Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ತಿಪ್ಪಣ್ಣ ಹೆಳವ‍ರ್

ಕಲೆಗಾಗಿ ಆಸ್ತಿಯನ್ನು ಕಳೆದುಕೊಂಡು ತಾವೇ ಕಲೆಗೆ ಆಸ್ತಿಯಾದ ದೇಸೀ ಪ್ರತಿಭೆ ತಿಪ್ಪಣ್ಣ ಹೆಳವ‍ರ್, ಆರು ದಶಕಗಳಿಗೂ ಮೀರಿ ಸೇವೆಗೈದ ಬಯಲಾಟದ ಕಲಾವಿದ. ಜನಪದರಿಗೆ ಕಲೆಯೇ ಬದುಕು, ಬದುಕೇ ಕಲೆ. ತಿಪ್ಪಣ್ಣ ಅಂತಹ ಜನಪದೀಯ ಗಾಯಕ. ಅವಿಭಜಿತ ಬಿಜಾಪುರ ಜಿಲ್ಲೆ ಲಕ್ಕುಂಡಿಯವರು. ೧೯೪೪ರಲ್ಲಿ ಜನಿಸಿದ ತಿಪ್ಪಣ್ಣರದ್ದು ಅಪ್ಪಟ ಅನಕ್ಷರಸ್ಥ ಮನೆತನ, ಬಾಲ್ಯದಿಂದಲೂ ಕಲಾಸಕ್ತಿ, ನಟನೆಯ ಗೀಳು. ಬಯಲಾಟದ ಕಲಾವಿದನಾಗಿ ಊರೂರು ತಿರುಗುವುದೇ ಜೀವನ. ಈ ಕಲಾತಿರುಗಾಟ, ಬಯಲಾಟದ ಮೋಹಕ್ಕೆ ೮೭ ಎಕರೆ ಜಮೀನು ಕಳೆದುಕೊಂಡು ಬರಿಗೈ ದಾಸನಾಗಿದ್ದು ದಿಟ. ಆದರೂ ಕೊಂಚವೂ ಮುಕ್ಕಾಗದ ಕಲಾಪ್ರೇಮ, ಬಯಲಾಟದ ಹಾಡುಗಳನ್ನು ನೆನಪಿಟ್ಟುಕೊಳ್ಳಲೆಂದೇ ಮನೆಯಲ್ಲೇ ಅಕ್ಷರಕಲಿತ ಜಾಣ, ಅಲೆಮಾರಿ ಹೆಳವ—ಪಿಚ್ಚ-ಗುಂಟಲು ಜನಾಂಗದವರಾಗಿ ಗುಂಟಲು ಸಮುದಾಯದ ಮೂಲಪುರುಷ ೬ನೇ ಶತಮಾನದ ಮುತ್ತಿನಾಥಯ್ಯ ಬಗ್ಗೆ ಕೆಲವು ವಚನಗಳನ್ನು ಸಂಸ್ಕರಿಸಿ ಇತಿಹಾಸಕಾರರಿಗೆ ಅಚ್ಚರಿ ಉಂಟುಮಾಡಿದಾತ. ಮನೆಮನೆಗಳಿಗೆ ತೆರಳಿ ಜನನ-ಮರಣ ದಾಖಲಿಸುವ ಒಕ್ಕಲುತನದಲ್ಲೂ ನಿರತರಾಗಿರುವ ತಿಪ್ಪಣ್ಣಗೆ ಭಿಕ್ಷಾಟನೆ ಮತ್ತು ಕಲಾರಾಧನೆ ಎರಡೇ ಆಧಾರ. ೭೮ರ ಇಳಿವಯಸ್ಸಿನಲ್ಲೂ ಕಲಾಕೈಂಕರ್ಯದಲ್ಲಿ ತೊಡಗಿರುವ ತಿಪ್ಪಣ್ಣ ಹಳ್ಳಿಗಾಡಿನ ನಿಜ ಜಾನಪದ ಸಂಪತ್ತು.