Categories
ಯಕ್ಷಗಾನ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೋಡಿ ಶಂಕರ ಗಾಣಿಗ

ಹಾರಾಡಿ ಮನೆತನದ ಯಕ್ಷಗಾನ ಕಲಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬಂದ ಪ್ರತಿಭಾವಂತ ಕುಡಿ ಕೋಡಿ ಶಂಕರ ಗಾಣಿಗ ಅವರು.
ಅಪ್ಪ, ತಾತಂದಿರ ಕಾಲದಿಂದಲೂ ಮನೆಯಲ್ಲಿ ರಿಂಗಣಿಸುತ್ತಿದ್ದ ಯಕ್ಷಗಾನ ಮದ್ದಳೆಯ ನಾದಕ್ಕೆ ಶ್ರುತಿ ಕೊಟ್ಟು ಬೆಳೆದ ಶ್ರೀಯುತರು ಯಾವ ಮೇಳದಲ್ಲೇ ಇರಲಿ, ಜನ ನಮ್ಮ ಶಂಕರ ಎಂದೇ ಗುರುತಿಸುತ್ತಾರೆ. ನಾಡಿನ ಬಹುಮುಖ್ಯ ಯಕ್ಷಗಾನ ಮೇಳಗಳಲೆಲ್ಲ ದುಡಿದ ೫೦
ವರ್ಷಗಳ ಅವಿರತ ಕಲಾ ಸೇವೆ ಅವರದು.
ಮಂದರ್ತಿ, ಮಾರನಕಟ್ಟೆ, ಕಮಲ ಶಿಲೆ, ಸೌಕೂರು, ಪೆರಡೂರು, ಇಡಗುಂಜಿ, ಮುಂತಾದ ಎಲ್ಲ ಮೇಳಗಳಲ್ಲೂ ತಮ್ಮ ಛಾಪು ಮೂಡಿಸಿ ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲೂ ಪಾತ್ರ ಮಾಡಿದ ಪ್ರತಿಭಾವಂತ ಕಲಾವಿದ ಶಂಕರ ಗಾಣಿಗ.
ರಾಜ್ಯ, ರಾಷ್ಟ್ರದಿಂದಾಚೆಗೂ ತಮ್ಮ ಯಕ್ಷಗಾನ ಕಲೆಯಿಂದ ಪ್ರಸಿದ್ಧರಾದ ಶಂಕರ ಗಾಣಿಗರ ಪ್ರತಿಭೆಯನ್ನು ಅರಸಿಬಂದ ಬಿರುದು ಸನ್ಮಾನಗಳು ಹಲವಾರು. ೭೩ರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಬಲ್ಲ ಯುವಕನ ಉತ್ಸಾಹ ಹೊಂದಿರುವ ಅದ್ಭುತ ಯಕ್ಷಗಾನ ಕಲಾವಿದ ಶ್ರೀ ಕೋಡಿಶಂಕರ ಗಾಣಿಗರು.