Categories
ಚಿತ್ರಕಲೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಣ್ಣರಂಗಪ್ಪ ಚಿತ್ರಗಾರ್

ನಶಿಸುತ್ತಿರುವ ಕಿನ್ನಾಳ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಹಿರಿಯ ಕಲಾಚೇತನ ಸಣ್ಣರಂಗಪ್ಪ ಚಿತ್ರಗಾರ, ಕಲೆಯನ್ನೇ ಬದುಕಾಗಿಸಿಕೊಂಡ ವಿರಳ ಕಲಾವಿದರು. ಸಾಂಪ್ರದಾಯಿಕ ಮರದ ಕಲೆಯಾದ ಕಿನ್ನಾಳ ಕಲೆ ಬಲು ಪುರಾತನವಾದುದು. ಕಾಲಚಕ್ರದೊಟ್ಟಿಗೆ ನಶಿಸುತ್ತಿರುವ ಈ ಕಲಾಸಂತತಿಯ ದಿವ್ಯಕೊಂಡಿಯಂತಿರುವ ಸಣ್ಣರಂಗಪ್ಪ ಚಿತ್ರಗಾರ ಕೊಪ್ಪಳ ಜಿಲ್ಲೆಯ ದೇಸೀ ಪ್ರತಿಭೆ. ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಹುಟ್ಟೂರು. ಇಡೀ ಊರಿಗೆ ಊರೇ ತಿನ್ನಾಳಕಲೆಗೆ ಅರ್ಪಿತಗೊಂಡಿರುವುದು ವಿಶೇಷ. ತಲೆತಲಾಂತರದಿಂದ ಕಿನ್ನಾಳ ಕಲೆಯೆ ಕುಲಕಸುಬು. ಸಣ್ಣರಂಗಪ್ಪಗೆ ಅಪ್ಪನೇ ಕಲಾಗುರು. ಬದುಕಿಗಾಗಿ ಕಲಿತ ಕಲೆಯಿಂದಲೇ ಹೊಟ್ಟೆಪಾಡು. ಕಿನ್ನಾಳ ಆಟಿಕೆಗಳು ಮತ್ತು ಧಾರ್ಮಿಕ ವಿಗ್ರಹಗಳನ್ನು ತಯಾರಿಸುವುದೇ ನಿತ್ಯದ ಕಾಯಕ, ತರಹೇವಾರಿ ವಸ್ತುಗಳನ್ನು ತಯಾರಿಸಿ ಕಣ್ಣಿಗೆ ಹಬ್ಬವೆಂಬಂತೆ ತೋರ್ಗಾಣಿಸುವಲ್ಲಿ ಸಣ್ಣರಂಗಪ್ಪ ಎತ್ತಿದ ಕೈ. ಈ ಕಲಾಕಾರನ ಮೋಡಿಗೆ ತಲೆದೂಗದವರೇ ಇಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ದಶಕಗಳಿಂದಲೂ ಕಿನ್ನಾಳ ಕಲೆಯಲ್ಲಿ ಅನವರತ ನಿರತದ ಮಹತ್ಸಾಧನೆ. ಈ ನಿಸ್ಪೃಹ ಕಲಾಸೇವೆಗೆ ಸಂದ ಗೌರವಗಳು-ಪ್ರಶಸ್ತಿಗಳು ಬಲು ಅಲ್ಪವೇ. ಸದ್ಯ ನೇತ್ರದೋಷದಿಂದ ಆಟಿಕೆ ತಯಾರಿಸಲಾಗದ ಸಂಕಟದಲ್ಲಿ ಕಾಲಕಳೆಯುತ್ತಿರುವ, ಕಣ್ಣಿಗಿಂತಲೂ ಕಿನ್ನಾಳಕಲೆ ದೀರ್ಘಕಾಲ ಬಾಳಲೆಂಬುದೇ ಹಾರೈಸುವ ಸಣ್ಣರಂಗಪ್ಪ ಕಲೆಗೆ ಸಮರ್ಪಿತಗೊಂಡ ಜೀವಿ.