Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ (ಸಂಸ್ಥೆ)

ಆರೋಗ್ಯ ಕ್ಷೇತ್ರದ ಮಾರಣಾಂತಿಕ ಕಾಯಿಲೆ ಪೀಡಿತ ಮಕ್ಕಳ ಶುಶೂಷೆಯಲ್ಲಿ ಸಕ್ರಿಯವಾಗಿರುವ ಸೇವಾನಿಧಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ. ನೂರಾರು ಮಕ್ಕಳ ಬಾಳಿನ ಜೀವರಕ್ಷಕಕೇಂದ್ರ, ತಲಸೇಮಿಯಾ ಹಾಗೂ ಹೀಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಮಕ್ಕಳು ಸೂಕ್ತ ಚಿಕಿತ್ಸೆ ಪಡೆಯಲಾಗದೇ ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ೨೦೧೭ರಲ್ಲಿ ಬಾಗಲಕೋಟ ಜಿಲ್ಲೆಯ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ‘ತಲಸೇಮಿಯಾ ಮತ್ತು ಹೀಮೋಫೀಲಿಯಾ ಸೊಸೈಟಿ’ ಅಸ್ತಿತ್ವಕ್ಕೆ ಬಂತು. ಶಾಸಕ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷರಾಗಿರುವ ಈ ಸೊಸೈಟಿ ಬಾಗಲಕೋಟೆಯಲ್ಲಿ ತಲಸೇಮಿಯಾ ಮತ್ತು ಹೀಮೋಫೀಲಿಯಾ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಪ್ರಾಮಾಣಿಕ ಕಾಳಜಿಯಿಂದ ಅವಿರತವಾಗಿ ಶ್ರಮಿಸುತ್ತಿದೆ. ಸುಮಾರು ೧೦೯ ಮಕ್ಕಳು ಚಿಕಿತ್ಸೆಗಾಗಿ ನೋಂದಾಯಿತರಾಗಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿರುವುದು ವಿಶೇಷ, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಮಕ್ಕಳಿಗೂ ಉಚಿತ ಸೇವೆ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ವಾಸಿಸುವ ಕಡೆ ಹಾಗೂ ಸಾರ್ವಜನಿಕರಲ್ಲಿ ತಲಸೇಮಿಯಾ ಮತ್ತು ಹಿಮೋಫೀಲಿಯಾ ಕಾಯಿಲೆಯ ಬಗ್ಗೆ ತಿಳವಳಿಕೆ ಮೂಡಿಸಲು ಅನೇಕ ಶಿಖರಗಳನ್ನು ಸೊಸೈಟಿ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ತಲಸೇಮಿಯಾ ಪೀಡಿತ ಮಕ್ಕಳಿಗೆ ಉಚಿತ ರಕ್ತವರ್ಗಾವಣೆ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುತ್ತಿರುವ ಸೊಸೈಟಿ ರಕ್ತಭಂಡಾರವನ್ನೂ ಹೊಂದಿದ್ದು ಮಾನವೀಯ ಸೇವೆಯಿಂದಾಗಿ ನೊಂದ ಮಕ್ಕಳ ಮೊಗದಲ್ಲಿ ನಗು ಚಿಮ್ಮಿಸಿದೆ.