Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಿತ್ರಿ ಶಿವಪ್ಪ ಪೂಜಾರ

ಜಾನಪದವನ್ನೇ ಬದುಕಿನ ಪಥವಾಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಸಾಧಕಿ ಸಾವಿತ್ರಿ ಶಿವಪ್ಪ ಪೂಜಾರ, ಮಹಿಳಾಪರ ಹೋರಾಟಗಾರ್ತಿ, ಗೀಗೀಪದ ಹಾಡುಗಾರ್ತಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ೧೯೬೧ರಲ್ಲಿ ಜನಿಸಿದ ಸಾವಿತ್ರಿ ಪೂಜಾರ್ ಬಡಕುಟುಂಬದ ಕುಡಿ, ಸಾಮಾಜಿಕವಾಗಿ ಹಿಂದುಳಿದ ಮನೆತನ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಈ ಹಂತದಲ್ಲಿ ಸಾವಿತ್ರಿ ಅವರ ಕೈಹಿಡಿದು ನಡೆಸಿದ್ದು ಜಾನಪದ. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿದ ಗೀಗೀಪದ ಹಾಡುಗಾರಿಕೆಯನ್ನೇ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡ ಕಲಾವಿದೆ. ಜಾತ್ರೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ತತ್ವಪದಗಳ ಗಾಯನದಿಂದ ಕಲಾರಸಿಕರ ಮನಗೆದ್ದ ಸಾವಿತ್ರಿ ಪೂಜಾ‌ ಜಾನಪದ ಕೋಲಲೆಯೆಂದೆ ಜನಜನಿತರು. ಸರ್ಕಾರದ ಉತ್ಸವಗಳು ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ನಿರಂತರ ಕಲಾಪ್ರದರ್ಶನ, ನಾಲ್ಲೂವರೆ ದಶಕಗಳ ಅನನ್ಯ ಕಲಾಸೇವೆ, ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಯಾಗಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಿದವರು. ದೇವದಾಸಿ ಪದ್ಧತಿ ವಿರುದ್ಧ ಸಮರ ಸಾರಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಸಾವಿತ್ರಿ ಪೂಜಾ‌ರ ಅವರದ್ದು. ಫಕೀರವ್ವ ಗುಡಿಸಾಗರ ಪ್ರಶಸ್ತಿ, ಬಾಬು ಜಗಜೀವನರಾಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಸಾವಿತ್ರಿ ಪೂಜಾ‌ರ ಜಾನಪದ ಲೋಕದ ಮಂದಾರ ಪುಷ್ಪ.