ಡೊಳ್ಳಿನ ಹಾಡು (ಪದ)ಗಳು ನನಗೆ ಬಾಲ್ಯದಿಂದಲೂ ಆಸಕ್ತಿಯನ್ನು ಮೂಡಿಸುತ್ತ ಬಂದವುಗಳಾಗಿವೆ. ಹರಕೆಯ ಹಾಡುಗಳನ್ನು ಹೇಳುವುದರಲ್ಲಿ ನನ್ನದೇ ಮೇಲು ಹೆಸರು. ನನಗೆ ನೀಡಿದ ಈ ಯೋಜನೆ ಅತ್ಯಂತ ಸ್ವಾಗತಾರ್ಹವಾದುದು. ಈ ಯೋಜನೆಯನ್ನು ರೂಪಿಸಿದ ಕರ್ನಾಟಕ ದಫನ ಸರಕಾರಕ್ಕೂ, ಕನ್ನಡ ಸಮಗ್ರ ಜಾನಪದ ಸಂಪುಟ ರಚನೆಯ ಸರ್ವ ಸದಸ್ಯರಿಗೂ, ಅಧ್ಯಕ್ಷರಿಗೂ ಈ ಕೃತಿಯ ಪರಿಶೀಲನಾಕಾರರಿಗೂ ನನ್ನ ಅತ್ಯಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಾಡಿನ ಹಿರಿಯ ಜನಪದ ಡೊಳ್ಳುಕಲೆ ಗಂಡು ಕಲೆ ಎಂದು ಹೆಸರು ಪಡೆದಿದೆ. ಈ ಕಲೆಯನ್ನು ಬೆನ್ನಿಗೆ – ಹೊಟ್ಟೆಗೆ, ಕಟ್ಟಿಕೊಂಡು ; ಕಾಲುಗಳಿಗೆ, ಕೈಗಳಿಗೆ, ಬಾಯಿಗಳಿಗೆ, ಹೃದಯಕ್ಕೆ ಹಚ್ಚಿಕೊಂಡು ಸರ್ವಕಲಾವಿದರಿಗೂ ಕೃತಜ್ಞತೆಗಳನ್ನು ಹೇಳಲೇಬೇಕು.

ನನಗೆ ಈ ಯೋಜನೆಯ ಬಗೆಗೆ ಕಾಗದ ಬಂದೊಡನೆ ಕಾರ್ಯೋನ್ಮುಖನಾದೆನು. ಉತ್ತರ ಕರ್ನಾಟಕವನ್ನೆಲ್ಲ ಕ್ಷೇತ್ರ ಕಾರ್ಯಕೈಕೊಂಡು ಕಲಾವಿದರಿದ್ದೆಡೆಗೆ ಓಡೋಡಿ ಹೋಗಿ ಕ್ಷೇತ್ರಕಾರ್ಯ ಮಾಡಿದೆನು. ಪ್ರಮುಖ ಡೊಳ್ಳುಹಾಡಿನ “ಜನಪದ ಹಾಲುಮತ ಕಾವ್ಯ ಹಾಡಿದ ಸೈದಾಪುರದ ಶ್ರೀ ಸಿದ್ಧಪ್ಪ ಮೇಟಿ ಹಾಗೂ ಸಂಗಡಿಗರನ್ನು ಭೆಟ್ಟಿ ಮಾಡಿದೆನು. ಅವರು ಹಾಡಿದ್ದನ್ನೇ ಹಾಡ

ಬೇಕೆ ? ಎಂದು ಪ್ರಶ್ನಿಸಿದರು. ಆದರೂ ಅವರ ಹಾಡಿನ ರುಚಿ-ಸುರುಚಿ ಕಂಡುಕೊಂಡೆನು. ಅವರಿಗೆಲ್ಲ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೇ ಬೀದರ್‌ದವರೆಗೂ ಜನಪದ ಪ್ರಶಸ್ತಿ ವಿಜೇತ ಶ್ರೀ ಹಮ್ಮಗಿ ಮರಿಮಲ್ಲಪ್ಪನವರ ಶಿಷ್ಯರಿಗೆ ಭೆಟ್ಟಿಯಾಗಿ ಹಾಡು ಕೇಳಿ ದಾಖಲಾಯಿಸಿದ್ದಾಯ್ತು. ಅವರೆಲ್ಲರಿಗೂ ಕೃತಜ್ಞತೆಗಳು.

ಈಗಾಗಲೆ ಡೊಳ್ಳು ಹಾಡುಗಳ ವಸ್ತು-ವೈವಿಧ್ಯತೆಯ ಬಗೆಗೆ ಬರೆದುದಾಗಿದೆ. ಹಲವಾರು ಡೊಳ್ಳು ಕಲಾವಿದರು “ಎಲ್ಲಿ ಊರು-ಶಹರ-ಪಟ್ಟಣಗಳಿವೆಯೋ, ಅಲ್ಲೆಲ್ಲ ಡೊಳ್ಳುಗಳಿವೆ. ಹಾಡುಕಾರರಿದ್ದಾರೆ. ಎಂಬ ಮತು ಸತ್ಯವೆನಿಸಿತು. ನಾನು ಸಂದರ್ಶಿಸಿ, ಟಿಪ್ಪಣಿ-ಸಂಗ್ರಹ ಮಾಡಿಕೊಂಡ ನೂರಕ್ಕೂ ಹೆಚ್ಚು ಕಲಾವಿದರು ಧ್ವನಿ ಸುರಳಿ ನೀಡಿದ್ದಾರೆ. ಅವುಗಳ ಬೆಲೆಯನ್ನೂ ನೀಡಿದ್ದೇನೆ. ಅವರ ಹಾಡುಗಳು ಪುಸ್ತಕಗಳಲ್ಲೂ ಮೂಡಿವೆ ನೋಡಿರಿ ಎಂದೆನ್ನುವುದನ್ನು ಪ್ರತ್ಯಕ್ಷ ಕಂಡುಕೊಂಡೆನು. ಅವರಿಗೆಲ್ಲರಿಗೂ ಅನನ್ಯ ಕೃತಜ್ಞತೆಗಳು.

ಈ ಸಂಗ್ರಹದಲ್ಲಿರುವ ಆಕರ ಗ್ರಂಥಗಳ ಸಂಗ್ರಹಕಾರರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ನೀಡುವೆನು. ಹಾಗೇ ಸಂದರ್ಭ ಸೂಚಿಯ ಲೇಖಕರಿಗೆಲ್ಲರಿಗೂ ನನ್ನೀ ಕೃತಜ್ಞತೆಗಳು.

ಈ ಸಂಗ್ರಹ ಸಂಶೋಧನೆಯ ಕಾರ್ಯ ಘನ ಕಾರ್ಯವೇ ಆಗಿರುವುದು. ಇಲ್ಲಿ ಒಂದು ಸಂಪುಟ ಮಾತ್ರವಾಗಿದೆ. ಇಂತಹ ಅನೇಕ ಡೊಳ್ಳಿನ ಹಾಡು (ಪದ)ಗಳ ಸಂಪುಟಗಳು ರಚನೆಯಾಗುವಷ್ಟು ವಸ್ತು-ವೈವಿಧ್ಯೆ-ವಿಸ್ತಾರದ ಸಾಹಿತ್ಯವಿದೆ. ಈ ಸಂಪುಟಕ್ಕೆ ನನ್ನ ಸಂಗ್ರಹದಿಂದಲೂ ಪ್ರಕಟಿತ ಆಕರಗಳನ್ನೂ ಸೇರಿಸಲಾಗಿದೆ. ಇನ್ನೂ ಹಸ್ತ ಪ್ರತಿಯ ಪುಟಗಳು ಉಳಿದುಕೊಂಡಿವೆ.

ನನಗೆ ಕ್ಷೇತ್ರ ಕಾರ್ಯದಲ್ಲಿ ಅನೇಕ ಅಡೆ-ತಡೆಗಳು ಎದುರಗಿದ್ದುಂಟು. ಅವುಗಳನ್ನು ಹೇಳಿಕೊಳ್ಳುವುದು ಸರಿಯಲ್ಲ ! ದಕ್ಷಿಣ ಕರ್ನಾಟಕದಲ್ಲೂ ! ಉತ್ತರ ಕರ್ನಾಟಕದಲ್ಲಿ ನೂರಾರು ದೈವಗಳು ಕುರುಬರವುಗಳಾಗಿವೆ. ಹಾಗೇ ಕುರುಬರು ಶೈವ ಮತ್ತು ವೈಷ್ಣವ ಪಂಥಗಳಲ್ಲಿ ತಾರತಮ್ಯವನ್ನುಂಟು ಮಾಡಿಲ್ಲ ! ತ್ರಿಮೂರ್ತಿಗಳನ್ನೂ ಹಾಗೂ ಇತರ ಶಕ್ತಿ ದೇವತೆಗಳನ್ನು ಆರಾಧಿಸುತ್ತ ಸಾಗಿ ಬಂದಿದ್ದಾರೆ. ಚರಿತ್ರೆ ಕಟ್ಟಿ ಹಾಡುತ್ತ ಬಂದಿದ್ದಾರೆ. ತಮ್ಮ ಪರಂಪರೆಯನ್ನು ಹೆಚ್ಚಿಸುತ್ತ ಬಂದಿದ್ದಾರೆ.

ದೇವರ ಗುಡ್ಡದ ಮಾಂತೇಶ (ಮಾಲತೇಶ)ನ ಪೂಜಾರಿ (ಸೇವಕವಗ್ಗರು)ಗಳು ; ಮೈಲಾರದ ಮೈಲಾರ ಲಿಂಗನ ಪೂಜಾರಿ (ವಗ್ಗರು)ಗಳಿಗೂ ನಾನು ಕೃತಜ್ಞತೆ ಹೇಳಲೇಬೇಕು.

ಈ ಇಪ್ಪತ್ತೊಂದನೆಯ ಶತಮಾನ ಪ್ರಾರಂಭವಾಗುವ ಮುಂಚೆ, ಅಂದರೆ ಇಪ್ಪತ್ತನೆಯ ಶತಮಾನದ ಕೊನೆಯ ದಶಕದಿಂದ, ಡೊಳ್ಳುಕಲೆಯನ್ನು ಮಹಿಳೆಯರೂ ಕೈಗೆತ್ತಿಕೊಂಡಿದ್ದಾರೆ. (ಪ್ರಸ್ತಾವನೆಯಲ್ಲಿ ಹೆಸರಿಸಿರುವೆ). ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವೆನು.

ಡೊಳ್ಳು ಕಲೆಯನ್ನು ಭಾರತ – ರಶಿಯಾ ದೇಶಗಳಲ್ಲಿ ಪರಿಚಯಿಸಿದ ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರ ಗ್ರಾಮದ ಕಣ್ಣೇಶ್ವರ ಡೊಳ್ಳು ಮೇಳದವರಿಗೂ ಕೃತಜ್ಞತೆಗಳು.

ಡೊಳ್ಳಿನ ಸಾಹಿತ್ಯ-ಸಂಸ್ಕೃತಿ ಸಂಶೋಧಿಸಿದಷ್ಟು ಎತ್ತರವಾಗುತ್ತಿದೆ. ಆಳಕ್ಕಿಳಿಯುತ್ತಿದೆ. ವಿಶಾಲ ಹೊಂದುತ್ತದೆ.

ಡಾ. ಲಿಂಗಣ್ಣ ಸಣ್ಣಕ್ಕಿ
ಬೆಂಗಳೂರು
ಕನ್ನಡ ಭವನ
೩೦-೮-೨೦೦೬
ಗೋಕಾಕ