ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಠಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಅಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಭೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ತತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಶಿಷ್ಟ ಸಾಹಿತ್ಯಕ್ಕೆ ಜನಪದ ಸಾಹಿತ್ಯ ಮೂಲದ್ರಯವ್ಯವೆಂಬುದು ಈಗಾಗಲೇ ಸಿದ್ಧವಾಗಿರುವ ಸಂಗತಿ. ಜನಪದ ಸಾಹಿತ್ಯದ ಬಹುಮುಖ್ಯವಾದ ಸೃಜನಶೀಲವಾದ ಭಾವನಾಪ್ರಧಾನವಾದ ಭಾಗವೆಂದರೆ ಅದರ ಸೋಂಕು ಮುರಿಯದ, ತಾಜಾತನದಲ್ಲಿ ಅದ್ದಿದ ವೈವಿಧ್ಯಮಯವಾದ ಜನಪದ ಕಾವ್ಯ. ಜನಪದ ಸಾಹಿತ್ಯದಲ್ಲಿ ಜನಪದರ ವಿಶಾಲ ಅನುಭವ, ಕಲ್ಪನಾಶೀಲತೆ, ಬುದ್ಧಿ ಕೌಶಲಗಳು ಹಾಗೂ ಭಾಷಾ ಪರಿಣತಿಗಳು ಸಂಗಮಗೊಂಡು ಅನೂನ ಕಥಾಸ್ರೋತ್ರವಾಗಿ ಹರಿಯುತ್ತವೆ. ಜನಪದ ಜೀವನದ ನೂರಾರು ಮಗ್ಗುಲುಗಳನ್ನು ತೀಕ್ಷಣವಾದ, ವ್ಯಂಗ್ಯವಾದ, ಸಹಜವಾದ, ಹಾಸ್ಯಮಯವಾದ, ಬೌದ್ಧಿಕವಾದ ಒಳನೋಟಗಳಿಂದ ಬಿಡಿಸುತ್ತ ಮನುಷ್ಯನ ಅದ್ಭುತ ಶಕ್ತಿಯ ವಿಸ್ತಾರ ವೈವಿಧ್ಯಗಳನ್ನು ದಾಖಲಿಸುತ್ತವೆ. ಆದರೆ, ಜನಪದ ಕಾವ್ಯ ಭಾವಮಯವಾದ ಸೂಕ್ಷ್ಮ ಸಂವೇದನಾಶೀಲವಾದ ವಿಶೇಷವಾಗಿ ನೋವು ಮತ್ತು ಪ್ರೀತಿಗಳ ಹಾಗೂ ಭಕ್ತಿ ಮತ್ತು ಪಾತಿವ್ರತ್ಯಗಳ ವಿವಿಧ ವರ್ಣಗಳ ಅರ್ಥಸಂಪನ್ನತೆಯನ್ನು, ಧ್ವನಿಸಂಪನ್ನತೆಯನ್ನು ಲಯಸಂಪನ್ನತೆಯನ್ನು, ಜೀವನಮೌಲ್ಯ ಸಂಪನ್ನತೆಯನ್ನು ಮಧುರ ಸಂಗೀತದ ಬಂಧದಲ್ಲಿ ಸ್ವಚ್ಛಂದವಾಗಿ ಕಟ್ಟಿ ನಮ್ಮ ಮನಸ್ಸು ಮತ್ತು ಭಾವಗಳನ್ನು ಆರ್ದ್ರಗೊಳಿಸುತ್ತವೆ, ಆನಂದಗೊಳಿಸುತ್ತವೆ ಮತ್ತು ಚಿಂತನೆಗೊಡ್ಡುತ್ತ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುತ್ತವೆ. ಜಾನಪದದ ಸೃಜನಶೀಲ ವ್ಯಕ್ತಿಪ್ರಜ್ಞೆ ಮತ್ತು ಸಾಮುದಾಯಿಕ ಸಂವೇದನೆಗಳು ಇಲ್ಲಿ ಪರಂಪರೆಯ ಹಾಗೂ ವಾಸ್ತವ ಬದುಕಿನ ಸಾಂದ್ರ ಪ್ರಜ್ಞೆಯೊಡನೆ ಏಕೀಭವಿಸುತ್ತವೆ. ಜನಪದ ಮಹಾಕಾವ್ಯಗಳು, ಖಂಡಕಾವ್ಯಗಳು ಇಂತಹ ಪ್ರಸಿದ್ಧ ಹಾಗೂ ಜನಪ್ರಿಯ ಕಥಾನಕಗಳ ಮೂಲಕ ಜಾನಪದದ ಅನನ್ಯ ಸಿರಿಯನ್ನು ವಿಶಿಷ್ಟ ರೀತಿಯಲ್ಲಿ ನಮ್ಮ ಮುಂದೆ ತೆರೆಯುತ್ತವೆ. ಈಗಾಗಲೇ ಪ್ರಕಟವಾಗಿರುವ ಜನಪದ ಕಾವ್ಯಗಳು ಖಂಡಕಾವ್ಯಗಳು ಈ ದೃಷ್ಟಿಯಿಂದ ಗಮನಾರ್ಹ ಕೊಡುಗೆಗಳಾಗಿವೆ.

ಮೇಲಿನ ಹಿನ್ನೆಲೆಯಲ್ಲಿ “ಅವ್ವಣೆವ್ವ ಕಾವ್ಯ” ಇದೀಗ ಪ್ರಕಟವಾಗುತ್ತಿದೆ. ದಟ್ಟ ಜಾನಪದ ಪ್ರಜ್ಞೆಯ ಕೌಟುಂಬಿಕ ಹಿನ್ನೆಲೆಯುಳ್ಳ ಡಾ. ತಾರೀಹಳ್ಳಿ ಹನುಮಂತಪ್ಪ ಅವರು ಈ ಅವ್ವಣೆವ್ವ ಕಾವ್ಯದ ಮೂಲಕ ನಮ್ಮ ಜನಪದ ಖಂಡಕಾವ್ಯಗಳ ಸಂಖ್ಯೆಯನ್ನು ಮಾತ್ರವಲ್ಲ ವಿಶಿಷ್ಟತೆಯನ್ನು ಹೆಚ್ಚಿಸಿದ್ದಾರೆ. ಈ ಕಾವ್ಯದಲ್ಲಿ ಏಳು ಜನ ಗಂಡು ಮಕ್ಕಳನ್ನು ಹಡೆದರೂ ಹೆಣ್ಣು ಹಡೆಯಲಿಲಲ್ಲವೆಂಬ ಆಕೆಯ ದುಃಖ ಮತ್ತು ಆತಂಕಗಳು ನೆರಮನೆಯ ಹೆಣ್ಣು ಮಕ್ಕಳನ್ನು ಆದರಿಸುವ, ಪುರಸ್ಕರಿಸುವ ನೆಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಮಕ್ಕಳಿಲ್ಲದವರನ್ನು ಬಂಜೆ ಎಂದು ಕರೆಯುವ ಸಂಪ್ರದಾಯವಿದೆ. ಆದರೆ, ಹಣ್ಣನ್ನು ಹಡೆಯದವರು ಬಂಜೆ ಎಂಬ ಒಂದು ವಿಶಿಷ್ಟ ಆರೋಪ ಈಕೆಯ ಮೇಲೆ ಬರುತ್ತದೆ. ಇದರಿಂದಾಗಿ ಈ ಕಥಾನಕಕ್ಕೆ ಹೊಸ ದೃಷ್ಟಿಕೋನದ ತಿರುವೊಂದು ಪ್ರಾಪ್ತವಾಗುತ್ತದೆ. ಆಕೆಯ ತೀವ್ರವಾದ ಹೆಣ್ಣುಮಕ್ಕಳ ಹಂಬಲ, ಅದಕ್ಕಾಗಿ ಆಕೆಯ ಮನದಾಳದ ಪೂಜೆ, ಆರಾಧನೆಗಳು, ಪಾಪ ಪರಿಮಾರ್ಜನೆಗಾಗಿ ಮಾಡುವ ದೇಹ ದಂಡನೆಯ ರೂಪದ ದೈವಜ್ಞಾನಗಳ ಕಾರಣದಿಂದ ಆಕೆ ಕನಸಿನ ಫಲರೂಪದಲ್ಲಿ ಹೆಣ್ಣನ್ನು ಪಡೆಯುತ್ತಾಳೆ. ಈ ಕಥೆ ಚಿತ್ರ ವಿಚಿತ್ರ ರೂಪಗಳನ್ನು ಪಡೆಯುತ್ತ ಪುರಾಣಲೋಕ ಮತ್ತು ಇತಿಹಾಸ ಲೋಕಗಳ ಮೂಲಕ ಸಂಚರಿಸುತ್ತ ಮಹಾಭಾರತದ ಕಥೆಯ ಬಲೆಯೊಳಗೆ ನುಸುಳುತ್ತ ಮಾನುಷ ಲೋಕದಿಂದ ಅತಿಮಾನುಷ ಲೋಕದ ಕಡೆಗೆ ಕತೆ ಜಿಗಿಯುತ್ತಾ ಹೋಗುತ್ತದೆ. ವಂಶಾವಳಿಯ ಕಥೆಗಳು ಮಹಾಭಾರತದ ಕಥನಶೀಲತೆ, ಅರ್ಜುನ, ದ್ರೌಪದಿ, ಭೀಮ, ಶಕುನಿ ಮುಂತಾದ ಪಾತ್ರಗಳು ಅತ್ಯಂತ ಸರಳವಾಗಿ ಈ ಕಥಾ ಹಂದರದಲ್ಲಿ ಸೇರ್ಪಡೆಗೊಳ್ಳುತ್ತಾ ಕಥೆಯ ದಾರಿಯನ್ನು ನಿರ್ಮಾಣ ಮಾಡುತ್ತಾ ಹೋಗುತ್ತವೆ. ಕೊನೆಗೆ ಅವ್ವಣೆವ್ವ ಭೀಮನನ್ನು ಮದುವೆಯಾಗಿ ಧರ್ಮರಾಯನ ಮನೆಯನ್ನು ಸೇರುವಲ್ಲಿ ಕಥೆ ಪರ್ಯವಸಾನವಾಗುತ್ತದೆ. ವಾಸ್ತವ ಭೂಮಿಕೆಯಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ಪಡೆಯುವ ಬಯಕೆ ಮೊಳೆಯುತ್ತಾ, ಬೆಳೆಯುತ್ತಾ ಎಲ್ಲೆಲ್ಲಿಯೋ ಸುತ್ತುತ್ತಾ ಜನಾಂಗದ ಸಾವು ಬದುಕಿನ ಕಥೆಯಾಗಿ ಪಾಂಡವರ ವಂಶದ ಮುಂದುವರಿಕೆಯಾಗಿ ಮುಕ್ತಾಯವಾಗುತ್ತದೆ. ನಮ್ಮ ಜನಪದರ ಕಲ್ಪನೆಯಲ್ಲಿ ಆಕಾಶ, ಭೂಮಿ ಮತ್ತು ಪಾತಾಳಗಳು ಸಹಜವಾಗಿಯೇ ಒಂದಾಗುತ್ತವೆ. ಅವರ ಬಾವ, ಭಾವನೆಗಳು ಯಾವ ಸ್ತರದಲ್ಲಿ ಅಂದರೆ ಆ ಸ್ತರದಲ್ಲಿ ಅತ್ಯಂತ ಸಹಜವಾಗಿ ಹಾಸುಹೊಕ್ಕಾಗುತ್ತಾ ಕುತೂಹಲಭರಿತವಾಗಿ ಸಾಗುತ್ತಾ ಕೇಳುಗರ ಮನಸ್ಸನ್ನು ಭಕ್ತಿ, ಸಾಹಸ, ಕತೂಹಲ, ಕಲ್ಪನೆಗಳ ಲಾಳಿಗಳೆಲ್ಲಿ ಮಗ್ಗವಾಡಿಸುತ್ತಾ ಸಾಗುತ್ತಾ ಒಂದು ಶಿಥಿಲ ಗುರಿಯನ್ನು ಮುಟ್ಟಿಬಿಡುತ್ತದೆ. ಇವುಗಳ ನಡು ನಡುವೆ ನಮ್ಮ ಹಳ್ಳಿಗರ, ಇಲ್ಲಿ ವಿಶೇಷವಾಗಿ ನಾಯಕರ ಮತ್ತು ರೆಡ್ಡಿ ಜನಾಂಗದವರ ಜೀವನದ ವಿಶೇಷತೆಗಳು, ನಂಬುಗೆ, ನಿಷ್ಠೆಗಳು ಆಶಯ ಮತ್ತು ಕಲ್ಪನೆಗಳು ಬೆಳೆಯುತ್ತಾ ಹೋಗುತ್ತವೆ. ಹೀಗಾಗಿ ಈ ಕಥೆ ಜನಪದದಲ್ಲಿ ಹುಟ್ಟಿ ಮಹಾಭಾರತದಲ್ಲಿ ಬೆಳೆದು ಜನಾಂಗದ ಸಂಪ್ರದಾಯಗಳ ಒಳಗೆ ನುಸುಳಿ ಸ್ವಾರಸ್ಯಕರವಾಗಿ ಸಾಗುತ್ತದೆ. ಈ ಕಾವ್ಯದ ಸೂಕ್ಷ್ಮ ಮತ್ತು ಬಹುಶಿಸ್ತೀಯ ಅಧ್ಯಯನದ ಮೂಲಕವಾಗಿ ಜನಪದರ ವಿಶಿಷ್ಟ ಶಕ್ತಿ ಮತ್ತು ಮೂಲಗಳನ್ನು ಅರಿತುಕೊಳ್ಳಲು ಇದು ಸಹಾಯಕವಾಗಿದೆ. ಹಲವು ಕಥೆಯ ಎಳೆಗಳು ಅಲ್ಲಲ್ಲಿ ಗಂಟುಹಾಕಿಕೊಂಡು ಕಥನದ ದಾರಿಯನ್ನು ಕ್ಷಿಷ್ಟಗೊಳಿಸಿದರೂ ಕೊನೆಗೊಮ್ಮೆ ಸುಖಾಂತ್ಯವನ್ನು ಕಾಣುವಲ್ಲಿ ಸಫಲವಾಗುತ್ತದೆ. ಜನಪದ ಕಥನ ಕವನಗಳು ಸಾಮಾನ್ಯವಾಗಿ ದುಃಖಾಂತ್ಯವನ್ನೇ ಕಾಣುವುದು ರೂಢಿ. ಆದರೆ, ಈ ಕಥೆ ಹಲವು ದುಃಖದ ಹಾದಿಗಳಲ್ಲಿ ಹಾದುಬಂದು ಸುಖಾಂತ್ಯವನ್ನು ಕಾಣುವುದು ಕುತೂಹಲಕಾರಿಯಾಗಿದೆ. ಹೀಗಾಗಿ ಜನಪದ ಕಥನ ಗೀತೆಗಳ ಸರಣಿಗೆ ಇದೊಂದು ಹೊಸ ರೀತಿಯ ಸೇರ್ಪಡೆಯಾಗಿದೆ. ಈ ಕಥನ ಕಾವ್ಯದ ಭಾಷೆ, ಲಯ, ಸಾಂಪ್ರದಾಯಕ ವಾತಾವರಣ, ಕಥನ ಕಾಲದ ಬದುಕಿನ ವಿಶಿಷ್ಟಾಂಶಗಳು ಹಳ್ಳಿಗರಿಗೇ ಸಹಜವಾದ ಚಿಂತನಕ್ರಮಗಳು ಮತ್ತು ಕಥನ ತಂತ್ರ ಇವುಗಳ ಬಗ್ಗೆ ಸಂಶೋಧನಾ ಶೀಲವಾದ ಪ್ರಸ್ತಾವನೆಯೊಂದನ್ನು ಸಂಪಾದಕರು ಬರೆದಿದ್ದರೆ ಈ ಕೃತಿಯ ಮೌಲ್ಯ ಮತ್ತಷ್ಟು ಹೆಚ್ಚುತ್ತಿತ್ತು. ಇಷ್ಟಾದರೂ ಹೊಸ ಜಾಡಿನ ಕಾವ್ಯವೊಂದನ್ನು ಪರಿಶ್ರಮದಿಂದ ಸಂಗ್ರಹಿಸಿಕೊಟ್ಟಿರುವ ಸಂಪಾದಕರ ಜಾನಪದ ಪ್ರೀತಿ ಅಭಿನಂದನೀಯ.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಗಳು