Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಯುವವಾಹಿನಿ (ಸಂಸ್ಥೆ)

ಬಿಲ್ಲವ ಸಮುದಾಯದ ಯುವಕರ ಅಭ್ಯುದಯಕ್ಕಾಗಿ ಕ್ರಿಯಾಶೀಲವಾಗಿರುವ ಸಂಸ್ಥೆ ಯುವವಾಹಿನಿ, ಶಿಕ್ಷಣ, ಕಲೆ, ಸಂಸ್ಕೃತಿ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ವಿಸ್ತಾರಗೊಂಡು ಕಾರ್ಯಚಲಿಸುತ್ತಿರುವ ಯುವಕರ ಪಡೆ. ಬಿಲ್ಲವ ಸಮುದಾಯದ ಯುವಕರು ಒಗ್ಗೂಡಿ ೧೯೮೭ರಲ್ಲಿ ಸ್ಥಾಪಿಸಿದ ಸಂಸ್ಥೆ ಯುವವಾಹಿನಿ. ಸಮಾವೇಶದ ಮೂಲಕ ಲೋಕಾರ್ಪಣೆಗೊಂಡ ಸಂಸ್ಥೆ ಬಿಲ್ಲವ ಜನಾಂಗದ ಯುವಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶೈಕ್ಷಣಿಕ ವೆಚ್ಚ ಭರಿಸುತ್ತಿದೆ. ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಕ್ಕೆ ಇಂಬು ನೀಡುತ್ತಿದೆ. ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡಾಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಇರುವ ಸಮುದಾಯದ ಯುವಕರ ಸಂಘಟನೆ, ವಿದ್ಯಾನಿಧಿ ಟ್ರಸ್ಟ್‌ ಮೂಲಕ ೨೪೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಕೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ, ಸೂರು ಇಲ್ಲದವರಿಗಾಗಿ ಗೃಹ ನಿರ್ಮಾಣ ಯೋಜನೆಯಡಿ ಮನೆಗಳ ನಿರ್ಮಾಣ, ಬಡಹೆಣ್ಣುಮಕ್ಕಳಿಗೆ ಉಚಿತ ತಾಳಿಭಾಗ್ಯ, ವಧು-ವರಾನ್ವೇಷಣೆಗೆ ನೆರವು, ಕೋವಿಡ್ ಸಂದರ್ಭದಲ್ಲಿ ಅರ್ಹ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ, ಆಸ್ಪತ್ರೆಯಲ್ಲಿದ್ದ ಕಾರ್ಮಿಕರಿಗೆ ಒಂದು ತಿಂಗಳವರೆಗೆ ಉಚಿತ ಆಹಾರ ವಿತರಣೆ, ಪ್ರತಿವರ್ಷ ಕೆಸರುಗದ್ದೆ ಕ್ರೀಡಾಕೂಟ, ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮುಂತಾದ ಹಲವು ಬಗೆಯ ಸಮುದಾಯದ ಹಿತರಕ್ಷಣಾ ಚಟುವಟಿಕೆಗಳಲ್ಲಿ ಯುವವಾಹಿನಿ ನಿರತವಾಗಿದೆ. ಬರೋಬ್ಬರಿ ೩೫ ಘಟಕಗಳನ್ನು ಹೊಂದಿರುವ ಸಂಸ್ಥೆ ಅಧ್ಯಕ್ಷರಾದಿಯಾಗಿ ಎಲ್ಲರ ಅಧಿಕಾರವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ಅಧಿಕಾರದ ವಿಕೇಂದ್ರೀಕರಣ ವ್ಯವಸ್ಥೆಗೆ ಇಂಬು ಕೊಟ್ಟಿದೆ. ಯುವಕರ ಕಲ್ಯಾಣಕ್ಕೆ ದುಡಿಯುತ್ತಿರುವ ಯುವವಾಹಿನಿ ಮಾದರಿ ಸೇವಾಸಂಸ್ಥೆ.