Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಜನ ಪದ್ಮಮ್ಮ

ಬಳ್ಳಾರಿಯ ಕಪ್ಪಗಲ್ಲು ಗ್ರಾಮದ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಹರಿಜನ ಪದ್ಮಮ್ಮ ಹುಟ್ಟಿನಿಂದಲೇ ಜಾನಪದ ಬಯಲಾಟ ಕಲಾವಿದೆ, ತಾಯಿ ದಿವಂಗತ ಗಂಗಮ್ಮ ಸಹ ಒಳ್ಳೆಯ ಅಭಿನೇತ್ರಿಯಾಗಿದ್ದವರು. ಹಾಗಾಗಿ ಪದ್ಮಮ್ಮನಿಗೆ ಅಭಿನಯ ರಕ್ತಗತವಾಗಿ ಬಂದುದು. ಹೆಣ್ಣುಮಕ್ಕಳು ಬಣ್ಣ ಬಳಿದುಕೊಂಡು ವೇದಿಕೆ ಏರುವುದನ್ನು ಮಹಾಪರಾಧ ಎಂದೇ ಪರಿಗಣಿಸುತ್ತಿದ್ದ ಕಾಲದಲ್ಲೇ ಬಯಲಾಟದ ಗೀಳು ಹಚ್ಚಿಕೊಂಡ ಪದ್ಮಮ್ಮ ಎದುರಿಸಿದ ಎಡರು ತೊಡರುಗಳು ಅನೇಕ. ಆದರೂ ಎದೆಗೆಡದೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವತುಂಬಿ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಸನ್ನಿವೇಶವನ್ನು ಕಣ್ಣಿಗೆ ಕಾಣುವ ಚಿತ್ರದಂತೆ ಅಭಿನಯಿಸುವಲ್ಲಿ ಸಿದ್ಧ ಹಸ್ತರೆನಿಸಿದವರು. ಜನ ಸಮುದಾಯದ ಮನಗೆದ್ದವರು.
ಸಾವಿರಕ್ಕೂ ಹೆಚ್ಚು ಬಯಲಾಟದ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡಿದ್ದಾರೆ. ಅಭಿನಯದ ಜೊತೆಗೆ ಉಚ್ಛಕಂಠದಲ್ಲಿ ದಕ್ಷಿಣಾದಿ ಶೈಲಿಯಲ್ಲಿ ರಂಗಗೀತೆಗಳನ್ನು ಹಾಡುವಾಗ ತನ್ಮಯತೆಯಿಂದ ಮೈಮರೆಯುತ್ತಾರೆ.
ಬಳ್ಳಾರಿ ಹೊಸಪೇಟೆ, ಕೂಡ್ಲಿಗಿ ಸಂಡೂರುಗಳೇ ಅಲ್ಲದೆ ಗಡಿನಾಡು ಪ್ರದೇಶಗಳಲ್ಲೂ ಕನ್ನಡ ಬಯಲಾಟಗಳ ಜಯಭೇರಿ ಬಾರಿಸಿದ ಹೆಗ್ಗಳಿಕೆ ಇವರದು. ಬಳ್ಳಾರಿ ಜನತೆ ಇವರಿಗೆ ಗಾನಕಲಾ ಸರಸ್ವತಿ ಎಂದು ಹಾಡಿಹೊಗಳಿದ್ದಾರೆ. ಇಂಥ ಅಭಿಜಾತ ಕಲಾವಿದೆಗೆ ಸಂದ ಗೌರವ ಸನ್ಮಾನಗಳು ಆನೇಕ ಅಪಾರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿರುವ ಹರಿಜನ ಪದ್ಮಮ್ಮ ಜಾನಪದ ಬಯಲಾಟ ಕ್ಷೇತ್ರದ ದೊಡ್ಡ ಆಸ್ತಿ ಎನ್ನಬಹುದು.