. : ಯಾರೂ ಕಷ್ಟಕ್ಕೆ ಗುರಿಯಾಗಿಲ್ಲವೇ ? ಹೇಳುತ್ತೇನೆ ಕೇಳು :

ಪದ : ತಾಳ ತ್ರಿತಾಳ; ರಾಗ ಮಿಶ್ರಕಾಪಿ (ಚಕ್ಕಡ)

ಸತ್ವಗುಣವನ್ನು ನಂಬಿ ಸತ್ಯ ಹರಿಶ್ಚಂದ್ರ ತಾ
ಭೃತ್ಯ ಹೊಲಯನಿಗಾಗಿ ಸಂತಾಪ
ಹೊಂದಿದಾ ಆ ನರಕುಲದೀಪ
ಸುಡುಗಾಡ ಕಾಯ್ದ ಕಷ್ಟ ಸೋಸಿದ
ಸತ್ವಗುಣಕ್ಕೆ ಸುಖವೆಲ್ಲಿಯದು ಜಗಸಿದ್ಧಾ॥1 ॥

ಧರ್ಮವೇ ಜಯವೆಂದು ಧರ್ಮಭೂಪತಿ ತಾ
ದುರ್ಧರ ವನವಾಸ ಸೋಸಿದ
ಬಹು ಬಗೆಯಿಂದ ತಾ ನಾಶ್ಯಾದ
ಪರಹಿತದಿಂದ ಮೋಟಾಗಿ ನಿಂದ
ವಿಕ್ರಮಭೂಪತಿ ತಾ ಹಿಂದೆ ನಿನ್ನಿಂದಾ॥2 ॥

ಛೀ ಮೂಢಳೇ, ಸತ್ವಗುಣ ಸಂಪನ್ನೆಯಾದ ನನ್ನನ್ನು ನಂಬಿ ಯಾರೂ ಕೆಟ್ಟಿಲ್ಲ. ಯಾರೂ ಕಷ್ಟಕ್ಕೆ ಗುರಿಯಾಗಿಲ್ಲ ಎಂದು ಯಾಕೆ ಬೊಗಳುತ್ತಿ ? ಸತ್ವಗುಣವೇ ಸದಾಗತಿಯೆಂದು ನಂಬಿದ ಹರಿಶ್ಚಂದ್ರನನ್ನು ದೇಶಭ್ರಷ್ಟನನ್ನಾಗಿ ಮಾಡಿ, ಹೊಲೆಯನ ಆಳಾಗುವಂತೆ ಮಾಡಿ, ಸುಡಗಾಡ ಕಾಯಲಿಕ್ಕೆ ಹಚ್ಚಿದೆ. ಧರ್ಮ ದೇವಿಯಾದ ನನ್ನನ್ನು ಬಿಡಬೇಡ, ಧರ್ಮವೇ ಜಯ ವೆಂದು ಹೇಳಿ ಉಬ್ಬಿಸಿ, ಆ ಪಾಂಡವರನ್ನು ಅನ್ನಕ್ಕೆ ಹೊರತು ಮಾಡಿ ಹನ್ನೆರಡು ವರುಷ ವನವಾಸಕ್ಕೆ ಅಟ್ಟಿದೆ. ಪರಹಿತವೇ ಪರಮ ಪುರುಷಾರ್ಥ; ಅದನ್ನೇ ನೀನು ಮಾಡುತ್ತಿರು ಎಂದು ವಿಕ್ರಮರಾಜನಿಗೆ ಬೋಧಿಸಿ, ನಿರಪರಾಧಿಯಾದ ಅವನ ಕೈಕಾಲುಗಳನ್ನು ಕಡಿಸಿ, ಮೋಟನನ್ನಾಗಿ ಮಾಡಿ ಕೂಡ್ರಿಸಿ ಬಿಟ್ಟೆ. ಸತ್ವಗುಣ ಸಂಕಟಕ್ಕೆ ಮೂಲ ! ಸಾಧು ಎತ್ತಿಗೆ ಎರಡು ಹೇರು ಎಂಬಂತೆ, ಮೆತ್ತನ್ನ ಸತ್ವಗುಣಿಗಳಿಗೆ ಭಾರ ಹೇಳುವವರೇ ಹೆಚ್ಚಲ್ಲವೆ?
ಸಾ. : ತಮ್ಮಾ, ನೀನು ನನ್ನನ್ನು ತಿರಸ್ಕರಿ ಮಾತನಾಡಬೇಡ. ಸತ್ವಗುಣಕ್ಕೆ ಮೊದಲು ಅಲ್ಪಸ್ವಲ್ಪ ತೊಂದರೆ ಬಂದರೂ ಕೊನೆಗೆ ಅದಕ್ಕೇ ಜಯವುಂಟು. ಸತ್ವಗುಣವನ್ನು ನಂಬಿದ ಹರಿಶ್ಚಂದ್ರನು ಸ್ಮಶಾನವನ್ನು ಕಾಯ್ದರೂ ಧರ್ಮವೇ ಜಯವೆಂದು ಧರ್ಮರಾಜನು ವನವಾಸ ಸೋಸಿದರೂ ಪರಹಿತವೇ ಪರಮಾತ್ಮನ ಸೇವೆಯೆಂದು ನಂಬಿದ ವಿಕ್ರಮರಾಜನು ಕೈಕಾಲು ಕಡಿಸಿಕೊಂಡು ಮೋಟನಾದರೂ ಕೊನೆಗೆ ಸವೆಯದಂಥ ಸುಖವನ್ನು ಪಡೆದರಲ್ಲದೆ ಅಳಿಯದ ಕೀರ್ತಿಯನ್ನು ಗಳಿಸಿದರು. ಕಿಚ್ಚಿಗೆ ಎರಗುವ ಇರುವೆಗಳು ತಾವೇ ಸುಟ್ಟುಕೊಂಡು ಸಂಕಟಪಡುವಂತೆ, ಸಜ್ಜನರಿಗೆ ದುಃಖಕೊಟ್ಟ ದುಷ್ಟರು ಕೊನೆಗೆ ತಾವೇ ದುಃಖವನ್ನು ಹೊಂದುವರು. ಕಾಸಿ ಬಡೆದರ ಬಂಗಾರಕ್ಕೆ ಬಣ್ಣ ಬರುವಂತೆ, ಕಾಡಿ ನೋಡಿದಷ್ಟು ಸಜ್ಜನರ ಸಾತ್ವಿಕಗುಣ ಕಳೆಯೇರುವದು. ಅದು ಶಿವನ ಮೆಚ್ಚುಗೆಗೆ ಪಾತ್ರವಾಗುವದು. ಹುಚ್ಚಾ, ಸತ್ಪುರುಷರ ದರ್ಶನದಿಂದ ಸೆಗಣಿಯೊಳಗಿನ ಹುಳವು ಸಹ ಕೈವಲ್ಯ ಹೊಂದಿದ್ದು ನಿನಗೆ ಗೊತ್ತಿಲ್ಲವೆ ?

. : ಎನು ? ಸತ್ಪುರುಷರ ದರ್ಶನದಿಂದ ಸೆಗಣಿಯ ಹುಳಕ್ಕೆ ಸದ್ಗತಿಯಾಗಿರುವೇ ? ಎಂಥ ಸೋಜಿಗದ ಮಾತಿದು !

ಸಾ. : ಸೋಜಿಗದ ಮಾತಲ್ಲ, ಮೂಜಗವು ಬಲ್ಲ ಮಾತು.

. : ಅದು ಸಂಭವಿಸಿದ ಬಗೆ ಹೇಗೆ ?

ಪದ : ತಾಳ ಕೇರವಾ; ರಾಗ ಮಿಶ್ರಪೀಲು

ಸಾ. : ಸಾಧುರ ದರ್ಶನದಿಂದ ಫಲವೇನು ಬರುವದೆಂದು
ಪೂರ್ವದಿ ನಾರದ॥

ಸೆಗಣಿ ಹುಳವನು ತೋರಿ, ಕೇಳು ಅಂದನೊ ಹರಿ
ಪರಮ ಸಾಧು ನಾರದನ ದರ್ಶನದಿಂದ
ಹುಳದ ಜನ್ಮವ ನೀಗಿ, ಅದೇ ಮುಂದ
ಹಂಸನಾಗಿ ಹುಟ್ಟಿತೋ ನಿಜದಿಂದ (ಚಲತಿ)
ಸಾಧುರ ದರ್ಶನದಿಂದ ಫಲವೇನು ಬರುವದೆಂದು
ಹಂಸನ ಮರಿಯ ಕೇಳೋ ನಾರದಾ॥1 ॥

ಹಂಸ ನಾರದನ ದರ್ಶನದಿಂದ ತಾನಾ
ಪಕ್ಷಿಜನ್ಮ ನೀಗುತ ಭೂಮಿ ಮೇಲಾ
ಅರಸಿಪಿಂಡ ಆಗಿ ಹುಟ್ಟಿತೋ ಆಗ ಬಾಲಾ
ಪುನಃ ಬಂದು ಕೇಳಿದ ಮುನಿಲೋಲಾ (ಚಲತಿ)
ಪೇಳೈ ರಾಜಕಂದ ಸಾಧುರ ದರ್ಶನದಿಂದ
ಫಲವೇನು ನೀನೀಗ ತಿಳಿದ್ಯಾ॥2 ॥

ಚಾರ್ವಾಕಾ, ಸಾಧುಗಳ ದರ್ಶನದಿಂದ ಸೆಗಣಿಯ ಹುಳಕ್ಕೆ ಸದ್ಗತಿಯಾದ ಸಂಗತಿಯನ್ನು ಹೇಳುತ್ತೇನೆ ಕೇಳು. ಪೂರ್ವದಲ್ಲಿ ನಾರದ ಋಷಿಯು ಶ್ರೀಕೃಷ್ಣನ ಹತ್ತಿರ ಹೋಗಿ ಸ್ವಾಮಿ, ಸತ್ಪುರುಷರ ದರ್ಶನದಿಂದ ಏನಾಗುತ್ತದೆ? ಎಂದು ಕೇಳಿದನು. ಅದಕ್ಕೆ ಶ್ರೀಕೃಷ್ಣನು, ನಾರದಾ, ಸತ್ಪುರುಷರ ದರ್ಶನದಿಂದ ಏನಾಗುವದೆಂಬುದನ್ನು ಅದೋ ಸೆಗಣಿಯ ಉಂಡೆಯನ್ನು ಉರುಳಿಸಿಕೊಂಡು ಹೋಗುತ್ತಿರುವ ಆ ಹುಳವನ್ನು ಕೇಳು. ಅದು ಹೇಳುತ್ತದೆ ಎಂದನು. ಆಗ ನಾರದನು ಆ ಹುಳದ ಹತ್ತಿರ ಹೋಗಿ ಹುಳವೇ, ಸಾಧುಗಳ ದರ್ಶನದಿಂದ ಏನಾಗುತ್ತದೆ ? ಎಂಬುದನ್ನು ನನಗೆ ಹೇಳು ಎಂದನು. ಆಗ ಆ ಹುಳವು ನಾರದನ ಮುಖವನ್ನು ಹುಳು ಹುಳು ನೋಡಿ ಸತ್ತುಬಿತ್ತು. ಪುನಃ ನಾರದನು ಕೃಷ್ಣನ ಹತ್ತಿರ ಬಂದು, : ಸ್ವಾಮಿ, ನಾನು ಕೇಳಿದಾಕ್ಷಣವೇ ಆ ಹುಳವು ಸತ್ತು ಬಿತ್ತು; ಅದು ನನಗೆ ಏನನ್ನೂ ಹಳಲಿಲ್ಲ ಎಂದನು. ಆಗ ಕೃಷ್ಣನು : ಹಾಗಾದರೆ ಇನ್ನು ಹತ್ತು ತಿಂಗಳ ನಂತರ ನನ್ನಲ್ಲಿಗೆ ಬಾ, ಆಗ ನಿನಗೆ ಹೇಳುತ್ತೇನೆ ಎಂದು ಹೇಳಿದನು. ಹತ್ತು ತಿಂಗಳಾದ ಮೇಲೆ ಪುನಃ ನಾರದನು ಬಂದು ಕೃಷ್ಣ ಪರಮಾತ್ಮಾ, ಸತ್ಪುರುಷರ ದರ್ಶನದಿಂದ ಏನಾಗುತ್ತದೆಂದು ಕೇಳಿದನು. ಆಗ ಕೃಷ್ಣನು ಆಗೋ ಅಲ್ಲಿ ಹಾರಿ ಹೋಗುವ ಹಂಸವನ್ನು ಕೇಳು; ಅದು ಹೇಳುತ್ತದೆ ಅಂದನು. ಕೂಡಲೆ ನಾರದನು ಆ ಹಂಸ ಪಕ್ಷಿಯ ಬಳಿಗೆ ಹೋಗಿ ಹಂಸ ಪಕ್ಷಿಯೆ, ಸಾಧುಗಳ ದರ್ಶನದಿಂದ ಏನಾಗುತ್ತದೆಂಬುದು ಕೇಳಿದನು. ಕೂಡಲೇ ಆ ಹಂಸ ಪಕ್ಷಿಯು ನಾರದನ ಮುಖವನ್ನು ಹುಳು ಹುಳು ನೋಡಿ ಸತ್ತುಬಿತ್ತು. ಪುನಃ ನಾರದನು ಶ್ರೀಕೃಷ್ಣನ ಬಳಿಗೆ ಬಂದು, ಅ ಹಂಸಪಕ್ಷಿಯು ಏನೂ ಹೇಳದೆ ಸತ್ತುಹೋದ ಸುದ್ದಿಯನ್ನು ತಿಳಿಸಲು, ಕೃಷ್ಣನು ನಾರದನಿಗೆ ಹಾಗಾದರೆ ನೀನಿನ್ನು ಒಂದು ವರ್ಷದ ತರುವಾಯ ಬಾ ಆಗ ಸಾಧುಗಳ ದರ್ಶನದಿಂದಾಗುವ ಶ್ರೇಯಸ್ಸನ್ನು ಹೇಳುತ್ತೇನೆಂದು ತಿಳಿಸಿದನು. ಒಂದು ವರ್ಷದ ನಂತರ ನಾರದ ಋಷಿಯು ಶ್ರೀಕೃಷ್ಣನಲ್ಲಿಗೆ ಬಂದು ಸಾಧುಗಳ ದರ್ಶನದಿಂದ ಏನಾಗುವುದು ಎಂದು ಕೇಳಿದನು. ಆಗ ಕೃಷ್ಣಪರಮಾತ್ಮನು, ಇಂಥ ಊರಲ್ಲಿ ಒಬ್ಬ ಅರಸನಿಗೆ ಒಂದು ಗಂಡು ಕೂಸು ಹುಟ್ಟಿ ಮೂರು ದಿವಸವಾಯಿತು. ಆ ಕೂಸನ್ನು ಕೇಳು ಎಂದನು, ಆಗ ನಾರದನು ಶ್ರೀಕೃಷ್ಣಮೂರ್ತಿಗೆ, ಸ್ವಾಮಿ ಒಳ್ಳೆಯದನ್ನೇ ಹೇಳಿದಿರಿ; ಆ ಹುಳವೂ ಆ ಹಂಸವೂ ಸತ್ತಂತೆ ಆ ಅರಸನ ಮಗನು ಸಾಯಬೇಕು ಅವರು ನನ್ನ ಡುಬ್ಬಾ ಬೆಳಗಬೇಕು. ಉತ್ತಮ ಹಂಚಿಕೆ ಹಾಕಿದಿರಿ ! ನಾನು ಆ ಕೂಸನ್ನು ಕೇಳಲು ಹೋಗಲಾರೆ ಎಂದನು. ಆಗ ಶ್ರೀಕೃಷ್ಣನು, ಆ ಕೂಸು ಸಾಯುವದಿಲ್ಲ ಎಂದು ಅಭಯವಿತ್ತನು. ನಾರದನು ಆ ಮೂರು ದಿನದ ರಾಜಕುಮಾರನ ಮುಂದೆ ನಿಂತು, ಕಂದಾ, ಸಾಧುಗಳ ದರ್ಶನದಿಂದ ಏನಾಗುತ್ತದೆ? ನನಗೆ ಹೇಳು ಎಂದು ಕೇಳಿದೊಡನೆಯೇ ಆ ಕೂಸು ಹಾಡಿದ ರೀತಿಯನ್ನು ಕೇಳು :

ಪದ : ತಾಳ ಕೇರಾವ; ರಾಗ ಮಿಶ್ರಕಾಪಿ

ಸಾಕ್ಷಾತ್ ಮುಕುಂದರೂಪಾಗಿ ಆ ಕಂದ
ನಿಂತಿತೋ ಮುನಿಮುಂದ॥ಪಲ್ಲ ॥

ನೋಡಿಕೋ ನಾರದಾ ಬುದ್ಧಿವಿಶಾರದಾ
ಹುಳದ ರೂಪಾಗಿ ಇದ್ದೆ ನಾ ಹಿಂದ
ಸಾಧುವಾದ ನಿನ್ನಯ ದರ್ಶನದಿಂದ,
ಆಗಿ ನಿಂತೆ ಸಾಕ್ಷಾತ್ ಗೋವಿಂದ (ಚಲತಿ)
ನೋಡಿಕೋ ಮುನಿಲೋಲಾ
ಮುಕ್ತಿಗೆ ಅದು ಮೇಲಾ ಸದ್ಗುಣಶೀಲಾ॥1 ॥

ಗುರುವೆ ಸರ್ವೇಶ್ವರಾ ದೀನದಯಾಕರಾ
ಆಡಲಾಗದೊ ಸಾಧುರ ನಿಂದಾ
ಅದರಿಂದ ತಪ್ಪದೋ ನರಕ ಮುಂದ
ಪೇಳಿದ ಕವಿವರ ಶಿವಾನಂದ (ಚಲತಿ)
ಫಲಪುರಧೀಶನ ನೆನೆಯುತ ಅನುದಿನಾ
ಹಿಡಿಯೋ ನೀನು ಮುಕ್ತಿಮಾರ್ಗವನಾ॥2 ॥

ತಮ್ಮಾ, ಸಾಧುಗಳ ದರ್ಶನದಿಂದ ಏನಾಗುತ್ತದೆ? ಎಂದು ಆ ಅರಸನ ಮಗುವನ್ನು ನಾರದ ಋಷಿ ಕೇಳಲು, ಆ ಮೂರು ದಿವಸದ ಕಳಲು ಮನುಷ್ಯ ಜನ್ಮವನ್ನು ನೀಗಿ, ಸಾಕ್ಷಾತ್ ಮುಕುಂದನ ರೂಪವನ್ನು ಧರಿಸಿ ನಾರದನ ಮುಂದೆ ನಿಂತು, ಸಾಧು ಶ್ರೇಷ್ಠನಾದ ನಾರದ ಋಷಿಯೆ, ಸಾಧುಗಳ ದರ್ಶನದಿಂದ ಏನಾಗುತ್ತದೆಎಂಬುದನ್ನು ಹೇಳುತ್ತೇನೆ ಕೇಳು : ನಾನು ಎರಡು ವರ್ಷಗಳ ಹಿಂದೆ ಹುಳದ ಜನ್ಮದಲ್ಲಿದ್ದು ಸೆಗೆಣಿಯ ಉಂಡೆಯನ್ನು ಉರುಳಿಸಿಕೊಂಡು ಹೋಗುತ್ತಿದ್ದೆ, ಆಗ ಪರಮ ಸಾಧುವಾದ ನಿನ್ನ ದರ್ಶನ ನನಗಾಗಲು ಆ ಹುಳದ ಜನ್ಮ ಹೋಗಿ ರಾಜಹಂಸವಾಗಿ ಹುಟ್ಟಿದೆ. ಮುಂದೆ ಪುಣ್ಯವಶದಿಂದ ನಿನ್ನ ದರ್ಶನ ನನಗೆ ಪುನಃ ದೊರೆಯಲು, ಹಂಸ ಜನ್ಮವನ್ನು ನೀಗಿ ರಾಜಪುತ್ರನಾಗಿ ಜನಿಸಿದೆ. ಇಂದು ಸಾಧುಶ್ರೇಷ್ಠನಾದ ನಿನ್ನ ದರ್ಶನವಾಯಿತು. ಆದ್ದರಿಂದ ಈ ನರಶರೀರವು ಹೊಗಿ ಇಗೋ ಸಾಕ್ಷಾತ್ ಮುಕುಂದನೇ ಆಗಿ ನಿನ್ನ ಮುಂದೆ ನಿಂತಿರುವೆನು ನೋಡು ! ಎಂದು ಹೇಳಿ, ಕೃಷ್ಣಾ ಕೃಷ್ಣಾ ಎನ್ನುತ್ತ ಕೈ ಚಪ್ಪಾಳೆ ಬಡೆಯುತ್ತ ವೈಕುಂಠಕ್ಕೆ ಹೋಯಿತು. ನೋಡು ಚಾರ್ವಾಕಾ, ಸತ್ಪುರುಷರ ದರ್ಶನದಿಂದ ಸಗಣಿಯ ಹುಳವು ಸಹ ಕೈವಲ್ಯವನ್ನು ಪಡೆಯಿತು. ಪರುಷ ಮುಟ್ಟಿದ ಕಬ್ಬಿಣ ಹೊನ್ನಾಗುವಂತೆ ಶಿವಶರಣರು ಮುಟ್ಟಿದ ಮಣ್ಣು ಚಿನ್ನವಾಗುವದು. ಹಿಂದೆ ಆಗಿ ಹೋದ ಶಿವಶರಣರೆಲ್ಲರೂ ಸತ್ವಗುಣದಿಂದಲೇ ಸದ್ಗತಿಯನ್ನು ಹೊಂದಿದರು.
. : ಬಿಡು ಬಿಡು, ಏನು ಹೇಳುವಿ ನಿನ್ನ ಶರಣರ ಶೀಲವನ್ನು ? ಮಡಿವಾಳ ಮಾಚಿದೇವನಿಗೆ ಮೈಲಿಗೆಯ ಅರಿವೆಗಳನ್ನು ಒಗೆದು ಹೊಟ್ಟೆ ಹೊರೆದುಕೊಳ್ಳುವದೇ ಕೆಲಸ ! ಬೇಡರ ಕನ್ನಯ್ಯನಿಗೆ ಕಳವು ಮಾಡಿ ಸಂಸಾರ ಸಾಗಿಸುವದೇ ಕೆಲಸ !! ಮಾದಿಗರ ಚನ್ನಯ್ಯನಿಗೆ ಪಾದರಕ್ಷೆಗಳನ್ನು ತಯಾರಿಸಿ ಉಪಜೀವನ ಮಾಡಿಕೊಳ್ಳುವದೇ ಕೆಲಸ!!! ನೋಡು, ನಿನ್ನ ಶರಣರು ದುಡಿದುಡಿದು ಸತ್ತು ಹೋಗುವರು. ಅವರು ಯಾವ ಗತಿಯನ್ನು ಹೊಂದಿದರು ಹೇಳು ?

ಪದ : ತಾಳ : ಕೇರಾವ; ರಾಗ : ಮಿಶ್ರಪೀಲು

ಸಾ. : ಶರಣ ಬಸವ ಮಹಾನುಭಾವ
ಮಾಚಿದೇವನೆದುರಿನಲ್ಲಿ॥ಪಲ್ಲವಿ ॥

ಬೇಡುವ ಭಕ್ತರಿಲ್ಲದೆ ಬಡವ
ನಾದೆನೆಂದು ಬಸವನು ತಾ
ನುಡಿಯೆ ಗಡನೆ ಕಡುಕೋಪದಿ ತಾ
ಖತಿಗೊಳುತಾ ಮಾಚಿಯು ತಾ

ಚಾರ್ವಾಕಾ, ಒಮ್ಮೆ ಮಾಚಿದೇವನಿಗೆ ಬಸವಣ್ಣನವರ ದರ್ಶನವಾಯಿತು. ಆಗ ಮಾಚಿದೇವನು, ಬಸವಾ, ನಿನ್ನ ಬಾಳ್ವೆಯು ಹ್ಯಾಗೆ ಸಾಗಿದೆ ? ಎಂದು ಕೇಳಿದನು. ಆಗ ಬಸವಣ್ಣನು, ಮಾಚಿದೇವಾ, ಬೇಡುವ ಭಕ್ತರಿಲ್ಲದೆ ಬಡವನಾಗಿದ್ದೇನೆ : ಎಂದನು. ಆಗ ಮಾಚಿದೇವನು ಬಸವಣ್ಣನ ಸೊಕ್ಕು ಇಳಿಸಬೇಕೆಂದು ತಾನು ಮೈಲಿಗೆಯ ಅರಿವೆಗಳನ್ನು ಒಗೆಯುವ ಮಡುವಿನ ಹತ್ತಿರ ಕರೆದುಕೊಂಡು ಹೋದನು.

. : ಮುಂದೇನಾಯಿತು ?

ಸಾ. : ಹೇಳುತ್ತೇನೆ ಕೇಳು :

ಪದ : ತಾಳ ಕೇರವಾ; ರಾಗ ಮಿಶ್ರಕಾಪಿ

ಚಿಮ್ಮುವ ನೀರು ಹನಿಯ ಕೊಟ್ಟಂತೆ ರತ್ನದ ಚಳೆಯ
ಸುರಿಯಿತು ಹೊನ್ನಿನ ಮಳೆಯು॥

ಈ ಭವ ಕಳಚಿದ ಮಡಿವಳ ಮಾಚಿಯು
ಪರುಷಹಸ್ತ ಮುಟ್ಟಿದ ನೀರೆಲ್ಲ
ರತ್ನದ ರಾಶಿಯಾಯಿತೋ ಭೂಮಿಮ್ಯಾಲ
ಶಿವಶಿವ ಭಕ್ತರ ಘನ ಮೇಲಾ
ಭಕ್ತರ ಮಹಿಮಾ ತಿಳಿಯದ ಅಧಮಾ
ಮನ್ನಿಸೆಂದೆನುತ ಬೇಡಿದ ಕ್ಷಮಾ॥1 ॥

ಕನ್ನದ ಬೊಮ್ಮನು ಗೋಡೆಯ ಮಣ್ಣನು
ತೋಡಿ ತೋಡಿ ಒಗೆದಂತೆ ಆ ಮಣ್ಣಾ
ಆಗಿ ಬೀಳಹತ್ತಿತೊ ಚಿನ್ನರತ್ನಾ
ಶಿವಶಿವ ಭಕ್ತರ ಮಹೆಮೆಯನ್ನಾ
ಭಕ್ತರ ಮಹಿಮಾ ತಿಳಿಯಲೊ ನೀನಾ
ಹಳಿಯಲು ಬೇಡೊ ನೀ ಇನ್ನಾ॥2 ॥

ಚಾರ್ವಾಕಾ, ಆಗ ಮಾಚಿದೇವನು ಬಸವಣ್ಣನವರ ಎದುರಿಗೆ ಮೈಲಿಗೆ ಅರಿವೆಗಳನ್ನು ನೀರಿನಲ್ಲಿ ಎದ್ದಿಎದ್ದಿ ಒಗೆಯಲು ಸಿಡಿದ ಹನಿಗಳೆಲ್ಲ ರತ್ನದ ರಾಶಿಯಾಗಿ ಬೀಳಹತ್ತಿದವು. ಆಗ ಬಸವನು ನಾಚಿ ತಿರುಗಿ ಹೋದನು. ಚಾರ್ವಕಾ, ಶಿವಶರಣರ ಮಹಿಮೆ ಎಂತಹ ಅಗಾಧವೆಂಬುದನ್ನು ತಿಳಿದುಕೋ.

. : ಸಾತ್ವಿಕೀ ಮಾತೆಯೇ, ಕಣ್ಣಪ್ಪನು ಬೇಡನಲ್ಲವೆ ?

ಸಾ. : ಚಾರ್ವಾಕಾ, ಅವನು ಬೇಡನಲ್ಲ.

. : ಹಾಗಾದರೆ ಬೇಡರೆಂದರೆ ಯಾರು ?

ಸಾ. : ಚಾರ್ವಾಕಾ, ಊರಿಗೆ ಬೇಡ ಕೇರಿಗೆ ಬೇಡ ನಾಡಿಗೆ ಬೇಡ ಎಲ್ಲರಿಗೂ ಬೇಡಾದವನೇ ಬೇಡನು. ಹಿಂದೆ ಕನ್ನದ ಬೊಮ್ಮನು ಕನ್ನದ ಮಣ್ಣನ್ನು ತೋಡುವಾಗ ಆ ಮಣ್ಣೆಲ್ಲಾ ಚಿನ್ನವಾಗಿ ಬೀಳುತ್ತಿತ್ತು. ಆತನು ಅದಕ್ಕೆ ಆಶೆ ಮಾಡಲಿಲ್ಲ. ಅವನು ಮಾಡುತ್ತಿದ್ದುದು ಕಾಯಕ ! ತನ್ನ ದುಡಿಮೆಗೆ ಸಿಗಬಹುದಾದ ಕೂಲಿಯನ್ನೇ ಸ್ವೀಕರಿಸಿ, ಇದ್ದುದರಲ್ಲಿಯೇ ಶರಣರಿಗೆ ದಾಸೋಹ ಮಾಡಿ ಪ್ರಸಾದವನ್ನು ಸ್ವೀಕರಿಸುತ್ತಿದ್ದ.

. : ಅದು ಏನೇ ಇರಲಿ ! ಮಾದಿಗರ ಹರಳಯ್ಯನು ಹೊಲೆಯನಲ್ಲವೇ ?

ಸಾ. : ಪುಣ್ಯಾತ್ಮಾ, ಅವನು ಹೊಲೆಯನಲ್ಲ.

. : ಹಾಗಾದರೆ ಹೊಲೆಯ ಅಂದರೆ ಯಾರು ?

ಸಾ. : ಚಾರ್ವಾಕಾ, ಊರ ಹೊರಗೆ ಇರುವವರೆಲ್ಲರೂ ಹೊಲೆಯರಲ್ಲ. ನೀತಿಯಲ್ಲಿ ಹೊಲೆಯ ಮಾತಿನಲ್ಲಿ ಹೊಲೆಯ ಹೊಲಸು ತಿಂಬುವವನೆ ಹೊಲೆಯ ಹೀಗೆಂದು ಬಸವಣ್ಣನವರ ವಾಕ್ಯವಿದೆ. ಯಾವನ ಮನದಲ್ಲಿ, ಮೈಯಲ್ಲಿ ಹೊಲೆಯಿರುವದೋ ಅವನು ನಿಜವಾಗಿ ಹೊಲೆಯ. ಚಾರ್ವಾಕಾ, ಶಿವಶರಣರ ಮೈಮನದಲ್ಲಿ ಎಂದೂ ಹೊಲೆಯಿರುವದಿಲ್ಲ.

. : ಹಾಗಾದರೆ, ನಿನ್ನ ಮೈಯಲ್ಲಿ ಹೊಲೆ ಇಲ್ಲವೇ ?

ಸಾ. : ಇಲ್ಲ.

. : ಹಾಗಾದರೆ, ನಿನ್ನ ಶರೀರವನ್ನು ಸೀಳಿ ತೋರಿಸು, ಹೊಲೆ ಇದೆಯೋ ಇಲ್ಲವೋ ನೋಡುತ್ತೇನೆ.

ಸಾ. : ಚಾರ್ವಾಕಾ, ನೋಡು, ಈಗಲೇ ಸೀಳಿ ತೋರಿಸುತ್ತೇನೆ. ಪ್ರಭುವರಾ ಅಲ್ಲಮಗುರುವರಾ! ಇದೋ ನನ್ನಲ್ಲಿ ಸತ್ವಗುಣ ಇದ್ದುದು ಸತ್ಯವೆಂಬುದನ್ನು ಜಗತ್ತಿಗೆ ಕಾಣುವಂತೆ ಅನುಗ್ರಹಿಸು. ಇದೋ ನನ್ನ ದೇಹ ಇಬ್ಭಾಗವಾಗುತ್ತಿದೆ. (ಎದೆ ಸೀಳಿಕೊಳ್ಳಲು ಸಿದ್ಧಳಾಗುವಳು).

. : ಆಹಾ ! ನನ್ನ ಸದ್ಭಕ್ತಳಾದ ಸಾತ್ವಿಕಿಗೆ ಎಷ್ಟೊಂದು ತೊಂದರೆಯಾಗುತ್ತಿದೆ. ಅದನ್ನು ನೋಡಲಾರೆ. ಇವಳಿಗೆ ಈಗಲೇ ನನ್ನ ನಿಜರೂಪ ತೋರಿ ಧನ್ಯಳನ್ನಾಗಿ ಮಾಡುತ್ತೇನೆ.

(ಅಲ್ಲಮಪ್ರಭುದೇವರು ತನ್ನ ನಿಜರೂಪವನ್ನು ತೋರುವನು)

ಮಂಗಳಾರತಿ : ತಾಳ ಕೇರವಾ; ರಾಗ ಅಸ್ಸಾ

ಶಿವಶಿವ ಶಿವಶಿವ ಮಂಗಲಂ ದೇಹಿ

ಭವಹರ ಸ್ಮರಹರ ಪುರಹರ ಪಾಹಿ॥

ಭವಭಯದೊಳು ಎನ್ನ ಬರಿಸಿದೆ ಏಕೊ
ಭವಹರ ಸಾಕಿನ್ನು ದಯಮಾಡಬೇಕೊ॥1 ॥

ಕಷ್ಟದೇಹವ ನೆಚ್ಚಿ ಹುಟ್ಟಿತೊ ಜೀವ
ಅಷ್ಟಮದಗಳ ಕಚ್ಚಿ ಕೆಟ್ಟೆನೋ ದೇವಾ॥2 ॥

ಮಾನಾಪಮಾನಕ್ಕೆ ನೀನೆ ಹೊಣೆಯೇಳು
ದಯಮಾಡೊ ಸಿದ್ಧಲಿಂಗ ನೀನೆ ಕೃಪಾಳು॥3 ॥

 : ಮುಕ್ತಾಯ :
***