Categories
ಕನ್ನಡ

ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಅಧ್ಯಕ್ಷರ ಮಾತು

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಹಲವಾರು ಯೋಜನೆಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಅನುಪಮ ಸೇವೆಗೈದ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಮಹತ್ವಪೂರ್ಣ ಕೆಲಸವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೭೮ರಲ್ಲಿ ಪುನರ್ ರಚಿತಗೊಂಡು ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅಕಾಡೆಮಿಯು ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ. ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಪ್ರಕಾರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ೧೯೭೮ರಲ್ಲಿ ಅಕಾಡೆಮಿ ಪುನರ್ ರಚಿತಗೊಳ್ಳುವ ಮುಂಚೆ ೧೯೫೯ರಲ್ಲಿ ಮೈಸೂರು ರಾಜ್ಯ ಸಂಗೀತ ನಾಟಕ ಮತ್ತು ಅಕಾಡೆಮಿ ಎಂಬ ಅಭಿದಾನದಲ್ಲಿ ಕೆಲಸ ಮಾಡುತ್ತಿತ್ತು. ಆಗ ಈ ಅಕಾಡೆಮಿಯ ವ್ಯಾಪ್ತಿಗೆ ನಾಟಕ ಜಾನಪದ ಪ್ರಕಾರಗಳು ಸೇರಿದ್ದವು.

ಅಕಾಡೆಮಿಯಿಂದ ಪ್ರಶಸ್ತಿ ಪಡೆದ ಕಲಾವಿದರ ಮಾಹಿತಿಯನ್ನು ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಈ ಹಿಂದೆ ಪಂ.ಆರ್. ವಿ. ಶೇಷಾದ್ರಿಗವಾಯಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಲಾಗಿತ್ತಾದರೂ ಅದೇಕೊ ಪುಸ್ತಕ ಬೆಳಕು ಕಾಣಲಿಲ್ಲ. ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಪಂ. ರಾಜಶೇಖರ ಮನ್ಸೂರ ಅವರು ಮತ್ತೆ ಈ ಪ್ರಯತ್ನಕ್ಕೆ ಕೈಹಾಕಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪುಸ್ತಕ ಪ್ರಕಟಿಸುವ ಕೆಲಸ ಕೈಗೆತ್ತಿಕೊಂಡರು. ಸುಮಾರು ೫೦ ವರ್ಷಗಳ ಕಾಲಾವಧಿಯ ಅಂತರ ಜರುಗುರಿವುದರಿಂದ ಪ್ರಶಸ್ತಿ ಪಡೆದ ಕಲಾವಿದರ ಮಾಹಿತಿಗಳನ್ನು ಸಂಗ್ರಹಿಸುವುದೇ ಒಂದು ದೊಡ್ಡ ಕೆಲಸ. ಅದನ್ನು ಅಕಾಡೆಮಿಯ ರಿಜಿಸ್ಟ್ರಾರ್ರಾದ ಶ್ರೀ ಬಲವಂತರಾವ್ಪಾಟೀಲ ಅವರು ಮತ್ತು ಅಕಾಡೆಮಿಯ ಸಿಬ್ಬಂದಿಯವರು ಕಷ್ಟಪಟ್ಟು ಮಾಹಿತಿ ಸಂಗ್ರಹದ ಕೆಲಸವನ್ನು ಮಾಡಿದ್ದಾರೆ.

ಅಕಾಡೆಮಿಯಲ್ಲಿ ಲಭ್ಯವಿದ್ದ ಕಲಾವಿದರ ಪರಿಚಯವನ್ನು ಆಧಾರವಾಗಿಟ್ಟುಕೊಂಡು ಇವುಗಳಿಗೆ ಸೇರ್ಪಡೆ ಮಾಡಬೇಕಾದ ಕೆಲವು ಮುಖ್ಯ ಮಾಹಿತಿಯನ್ನು ಸೇರಿಸಿ ತೆಗೆಯಬಹುದಾದ ಕೆಲವು ವಿಷಯಗಳನ್ನು ಕೈಬಿಟ್ಟು ಪರಿಷ್ಕರಿಸಿ ಪರಿಚಯ ಲೇಖನಗಳನ್ನು ಸಂಪಾದಕ ಮಂಡಳಿಯ ಮಹನೀಯರುಗಳಾದ ಶ್ರೀಮತಿ ವಸಂತ ಮಾಧವಿ (ಕರ್ನಾಟಕ ಸಂಗೀತ) ಶ್ರೀ ಸಿದ್ಧರಾಮಯ್ಯ ಮಠಪತಿ (ಹಿಂದುಸ್ತಾನಿ ಸಂಗೀತ) ಶ್ರೀ ಎಸ್.ಎನ್. ಚಂದ್ರಶೇಖರ್ (ನೃತ್ಯ) ಶ್ರೀ ಎಂ.. ಜಯರಾಮರಾವ್ (ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ) ಅವರು ತುಂಬ ಶ್ರದ್ಧೆ ವಹಿಸಿ ಅಕಾಡೆಮಿಯ ಈ ಮಹತ್ವಪೂರ್ಣವಾದ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ.

ಈ ಪುಸ್ತಕವು ೧೯೫೯೬೦ ರಿಂದ ೨೦೦೭೦೮ರ ಅವಧಿಯಲ್ಲಿ ಅಕಾಡೆಮಿ ವತಿಯಿಂದ ಪ್ರಶಸ್ತಿಗೆ ಭಾಜನರಾದ ಕಲಾವಿದರ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡಿದೆ. ಈ ಪರಿಚಯದ ಜೊತೆಗೆ ಕಲಾವಿದರ ಭಾವಚಿತ್ರವು ಒಳಗೊಂಡಿರುವುದು ಇದಕ್ಕೆ ಪರಿಪೂರ್ಣತೆಯನ್ನು ತಂದುಕೊಟ್ಟಿದೆ. ಈ ಪುಸ್ತಕ ಪ್ರಕಟಣೆ ಕಾರ್ಯವು ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಪ್ರಾರಂಭವಾಗಿ ನಮ್ಮ ಅವಧಿಯಲ್ಲಿ ಈ ಪುಸ್ತಕ ಬೆಳಕು ಕಾಣುತ್ತಿದೆ. ಅಕಾಡೆಮಿಯ ಈ ಹಿಂದಿನ ಅಧ್ಯಕ್ಷರಾದ ಪಂ. ರಾಜಶೇಖರ ಮನ್ಸೂರ ಅವರಿಗೆ ಮತ್ತು ಅವರ ಸದಸ್ಯ ಬಳಗದ ಎಲ್ಲಾ ಕಲಾವಿದರಿಗೆ ಅದರ ಶ್ರೇಯಸ್ಸು ಸಲ್ಲುತ್ತದೆ. ಇಂಥ ಮಹತ್ವಪೂರ್ಣವಾದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪುಸ್ತಕ ಪ್ರಕಟಣೆಗೆ ಕಾರಣೀಭೂತರಾದ ಪಂ. ರಾಜಶೇಖರ ಮನ್ಸೂರ ಅವರಿಗೆ ಮತ್ತು ಅವರ ಎಲ್ಲಾ ಸದಸ್ಯರಿಗೆ ಕೃತ್ಯಜ್ಞತೆಗಳನ್ನು ಸಲ್ಲಿಸುತ್ತೇನೆ. ಪರಿಷ್ಕರಣ ಕಾರ್ಯವನ್ನು ಮಾಡಿ ಈ ಪುಸ್ತಕ ಹೊರಬರಲು ಶ್ರದ್ಧೆಯಿಂದ ಕೆಲಸ ಮಾಡಿರುವ ಸಂಪಾದಕ ಮಂಡಳಿಯ ಎಲ್ಲರೂ ಅಭಿನಂದನಾರ್ಹರು . ಅಕಾಡೆಮಿಯ ರಿಜಿಸ್ಟ್ರಾರ್ ಮತ್ತು ಸಿಬ್ಬಂದಿಯವರಿಗೂ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಪುಸ್ತಕವನ್ನು ರಶ್ಮಿ ಪ್ರಿಂಟರ್ಸ್ನವರು ಬಹು ಸುಂದರವಾಗಿ ಮುದ್ರಿಸಿಕೊಟ್ಟಿರುತ್ತಾರೆ. ರಶ್ಮಿ ಪ್ರಿಂಟರ್ಸ್‌‌ನ ಮಾಲೀಕರಾದ ಶ್ರೀ ಎಂ. ರಾಮಕೃಷ್ಣ ಮತ್ತು ಅವರ ಮಕ್ಕಳು ಅನಿಲ್, ನಂದಾ ಹಾಗೂ ಸಿಬ್ಬಂದಿ ವರ್ಗದವರಿಗೆ ಅಕಾಡೆಮಿಯ ಕೃತಜ್ಞತೆಗಳು.

ನಾಡಿನ ಕಲಾವಿದರು, ಕಲಾಸಕ್ತರು ಸಹೃದಯ ಬಂಧುಗಳು ಈ ಪುಸ್ತಕದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇನೆ. ಇದರಿಂದ ಕಿಂಚಿತ್ತಾದರೂ ಉಪಯೋಗವಾದರೆ ನಮ್ಮ ಈ ಕಾರ್ಯ ಸಾರ್ಥಕವೆಂದು ಭಾವಿಸುತ್ತೇನೆ.

ಡಾ. ಪಂಡಿತ್ನರಸಿಂಹಲು ವಡವಾಟಿ