Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಸುಮನಾ ಫೌಂಡೇಶನ್ (ಸಂಸ್ಥೆ)

ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ವಿಶಿಷ್ಟ ಸಂಸ್ಥೆ ಸುಮನಾ ಫೌಂಡೇಶನ್, ನಾಡು-ನುಡಿ ರಕ್ಷಣೆ, ಜನಹಿತಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಪರೂಪದ ಸೇವಾಕೇಂದ್ರ, ಸಾಮಾಜಿಕ ಸೇವಾಬದ್ಧತೆಯೊಂದಿಗೆ ೨೦೧೨ರಲ್ಲಿ ಬೆಂಗಳೂರಿನ ಸಂಜಯನಗರದಲ್ಲಿ ಸ್ಥಾಪನೆಗೊಂಡ ಸುಮನಾ ಫೌಂಡೇಶನ್‌ನ ರೂವಾರಿ ಡಾ. ಸುನೀತಾ ಮಂಜುನಾಥ್, ಸ್ವಚ್ಛಭಾರತ ಅಭಿಯಾನದೊಂದಿಗೆ ತನ್ನ ಸೇವಾಯಾನ ಆರಂಭಿಸಿದ ಸಂಸ್ಥೆ ಬೆಂಗಳೂರಿನ ರಸ್ತೆಗಳ ಬದಿಯ ಗೋಡೆಗಳ ಸೌಂದರ್ಯ ಹೆಚ್ಚಿಸಿದೆ. ೧೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಖರಗಳು, ೧೦ ಸಾವಿರ ಆಯುಷ್ಮಾನ್‌ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಿಕೊಡುವಿಕೆ, ೫೦೯ಕ್ಕೂ ಹೆಚ್ಚು ರಕ್ತದಾನ ಶಿಬಿರಗಳ ಆಯೋಜನೆ, ಪ್ರತಿನಿತ್ಯ ೫೦೦ರಿಂದ ಒಂದು ಸಾವಿರ ಮಂದಿ ಬಡವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ, ನೂರಾರು ಬಸ್ ತಂಗುದಾಣಗಳಿಗೆ ಹೊಸ ರೂಪ, ಕಡುಬಡವರಿಗೆ ಮನೆಗಳ ನಿರ್ಮಾಣ, ರಾಜ್ಯದ ಹಲವೆಡೆ ಸರ್ಕಾರಿ ಶಾಲೆಗಳಿಗೆ ಹೊಸ ಕಾಯಕಲ್ಪ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಕಿಟ್ ವಿತರಣೆ, ತರಕಾರಿ ಸರಬರಾಜು, ಪರಿಸರಸ್ನೇಹಿ ಗಣಪತಿಗಳ ತಯಾರಿಗೆ ಪ್ರೋತ್ಸಾಹ, ಸೈಕಲ್‍ ರ‍್ಯಾಲಿ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ, ರುದ್ರಭೂಮಿ ಸ್ವಚ್ಛತೆ ಫೌಂಡೇಶನ್‌ನ ಜನಮುಖಿ ಕಾರ್ಯಗಳು. ಸ್ವತಃ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸುನೀತಾ ಮಂಜುನಾಥ್‌ ಅವರು ಪ್ರತಿ ವರ್ಷ ೩೦ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುತ್ತಿದ್ದು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಸೇವೆಗೆ ಸಂದ ಸತ್ಫಲವಾಗಿದೆ.