Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀರಾಮಕೃಷ್ಣ ಆಶ್ರಮ, ಮೈಸೂರು

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ, ಸಂಸ್ಕಾರ ಕಲಿಸುವ ಮಹತ್ತಾರ್ಯದಲ್ಲಿ ತೊಡಗಿರುವ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ನಾಡಿನ ಹೆಮ್ಮೆ. ಶತಮಾನದ ನಡಿಗೆಯಲ್ಲಿ ಸಾವಿರಾರು ಮಕ್ಕಳ ಬಾಳಲ್ಲಿ ವಿದ್ಯಾಬೆಳಕು ಹರಿಸಿದ ಮಹೋನ್ನತ ಸೇವಾಕೇಂದ್ರ. ಯುವಕರನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ನಾಡು ಕಟ್ಟುವ ಕಾರ್ಯಕ್ಕೆ ಉತ್ತೇಜಿಸುವ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಶ್ರೀರಾಮಕೃಷ್ಣ ಪರಮಹಂಸರ ಮೌಲ್ಯಗಳೇ ಶ್ರೀರಾಮಕೃಷ್ಣ ಆಶ್ರಮದ ಬುನಾದಿ. ಸ್ವಾಮಿ ಸಿದ್ದೇಶ್ವರಾನಾಂದ ಸ್ವಾಮಿ ಅವರು ೧೯೨೫ರಲ್ಲಿ ಸ್ಥಾಪಿಸಿದ ಈ ಸಂಸ್ಥೆಗೆ ೧೯೩೨ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನೀಡಿದ ಅನುದಾನದಿಂದ ಸ್ವಂತಕಟ್ಟಡದ ಸ್ಥಾಪನೆ. ಸ್ವಾಮೀಜಿಗಳ ಪಾಲಿಗೆ ಪ್ರತಿಷ್ಠಿತ ವೇದಾಂತ ಅಧ್ಯಯನ ಕೇಂದ್ರವಾಗಿದ್ದ ಆಶ್ರಮ ದೇಶದ ಅನೇಕ ಸ್ವಾಮೀಜಿಗಳನ್ನು ರೂಪಿಸಿದೆ. ರಾಷ್ಟ್ರಕವಿ ಕುವೆಂಪು ಅವರು ಬಾಲ್ಯದಲ್ಲಿ ಇಲ್ಲಿಯೇ ಕಲಿತದ್ದು ವಿಶೇಷ. ಸಂಸ್ಥೆಯು ವಿವೇಕ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿವರ್ಷ ೩೫೦ ರಿಂದ ೫೦೦ ವಿದ್ಯಾರ್ಥಿಗಳು ಶಿಕ್ಷಿತರಾಗುತ್ತಿರುವುದು ಮಹತ್ವದ ಸಾಧನೆ. ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಒಟ್ಟು ೯ ಶಾಲೆಗಳನ್ನು ನಡೆಸುತ್ತಿರುವ ಎಲ್ಲೆಡೆ ಮಕ್ಕಳಲ್ಲಿ ಬದುಕಿನ ನೈತಿಕ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸಿಕೊಡುತ್ತಿದೆ. ಸಂಸ್ಥೆಯಲ್ಲಿ ಕಲಿತ ಮಕ್ಕಳು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದು ಶಿಸ್ತು-ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ. ಸಂಸ್ಥೆಯು ಪರಿಸರ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿಯಂತಹ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ಶತಮಾನದ ಅಂಚಿನಲ್ಲಿದೆ.