲಾಖೆಯವರು ಸ್ಥಳಾಂತರಿಸಿದರು. ಆದರೆ ಯಾವುದೆ ಪುನರ್ವಸತಿ ಕಲ್ಪಿಸಲಿಲ್ಲ. ಶ್ರೀಮದಲ್ಲಿ ಮಾದಯ್ಯ ಅವರು ಆದಿವಾಸಿ ಸಮುದಾಯದವರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿದರು. ಇದರ ಫಲವಾಗಿ ೧೫೪ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಯಿತು. ಶ್ರೀಯುತರು ಈಗಲೂ ಬೆಟ್ಟಕುರುಬ ಸಮುದಾಯದ ಸಂಪ್ರದಾಯದಂತೆ ಜೀವನ ನಡೆಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಸೂಲಗಿತ್ತಿ ಯಮನವ್ವ

ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನ ಚಿಚಖಂಡಿ ಬಿ.ಕೆ ಗ್ರಾಮದ ಶಿಳ್ಳೆಕ್ಯಾತ ಸಮುದಾಯದ ಯಮನವ್ವ ಇಲ್ಲಯವರೆಗೂ ಸುಮಾರು ೩ ಸಾವಿರ ಹೆರಿಗೆ ಮಾಡಿಸಿದ್ದಾರೆ.
ವೈದ್ಯಕೀಯ ನೆರವು ಸಿಗದ ಈ ಕುಗ್ರಾಮದಲ್ಲಿ, ಅಲೆಮಾರಿ ಜನಾಂಗದ ಬಿಡಾರಗಳಲ್ಲಿ ಯಮನವ್ವ ಸೂಲಗಿತ್ತಿಯಾಗಿ ಫಲಾಪೇಕ್ಷೆಯಿಲ್ಲದೇ ಹೆರಿಗೆ ಮಾಡಿಸಿ ಕಡು ಬಡವರ ಪಾಲಿಗೆ ನೆರವಾಗಿದ್ದಾರೆ. ಈಗಲೂ ನಾಟಿ ಔಷಧವನ್ನು ಬಳಸಿ ಸೂಲಗಿತ್ತಿ ಕೆಲಸವನ್ನು ಯಮನವ್ವ ಮುಂದುವರೆಸುವ ಮೂಲಕ ಜನಪದ ವೈದ್ಯವೃತ್ತಿಯನ್ನು ಇಂದಿಗೂ ಜೀವಂತವಿಟ್ಟಿದ್ದಾರೆ. ಜೀವನೋಪಾಯಕ್ಕಾಗಿ ಕೌದಿ ಹೊಲೆಯುವ ಕಲೆಯನ್ನು ಕಲಿತು, ಸುಮಾರು ೫ ಸಾವಿರಕ್ಕು ಹೆಚ್ಚು ಕೌದಿ ಹೊಲೆಯುವ ಮೂಲಕ ಬದುಕು ಕಟ್ಟಿಕೊಂಡು ತಮ್ಮ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

Categories
ಚಿತ್ರಕಲೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಣ್ಣ ಚಿತ್ರಗಾರ

ಗಂಗಾವತಿಯ ಶ್ರೀಯುತ ವೆಂಕಣ್ಣ ಚಿತ್ರಗಾರ ಅವರು ಸುಮಾರು ಐವತ್ತು ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸುಮಾರು ೧೦೦ ಕ್ಕೂ ಅಧಿಕ ರಥಗಳು ಇವರ ಕೈಯ್ಯಲ್ಲಿ ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತುಪ್ರಕಾರ ಹೊಂದಿದ್ದು, ಕೇವಲ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕಾಣಬಹುದು.
ಪರಿಸರಸ್ನೇಹಿ ಸುಂದರವಾದ ಮಣ್ಣಿನ ಮೂರ್ತಿಗಳನ್ನೂ ಸಹ ಮಾಡುವಲ್ಲಿ ಪ್ರಸಿದ್ಧಿ ಹೊಂದಿರುವ ಇವರು ಅನೇಕ ಗ್ರಾಮದೇವತೆಗಳು, ಪಲ್ಲಕ್ಕಿ, ಪೂಜಾ ಮಂಟಪ, ದೇವರ ತೊಟ್ಟಿಲು, ಛತ್ರಿ, ಸಿಂಹಾಸನ ಇತ್ಯಾದಿ ಕರಕುಶಲ ಕೆಲಸಗಳನ್ನು ಮಾಡುತ್ತಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಕಲಾನೈಪುಣ್ಯತೆಯನ್ನು ಗುರುತಿಸಿ, ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ. ‘ರಥರಚನ ಕೋವಿದ’ ಹಾಗೂ ‘ಕದಂಬ’ಪ್ರಶಸ್ತಿ ಇವರದ್ದಾಗಿವೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಡಾ. ಜಿ. ಜ್ಞಾನಾನಂದ

ಕನ್ನಡ ನಾಡಿನ ಸಾಂಪ್ರದಾಯಿಕ ಶಿಲ್ಪಗಳ ಮೂಲ ಬೇರನ್ನು ಕಂಡುಕೊಂಡು ಸಾಂಪ್ರದಾಯಿಕ ಶಿಲ್ಪಕ್ಕೆ ಹೊಸ ಆಯಾಮವನ್ನು ಕಲ್ಪಸುವ ಕೆಲಸವನ್ನು ಸ್ಥಪತಿ ಡಾ. ಜಿ. ಜ್ಞಾನಾನಂದ ಅವರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಪ್ರಸ್ತುತ ಶಿಲ್ಪಶಾಸ್ತ್ರವನ್ನು ಡಾ. ಜಿ. ಜ್ಞಾನಾನಂದ ಅವರು ರಚಿಸಿದ್ದಾರೆ.
ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪ ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿ ಡಿ.ಅಟ್ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಬ್ರಹ್ಮರ್ಷಿ ಶಿಲ್ಪಗುರುಕುಲಂ ಕಾಲೇಜಿನ ಪ್ರಾಂಶುಪಾಲರಾಗಿ ಕರ್ನಾಟಕ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರುಗಳಾಗಿ (ಡೀನ್) ಸೇವೆ ಸಲ್ಲಿಸುತ್ತ ಪಾರಂಪರಿಕ ಶಿಲ್ಪವನ್ನು ಬೋಧಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜಾ

ಬ್ಯಾಂಡ್ ಮಾಸ್ಟರ್ ಎಂದೇ ಖ್ಯಾತರಾದ ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜ ಅವರು, ಕಳೆದ ಐವತ್ತು ವರ್ಷಗಳಿಂದ ಬ್ರಾಸ್ ಬಾಂಡ್ ಕಲೆಯಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಬದುಕಿನ ಬಹುಭಾಗವನ್ನು ವಾದ್ಯ ಸಂಗೀತಕ್ಕಾಗಿಯೇ ವಿನಿಯೋಗಿಸಿದ ಇವರು, ಮೈಸೂರು ಅರಮನೆ ಬ್ಯಾಂಡ್ನಲ್ಲೂ ನುಡಿಸಿದ್ದಾರೆ. ‘ಸಾನಿಧ್ಯ’ ಎನ್ನುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಮಕ್ಕಳನ್ನು ತರಬೇತುಗೊಳಿಸಿ, ಕಲಾವಿದರಾಗುವಂತೆ ಮಾಡಿದ್ದಾರೆ. ‘ಹ್ಯಾರಿಸ್ ಸೆಂಚುರಿ ಸಿಲ್ವ ಬ್ಯಾಂಡ್’ ಸ್ಥಾಪಿಸಿ ೧೦೦೦ ಕ್ಕೂ ಹೆಚ್ಚು ಸಂಗೀತಗಾರರನ್ನು ಬ್ಯಾಂಡ್ ನುಡಿಸುವಲ್ಲಿ ತರಬೇತುಗೊಳಿಸಿದ್ದಾರೆ. ನಶಿಸಿ ಹೋಗುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯನ್ನು ಪುನರುಜ್ಜಿವನಗೊಳಿಸಲು ಶ್ರಮಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ. ಸಿ. ತ್ಯಾಗರಾಜ್

ಕೋಪಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದವರಾದ ಶ್ರೀ.ಸಿ. ತ್ಯಾಗರಾಜ್ ಅವರು, ಖ್ಯಾತ ನಾದಸ್ವರ ವಿದ್ವಾಂಸರು. ಕಳೆದ ೫೦ ವರ್ಷಗಳಿಂದ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ನಾದಸ್ವರ ಕಚೇರಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ ಮತ್ತು ಹಂಪಿ ಮಹೋತ್ಸವಗಳಲ್ಲಿ ಹಾಗೂ ಜಾನಪದ ಜಾತ್ರೆಗಳಲ್ಲಿ ಜೊತೆಗೆ ನಾಡಿನ ಹೆಸರಾಂತ ದೇಗುಲಗಳಲ್ಲಿ ನಾದಸ್ವರ ಸೇವೆ ಸಲ್ಲಿಸಿರುವುದು ಇವರ ಹೆಗ್ಗಳಿಕೆ. ಸುಮಾರು ೭೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾದಸ್ವರ ಕಲೆಯನ್ನು ಕಲಿಸುತ್ತ ಕಲಾಸೇವೆ ಮುಂದುವರೆಸಿದ್ದಾರೆ.
ಇವರ ಪ್ರತಿಭೆಗೆ ಪುರಸ್ಕಾರವಾಗಿ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸವಿತಾ ಕಲಾವಿದರ ಸಮಾವೇಶದಲ್ಲಿ ಕಲಾರತ್ನ ಪ್ರಶಸ್ತಿ, ದಸರಾ ಮಹೋತ್ಸವ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.

Categories
ಜಾನಪದ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಹಾರುದ್ರಪ್ಪ ಇಟಗಿ

ಹಾವೇರಿ ಜಿಲ್ಲೆ ಹಿರೇಕೇರೂರು ತಾಲ್ಲೂಕಿನ ಶ್ರೀ ಮಹಾರುದ್ರಪ್ಪ ವೀರಪ್ಪ ಇಟಗಿಯವರು ವಂಶಪಾರಂಪರ್ಯವಾಗಿ ಬಂದ ಪುರವಂತಿಕೆ ಮತ್ತು ಸಮಾಳದ ಕಲೆಯನ್ನು ಕಳೆದ ೩೫ ವರ್ಷಗಳಿಂದ ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕಲೆಯನ್ನು ಭಾರತದಾದ್ಯಂತ ಪ್ರದರ್ಶಿಸಿರುವುದಲ್ಲದೇ ದೆಹಲಿಯ ಕೆಂಪುಕೋಟೆಯ ಮುಂದೆ ‘ಭಾರತ ಪರ್ವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶಿಸಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಪ್ಪ ಗೋವಿಂದಪ್ಪ ಭಜಂತ್ರಿ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಶೆರೆವಾಡಾ ಗ್ರಾಮದವರಾದ ಶ್ರೀ ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಕಳೆದ ೫೫ ವರ್ಷಗಳಿಂದ ಶಹನಾಯಿ ವಾದಕರಾಗಿ ಜಾನಪದ ಕಲೆಯನ್ನು ಶ್ರೀಮಂತಗೊಳಿಸಿದವರು. ಸಣ್ಣಾಟ, ದೊಡ್ಡಾಟ, ಕೋಲಾಟ ಹೆಜ್ಜೆಮೇಳಗಳಲ್ಲಿ ಶಹನಾಯಿ ನುಡಿಸಿ ಪ್ರಸಿದ್ಧರಾಗಿದ್ದಾರೆ. ಇದರ ಜೊತೆಗೆ ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿದ್ದಾರೆ. ಮೈಸೂರು ದಸರಾ ಉತ್ಸವ, ಮಂಗಳೂರು ದಸರಾ ಕುದ್ರೋಳಿ ಉತ್ಸವಗಳಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದ್ದಾರೆ.
ಗುರುಶಿಷ್ಯ ಪರಂಪರೆಯಲ್ಲಿ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ‘ನಮ್ಮ ಸಾಧಕರು’ ಪ್ರಶಸ್ತಿ ನೀಡಿದೆ.

Categories
ಬಯಲಾಟ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಲ್ಲಿಕಾರ್ಜುನ ರಾಚಪ್ಪ ಮುದಕವಿ

ಶ್ರೀ ಕೃಷ್ಣ ಪಾರಿಜಾತ ಕಲಾವಿದರಾದ ಇವರು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ದಾದನಟ್ಟಿ ಗ್ರಾಮದವರು. ಇವರು ಭಾಗವತ, ಕೊರವಂಜಿ, ಕೃಷ್ಣ, ಸತ್ಯಭಾಮ, ರುಕ್ಕಿಣಿ ಪ್ರಹಸನಗಳ ನಿರ್ದೇಶನ ಮಾಡಿದ್ದು, ಅನೇಕ ಸಂಘ ಸಂಸ್ಥೆಗಳಿಂದ ಹಾಗೂ ಸರ್ಕಾರದಿಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬನ್ನಂಜೆ ಬಾಬು ಅಮೀನ್

ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಬನ್ನಂಜೆ ಬಾಬು ಅಮೀನ್ ಅವರು ಉಡುಪಿಯ ನಿಟ್ಟೂರು ಗ್ರಾಮದವರು. ತುಳುನಾಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ದೈವಾರಾಧನೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುತ್ತಾರೆ. ಇವರು ಬರೆದಿರುವ ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥವು ಸಂಗ್ರಹಯೋಗ್ಯವಾಗಿದ್ದು ಕರ್ನಾಟಕ ಯಕ್ಷಗಾನ ಜಾನಪದ ಅಕಾಡೆಮಿಯಿಂದ ಪುರಸ್ಕಾರಗಳು ದೊರೆತಿವೆ.
ತುಳುನಾಡಿನ ಸಂಸ್ಕೃತಿ, ಜಾನಪದ ಆಚರಣೆಗಳು, ದೈವಗಳು ಹಾಗೂ ಸಮಗ್ರ ಕೋಟಿ ಚೆನ್ನಯ್ಯ ಮುಂತಾದ ವಿಷಯಗಳ ಕುರಿತು ೩೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಾಹಿತ್ಯ ಸಂಶೋಧನೆ ಪ್ರಶಸ್ತಿ ಲಭ್ಯವಾಗಿದೆ. ದೇಶ ವಿದೇಶಗಳಲ್ಲಿ ಸನ್ಮಾನ ಹಾಗೂ ಗೌರವ ದೊರೆತಿದೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ದುರುಗಪ್ಪ ಚನ್ನದಾಸರ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಮೆಟಿ ಗ್ರಾಮದ ಶ್ರೀ ದುರ್ಗಪ್ಪ ಚನ್ನದಾಸರ, ಮನೆ ಮನೆಗೆ ತೆರಳಿ, ಪಾರಂಪರಿಕ ಕಲಾಪ್ರದರ್ಶನ ಹಾಗೂ ತತ್ವಪದ ಗಾಯನ ಮಾಡುತ್ತ ಅಲೆಮಾರಿ ಬದುಕು ನಡೆಸುತ್ತ ಬರುತ್ತಿದ್ದಾರೆ. ಕಲಾಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡ ಇವರು ದಿಮ್ಮಡಿ, ಗೆಜ್ಜೆ, ತಂಬೂರಿ, ಏಕತಾರಿ ವಾದನ ನುಡಿಸುತ್ತ ದಾನಧರ್ಮ ಸ್ವೀಕಾರ ಮಾಡುತ್ತ ಜಾನಪದ ಕಲಾಪ್ರಕಾರವನ್ನು ಜೀವಂತಗೊಳಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ತತ್ವಪದ ಹಾಗೂ ದಾಸರ ಪದಗಳ ಗಾಯನಕ್ಕೆ ಮನಸೋತು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಸನ್ಮಾನಿಸಿವೆ.

Categories
ಯಕ್ಷಗಾನ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ

ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಕಾನಲೆ ಗ್ರಾಮದ ಗೌರಮ್ಮನವರು ಹಸೆ ಚಿತ್ತಾರವನ್ನು ಮೈಗೂಡಿಸಿಕೊಂಡವರು. ಪಾರಂಪರಿಕ ಕಲೆಗಳಲ್ಲಿ ರೂಢಿಯಾದ ಇವರು ಮಲೆನಾಡಿನ ದೀವರು ಸಮುದಾಯದ ‘ಹಸೆ ಗೋಡೆ ಚಿತ್ತಾರ, ಭತ್ತದ ತೆನೆಯ ಬಾಗಿಲು ತೋರಣ, ಬುಟ್ಟಿ ಚಿತ್ತಾರಗಳಲ್ಲಿ ಖ್ಯಾತಿ ಪಡೆದವರು. ಚಿತ್ತಾರ ಕಲೆಯನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ ಮೊದಲ ಕಲಾವಿದೆ ಇವರು. ಸುತ್ತಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಚಿತ್ತಾರ ತರಬೇತಿ ಕಾರ್ಯಾಗಾರ ನಡೆಸಿ, ಗ್ರಾಮೀಣ ಮಹಿಳೆಯರಲ್ಲಿ ಹಸಿ ಚಿತ್ತಾರದ ಬಗ್ಗೆ ಅರಿವು ಮೂಡಿಸಿದ್ದಾರೆ. ಕೋಲ್ಕತ್ತ, ದೆಹಲಿ, ಶಿರಸಿ, ಹಂಪಿ, ಮೈಸೂರು ಮತ್ತಿತರೆಡೆಗಳಲ್ಲಿ ಹಸೆ ಕಲೆಯ ಪ್ರದರ್ಶನ ನಡೆಸಿ ಹಸೆ ಚಿತ್ರ ಕಲಾವಿದೆಯರ ಬೃಹತ್ ಸಮಾವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ೨೦೦೬ ಏಪ್ರಿಲ್ ೩ ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಸೆ ಚಿತ್ತಾರದಲ್ಲಿ ಮಾಡಿದ ಶ್ರೇಷ್ಠ ಸಾಧನೆಯನ್ನು ಗುರುತಿಸಿ ‘ಅಕಾಡೆಮಿ ಪ್ರಶಸ್ತಿ’ಯನ್ನು ನೀಡಿದ್ದಾರೆ. ಸಾಗರ ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳು ಶ್ರೀಮತಿ ಗೌರಮ್ಮನವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.

Categories
ಜಾನಪದ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರತನ್ ಸಿಂಗ್ ಭೀಮಸಿಂಗ್ ನಾಯಕ

ವಿಜಯಪುರ ಜಿಲ್ಲೆಯ ಶ್ರೀ. ಆರ್. ಬಿ. ನಾಯಕ್ ಬಂಜಾರ ಜಾನಪದ ಗಾಯಕರು. ತಮ್ಮ ಬಂಜಾರ ಜಾನಪದ ಗೀತ ಗಾಯನ ಕಲೆಯಿಂದ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಬಂಜಾರ ಜಾನಪದ ಗೀತೆಗಳ ರಚನೆ ಹಾಗೂ ಗಾಯನ ಇವರ ನಿತ್ಯಕಾಯಕ.
ಶ್ರೀ. ಆರ್. ಬಿ. ನಾಯಕ್ ಅವರ ಪ್ರತಿಭೆಗೆ ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳು ದೊರೆತಿವೆ. ಕಳೆದ ನಾಲ್ಕು ದಶಕಗಳಿಂದ ಜಾನಪದ ಗೀತ ಗಾಯನ ನಿರಂತರವಾಗಿ ನಡೆದಿದೆ. ಆಲ್ ಇಂಡಿಯ ರೇಡಿಯೋ ಇವರನ್ನು ಗುರುತಿಸಿ ಲಂಬಾಣಿ ಜಾನಪದ ಗೀತೆಗಳನ್ನು ಹಾಡಲು ಅವಕಾಶ ಮಾಡಿಕೊಟ್ಟಿದೆ.
ಶ್ರೀ.ಆರ್. ಬಿ. ನಾಯಕ್ ಅವರು ಲಂಬಾಣಿ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ೧೯೯೯ ನೇ ಸಾಲಿನ ಜಾನಪದ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬಂಜಾರ ಕಲಾರತ್ನ ‘ಸಂತ ಶ್ರೀ ಸೇವಾಲಾಲ್ ಪ್ರಶಸ್ತಿ ೨೦೧೦ ಪ್ರಶಸ್ತಿಗಳು ಲಭ್ಯವಾಗಿವೆ.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಿತ್ರಿ ಗೌಡ

ಮೂಲತ: ಗದಗ ಜಿಲ್ಲೆಯವರಾದ ರಂಗಭೂಮಿ ಕಲಾವಿದೆ ಶ್ರೀಮತಿ ಸಾವಿತ್ರಿಗೌಡರ್ ಅಸಾಧಾರಣ ಪ್ರತಿಭೆ. ವೃತ್ತಿ ರಂಗಭೂಮಿಯ ನಾಟಕಗಳಲ್ಲಿ ಪಾತ್ರವಹಿಸುತ್ತ ೫೦ ವರ್ಷಗಳ ನಿರಂತರ ಸೇವೆಯನ್ನು ಮಾಡಿದ್ದಾರೆ. ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ, ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಓಬಳೇಶ್ವರ ನಾಟಕ ಕಂಪನಿ, ಕೆ.ಬಿ.ಆರ್ ನಾಟಕ ಕಂಪನಿ, ಮುಂತಾದ ವೃತ್ತಿ ರಂಗಭೂಮಿಯ ಹಲವು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ಹೆಸರಾಗಿದ್ದಾರೆ. ಅವರ ಅಭಿನಯ ಪ್ರತಿಭೆಯನ್ನು ಗುರುತಿಸಿ, ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಗೌರವಿಸಿವೆ.