(ಪ್ರಜಾವಾಣಿ ೧೭.೧೧.೯೩)

ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಮೂರು ಮಂಟಪಗಳು ಜಲಾವೃತಗೊಂಡ ಕರುಣಾಜನಕ ಕಥೆ ಕನ್ನಡಿಗರ ಮನಕರಗುವಂತಿದೆ. ಮಂಗಳವಾರ (೧೭.೧೧.೧೯೯೩) ಸಂಜೆ ಕನ್ನಡ ವಿಶ್ವವಿದ್ಯಾಲಯ ಜಲಾವೃತಗೊಂಡ ಸಮಚಾರ ಹೊಸಪೇಟೆ ತುಂಬ ಹರಡಿತು. ಮರುದಿನ ‘ಪ್ರಜಾವಾಣಿ’ಯಲ್ಲಿ ಸುದ್ದಿ ಓದಿ ಸಾವಿರಾರು ಜನರು ಹಂಪೆಗೆ ಲಗ್ಗೆ ಹಾಕಿದರು.

ರಾತ್ರಿಯಲ್ಲಾ ನೀರು ತುಂಬಿ ತುಂಗಭದ್ರಾನದಿ ಪ್ರವಾಹ ಉಕ್ಕಿದ ಕಾರಣ ಎದುರು ಬಸವಣ್ಣನ ಹತ್ತಿರ ಇರುವ ಮಂಟಪಗಳಲ್ಲಿ ನೀರು ತುಂಬಿತು. ನಾಡ ದೋಣಿಗಳಲ್ಲಿ ಮಂಟಪಗಳಿಗೆ ಹೋಗಿ ವಿಶ್ವವಿದ್ಯಾಲಯದ ಅಳಿದುಳಿದ ಪುಸ್ತಕ, ಸಾಮಾನು ರಕ್ಷಿಸಲು ಒಳಗೆ ಹೋದರೆ ಹಾವು-ಚೇಳುಗಳು ಪ್ರವಾಹದ ನೀರಿನೊಂದಿಗೆ ಬಂದು ಮಂಟಪ ಸೇರಿದ್ದವು. ಮಂಟಪಗಳಲ್ಲಿ ನೀರು ಸುಮಾರು ಆರು ಅಡಿಗಳವರೆಗೆ ಏರಿತ್ತು. ಬಾಗಿಲು ಗೋಡೆಗಳಲ್ಲಿ ಅದರ ಗುರುತು ಈಗ ಕಾಣಬಹುದು.

ಶನಿವಾರ ಪತ್ರಕರ್ತರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಕಂಡು ಬಂದದ್ದು ಮನಸ್ಸಿಗೆ ನೋವು ಮಾಡುವ ಚಿತ್ರ. ಅಪರೂಪದ ಚಿತ್ರ ಕಲಾಕೃತಿಗಳು, ಅಮೂಲ್ಯವಾದ ಗ್ರಂಥ ಭಂಡಾರದ ಪುಸ್ತಕಗಳು ನೀರಿನಲ್ಲಿ ತೊಯ್ದು ಹಾಳಾಗಿದ್ದವು. ಮೂರು ಮಂಟಪಗಳಲ್ಲಿ ಕೆಸರು ತುಂಬಿ ಪೀಠೋಪಕರಣ, ಇತರ ವಸ್ತುಗಳು ಕೆಂಪು ಕೆಸರು ಲೇಪಿಸಿಕೊಂಡಿದ್ದು ಕಂಡು ಬಂತು. ಕಳೆದ ನಾಲ್ಕು ದಿನದಿಂದ ಸ್ವಚ್ಛತಾ ಕೆಲಸ ಭರದಿಂದ ನಡೆದಿದ್ದರೂ ನೀರಿನ ಮುಗ್ಗಲು ವಾಸನೆ ಹರಡಿತ್ತು.

ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರು ಅಮೂಲ್ಯವಾದ ಪುಸ್ತಕಗಳು ಹಾಳಾಗಿದ್ದು ತೋರಿಸಿ “ಇದು ತುಂಬಲಾರದ ನಷ್ಟ ಎಂ. ಚಿದಾನಂದಮೂರ್ತಿ, ಜಿ.ಎಸ್. ಶಿವರುದ್ರಪ್ಪ, ವೀರೇಂದ್ರ ಹೆಗಡೆ, ಸಿದ್ಧಯ್ಯ ಪುರಾಣಿಕ, ಎಸ್.ಎಸ್. ಒಡೆಯರ್, ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಸಿರಿಗೇರಿ ಸ್ವಾಮಿಗಳು ಹಾಗೂ ಇನ್ನೂ ಅನೇಕ ಮಹನೀಯರು ಕನ್ನಡ ವಿಶ್ವವಿದ್ಯಾಲಯಕ್ಕೆ ದೇಣಿಗೆಯಾಗಿ ನೀಡಿದ್ದ ಅಪರೂಪದ ತಮ್ಮ ಸ್ವಂತ ಸಂಗ್ರಹದ ಪುಸ್ತಕಗಳು ಹಾಳಾಗಿದ್ದು ತುಂಬ ದುಃಖವಾಗಿದೆ. ಅವರಿಗೆ ನಾನೇನು ಉತ್ತರ ನೀಡಲಿ?” ಎಂದು ತುಂಬ ವ್ಯಥೆಯಿಂದ ತಿಳಿಸಿದರು. “ವಸ್ತುಗಳು ಹಾಳಾದರೆ ಪುನಃ ತರಬಹುದು, ಅಮೂಲ್ಯವಾದ ತಾಳೆಗರಿ (ತಾಡೋಲೆ) ಕೈಬರಹದ ಸಾಹಿತ್ಯ ಹಾಳಾಗಿದ್ದು ಮರಳಿ ಪಡೆಯಲು ಸಾಧ್ಯವಿಲ್ಲ” ಎಂದು ವಿಷಾಧಿಸಿದರು.

ಎಚ್ಚರಿಕೆ ನೀಡಿದ್ದರೆ

ಕನ್ನಡ ವಿಶ್ವವಿದ್ಯಾಲಯಕ್ಕೆ ನೀರು ನುಗ್ಗಿ ಸುಮಾರು ಮೂವತ್ತು ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ. ನಾಲ್ಕಾರು ಗಂಟೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೆ ಸಾಕಷ್ಟು ಪುಸ್ತಕಗಳನ್ನು ಉಳಿಸಬಹುದಿತ್ತು ಎಂದು ಡಾ. ಚಂದ್ರಶೇಖರ ಕಂಬಾರ ಅವರು ತಿಳಿಸಿದರು.

ನೆಂದ (ನೆನೆದ) ಅಮೂಲ್ಯ ಪುಸ್ತಕಗಳನ್ನು ಕಮಲಾಪುರ ಆಡಳಿತ ಕಛೇರಿ ಆವರಣದಲ್ಲಿ ಹಪ್ಪಳ ಒಣಗಿಸುವ ರೀತಿಯಲ್ಲಿ ಬಿಸಲಿಗೆ ಹರಡಿ ಒಣಗಿಸಲಾಗುತ್ತಿತ್ತು. ಈ ನೋಟ ನೋಡಿದ ಎಂಥವರಿಗೂ ಬೇಸರವಾಗುತ್ತಿತ್ತು. ಕನ್ನಡ ವಿಶ್ವವಿದ್ಯಾಲಯ ಗ್ರಂಥಾಲಯದ ಮುಖ್ಯಸ್ಥ ಜೆ.ಆರ್. ರಾಮಮೂರ್ತಿ ಅತೀವ ದುಃಖದಿಂದ ಹಾಳಾದ ಪುಸ್ತಕಗಳನ್ನು ತೋರಿಸಿ ಅವುಗಳ ಮಹತ್ವ ವಿವರಿಸುತ್ತಿದ್ದರು. ಎಷ್ಟು ಪುಸ್ತಕ ಹಾಳಾಗಿವೆ ಎಂಬ ಲೆಕ್ಕ ಇನ್ನೂ ಸರಿಯಾಗಿ ಸಿಕ್ಕಿಲ್ಲ. ಹೊಸದಾಗಿ ತಂದು ಇಟ್ಟಿದ್ದ ಕೆಲವು ಬಂಡಲ್ ಪುಸ್ತಕಗಳೂ ನೀರಿನಿಂದ  ಹಾಳಾಗಿವೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಪುಸ್ತಕವೇ ಆಸ್ತಿ, ಅದನ್ನು ಪುನಃ ಸಂಪಾದಿಸಬೇಕಾಗಿದೆ ಎಂದರು. ನೀರಿನಿಂದ ಹಾಳಾದ ಅಮೂಲ್ಯ ಪುಸ್ತಕಗಳನ್ನು ಹೊಗೆಯಲ್ಲಿ ಇರಿಸಿ ಶುದ್ಧ ಮಾಡುವ ವಿಧಾನದಿಂದ ಹಾಗೂ ಲ್ಯಾಮಿನೇಟ್ ಮಾಡುವುದರಿಂದ ರಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಅಧ್ಯಾಪಕರನೇಕರು ಕೆಸರು ತುಂಬಿದ ಮಂಟಪಗಳಲ್ಲಿ ನುಗ್ಗಿ ಪುಸ್ತಕ, ದಾಖಲೆ ಹೊರ ತೆಗೆಯುವಲ್ಲಿ ಮುಂದಾಗಿದ್ದರು. ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಎನ್.ಬಿ. ಚಂದ್ರಮೋಹನ್ ಅಂದಾಜು ರೂ. ೧೫ ಲಕ್ಷ ಬೆಲೆಯ ಗ್ರಂಥ ಭಂಡಾರ ಹಾಳಾಗಿದೆ. ಎಂಟು ಲಕ್ಷ ರೂಪಾಯಿ ಬೆಲೆಯ ಜಿರಾಕ್ಸ್ ಯಂತ್ರ, ಕಂಪ್ಯೂಟರ್, ದೂರವಾಣಿ, ಪೀಠೋಪಕರಣ ಬೆರಳಚ್ಚು ಯಂತ್ರಗಳು ಹಾಗೂ ವಿದ್ಯುತ್ ಜನರೇಟರ್ ಮುಂತಾಗಿ ಸುಮಾರು ೩೦ ಲಕ್ಷ ರೂ. ನಷ್ಟವಾಗಿದೆ ಎಂದರು.

ನೂತನ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರು ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿಗೃಹದಲ್ಲಿ ಬಂದಿಳಿದಾಗ ಡಾ. ಚಂದ್ರಶೇಖರ ಕಂಬಾರರು ವಿಶ್ವವಿದ್ಯಾಲಯದ ಅಸ್ತವ್ಯಸ್ತ ಸ್ಥಿತಿ ಬಗ್ಗೆ ತಿಳಿಸಿ ಹೇಳಿದರು. ಕನ್ನಡ ವಿಶ್ವವಿದ್ಯಾಲಯ ಪುನಃಶ್ಚೇತನಕ್ಕೆ ಮುಖ್ಯಮಂತ್ರಿಗಳು ಧನಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಇಪ್ಪತ್ತು ವರ್ಷಗಳ ದಾಖಲೆ ಮುರಿದು ಬಂದ ಮಳೆಯಿಂದಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀರು ನುಗ್ಗಿ ನಷ್ಟ ಒದಗಿತು. ಕನ್ನಡಿಗರ ಅಭಿಮಾನದ ಸಂಕೇತವಾದ ಹಂಪೆಯ ಕನ್ನಡ ವಿಶ್ವವಿದ್ಯಾಲಯ ಈ ರೀತಿ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದ್ದರೂ ಅದು ಪುನಃ ನವಚೇತನದಿಂದ ಕೆಲಸ ಮಾಡುವಲ್ಲಿ ಸ್ವಲ್ಪವೂ ವಿಳಂಬವಾಗುವುದಿಲ್ಲ. ಈಗಾಗಲೆ ಕುಲಪತಿಗಳು ಸಂಶೋಧನಾ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಕನ್ನಡದ ಕೆಲಸ ಯಥಾ ಪ್ರಕಾರ ನಡೆದಿದೆ.