• ಕಾರಂತರೇ, ನಿಮ್ಮ ಆಸಕ್ತಿಗಳು ಹಲವಾರು. ವಿಜ್ಞಾನ, ರಾಜಕೀಯ, ಸಾಹಿತ್ಯ, ಮಕ್ಕಳ ಶಿಕ್ಷಣ, ಯಕ್ಷಗಾನ, ಚಿತ್ರಕಲೆಹೀಗೆ ಹಲವಾರು ವಿಷಯಗಳಲ್ಲಿ ಆಸಕ್ತರಾದ ನಿಮ್ಮನ್ನು ಬರೀ ಸಾಹಿತ್ಯದ ಬಗ್ಗೆ ಪ್ರಶ್ನೆ ಕೇಳೋದು ಸರಿಯಲ್ಲ. ಅಂತ ನನಗೆ ಅನ್ನಿಸುತ್ತೆ. ಅದೂ ಅಲ್ಲದೆ ನೀವು ಸುಮಾರು ಹದಿನೆಂಟು ತಿಂಗಳಲ್ಲಿ ಎಮರ್ಜೆನ್ಸಿ ಕಾಲದಲ್ಲಿ ವಹಿಸಿದ ಸಕ್ರಿಯ ಪಾತ್ರ ಎಲ್ಲರಿಗೂ ತಿಳಿದದ್ದೆ. ಈಗ ನಿಮಗೆ ನಮ್ಮ ದೇಶದ ಸ್ಥಿತಿ ಆಶಾದಾಯಕ ಅಂತ ಅನ್ನಿಸುತ್ತದೆಯೋ?

ಬಂದ ಆಪತ್ತು ತೊಲಗಿತು ಅಂತ ಅನ್ನಿಸುತ್ತೆ. ಆಶಾದಾಯಕ ಆಗಬೇಕಾದ್ರೆ, ದೇಶದಲ್ಲಿ ಒಂದು ಶುಚಿಯಾದ ಸರ್ಕಾರ ಬಂದು, ಈ ದೇಶದ ಸಮಸ್ಯೆಗಳ ಬಗ್ಗೆ ಸರಿಯಾದ ಯೋಜನೆ ಮಾಡಿ, ಆ ಯೋಜನೆಗಳನ್ನು ಆ ಸರ್ಕಾರ ನಿರ್ವಹಿಸುವಂಥ ಅವಧಿಯನ್ನು ನೋಡಿದ ಮೇಲೆ ಹೇಳಬಹುದಾಗುತ್ಯೇ ಹೊರತು ಅದಕ್ಕೆ ಮೊದಲು ಅಲ್ಲ. ಯಾಕೆಂದರೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂದಾಗ ಅದೇ ಭಾವನೆ ನನ್ನ ಮನಸ್ಸಿನಲ್ಲಿ ಇತ್ತು, ಆಶಾದಾಯಕವಾಗೇ ಇತ್ತು. ಆದರೆ ಮುಂದೆ ಕ್ರಮೇಣ ಅದು ಕುಂಟುತ್ತಾ ಬಂತು.

 • ಪ್ರಶ್ನೆ ಕೇಳೋದರಲ್ಲಿ ನನಗಿರೋ ಆಸಕ್ತಿ ಏನು ಅಂದ್ರೆ ನೀವು ಕಾದಂಬರಿಕಾರರಾಗಿರೋದಕ್ಕೂ ದೇಶದಲ್ಲಿ ಪ್ರಜಾತಂತ್ರ ಅತ್ಯಂತ ಅಗತ್ಯ ಅಂತ ನಿಮಗೆ ಅನ್ನಿಸೋದಕ್ಕೂ ಏನು ಸಂಬಂಧ ಇರಬಹುದು?

ನಾನು ಕಾದಂಬರಿಕಾರ ಅಂದ ಕೂಡ್ಲೇ ಒಂದು ಬೇರೆ ಜಾತಿಗೆ ಸೇರೋದಿಲ್ಲ. ಬರಹಗಾರ ಅಂತ ತಕ್ಕೊಂಡ್ರೆ ಆಗಬಹುದು. ಬರಹಗಾರ ದೇಶದಲ್ಲೇ ಬದುಕೋ ಒಬ್ಬ ವ್ಯಕ್ತಿ. ಆ ಬದುಕೇ ನನ್ನ ಅನುಭವದ ಸಾಮಗ್ರಿ. ಅದರ ಮೇಲೆ ಆಗೋ ಪರಿಣಾಮ ನನ್ನ ಮೇಲೆ ಆಗುತ್ತೆ. ಅದರ ಸುಖ-ದುಃಖ, ಎಲ್ಲ ನನ್ನನ್ನ ಬಾಧಿಸುತ್ತೆ. ಆದ್ದರಿಂದ ಆ ಸುಖ-ದುಃಖಕ್ಕೆ ಸಂಬಂಧ ಪಟ್ಟ ಸಾಹಿತ್ಯವನ್ನೇ ನಾನು ಸೃಷ್ಟಿಸೋನಾದದ್ದರಿಂದ ಮೂಲಭೂತವಾಗಿ ಅದಕ್ಕೇನು ಬೇಕೋ ಅದು ನನಗೂ ಬೇಕು. ಅದಕ್ಕೆ ಬಂದ ವಿಪತ್ತು ನನ್ನ ಪಾಲಿಗೂ ವಿಪತ್ತು. ನಾನು ಅದರಿಂದ ಹೊರಗುಳಿದು ಯಾವ ಸೃಷ್ಟಿಯನ್ನೂ ಮಾಡಲಿಕ್ಕೆ ಸಾಧ್ಯವಿಲ್ಲ.

 • ಆದರೆ ಸಾರ್, ಈಗ ನಮ್ಮಲ್ಲಿ ಚಿತ್ರಕಾರರಿದ್ದಾರೆ, ಸಂಗೀತಗಾರರಿದ್ದಾರೆ. ವರ್ಗದ ಜನ, ನಮ್ಮ ದೇಶದ ಸಾಮಾಜಿಕ, ರಾಜಕೀಯ ವಿಷಯದಲ್ಲಿ ಸಾಹಿತಿಗಳು ತೋರಿಸುವ ಕಳಕಳಿಯನ್ನು ತೋರಿಸುವುದಿಲ್ಲ. ಆದ್ದರಿಂದ ಇವರು ಕೆಲಸ ಮಾಡೋ ಮಾಧ್ಯಮಕ್ಕೂ ಮತ್ತು ಆಸಕ್ತಿಗಳು ಮುಖ್ಯ ಆಗೋದಕ್ಕೂ ಏನಾದ್ರೂ ಸಂಬಂಧ ಇದೆಯೋ ಅಂತ ನನ್ನ ಪ್ರಶ್ನೆ.

ಇಲ್ಲಿ ಸ್ವಾತಂತ್ರ್ಯದ ಪ್ರಶ್ನೆ- ವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ – ಬರುವಾಗ, ಇತರ ಮಾಧ್ಯಮಗಳಿಗೂ ಇದಕ್ಕೂ ಸಂಬಂಧ ಬರೋದು ಸಾಧ್ಯವಿದೆ. ಅಲ್ಲಿ ವಿಚಾರಕ್ಕೆ ಸಂಬಂಧಪಟ್ಟಂಥ ವಿಷಯಗಳನ್ನ ನಿವು ಹೇಳೋದಿಲ್ಲ. ಭಾವನೆಗಳಿಗೆ ಸಂಬಂಧಪಟ್ಟಂಥ ವಿಷಯಗಳನ್ನು ಮಾತ್ರ ಹೇಳ್ತೀರಿ – ಚಿತ್ರಕಲಾ ಮಾಧ್ಯಮದಲ್ಲಿ, ನೃತ್ಯ ಮಾಧ್ಯಮದಲ್ಲಿ. ಆದರೆ ಅದರಲ್ಲಿ ವಿಚಾರ ಸಂಬಂಧಪಟ್ಟ ಸ್ವಾತಂತ್ರ್ಯ ಹೇಳಲಿಕ್ಕೆ ಬರೋದಿಲ್ವೇ ಅಂತ ಪ್ರಶ್ನೆ ಬಂದಾಗ, ಒಂದು ಸಂಪ್ರದಾಯ ಒಬ್ಬ ಚಿತ್ರಗಾರನನ್ನ ಒಂದು ಕಟ್ಟಿಗೆ ಸಳೆದ ಕಾಲದಲ್ಲಿ ಹೆಜ್ಜೆ ಹೆಜ್ಜೆಗೂ – ಫ್ರಾನ್ಸ್‌ನಲ್ಲಿ ಆ ಕಟ್ಟನ್ನು ಹರಿದು ತಾನು ತನಗೆ ಅನಿಸಿದ್ದನ್ನು ಹೇಳಬೇಕು ಎನ್ನುವಂಥ ಸ್ವಾತಂತ್ರ್ಯದ ಪ್ರಶ್ನೆ ಬಂದಿದೆ. ಬೇರೆ ಕಡೆ ಉಳಿದವರಿಗೆ ಅದು ಜೀವನವನ್ನು ಮಿತಗೊಳಿಸುವ ಅಥವಾ ವಾಕ್ ಸ್ವಾತಂತ್ರ್ಯವನ್ನು ಕಟ್ಟಿಹಾಕುವ, ಅಪಹರಿಸುವ ಪ್ರಶ್ನೆಗಳ ರೂಪದಲ್ಲಿ ಕಾಣದಿದ್ದರೂ ಕೂಡ ತನ್ನ ಬದುಕಿನ ದೃಷ್ಟಿಯನ್ನು, ತನ್ನ ಕಲಾಮಾಧ್ಯಮದ ದೃಷ್ಟಿಯನ್ನು ಕಟ್ಟಿಹಾಕುವ ಬಂಧನವಾಗಿ ಕಾಣುತ್ತೆ. ಅದಕ್ಕೆ ಅವರೂ ಹೋರಾಡಿದ್ದಾರೆ.

 • ಹೌದು, ಪಿಕಾಸೋ ಉದಾಹರಣೆಗೆ

ಪಿಕಾಸೋ ಮಾತ್ರ ಅಲ್ಲ, ರಿನೇಸಾನ್ಸ್ ಕಾಲದಿಂದ ಆದಂಥ ಎಲ್ಲಾ ವ್ಯತ್ಯಾಸಗಳೂ ಇಂಥ ಹೋರಾಟದ ಕಥೆಯೇ ಆಗಿದೆ; ಅಂದರೆ- ನಮ್ಮ ನೋಟವನ್ನು ಇಂದಿನ ಪರಂಪರೆಗಿಂತ ಭಿನ್ನವಾಗಿ ಹೊಂದಿಸಿಕೊಂಡು ಹೋಗತಕ್ಕಂಥ ವ್ಯಕ್ತಿಗಳಿಗೆ ಬಂದಂಥ ಅಡಚಣೆ-ಸಂಪ್ರದಾಯವನ್ನು ಮೀರಲೇಬೇಕಾದಂಥ ಅಡಚಣೆ-ಅದಕ್ಕೆ ಜನ ಕೊಡದಿದ್ದ ಮನ್ನಣೆ-ಅದನ್ನ ಧಿಕ್ಕರಿಸಿದಂಥ ಬಾಳು, ಹೀಗೆ ವಿಚಾರವೇ ಪ್ರಧಾನವಾದಂಥ ಮಾತುಗಾರಿಕೆಯಲ್ಲಿ-ಅಂದರೆ ಬರಹದಲ್ಲಿ – ಅದಕ್ಕೆ ಸಂಬಂಧಪಟ್ಟಂಥ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಹಿನ್ನೆಲೆ ತೋರಿಸುವಾಗ ಬೇಕಾಗುವ ಒತ್ತಡ, ಸ್ವಾತಂತ್ರ್ಯಗಳ ಅವಶ್ಯಕತೆಯಿಂದಾಗಿ ಚಿತ್ರಕ್ಕೂ ಬರಹಕ್ಕೂ ರೂಪಭೇದ ಕಾಣುತ್ತೆ – ಆಯಾಯಾ ಮಾಧ್ಯಮದ ಮಿತಿಯಿಂದಾಗಿ. ಕೇವಲ ಭಾವನಾಲೋಕದ ಮಾಧ್ಯಮ ಅದಾಗಬಹುದು. ಇದು ವಿಚಾರ ಮತ್ತು ಬದುಕಿನ ಯಾವ ರೂಪವನ್ನೂ ಹಿಡಿಯತಕ್ಕಂಥ ಮಾಧ್ಯಮವಾಗುತ್ತೆ, ಒಬ್ಬ ಶಿಲ್ಪಿಗೂ ಕೂಡ. ಉದಾಹರಣೆಗೆ ಒಬ್ಬ ಸ್ಲೇವ್ -‘Tearing of Bondage’ಗೆ ವಸ್ತುವಾಗಿದ್ದು ಕಾಣಬಹುದು – ರೋಡಿನ್‌ಗೆ. ಜನಸಾಮಾನ್ಯರಿಗೆ ಅದನ್ನು ನೋಡಿದ ಕೂಡಲೇ ಸಾಮಾನ್ಯ ವಿಷಯ ಅನ್ನಿಸಬಹುದು. – ಆದರೆ ನಾವು ದೊಡ್ಡ ಬರವಣಿಗೆಯಲ್ಲಿ ಹೇಳಬಹುದಾದಷ್ಟೇ ಸ್ಪಂದನವನ್ನು ಆ ಶಿಲ್ಪ, ಆ ವಿಷಯದಲ್ಲಿ ಭಾವನೆ ತಳೆದ ಒಬ್ಬ ಶಿಲ್ಪಿಗೆ, ಆ ಶಿಲ್ಪದಿಂದ ಪರಿಣಾಮಗೊಳ್ಳುವ ಮನಸ್ಸುಳ್ಳಂಥ ವ್ಯಕ್ತಿಗಳಿಗೆ ಉಂಟುಮಾಡುತ್ತೆ.

 • ಆದರೆ ಸರ್, ನಮ್ಮಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆ ಹೀಗೆ ಯೂರೋಪ್‌ನಲ್ಲಿ ಆದ ಹಾಗೆಹೆಚ್ಚು ವಿಷಯಗಳನ್ನು ಒಳಗೊಳ್ಳುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದಲೇ ನಮ್ಮ ಚಿತ್ರ ಶಿಲ್ಪ ಕಲಾವಿದರು ಅಲ್ಲಿನವರಂತೆ ಸ್ವಾತಂತ್ರ್ಯದ ಆವಶ್ಯಕತೆಯ ಬಗ್ಗೆ ಅಷ್ಟು ಆಸಕ್ತರಾಗಲಿಲ್ಲ ಅಂತ ತಮ್ಮ ಅಭಿಪ್ರಾಯವೇ, ತಾವು ಹೇಳಿದ್ದರಲ್ಲಿ?

ಮಾಧ್ಯಮ ಏನು ಕೆಲಸ ಮಾಡಬಲ್ಲದು ಅನ್ನುವ ವಿಚಾರದಲ್ಲಿ ನಮ್ಮಲ್ಲಿ ಹೆಚ್ಚಿನ ಯಾವ ಪ್ರಯತ್ನವೂ ಆಗಿಲ್ಲ. ನಮ್ಮದೇನಾದ್ರೂ ಪ್ರಯತ್ನ ಆಗಿದ್ರೆ ಅದು ಇಷ್ಟೇ; ನಮಗೆ ಇರತಕ್ಕಂಥ ಸಂಪ್ರದಾಯ ಕೆಲವು ಕಾಲ ಉಳಿದಿರುತ್ತೆ – ದೀರ್ಘ ಕಾಲ ಅದನ್ನು ಬೆಳೆಸಿಕೊಂಡು ಹೋಗ್ತೇವೆ – ಇನ್ನೊಂದು ಯಾವುದೋ ಜನ ಬಂದ್ರು ಅನ್ನಿ – ಅವರದನ್ನ ನೋಡಿಕೊಂಡು, ಅದು ಚೆಂದ ಅನ್ನಿಸಿ ಅದನ್ನ ಸೇರಿಸ್ಕೊಂಡಿರಬಹುದು. ಈಗ ನಮ್ಮ ದೇಶೀಯ ರಾಜ್‌ಪುತ್ ಚಿತ್ರಕಲೆಯ ಮೇಲೆ – ಖಿಲ್ಜಿ ಅರಸರು ಬಂದ ಮೇಲೆ – ಪರ್ಶಿಯನ್ ಚಿತ್ರ ಚಿತ್ರಕಲೆಯ ಪ್ರಭಾವ ಬಿತ್ತು. ಅಂದರೆ ಚೆಂದ, ಪ್ರಭಾವ ನೋಡ್ಕೊಂಡು ನಾವು ಹಿಂಬಾಲಿಸಿದ್ದೇವೆಯೇ ಹೊರತು ನಮ್ಮ ಮನಸ್ಸಿನ ಭಾವನೆಗಳನ್ನು ತೋಡಿಕೊಳ್ಳುವುದಕ್ಕೆ ಈ ಒಂದು ಮಾಧ್ಯಮ ಏನು ಮಾಡಬಲ್ಲದು, ಈ ಮಾಧ್ಯಮದಲ್ಲಿ ಏನಿದೆ, ಯಾವ ಯಾವ ವಸ್ತುಗಳಿಂದ ಇದನ್ನು ತೋರಿಸಬಹುದು ಎನ್ನುವ ಅವಶ್ಯಕತೆ ಕಂಡು, ಅದನ್ನ ಸಾಧಿಸಲು ಹೊರಟಂಥ ವ್ಯಕ್ತಿಗಳ ಸಂಖ್ಯೆ ಕಡಿಮೆ, (ಇತಿಹಾಸ ಏನೋ ಸಿಕ್ಕೋದಿಲ್ಲ) – ಪ್ರಯೋಗದ ದೃಷ್ಟಿಯಿಂದ – ಹೊರಗೆ ಆದಂಥ ಪ್ರಯೋಗಗಳನ್ನು ನೋಡುವಾಗ – ನಮ್ಮಲ್ಲಿ ಏನೂ ಪ್ರಯೋಗವೇ ಆಗಿಲ್ಲ ಅಂತ ಹೇಳಬಹುದಾಗುತ್ತೆ. ಒಂದು ಥರದ ಮಾಧ್ಯಮ ಬೇಸರ ಬಂತು, ಅದಕ್ಕೋಸ್ಕರ ಇನ್ನೇನನ್ನೋ ಮಾಡ್ಕೊಂಡು ಹೋದೆ ಅನ್ನೋ ರೀತೀನೆ ಯಾವತ್ತೂ, ಆ ಒಂದು ಧಾರ್ಷ್ಟ್ಯ ಇಂದಿನ ಸಂಪ್ರದಾಯಕ್ಕಾಗ್ಲೀ ಮಾಧ್ಯಮದ ಪಾಸಿಬಿಲಿಟಿಗಾಗ್ಲೀ ಇಲ್ಲಿ ಬೆಳೆದು ಬಂದ ಹಾಗೆ ನನಗೆ ಅನ್ನಿಸೋದಿಲ್ಲ.

 • ಸರ್‌, ನನ್ನ ದೃಷ್ಟಿಯಲ್ಲಿ ನೀವು ಯುರೋಪ್‌ನ ಈಗಿನ ಯಾವ ದೊಡ್ಡ ಲೇಖಕನಿಗೂ ಕಡಿಮೆ ಅಲ್ಲ.

ಅದ್ಯಾರಿಗೆ ಗೊತ್ತು! (ನಗು).

 • ನಿಮಗೆ ಯಕ್ಷಗಾನದಲ್ಲಿ ತುಂಬ ಆಸಕ್ತಿ ಇದೆ. ಯಕ್ಷಗಾನ ಸಾಮಾನ್ಯವಾಗಿ ನಮ್ಮ ಪುರಾಣಗಳ ಕಥೆಗಳನ್ನು ಹೇಳುತ್ತೆ. ಕಾದಂಬರಿ ಮಾಧ್ಯಮವನ್ನ ನಿಮ್ಮ ವಿಚಾರಕ್ಕೆನಿಮ್ಮ ಆಧುನಿಕ ಚಿಂತನೆಗಳಿಗೆ ಬಳಸಿಕೊಂಡಹಾಗೆ, ಯಕ್ಷಗಾನದಂಥ ಮಾಧ್ಯಮವನ್ನೂ ಬಳಸಿಕೋಬೇಕು ಅಂತ ನಿಮಗೆ ಅನ್ನಿಸಿದೆಯಾ ಸರ್? ಅಥವಾ ಹಳೆಕಥೆ, ಪುರಾಣಗಳನ್ನ ಹೇಳುವ ಮಟ್ಟಿಗೆ ಮಾತ್ರ ಅದು ಉತ್ತಮ ಮಾಧ್ಯಮ, ಹೊಸ ವಿಚಾರಗಳಿಗೆ ಉಪಯೋಗವಾಗಲಿಕ್ಕಿಲ್ಲ ಅಂತ ಅನ್ನಿಸಿದೆಯಾ?

ಇಲ್ಲಿ ಪ್ರಶ್ನೆ ಬರೋದು- ಒಂದು ಮಾಧ್ಯಮದಲ್ಲಿ ಏನೆಲ್ಲಾ ಸಾಧ್ಯತೆ ಇದೆ? ಉದಾಹರಣೆಗೆ – ಇದು ಕುಣಿತ, ಈ ಕುಣಿತ, ಇದರ ವೇಷಭೂಷಣ, ಇದರ ಸಂಗೀತ ಬೆಳೆದದ್ದು ಒಂದು ಫ್ಯಾಂಟಸಿ ಮೀಡಿಯಮ್ ಬೆಳವಣಿಗೆಗೋಸ್ಕರ, ನಾನು ಇದೇ ಕುಣಿತವನ್ನು ಇನ್ನೊಂದಕ್ಕೆ ಉಪಯೋಗಿಸಲಾರೆನೇ? ನಾನು ಉಪಯೋಗಿಸಿ, ಪ್ರಯೋಗಿಸಿ ನೋಡಿದ್ದೇನೆ. ಆಗ ಅದಕ್ಕೆ ಬೇಕಾಗುವ ಉಡುಗೆ ವಾಸ್ತವಿಕವಾಗಬಹುದು. ’ಹಗಲು ರಾತ್ರಿ’ ಅಂತ ಒಂದು ಡ್ಯಾನ್ಸ್ ಮಾಡಿದ್ದೇನೆ; ’ನದೀತರಂಗ’ ಅಂತ ಮಾಡಿದ್ದೇನೆ. ಅಲ್ಲಿ ವಿಷಯವೇ ಸಂಪೂರ್ಣವಾಗಿ ಬೇರೆ. ಅದರಿಂದ ಅದಕ್ಕೆ ಬೇಕಾದ ಆಕಾರ ಬೇರೆಯಾಗುತ್ತೆ. ಸಂಗೀತದ್ದೂ ರೂಪ ಬೇರೆಯಾಗುತ್ತೆ. ಆವಾಗ ಅದು ಯಕ್ಷಗಾನ ಆಗಲಾರದು. ಪ್ರತಿಯೊಂದು ಮಾಧ್ಯಮದ ಮೂಲಕವಾಗಿಯೂ ಯಕ್ಷಗಾನಕ್ಕೆ ಬರತಕ್ಕಂಥ ಕುಣಿತ ವೇಷಭೂಷಣ, ಸಂಗೀತ – ಮೂರರಲ್ಲಿಯೂ ’ಆ ವಸ್ತುವಿಗೂ ಇದಕ್ಕೂ ಏನು ಸಂಬಂಧ?’ ಈ ದೃಷ್ಟಿಯಿಂದಲೇ ನಾನು ಅವನ್ನ ಉಪಯೋಗಿಸ್ತೇನೆ. ಬೆಳೆದುಬಂದಂಥ ಒಂದು ಸಂಪ್ರದಾಯದಿಂದ ತಕ್ಕೊಂಡಂಥ ಮಾಧ್ಯಮ – ಯಕ್ಷಗಾನ. ಅದು ಭಾವಜೀವನಕ್ಕೆ ಸಂಬಂಧಪಟ್ಟ ಮಾಧ್ಯಮ. ಕಥೆಯೇ ಆಗಲೀ ಭಾವಜೀವನಕ್ಕೆ ಸಂಬಂಧ ಪಟ್ಟ ಮಾಧ್ಯಮ ಮಿಥೊಲಾಜಿಕಲ್ ಕಥೆಯೇ ಆಗಲೀ ಭಾವಜೀವನಕ್ಕೆ ಸಂಬಂಧಪಟ್ಟ ವಸ್ತು ಅದರಲ್ಲಿದೆ. ಅದು ಬೆಳೆದುಕೊಂಡು ಬಂದಿದೆ, ಅದನ್ನ ಹ್ಯಾಗೆ ಉಪಯೋಗಿಸಬಹುದು. ಎಷ್ಟು ಸಾಧ್ಯತೆ ಇದೆ ಅಂತ ತೋರಿಸಲಿಕ್ಕಾಗಿ ಯಾವುದೊ ಆಧುನಿಕ ಸಮಸ್ಯೆ ತೆಗೆದುಕೊಂಡೆ ಅನ್ನಿ – ಆಗ ಅದರ ಉಡುಗೆ ತೊಡುಗೆ ಬೇರೆಯಾಗುತ್ತೆ. ಈ ಸಂಗೀತ ಸಾಲದಾಗಬಹುದಾಗುತ್ತೆ: ಈ ಹೆಜ್ಜೆಯೂ ಸಾಲದಾಗಬಹುದಾಗುತ್ತೆ; ಈ ವಾದ್ಯವೂ ಕೂಡ ಸಾಲದಾಗಬಹುದೋ  ಏನೋ? ಮಾಡಲಿಕ್ಕೆ ಬರೋದಿಲ್ಲ ಅಂತ ಅಲ್ಲ ಚೂರು ಚೂರು ಪ್ರಯತ್ನ ಮಾಡಿಯೂ ನೋಡಿದ್ದೇನೆ.

 • ಅಂದರೆ ಯಕ್ಷಗಾನ ದಿಕ್ಕಿನಲ್ಲೂ ಬೆಳೀಬಹುದು ಅಂತ ಅನ್ಸುತ್ತಾ ಸಾರ್ ನಿಮಗೆ?

ನೃತ್ಯ ಮಾಧ್ಯಮ ಬೆಳೀಬಹುದು. ಯಕ್ಷಗಾನ – ಸಂಗೀತ ವಿಷಯದಲ್ಲಿ ಬೆಳೀಬಹುದೇ ಬೆಳೀಬಾರ್ದೆ ಅಂತ ಕೇಳಿದ್ರೆ, ಸಂಗೀತ ಪ್ರಬಂಧಕಾರನಾಗಿ ಮ್ಯೂಸಿಕ್‌ನಲ್ಲಿ ಸೃಷ್ಟಿ ಮಾಡಲಿಕ್ಕೆ ಕಲ್ತ ಮೇಲೆ ನಾನು ಉತ್ತರಿಸಬಲ್ಲೆನೇ ಹೊರತು ಅಲ್ಲಿವರೆಗೆ ನಾನು ಏನೂ ಹೇಳಲಾರೆ. ಹಾಗೇ ಇದು ಬೆಳೆದ ಕಾಲಕ್ಕೆ ಸಾಂಪ್ರದಾಯಕತನಗಳಾಗಲೀ ಇನ್ನೊಂದಾಗಲೀ ಅಥವಾ ಪದ್ಯದ ರೂಪಗಳಾಗಲೀ ಇದೇ ರೀತಿ ಇರಲಾರದು.

 • ನಾನು ಯಾಕೆ ಪ್ರಶ್ನೆ ಕೇಳ್ತಾ ಇದ್ದೇನೆ ಅಂದ್ರೆ. ಜನರನ್ನ ಮುಟ್ಟೋ ಮಾಧ್ಯಮ ಆಗಿರೋದ್ರಿಂದ ಯಕ್ಷಗಾನ ಬೇರೆ ಬೇರೇದನ್ನ ಹೇಳಲಿಕ್ಕೆ ಸಾಧ್ಯವಾದ್ರೆ

ಜನಾನ್ನ ಮುಟ್ಟೋ ಮಾಧ್ಯಮ ಅನ್ನೋದು ವಸ್ತುವಿನ ದೃಷ್ಟಿಯಿಂದ. ಅವ್ರಿಗೆಲ್ಲ ಈ ಕಥೆ ಗೊತ್ತಿದೆ. ನಾನು ಅದನ್ನ ಮಾತಿನಿಂದ ವಿವರಿಸಿದೆ ಇದ್ರೂಗೊತ್ತಿದ್ದ ಕಥೆ ಆದದ್ರಿಂದ ಅದರಲ್ಲಿಯ ಸುಖದುಃಖಗಳ ಅನುಭವ ಅವರಿಗೆ ಇರೋದ್ರಿಂದ ಅವರು ಅದರಲ್ಲಿ ಮುಳುಗಬಲ್ರು. ವಿಷಯವೇ ಹೊಸದಾದ ಕಾಲದಲ್ಲಿ – ಉದಾಹರಣೆಗೆ ಒಂದು ಕಾಲದಲ್ಲಿ ’ಶೀಲ ಭಂಗ’ ಅಂತ ಒಂದು ಕಥೆ ನೃತ್ಯ ಮಾಧ್ಯಮದಲ್ಲಿ ನಾನು ರೂಪಿಸಿದ ವಸ್ತು ನಿಷ್ಟೆ; ಉಳ್ಸೂರು ಸರೋವರಕ್ಕೆ ಹೋದಾಗ ನನ್ನ ಸ್ನೇಹಿತರು ಕೆಲವರು ನೈದಿಲೆ ಹೂವುಗಳನ್ನು ತಕ್ಕೊಂಡು ಬಂದ್ರು. ನಾನೂ ಸಂತೋಷವಾಗಿ ಅದನ್ನ ನೋಡಿದಾಗ ಆ ಹೂವಿನ ಶೀಲಭಂಗವಾಯ್ತು ಅನ್ನೋ ಭಾವನೆ ಬಂತು. ಅದನ್ನು ಸಾಂಕೇತಿಕವಾಗಿ ವ್ಯಕ್ತಿ ಶೀಲಭಂಗ – ಒಂದು ಹುಡುಗಿಯ ಶೀಲಭಂಗ – ಅಂತ ತಿಳ್ಕೊಂಡ ಅರ್ಥದಲ್ಲಿ ಒಂದು ನೃತ್ಯ ರೂಪಿಸಿದೆ. ಅದಕ್ಕೆ ಬೇಕಾದ ಹಾಡನ್ನು ನಾನೇ ಹೇಳ್ದೆ. ಬೇಕಾದ ಕುಣಿತ ನಾನೇ ಮಾಡ್ದೆ. ಆದರೆ ಅದನ್ನ ತಿಳ್ಕೊಳ್ಲಿಕ್ಕೆ ಬೇಕಾದಂತ ಮಾನಸಿಕ ಹಿನ್ನೆಲೆ ನನ್ನ ಜನಕ್ಕೆ ಮೊದಲು ಬೇಕಾಗುತ್ತದೆ. ನನಗೆ ಸ್ಫೂರ್ತಿ ಕೊಟ್ಟಂಥ ಹಿನ್ನೆಲೆ ಅವರಿಗೆ ಏನೇನೂ ಇಲ್ಲದೇ ಹೋದ ಕಾಲದಲ್ಲಿ, ನಾನು ಮಾಡಿದ ಪ್ರಯೋಗದಲ್ಲಿ ಆ ಭಿನ್ನತೆಯ ಹೆಜ್ಜೆಯಾಗಲಿ, ಇನ್ನೊಂದಾಗಲಿ (ನಾನು ಎಷ್ಟರ ಮಟ್ಟಿಗೆ ಸಾಧಿಸಿದೆ ಅಂತ – ನನಗೆ ನೆನಪಾಗೋದಿಲ್ಲ) ಅವರು ತಿಳಿದಂತೆ ಕಾಣಲಿಲ್ಲ. ಯಕ್ಷಗಾನ – ಇಲ್ಲಿ ಅವರಿಗೆ ಗೊತ್ತಿರುವ ಹಿನ್ನೆಲೆಯಿದೆ. ಯಾವುದೇ ಕಲೆ, ಆ ಮಾಧ್ಯಮದ ಪರಿಚಯವಿಲ್ಲದ ವ್ಯಕ್ತಿಯ ಮೇಲೆ ಯಾವ ಪರಿಣಾಮವನ್ನೂ ಉಂಟು ಮಾಡಲಾರದು. ಈ ದೃಷ್ಟಿಯಿಂದ ಯಕ್ಷಗಾನವೂ ಪರಿಚಯವಿಲ್ಲದ ಮಾಧ್ಯಮವಾದ್ರೆ ಅಷ್ಟೇ ಕಷ್ಟವಾಗಬಹುದು. ಅವರಿಗೆ – ಅರ್ಥ ಮಾಡಿಕೊಳ್ಲಿಕ್ಕೆ. ಆವಾಗ ನಾನು ಸಕ್ಸೆಸ್‌ಫುಲ್ ಹೌದೋ ಅಲ್ವೋ ಅನ್ನೋದು ನನ್ನ ಮನಸ್ಸಿನ ಸಮಾಧಾನಕ್ಕೆ ತಿಳೀಬಹುದು, ಅಷ್ಟೇ ಹೊರತು ವಿಮರ್ಶಕ ಕೂಡ ಹೇಳಲಾರ. ಯಾಕೆಂದರೆ ವಿಮರ್ಶಕನಿಗೂ ಆ ಮಾಧ್ಯಮದ ಪರಿಚಯ ಬೇಕಾಗುತ್ತೆ.

 • ಇನ್ನೊಂದು ಪ್ರಶ್ನೆ ಕೇಳೋದಕ್ಕಿಂತ ಮೊದಲು ನನಗೆ ಮಾತು ಹೇಳಲೇಬೇಕು ಅನ್ನಿಸುತ್ತೆ ಸಾರ್. ನಿಮ್ಮ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಗಿದ್ದು. ನೀವು ಪದ್ಮಭೂಷಣಬಿರುದು ಬಿಟ್ಟಾಗ. ಇದಕ್ಕೂ ನಿಮ್ಮ ಬರವಣಿಗೆಗೂ ಸಂಬಂಧ ಇದೆ. ಅಂತ ನನಗೆ ಅನ್ನಿಸುತ್ತೆ. ಯಾಕೆಂದ್ರೆ ನಮ್ಮ ಲೇಖಕರೆಲ್ಲಲ್ಲಾ, ನಿಮ್ಮ ಪೀಳಿಗೆಯಲ್ಲಿ ನೀವು ಬಹಳ ಮುಖ್ಯವಾಗಿ, ಮನಸ್ಸಿನ ಸ್ವಾತಂತ್ರ್ಯ ಮತ್ತು ಅದನ್ನು ಶುದ್ಧವಾಗಿಟ್ಟುಕೊಳ್ಳೋದು, ನಿಮಗೆ ಅನ್ನಿಸದೇ ಇರೋದನ್ನ ಹೇಳದೇ ಇರೋದು, ಪ್ರಾಮಾಣಿಕವಾಗಿರೋದು ನಿಮ್ಮ ಬರವಣಿಗೆಗೆ ಅತ್ಯಂತ ಅಗತ್ಯ ಅನ್ನೋ ಹಾಗೆ ನೀವು ನಡ್ಕೊಂಡು ಬಂದಿದ್ದೀರಿ.

ನಾನು ಬಿರುದನ್ನು ಬಿಟ್ಟದ್ದು ಒಂದು ಬಹಳ ದೊಡ್ಡ ವಿಷಯ ಅಮತ ನನಗೆ ಅನ್ನಿಸೋದಿಲ್ಲ. ಯಾಕೆಂದ್ರೆ ನಾನು ಶಾಲೆ ಬಿಟ್ಟುಕೊಂಡು ಹೋದದ್ದೇ ಈ ದೇಶದ ಪ್ರಶ್ನೆಯ ಮೇಲೆ. ನನ್ನ ತಂದೆ-ತಾಯಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೊರಟುಹೋದೆ ಆಮೇಲೆ ನನ್ನ ಬದುಕಿನಲ್ಲಿ ಸಾಂಪ್ರದಾಯಿಕ ನಂಬಿಕೆಗಳನ್ನು ಮರೆಯಲಿಕ್ಕೆ ಕಾಲ ಬಂತು – ಇನ್ನೊಬ್ಬರ ಪ್ರೇರಣೆಯಿಂದ – ಗಾಂಧೀಜಿ ಪ್ರೇರಣೆಯಿಂದ. ಮುಂದೆ ಅವರು ಹೇಳಿದ ನಂಬಿಕೆಗಳನ್ನೇ ಕಣ್ಣುಮುಚ್ಚಿ ನಂಬಿಕೊಂಡು ಕೂತಾಗ, ನನ್ನ ಜೀವನದಲ್ಲಿ, ತಿಳುವಳಿಕೆಯಲ್ಲಿ, ಅನುಭವದಲ್ಲಿ ಅವು ಸಮ್ಮತವಲ್ಲ ಅಂತ ಕಂಡುಬಂದವು. ಆವಾಗಿನಿಂದ ನಾನು ನನ್ನ ಸ್ವತಂತ್ರ ವಿಚಾರ ಶಕ್ತಿಯನ್ನೇ ಬೆಳೆಸಿಕೋತಾ ಬಂದಿದ್ದೇನೆ. ಸ್ವಾತಂತ್ರ್ಯದ ಪ್ರಶ್ನೆ ಬಂದ ಕಾಲದಲ್ಲಿ – ಈ ಆಪತ್ತು ಮೂವತ್ತು ವರ್ಷಗಳ ಮೇಲೆ ಮರುಕಳಿಸುವ ಪ್ರಸಂಗದಲ್ಲಿ – ನನಗೆ ಬದುಕು, ಆ ಒಂದು ಮೌಲ್ಯ ಏನಿದೆ, ಏನಿರಲಾರದು ಅಂತ ಅನ್ನಿಸಿತು. ಆದರೆ ನೇರವಾಗಿ ನಾನು ಇಂಥಾದ್ದು ಯಾವುದಕ್ಕಾದ್ರೂ ಧುಮುಕಬಲ್ಲೆನೇ ಅಂತ ಕೇಳಿದ್ರೆ ನನ್ನ ಇತಿಮಿತಿ ನನಗೆ ಗೊತ್ತಿದೆ. ನನ್ನ ಪ್ರಶ್ನೆ ಆವಾಗ ಉಳಿದದ್ದು – ನನ್ನ ಆತ್ಮಸಾಕ್ಷಿಗೂ ಒಂದು ತಣಿವು ಕೊಡುವಂಥಾದ್ದು ನಾನು ಮಾಡಬೇಕು. ಆ ತೃಪ್ತಿಗೋಸ್ಕರ ಹಾಗೆ ಮಾಡ್ದೆ. ಅದೊಂದು ಮಹಾಕೆಲಸ ಅಂತ ಅನ್ನಿಸಲೇ ಇಲ್ಲ ನನಗೆ. ಯಾಕೆಂದ್ರೆ ನನಗೆ ಯಾವುದು ನ್ಯಾಯ ಅಂತ ಕಾಣುತ್ತೋ ಅದು ಮಾಡತಕ್ಕದ್ದು. ಆದಷ್ಟು ಮಟ್ಟಿಗೆ ನನ್ನ ಬದುಕಿನಲ್ಲ ಪ್ರಾಮಾಣಿಕವಾಗಿ ಬದುಕಬೇಕು ಅಂತ ಎಲ್ಲ ವಿಚಾರದಲ್ಲಿಯೂ ಪ್ರಯತ್ನ ಮಾಡ್ತಾ ಬಂದದ್ರಿಂದ. ಇದೂ ಒಂದು ಅದರ ಸಾಲಿಗೆ ಸೇರಿದ ವಿಷಯವಾಯ್ತು ಅಷ್ಟೇ.

 • ಬರಹಗಾರರಾಗಿ ನಿಮಗೆ, ಒಬ್ಬ ಲೇಖಕ ಅಪ್ರಾಮಾಣಿಕವಾಗಿದ್ದೂ ಪ್ರಾಮಾಣಿಕವಾದ ಬರವಣಿಗೆ ಬರೀಲಿಕ್ಕೆ ಸಾಧ್ಯ ಅಂತ ಅನ್ಸುತ್ತಾ ಸಾರ್‌? ನಿಮಗೆ ಅನ್ಸೋದಿಲ್ಲ ಅಂತ ನನಗೆ ಅನ್ನಿಸುತ್ತೆ.

ನಾನು ಯಾರಿಗೋಸ್ಕರ ಹೇಳ್ತಿದೇನೆ ಅಂತ ಪ್ರಶ್ನೆ ಬರೋದು. ನಾನು ಇನ್ನೊಬ್ಬರಿಗೆ ಹೇಳ್ತಾ ಇದ್ದೇನೆ ಅಂತಾದ್ರೆ ನಾನು ತಯಾರಿಲ್ಲದಂಥ ಯಾವ ಉಪದೇಶವನ್ನೂ ಇನ್ನೊಬ್ಬರಿಗೆ ಹೇಳಲಿಕ್ಕೆ ತಯಾರಿಲ್ಲ. ನಾನು ಒಂದು ಸಂಗತಿಯಲ್ಲಿ ಅಪ್ರಾಮಾಣಿಕನಾದ್ರೆ ಬಾಯ್ಮುಚ್ಚಿಕೊಂಡು ಕೂತ್ಕೋಬೇಕು. ನನಗೆ ಹೇಳುವ ಅಧಿಕಾರ ಇಲ್ಲ, ಈ ದೃಷ್ಟಿ ನಂದು. ಇಲ್ಲಿ ಇನ್ನೊಂದು ದೃಷ್ಟಿಯ ನ್ನೂ ನಾನು ಹೇಳಬೇಕಾಗುತ್ತೆ. ಸಾಹಿತಿಯಾದ ನಾನು ನನ್ನ ಕಣ್ಣಿಂದ ಜಗತ್ತು ನೋಡ್ತೇನೆ, ಬರೀತೇನೆ, ಇದು ಒಂದು ತರಹದ್ದು, ಎರಡ್ನೇದು – ನನ್ನ ಪ್ರಯತ್ನದಲ್ಲಿ ನನಗಿಂತ ಭಿನ್ನಭಾವದ ಜೀವಿಗಳಿದ್ದಾರೆ, ಬದುಕ್ತಾರೆ, ಒಬ್‌ಜೆಕ್ಟಿವ್ ಆಗಿ ಅವರನ್ನ  ನೋಡಲಿಕ್ಕೆ ಪ್ರಯತ್ನ ಮಾಡ್ತೇನೆ. ಆಗ ನನ್ನ ಸ್ವಂತ ಬದುಕಿನಲ್ಲಿ ಒಪ್ಪದ ಅನೇಕ ವಿಚಾರಗಳನ್ನ ನಾನು ಅವರಲ್ಲಿ ಕಂಡೂ ಮೆಚ್ಚಬಲ್ಲೆ, ಅವರು ಪ್ರಾಮಾಣಿಕವಾಗಿದ್ದಾರೆ ಅನ್ನೋದ್ರಿಂದ. ಹಾಗಾಗಿ ಎಷ್ಟೋ ಸಾರಿ ಮುದುಕಿಯರನ್ನು ನಾನು ಕಾದಂಬರಿಯಲ್ಲಿ ತಕ್ಕೊಂಡು ಬರ್ತೀನೆ, ನನ್ನ ನಂಬಿಕೆಗಳು ಯಾವುವೂ ಅವರವಲ್ಲ. ಅವರನ್ನ ಅವರ ನಿಷ್ಠೆ ತೆಗೆದುಕೊಂಡು ಹೋಗ್ತಾ ಇದೆ. ಇದೇ ನನಗೆ ಚೆಲುವು, ನನಗೆ ಆ ನಿಷ್ಠೆ ಇಲ್ಲದೇ ಇರಬಹುದು – ಈ ದೃಷ್ಟಿ ಒಬ್‌ಜೆಕ್ಟಿವಿಟಿ ನನ್ನದು. ನಮ್ಮ ಎಕ್ಸ್‌ಪ್ರೆಶನ್‌ಗೆ ತೀವ್ರತೆ ಕೊಡಬೇಕಾದ್ರೆ, ಭಾವಾವೇಶ ಕೊಡಬೇಕಾದ್ರೆ, ಅದು ಒತ್ತಡವಾಗಿ ಹರೀಬೇಕಾದ್ರೆ, ಸಿನ್ಸಿಯಾರಿಟಿ ಬೇಕೇಬೇಕಾಗುತ್ತೆ ಅಂತ ನನಗೆ ಅನ್ನಿಸುತ್ತೆ.

 • ನನ್ನ ಮೊದಲನೇ ಪ್ರಶ್ನೆಗೆ ಇದು ಇನ್ನಷ್ಟು ಖಚಿತವಾದ ಉತ್ತರವಾಯ್ತು. ಇಲ್ಲಿ ನೀವು ಇದನ್ನು ಹೇಳುವಾಗ. ನನಗೊಂದು ಅನ್ನಿಸುತ್ತೆ ಕಾರಂತೆ; ನಮ್ಮ ಲೇಖಕರಲ್ಲೆಲ್ಲಾ ನಿಮಗೆ ಒಂದು ಡಿಫೈನ್ಡ್ ರೀಡರ್‌ಶಿಪ್ ಇದೆ ಅಂತ. ಅಂದರೆ ನಿಮ್ಮನ್ನ ಓದೋ ಒಂದಷ್ಟು ಜನ ಇದ್ದಾರೆ. ಅವರು ಎಲ್ಲಾ ವರ್ಗದಲ್ಲಿ ಇದ್ದಾರೆ. ಬಹುಶಃ ಕರ್ನಾಟಕದ ಎಲ್ಲಾ ಕಡೆ ಇದ್ದಾರೆ. ಅವ್ರು ನಿಮ್ಮಿಂದ ಏನನ್ನೋ ಅಪೇಕ್ಷಿಸುತ್ತಾರೆ ಮತ್ತು ಅವರ ಅಪೇಕ್ಷೆಯ ಮಟ್ಟವನ್ನು ನಿಮ್ಮ ಕೃತಿಗಳು ಏರಿಸ್ತಾನೂ ಹೋಗಿವೆ. ನಿಮಗೆ ಇರೋದು ಮಾಸ್ ರೀಡರ್‌ಶಿಪ್ ಅಲ್ಲಆದರೆ ಒಂದು ಡಿಫೈನ್ಡ್ ರೀಡರ್‌ಶಿಪ್ ಅಂತ, ಅದಕ್ಕೂ ನಿಮ್ಮ ಬರವಣಿಗೆಯ ಕ್ರಮಕ್ಕೂ ಸಂಬಂಧ ಇದೆಯಾ?

ಡಿಫೈನ್ಡ್ ರೀಡರ್‌ಶಿಪ್ ಅಂತ, ಅವರಿಗೂ ನನಗೂ ಸಂಬಂಧ ಬೇಕಾದ್ರೆ ಆ ಆಸಾಮಿಗಳು ಯಾರು ಅಂತ ನನಗೆ ಗೊತ್ತಿರಬೇಕು. ಪುಸ್ತಕ ಖರ್ಚಾಗುವ ಸಂಖ್ಯೆಯಲ್ಲಿ ಕೆಲವರು ಎಲ್ಲಿಯಾದ್ರೂ ಅಪರೂಪಕ್ಕೆ ಹೊಗಳಿ ಬರೆದ ಕಾಗದದಲ್ಲಿ, ಇದ್ದಾರೆ ಅಂತ ನಾನು ಊಹಿಸಬೇಕಾಗುತ್ತದೆಯೇ ಹೊರತು, ಎಲ್ಲೀವರೆಗೆ ಆ ವ್ಯಕ್ತಿಗಳು ಯಾರು ಅಂತ ನನಗೆ ಗೊತ್ತಿಲ್ಲವೋ ಅಲ್ಲೀವರೆಗೆ ನಾನು ಕೇಟರ್ ಮಾಡಲಿಕ್ಕೆ ಸಾಧ್ಯವಿದೆಯೋ?

 • ಅಂದ್ರೆ ಅಷ್ಟು ಸ್ಪಷ್ಟವಾಗಿ ಗೊತ್ತಿರಬೇಕು ಅಂತಲ್ಲ ಸಾರ್‌ ನಾನು ಹೇಳೋದು. ಯಾವ ಸೀರಿಯಸ್‌ನೆಸ್‌ನಲ್ಲಿ ಓದೋ ಒಂದು ವರ್ಗ ನಿಮಗಿದೆ ಅಂತ ನಿಮಗೆ ಗೊತ್ತು. ಅಂದರೆ ನಿಮಗೂ ಅವರಿಗೂ ನಡುವೆ ಒಂದು ಕಾಮನಗ್ ಗ್ರೌಂಡ್ ಇದೆ ಅಂತ.

ಆ ಸೀರಿಯಸ್‌ನೆಸ್ ಇದ್ದಾತನಿಗೆ ಮೆಚ್ಚುಗೆಯಾಗಬಹುದು. ಅಲ್ಲಿಯೂ ಕೂಡ ಕೆಲವು ಬಾರಿ ಪರಿಚಿತವಾದ ಒಬ್ಬರು – ಇಬ್ಬರು ಸ್ನೇಹಿತರು ಸಿಗ್ತಾರೆ, ಈಗ ನಾನು ಮೂಕಜ್ಜಿಯ ಕನಸುಗಳು ಬರ್ದಿದ್ದೇನೆ. ನನ್ನ ಸ್ನೇಹಿತ್ರ ಹತ್ತಿರ ಕಳಿಸ್ಕೊಡ್ತೇನೆ. ಆಗ ಅವರು ಒಂದೊಂದು ಸಾರಿ ’ಹೀಗಲ್ಲಪ್ಪಾ, ಅಯ್ಯೋ, ಅಯ್ಯೋ ಹೀಗೆ ಬರೆದುಬಿಟ್ಟಿದ್ದೀರಲ್ಲ’ ಅಂತ ನನ್ನ ಹತ್ತಿರ ಗೊಣಗಿದ್ದೂ ಇದೆ. ಆದದ್ರಿಂದ ಅವರೂ ಕೂಡ ಕೆಲವೊಮ್ಮೆ ಅಪ್ಸೆಟ್ ಆಗ್ತಾರೆ. ಅಂದ್ರೆ ಬೇರೆ ಬೇರೆ ವಿಷಯಕ್ಕೆ ಸಂಬಂಧಪಟ್ಟು ಬರೆಯುವಾಗ, ಅದರಲ್ಲಿಯೂ ಲೈಂಗಿಕ ಪ್ರಶ್ನೆಗಳಿಗೆ ಸಂಬಂಧಪಟ್ಟ ಹಾಗೆ ಅಥವಾ ಮತೀಯ ಭಾವನೆಗಳಿಗೆ ಸಂಬಂಧಪಟ್ಟ ಹಾಗೆ, ಕೆಲವು ಸಾರಿ ಅವರು ಆರಾಧಿಸುವ ದೇವತೆಗಳನ್ನು ನಾನು ಸುಲಭವಾಗಿ ತಳ್ಳಿ ಕೆಳಗೆ ಒತ್ತಿಹಾಕುವಂಥ ಸಂದರ್ಭ ಬಂದ ಕೂಡಲೇ, ಅವರೂ ಕಷ್ಟಕ್ಕೆ ಗುರಿಯಾಗುತ್ತಾರೆ. ಆದರೆ ಒಟ್ಟಿಗೆ ಅವರು ನನ್ನ ಮೇಲೆ ಇರಿಸಿಕೊಂಡ ಪ್ರೀತಿಯಿಂದ ’ಈತ ಉದ್ದೇಸದಿಂದ ಹೀಗೆ ಮಾಡತಕ್ಕದ್ದಲ್ಲ, ಇವನ ಮನಸ್ಸಿನ ಅನ್ನಿಸಿಕೆಗಳ ದೆಸೆಯಿಂದ ಹಾಗೆ ಮಾಡ್ತಾನೆ’ ಅಂತ ರಿಯಾಯಿತಿ ತೋರಿಸಿದ್ದಾರೆ, ಅಷ್ಟೇ (ನಗು)

 • ಆದರೆ ಲೈಂಗಿಕ ಪ್ರಶ್ನೆಗಳು ಅಂತ ಅಂದ್ರಲ್ಲ ಸಾರ್, ನಿಮ್ಮ ಸಮಾಧಿಯಲ್ಲೇ, ಬಗ್ಗೆ ನಿಮ್ಮ ಆಸಕ್ತಿ ಪ್ರಾರಂಭ ಆಗ್ತದೆ. ಆಗಿನ ಕಾಲದಲ್ಲಿ ಸರಸಮ್ಮನ ಸಮಾಧಿ ಬರೆದಾಗ ಬಹಳ ಜನರಿಗೆ ಶಾಕಾಗಿರಬಹುದು, ನಿಮ್ಮನ್ನು ಓದುವಂಥವ್ರಿಗೆ.

ಆ ಬಗ್ಗೆ ಯಾರೂ ಹೆಚ್ಚು ಪ್ರಶ್ನೆ ನನ್ನನ್ನೇ ಕಾಂಟ್ಯಾಕ್ಟ್ ಮಾಡಿ ಕೇಳಿದವರಿಲ್ಲ. ಅದನ್ನ ಬರೆದ ಕಾಲದಲ್ಲಿ. ಆದರೆ ನನಗೆ ಮೊರಾಲಿಟಿ – ಏಮೊರಾಲಿಟಿ ಈ ಒಂದು ಪ್ರಶ್ನೆ ಉದ್ದಕ್ಕೂ ಕಾಡ್ತಿದ್ದ ವಿಷಯ. ಇದರ ಬಗ್ಗೆ ನನ್ನ ದೇಶದಲ್ಲಿ ಏನು ಎವಿಡೆನ್ಸ್ ಇದೆ, ಮ್ಯಾಲಿನೋಸ್ಕಿ, ಹ್ಯಾವ್ ಲಾಕ್ ಎಲ್ಲಿಸ್ ಇವರ ಹಾಗೆ ಏನೆಲ್ಲಾ ತಕ್ಕೊಂಡಿದ್ದಾರೆ ಎನ್ನೋದು – ಇದು ನನಗೆ ಆಮೇಲೆ ಬಂದಂಥ ಭಾವನೆ. ಅದು ಬಂದ ಮೇಲೆ, ಸ್ಟಡೀಸ್ ಇನ್ ಆನಿಮಲ್ ಲೈಫ್ ಬಿಹೇವಿಯರ‍್ಸ್ ಇದಕ್ಕೆ ಸಂಬಂಧಪಟ್ಟದ್ದನ್ನ ನೋಡ್ದೆ – ಇದನ್ನೆಲ್ಲಾ ತಕ್ಕೊಂಡ ಕಾಲಕ್ಕೆ ಸಾಮಾನ್ಯವಾಗಿ ನಾನು ಮನುಷ್ಯ ಒಂದು ಪ್ರಾಣಿ ಎನ್ನುವ ದೃಷ್ಟಿಯಿಂದ ತಕ್ಕೊಂಡು ನೋಡಲಿಕ್ಕೆ ಶುರುಮಾಡಿದೆ. ಕಲ್ಚರಲ್ ಬೌಂಡ್ಸ್ ಬಿಟ್ಟು ನಾನು ಯೋಚನೆ ಮಾಡಲಿಕ್ಕೆ ತೊಡಗಿದೆ. ಆದರೆ ಮನುಷ್ಯ ಮೋರ್ ಡೆವಲಪ್‌ಡ್‌ ಬುದ್ಧಿಜೀವಿ, ಮನೋದೇಹಿ ಅನ್ನೋ ದೃಷ್ಟಿಯಲ್ಲಿ ಆಮೇಲೆ ಈ ವಿಷಯ ತಕ್ಕೊಂಡೆ. ಫೈನಲೀ, ನಾನು ನನಗೆ ತೋಚಿದಂಥ ಉತ್ತರವನ್ನು ಆ ಸಮಸ್ಯೆಯನ್ನ ಯಾರ ಚಪಲಕ್ಕೂ ಅಲ್ಲದೇ ನನಗೆ ತೋಚಿದ ದೃಷ್ಟಿಯಿಂದ – ಸಂಪೂರ್ಣವಾಗಿ ಮೈ ಮನಗಳ ಸುಳಿಯಲ್ಲಿ ನಾನು ಬರೆದ, ಇದೂ ಕೂಡ ಹದಿನೈದು – ಇಪ್ಪತ್ತು ವರ್ಷಗಳ ಅನಂತರ, ನನ್ನ ಖಚಿತ ಅಭಿಪ್ರಾಯ ಮೊದಲೇ ಬೆಳೆದಿದ್ರೂ ಕೂಡ, ಇದನ್ನು ಅಗ್ಗಕ್ಕೆ ಸಮಸ್ಯೆಯಾಗಿ ನಾನು ತಕ್ಕೊಳ್ಬಾರದು, ಇದು ಜೀವನವನ್ನು ಕುಲುಕಾಡುವಂಥ ಒಂದು ಗಂಭೀರವಾದ ಸಮಸ್ಯೆ, ಏನನ್ನು ಹೇಳಬೇಕಾದ್ರೂ ತೂಕದಿಂದ ನಾನು ಹೇಳಬೇಕು ಅನ್ನುವ ಜವಾಬ್ದಾರಿ ಹೊತ್ತು ಬರೆದ ಬರವಣಿಗೆ. ಅದು ಅನೇಕರ ಮೇಲೆ ಒಳ್ಳೆ ಪರಿಣಾಮ ಬೀರಿದೆಯೋ ಅಥವಾ ಅನೇಕರ ಒಪ್ಪಿಗೆಯನ್ನು ಪಡೆದಿದೆಯೋ ಅಂತ ನಾನು ಅಷ್ಟು ಮಾತ್ರ ಕೇಳ್ತೇನೆ. ಆದ್ರೆ ಈ ತೀರ್ಮಾನಕ್ಕೆ ಅವರು ಸಿದ್ಧವೋ ಇಲ್ಲವೋ ಆ ದೃಷ್ಟಿಯನ್ನು ಅವರು ಬೆಳೆಸಿಕೊಳ್ಳಬಲ್ಲರೋ ಅದು ಬೇರೆ.

 • ನಿಮಗೆ ಬರೆಯುವಾಗ ನಿಮ್ಮ ಓದುಗರ ಭ್ರಮೆಗಳನ್ನು ಹರೀಬೇಕು ಅನ್ನೋದು ಬಹಳ ಮುಖ್ಯವಾಗಿ ಕೆಲಸ ಮಾಡುತ್ತಾ ಸಾರ್‌?

ಇದು ಇಲ್ಲವೇ ಇಲ್ಲ. ಇದು ಇದ್ದ ಕಾಲ ಒಂದಿತ್ತು. ಆರಂಭದಲ್ಲಿ ನಾವು ಸೋಶಿಯಲ್ ರಿಫಾರ್ಮರ್‌ನ ಆಟಿಟ್ಯೂಡ್ ತಕ್ಕೊಂಡಾಗ, ನಮ್ಮದೂ ಗ್ರಾಸ್ ನಂಬಿಕೆ. ಅದನ್ನೇ ಧ್ವಂಸ ಮಾಡಲಿಕ್ಕೆ ಹೊರಟಿದ್ದು. ಅದಕ್ಕಾಗಿ ಭ್ರಮೆ ಹರೀತಕ್ಕಂಥ ಒಂದು ಟೆಕ್ನಿಕ್. ಇದನ್ನ ನಾನು ವ್ಯಂಗ್ಯ ಸಾಹಿತ್ಯದಲ್ಲೇ ಮುಗಿಸ್ಕೊಂಬಿಟ್ಟಿದ್ದೇನೆ. ’ಗ್ನಾನಾ’ ಆಗ್ಲಿ. ’ದೇವದೂತರು’ ಆಗ್ಲಿ ಅಲ್ಲಿನ ಎಯಿಮ್, ಡಿಸ್ಟ್ರಕ್ಶನ್‌: ನಾಟ್ ದಿಸ್, ನಾಟ್ ದಿಸ್, ನಾಟ್ ದಿಸ್. ಅದಾದ ಮೇಲೆ ನನ್ನ ಬದುಕನ್ನ ಕಾಡತೊಡಗಿದ್ದು ನಾಟ್ ದಿಸ್ ಅಂತ. ನನಗೆ ಒಪ್ಪದ ವಿಚಾರಗಳು ಯಾವುವು, ಅವಕ್ಕೆ ಹಾಗಾದರೆ ಪಾಸಿಟಿವ್ ಇದೆಯೆ? ಇದನ್ನ ನಾನು ಮುಂದಿನ ಎಷ್ಟೋ ಕಾದಂಬರಿಗಳನ್ನು ಬರೆಯುವಾಗ ಇನ್ನೊಂದು ಮೋರ್ ಸ್ಟ್ಯಾಂಡಿಂಗ್ ವ್ಯಾಲ್ಯೂ ಮತ್ತಷ್ಟು ಬದುಕಿಗೆ ಸೊಗಸು ಕೊಡಬಹುದಾದಂಥ ಇನ್ನೊಂದು ಮೌಲ್ಯ ಇದೆಯೆ- ಅಂತ ಜೊತೆ ಜೊತೆಯಲ್ಲೇ ತೋರಿಸಲಿಕ್ಕೆ ಒದ್ದಾಡ್ತಾ ಬಂದಿದ್ದೇನೆ. ಯಾಕೆಂದ್ರೆ ಡೆಸ್ಟ್ರಾಯ್ ಮಾಡಲಿಕ್ಕೆ ಏನೂ ಕಷ್ಟ ಇಲ್ಲ. ಇನ್ನೊಬ್ಬನ ಅಭಿಪ್ರಾಯ ನಿರಾಕರಿಸ್ಲಿಕ್ಕೆ ಕಷ್ಟ ಇಲ್ಲ. ಆದರೆ ಅದರ ಸ್ಥಾನದಲ್ಲಿ ಏನಿದೆ? ಹಾಗಾದರೆ ಎಲ್ಲವೂ ಡಿಸ್ಟ್ರಕ್ವಿಬ್‌ಲ್‌ ಆದ್ರೆ ಬದುಕಬೇಕಾದ ಪ್ರಶ್ನೆಯೇ ಇಲ್ಲ. ನಾವು ಯಾಕೆ ಬದುಕ್ಲಿಕ್ಕೆ ಹಿಡೀತೇವೆ? ಯಾವುದೋ ಒಂದು ವಿಶ್ವಾಸ ಇದೆ – ಏನೋ ಒಂದು ಸೌಂದರ್ಯ ಇದೆ – ಯಾವುದೋ ಒಂದು ಇದೆ – ಅಂತ ವಿಶ್ವಾಸದಿಂದ ಬದುಕು ಪರ‍್ಸಿಸ್ಟ್ ಮಾಡಬೇಕಾದರೆ, ಆ ವ್ಯಾಲ್ಯೂ ಯಾವುದು ಅದನ್ನು ಗುರುತಿಸಿಕೊಂಡು ಜೊತೆಯಲ್ಲೇ ಇಟ್ಟುಕೊಂಡು ಹೋಗ್ತೇನೆ ನಾನು.

 • ಇಷ್ಟು ಸಹಾನುಭೂತಿ ನಿಮ್ಮೆಲ್ಲ ಕಾದಂಬರಿಗಳಲ್ಲೂ ಕಾಣುತ್ತೆ, ಆದರೆ ಸನ್ಯಾಸಿಗಳ ವಿಷಯ ಬಂದಾಗ ನೀವು ಅಂಥ ಸಹಾನುಭೂತಿ ತೋರಿದ್ದೇ ಇಲ್ಲ. ಇದಕ್ಕೇನಾದ್ರೂ ಕಾರಣ?

ಅದರಲ್ಲಿಯೂ ಕೂಡ, ಒಂದೆರಡು ಕಾದಂಬರಿ ತಕ್ಕೊಂಡಾಗ ನಿಮಗೆ ಸಹಾನುಭೂತಿ ಇದೆ. ಸನ್ಯಾಸಿಯ ಬದುಕು – ಅಲ್ಲೇ ಆರಂಭದಲ್ಲಿ ಹೊರಟ ಸನ್ಯಾಸಿಯ ಬಗ್ಗೆ ನನಗೆ ಸಹಾನುಭೂತಿ ಇದೆ. ಯಾಕೆಂದ್ರೆ ಅವನ ಆರಂಭದ ಅನ್ವೇಷಣೆ ಪ್ರಾಮಾಣಿಕವಾಗಿಯೇ ಇತ್ತು. ನನ್ನ ನಂಬಿಕೆಯಿಂದಲ್ಲ. ನನ್ನ ಆ ಸನ್ಯಾಸಕ್ಕೆ ಸಂಬಂಧಪಟ್ಟ ಅನುಭವ – ರಾಮಕೃಷ್ಣ ಪರಮಹಂಸರನ್ನು ಓದಿದ್ದರಿಂದ, ನನ್ನ ಸ್ವಂತ ಪ್ರಯತ್ನದಿಂದ ಉತ್ಪನ್ನವಾದದ್ದು, ಆಮೇಲೆ ನಾನು ಎಲ್ಲೆಲ್ಲಿ ಈ ಆಸಾಮಿಗಳನ್ನು ಕಂಡಿದ್ದೇನೋ – ನಾನು ಬದುಕಿನಿಂದ ಹೆಕ್ಕಿದವ, ಊಹೆಯಿಂದಲ್ಲ – ಅಪ್ರಾಮಾಣಿಕ ವರ್ಗವೇ ನನಗೆ ಕಂಡು ಬಂದದ್ದು. ಸನ್ಯಾಸಿ ಆಗಿರಲಿ, ಆಗಿಲ್ದೆಯೂ ಇರಲಿ, ಈಗ ನಾನು ಪ್ರಾಮಾಣಿಕವಾಗಿ ಹೇಳಬಹುದಾದ್ರೆ ಒಬ್ಬನೇ ವ್ಯಕ್ತಿಯನ್ನು ನಾನು ಕಂಡಿದ್ದೇನೆ ಸಾಧು ವಾಸ್ವಾನಿ. ಆತ ಮಿಸ್ಟಿಕ್. ಅಲ್ಲಿ, ಆತನ ಬದುಕಿನಲ್ಲಿ ಪ್ರೇಮ ಮೂರ್ತಿಮತ್ತಾಗಿ ಇದೆ ಅಂತ ಗುರ್ತಿಸಿ ಸಂತೋಷಪಟ್ಟೆ. ಅಂಥ ವ್ಯಕ್ತಿ ಆತ. ಆದರೆ ಇದರಿಂದ ಬರತಕ್ಕಂಥ ಜನಾದರಕ್ಕೆ ಮರುಳಾಗಿ, ಅದನ್ನೇ ಒಂದು ವಂಚನೆಯ ಸಾಧನೆಯಾಗಿ ಅಡ್ಡ ಹಾದಿಗಿಳಿದವರೂ ಹಾಗೆಯೇ ಇರ್ತಾರೆ. ಅದು ಸನ್ಯಾಸಕ್ಕೆ ಮಾತ್ರ ಇಲ್ಲ. ಇವತ್ತು ರಾಜಕೀಯದಲ್ಲೂ ಹಾಗೆ. ದೇಶ ಉದ್ದಾರಕ್ಕೆ ಅಂತ ಹೊರಟಿರುತ್ತಾರೆ. ಅದರಿಂದ ಅವರು ಮೇಲಕ್ಕೆ ಏರತಕ್ಕಂಥ ಸ್ಥಿತಿ ಕಂಡಹಾಗೆ ಈ ಒಳ್ಳೆಯ ವ್ಯಕ್ತಿಗಳೇ ಕೊನೆಗೆ ಇಕ್ಸ್‌ಪ್ಲಾಯಿಟರ‍್ಸ್ ಆಗ್ತಾರೆ, ಡಿಕ್ಟೇಟರ‍್ಸ್ ಆಗ್ತಾರೆ.

 • ಅಂದ್ರೆ ಸಾರ್, ಮೊದಲಿನಿಂದಲೂ ನಿಮ್ಮೆಲ್ಲ ಕೃತಿಗಳಲ್ಲೂ ಆದರ್ಶವಾದ ಬಗ್ಗೆ ನೀವು ಯೋಚನೆ ಮಾಡ್ತಾನೆ ಬಂದಿದ್ದೀರಿ. ಅದಕ್ಕೆ ಕಾರಣವೆ ನೀವು ಆದರ್ಶವಾದಿಗಳ ಹಾಗೆ.

ನಾನು ಬುಡದಿಂದ ಆದರ್ಶವಾದಿಯಾಗೇ ಹೊರಟದ್ದು. ಆ ಆದರ್ಶ ಸಾಧ್ಯವೇ ಅಲ್ಲವೇ ಅಂತ ಮುಂದೆ ಬದುಕಿನಲ್ಲಿ ಅವರ ಲಿಮಿಟೇಶನ್, ಹ್ಯೂಮನ್ ಲಿಮಿಟೇಶನ್‌ಗೂ ಅದಕ್ಕೂ ಏನು ಸಂಬಂಧ ಅಂತ ಕಂಡ ಮೇಲೆ, ಡಿಸಿಲ್ಯೂಷನ್‌ಮೆಂಟ್ ನನಗೆ ಬಂದದ್ದು ಗಾಂಧೀಜಿಯಿಂದ. ಅವರ ಆದರ್ಶ ನಂದು ಅಂತ ತಕ್ಕೊಂಡೆ. ಅದು ನಂದಲ್ಲ ಅಂತ ಆನಂತರ ಕಂಡಿತು. ಆಮೇಲೆ ಮನುಷ್ಯನ ಲಿಮಿಟೇಶನ್ ಏನು ಅಂತ ತಿಳಿಯದೆ ನಾನು ಯಾರಿಗೂ ಯಾವ ಆದರ್ಶ ಹೇಳಿ ಪ್ರಯೋಜನವಿಲ್ಲ. ಇದನ್ನು ಪುಸ್ತಕದಲ್ಲಿ ಬರೆದಿಡಬಹುದು. ಬದುಕಿನಲ್ಲಿ ಉಳಯೋದಿಲ್ಲ ಅನ್ನುವ ತೀರ್ಮಾನಕ್ಕೆ ಬಂದೆ. ಆದದ್ದರಿಂದ ಹ್ಯೂಮನ್ ಲಿಮಿಟೇಶನ್ ಏನು, ಪಾಸಿಬಿಲಿಟೀಸ್ ಏನು – ಈ ಎರಡನ್ನೂ ಇಟ್ಟುಕೊಂಡು ನಾನು ನೋಡಬೇಕಾಯ್ತು. ಇದು ಅನಿವಾರ್ಯ. ಇಲ್ಲದೇ ಇದ್ರೆ ನಾನು ಜೀವನವನ್ನು ಅನುಭವಿಸಿದ್ದೂ ಪ್ರಯೋಜನವಿಲ್ಲ. ಅಥವಾ ನನ್ನ ರಿಯಾಕ್ಷನ್ನೂ ಪ್ರಯೋಜನವಿಲ್ಲ ಅಂತ ನನಗೆ ಅನ್ನಿಸುತ್ತೆ.

 • ನಿಮ್ಮ ಕಾದಂಬರಿಗಳಲ್ಲಿ ಬರುವ ನಾಯಕರಲ್ಲೆಲ್ಲಾ ರೀತಿ ಆದರ್ಶಮತ್ತು ಮಿತಿ’ – ಇವೆರಡನ್ನೂ ಬಹಳ ತೀವ್ರವಾಗಿ ಅನುಭವಿಸಿದ ನಾಯಕ ಯಾವ ಕಾದಂಬರಿಯವನಿರಬಹುದು. ಸಾರ್‌? ನಿಮ್ಮ ಜೊತೆ ಜೊತೆಗೆ ಯೋಚನೆ ಮಾಡಬೇಕು. ಯಾಕೆಂದ್ರೆ ನಿಮಗೆ ಈಗ ಸಂಪೂರ್ಣ ನೆನಪಿರ್ಲಿಕ್ಕಿಲ್ಲ.

ನೆನಪೂ, ಮರಳಿ ಮಣ್ಣಿಗೆ

 • ರಾಮ?

ಮರಳಿ ಮಣ್ಣಿಗೆಯ ರಾಮ, ಒಂದು ಪಾಯಿಂಟ್‌ಗೆ ಮಾತ್ರ ಬರ್ತಾನೆ. ಕ್ರಿಯೇಟಿವ್ ಆರ್ಟ್‌‌ಗೆ ಸಂಬಂಧಪಟ್ಟ ಹಾಗೆ. ಆ ಕ್ರಿಯೇಟಿವ್ ಆರ್ಟ್‌‌ಗೆ ವಯೋಲಿನ್‌ಗೆ ನೇಚರ್‌- ಕಡಲು- ಏನು ಪಾಸಿಬಿಲಿಟಿ ಕೊಡಬಹುದು? ಇದೊಂದು ಪರ್ಟಿಕ್ಯುಲರ್ ಪ್ರೋಗ್ರಾಂ ಆಫ್ ಆರ್ಟ್ ಇದಕ್ಕೆ ಅವನು ಸಂಬಂಧ ಪಡ್ತಾನೆ.  ನಿರಾಶೆಯಲ್ಲಿ ಹಳ್ಳಿಗೆ ಹೋಗ್ತಾನೆ. ಕಡಲು, ಈಸ್ಟರ್ನ್ ಮ್ಯೂಸಿಕ್‌ನ ಹಾಗೆ ನಮ್ಮ ಮ್ಯೂಸಿಕ್ ಏನು ಕೊಡಬಲ್ಲದು ಅಂತ. ಈ ಆಂಗಲ್‌ನಲ್ಲಿ ಅವ ನನಗೆ ಬೇಕಾಗ್ತಾನೆ, ಉಳಿದಿದ್ದಕ್ಕಲ್ಲ.

 • ಚಿಗುರಿದ ಕನಸಿನ ನಾಯಕ ಸಾರ್?

ಚಿಗುರಿದಕನಸಿನ ನಾಯಕ ನನ್ನ ಕೃಷಿಯಲ್ಲಿ ಏನೇನು ಮಾಡುವ ಪಾಸಿಬಿಲಿಟಿ ಇದೆ, ಎಲ್ಲೆಲ್ಲಿ ಏನೇನು ಮಾಡಿದ್ದಾರೆ – ಈ ಅನುಭವ ಬಂದ ಮೇಲೆ ಬರೆದಿದ್ದು. ಇಷ್ಟು ಪಾಸಿಬಿಲಿಟೀಸ್ ಇರುವಾಗ ನಾವು ಕೂತ್ಕೊಂಡಿದ್ದೇವಲ್ಲ ಅಂತ ಬರೆದದ್ದು. ಉಳಿದ ರೀತಿಯ್ಲಿ ಬಾಕಿ ಮನುಷ್ಯರ ಹಾಗೆ ಉಳಿದ ಪ್ಯಾಶನ್ ಇರತಕ್ಕವನೇ, ಅವ. ಈ ಪಾಸಿಬಿಲಿಟಿ, ಆದ ಪಾಸಿಬಿಲಿಟಿ. ನನ್ನ ಊರಿನಲ್ಲಿಯೇ ಆಗಲಿ, ಇನ್ನೊಂದು ದೇಶದಲ್ಲಿಯೇ ಆಗಲಿ, ಈ ಪಾಸಿಬಿಲಿಟಿಯನ್ನ ಮನದಟ್ಟು ಮಾಡಲಿಕ್ಕೆ ಅವನ ಬೆಳವಣಿಗೆ ಸಾಧ್ಯ ಮಾಡುತ್ತೆ. ಈ ಇನ್ನೆಷ್ಟೋ ಸಮಸ್ಯೆ ಪ್ರಾಯಶಃ ಇನ್ನೊಂದೇ ದಾರಿಯಲ್ಲಿ ನಾಳೆ ಈ ಸಮಸ್ಯೆ ಹ್ಯಾಗೆ ಬೆಳೀಬಹುದು ಅಂತ ವಿಚಾರ ಮಾಡಿದ್ದೇನೆ. ಹಾಗೆ ಬೆಳೆದ ವ್ಯಕ್ತಿಗಳೇ ನನಗೆ ಕಂಡಿಲ್ಲಾ, ನನ್ನ ಅನುಭವ ಪ್ರೇರಿಸಿಲ್ಲ. ಹೀಗಾಗಿ ಅವನ್ನು ಅರ್ಧ ದಾರಿಯಲ್ಲಿಯೇ ನಾನು ಬಿಡಬೇಕಾಗುತ್ತದೆ. ಅಂದರೆ ನಾನು ಯಾವುದನ್ನು ಕಂಡಿಲ್ಲವೋ ಆ ಗ್ಯಾಸಾಲಜೀನ ನಾನು ಊಹೆಯಿಂದ, ಕಲ್ಪನೆಯಿಂದ ಮಾಡಬಲ್ಲೆ. ಆದರೆ ಅದು ಪ್ರಯೋಜನಕ್ಕೆ ಬಂದೀತು ಅಂತ ನನಗೆ ಅನ್ನಿಸೋದಿಲ್ಲ.

 • ಎಲ್ಲಾ ಕಾದಂಬರಿಗಳಿಗಿಂತ ಅಳಿದ ಮೇಲೆಯಲ್ಲಿ ಪ್ರಾಯಶಃ ನಿಮ್ಮ ಸುಮಾರು ವರ್ಷಗಳ ಚಿಂತನೆ ಬಹಳ ಗಟ್ಟಿಯಾಗಿ ಬಂದಿದೆ ಅಂತ ಅನ್ನಿಸುತ್ತದೆ. ಆದರೆ ಕಾದಂಬರಿ ಬಗ್ಗೆ ಮಾತಾಡೋದಕ್ಕಿಂತ ಮೊದಲು ಇನ್ನೊಂದು ವಿಷಯಕ್ಕೆ ನಿಮ್ಮನ್ನು ಹಾರಿಸಬೇಕು. ನಾನೊಂದು ಲೇಖನ ನಿಮ್ಮ ಬಗ್ಗೆ ನಿಮ್ಮ ಸೋದರರು ಬರೆದಿದ್ದನ್ನು ಓದಿದೆ. ’ಅಂದಿನ ಕೋಟಅನ್ನೋ ಲೇಖನ, ಕೋ.. ಕಾರಂತರು ಬರೆದಿರೋದು. ಇದರಲ್ಲಿ ನಿಮ್ಮ ಬಾಲ್ಯ ಜೀವನದ ಬಗ್ಗೆ ಕೆಲವು ಮಾತುಗಳು ಬಹಳ ಆಸಕ್ತಿದಾಯಕ ಅಂತ ಅನ್ನಿಸಿತು. ಅಲ್ಲಿ ಒಂದೆರಡು ವಿಷಯಗಳಿವೆ.

        ಒಂದನೆಯದು ಅವರು ಹೇಳುತ್ತಾರೆ, ನೀವು ಬೆಳೆದ ಜಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕಾಲದಲ್ಲಿ ಜೀವನ ಒಂಥರಾ ನಿಷ್ಕ್ರಿಯವಾಗಿತ್ತು, ಅಂತ. ಬ್ರಿಟಿಷರು ಬಂದ ಮೇಲೆ ಒಂದು ರೀತಿಯಿಂದ ಹೊಸತು ಮತ್ತು ಹಳತಿಗೆ ಅಲ್ಲಿ ಘರ್ಷಣೆಯುಂಟಾಯಿತು. ಸಂಧಿಕಾಲದಲ್ಲಿ ನಿಮ್ಮ ಬಾಲ್ಯಜೀವನ ಕಳೆದದ್ದು ಅನ್ನೋದು. ಇದು ನನಗೆ ಬಹಳ ಮುಖ್ಯ ಅನ್ನಿಸಿತು. ಇನ್ನೊಂದು ನಿಮ್ಮ ತಂದೆ, ಮಕ್ಕಳಿಗೆ ಸಣ್ಣ ಸಣ್ಣ ನಾಟಕ ಬರೆದು ಆಡಿಸ್ತಾ ಇದ್ರು ಅನ್ನೋದು. ಅಂದರೆ ಕಲೆ ನಿಮ್ಮ ಮನೆತನದಲ್ಲಿ ಇದ್ದಿರಬಹುದು ಅನ್ನೋದು. ಆಮೇಲೆ ನಿಮ್ಮ ಜನರ ನಿಷ್ಠೆ. ಯಾವತ್ತು ಸಾಲ ಮಾಡಿದ್ರೂ ಅದನ್ನ ಹಿಂದಕ್ಕೆ ಕೊಡಬೇಕು ಇತ್ಯಾದಿ ಸಾಮಾನ್ಯ ಮೌಲ್ಯಗಳಲ್ಲಿ ಅವರಿಗೆ ಇದ್ದ ನಿಷ್ಟೆ. ಆಮೇಲೆ ಬಡತನದ ಬಗ್ಗೆ ಅವರು ಹೇಳುತ್ತಾರೆ. ಸುತ್ತಮುತ್ತಲಿನ ಜೀವನದಲ್ಲಿ ತೀರಾ ಬಡತನ ಇತ್ತು, ನೀವು ಬೆಳೆದ ಊರಿನಲ್ಲಿ ಅಂತ. ಜೊತೆಗೆ ನನಗೆ ಇನ್ನೂ ಬಹಳ ಆಸಕ್ತಿದಾಯಕ ಅನ್ನಿಸಿದ್ದು ನಿಮ್ಮ ಮನೆಯಲ್ಲೇ ಒಬ್ಬರು ಬಾಲಬ್ರಹ್ಮಚಾರಿ ಇದ್ರು, ಅವ್ರು ಕೊನೆವರೆಗೂ ಬ್ರಹ್ಮಚರ್ಯದ ಜೀವನ ಸಾಗಿಸಿದ್ರು ಅನ್ನೋದು. ಇನ್ನೊಂದು ಮುದುಕಿಯರ ಬಗ್ಗೆ ನಿಮ್ಮ ಕಾದಂಬರಿಯಲ್ಲಿ ಅನೇಕ ಸಾರಿ ಬರೋದ್ರಿಂದ ಹೇಳ್ತಾ ಇದ್ದೀನಿ ಲೇಖನದಲ್ಲಿಯೂ ಕೂಡ, ನಿಮ್ಮ ಅಜ್ಜಿ ಅಂತ ಕಾಣುತ್ತೆ, ಬಹಳ ಪರಿಣಾಮವನ್ನು ಅವರ ಮೇಲಂತೂ ಮಾಡಿದ್ರೂ ಅಂತ ಬರ್ದಿದ್ದಾರೆ. ಇವನ್ನೆಲ್ಲಾ ನೋಡಿದಾಗ ನನಗೆ ನಿಮ್ಮ ಕಾದಂಬರಿಗಳಲ್ಲಿ ಇವತ್ತಿನವರೆಗೂ ಬರುವ ಕೆಲವು ಆರ್ಕಿಟೈಪುಗಳು ನಿಮ್ಮ ಬಾಲ್ಯದ ಸ್ಮೃತಿಯಿಂದಲೇ ಎದ್ದು ಬರುತ್ತವೆ ಎನ್ನಿಸುತ್ತದೆ.

ಆರ್ಕಿಟೈಪುಗಳು – ಸಾಮಾನ್ಯವಾಗಿ ಇವತ್ತಿಗೂ ಅಂಥ ಮುದುಕಿಯರು ಅಲ್ಲಲ್ಲಿ ನನಗೆ ಸಿಗ್ತಾರೆಯಾದ್ರಿಂದ. ಒಂದು ನಿಷ್ಠೆಯಿಂದ ಅದಕ್ಕೋಸ್ಕರವಾಗಿ ಬದುಕನ್ನು ಡಿವೋಟ್ ಮಾಡಿದ ಅವರು, ಇವತ್ತಿನ ತನಕವೂ ನನ್ನ ಊರಿನ ಬಗ್ಗೆ ಅದಕ್ಕೊಂದು ಮರ್ಯಾದೆ ಕೊಡುವಂತೆ ಮಾಡಿದಂಥ ವ್ಯಕ್ತಿಗಳು. ಪಾಪ-ಪುಣ್ಯದ ವ್ಯಾಲ್ಯೂ ನಾನು ಬೇಕಾದ್ದು ತಿಳ್ಕೊಳ್ಲಿ ಒಬ್ಬನ ಋಣ ತೀರಿಸಬೇಕು ಎನ್ನುವಲ್ಲಿ ಇದೆ. ಎರಡನೆಯದು – ಬಡತನ, ಕಡು ದಾರಿದ್ರ‍್ಯ ಇತ್ತು – ನಿಜ. ಆದರೆ ಅದರಲ್ಲಿಯೂ ಕೂಡ ನಾಲಿಗೆಯನ್ನು ಮೀರಿದವರನ್ನು ನಾನು ಕಾಣಲಿಲ್ಲ. ಒಬ್ಬಿಬ್ರು ಸುಳ್ಳು ಹೇಳೋದಿಲ್ಲಾ ಅಂತಲ್ಲಾ. ಆದರೆ ಹೆಚ್ಚಿನ ಜನರಲ್ಲಿ ಆ ಮೌಲ್ಯ ಕಂಡಿದ್ದೇನೆ. ಮತ್ತೊಂದು, ಚೇಂಜಿಂಗ್ ಸಿಚುಯೇಶನ್ ಬಗ್ಗೆ; ಬ್ರಿಟಿಷರ ಕಾಲದಿಂದ ಶಿಕ್ಷಣ ಬಂತು. ಆ ಕಾಲದಲ್ಲಿ ನನ್ನ ಇಡೀ ಗ್ರಾಮ ಸಮುದಾಯದಲ್ಲಿ ಒಂದು ಆರೆಂಟು ಮಂದಿ ಇಂಗ್ಲಿಷ್ ಕಲಿಯಲಿಲ್ಲ. ಅದರಲ್ಲಿ ಹಾಗೆ ಕಲಿತಂಥ ’ಲಚ್ಚ’ರೂ ನನ್ನ ಸಹಪಾಠಿಗಳಾಗಿಯೇ ಇದ್ದಿದ್ದನ್ನ ಕಂಡವ ನಾನು. ಆದದ್ದರಿಂದ ಆ ವ್ಯಕ್ತಿ ಆ ಕಾದಂಬರಿಯಲ್ಲಿ ಬರ್ತಾನೆ.

 • ಅವರು ಬಾಲಬ್ರಹ್ಮಚಾರಿ ಇದ್ರು ಅಂತ ಹೇಳ್ತಾರೆ.

ಇವರನ್ನ ನಮ್ಮ ಮನೆಯಲ್ಲಿ ನಾವು ಯಾವ ಅಂತ ಕರೀತಿದ್ವಿ.

 • ಅವರು ನಿಮ್ಮ ಮನಸ್ಸಿನ ಮೇಲೆ ಏನಾದ್ರೂ ಪರಿಣಾಮ

ಏನೂ ಇಲ್ಲ. ಅವರು ಆವರ ಪೂಜೆ ಮಾಡ್ಕೊಂಡು ದೇವಸ್ಥಾನಕ್ಕೋದ್ರು. ಬಂದ್ರು. ಮನೆ ಹಿತ್ತಲಲ್ಲಿ ಎಲೆ ಅಡಿಕೆ ಅದು, ಇದು ಮಾಡಿದ್ರು. ಅವರಷ್ಟಕ್ಕೆ ಅವರು ಪೂಜೆ ಮಾಡಿದ್ರು. ಎರಡನೇ ಮನುಷ್ಯರ ಹತ್ತಿರ ಅವರ ಮಾತಾಡಿದ್ದಂತಿಲ್ಲ. ನಾವು ಸಣ್ಣಗಿರುವಾಗ ಅವರ ಮೇಲೊಂದು ಪ್ರೀತಿ ಇರ್ತಿತ್ತು. ಅದಕ್ಕಿಂತ ಹೆಚ್ಚು ಅವರನ್ನು ತಿಳಿಯೋ ಯೋಗ್ಯತೆ ನನ್ನ ಮನಸ್ಸಿಗೆ ಆವಾಗ ಇದ್ದಿಲ್ಲ.

 • ನಿಮ್ಮ ಅಣ್ಣ ಕೊನೆಯಲ್ಲಿ ಒಂದು ಮಾತು ಹೇಳ್ತಾರೆ. ’ಶಿವರಾಮನ ಬಾಲ್ಯ ಜೀವನದ ಹಿನ್ನೆಲೆಯನ್ನು ಯಥಾವತ್ತಾಗಿ ಹೇಳಲು ಯತ್ನಿಸಿದ್ದೇನೆ. ಹಿನ್ನೆಲೆಯಿಂದ ಅವರ ಸಾಹಿತ್ಯ ಹೇಗೆ ಪ್ರಭಾವಿತವಾಯಿತು ಅಥವಾ ಅವರ ಕಲಾದೃಶ್ಯ ಹೇಗೆ ಕುದುರಿಕೊಂಡಿತು ಎಂದು ನಾನು ವಿಶ್ಲೇಷಿಸಲಾರೆ.’ ಕೊನೆ ವಾಕ್ಯ ನನಗೆ ಬಹಳ ಗಮನಾರ್ಹ ಅನ್ನಿಸಿತು. ’ಎಷ್ಟೋ ಬಾರಿ ಬರಡು ಹಿನ್ನೆಲೆ ರಸಿಕ ಜೀವನಕ್ಕೆ ಪ್ರೇರಕವಾಗುತ್ತದೆ ಎನ್ನುವ ಮನಃಶಾಸ್ತ್ರದ ಮಾತನ್ನು ಇಲ್ಲಿ ಸ್ಮರಿಸಬಹುದಾಗಿದೆ.’ ಇದನ್ನು ಯಾಕೆ ಹೇಳ್ತಾರೆ ಅಂದ್ರೆ ಊರಲ್ಲಿ ಸ್ವಲ್ಪ ಯಕ್ಷಗಾನ ಬಿಟ್ಟರೆ ಪಿಟೀಲನ್ನೂ ಕೇಳಿದವರಿರಲಿಲ್ಲ. ತರಹ ಒಂದು ಬರಡು ಜೀವನವೂ ಇತ್ತು ಆಗಿನ ಕಾಲದಲ್ಲಿ. ಅಲ್ಲಿಂದ ನೀವು ಇಷ್ಟು ಕಲಾತ್ಮಕವಾಗಿ….

ಅಲ್ಲಿ ಬರಡು ಜೀವನ ಇವತ್ತಿಗೂ ಉಳಿದುಕೊಂಡಿದೆ. ಅತ್ಯಂತ ಚೆಲುವಾದ ನಿಸರ್ಗ ಇದ್ದೂ ಇವತ್ತಿನ ಜನಗಳ ಪಾಲಿಗೆ ಅದು ಬರಡಾಗಿಯೇ ಇದೆ. ನಾನು ಕುಣಿದಿದ್ದೇನೆ, ಹೊಳೆಯಲ್ಲಿ ಆಡಿದ್ದೇನೆ, ಅದು ಇದೂ ಮಾಡಿದ್ದೇನೆ. ಆದರೆ ಇವೆಲ್ಲ ಸೌಂದರ್ಯ ಪ್ರಜ್ಞೆಯಿಂದ ಮಾಡಿದ್ದು ಅಂತ ನಾನು ಗಟ್ಟಿ ಹೇಳಲಾರೆ. ಎಲ್ಲ ಮಕ್ಕಳ ಹಾಗೆ ನಾನೂ ಕೆರೆ ಹಳ್ಳ ಹಾರಿದ್ದೇನೆ, ಕಡಲಲ್ಲಿ ಮಿಂದಿದ್ದೇನೆ. ಈ ಸೌಂದರ್ಯ ಪ್ರಜ್ಞೆಯ ಅಂಶ ಅರಿವಿಗೆ ಬಂದಿದ್ದು ಇಪ್ಪತ್ತು ಇಪ್ಪತ್ತೆರಡನೆಯ ಇಸವಿಯ ಮೇಲೆ.