Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುಬ್ರಹ್ಮಣ್ಯ ಧಾರೇಶ್ವರ

ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ, ನಿರ್ದೇಶಕ, ಕಥಾಸಂಯೋಜಕ, ಸಂಘಟಕ, ರಾಗಸಂಯೋಜಕರಾಗಿ ೪೯ ವರ್ಷಗಳ ಸೇವಾಹಿರಿತನದ ಕಲಾಕಾರರು. ೧೯೫೭ರಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಬಾಲ್ಯದಲ್ಲೇ ಸ್ವರಮೋಹಿತರು. ಹತ್ತನೇ ವಯಸ್ಸಿಗೆ ಹಿಂದೂಸ್ತಾನಿ ಸಂಗೀತಾಭ್ಯಾಸ, ನಾಟಕ ಕಂಪನಿಗಳಲ್ಲಿ ತರಬೇತಿ, ೧೬ನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಸಹಭಾಗವತನಾಗಿ ಕಲಾಸೇವಾರಂಭ, ೧೨ ವರ್ಷಗಳಲ್ಲಿ ನಿತ್ಯವೂ ಕಲಿಕೆ, ಆನಂತರ ಪ್ರಧಾನಭಾಗವತ, ನಿರ್ದೇಶಕ, ಕಥಾಸಂಯೋಜಕರಾಗಿ ೨೮ ವರ್ಷಗಳ ಕಾಲ ಶ್ರೀಪೆರ್ಡೂರು ಮೇಳ ಮುನ್ನಡೆಸಿದ ಹಿರಿಮೆ, ಹೊಸರಾಗಗಳ ಅಳವಡಿಕೆ ಮತ್ತು ಹೊಸ ತಾಂತ್ರಿಕತೆಯನ್ನು ಬಳಸಿದ ಹೆಗ್ಗಳಿಕೆ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ, ಸಂಯೋಜನೆ ಮತ್ತು ಪ್ರದರ್ಶನ. ೪೩೦ಕ್ಕೂ ಹೆಚ್ಚು ಕಥಾನಕದ ಆಡಿಯೋ ಕ್ಯಾಸೆಟ್‌ಗಳ ಮುದ್ರಣ, ೨೫೦ಕ್ಕೂ ಅಧಿಕ ವಿಡಿಯೋ-ಸಿಡಿ-ಡಿವಿಡಿಗಳ ಚಿತ್ರೀಕರಣದ ದಾಖಲೆ, ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರ ಕಲಾಸೇವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನಪ್ರಶಸ್ತಿ, ಶ್ರೀರಾಮವಿಠಲ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಸನ್ಮಾನಿತಗೊಂಡ ಮಾದರಿ ಸಾಧನೆ.