ಜೀವನ ಜೋಕಾಲಿಯ ಏರಿಳಿದ ತೂಗುವವರ ಮೇಲೆ ಅವಲಂಬಿಸಿದೆ. ಜೋರಿನ ಜೂರಿ ಇದ್ದಾಗಲೇ ಜೋಕಾಲಿ ತೀವ್ರವಾಗಿ ಏರಬಲ್ಲದು, ಇಳಿಯಬಲ್ಲದು. ಮಾನವನ ಜೀವನವೂ ಅಂತಹ ಏರಿಳಿತಗಳನ್ನು ಕಂಡಿದೆ, ಕಾಣುವುದಿದೆ. ಭೂತ ಕಾಲದ ಜೀವನ ಭವಿಷ್ಯತ್ತನ್ನು ರೂಪಿಸುವಲ್ಲಿ ಸಹಾಯಕವಾಗಬಲ್ಲದು. ಜೀವಂತ ಜನಕ್ಕೆ ಭಾವನೆ ಇದ್ದರೆ ಅನುಭವ ಮೂಡುತ್ತದೆ. ಹಿಂದಿನವರ ಅನಿಸಿಕೆಗಳನ್ನು ಮುಂದಿನವರು ವಿಚಾರಿಸಿ, ಅದು ಸರಿಯೆನಿಸಿದರೆ ಆ ಅನಿಸಿಕೆಗಳನ್ನೇ ಒಪ್ಪಿ ತಮ್ಮ ಜೀವನಕ್ರಮವನ್ನು ತಿರುಗಿಸಿಕೊಳ್ಳುವರು. ಹೀಗೆ ಜೀವನಕ್ರಮ ಮುಂದುವರಿದಂತೆ ಸಂಸ್ಕೃತಿ ರೂಪಗೊಳ್ಳುತ್ತ ನಡೆಯುವುದು. ಆ ಸಂಸ್ಕೃತಿಯ ಪ್ರವಾಹ ಸುದೀರ್ಘವಾದುದು. ಅದು ಒಮ್ಮೊಮ್ಮೆ ಗಟ್ಟವನ್ನು ಹತ್ತಿ, ತಿಟ್ಟವನ್ನೇರಿ ತೆಗ್ಗಿಗೆ ಜಿಗಿದುದೂ ಉಂಟು. ಆ ಸಂಸ್ಕಾರದ ಬಲದಿಂದ ಪ್ರತಿಭಾಶಾಲಿಯಾದ ಹಳ್ಳಿಗ ಹಾಡುಕಟ್ಟಿದ್ದಾನೆ. ಹಾಡಿಕೊಂಡು ಕುಣಿದಿದ್ದಾನೆ. ತನ್ನ ಬುದ್ಧಿಗೆ ನಿಲುಕುವ ಸವಾಲುಗಳನ್ನು ಹಾಕಿ, ಅವನ್ನು ಬಿಡಿಸಿ ಆನಂದಪಟ್ಟಿದ್ದಾನೆ. ಅದು ತನ್ನ ಜೀವನದ ರಸದೂಟವಾದರೂ ಅದು ಮುಂಬರುವ ಜನಾಂಗಕ್ಕೆ ಕಟ್ಟಿಟ್ಟ ಬುತ್ತಿಯಾಗಲೆಂದು ಪ್ರಚುರಗೊಳಿಸುತ್ತ ಬಂದಿದ್ದಾನೆ. ಆ ಬುತ್ತಿಯನ್ನು ನಾವು ಉಂಡು ತೇಗಬೇಕಾಗಿದೆ, ತೃಪ್ತಿ ಪಡೆಯಬೇಕಾಗಿದೆ. ಅದೇ ಕಾರಣಕ್ಕಾಗಿಯೇ ಇಂದು ನಾವು ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ ಇಟ್ಟುಕೊಳ್ಳುವುದು. ಆ ಕಾರ್ಯ ಮಾಡಿದಷ್ಟೂ ಕಡಿಮೆ ಎನಿಸುತ್ತದೆ. ಹನಿಗೆ ಹನಿ ಕೂಡಿದರೆ ಹಳ್ಳವಾಗುವುದು, ತೆನಿಗೆ ತೆನಿ ಕೂಡಿದರೆ ರಾಶಿಯಾಗುವುದು. ಜನಪದ ಸಾಹಿತ್ಯವೂ ಸಂಗ್ರಹಗೊಂಡು ರಾಶಿಯಾಗಬೇಕಾದುದು ಅವಶ್ಯ. ಈ ಮಹತ್ಕಾರ್ಯದಲ್ಲಿ ನಮ್ಮದೂ ಅಳಿಲು ಸೇವೆ.

ಗಂಗಿಗೌರೀ ಸಂವಾದದ ಮೂರು ಪ್ರತಿಗಳು ನಮ್ಮ ಹಸ್ತಪ್ರತಿ ಭಂಡಾರದಲ್ಲಿದ್ದು ಒಂದಕ್ಕೊಂದು ತಾಳಮೇಳ ಇಲ್ಲದಂತಿವೆ. ಆ ಮೂರನ್ನು ಸೇರಿಸಿ, ಹೊಂದಿಸಿ ಸರಿಯಾದ ಒಂದು ಕೃತಿಯನ್ನು ಕಂಡುಕೊಂಡಿದ್ದೇವೆ. ಈ ಕೃತಿಯ ವಸ್ತು ಹಳೆಯದು; ಹಳೆಯ ಕಾಲದ ವಿಚಾರಧಾರೆ ಅದರಲ್ಲಿದ್ದುದು. ಮತಧರ್ಮಗಳ ಪೈಪೋಟಿಯಿಂದ ಮೂಡಿಬಂದುದು. ಅದು ಇಂದಿನ ಕಾಲಕ್ಕೆ ಬೇಡ. ಆದರೆ ಆ ಕಾವ್ಯರೂಪ, ಬೆದಂಡೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಸಾಹಿತ್ಯದೃಷ್ಟಿಯಿಂದ ಅರಿಯಬೇಕಾದುದು ಅಗತ್ಯ. ವಿಮರ್ಶಕರು ತಮ್ಮ ಪಾಲಿನ ಸಹೃದಯ ಶ್ರೀಮಂತಿಕೆಯನ್ನು ಇಲ್ಲಿ ಪ್ರದರ್ಶಿಸುವುದು ಅಗತ್ಯ.

ಸಹಾಯಕ ಸಂಶೋಧಕರ ಸಹಾಯ ನಮಗೆ ಇದ್ದೇ ಇದೆ. ವಿಶ್ವವಿದ್ಯಾಲಯದ ಕುಲಪತಿಗಳ ಆಶೀರ್ವಾದ ಜನಪದಕ್ಕಿದೆ. ಪ್ರಕಟನ ವಿಭಾಗದ ಅಧಿಕಾರಿಗಳ ಸಹಾಯಸಂಪದ ಮೊದಲಿನಿಂದಲೂ ಇದೆ. ಇವರೆಲ್ಲರ ಸಹಾಯದಿಂದ ಈ ಕೃತಿ ಹೊರಬಂದಿದೆ. ಅವರಿಗೆ ಜನಪದಮಾಲೆ ಚಿರ ಋಣಿ.

ವಿಶ್ವವಿದ್ಯಾಲಯದ ಅಚ್ಚುಕೂಟದ ಅಧಿಕಾರಿಗಳು ಈ ಕೃತಿ ಅಂದವಾಗುವಂತೆ ಮುದ್ರಿಸಿದ್ದಾರೆ. ಅವರಿಗೂ ನಾವು ಅಭಾರಿ.

ಎಂ.ಎಸ್. ಸುಂಕಾಪುರ
ಕನ್ನಡ ಅಧ್ಯಯನ ಪೀಠ
೧-೭-೧೯