ಎಂ.ಎಸ್.ಪುಟ್ಟಣಕನ್ನಡದಲ್ಲಿ ಮೊದಲ ಕಾದಂಬರಿ ಎನ್ನಿಸಿಕೊಂಡಿರುವ ಮಾಡಿದ್ದುಣ್ಣೊ ಮಹಾ ರಾಯವನ್ನು ಬರೆದವರು. ಕನ್ನಡದ ಪುಸ್ತಕಗಳೇ ಇಲ್ಲದ ಕಾಲದಲ್ಲಿ ಮಕ್ಕಳಿಗೆ, ದೊಡ್ಡವರಿಗೆ ಸಂತೋಷಕೊಡುವ ಪುಸ್ತಕ ಗಳನ್ನು ರಚಿಸಿದರು. ಸರಳ ನಿರಾಡಂಬರ ವ್ಯಕ್ತಿ ದಿಟ್ಟ ಪ್ರಾಮಾಣಿಕ ಅಧಿಕಾರಿ

 ಎಂ.ಎಸ್.ಪುಟ್ಟಣ

 

ಇದೊಂದು ಕಥೆ.

ಒಂದು ಹೊಲದಲ್ಲಿ ಒಂದು ಆಲದ ಮರವಿತ್ತು. ಮರದಲ್ಲಿ ಒಂದು ಹೆಣ್ಣು ಗುಬ್ಬಿ, ಒಂದು ಗಂಡು ಗುಬ್ಬಿ ವಾಸಮಾಡುತ್ತಿದ್ದವು. ಒಂದು ದಿನ ಮರದ ಯಜಮಾನನು ಹೊಲಕ್ಕೆ ಬಂದವನು, ಆ ಮರದ ನೆರಳಿನಿಂದ ಪೈರು ನಾಶವಾಗುತ್ತಿದೆ ಎಂದುಕೊಂಡ. ‘ಮರವನ್ನು ನಾಳೆ ಕಡಿಯಬೇಕು’ ಎಂದ. ಪಕ್ಕದ ಹೊಲದವನಿಗೆ, ‘ನಾಳೆ ಈ ಮರವನ್ನು ಕಡಿದು ಹಾಕೋಣ ನೀನು ಸಹಾಯ ಮಾಡು’ ಎಂದು ಕೇಳಿದ. ಇದೆಲ್ಲ ನಡೆದಾಗ ಗಂಡು ಹಕ್ಕಿಗೂಡಿನಲ್ಲಿರಲಿಲ್ಲ. ಹೆಣ್ಣು ಹಕ್ಕಿಗೆ ಈ ಮಾತುಗಳು ಕೇಳಿಸಿದವು. ‘ಅಯ್ಯೋ, ಇಲ್ಲಿರುವುದು ಅಪಾಯ’ ಎನ್ನಿಸಿತು. ಗಂಡು ಹಕ್ಕಿ ಬರುತ್ತಲೇ ನಡೆದ ಸಂಗತಿಯನ್ನು ಹೆಣ್ಣು ಹಕ್ಕಿ ಹೇಳಿತು. ಗಂಡು ಪಕ್ಷಿ ‘ಇದಕ್ಕೆ ಹೆದರಬೇಡ, ಯಜಮಾನ ಇನ್ನೊಬ್ಬನ ಸಹಾಯವನ್ನು ಕೇಳಿದ್ದಾನಲ್ಲವೆ? ಭಯವಿಲ್ಲ’ ಎಂದಿತು. ಕೆಲವು ದಿನಗಳ ನಂತರ ಯಜಮಾನ ಮತ್ತೆ ಹೊಲಕ್ಕೆ ಬಂದ. ಪೈರು ಇನ್ನಷ್ಟು ಹಾಳಾಗಿತ್ತು. ಅವನಿಗೆ ವ್ಯಸನವಾಯಿತು. ‘ನಾನು ಇತರರ ಸಹಾಯ ಕೇಳಿ ಪ್ರಯೋಜನವಿಲ್ಲ. ನಾನೇ ನಾಳೆ ಮರವನ್ನು ಕಡಿಯುತ್ತೇನೆ’ ಎಂದು ಹೇಳಿಕೊಂಡ. ಹೆಣ್ಣು ಪಕ್ಷಿಗೆ ಈ ಮಾತು ಕೇಳಿಸಿತು. ಗಂಡು ಪಕ್ಷಿ ಬರುತ್ತಲೇ ನಡೆದ ಸಂಗತಿಯನ್ನು ಹೇಳಿತು. ಆಗ ಗಂಡುಪಕ್ಷಿ, ‘ಓಹೋ, ತಾನೇ ಮರವನ್ನು ಕಡಿಯುತ್ತೇನೆ ಎಂದನೋ! ಹಾಗಾದರೆ ಮರ ಉರುಳುತ್ತದೆ. ನಾವಿಲ್ಲಿರುವುದು ಕ್ಷೇಮವಲ್ಲ. ಅವನು ಇನ್ನೊಬ್ಬರ ಕೈ ಕಾಯುತ್ತ ಕುಳಿತಿದ್ದಾಗ ನಮಗೆ ಅಪಾಯ ಇರಲಿಲ್ಲ’  ಎಂದು ಹೇಳಿತು. ಪಕ್ಷಿಗಳು ಮರವನ್ನು ಬಿಟ್ಟು ಹೋದವು. ಮರುದಿನ ಹೊಲದ ಯಜಮಾನ ಬಂದು ಮರವನ್ನು ಕಡಿದುಹಾಕಿದ.

ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳುವುದು ಉತ್ತಮ, ಇತರರಿಗಾಗಿ ಕಾದರೆ ಕೆಲಸವಾಗುವುದಿಲ್ಲ ಎಂಬ ಪಾಠವನ್ನು ಈ ಕಥೆ ಎಷ್ಟು ಸುಲಭವಾಗಿ ತಿಳಿಸಿ ಕೊಡುತ್ತದೆ, ಅಲ್ಲವೆ?

ಇನ್ನೊಂದು ಕಥೆ:

ಒಂದು ಅರಣ್ಯದಲ್ಲಿ ಒಂದು ದೊಡ್ಡ ಮರ ಇತ್ತು. ಆ ಮರದ ಒಂದು ಕೊಂಬೆಯಲ್ಲಿ ಎರಡು ಕಾಗೆಗಳು ಗೂಡು  ಕಟ್ಟಿಕೊಂಡು ವಾಸವಾಗಿದ್ದವು. ಆ ಮರದ ಬುಡದಲ್ಲಿದ್ದ ಪೊಟರೆಯಲ್ಲಿ ಒಂದು ನಾಗರಹಾವು ವಾಸವಾಗಿತ್ತು. ಹೆಣ್ಣುಕಾಗೆ ಗೂಡಿನಲ್ಲಿಡುತ್ತಿದ್ದ ಮೊಟ್ಟೆಗಳನ್ನು ನಾಗರಹಾವು ಕಳ್ಳತನದಿಂದ ಹೋಗಿ ತಿಂದು ಬಿಡುತ್ತಿತ್ತು. ಹೀಗೆ ಬಹಳ ಸಲ ನಡೆಯಿತು. ಅದರಿಂದ ದುಃಖಗೊಂಡ ಹೆಣ್ಣುಕಾಗೆ ತನ್ನ ಗಂಡನಿಗೆ ಹೇಳಿತು: ‘‘ನಾನಿಡುವ ಮೊಟ್ಟೆಗಳನ್ನು ಹಾವು ತಿಂದುಬಿಡುತ್ತಿದೆ. ಈ ಕೆಟ್ಟ ಹಾವಿನ ಬಳಿ ನಾವು ಇರುವುದು ಬೇಡ. ಬೇರೆ ಕಡೆ ಹೊರಟು ಹೋಗೋಣ.’ ಅದಕ್ಕೆ ಗಂಡು ಕಾಗೆ ‘ಸ್ವಲ್ಪ ತಾಳಿಕೋ’ ಎಂದು ಹೇಳಿ ಸಮಾಧಾನಪಡಿಸಿತು. ಸ್ವಲ್ಪ ದಿನಗಳಲ್ಲಿ ಒಬ್ಬ ರಾಜಕುಮಾರ ತನ್ನ ಸೇವಕರೊಂದಿಗೆ ಆ ಮರದ ಸಮೀಪದಲ್ಲಿದ್ದ ಕೊಳಕ್ಕೆ ಸ್ನಾನಕ್ಕೆ ಬಂದ. ಅವನು ತಾನು ಧರಿಸಿದ್ದ ಚಿನ್ನದ ಹಾರವನ್ನು ಆ ಕೊಳದ ಕಟ್ಟೆಯ ಮೇಲಿಟ್ಟು ಸ್ನಾನಕ್ಕೆ ತೊಡಗಿದ. ಅದನ್ನು ನೋಡಿಕೊಂಡಿದ್ದ ಗಂಡುಕಾಗೆ ಚಿನ್ನದ ಹಾರವನ್ನು ಎತ್ತಿಕೊಂಡು ಬಂದು ಹಾವಿನ ಪೊಟರೆಯ ಬಳಿ ಹಾಕಿತು. ಸ್ನಾನ ಮುಗಿಸಿ ಬಂದ ರಾಜಕುಮಾರ ತನ್ನ ಚಿನ್ನದ ಹಾರ ಇಲ್ಲದ್ದನ್ನು ಕಂಡು, ಅದನ್ನು ಪತ್ತೆಮಾಡುವಂತೆ ತನ್ನ ಸೇವಕರಿಗೆ ಹೇಳಿದ. ಸೇವಕರು ಆ ಪ್ರದೇಶವನ್ನೆಲ್ಲ ಹುಡುಕುತ್ತ ಆ ಮರದ ಬಳಿಗೂ ಬಂದರು. ಪೊಟರೆ ಬಳಿ ಚಿನ್ನದ ಹಾರ ಬಿದ್ದಿತ್ತು. ಅದನ್ನು ಅವರು ಎತ್ತಿಕೊಂಡರಲ್ಲದೆ, ಪೊಟರೆಯನ್ನು ಶೋಧಿಸಿ ಹಾವನ್ನು ಕೊಂದು ಹಾಕಿದರು. ಹೀಗೆ ಹಾವಿನ ತೊಂದರೆಯಿಂದ ತಪ್ಪಿಸಿಕೊಂಡ ಕಾಗೆ ದಂಪತಿಗಳು ಸುಖವಾಗಿದ್ದವು.

ಅಪಾಯ ಬಂದಾಗ ಅದನ್ನು ಉಪಾಯದಿಂದ ತಪ್ಪಿಸಿಕೊಳ್ಳಬೇಕು ಎಂಬುದು ಈ ಕಥೆಯ ನೀತಿ.

ಇಂಥ ನೀತಿಯನ್ನು ಹೇಳುವ, ಧರ್ಮದ ಸತ್ಯದ ಮಹತ್ವವನ್ನು ತಿಳಿಸಿಕೊಡುವ ನೂರಾರು ಕಥೆಗಳನ್ನು ಮಕ್ಕಳಿಗಾಗಿ ಬರೆದವರು ಎಂ.ಎಸ್.ಪುಟ್ಟಣ್ಣನವರು. ಅವರು ಈ ಕಥೆಗಳನ್ನು ಬರೆದದ್ದು ಸುಮಾರು ಒಂದು ನೂರುವರ್ಷಗಳ ಹಿಂದೆ. ಪುಟ್ಟಣ್ಣನವರು ಮಾಡಿದ ಕೆಲಸ ಎಷ್ಟು ದೊಡ್ಡದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಆ ಕಾಲದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇವತ್ತು ನಮಗೆ ಓದಬೇಕೆನ್ನಿಸಿದರೆ ಎಷ್ಟೊಂದು ಪುಸ್ತಕಗಳು ಮತ್ತು ಪತ್ರಿಕೆಗಳು ಇವೆ, ಅಲ್ಲವೆ? ಎಷ್ಟೊಂದು ಕಥೆಯ ಪುಸ್ತಕಗಳು, ಕಾದಂಬರಿಗಳು! ದಿನಪತ್ರಿಕೆ ಗಳು, ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು! ಮಕ್ಕಳಿಗೆ ಸ್ವಾರಸ್ಯವಾದ ಪುಸ್ತಕಗಳಿವೆ, ದೊಡ್ಡವರಿಗೆ ಬೇಕಾಗುವಂತಹ ಪುಸ್ತಕಗಳಿವೆ, ಮಹಿಳೆಯರಿಗೆ ಪತ್ರಿಕೆಗಳಿವೆ. ಇದು ಯಾವುದೂ ಇಲ್ಲದ ಕಾಲವನ್ನು ಊಹಿಸಿಕೊಳ್ಳಿ. ಓದಲು ದಿನಪತ್ರಿಕೆ ಗಳಿಲ್ಲವೇ ಇಲ್ಲ ಎನ್ನಬೇಕು. ಕಥೆಕಾದಂಬರಿಗಳಂತೂ ಇಲ್ಲವೇ ಇಲ್ಲ. ಈಗ ನೀವು ಎಂ.ಎಸ್.ಪುಟ್ಟಣ್ಣನವರ ಜೀವನ, ಅವರು ಮಾಡಿದ ಕೆಲಸ ಇವನ್ನೆಲ್ಲ ಕುರಿತು ಓದುತ್ತಿದ್ದೀರಲ್ಲ? ಇಂತಹ ಜೀವನ ಚರಿತ್ರೆಗಳೂ ಇಲ್ಲ. ಹಿಂದಿನ ಕಾಲದಲ್ಲಿ ಎಂತಹ ಧೀರರಿದ್ದರೂ, ಹಿರಿಯರಿದ್ದರು, ಹೇಗೆ ಬಾಳಿದರು, ಏನು ಕೆಲಸ ಮಾಡಿದರು ಯಾವುದನ್ನು ತಿಳಿದುಕೊಳ್ಳಲೂ ಪುಸ್ತಕಗಳಿಲ್ಲ.

ಇಷ್ಟೇ ಅಲ್ಲ. ಕನ್ನಡದಲ್ಲಿ ಮಾತನಾಡಬೇಕು, ಬರೆಯಬೇಕು ಎಂಬ ಆಸೆ ಇದ್ದವರೆ ಕಡಮೆ. ಆಗ ನಮ್ಮ ದೇಶಕ್ಕೆ ಸ್ವಾತಂತ್ರ ವಿರಲಿಲ್ಲ. ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದರು. ಭಾರತದಲ್ಲಿ ಇಂಗ್ಲಿಷ್ ಭಾಷೆಯ ಅಭ್ಯಾಸ ಪ್ರಾರಂಭವಾಗಿತ್ತು. ಹೈಸ್ಕೂಲು ಕಾಲೇಜುಗಳಲ್ಲಿ ಎಲ್ಲ ವಿಷಯಗಳನ್ನೂ ಪಾಠ ಹೇಳುತ್ತಿದ್ದುದು ಇಂಗ್ಲಿಷಿನಲ್ಲಿ. ಇಂಗ್ಲಿಷ್ ಕಲಿತವರಿಗೆ ಹೆಮ್ಮೆ, ಅವರಿಗೆ ಕನ್ನಡ ಎಂದರೆ ತಾತ್ಸಾರ, ಆ ಭಾಷೆಯಲ್ಲಿ ಮಾತನಾಡುವುದು ಮರ್ಯಾದೆಗೆ ಕಡಮೆ ಎಂಬ ಭಾವನೆ.

ಇಂತಹ ಸ್ಥಿತಿಯಲ್ಲಿ ಕನ್ನಡದಲ್ಲಿ ಬರೆಯಬೇಕು ಎಂದು ಯಾರಿಗೆ ಎನ್ನಿಸುತ್ತದೆ? ಆದರೆ ಯಾರೂ ಬರೆಯದಿದ್ದರೆ ಭಾಷೆ, ಸಾಹಿತ್ಯ ಬೆಳೆಯುವುದು ಹೇಗೆ?

ಹೆಚ್ಚು ವಿದ್ಯೆ ಇಲ್ಲದವರು, ಅಧಿಕಾರ ಇಲ್ಲದವರು ಕನ್ನಡದಲ್ಲಿ ಮಾತನಾಡಲು ನಾಚಿಕೆ ಪಟ್ಟುಕೊಳ್ಳುತ್ತಿದ್ದ ಕಾಲದ್ಲಿ ತಕ್ಕಷ್ಟು ಓದಿದ್ದು, ಅಮಲ್ದಾರರಾಗಿದ್ದ ಪುಟ್ಟಣ್ಣನವರು ಕನ್ನಡದಲ್ಲಿ ಬರೆದರು. ಕಾದಂಬರಿ ಬರೆದರು, ಕಥೆ ಬರೆದರು, ಜೀವನಚರಿತ್ರೆ ಬರೆದರು.

ವಿದ್ಯಾಭ್ಯಾಸ

ಎಂ.ಎಸ್.ಪುಟ್ಟಣ್ಣನವರು ಮೈಸೂರು ಪುಟ್ಟಣ್ಣನವರೆಂದೂ ಹೆಸರಾಗಿದ್ದರು. ೧೮೫೪ರ ಬಲಿಪಾಡ್ಯಮಿಯ ದಿನದಂದು ಮೈಸೂರು ನಗರದಲ್ಲಿ ಜನಿಸಿದರು. ಮೈಸೂರು ಅವರ ತಾಯಿಯ ತವರು. ಅವರ ತಂದೆ ಸೂರ‍್ಯನಾರಾಯಣ ಶಾಸ್ತ್ರಿಗಳು ಚನ್ನಪಟ್ಟಣದವರು. ಪುಟ್ಟಣ್ಣನವರು ಹುಟ್ಟಿದ ಹತ್ತು ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರು. ಅವರನ್ನು ಸಾಕಿದ್ದು, ಓದು ಬರಹಗಳನ್ನು ಕಲಿಸಿದ್ದು ಅವರ ಸೋದರ ಮಾವಂದಿರಾದ ಪೇಟೆ ಅಣ್ಣಯ್ಯ ಶಾಸ್ತ್ರಿಗಳು. ಅವರು ಪುಟ್ಟಣ್ಣನವರ ಅಭಿವೃದ್ಧಿಗೆ ಬಹಳ ಶ್ರಮಿಸಿದರು. ಮೈಸೂರಿನಲ್ಲಿ ಪಂತೋಜಿಗಳು ನಡೆಸುತ್ತಿದ್ದ ಮರಾಠಿ ಪಾಠಶಾಲೆಗಳಲ್ಲಿ ಓದಿದ ಪುಟ್ಟಣ್ಣನವರು ಕನ್ನಡದ ಜತೆಗೆ ಮರಾಠಿ ಭಾಷೆಯನ್ನು ಕಲಿತರು. ಅನಂತರ ಅವರು ರಾಜಾ ಸ್ಕೂಲ್‌ನಲ್ಲಿ (ಈಗಿನ ಮಹಾರಾಜ ಕಾಲೇಜು) ವ್ಯಾಸಂಗ ಮಾಡಿ ಎಪ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಮುಂದೆ ಪುಟ್ಟಣ್ಣನವರು ಬಿ.ಎ. ತರಗತಿಗೆ ಸೇರಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. ಆದರೆ ಅಷ್ಟರಲ್ಲಿ ದೇಶದಲ್ಲಿ ಕ್ಷಾಮ ಬಂತು. ಅದರಿಂದ ಪುಟ್ಟಣ್ಣ ನವರ ವ್ಯಾಸಂಗಕ್ಕೆ ಅಡ್ಡಿಯಾಯಿತು. ಓದನ್ನು ಬಿಡಬೇಕಾಯಿತು.

ಪ್ರಾರಂಭದ ನೌಕರಿ

ಪುಟ್ಟಣ್ಣನವರು ೧೮೭೮ರಲ್ಲಿ ಕೋಲಾರದ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ಪುಟ್ಟಣ್ಣನವರು ಮೈಸೂರು ಮಹಾರಾಜ ಕಾಲೇಜಿಗೆ ವರ್ಗವಾಗಿ ಬಂದರು. ಅಲ್ಲಿ ಸ್ವಲ್ಪಕಾಲ ಕೆಲಸ ಮಾಡಿದ ಅವರು, ಓದಿನ ಹಂಬಲದಿಂದ ಮದರಾಸಿಗೆ ಹೋಗಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. ೧೮೮೫ರಲ್ಲಿ ಬಿ.ಎ. ಪದವಿಯನ್ನು ಪಡೆದರು. ಅನಂತರ ಮೈಸೂರಿಗೆ ಹಿಂದಿರುಗಿ, ಮಹಾರಾಜ ಕಾಲೇಜಿನಲ್ಲಿ ಉಪಾಧ್ಯಾಯರಾಗಿ ಕೆಲಸವನ್ನು ಮುಂದುವರಿಸಿದರು. ಆದರೆ ಆ ಕಾಲೇಜನಿ ಮುಖ್ಯಸ್ಥರಿಗೂ ಅವರಿಗೂ ಕಾರಣಾಂತರಗಳಿಂದ ಭಿನ್ನಾಭಿಪ್ರಾಯಗಳು ಬಂದವು. ಪುಟ್ಟಣ್ಣನವರು ಆ ಕಾಲೇಜಿನ ಕೆಲಸವನ್ನು ಬಿಟಟು, ಮೈಸೂರು ಛೀಪ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ ಸೇರಿದರು. ಆ ಕೆಲಸವನ್ನು ಸಮರ್ಪಕವಾಗಿ ನಿರ‍್ವಹಿಸಿ ಒಳ್ಳೆಯ ಹೆಸರನ್ನು ಗಳಿಸಿದರು; ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು. ಮುಂದೆ ಪುಟ್ಟಣ್ಣನವರು ಮೈಸೂರು ಸಂಸ್ಥಾನದ ಕಂದಾಯ ಇಲಾಖೆಯನ್ನು ಸೇರಿ ೧೬೭ರಲ್ಲಿ ಚಿತ್ರದುರ್ಗದ ಅಮಲ್ದಾರರಾಗಿ ನೇಮಕಗೊಂಡರು.

ಆಗಿನ ದಿನಗಳಲ್ಲಿ ಅಮಲ್ದಾರ್ ಪದವಿ ದೊಡ್ಡ ಹುದ್ದೆ. ಒಂದು ತಾಲ್ಲೂಕಿನ ಮುಖ್ಯಾಧಿಕಾರಿಯ ಪದವಿಯದು.

ಅಮಲ್ದಾರರು

ನಾನು ಒಂದು ಸಂಗತಿಯನ್ನು ನೆನಪಿಡಬೇಕು. ಆಗಿನ ಕಾಲದಲ್ಲಿ ಈಗಿನಂತೆ ಬಸ್ಸು ರೈಲುಗಳು ಸೌಕರ್ಯ ಇರಲಿಲ್ಲ. ಐವತ್ತು ಮೈಲಿಗಳ ದೂರ ಇರುವ ಊರೆಂದರೆ ನೂರಾರು ಮೈಲಿಗಳ ದೂರ ಇದ್ದಂತೆ. ಜನ ಊರಿನಂದ ಊರಿಗೆ ಹೋಗಬೇಕಾದರೆ ಎತ್ತಿನ ಗಾಡಿಗಳಲ್ಲಿ ಹೋಗಬೇಕು. ಹೋದ ಕಡೆ ಇಳಿದುಕೊಳ್ಳಲು ಹೋಟೆಲುಗಳಿಲ್ಲ.ಇಂತಹ ಕಾಲದಲ್ಲಿ ಜನರಿಗೆ ತಮ್ಮ ಹತ್ತಿರವಿರುವ ಅಧಿಕಾರಿಗಳೇ ಮುಖ್ಯರಾಗಿರುತ್ತಾರೆ. ಅಮಲ್ದಾರರ ಹುದ್ದೆಯನ್ನು ವಹಿಸಿಕೊಂಡ ಪುಟ್ಟಣನವರು ತಮ್ಮ ಕಾರ್ಯದಕ್ಷತೆಯಿಂದ, ಪ್ರಾಮಾಣಿಕ ನಡವಳಿಕೆಗಳಿಂದ ಜನಪ್ರಿಯರಾದರು. ಮುಂದೆ ಅವರು ಬಾಗೇಪಲ್ಲಿ, ಮುಳುಬಾಗಿಲು, ನೆಲಮಂಗಲ, ಚಾಮರಾಜನಗರ ಈ ಮುಂತಾದ ಸ್ಥಳಗಳಲ್ಲೂ ಅಮಲ್ದಾರ ರಾಗಿ ಕೆಲಸ ಮಾಡಿ, ೧೯೦೮ರಲ್ಲಿ ನಿವೃತ್ತರಾದರು. ಅನಂತರ ಬೆಂಗಳೂರಿನಲ್ಲಿ ನೆಲಸಿದ ಪುಟ್ಟಣ್ಣನವರು ಸ್ವಲ್ಪ ಕಾಲ ವಕೀಲಿವೃತ್ತಿ ನಡೆಸಿದರು. ಆದರೆ ಅವರು ತಮ್ಮ ಜೀವನದ ಕೊನೆಯವರೆವಿಗೂ ಮಾಡಿದ್ದು ಕನ್ನಡದ ಕೆಲಸವನ್ನು. ೧೯೩೦ ರಲ್ಲಿ ಅವರು ತೀರಿಕೊಂಡರು.

ಪುಸ್ತಕಗಳ ರಚನೆ

ಮೈಸೂರು ಸಂಸ್ಥಾನವನ್ನು ಆಗ ಚಾಮರಾಜ ಒಡೆಯರ್ ಅವರು ಆಳುತ್ತಿದ್ದರು (೧೮೮೧-೧೮೯೪). ಅವರಿಗೆ ಕನ್ನಡದ ಬಗೆಗೆ ಬಹಳ ಅಭಿಮಾನವಿತ್ತು. ಕನ್ನಡದ ಕೆಲಸಗಳಿಗೆ ಅವರು ಪ್ರೋತ್ಸಾಹ ಕೊಡುತ್ತಿದ್ದರು. ಅದರಿಂದ ಉತ್ತೇಜನಗೊಂಡ ಪುಟ್ಟಣ್ಣನವರು ಸಾಹಿತ್ಯ ಸೇವೆಯನ್ನು ಆರಂಭಿಸಿದರು. ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕಗಳನ್ನು ರಚಿಸುವುದರ ಮೂಲಕ ತಮ್ಮ ಬರವಣಿಗೆಯನ್ನು ಆರಂಭಿಸಿದ ಅವರು ಜೀವನಚರಿತ್ರೆ, ಕಾದಂಬಲಿ, ನಾಟಕ, ಮಕ್ಕಳ ಸಾಹಿತ್ಯ, ಸಂಶೋಧನೆ ಮುಂತಾದ ನಾನಾ ಪ್ರಕಾರಗಳಲ್ಲಿ ಪುಸ್ತಕಗಳನ್ನು ಬರೆದು ಪ್ರಸಿದ್ಧರಾದರು.

ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆ

ಮುಮ್ಮಡಿ ಕೃಷ್ಣರಾಜ ಒಡೆಯರವರ ಆಸ್ಥಾನದಲ್ಲಿ ಕುಣಿಗಲ್ ರಾಮಾಶಾಸ್ತ್ರಿಗಳು ಎಂಬ ವಿದ್ವಾಂಸರಿದ್ದರು. ಅವರು ವೇದ ವೇದಾಂತ ವ್ಯಾಕರಣ ಜ್ಯೋತಿಷ್ಯ ಮುಂತಾದ ಅನೇಕ ಶಾಸ್ತ್ರಗಳಲ್ಲಿ ಪಂಡಿತರಾಗಿದ್ದರು. ದೈವಭಕ್ತರೂ, ಪ್ರಾಮಾಣಿಕರೂ ಆಗಿದ್ದ ರಾಮಾಶಾಸ್ತ್ರಿಗಳು ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ ಮಹನೀಯರು. ಅಂಥ ವಿದ್ವಾಂಸರ ಆದರ್ಶ ಬದುಕನ್ನು ಕುರಿತು ಪುಟ್ಟಣ್ಣನವರು ಬರೆದಿರುವ ಪುಸ್ತಕವೇ ‘ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆ’, ಪುಟ್ಟಣ್ಣನವರು ಹಲವು ಪ್ರಸಂಗಗಳನ್ನು ವಿವರಿಸಿ ರಾಮಾಶಾಸ್ತ್ರಿಗಳ ಗುಣಗಳನ್ನು ಸ್ಪಷ್ಟಮಾಡುತ್ತಾರೆ. ಇದಕ್ಕೆ ಒಂದು ಉದಾಹರಣೆಯನ್ನು ಕೊಡಬಹುದು. ಶಾಸ್ತ್ರಿಗಳು ಇದ್ದದ್ದು ಮುಮ್ಮಡಿ ಕೃಷ್ಣರಾಜರ ಆಸ್ಥಾನದಲ್ಲಿ. ಅವರಿಗೆ ಮಹಾರಾಜರಲ್ಲಿ ಬಹಳ ಗೌರವ. ರಾಜರ ಹಿರಿಯ ಪತ್ನಿ ನಿಧನರಾದರು. ರಾಜರು ರಾಮಾಶಾಸ್ತ್ರಿಗಳಿಗೆ ಹೇಳಿ ಕಳುಹಿಸಿದರು. ಆಗ ಶಾಸ್ತ್ರಿಗಳು ಬೆಳಗಿನ ಪೂಜೆಯಲ್ಲಿ ಮಗ್ನರಾಗಿದ್ದರು. ಪೂಜೆಯನ್ನು ಅಷ್ಟಕ್ಕೆ ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ. ಅವರು ಪೂಜೆಯನ್ನು ಮುಗಿಸಿಕೊಂಡು ಹೋದರು. ಅವರನ್ನು ಕಂಡರೆ ಆಗದವರು ಮಹಾರಾಜರಿಗೆ ಅವರ ಮೇಲೆ ಚಾಡಿ ಹೇಳಿದರು, ಶಾಸ್ತ್ರಿಗಳಿಗೆ ಮಹಾರಾಜರಲ್ಲಿ ಗೌರವವಿಲ್ಲ, ಅವರಿಗೆ ಅಹಂಕಾರ ಹೀಗೆಲ್ಲ. ಮಹಾರಾಜರೂ ಇಂತಹ ಜನರ ಮಾತನ್ನು ಕೇಳಿ ಶಾಸ್ತ್ರಿಗಳ ವಿಷಯದಲ್ಲಿ ಅಸಮಾಧಾನ ಮಾಡಿಕೊಂಡರು. ಶಾಸ್ತ್ರಿಗಳಿಗೆ ಬೇಸರವಾಯಿತು. ಮೈಸೂರನ್ನೇ ಬಿಟ್ಟು ಹೊರಟುಹೋದರು. ಕೆಲವು ದಿನಗಳನಂತರ ಮಹಾರಾಜರಿಗೆ ತಾವು ಮಾಡಿದ ತಪ್ಪು ತಿಳಿಯಿತು. ಶಾಸ್ತ್ರಿಗಳು ಶ್ರೀರಂಗಪಟ್ಟಣಕ್ಕೆ ಬರುವ ವಿಷಯ ಅವರಿಗೆ ತಿಳಿಯಿತು. ತಾವೇ ಶ್ರೀರಂಗಪಟ್ಟಣಕ್ಕೆ ಹೋಗಿ ಅವರನ್ನು ಭೇಟಿ ಮಾಡಿದರು. ‘ದುಷ್ಟರ ಮಾತುಗಳನ್ನು ಕೇಳಿ ತಪ್ಪು ಮಾಡಿದೆ, ನೀವು ಕೋಪ ಮಾಡಿಕೊಳ್ಳಬಾರದು, ಮೈಸೂರಿಗೆ ಖಂಡಿತವಾಗಿ ದಯಮಾಡಿಸಬೇಕು’ ಎಂದು ಉಪಚಾರ ವಾಗಿ ಕರೆದರು. ಅನಂತರವೇ ಶಾಸ್ತ್ರಿಗಳು ಹಿಂದಕ್ಕೆ ಬಂದದ್ದು. ಅಷ್ಟರಮಟ್ಟಿಗೆ ಅವರಿಗೆ ತಮ್ಮ ಒಳ್ಳೆಯ ಹೆಸರಿನ ಬಗ್ಗೆ ಕಾಳಜಿ. ಸುಮಾರು ಎಪ್ಪತ್ತು ವರ್ಷಗಳ ಕೆಳಗೆ ಬರೆದ ಈ ಜೀವನಚರಿತ್ರೆಗೆ ಪುಟ್ಟಣ್ಣನವರು ರಾಜಮಹಾರಾಜರನ್ನು  ಅಥವಾ ಶ್ರೀಮಂತರನ್ನು ಆರಿಸಿಕೊಳ್ಳಲಿಲ್ಲ. ಒಬ್ಬ ವಿದ್ವಾಂಸರನ್ನು ಆರಿಸಿಕೊಂಡರು ಎನ್ನುವುದು ಮುಖ್ಯವಾದ ಸಂಗತಿ. ಅಲ್ಲದೆ ಸುಮಾರು ಒಂದುನೂರ ಐವತ್ತು ವರ್ಷಗಳ ಹಿಂದಿನ ಜೀವನ ರೀತಿಯನ್ನು ಈ ಜೀವನಚರಿತ್ರೆ ಬಹು ಸ್ಫುಟವಾಗಿ ಚಿತ್ರಿಸುತ್ತದೆ. ಉದಾಹರಣೆಗೆ ಆ ಕಾಲದ ವಿದ್ಯಾಭ್ಯಾಸ. ಸರ್ಕಾರದಲ್ಲಿ ವಿದ್ಯಾಭ್ಯಾಸದ ಇಲಾಖೆ ಎನ್ನುವುದೇ ಇರಲಿಲ್ಲ. ಸರ್ಕಾರ ಶಾಲೆಗಳನ್ನು ನಡೆಸುತ್ತಿರಲಿಲ್ಲ. ಉಪಾಧ್ಯಾಯರಿಗೆ ಸಂಬಳ ಕೊಡುತ್ತಿರಲಿಲ್ಲ. ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಶ್ರೀಮಂತರ ಮನೆಗಳಲ್ಲಿ ಪಾಠಶಾಲೆಗಳು ನಡೆಯುತ್ತಿದ್ದವು. ಓನಾಮದಿಂದ ಪ್ರಾರಂಭಿಸಿ ಕೊಟ್ಟ ಕಾಗದ ಓದುವುದು, ಹೇಳಿದ್ದನ್ನು ಬರೆಯುವುದು, ಸುಲಭವಾದ ಲೆಖ್ಖಗಳು, ಇಷ್ಟನ್ನು ಕನ್ನಡದಲ್ಲಿ ಉಪಾಧ್ಯಾಯರು ಹೇಳಿಕೊಡುತ್ತಿದ್ದರು. ಕನ್ನಡ ಹೇಳಿಕೊಡುತ್ತಿದ್ದರು. ಉಪಾಧ್ಯಾಯರಿಗೆ ಹುಡುಗರ ತಂದೆ ತಾಯಿ ತಿಂಗಳಿಗೆ ಅಥವಾ ವರ್ಷಕ್ಕೆ ಇಷ್ಟು ಎಂದು ಹಣ ಕೊಡುತ್ತಿದ್ದರು. ಅಶ್ವೀಜಮಾಸದಲ್ಲಿ ಉಪಾಧ್ಯಾಯರು ಹುಡುಗರಿಗೆ ಒಳ್ಳೆಯ ಉಡುಪನ್ನು ಹಾಕಿಸಿ ಮನೆಮನೆಗೆ ಕರೆದುಕೊಂಡು ಹೋಗಿ ಚೌಪದಗಳೆಂಬ ಹಾಡುಗಳನ್ನು ಹಾಡಿಸುತ್ತಿದ್ದರು. ಇದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಸಂಸ್ಕೃತದ ಅಭ್ಯಾಸ ದೊಡ್ಡ ವಿದ್ವಾಂಸರಿಂದ ನಡೆಯುತ್ತಿತ್ತು. ಈ ವಿದ್ವಾಂಸರಿಗೆ ಮಹಾರಾಜರೇ ಆಧಾರ. ಇವರಿಗೆ ಮನೆ, ತಿಂಗಳ ಸಂಬಳ ಕೊಡುತ್ತಿದ್ದರು. ವಿದ್ವಾಂಸರು ಶಿಷ್ಯರನ್ನುತಮ್ಮ ಮನೆಯಲ್ಲೆ ಇಟ್ಟುಕೊಂಡು ಅನ್ನಹಾಕಿ ಪಾಠ ಹೇಳುತ್ತಿದ್ದರು. ಇದಕ್ಕಾಗಿ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಅನ್ನವನ್ನೂ ವಿದ್ಯೆಯನ್ನೂ ಮಾರುವುದು ಪಾಪ ಎಂಬ ಭಾವನೆ ಸಮಾಜದಲ್ಲಿ ಬೇರೂರಿತ್ತು. ಅರಮನೆಯ ರೀತಿನೀತಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಆಗಿನ ಕಾಲದ ಚಿತ್ರ ನಮಗೆ ಈ ಗ್ರಂಥದಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಕಟ್ಟುತ್ತದೆ. ಈ ಜನರ ರೀತಿಯನ್ನು ಚಿತ್ರಿಸುವ ಹಲವು ಪ್ರಸಂಗಗಳು ನೆನಪಿನಲ್ಲಿ ಉಳಿಯುವಂತಹವು. ಉದಾಹರಣೆಗೆ ರಾಮಶೇಷ ಶಾಸ್ತ್ರಿಗಳೆಂಬ ಬಹು ದೊಡ್ಡ ವಿದ್ವಾಂಸರು ಒಂದು ದಿನ ಬೆಳಗ್ಗೆ ಹಸುವಿಗಾಗಿ ಒಂದು ಹೊರೆ ಹುಲ್ಲನ್ನು ತಲೆಯ ಮೇಲೆ ಇಟ್ಟುಕೊಂಡು ಹತ್ತು ಸೇರಿನ ತೊಗರೀಬೇಳೆ ಗಂಟನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದರಂತೆ. ಅರಮನೆಯ ಹತ್ತಿರ ಇನ್ನೊಬ್ಬ ದೊಡ್ಡ ವಿದ್ವಾಂಸರು ಆನವಟ್ಟಿ ಶ್ರೀನಿವಾಸಾಚಾರ್ಯರೆಂಬವರ ಭೇಟಿ ಆಯಿತು. ಮಾತನಾಡುತ್ತ ಯಾವುದೋ ಶಾಸ್ತ್ರದ ವಿಷಯ ಬಂದಿತಂತೆ. ಇಬ್ಬರೂ ಚರ್ಚೆ ಮಾಡುತ್ತ ಹಾಗೆಯೇ ನಿಂತರು. ರಾಮಶೇಷ ಶಾಸ್ತ್ರಿಗಳ ತಲೆಯ ಮೇಲೆ ಹುಲ್ಲು, ಕೈಯಲ್ಲಿ ಬೇಳೆ ಗಂಟು. ಬೆಳಗ್ಗೆ ಒಂಬತ್ತರಿಂದ ಸಂಜೆ ನಾಲ್ಕರವರೆಗೂ ಚಚೆ೪ ನಡೆಯುತ್ತಲೇ ಇತ್ತು. ಅರಮನೆಯಿಂದ ದುರ್ಬೀನಿನಲ್ಲಿ ಇದನ್ನು ನೋಡುತ್ತಿದ್ದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ನಾಲ್ಕು ಗಂಟೆಗೆ ಸೇವಕನನ್ನು ಕಳುಹಿಸಿ, ‘ಇದೇನು ಕಾಲು ನೋಯುವುದಿಲ್ಲವೆ, ಮನೆಗೆ ಹೋಗುವುದಿಲ್ಲವೆ?’ ಎಂದು ನೆನಪಿಗೆ ತಂದುಕೊಟ್ಟರಂತೆ.

ಈ ಜೀವನ ಚರಿತ್ರೆಯಲ್ಲಿ ವ್ಯಕ್ತವಾಗುವ ಹಲವು ಅಭಿಪ್ರಾಯಗಳು ಇಂದಿನ ಜೀವನಕ್ಕೆ ಸರಿ ತೋರದಿರಬಹುದು. ಆದರೆ ಪಾಂಡಿತ್ಯ, ಪ್ರಾಮಾಣಿಕತೆ ಇವಕ್ಕೆ ತೋರುವ ಗೌರವ, ರಾಮಶಾಸ್ತ್ರಿಗಳ ಗಟ್ಟಿ ವ್ಯಕ್ತಿತ್ವವನ್ನು ಚಿತ್ರಿಸುವ ರೀತಿ ಮೆಚ್ಚುವಂತಹವು.

ಇದು ಪ್ರಕಟವಾಗಿದ್ದು ೧೯೧೦ರಲ್ಲಿ. ವಿದ್ವತ್ತಿನಿಂದ, ದಾನಧರ್ಮಗಳಿಂದ, ಜನೋಪಕಾರಿ ಕಾರ್ಯಗಳಿಂದ ಜನಪ್ರಿಯರಾಗಿದ್ದ ಅನೇಕ ಮಹನೀಯರು ಕನ್ನಡ ನಾಡಿನಲ್ಲಿ ಆಗಿಹೋಗಿದ್ದಾರೆ. ಆದರೆ ಅಂಥ ಮಹನೀಯರ ಜೀವನವನ್ನು ಕುರಿತು ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿರಲಿಲ್ಲ. ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆಯೇ ಕನ್ನಡದಲ್ಲಿ ಪ್ರಕಟವಾದ ಮೊಟ್ಟ ಮೊದಲ ಜೀವನಚರಿತ್ರೆ. ಅಲ್ಲಿಂದೀಚೆಗೆ ಕನ್ನಡದಲ್ಲಿ ಅನೇಕ ಜೀವನಚರಿತ್ರೆಗಳು ಪ್ರಕಟವಾಗಿದ್ದು, ಜೀವನ ಚರಿತ್ರೆಗಳ ಒಂದು ಸಾಹಿತ್ಯ ಪ್ರಕಾರವೆ ರೂಪುಗೊಂಡಿದೆ.

ಇತರ ಜೀವನಚರಿತ್ರೆಗಳು

ಪುಟ್ಟಣ್ಣನವರು ಇನ್ನೂ ಮೂರು ಜೀವನಚರಿತ್ರೆಗಳನ್ನು ಬರೆದಿದ್ದಾರೆ: ಸರ್ ಸಾಲರ್ ಜಂಗ್‌ನ ಚರಿತ್ರೆ, ಮಹಮೂದ್ ಗವಾನ್‌ನ ಚರಿತ್ರೆ ಮತ್ತು ಕಾಂಪೂಷನ ಚರಿತ್ರೆ.

ಸಾಲರ್ ಜಂಗ್ ಎಂಬುವನು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಹೈದರಾಬಾದ್ ಸಂಸ್ಥಾನದ ಪ್ರಧಾನಮಂತ್ರಿಯಾಗಿದ್ದ. ದೇಶಪ್ರೇಮ, ಮುಂದಾಲೋಚನೆ ಮತ್ತು ಕಾರ್ಯ ನೈಪುಣ್ಯ ಅವನ ಜೀವನದ ಹೆಗ್ಗುಣಗಳು. ಅವನು ಹೈದರಾಬಾದ್ ಸಂಸ್ಥಾನದ ಪ್ರಧಾನಮಂತ್ರಿ ಪದವಿಗೆ ಬಂದಾಗ, ಆ ಸಂಸ್ಥಾನದ ಆಡಳಿತ ಹದಗೆಟ್ಟಿತ್ತು. ಆತ ಆಡಳಿತವನ್ನು ಸರಿಪಡಿಸಿ ಜನಪ್ರಿಯನಾದ, ಬ್ರಿಟಿಷರ ಗೌರವಕ್ಕೂ ಪಾತ್ರನಾದ. ಅವನ ಜೀವನ ಸಾಧನೆಗಳನ್ನು ಪುಟ್ಟಣ್ಣನವರು ‘ಸಾಲರ್ ಜಂಗ್ ಚರಿತ್ರೆ’ ಯಲ್ಲಿ ಸರಳವಾದ ಶೈಲಿಯಲ್ಲಿ ಚಿತ್ರಿಸಿದ್ದಾರೆ.

ಮಹಮೂದ್ ಗವಾನ್ ಎಂಬುವನು ಬಹಮನಿ ರಾಜ್ಯದ ಮಂತ್ರಿಯಾಗಿದ್ದ. ಕಾರ್ಯದಕ್ಷತೆಗೆ ಹೆಸರಾಗಿದ್ದ ಅವನ ಜೀವನವನ್ನು ಕುರಿತು ಪುಟ್ಟಣ್ಣನವರು ಬರೆದಿರುವ ಪುಸ್ತಕ ‘ಮಹಮೂದ್ ಗವಾನ್‌ನ ಚರಿತ್ರೆ.’

ಕಾಂಪೂಸ್ ಎಂಬುವನು ಆರನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಚೀನ ದೇಶದ ಧರ್ಮ ಸ್ಥಾಪಕ. ಅವನ ಸಾಧನೆಗಳನನು ಮತ್ತು ಬೋಧನೆಗಳನ್ನು ಪುಟ್ಟಣ್ಣನವರು ‘ಕಾಂಪೂಷನ ಚರಿತ್ರೆ’ಯಲ್ಲಿ ನಿರೂಪಿಸಿದ್ದಾರೆ.

ಮಾಡಿದ್ದುಣ್ಣೋ ಮಹಾರಾಯ

ಪುಟ್ಟಣ್ಣನವರಿಗೆ ತಮ್ಮ ಕಾಲದ ಸಮಾಜದ ರೀತಿ ನೀತಿಗಳು ಗೊತ್ತಿದ್ದವು; ಜನಜೀವನದ ವಿವಿಧ ಮುಖಗಳ ಪರಿಚಯವಿತ್ತು. ಈ ಬಗೆಯ ಅನುಭವಗಳನ್ನು ಆಧರಿಸಿಕೊಂಡು ಅವರು ‘ಮಾಡಿದ್ದುಣ್ಣೋ ಮಹಾರಾಯ’ ‘ಮುಸುಕು ತೆಗೆಯೇ ಮಾಯಂಗನೆ’  ಮತ್ತು ಅವರಿಲ್ಲದೂಟ ಅಥವಾ ಕೊಂಬೆಗೆ ರೆಂಬೆ ಸೇರಿತು’ ಎಂಬ ಮೂರು ಸಾಮಾಜಿಕ ಕಾದಂಬರಿಗಳನ್ನು ರಚಿಸಿದರು.

ಸೀತಮ್ಮ ಎಂಬ ಸಾಧ್ವಿ ಹಲವು ಬಗೆಯ ಕಷ್ಟಗಳಿಗೆ ಸಿಕ್ಕಿಯೂ ದುಷ್ಟರನ್ನು ಎದುರಿಸಿದ್ದು ‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿಯ ಕಥಾವಸ್ತು.

ಸಂಜಯವಾಡಿ ಎಂಬ ಊರಿನಲ್ಲಿ ಸದಾಶಿವ ದೀಕ್ಷಿತನೆಂಬ ಒಬ್ಬ ವಿದ್ವಾಂಸನಿದ್ದ. ತಿಮ್ಮಮ್ಮ ಆತನ ಎರಡನೆಯ ಹೆಂಡತಿ. ಮಹದೇವ ಅವನ ಮೊದಲ ಹೆಂಡತಿಯ ಮಗ. ಸೀತಮ್ಮ ಸೊಸೆ. ಅತ್ತೆ ತಿಮ್ಮಮ್ಮ ಸೊಸೆಗೆ ಕಿರುಕುಳ ಕೊಡುತ್ತಿದ್ದಳು. ಆದರೆ ಸಾಧ್ವಿ ಸೀತಮ್ಮ ಅತ್ತೆಯ ಕಾಟವನ್ನು ಸಹಿಸಿಕೊಂಡು, ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಾಳುತ್ತಿದ್ದಳು.

ಆ ಊರಿನ ಬಳಿ ಒಂದು ಗುಡಿ ಇತ್ತು. ಸಿದ್ದಾಪ್ಪಾಜಿ ಎಂಬುವನು ಆ ಗುಡಿಯ ಪೂಜಾರಿ. ದೇವರ ಹೆಸರಿನಲ್ಲಿ ಭಕ್ತಾದಿಗಳಿಂದ ಕಾಣಿಕೆಗಳನ್ನು ವಸೂಲು ಮಾಡಿಕೊಂಡು ಹಣವಂತನಾಗಿದ್ದ. ಅವನು ಸ್ವಭಾವದಲ್ಲಿ ದುಷ್ಟ, ಮಂತ್ರವಾದಿ.

ಆ ಗುಡಿಗೆ ಸಮೀಪದಲ್ಲಿ ಒಂದು ಬೃಂದಾವನ ಇತ್ತು. ಸೀತಮ್ಮ ಪ್ರತಿನಿತ್ಯ. ಆ ಬೃಂದಾವನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದಳು. ಅದನ್ನು ಬಹಳ ದಿನಗಳಿಂದ ನೋಡುತ್ತಿದ್ದ ಪೂಜಾರಿ ಸಿದ್ದಪ್ಪಾಜಿ ಚೇಷ್ಟೆ ಮಾಡಿದ. ಅವನಿಂದ ತಪ್ಪಿಸಿಕೊಂಡು ಮನೆಗೆ ಬಂದ ಸೀತಮ್ಮ. ಅದೇ ವ್ಯಸನದಿಂದ ಹಾಸಿಗೆ ಹಿಡಿಯುತ್ತಾಳೆ; ಕೆಲವು ದಿನಗಳಲ್ಲಿಯೇ ಸತ್ತು ಹೋಗುತ್ತಾಳೆ. ಅವಳು ಸತ್ತಿದ್ದು ಮಂತ್ರವಾದಿ ಸಿದ್ದಪ್ಪಾಜಿಯ ಮಂತ್ರಶಕ್ತಿಯಿಂದ. ಅದನ್ನು ತಿಳಿದುಕೊಂಡು ಆನಂದಭಟಜಿ ಎಂಬ ಇನ್ನೊಬ್ಬ ಮಂತ್ರವಾದಿ ತನ್ನ ಮಂತ್ರಶಕ್ತಿಯಿಂದ ಸೀತಮ್ಮನನ್ನು ಬದುಕಿಸುತ್ತಾನೆ. ಸೀತಮ್ಮ ಬದುಕಿದ್ದು ಅವಳ ಮನೆಯವರಿಗೆಲ್ಲ ಸಂತೋಷವಾಗುತ್ತದೆ. ಅವರು ದುಷ್ಟರಿದ್ದ ಸಂಜಯವಾಡಿಯನ್ನು ಬಿಟ್ಟು ಮೈಸೂರಿಗೆ ಬಂದು ನೆಲೆಸುತ್ತಾರೆ.

ದುಷ್ಟಪೂಜಾರಿ ಸಿದ್ದಪ್ಪಾಜಿ ಮತ್ತು ಅವನ ಸ್ನೇಹಿತರು ನಡೆಸುತ್ತಿದ್ದ ದರೋಡೆ ಮತ್ತು ಕಳ್ಳತನಗಳು ಸರ್ಕಾರಕ್ಕೆ ಗೊತ್ತಾಗಿ, ಅವರಿಗೆಲ್ಲ ಶಿಕ್ಷೆಯಾಗುತ್ತದೆ.

ಇದು ‘ಮಾಡಿದ್ದುಣ್ಣೋ ಮಹಾರಾಯ’ ಕಾದಂಬರಿಯ ಸಂಕ್ಷಿಪ್ತ ಕಥೆ ಈ ಕಥೆಯ ನಡುವೆ ಸಂಜಯವಾಡಿಯ ರಾಜಕೀಯ ಪರಿಸ್ಥಿತಿ, ಆ ಊರಿನ ಒಳಜಗಳಗಳು, ಉಪಾದ್ರಿ ನಾರಣಪ್ಪ ನಡೆಸುತ್ತಿದ್ದ ಶಾಲೆಯ ಪರಿಚಯ, ಸರ್ಕಾರಿ ಅಧಿಕಾರಿಗಳು ಲಂಚಕ್ಕಾಗಿ ಜನರನ್ನು ಪೀಡಿಸುತ್ತಿದ್ದ ರೀತಿ, ದೇವರು, ಧರ್ಮದ ಹೆಸರಿನಲ್ಲಿ ಪುರೋಹಿತರ ಸುಲಿಗೆ, ಕಳ್ಳರ ಹಾವಳಿ ಈ ಮುಂತಾದ ಅನೇಕ ಘಟನೆಗಳೂ ಪ್ರಸಂಗಗಳೂ ಇರುವ ಈ ಕಾದಂಬರಿ ಕುತೂಹಲಕಾರಿ ಯಾಗಿದ್ದು, ಸ್ವಾರಸ್ಯವಾಗಿದೆ.

ಜೀವನದಲ್ಲಿ ನಾವು ಮಾಡಿದ ತಪ್ಪಿನ ಫಲವನ್ನು ಅನುಭವಿಸಲೇಬೇಕು; ಏನೂ ಶಿಕ್ಷೆಯಾಗುವುದಿಲ್ಲ, ತಪ್ಪಿಸಿ ಕೊಳ್ಳಬಹುದು ಎಂದು ಮೊದಲು ಕಂಡರೂ ಮಾಡಿದ ಪಾಪದ ಫಲವನ್ನು ಅನುಭವಿಸಿಯೇ ತೀರಬೇಕು ಎಂಬುದನ್ನು ತೋರಿಸಿ ಕೊಡುವುದು ಕಾದಂಬರಿಯ ಉದ್ದೇಶ.

ಈ ಕಾದಂಬರಿಯಲ್ಲಿ ನಾವು ಗಮನಿಸಬೇಕಾದ ಅಂಶದಲ್ಲಿ ಒಂದು ಜನರ ಜೀವನವನ್ನು ಪುಟ್ಟಣ್ಣನವರು ಹೇಗೆ ಚಿತ್ರಿಸಿದ್ದಾರೆ ಎನ್ನುವುದು. ಒಬ್ಬ ಸಾಹಿತಿ ಒಳ್ಳೆಯ ಸಾಹಿತ್ಯ ಬರೆಯಬೇಕಾದರೆ ಜನಜೀವನ ಪರಿಚಯವನು ಹೇಗೆ ಬಳಸಿಕೊಳ್ಳಬಲ್ಲ ಎನ್ನುವುದನ್ನು ಇಲ್ಲಿ ಕಾಣುತ್ತೇವೆ.

ಕಾದಂಬರಿಗಳಲ್ಲಿ ಜನಜೀವನದ ಚಿತ್ರಣ

ಪುಟ್ಟಣ್ಣನವರು ಬರೆದಿರುವ ಮೂರು ಕಾದಂಬರಿಗಳ ವಸ್ತು ಮುಮ್ಮಡಿ ಕೃಷ್ಣರಾಜ ಒಡೆಯರ (೧೭೯೯-೧೮೬೮) ಆಡಳಿತ ಕಾಲಕ್ಕೆ ಸಂಬಂಧಿಸಿದ್ದು. ಆ ಕಾಲದ ನಮ್ಮ ನಾಡಿನ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಜೀವನ, ಜನ ನಡೆಸುತ್ತಿದ್ದ ಜೀವನದ ರೀತಿ, ಅವರ ಆಸೆ ಆಕಾಂಕ್ಷೆಗಳು, ನೋವು ನಲಿವುಗಳು ಇವುಗಳನ್ನು ಕಣ್ಣಿಗೆ ಕಟ್ಟಿದಂತೆ ಆಡುಮಾತಿನ ಭಾಷೆಯಲ್ಲಿ ಸರಳವಾಗಿ ಸ್ವಾರಸ್ಯವಾಗಿ ಈ ಕಾದಂಬರಿಗಳಲ್ಲಿ ಪುಟ್ಟಣ್ಣನವರು ಚಿತ್ರಿಸಿದ್ದಾರೆ. ‘ಮಾಡಿದ್ದುಣ್ಣೊ ಮಹಾರಾಯ’ ದಲ್ಲಿ ಮೈಸೂರಿನ ಮಹಾರಾಜರ ಅರಮನೆಯ ಜೀವನರೀತಿಯಿಂದ ಹಿಡಿದು ಹಳ್ಳಿಯ ಶಾಲೆಯ ವೈಖರಿಯವರೆಗೆ ಜನಜೀವನವನ್ನು ಚಿತ್ರಿಸಿದ್ದಾರೆ. ಹಳ್ಳಿಯ ಜೀವನವಂತೂ ಬಹು ಸ್ವಾರಸ್ಯವಾಗಿ, ಸ್ಪಷ್ಟವಾಗಿ ಮೂಡಿ ಬಂದಿದೆ. ಚಿಲ್ಲರೆ ಅಧಿಕಾರಿಗಳ ದರ್ಪ, ಲಂಚಕೋರತನ, ಅಧಿಕಾರಿಯ ಹೆಂಡತಿಯ ಜಂಬ, ಜನರ ಬವಣೆ, ಹಳ್ಳಿಯ ಸಜ್ಜನರು, ಸೋಮಾರಿಗಳು, ದುಷ್ಟರು ಎಲ್ಲರ ಚಿತ್ರ ಬಹು ಸ್ವಾರಸ್ಯವಾಗಿದೆ. ಇಲ್ಲಿ ಅಮಾಸೆ ಎಂಬ ಕಳ್ಳನೊಬ್ಬ ಬರುತ್ತಾನೆ. ಅವನ ವೃತ್ತಾಂತವೇ ಒಂದು ಸೊಗಸಾದ ಸಣ್ಣಕಥೆಯಾಗಿದೆ. ಕಳ್ಳರ ಜೀವನದ ರೀತಿ ಸಹ ವಿವರಗಳಿಂದ ಕೂಡಿ ಸ್ಪಷ್ಟವಾಗಿ ಮೂಡಿಬಂದಿದೆ. ಮಾಟಮಂತ್ರ, ಸತ್ತವರು ಬದುಕುವುದು ಇವುಗಳಲ್ಲಿ ನಮಗೆ ನಂಬಿಕೆ ಇಲ್ಲದಿದ್ದರೂ ಇಲ್ಲಿ ಜೀವನವನ್ನು ಚಿತ್ರಿಸುವ ರೀತಿಗಾಗಿ ಕಾದಂಬರಿಯನ್ನು ಓದಬೇಕು.

ಕನ್ನಡಸಾಹಿತ್ಯದಲ್ಲಿ ಕಾದಂಬರಿ ಎಂಬ ಒಂದು ಸಾಹಿತ್ಯಪ್ರಕಾರ ಆರಂಭವಾಗಿದ್ದು ಈಗ್ಗೆ ಒಂದು ನೂರು ವರ್ಷಗಳ ಹಿಂದೆ; ಬೇರೆ ಭಾಷೆಗಳಿಂದ ಭಾಷಾಂತರಿಸಿ ಕೊಂಡ ಕಾದಂಬರಿಗಳ ಮೂಲಕ. ಅಂಥ ದಿನಗಳಲ್ಲಿ ಪುಟ್ಟಣ್ಣನವರು ನಮ್ಮ ನಾಡಿನ ವಿಷಯ ಕುರಿತು, ನಮ್ಮ ಜನತೆಯ ಜೀವನವನ್ನು ಕುರಿತು ಸ್ವತಂತ್ರವಾಗಿ ಕಾದಂಬರಿಗಳನ್ನು ಬರೆದರು; ಕನ್ನಡದಲ್ಲಿ ಸ್ವತಂತ್ರ ಕಾದಂಬರಿಗಳ ಬೆಳವಣಿಗೆಗೆ ಶ್ರಮಿಸಿದರು.

ನೀತಿ ಚಿಂತಾಮಣಿ

ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಆರಂಭಿಸಿ ಬೆಳೆಸಿದ ಹಿರಿಯ ಲೇಖಕರಲ್ಲಿ ಎಂ.ಎಸ್.ಪುಟ್ಟಣ್ಣನವರೂ ಒಬ್ಬರು. ಅವರು ಮಕ್ಕಳಿಗಾಗಿ ನೀತಿ ಚಿಂತಾಮಣಿ, ಪೇಟೆ ಮಾತೇನಜ್ಜಿ? ಮತ್ತು ಸುಮತಿ ಮದನಕುಮಾರರ ಚರಿತ್ರೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.

ಮಕ್ಕಳು ಬುದ್ಧಿವಂತರೂ, ನೀತಿವಂತರೂ ಆಗಿ ಬೆಳೆಯಬೇಕು. ಹಾಗೆ ಬೆಳೆದ ಮಕ್ಕಳೇ ಒಳ್ಳೆಯ ಪ್ರಜೆಗಳಾಗುತ್ತಾರೆ, ಅಂಥ ಪ್ರಜೆಗಳಿಂದ ಕೂಡಿರುವ ದೇಶಕ್ಕೆ ಕೀರ್ತಿಯೂ ಬರುತ್ತದೆ ಎಂದು ಪುಟ್ಟಣ್ಣನವರು ನಂಬಿದ್ದರು. ಆ ದೃಷ್ಟಿಯಿಂದ ಅವರು ನೀತಿ, ನಿಯಮ, ಜಾಣ್ಮೆ, ಸತ್ಯ, ಅಹಿಂಸೆ, ದೇಶಭಕ್ತಿ, ಉಪಕಾರ ಬುದ್ಧಿ ಮುಂತಾದ ಸದ್ಗುಣಗಳನ್ನು ತಿಳಿಸುವ ನೂರಾರು ಪುಟ್ಟಪುಟ್ಟ ಕಥೆಗಳನ್ನು ಪುರಾಣ ಇತಿಹಾಸಗಳಿಂದ ಸಂಗ್ರಹಿಸಿ ‘ನೀತಿ ಚಿಂತಾಮಣಿ’ ಎಂಬ ಹೆಸರಿನಿಂದ ಪ್ರಕಟಿಸಿದರು. ಬಾಲ್ಯ, ಯೌವನ ಮತ್ತು ಅವರ ವಯಸ್ಸು ಎಂಬ ಮೂರು ಭಾಗಗಳಲ್ಲಿ ಮೊದಲು ಪ್ರಕಟವಾದ ‘ನೀತಿ ಚಿಂತಾಮಣಿ’, ಅನಂತರ ಹದಿನೈದು ಭಾಗಗಳಲ್ಲಿ ಪ್ರಕಟವಾಯಿತು. ಮೈಸೂರಿನ ‘ಕಾರ‍್ಯಾಲಯ ಪ್ರಕಾಶಕರು’ ಈ ಹದಿನೈದು ಭಾಗಗಳನ್ನು ಪ್ರಕಟಿಸಿದ್ದಾರೆ.

ಒಂದು ಬಹು ಸ್ವಾರಸ್ಯವಾದ ಕಥೆ ಯತೀಶ್ವರ ಮತ್ತು ವರ್ತಕರು.

ಒಂದು ಮರಳುಕಾಡಿನಲ್ಲಿ ಒಬ್ಬ ಯತೀಶ್ವರ (ಸಾಧು) ಹೋಗುತ್ತಿದ್ದನು. ಎದುರಿಗೆ ಇಬ್ಬರು ವರ್ತಕರು ಬಂದರು. ಅವರು ಆತನನ್ನು, ‘ಹಿರಿಯರೆ, ನಮ್ಮ ಒಂದು ಒಂಟೆ ತಪ್ಪಿಸಿಕೊಂಡು ಹೋಗಿದೆ. ನೀವು ಅದನ್ನು ನೋಡಿದಿರಾ?’’ ಎಂದು ಕೇಳಿದರು.

ಅವರ ನಡುವೆ ಹೀಗೆ ಸಂಭಾಷಣೆ ನಡೆಯಿತು.

ಯತೀಶ್ವರ: ಅದಕ್ಕೆ ಒಂದು ಕಣ್ಣಿರಲಿಲ್ಲ, ಅಲ್ಲವೆ?

ವರ್ತಕರು: ಹೌದು.

ಯ: ಅದರ ಒಂದು ಕಾಲ ಕುಂಟು; ಅಲ್ಲ?

ವ: ಹೌದು ಹೌದು.

ಯ: ಅದಕ್ಕೆ ಒಂದು ಕಡೆ ಜೇನುತುಪ್ಪವನ್ನು ಹೇರಿದ್ದಿರ?

ವ: ಹೌದು ಹೌದು.

ಯ: ಮತ್ತೊಂದು ಕಡೆ ಗೋಧಿಯನ್ನು ಹೇರಿದ್ದಿರಿ?

ವ: ನಿಜ ನಿಜ. ಎಲ್ಲಿದೆ ಅದು? ದಯವಿಟ್ಟು ತೋರಿಸಿ.

ಯ: ಅದು ಹೀಗೆಯೇ ಎಲ್ಲೋ ಹೋಗಿರಬೇಕು, ಹುಡುಕಿ.

ವ: ಅಯ್ಯೊ ಹಾಗೆ ಹೇಳಿದರೆ ಹೇಗೆ ಸ್ವಾಮಿ?ಅದನ್ನು ನೋಡಿದ್ದೀರಿ, ಎಲ್ಲಿದೆ ಹೇಳಿ.

ಯ: ಅಯ್ಯೋ ದೇವರೆ! ನಾನು ನಿಮ್ಮ ಒಂಟೆಯನ್ನು ನೋಡಿಯೇ ಇಲ್ಲ. ನಾನು ಹೇಗೆ ತೋರಿಸಲಿ?

ವ: ಹಾಗೆ ಹೇಳಿದರೆ ಹೇಗೆ? ಅದರ ವಿಷಯವನ್ನೆಲ್ಲ ಹೇಳಿದಿರಲ್ಲ? ನೀವೇ ಅದನ್ನು ಎಲ್ಲೋ ಕಟ್ಟಿ ಹಾಕಿದ್ದೀರಿ.

ಮಾತು ಬೆಳೆದು, ವರ್ತಕರು ಯತೀಶ್ವರನನ್ನು ರಾಜರ ಬಳಿಗೆ ಕರೆದುಕೊಂಡು ಹೋದರು. ಯತೀಶ್ವರನು ತಮ್ಮ  ಒಂಟೆಯನ್ನು ಕದ್ದು ಕಟ್ಟಿ ಹಾಕಿದ್ದಾನೆ, ಬಿಡಿಸಿ ಕೊಡಬೇಕು ಎಂದು ಪ್ರಾರ್ಥನೆ ಮಾಡಿದರು. ಅವರು ಹೇಳುವುದು ನಿಜವೆ ಎಂದು ರಾಜ ಯತೀಶ್ವರನನ್ನು ಕೇಳಿದ.

ಯ: ರಾಜ, ನಾನು ಇವರ ಒಂಟೆಯನ್ನು ನೋಡಿಯೇ ಇಲ್ಲ.

ವ: ಸ್ವಾಮಿ, ಇವರು ಆ ಒಂಟೆಗೆ ಒಂದು ಕಣ್ಣು ಕುರುಡು, ಒಂದು ಕಾಲು ಕುಂಟು, ಅದಕ್ಕೆ ಒಂದು ಕಡೆ ಜೇನುತುಪ್ಪ ಹೇರಿದೆ, ಮತ್ತೊಂದು ಕಡೆ ಗೋಧಿ ಎಂದು ಎಲ್ಲವನ್ನು ಸರಿಯಾಗಿ ಹೇಳಿದರು. ಒಂಟೆಯನ್ನು ಇವರೇ ಕಟ್ಟಿಹಾಕಿದ್ದಾರೆ.

ರಾಜ: ನೀವು ಅದರ ಗುರುತನ್ನೆಲ್ಲ ಹೇಳಿದ್ದು ನಿಜವೇ, ಯತಿಗಳೇ?

ಯ: ಹೌದು, ಆದರೆ ನಾನು ಒಂಟಿಯನ್ನು ನೋಡಲಿಲ್ಲ.

ರಾ: ಅದು ಹೇಗೆ ಸಾಧ್ಯ, ಯತಿಗಳೆ?

ಯ: ನಾನು ಬರುವಾಗ ದಾರಿಯಲ್ಲಿ ಒಂಟೆಯ ಕಾಲಿನ ಗುರುತನ್ನು ನೋಡಿದೆ. ಮರಳಿನಲ್ಲಿ ಮೂರು ಕಾಲುಗಳನ್ನು ಮಾತ್ರ ಚೆನ್ನಾಗಿ ಊರಿತ್ತು. ಒಂದು ಸ್ವಲ್ಪವೇ ಊರಿತ್ತು. ಅದರಿಂದ ಅದಕ್ಕೆ ಒಂದು ಕಾಲು ಕುಂಟು ಎಂದು ಗೊತ್ತಾಯಿತು. ದಾರಿಯಲ್ಲಿ ಎರಡು ಪಕ್ಕಗಳಲ್ಲಿಯೂ ಮರಗಳಿದ್ದವು. ಒಂದು ಪಕ್ಕದ ಮರಗಳ ಸೊಪ್ಪನ್ನು ತಿಂದಿದ್ದದ್ದು ಕಾಣಿಸಿತು, ಮತ್ತೊಂದು ಕಡೆ ಮರಗಳು ಹಾಗೆಯೇ ಇದ್ದವು. ಇದರಿಂದ ಒಂಟೆಗೆ ಒಂದು ಕಡೆಯ ಮರಗಳು ಮಾತ್ರ ಕಾಣಿಸುತ್ತಿತ್ತು. ಅದಕ್ಕೆ ಒಂದು ಕಣ್ಣು ಕುರುಡು ಎಂದುಕೊಂಡೆ. ದಾರಿಯಲ್ಲಿ ಒಂದು ಕಡೆ ಜೇನುತುಪ್ಪ ತೊಟ್ಟಿಕ್ಕಿತ್ತು. ಅದಕ್ಕೆ ನೊಣ ತುಂಬಿತ್ತು. ಮತ್ತೊಂದು ಪಕ್ಕದಲ್ಲಿ ಗೋಧಿಯ ಕಾಳು ಚೆಲ್ಲಿತ್ತು. ಆದುದರಿಂದ ಒಂದು ಕಡೆ ಜೇನುತುಪ್ಪವನ್ನು ಮತ್ತೊಂದುಕಡೆ ಗೋದಿಯನ್ನು ಹೇರಿರಬೇಕು ಎಂದು ಭಾವಿಸಿದೆ. ಆದರೆ ನಾನು ಒಂಟೆಯನ್ನು ನೋಡಿಯೇ ಇಲ್ಲ.

ಯತಿ ಎಲ್ಲ ವಿವರಗಳನ್ನು ಎಷ್ಟು ಎಚ್ಚರಿಕೆಯಿಂದ, ಸೂಕ್ಷ ವಾಗಿ ಗ್ರಹಿಸಿದ ಎಂಬುದನ್ನು ಕಂಡು ರಾಜ ಮೆಚ್ಚಿದ. ಅವರು ತೊಂದರೆ ಇಲ್ಲದೆ ಮುಂದೆ ಪ್ರಯಾಣ ಮಾಡಲು ಕಳುಹಿಸಿಕೊಟ್ಟ.

ಕಣ್ಣಿದ್ದರೆ ಸಾಲದು ಅದನ್ನು ಉಪಯೋಗಿಸಬೇಕು, ಅಲ್ಲವೆ? ನಾವು ಎಷ್ಟೊ ಬಾರಿ ನಮ್ಮ ಎದುರಿಗಿರುವುದನ್ನೆ ಗಮನಿಸುವುದಿಲ್ಲ. ಕಣ್ಣಿದ್ದೂ ಕುರುಡರು, ಅಲ್ಲವೆ!

ಇಷ್ಟೇ ಅಲ್ಲ ಯಾರ ಮೇಲಾದರೂ ಆಪಾದನೆ ಮಾಡುವಾಗ ಯೋಚಿಸಬೇಕು.

ಬುದ್ಧಿವಂತನಾಗಿರಲಿ ಬಲಶಾಲಿಯಾಗಿರಲಿ, ಐಶ್ವರ್ಯವಂತನಾಗಿರಲಿ ಜಂಬ ಪಡಬಾರದು, ವಿನಯದಿಂದ ಇರಬೇಕು. ಜಂಬಪಟ್ಟರೆ ಹಿಂದೆಯೇ ಅವಮಾನ ಕಾದಿರುತ್ತದೆ ಎಂಬುದನ್ನು ‘ಅರ್ಜುನ ಮತ್ತು ಹದ್ದು?’ ಎಂಬ ಕಥೆ ತಿಳಿಸುತ್ತದೆ.

ಮಹಾಭಾರತ ಯುದ್ಧದಲ್ಲಿ ಗೆದ್ದ ಪಾಂಡವರು ರಾಜರಾದರು. ಯುದ್ಧದಲ್ಲಿ ಗೆಲ್ಲಲು ತಾನೇ ಕಾರಣ, ತಾನು ಬಹು ದೊಡ್ಡ ಪರಾಕ್ರಮಿ ಎಂದುಕೊಂಡು ಅರ್ಜುನ ಜಂಬಪಡುತ್ತಿದ್ದ. ಅದನ್ನು ತಿಳಿದುಕೊಂಡ ಕೃಷ್ಣ, ಅವನ ಜಂಬವನ್ನು ಮುರಿಯಬೇಕೆಂದುಕೊಂಡು ಒಂದು ಉಪಾಯ ಮಾಡಿದ. ಒಂದು ದಿನ ತಿರುಗಾಡಿಕೊಂಡು ಬರಲೆಂದು ಅರ್ಜುನನ್ನು ಕರೆದುಕೊಂಡು ಒಂದು ಬೆಟ್ಟದ ಬಳಿಗೆ ಹೋದ. ಆ ಬೆಟ್ಟದ ಒಂದು ಕೋಡುಗಲ್ಲಿನ ಮೇಲೆ ಒಂದು ದೊಡ್ಡ ಹದ್ದು ಕುಳಿತಿತ್ತು. ಅದಕ್ಕೆ ಬಹಳ ವಯಸ್ಸಾಗಿತ್ತು. ಅದರ ಬಳಿಗೆ ಹೋದ ಕೃಷ್ಣ ಅದನ್ನು ಕುರಿತು, ‘‘ಏನು ಪಕ್ಷಿರಾಜ ಬಹಳ ಬಳಲಿರುವ ಹಾಗೆ ಕಾಣುತ್ತಿ?’’ ಎಂದು ಕೇಳಿದ ಅದಕ್ಕೆ ಆ ಹದ್ದು ‘‘ಏನೆಂದು ಹೇಳಲಪ್ಪ! ನನಗೆ ಬಹಳ ಹಸಿವು. ನಾನು ರಾಮಾಯಣ ಕಾಲದವನು ರಾಮಾಯಣದ ಯುದ್ಧದಲ್ಲಿ ನನಗೆ ಹೊಟ್ಟೆತುಂಬ ಆಹಾರ ಸಿಕ್ಕಿತ್ತು. ಅಂಥ ಆಹಾರ ನನಗೆ ಮತ್ತೆ ಸಿಕ್ಕಲೇ ಇಲ್ಲ. ಮಹಾಭಾರತ ಯುದ್ಧವಾದರೂ ನನಗೆ ಒಳ್ಳೆಯ ಆಹಾರ ಸಿಕ್ಕಬಹುದು. ಆ ಆಸೆಯಿಂದ ಕಾದಿದ್ದೇನೆ. ಮಹಾಭಾರತ ಯುದ್ಧ ಯಾವಾಗ ಆಗುವುದಪ್ಪ?’’ ಎಂದು ಕೇಳಿತು. ಅದಕ್ಕೆ ಕೃಷ್ಣ ‘‘ಮಹಾಭಾರತ ಯುದ್ಧ ಮುಗಿದ ಹೋಯಿತಲ್ಲ!’’ ಎಂದ. ಅದಕ್ಕೆ ಹದ್ದು ‘‘ಹಾಃ! ಮಹಾಭಾರತ ಯುದ್ಧ ಮುಗಿದು ಹೋಯಿತೆ! ನಾನು ಇಲ್ಲೇ ಇದ್ದೇನೆ. ನನಗೆ ಒಂದು ತೊಟ್ಟು ರಕ್ತವೂ ಸಿಕ್ಕಲಿಲ್ಲ! ಅದೆಂಥ ಯುದ್ಧ! ಅದೊಂದು ಮಕ್ಕಳ ಆಟ ಆಗಿರಬೇಕು, ಅಷ್ಟೆ!’’ ಎಂದಿತು. ಅದನ್ನು ಕೇಳಿ ಅರ್ಜುನನಿಗೆ ನಾಚಿಕೆಯಾಯಿತು. ಅಂದಿನಿಂದ ತನ್ನ ಜಂಬವನ್ನು ಬಿಟ್ಟುಬಿಟ್ಟ.

ಇಂಥ ಅನೇಕ ಕಥೆಗಳಿರುವ ‘ನೀತಿ ಚಿಂತಾಮಣಿ’ ಒಂದು ರತ್ನಭಂಡಾರದಂತಿದೆ. ಪ್ರತಿ ಕಥೆಯೂ ಒಂದು ಕನ್ನಡ ಪದ್ಯದಿಂದಲೋ ಸಂಸ್ಕೃತ ಶ್ಲೋಕದಿಂದಲೋ ಪ್ರಾರಂಭವಾಗುತ್ತದೆ. ಒಂದು ಕಥೆ, ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?’ ಎಂಬ ಗಾದೆಯಿಂದ ಪ್ರಾರಂಭ. ಮತ್ತೊಂದು ಈ ಸರ್ವಜ್ಞ ವಚನದಿಂದ ಪ್ರಾರಂಭವಾಗುತ್ತದೆ.

ಬಳ್ಳಿದರ ಒಡನಿರ್ದು ಕಳ್ಳನೊಳ್ಳಿದನಕ್ಕು

ಒಳ್ಳದ ಕಳ್ಳರೊಡನಾಡೆ ಅವ ಶುದ್ಧ

ಕಳ್ಳನೇ ಅಕ್ಕು ಸರ್ವಜ್ಞ!

ಒಂದು ಕಥೆಯ ಪ್ರಾರಂಭದಲ್ಲಿ ಮಹಾಭಾರತದಿಂದ ಈ ಶ್ಲೋಕವನ್ನು ಕೊಟ್ಟಿದ್ದಾರೆ:

ಅನಾಯಾಸೇನ ಶಸ್ತ್ರೇಣ ಮೃದುನಾ ಹೃದಯಚ್ಛಿದಾ

ಜಿಹ್ವಾಮುದ್ಧರ ಸರ‍್ವೇಷಾಂ ಪರಿಮೃಜ್ಜಾನುಮೃಜ್ಜತ

(ಮನಸ್ಸಿಗೆ ಅಂಟುವ ಮತ್ತು ಮೃದುವಾದ ಒಳ್ಳೆಯ ಮಾತುಗಳಿಂದ ಇತರರ ನಾಲಿಗೆಯನ್ನು ನಿಲ್ಲಿಸು, ನಿನ್ನ ಕ್ಷಮಾಗುಣದಿಂದ ಇತರರ ದೋಷಾರೋಪಣೆಯನ್ನು ಹೋಗಲಾಡಿಸು, ನಿನ್ನ ಒಳ್ಳೆಯ ನಡತೆಯಿಂದ ಇತರರಿಗೆ ನಿನ್ನಲ್ಲಿ ಪ್ರೀತಿಯುಂಟಾಗುವಂತೆ ಮಾಡು.)

ಮತ್ತೊಂದು ಪಂಚತಂತ್ರದಿಂದ ತೆಗೆದುಕೊಂಡ ಶ್ಲೋಕ

ಆಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ

ಉದಾರಚರಿತಾನಾಂ ತು ವಸುದೈವ ಕುಟುಂಬಕ ಂ

(ಇವನು ತನ್ನವನು ಅಥವಾ ಬೇರೆಯವರು ಎನ್ನುವ ಯೋಚನೆ ಅಲ್ಪ ಮನಸ್ಸುಳ್ಳವರಿಗೆ ಸಹಜ. ಉದಾರವಾದ ಚರಿತ್ರೆಯುಳ್ಳವರಿಗಾದರೋ ಪ್ರಪಂಚವೆಲ್ಲ ಅವರ ಸಂಸಾರವೇ.)

ಹೀಗೆ ಪುಟ್ಟಣ್ಣನವರು ಎಳೆಯ ಓದುಗರಿಗೆ ಒಳ್ಳೆಯ ಗಾದೆಗಳು, ಕನ್ನಡದಲ್ಲಿನ ಮತ್ತು ಸಂಸ್ಕೃತದಲ್ಲಿನ ಅಣಿ ಮುತ್ತುಗಳು ಇವನ್ನೆಲ್ಲ ತಂದು ಕೊಟ್ಟರು.

ಈ ಎಲ್ಲ ಕಥೆಗಳು ಅವರೇ ಸೃಷ್ಟಿಸಿದ್ದಲ್ಲ. ನಮ್ಮ ಪುರಾಣಗಳಿಂದ, ಮಹಾಕಾವ್ಯಗಳಿಂದ, ಬೇರೆ ದೇಶದ ಗ್ರಂಥಗಳಿಂದ ಹಲವನ್ನು ಆರಿಸಿದರು.

ಸುಮತಿ ಮದನಕುಮಾರರ ಚರಿತೆ

ಥಾಮಸ್ ಡೇ ಎಂಬಾತ ೧೮ನೆಯ ಶತಮಾನದಲ್ಲಿದ್ದ ಪ್ರಸಿದ್ಧ ಇಂಗ್ಲಿಷ್ ಶಿಕ್ಷಣ ತಜ್ಞ. ಆತ ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನ, ಇತಿಹಾಸ ಈ ಮುಂತಾದ ವಿಷಯಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಸ್ವಾರಸ್ಯವಾಗಿ ಬೋಧಿಸಬಹುದು ಎಂದು ನಂಬಿದ್ದ. ತನ್ನ ಆ ನಂಬಿಕೆಗೆ ಅನುಗುಣವಾಗಿ ‘ಸ್ಯಾಂಡ್‌ಫಡ್ ಮತ್ತು ಮರ್ಟನ್’ ಎಂಬ ಪುಸ್ತಕವನ್ನು ಬರೆದ. ಅದು ಬಹು ಬೇಗ ಪ್ರಸಿದ್ಧವಾಯಿತು. ಆ ಪುಸ್ತಕದಿಂದ ಪ್ರಭಾವಿತರಾದ ಪುಟ್ಟಣ್ಣನವರು, ಅದನ್ನು ಮಾದರಿಯಾಗಿಟ್ಟುಕೊಂಡು ಸುಮತಿ ಮದನಕುಮಾರರ ಚರಿತ್ರೆ ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದರು. ಇದೊಂದು ಶೈಕ್ಷಣಿಕ ಗ್ರಂಥ.

ಮದನಕುಮಾರ ಎಂಬ ಒಬ್ಬ ರಾಜಕುಮಾರ ಇದ್ದ. ಆತ ಸೋಮಾರಿ, ಅವಿದ್ಯಾವಂತ. ಅಕ್ಷರ ಕಲಿಯಲು ಅವನಿಗೆ ಆಸಕ್ತಿಯೇ ಇರಲಿಲ್ಲ. ಅಂಥವನನ್ನು ಸೂರ್ಯಭಟ್ಟ ಎಂಬ ವಿದ್ವಾಂಸ ಉಪಾಯದಿಂದ ವಿದ್ಯಾವಂತನನ್ನಾಗಿ ಮಾಡಿದ್ದು ಈ ಪುಸ್ತಕದ ವಿಷಯ.

ಸೂರ್ಯಭಟ್ಟನಿಗೆ ಸುಮತಿ ಎಂಬ ಒಬ್ಬ ಮಗ ಇದ್ದ. ಅವನ ಜತೆಗೆ ಮದನಕುಮಾರನನ್ನು ಕುಳ್ಳಿರಿಸಿಕೊಂಡು, ಪ್ರತಿದಿನವೂ ಕೆಲವು ನೀತಿಬೋಧಕ ಕಥೆಗಳನ್ನು ಹೇಳುತ್ತಿದ್ದ. ಆ ಕಥೆಗಳ ಪ್ರಭಾವದಿಂದ ಮದನಕುಮಾರನಿಗೆ ಓದು ಬರಹಗಳಲ್ಲಿ ಆಸಕ್ತಿ ಬಂತು. ಕ್ರಮೇಣ ವಿದ್ಯಾವಂತನೂ ಆಗಿ, ಮುಂದೆ ರಾಜನಾದ.

ಮಕ್ಕಳ ಮನಸ್ಸು ತುಂಬ ಸೂಕ್ಷ ವಾದುದು, ಮೃದುವಾದುದು. ಅವರ ಮನಸ್ಸನ್ನು, ನಡೆ ನುಡಿಗಳನ್ನು ಉಪಾಯದಿಂದ ತಿದ್ದಬೇಕು. ಮಕ್ಕಳ ಶಿಕ್ಷಣದಲ್ಲಿ ಬಲಾತ್ಕಾರ, ಹಿಂಸೆ ಕೂಡದು ಎಂಬುದು ಈ ಪುಸ್ತಕದ ತತ್ವ.

ಚರಿತ್ರೆಯ ಅಧ್ಯಯನ

ಪುಟ್ಟಣ್ಣನವರಿಗೆ ನಮ್ಮ ನಾಡಿನ ಚರಿತ್ರೆಯ ಬಗ್ಗೆ ವಿಶೇಷವಾದ ಆಸಕ್ತಿ ಇತ್ತು. ಅವರು ಅಮಲ್ದಾರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸಮಾಡುತ್ತಿದ್ದಾಗ ಆಯಾಸ್ಥಳಗಳ ಚಾರಿತ್ರಿಕ ಸಂಗತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದರು. ಅವುಗಳನ್ನು ಅಧ್ಯಯನ ಮಾಡಿ ಅನೇಕ ಚಾರಿತ್ರಿಕ ಅಂಶಗಳನ್ನು ಬೆಳಕಿಗೆ ತಂದರು.

ಬಹಳ ವರ್ಷಗಳ ಹಿಂದೆ ನಮ್ಮ ನಾಡಿನ ನಾನಾ ಭಾಗಗಳನ್ನು ಪಾಳೆಯಗಾರರು ಆಳುತ್ತಿದ್ದರು. ಅಂಥವರಲ್ಲಿ ಚಿತ್ರದುರ್ಗ, ಹಾಗಲವಾಡಿ, ಗುಮ್ಮನಾಯಕನಹಳ್ಳಿ, ಇಕ್ಕೇರಿ ಈ ಭಾಗಗಳನ್ನು ಆಳಿದ ಪಾಳೆಯಗಾರ ಆಡಳಿತ, ಅವರು ಮಾಡಿದ ಜನೋಪಕಾರಿ ಕಾರ್ಯಗಳನ್ನು ಕುರಿತು ಪುಟ್ಟಣ್ಣನವರು ಮೈಸೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಐದು ಉಪನ್ಯಾಸಗಳನ್ನು ಮಾಡಿದರು. ಆ ಉಪನ್ಯಾಸಗಳನ್ನು ‘ಪಾಳೆಯಗಾರರು’ ಎಂಬ ಹೆಸರಿನಿಂದ ಪುಸ್ತಕ ರೂಪದಲ್ಲೂ ಪ್ರಕಟಿಸಿದರು. ನಮ್ಮ ನಾಡಿನ ಚರಿತ್ರೆಯ ಒಂದು ಘಟ್ಟವನ್ನು ತಿಳಿದುಕೊಳ್ಳಲು ಈ ಪುಸ್ತಕ ನೆರವಾಗುತ್ತದೆ.

ಪುಟ್ಟಣ್ಣನವರಿಗೆ ಎಂ.ಬಿ. ಶ್ರೀನಿವಾಸಯ್ಯಂಗಾರ‍್ಯ ಎಂಬ ಆಪ್ತ ಸ್ನೇಹಿತರಿದ್ದರು. ಅವರು ವಿದ್ವಾಂಸರು, ಲೇಖಕರೂ ಆಗಿದ್ದರು. ಅವರೂ ಪುಟ್ಟಣ್ಣನವರೂ ಜೊತೆಯಾಗಿ ಹಿಂದೂ ಚರಿತ್ರ ದರ್ಪಣ (ಎರಡೂ ಭಾಗಗಳಲ್ಲಿ) ಮತ್ತು ಹಿಂದೂ ದೇಶದ ಚರಿತ್ರೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹಿಂದೂ ದೇಶದ ಅಥವಾ ಭಾರತ ದೇಶದ ಸಂಕ್ಷಿಪ್ತ ಚರಿತ್ರೆಯನ್ನು ಈ ಪುಸ್ತಕಗಳು ತಿಳಿಸಿಕೊಡುತ್ತವೆ. ಈ ಪುಸ್ತಕಗಳು ಅನೇಕ ವರ್ಷಗಳ ಕಾಲ, ಆಗಿನ ಮೈಸೂರು ಶಿಕ್ಷಣ ಇಲಾಖೆಯ ನಾನಾ ತರಗತಿಗಳಿಗೆ ಪಠ್ಯಪುಸ್ತಕಗಳಾಗಿದ್ದವು.

ಭಾಷಾಂತರ

ಪುಟ್ಟಣನವರಿಗೆ ಕನ್ನಡ ಭಾಷೆಯ ಜತೆಗೆ ಇಂಗ್ಲಿಷ್ ಭಾಷೆಯಲ್ಲೂ ತುಂಬ ಪಾಂಡಿತ್ಯವಿತ್ತು. ಇಂಗ್ಲಿಷ್ ಭಾಷೆಯ ಅನೇಕ ಪ್ರಸಿದ್ಧ ಪುಸ್ತಕಗಳನ್ನು ಓದಿದ್ದ ಅವರು, ಕೆಲವು ಪುಸ್ತಕಗಳನ್ನು ಕನ್ನಡಕ್ಕೂ ಭಾಷಾಂತರಿಸಿದ್ದಾರೆ. ಷೇಕ್ಸ್‌ಪಿಯರ್ ನ ‘ಸಿಂಬೆಲೈನ್’  ಮತ್ತು ‘ಕಿಂಗ್ ಲಿಯರ್’ ಎಂಬ ಎರಡು ನಾಟಕಗಳನ್ನು ಆಧರಿಸಿಕೊಂಡು ‘ಜಯಸಿಂಹರಾಜ ಚರಿತ್ರೆ’ಮತ್ತು ‘ಹೇಮಚಂದ್ರರಾಜ ವಿಲಾಸ’ ಎಂಬ ಎರಡು ನಾಟಕಗಳನ್ನು ಬರೆದಿದ್ದಾರೆ. ಇಂಗ್ಲಿಷ್ ಸಾಹಿತ್ಯದ ಹೆಸರಾಂತ ಪುಸ್ತಕಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ಲೇಖಕರಲ್ಲಿ ಪುಟ್ಟಣ್ಣನವರೂ ಒಬ್ಬರು.

ಪುಟ್ಟಣ್ಣನವರು ಕನ್ನಡದಲ್ಲಿ ಪತ್ರಿಕೋದ್ಯಮದ ಬೆಳವಣಿಗೆಗೂ ಶ್ರಮಿಸಿದರು. ಅವರೂ ಎಂ.ಬಿ.ಶ್ರೀನಿವಾಸಯ್ಯಂಗಾರ‍್ಯರೂ ಸೇರಿ ೧೮೮೨ರಲ್ಲಿ ‘‘ಹಿತಬೋಧಿನಿ’ ಎಂಬ ಒಂದು ಮಾಸ ಪತ್ರಿಕೆಯನ್ನು ಆರಂಭಿಸಿ ಕೆಲವು ವರ್ಷಗಳ ಕಾಲ ನಡೆಸಿದುರ.

ಸಾರ್ವಜನಿಕ ಸೇವೆ

ಪುಟ್ಟಣ್ಣನವರು ಸಲ್ಲಿಸಿದ ಸಾರ್ವಜನಿಕ ಸೇವೆಯೂ ಗಣ್ಯವಾದುದು. ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರಲ್ಲಿ ಪುಟ್ಟಣ್ಣನವರು ಒಬ್ಬರು. ಅವರು ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ (೧೯೧೮-೧೯೧೯) ಕೆಲಸಮಾಡಿ, ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸಿದರು. ಆಗಿನ ಮೈಸೂರು ಸರ್ಕಾರದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದ ಪುಟ್ಟಣ್ಣನವರು,ಮದರಾಸು ಸರ್ಕಾರ ನಡೆಸುತ್ತಿದ್ದ ವಿವಿಧ ಕನ್ನಡ ಪರೀಕ್ಷೆಗಳಿಗೆ ಪರೀಕ್ಷಕರೂ ಆಗಿದ್ದರು. ಅವರು ವಾಸವಾಗಿದ್ದ ಬೆಂಗಳೂರು ಬಸವನಗುಡಿಯ ಬಳಕೆದಾರರ ಸಹಕಾರ ಸಂಘ, ತೆರಿಗೆದಾರರ ಸಂಘ ಮುಂತಾದ ಅನೇಕ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲೂ ಪಾಲ್ಗೊಂಡಿದ್ದರು. ಅವರ ಬಹುಮುಖ ಸೇವೆಯ ನೆನಪಿಗಾಗಿ, ಬೆಂಗಳೂರು ಬಸವನಗುಡಿಯಲ್ಲಿ ಅವರು ವಾಸಿಸುತ್ತಿದ್ದ ರಸ್ತೆಗೆ ‘ಪುಟ್ಟಣ್ಣ ರಸ್ತೆ’ ಎಂದು ಹೆಸರಿಡಲಾಗಿದೆ.

ವ್ಯಕ್ತಿತ್ವ

ಪುಟ್ಟಣ್ಣನವರು ವ್ಯಕ್ತಿಯಾಗಿ ತುಂಬಾ ಸರಳವಾಗಿದ್ದರು. ಹಿರಿಯರು, ಕಿರಿಯರು ಎನ್ನದೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಆಡಂಬರದವೆಂದರೆ ಅವರಿಗೆ ಆಗುತ್ತಿರಲಿಲ್ಲ. ಅವರು ಯಾವ ಕೆಲಸವನ್ನು ಮಾಡಿದರೂ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು. ಪ್ರಾಮಾಣಿಕತೆ, ದಿಟ್ಟತನ ಪುಟ್ಟಣ್ಣನವರ ಜೀವನದ ಆದರ್ಶವೇ ಆಗಿತ್ತು. ಅವರ ದಿಟ್ಟತನಕ್ಕೆ ಒಂದು ನಿದರ್ಶನವಿದೆ. ಅವರು ಯಾವ ಕೆಲಸವನ್ನು ಮಾಡಿದರೂ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು. ಪ್ರಾಮಾಣಿಕತೆ, ದಿಟ್ಟತನ ಪುಟ್ಟಣ್ಣನವರ ಜೀವನದ ಆದರ್ಶವೇ ಆಗಿತ್ತು. ಅವರ ದಿಟ್ಟತನಕ್ಕೆ ಒಂದು ನಿದರ್ಶನವಿದೆ. ಅವರು ಚಾಮರಾಜನಗರದಲ್ಲಿ ಅಮಲ್ದಾರರಾಗಿದ್ದಾಗ, ಜಿಲ್ಲಾಮಟ್ಟದ ಒಬ್ಬ ಅಧಿಕಾರಿ ಸರ್ಕಾರಿ ಕೆಲಸದ ಮೇಲೆ ಅಲ್ಲಿಂದ ಹೋಗಿ ಬಿಡಾರಮಾಡಿದ. ಆತನಿಗೆ ಎಲ್ಲಿ ಹೋದರೂ ಕೆಳಗಿನ ಅಧಿಕಾರಿಗಳ ಖರ್ಚಿನಲ್ಲಿ ಸಾಮಾನುಗಳನ್ನು ತರಿಸಿಕೊಳ್ಳುವ ಅಭ್ಯಾಸ. ಕೆಳಗಿನ ಅಧಿಕಾರಿಗಳು ಹೆದರಿ ವಿಧೇಯರಾಗಿರುತ್ತಿದ್ದರು. ಆತ ತನಗೆ ಬೇಕಾಗಿದ್ದ ಕೆಲವು ಸಾಮಾನುಗಳ ಒಂದು ಪಟ್ಟಿಯನ್ನು ಪುಟ್ಟಣ್ಣನವರಿಗೆ ಕೊಟ್ಟು, ಅವುಗಳನ್ನು ತರಿಸಿಕೊಡುವಂತೆ ಹೇಳಿದ. ಆ ಸಾಮಾನುಗಳನ್ನು ತರಿಸಿಕೊಟ್ಟ ಪುಟ್ಟಣ್ಣನವರು, ಅವಕ್ಕೆ ತಗುಲಿದ ಖರ್ಚಿನ ಬಿಲ್ಲನ್ನು ಅಧಿಕಾರಿಗೆ ಕೊಟ್ಟರು. ಬಿಲ್ಲನ್ನು ಕಂಡು ಅಧಿಕಾರಿ ಕೇಳಿದನಂತೆ: ‘‘ಈ ಬಿಲ್ಲಿನ ಹಣ ನಾನೇ ಕೊಡಬೇಕೆ?’’ ಅದಕ್ಕೆ ಪುಟ್ಟಣ್ಣನವರು ಹೌದು! ನಿಮಗೆ ಸರ್ಕಾರ ಸಂಬಳವನ್ನು, ಭತ್ಯವನ್ನೂ ಕೊಡುತ್ತದಲ್ಲ?’’ಎಂದು ಹೇಳಿ ಆ ಬಿಲ್ಲಿನ ಹಣವನ್ನು ಅಧಿಕಾರಿಯಿಂದ ವಸೂಲು ಮಾಡಿದರಂತೆ! ಪುಟ್ಟಣ್ಣನವರದು ಅಂಥ ವ್ಯಕ್ತಿತ್ವ. ಅವರು ಉಪಾಧ್ಯಾಯರಾಗಿದ್ದಾಗ ಎಚ್.ಜೆ.ಭಾಭಾ ಎಂಬುವರು ದೊಡ್ಡ ಅಧಿಕಾರಿ. ಪುಟ್ಟಣ್ಣನವರಿಗೂ ಅವರಿಗೂ ಭಿನ್ನಾಭಿಪ್ರಾಯ ಬಂತು. ಪುಟ್ಟಣ್ಣ ರಾಜೀನಾಮೆ ಕೊಟ್ಟರು. ಆದರೆ ಭಾಭಾ ಅವರಿಗೆ ಅವರಲ್ಲಿ ವಿಶ್ವಾಸ ಉಳಿದುಬಂತು. ಈ ಪ್ರಸಂಗವಾಗಿ ಎಷ್ಟೋ ವರ್ಷಗಳ ನಂತರವೂ ಅವರು ಪುಟ್ಟಣ್ಣನವರಿಗೆ ಹೇಳಿಕಳುಹಿಸಿ ಮಾತನಾಡುತ್ತಿದ್ದರು. ಮೋಸ, ಅನ್ಯಾಯಗಳನ್ನು ಅವರು ಸಹಿಸುತ್ತಿರಲಿಲ್ಲ; ಆಸೆ ಆಮಿಷಗಳಿಗೂ ಒಳಗಾಗುತ್ತಿರಲಿಲ್ಲ. ಎಲ್ಲದರಲ್ಲೂ ಕಟ್ಟುನಿಟ್ಟಾದ ಪ್ರಾಮಾಣಿಕತೆ, ದಕ್ಷತೆ. ಆದ್ದರಿಂದಲೇ ಅವರು ದಕ್ಷ ಅಧಿಕಾರಿ ಎಂದು ಹೆಸರಾಗಿದ್ದರು. ಅವರು ಅಮಲ್ದಾರರಾಗಿದ್ದಾಗ ಅನೇಕ ಹಳ್ಳಿಗಳು ಮತ್ತು ಊರುಗಳಿಗೆ ಹೋಗಬೇಕಾಗುತ್ತಿತ್ತು. ಅಲ್ಲಿ ಜನ ವಿಶ್ವಾಸದಿಂದ ಅವರ ಊಟತಿಂಡಿಗಳಿಗಾಗಿ ಅಕ್ಕಿ, ಬೇಳೆ, ಹಾಲು, ಮೊಸರು, ತರಕಾರಿ ಎಲ್ಲ ತಂದು ಕೊಡುತ್ತಿದ್ದರು. ಪುಟ್ಟಣ್ಣನವರು ಯಾವುದನ್ನೂ ಬಿಟ್ಟಿಯಾಗಿ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಪ್ರತಿಯೊಂದಕ್ಕೂ ಹಣ ಕೊಟ್ಟು ಬಿಡುವರು. ಅನೇಕ ಬಾರಿ ಹಳ್ಳಿಯವರಿಗೆ ಅಸಮಾಧಾನ, ‘ಅಮಲ್ದಾರರು ಒಂದು ದಿನ, ಎರಡು ದಿನ ನಮ್ಮ ಗ್ರಾಮದಲ್ಲಿದ್ದರೆ ನಾವು ಹಣ ತೆಗೆದುಕೊಳ್ಳಬೇಕೆ?’’ ಎಂದು. ಆದರೆ ಪುಟ್ಟಣ್ಣನವರು ಅವರ ಮಾತನ್ನು ಕೇಳರು. ಒಂದು ಹಳ್ಳಿಯವರಿಗೆ ತುಂಬಾ ಅಸಮಾಧಾನವಾಯಿತು. ಪುಟ್ಟಣ್ಣನವರು ಹಳ್ಳಿಗೆ ಹೋದಾಗ ‘‘ನೀವು ಹಣ ಕೊಡುವುದಾದರೆ ನಾವು ಪದಾರ್ಥಗಳನ್ನು ಕೊಡುವುದಿಲ್ಲ’’ ಎಂದರು. ‘‘ನೀವು ಹಣ ತೆಗೆದುಕೊಳ್ಳದಿದ್ದರೆ ನಾನು ಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲ’’ ಪುಟ್ಟಣ್ಣ ಎಂದರು. ಹೀಗಾಗಿ, ಅವರು ಇಡೀದಿನ ಉಪವಾಸ ಮಾಡಿ ಸಂಜೆ ಇನ್ನೊಂದು ಹಳ್ಳಿಗೆ ಹೋದರಂತೆ. ಕೆಲವು ವಿಷಯಗಳಲ್ಲಿ ಅವರು ಕಟ್ಟುನಿಟ್ಟಾದರೂ ಅವರದು ವಿಶ್ವಾಸದ ಸ್ವಭಾವ, ಮರುಕದ ಸ್ವಭಾವ. ಜಟಕಾಗಾಡಿಯಲ್ಲಿ ಹೋಗುತ್ತಿರುವಾಗ ಗಾಡಿಯವನು ಕುದುರೆಯನ್ನು ಹೊಡೆದರೆ ಅವರಿಗೆ ಮನಸ್ಸು ನೋಯುತ್ತಿತ್ತು. ಗಾಡಿ ನಿಲ್ಲಿಸಿ, ಅವನಿಗೆ ಪೂರ್ತಿ ಬಾಡಿಗೆ ಕೊಟ್ಟು, ತಾವು ಉಳಿದ ದಾರಿಯನ್ನು ನಡೆದುಕೊಂಡೇ ಹೋಗುವರು. ಅವರು ಮಾಡಿದ ಕನ್ನಡದ ನಾನಾ ಬಗೆಯ ಕೆಲಸಗಳಿಂದ ‘ಪ್ರಾಮಾಣಿಕ ಕನ್ನಡ ಕಾರ್ಯಕರ್ತ’ ರೆಂದು ಪ್ರಸಿದ್ಧರಾಗಿದ್ದರು. ಅವರ ಜೀವನದ ಕೊನೆಯವರೆಗೂ ಕನ್ನಡ ಅವರ ಕಣ್ಬೆಳಕಾಗಿತ್ತು.

ಎಂ.ಎಸ್.ಪುಟ್ಟಣ್ಣನವರು ಇಂದು ನಮ್ಮ ಕಣ್ಮುಂದಿಲ್ಲ. ಆದರೇನು? ಅವರು ಬರೆದಿರುವ ಪುಸ್ತಕಗಳು ಅವರ ಹೆಸರನ್ನು ಅಮರಗೊಳಿಸಿವೆ.