ಕಳೆದ ವರ್ಷ ಜನೆವರಿ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಸರವಂದ ಗ್ರಾಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಶಿಬಿರದಲ್ಲಿ ‘ಗ್ರಾಮದೇವತೆಗಳು ಎಂಬ ವಿಷಯವನ್ನು ಕುರಿತು ಮಾತನಾಡುವ ಸುಯೋಗವು ನನಗೆ ದೊರೆಕಿತ್ತು. ಆ ಉಪನ್ಯಾಸದ ವಿಸ್ತೃತರೂಪವೇ ಈ ಪಸ್ತಕ.

ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬಂದ ನನಗೆ ಅಲ್ಲಿಯ ಸಂಸ್ಕೃತಿ, ಬದುಕು, ಪರಿಸರ, ಮೊದಲಿನಿಂದಲೂ ನನ್ನ ಮೇಲೆ ಗಾಢವಾದ ಪ್ರಭಾವ ಬೀರುತ್ತ ಬಂದಿವೆ. ಅದರಲ್ಲಿಯೇ ಹಳ್ಳಿಯ ಜನರ ಬದುಕಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಗ್ರಾಮದೇವತೆಗಳ ಬಗೆಗಿನ ನಂಬಿಕೆ, ಶ್ರದ್ಧೆ, ಆಚಾರ, ವಿಚಾರಗಳು, ನನ್ನಲ್ಲಿ ವಿಶೇಷ ಆಸಕ್ತಿಯನ್ನು ಕೆರಳಿಸಿದವು. ಆ ಕುರಿತು ಯೋಚಿಸುತ್ತ ಹೋದಂತೆ ಜನಪದರಲ್ಲಿ ದೇವತೆಗಳ ಕಲ್ಪನೆ ಯಾವಾಗ ಮಾಡಿತು? ಹೇಗೆ ಮಾಡಿಬಂದಿತು? ಹಾಗೂ ಆ ದೇವತೆಗಳ ಬಗೆಗೆ ಇರುವ ನಂಬಿಕೆ, ಶ್ರದ್ಧೆ ಆಚರಣೆಗಳ ಸ್ವರೂಪವೇನು? ಎಂಬಿತ್ಯಾದಿ ಅಂಶಗಳನ್ನು ಕುರಿತು ಅಧ್ಯಯನ ನಡೆಸಬೇಕೆಂಬ ಇಚ್ಛೆ ನನಗುಂಟಾಯಿತು.

ಮನುಷ್ಯ ಸಾಂಸ್ಕೃತಿಕವಾಗಿ ಬೆಳೆಯುತ್ತ ಹೋದಂತೆ ತನ್ನ ಸುತ್ತ ಮುತ್ತಲಿನ ಪರಿಸರದ ಬಗೆಗೆ ಯೋಚಿಸತೊಡಗಿದ. ನೀರು, ಗಾಳಿ,ಬೆಂಕಿ, ಗುಡುಗು, ಮಿಂಚು ಇವುಗಳ ಬಗೆಗೆ ಅವನಲ್ಲಿ ಒಂದು ರೀತಿಯ ಭಯ ಉಂಟಾಯಿತು ಅವುಗಳಿಂದ ತನ್ನನ್ನು ಸದಾವಕಾಲ ಕಾಯುವ ಚೇತನದ ಅವಶ್ಯಕತೆ ಅವನಿಗೆ ಉಂಟಾಯಿತು. ಇದರಿಂದಾಗಿ ಅವನು ದೇವರ ಕಲ್ಪನೆಯನ್ನು ಮಾಡಿಕೊಂಡ. ಹಾಗೆ ಮಾಡಿಕೊಂಡ ದೆವ್ವಗಳೇ ಗ್ರಾಮ ದೇವತೆಗಳೆನಿಸಿದವು. ಇವುಗಳ ಮೂಲಕ ತನ್ನ ಆಶೆ, ಆಕಾಂಕ್ಷೆ, ನಂಬಿಕೆಗಳನ್ನು ಈಡೇರಿಸಿಕೊಳ್ಳಲು, ನೆಮ್ಮದಿಯ ಬಾಳು ಬದುಕಲು ಪ್ರಯತ್ನಿಸಿದ. ಹೀಗೆ ಅವನು ಗ್ರಾಮದೇವತೆಗಳ ಬಗೆಗೆ ರೂಢಿಸಿಕೊಂಡ ನಂಬಿಕೆ, ಆಚರಣೆ, ಅವುಗಳ ಸ್ವರೂಪ ಇತ್ಯಾದಿಗಳನ್ನು ಸ್ಥೂಲವಾಗಿ ವಿವರಿಸುವದು ಈ ಚಿಕ್ಕ ಹೊತ್ತಿಗೆಯ ಉದ್ದೇಶ.

ಇಂದಿನ ವೈಜ್ಞಾನಿಕಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅನೇಕ ಮಾರ್ಪಾಡುಗಳಾಗಿದ್ದರೂ ಗ್ರಾಮೀಣರ ಬದುಕಿನಲ್ಲಿ ದೇವರ ಬಗೆಗಿದ್ದ ಗಾಢವಾದ ಶ್ರದ್ಧೆಗೆ ಚ್ಯುತಿ ಬಂದಿಲ್ಲ. ಅದು ಹಾಗೆಯೇ ಮುಂದುವರೆದಿದೆ. ಈ ಎಲ್ಲ ಸಂಗತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನಿರೂಪಿಸಲಾಗಿದೆ. ಇದರಿಂದ ಗ್ರಾಮದೇವತೆಗಳನ್ನು ಕುರಿತು ಒಂದು ಪಕ್ಷಿನೋಟ ಓದುಗರಿಗೆ ದೊರೆತರೆ ನನ್ನ ಶ್ರಮ ಸಾರ್ಥಕವೆಂದು ಭಾವಿಸಿದ್ದೇನೆ. ಉಪನ್ಯಾಸ ನೀಡಲು ಅವಕಾಶ ಕಲ್ಪಿಸಿ ನಾನು ಮಾಡಿದ ಉಪನ್ಯಾಸವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ ಎಚ್‌.ವಿ. ನಾಗೇಶ್‌ ಹಾಗೂ ಅವರ ಸಿಬ್ಬಂದಿಯವರಿಗೆ, ಮತ್ತು ಉಪನ್ಯಾಸದ ವ್ಯವಸ್ಥೆ ಮಾಡಿದ ಸರವಂದ ಗ್ರಾಮದ ಎಲ್ಲ ಸಮಸ್ತರಿಗೆ ನಾನು ಕೃತಜ್ಞನಾಗಿದ್ದೇನೆ.

ಬಿ.ಪಿ. ಪಾಟೀಲ
ಕನ್ನಡ ಅಧ್ಯಯನ ಪೀಠ, ಕ.ವಿ.ವಿ. ಧಾರವಾಡ