ಮೈಸೂರು ಭಾಗದ ವೃತ್ತಿ ನಾಟಕ ಮಂಡಲಿಗಳಿಗೆ ರಾಜರಾಸ್ಥಾನದ ಆಶ್ರಯ ಪ್ರೋತ್ಸಾಹಗಳಿದ್ದಂತೆ, ಸ್ವಾತಂತ್ರ‍್ಯ ಪೂರ್ವದಲ್ಲಾಗಲಿ, ಸ್ವಾತಂತ್ರೋತ್ತರದಲ್ಲಾಗಲಿ ಯಾವುದೇ ಆಸ್ಥಾನದ ಆಶ್ರಯವಿರಲಿಲ್ಲ. ಲತಾ, ಕವಿತಾ, ವನಿತಾ ಈ ಮೂರು ವಸ್ತುಗಳಂತೆ ರಂಗಕಲೆಯೂ ಆಶ್ರಯವಿಲ್ಲದೆ ಬಲಗೊಂಡು ಬೆಳೆಯಲಾರದು.

ಆದರೆ ಉತ್ತರ ಕನಾಟಕದಲ್ಲಿ ರಂಗಭೂಮಿ ಕೇವಲ ಜನತಾ ಪ್ರೋತ್ಸಾಹದಿಂದಲೇ ಬೆಳೆದು ಬಂತು. ಹಾಗೆ ಬೆಳೆದು  ಬರಬೇಕಾದರೆ ಒಂದು ಗುಣಮಟ್ಟವಿಲ್ಲದ ಕಂಪನಿಗಳು ‘ಕಂಬನಿ’ಗಳಾಗಿ ಕಣ್ಮರೆಯಾಗಿ ಹೋದವು. ಗುಣಮಟ್ಟವನ್ನು ಕಾಪಾಡಿಕೊಂಡು ಬಂದ ಕಂಪನಿಗಳ ಮಾಲಿಕರು ಸ್ವಲ್ಪ ವ್ಯಸನಿಗಳಾಗಿಬಿಟ್ಟರೆ ಗಲ್ಲೆ ಭರ್ತಿಯಾಗುವಂತಹ ನಾಟಕಗಳಿದ್ದರೂ ಅವುಗಳ ಅಂತಿಮ ಅವಸ್ಥೆ ದುರಂತವೆ. ಇಂತಹ ಪರಿಸ್ಥಿತಿಯಲ್ಲಿ ಜಾಣ್ಮೆಯಿಂದ ಕಂಪನಿ ನಡೆಸಿ, ಅದಿನ್ನು ಬದುಕಲಾರದು ಎನಿಸಿದಾಗ ಜಾಣ್ಮೆಯಿಂದ ನಾಟಕವನ್ನು ನಿಲ್ಲಿಸಿಬಿಟ್ಟವರಲ್ಲಿ ವಾಮನರಾವ್ ಮಾಸ್ತರರು ಸ್ಮರಣೀಯರು. ತಮ್ಮ ಸದಾಚಾರ, ಪ್ರಾಮಾಣಿಕ ವರ್ತನೆಯಿಂದ ಅವರು ಒಳ್ಳೆಯ ಹೆಸರು ಮಾಡಿದರಲ್ಲದೆ ಮುಂದಿನ ತಮ್ಮ ವಂಶಜರಿಗೆ ಸಾಕಷ್ಟು ಹಣದ ಉಳಿತಾಯವನ್ನು ಮಾಡಿದರು.

ಸ್ವತಃ ನಟರಾಗಿ ಹೆಸರು ಮಾಡಿದವರು ಕಂಪನಿ ಕಟ್ಟಲು ಹೋಗಿ ತಮ್ಮ ನಾಟ್ಯಕಲೆಗೆ ಸಂಚಕಾರ ಹೇಳಿದವರೇ ಹೆಚ್ಚು. ಅಂತೆಯೇ ಉತ್ತಮ ನಟನೆಯ ಹೆಸರು ಮಾಡಿದವನು, ಮಾಲಿಕನಾಗಲು ಹಾತೊರೆಯಬಾರದು. ಹಾಗೆಯೇ ಒಳ್ಳೆಯ ವ್ಯವಹಾರಜ್ಞನು ಮಾಲಕನಾಗಿ ಕಂಪನಿ ಕಟ್ಟಿದವನು ನಟನಾಗಲು ಹೋಗಬಾರದು. ಅದರಲ್ಲಿ ಕಂಪನಿಗೆ ಹೆಸರಾಂತ ಹಿರೋಯಿನ್ ಇರಲೆಂದು ಕೈತುಂಬ ಹಣ ಸುರುವಿ ಸುಂದರ, ಕಲಾಭಿಜ್ಞ ನಟಿಯನ್ನು ತಂದು ಆಕೆಯನ್ನು ಸರಿಯಾಗಿ, ಗಂಭಿರವಾಗಿ ಬಿಗುಮಾನದಿಂದ ನಡೆಸಿಕೊಳ್ಳಾರದೆ ಆಕೆಯ ಗುಲಾಮನಾಗಿ ಆಕೆಯ ಕೈಯಲ್ಲಿ ಕಾಮದ ಗೊಂಬೆಯಾಗಿ ಕುಣಿಯುವವನು ಏಳ್ಗೆ ಹೊಂದಲಾರನು.

ಹೀಗಾಗಿ ಉತ್ತರ ಕರ್ನಾಟಕ ರಂಗಭೂಮಿ ಮೇಲ್ಕಾಣಿಸಿದ ಬಾಲಗ್ರಹ ಪೀಡಿತವಾಗಿ ಜೀವಂತವಾಗಿಲಾರದೆ ಕೊನೆಯುಸಿರು ಬಿಟ್ಟ ಕಂಪನಿಗಳೇ ಹೆಚ್ಚು. ಮುಖ್ಯವಾಗಿ ಒಂದು ಮನೆತನದ ಸೋದರರು ಕಲಾವಿದರಾಗಿಯೇ ಬೆಳೆದು ಭೂಮಿ ಕಾಣಿಯುಳ್ಳವರಾಗಿದ್ದರೆ ಇಂತಹ ಸೋದರರು ಏಕೋಭಾವದಿಂದ ಬದುಕಿರುವುದಾದರೆ ಒಂದು ಕಂಪನಿಯನ್ನು ಕಟ್ಟಿ ಅದನ್ನು ಬೆಳೆಸಿಕೊಂಡು ಹೋಗಬಹುದು.

ವೃತ್ತಿ ರಂಗಭೂಮಿಯ ಜನರೆಲ್ಲ ಅಶಿಕ್ಷಿತರು. ಅದರ ನಟವರ್ಗವೆಲ್ಲ ಬೌದ್ಧಿಕವಾಗಿ ಬೆಳೆದಿರದೆ ಪಾತ್ರದ ಮಾತುಗಳನ್ನು ಗಿಳಿಪಾಠ ಮಾಡಿ ಸ್ವಂತ ಅಭಿನಯದ, ಅಭಿವ್ಯಕ್ತಿಯ ಚಾತುರ್ಯವಿಲ್ಲದೆ ಹಿಂದುಳಿದವರೆಂದುಕೊಂಡು ಸುಶಿಕ್ಷಿತರು ಅಮೇಚ್ಯೂರ್ ನಾಟ್ಯಸಂಘಗಳನ್ನು ಒಂದು ‘ಹಾಬಿ’ ಎಂದು ನಡೆಸಿದರಲ್ಲದೆ ಉಪಜೀವನ ಸಾಧನೆಯೆಂದಲ್ಲ.

ಡಾ. ಎಚ್. ಕೆ. ರಂಗನಾಥ ಅವರು ತಮ್ಮ ಸಂಶೋಧನ ಮಹಾಪ್ರಬಂಧದಲ್ಲಿ ರ್ನಾಟಕ ನಾಟಕ ಶಾಲೆಯ ಅಸ್ತಿತ್ವದ ಬಗ್ಗೆ ಚರ್ಚಿಸುತ್ತ ಧಾರವಾಡದ ಸಮೀಕ್ಕಿರುವ ಮುಗದ ಗ್ರಾಮದಲ್ಲಿ ದೊರೆಯುವ ಶಿಲಾಶಾಸನವೇ ಪ್ರಥಮ ನಿದರ್ಶನವಾಗಿದೆ ಎಂದಿದ್ದಾರೆ. ಆ ಶಾಸನ ಹೀಗಿದೆ :

‘ಶ್ರೀ ಮನ್ಮಹಾ ಸಾಮಂತಂ ಮಾರ್ತಾಂಡಯ್ಯಂ ತಮ್ಮ ಉತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕ ಶಾಳೆಯಂ ಮಾಡಿಸಿ ತನ್ನ ಕೀರ್ತಿ ಶಿಳಾಸ್ತಂಭಮಂ ಆಚಂದ್ರಾರ್ಕತಾರಂಬರಂ ನಿಲಿಸಿದ.” ಈ ಶಿಲಾಶಾಸನದ ಉಲ್ಲೇಖ – Bombay Karnataka Inscriptions, Vol-I, p.78.

ಇದನ್ನೋದಿದ ನನಗೆ ಒಮ್ಮೆ ಮುಗದಕ್ಕೆ ಹೋಗಿಬರಬೇಕೆನಿಸಿತು. ವರಕವಿ ಬೇಂದ್ರೆ ಅವರ ‘ನರಬಲಿ’ ಕವನ ಅವರನ್ನು ಹಿಂಡಲಗಾ ಜೇಲಿಗಟ್ಟಿತು. ಅಲ್ಲಿ ಕೆಲದಿನಗಳಿದ್ದ ಮೇಲೆ ಅವರ ಆರೋಗ್ಯ  – ಆ ಜೇಲಿನ ಊಟದಿಂದಾಗಿ ಕೆಟ್ಟಿತು. ಮುಂದೆ ಅವರನ್ನು ಮುಗದದಲ್ಲಿ ಕೆಲದಿನ ನಜರಬಂಧಿಯಲ್ಲಿಟ್ಟಿದ್ದರು. ಕವಿ ಬೇಂದ್ರೆ ಅವರನ್ನು ಕುರಿತು ನಾನು ‘ಧಾರವಾಡದ ದತ್ತೂಮಾಸ್ತರ್’ ಎಂಬ ಕಾದಂಬರಿಯನ್ನು ಬರೆಯುವ ಸಂದರ್ಭದಲ್ಲಿ ಮುಗದದಲ್ಲಿ ಅವರನ್ನು ಎಲ್ಲಿಟ್ಟಿದ್ದರು ನೋಡಿ ಬರಬೇಕೆಂದು ಮುಗದಕ್ಕೆ ಭೆಟ್ಟಿ ಕೊಟ್ಟಾಗ, ಮೇಲಿನ ಶಿಲಾಲೇಕವನ್ನೂ ನೋಡಿಕೊಂಡಂತಾಯಿತು, ಹೋಗಿಬಂದದ್ದಾಯಿತು.

ಆ ಪಡಿಸಲಿಸಿದ ಬಸದಿಯನ್ನೂ ನೋಡಿದ್ದಾಯಿತು. ಅಲ್ಲಿ ಒಂದು ತೀರ್ಥಂಕರ ಮೂರ್ತಿಯನ್ನು ಇಟ್ಟುದನ್ನು ಕಂಡೆ. ಅಲ್ಲಿ ಶಿಲಾಶಾಸನವನ್ನು ಮಾತ್ರ ಈ ನಾಟಕ ಶಾಲೆಯ ಅಂಚಿಗೆ, ಹೊನ್ನಮ್ಮನ ಕೆರೆಯ ದಂಡೆಗೆ ಹಾಕಿದ್ದಾರೆ. ಪ್ರೇಕ್ಷಕರು ಆ ಶಿಲಾಶಾಸನವನ್ನು ಒಂದು ಆಸನವನ್ನಾಗಿ ಮಾಡಿಕೊಂಡದ್ದಲ್ಲದೆ ಅದನ್ನು ಅನೇಕ ಪ್ರಯೋಜನಕ್ಕಾಗಿ ಬಳಸಿ ಶಾಸನವು ಓದಲು ಬಾರದಂತೆ ಸವೆದುಹೋಗುವಂತೆ ಮಾಡಿಬಿಟ್ಟಿದ್ದರು. ಅಂತೂ ಶಿಲಾಶಾಸನದ ಸಾಲುಗಳನ್ನು ಶಾಸನ ಸಂಪುಟದಿಂದ ಪ್ರಬಂಧಕಾರರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುವುದನ್ನು ಓದಿಕೊಂಡು ಕರ್ನಾಟಕದಲ್ಲಿ ನಾಟಕ ಶಾಲೆಯ ಅಸ್ತಿತ್ವದ ಪ್ರಾಚೀನತೆಯನ್ನು ಗುರುತಿಸುವ ಸಾಧನ ದೊರೆತುದು ಸಂತೋಷವಾಯಿತು. ಆದರೆ ಆ ನಾಟ್ಯಶಾಲೆಯಲ್ಲು ಯಾವ, ಎಂಥ, ಯಾವ ಭಾಷೆಯ ನಾಟಕಗಳು ಪ್ರಯೋಗಿಸಲ್ಪಟ್ಟಿರಬೇಕು ಎಂಬ ಬಗ್ಗೆ ಮಾತ್ರ ಏನೊಂದು ಆಧಾರ, ನಿದರ್ಶನ ದೊರಕಲಿಲ್ಲ. ಕನ್ನಡ ಸಾಹಿತ್ಯದಲ್ಲಿ ನಾಟಕಗಳು ಮಾತ್ರ ದುರ್ಲಭವೆನ್ನುವುದು ಪ್ರಥಮ ಉಪಲಬ್ಧ ನಾಟಕ ಗ್ರಂಥವೆಂದರೆ ‘ಮಿತ್ರವಿಂದಾ ಗೋವಿಂದ’ ವೆಂಬುದು.

* * *