ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಸಾಹಿತ್ಯ ಜೈನಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ರ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಶರೀರವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯ ಸಂಪುಟದ ಯೋಜನೆಯನ್ನು ೨೦೦೬ ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಿ ಸಾರಸ್ವತ ಮಹಾಮಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ. ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರ್ಮಸಿಂಗ್ ಅವರಿಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ.ಪಿ.ಪ್ರಕಾಶ್ ಅವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್.ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾಪವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ.ಎಂ.ಆರ್.ತಂಗಾ, ಡಾ.ಚಂದ್ರಶೇಖರ ಕಂಬಾರ, ಡಾ.ಎಲ್. ಹನುಮಂತಯ್ಯ, ಶ್ರೀ ಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಡಾ. ಹಂಪ ನಾಗರಾಜಯ್ಯ ಮತ್ತು ಡಾ.ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರಕಾರಕ್ಕೆ ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಕನ್ನಡದ ಮೊತ್ತಮೊದಲ ಉಪಲಬ್ಧ ಗದ್ಯ ಗ್ರಂಥ. ಸಂಸ್ಕೃತವೇ ಸಾಹಿತ್ಯನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತ ದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾವಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಒಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನೀವೇಶವನ್ನು ಚಿತ್ರಿಸಿದ್ದಾರೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾನೆ. ಆದರೆ ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾ ಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿರ್ಮಾಣದ ಒಂದು ಪರಂಪರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನ ರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣ ಕೃತಿಗಳ ನಿರ್ಮಾಣ ಒಂದು ನೋಂಪಿಯಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ, ಜನ್ನ, ಬ್ರಹ್ಮಶಿವ, ವೃತ್ತವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ – ಧಾರ್ಮಿಕಗಳನ್ನು ಒಂದುಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕಕಥೆ ನೀತಿಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂದಿಸಿದ ವೈವಿಧ್ಯಮಯ ಕಾವ್ಯಪರಂಪರೆ ಪ್ರಾಚೀನ ಜೈನಸಾಹಿತ್ಯದ ಇನ್ನೊಂದು ಮುಖ್ಯಧಾರೆಯಾಗಿದೆ. ಇದರೊಂದಿಗೆ ಗದ್ಯಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತದೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನ ಧರ್ಮದ ಮೇಲ್ಮೈಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ಇಮ್ಮಡಿ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯಲಕ್ಷಣಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾನೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶವೈಭವ ಕಾವ್ಯ ರಚಿಸಿ ಜೈನಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ರ ಕಾಲಕ್ಕೆ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದ ವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದ ವರೆಗೆ, ಜನಪದ ಕಥೆಯಿಂದ ಆರಂಭಿಸಿ ವಿಡಂಬನ ಸಾಹಿತ್ಯದ ವರೆಗೆ ಕನ್ನಡ ಜೈನಸಾಹಿತ್ಯದ ಹರಹು ವ್ಯಾಪಿಸಿಕೊಂಡಿದೆ.

ಪಂಪಕವಿಯು ತನ್ನ ಕಾವ್ಯದಲ್ಲಿ ಮಾರ್ಗ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಮಾಣಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಶಿಯಾಗುತ್ತದೆ. ಪಂಪನ ಕಾವ್ಯಗಳ ನಾಣ್ನುಡಿಯಿಂದ ತೊಡಗಿ, ವೊಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪಮೆಗಳಿಂದ ಹಾದು ಬಂದು ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳ ವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಂದ ಆರಂಭವಾಯಿತು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು. ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು. ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರ ಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ವಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಜೈನ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು. ಇದಕ್ಕಾಗಿ ಈ ಕ್ಷೇತ್ರದಲ್ಲಿ ನುರಿತ ನಾಡಿನ ಹಿರಿಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ಮೂಲ ವಿದ್ವಾಂಸರನ್ನು ಈ ಬೃಹತ್ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾಯಿತು. ಅದರಂತೆ ನಾಡಿನ ಗಣ್ಯ ವಿದ್ವಾಂಸರು ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ, ಡಾ. ಜಿ.ಎಸ್. ಶಿವರುದ್ರಪ್ಪ. ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ, ಡಾ. ಹಂಪ ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಎಂ.ಜಿ. ಬಿರಾದಾರ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಲಸಚಿವರಾದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಇಂದಿನ ಕುಲಸಚಿವರಾದ ಶ್ರೀ. ವಿ.ಶಂಕರ್ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಂ.ಉಷಾ ಅವರು ಈ ಯೋಜನೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳು ಜನಪ್ರಿಯ ಆವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತರಗಳಲ್ಲಿ ನೀಡಬೇಕಾಗಿಲ್ಲ. ಪ್ರತಿಯೊಬ್ಬ ಕವಿಯ ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವ್ಯಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳವುದೆಂದೂ ಅಪೂರ್ವ ಕೃತಿಗಳನ್ನು ಈ ಮಾಲೆಯಲ್ಲಿ ಸೇರಿಸಿಕೊಳ್ಳವುದೆಂದೂ ನಿಶ್ಚಯಿಸಲಾಯಿತು. ಪಂಪ, ಪನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಆದರೂ ಪಾಠಕ್ಲೇಶ ಅರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿವೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಭಾವಿಸಿತು. ಗ್ರಂಥದ ಕೊನೆಗೆ ಶಬ್ಧಾರ್ಥಕೋಶ, ಪಾರಿಭಾಷಿಕಕೋಶ, ಸಹಾಯಕ ಸಾಹಿತ್ಯ ನೀಡುವುದು ಅಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳು ನಿಮ್ಮ ಎದುರಿಗಿವೆ. ಶ್ರಮಸಾಧ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ಎರಡನೆಯ ಗುಣವರ್ಮನು ಹದಿನಾರನೆಯ ಶತಮಾನದ ಆರಂಭದಲ್ಲಿ ಇದ್ದು ‘ಪುಷ್ಪದಂತ ಪುರಾಣಂ’ ಎಂಬ ಚಂಪೂ ಕಾವ್ಯವನ್ನೂ ‘ಚಂದ್ರನಾಥಾಷ್ಟಕಂ‘ಎನ್ನುವ ಒಂಬತ್ತು ಪದ್ಯಗಳ ಅಷ್ಟಕವನ್ನೂ ರಚಿಸಿದ್ದಾನೆ. ಇವನ ‘ಪುಷ್ಪದಂತ ಪುರಾಣ’ ವು ಒಂಬತ್ತನೆಯ ತೀರ್ಥಂಕರನಾದ ಪುಷ್ಪದಂತನ ಚರಿತವನ್ನು ಹದಿನಾಲ್ಕು ಆಶ್ವಾಸಗಳ ಹರಹಿನಲ್ಲಿ ವಿವಿರಿಸಿರುವ ಚಂಪೂ ಕಾವ್ಯ. ಗುಣಭದ್ರಾಚಾರ್ಯನ ಉತ್ತರಪುರಾಣದ ಪುಷ್ಪದಂತ ಚರಿತದ ಭಾಗವನ್ನು ಬಳಸಿಕೊಂಡು ಹದಿನಾಲ್ಕು ಆಶ್ವಾಸಗಳಲ್ಲಿ ೧೩೬೫ ಪದ್ಯಗಳಲ್ಲಿ ಹಾಗೂ ಹಲವು ಗದ್ಯಭಾಗಗಳಲ್ಲಿ ವಿಸ್ತರಿಸಿದ್ದಾನೆ. ಈ ಕಾವ್ಯದಲ್ಲಿ ಸಾಮಾನ್ಯವಾಗಿ ಜೈನಪುರಾಣಗಳಲ್ಲಿ ಕಾಣಿಸುವ ಜನ್ಮಾಂತರ ಕಥೆಗಳ ತೊಡಕು ಇಲ್ಲ. ಎಳೆಯಷ್ಟು ಇರುವ ಕಥೆಯನ್ನು ವಿಸ್ತಾರವಾದ ವರ್ಣನೆಯ ನೆರವಿನಿಂದ ದೊಡ್ಡ ಪುರಾಣದ ವ್ಯಾಪ್ತಿಗೆ ಹಿಗ್ಗಿಸಿದ್ದಾನೆ. ಪಂಪನ ಪರಂಪರೆಯಿಂದ ಪ್ರಭಾವಿತನಾದ ಗುಣವರ್ಮ ತನ್ನ ಪೋಷಕನಾದ ಶಾಂತಿವರ್ಮನನ್ನು ಕೃತಿಯ ನಾಯಕನಾದ ಮಹಾಪದ್ಮನೊಡನೆ ಅಭೇದ ಕಲ್ಪಿಸಿ ಕಾವ್ಯರಚನೆ ಮಾಡಿದ್ದಾನೆ. ಮಹಾಪದ್ಮನೇ ಮುಂದಿನ ಜನ್ಮದಲ್ಲಿ ಪುಷ್ಪದಂತನಾಗಿ ತೀರ್ಥಂಕರನಾಗುವ ಕಥಾವಸ್ತು ಇಲ್ಲಿದೆ. ಅನಿವಾರ್ಯವಾಗಿ ಜೈನಪುರಾಣಗಳ ಎಂಟು ಅಂಗಗಳು, ಪಂಚ ಕಲ್ಯಾಣಗಳು ಮತ್ತು ಮಹಾಕಾವ್ಯದ ಅಷ್ಟಾದಶವರ್ಣನೆಗಳಿಂದ ತುಂಬಿಕೊಂಡಿದೆ. ‘ಅನುಗುಣಮಾಗೆ ವರ್ಣನಂ ಒಡಂಬಡೆ’ ಎನ್ನುವ ಗುಣವರ್ಮನ ಮಾತು ಅವನ ಕೃತಿಯಲ್ಲಿ ಸಂಪೂರ್ಣವಾಗಿ ಪಾಲಿತವಾಗಿಲ್ಲ. ಮಾರ್ಗದೇಸಿಗಳ ಸಮನ್ವಯ ಶೈಲಿ ಪ್ರಧಾನವಾಗಿದ್ದರೂ ಕನ್ನಡದ್ದೇ ಆದ ಅಭಿವ್ಯಕ್ತಿಯ ಅನೇಕ ಪದ್ಯಗಳು ಇಲ್ಲಿ ಗಮನ ಸೆಳೆಯುತ್ತವೆ. ನಾಟಕೀಯತೆಯ ಗುಣ. ನಾಣ್ನುಡಿಗಳ ಬಳಕೆ, ಸರಳ ಸಮರ್ಥ ಉಪಮೆಗಳು, ಅವಧಾರಣೆಯ ಶೈಲಿ, ಶ್ಲೇಷೆಯ ಪದಚಮತ್ಕಾರ, ದೇಸಿನುಡಿಯ ಅಪೂರ್ವ ಬಳಕೆ – ಹೀಗೆ ಚಂಪೂ ಕಾವ್ಯದ ಒಳಗೆಯೇ ಕನ್ನಡತನದ ಹೊಳಹುಗಳನ್ನು ಪ್ರಕಟಿಸುವ ಪ್ರಯತ್ನವನ್ನು ಗುಣವರ್ಮ ಮಾಡಿದ್ದಾನೆ. ಈತನ ‘ಚಂದ್ರನಾಥಾಷ್ಟಕ’ದಲ್ಲಿ ಒಂಬತ್ತು ಪದ್ಯಗಳಿದ್ದು ಇದರ ವಸ್ತು ಸೊಲ್ಲಾಪುರದ ಶ್ರೀತ್ರಿಭುವನ ತಿಲಕ ಜಿನಾಲಯದ ಚಂದ್ರನಾಥನ ಸ್ತುತಿಯಾಗಿದೆ. ಅಷ್ಟಕದ ರೂಪ ಬೇರೆಯಾದರೂ ವಸ್ತು ಶೈಲಿಯ ದೃಷ್ಟಿಯಿಂದ, ಗುಣವರ್ಮನ ಚಂಪೂ ರಚನೆಗಿಂತ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ.

ಹದಿನಾರನೆಯ ಶತಮಾನದ ಆರಂಭ ಭಾಗದಲ್ಲಿದ್ದ ಪಾರ್ಶ್ವಪಂಡಿತನು ‘ಪಾರ್ಶ್ವನಾಥ ಪುರಾಣಂ’ ಎಂಬ ಚಂಪೂಕಾವ್ಯದಲ್ಲಿ ತನ್ನ ಆಶ್ರಯದಾತ ನಾಲ್ಕನೇ ಕಾರ್ತವೀರ್ಯನೊಂದಿಗೆ ಕಥಾನಾಯಕನನ್ನು ಸಮೀಕರಿಸಲು ಪ್ರಯತ್ನಿಸಿದ್ದಾನೆ. ರಟ್ಟಿರ ಆಸ್ಥಾನದಲ್ಲಿದ್ದ ಪಾರ್ಶ್ವಕವಿ ಪುರಾತನ ಕವಿಗಳನ್ನೂ ನೂತನ ಕವಿಗಳನ್ನೂ ಸಮಾನರಾಗಿ ಕೊಂಡಾಡಿದ್ದಾನೆ. ಇಪ್ಪತ್ತನೇ ತೀರ್ಥಂಕರನಾದ ಪಾರ್ಶ್ವನಾಥನನ್ನು ನಾಯಕನನ್ನಾಗಿ ಇಟ್ಟುಕೊಂಡು ರಚಿಸಿದ ‘ಪಾರ್ಶ್ವನಾಥ ಪುರಾಣ’ವು ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಭಾಷೆಗಳಲ್ಲಿ ಈ ಕುರಿತು ರಚನೆಗೊಂಡ ಕಾವ್ಯಗಳಿಂದ ಪ್ರಭಾವಿತವಾಗಿದೆ. ಮಹಾವೀರನಂತೆ ಐತಿಹಾಸಿಕ ವ್ಯಕ್ತಿಯಾದ ಪಾರ್ಶ್ವನಾಥನನ್ನು ತೀರ್ಥಂಕರ ಪುರಾಣಗಳ ನಾಯಕನಂತೆ ಕವಿ ಚಿತ್ರಿಸಿದ್ದಾನೆ. ಆದರೆ, ಇಲ್ಲಿ ಭವಾವಳಿಗಳ ತೊಡಕಿಲ್ಲ. ಕಥಾ ಪ್ರಸಂಗಗಳನ್ನು ನಾಟಕೀಯವಾಗಿ, ಸ್ವಾರಸ್ಯಪೂರ್ಣವಾಗಿ ಕಾವ್ಯದಲ್ಲಿ ಅಳವಡಿಸಲಾಗಿದೆ. ಪಂಪ ಕವಿಯ ವಿಶೇಷ ಪ್ರಭಾವಕ್ಕೆ ಒಳಗಾಗಿರುವ ಪಾರ್ಶ್ವಪಂಡಿತನಿಗೆ ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ವಿಶೇಷ ಪ್ರಾವೀಣ್ಯ ಇದ್ದಹಾಗೆ ಕಾಣಿಸುತ್ತದೆ. ತನ್ನ ಕಾಲದ, ನಾಡಿನ ಸಸ್ಯಸಂಪತ್ತನ್ನು, ದೇಸಿ ತಿನಿಸುಗಳನ್ನು, ಜನಪದ ದೇವತೆಗಳನ್ನು ತುಂಬಾ ವಿಶಿಷ್ಟವಾಗಿ ವರ್ಣಿಸುವ ಸೊಗಸು ಈತನ ಕಾವ್ಯದಲ್ಲಿ ದೊರೆಯುತ್ತದೆ. ಹೆಸರಿಗೆ ಅನ್ವರ್ಥವಾಗಿ ಪಾಂಡಿತ್ಯದ ಅಪಾರವಾದ ಜ್ಞಾನವನ್ನು ಹೊಂದಿದ್ದ ಪಾರ್ಶ್ವಪಂಡಿತನು ಜನಪದ ಸಂಸ್ಕೃತಿಯ ಬಗೆಗೂ ವಿಶೇಷ ತಿಳುವಳಿಕೆಯನ್ನು ಹೊಂದಿದ್ದ ಎನ್ನುವುದಕ್ಕೆ ಆತನ ಕಾವ್ಯದಲ್ಲಿ ಉಲ್ಲೇಖಿತವಾಗಿರುವ ಜೋಕುಮಾರನ ಆರಾಧನೆ, ಟಗರುಕಾಳಗ, ಮಕ್ಕಳ ಕಲ್ಲಾಟ – ಇಂಥ ಅನೇಕ ನಿದರ್ಶನಗಳಿವೆ. ಪುರಾಣ ಮತ್ತು ಚಂಪೂ ಕಾವ್ಯಗಳ ಮಾರ್ಗೀಯ ಕವಚದೊಳಗೆ ಕನ್ನಡ ಸಂಸ್ಕೃತಿಯ ದೇಸಿಯನ್ನು ತಿರುಳಾಗಿ ಹೊಂದಿದ್ದ ಕವಿ ಪಾರ್ಶ್ವಪಂಡಿತನ ‘ಪಾರ್ಶ್ವನಾಥ ಪುರಾಣಂ’ ವಿಶಿಷ್ಟವಾಗಿದೆ. ಚಾರಿತ್ರಿಕ ವಿವರಗಳನ್ನು ವಿಪುಲವಾಗಿ ಒಳಗೊಂಡ ಪಾರ್ಶ್ವಕವಿ ವಿರಚಿತ ‘ಕಲ್ಪೊಳೆ ಶಾಸನ’ವು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಪಾದನ ವಿಭಾಗದಲ್ಲಿ ಹಿರಿಯ ಸಂಶೋಧಕಿಯಾಗಿರುವ ಡಾ. ವೈ.ಸಿ. ಭಾನುಮತಿ ಅವರು ಪ್ರಾಚೀನ ಕನ್ನಡ ಸಾಹಿತ್ಯ, ಹಸ್ತಪ್ರತಿಶಾಸ್ತ್ರ, ಗ್ರಂಥ ಸಂಪಾದನೆ ಮತ್ತು ಜಾನಪದ ಕ್ಷೇತ್ರಗಳಲ್ಲಿ ವಿಶೇಷ ಪರಿಶ್ರಮದ ಸಾಧನೆಗಳನ್ನು ಮಾಡಿದವರು. ಅವರ ಸಹ್ಯಾದ್ರಿಖಂಡ, ಬತ್ತೀಸ ಪುತ್ತಳಿಕಥೆ, ವಿಜಯಕುಮಾರಿ ಚರಿತೆ, ಕನ್ನಡ ಶ್ರಾವಕಾಚಾರ ಗ್ರಂಥಿಗಳು, ಸಿದ್ಧಲಿಂಗ ಲಘುಕೃತಿಗಳು; ಇಂಥ ಸಂಪಾದನೆ – ವಿವಕ್ಷೆ, ಗ್ರಂಥ ಸಂಪಾದನೆ – ಕೆಲವು ಅಧ್ಯಯನ, ಆಲಿ ನುಂಗಿದ ನೋಟ, ಜಾನಪದ ಆಂತರ್ಯ ಲೇಖನ ಸಂಕಲನಗಳು; ಕನ್ನಡದಲ್ಲಿ ವರ್ಧಮಾನ ಸಾಹಿತ್ಯ ಪಿಎಚ್.ಡಿ. ನಿಬಂಧ – ಈ ಎಲ್ಲ ಕೃತಿಗಳು ಕನ್ನಡ ವಿದ್ವತ್ ಜಗತ್ತಿಗೆ ಮುಖ್ಯ ಕೊಡುಗೆಗಳಾಗಿವೆ. ಗ್ರಂಥ ಸಂಪಾದನೆಯ ಕ್ಷೇತ್ರ ಹೊಸ ತಲೆಮಾರಿನ ವಿದ್ವಾಂಸರಲ್ಲಿ ಅವಗಣಿತವಾಗಿರುವ ಇಂದಿನ ಸಂದರ್ಭದಲ್ಲಿ ಡಾ. ವೈ.ಸಿ. ಭಾನುಮತಿ ಅವರು ಈ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡು ಅಪೂರ್ವ ಕೃತಿಗಳ ಸಂಪಾದನೆಗೆ ಹೆಸರಾಗಿದ್ದಾರೆ. ಎರಡನೆಯ ಗುಣವರ್ಮನ ಪುಷ್ಪದಂತ ಪುರಾಣ. ಪಾರ್ಶ್ವಪಂಡಿತನ ಪಾರ್ಶ್ವನಾಥ ಪುರಾಣ ಎಂಬೆರಡು ಜೈನ ಕಾವ್ಯಗಳನ್ನು ಈವರೆಗೂ ಸಂಪಾದಿತವಾದ ಪಠ್ಯಗಳ ಮತ್ತು ಹಸ್ತಪ್ರತಿಗಳ ಸೂಕ್ಷ್ಮ ಅವಲೋಕನದಿಂದ ಪರಿಶ್ರಮಪೂರ್ವಕವಾಗಿ ಹಾಗೂ ಅಚ್ಚುಕಟ್ಟಾಗಿ ಸಂಪಾದಿಸಿಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಬಿ.ಎ. ವಿವೇಕ ರೈ
ಕುಲಪತಿ