ಎಡೆದೊರೆ ನಾಡು ಎರಡುಸಾವಿರ ಹಳ್ಳಿಗಳ ಒಂದು ಆಡಳಿತದ ವಿಭಾಗ. ಕನ್ನಡ ಶಾಸನಗಳಲ್ಲಿ ಅದು ಎಡದೊಱಿಯಿಚ್ಚಾಸಿರ ‘ಎಡೆದೊಱಿ ಇಚ್ಚಾಸಿರ’ ಮತ್ತು ‘ಎಡೆದೊಱೆ ೨೦೦೦’ ಎಂಬ ರೂಪಗಳಲ್ಲಿ ಕಾಣಿಸಿಕೊಂಡಿದೆ. ತಮಿಳು ಶಾಸನಗಳು ಇದನ್ನು ‘ಇಡೈತುರೈ ನಾಡು’ ಎಂದು ಕರೆದಿವೆ.

ಎಡೆದೊರೆ ನಾಡಿನ ಅತ್ಯಂತ ಪ್ರಾಚೀನ ಉಲ್ಲೇಖ ಕ್ರಿ. ಶ.  ೮೯೧-೯೨ರ ಭೋಗವತಿ ಶಾಸನವಾಗಿದೆ

[1]. ಈ ವಿಭಾಗವು ಸ್ಥೂಲವಾಗಿ ಇಂದಿನ ರಾಯಚೂರು ಕೊಪ್ಪಳ ಶಹಪುರ ಮತ್ತು ಸುರಪುರ ತಾಲೂಕಿನ ವ್ಯಾಪ್ತಿಯನ್ನು ಹೊಂದಿತ್ತು ಮುಸ್ಲಿಂ ಅರಸರ ಆಳ್ವಕೆಯಲ್ಲಿ ಅದನ್ನು ‘ದೋಆಬ್’ ಎಂದು ಕರೆಯಲಾಯಿತು. ಎಡೆದೊರೆ ನಾಡಿನ ಗಡಿಯನ್ನು ಡಾ. ಜೆ. ಎಫ್. ಫ್ಲೀಟರು ಉತ್ತರಕ್ಕೆ ಕೃಷ್ಣಾನದಿ, ದಕ್ಷಿಣಕ್ಕೆ ತುಂಗಭದ್ರಾ ನದಿಗಳ ನಡುವಿನ ಪ್ರದೇಶವೆಂದು ಸೂಚಿಸಿದರು.[2] ಆದರೆ ಮುಂದಿನ ವಿದ್ವಾಂಸರು ಫ್ಲೀಟರು ಹೇಳಿದ ಈ ನಾಡಿನ ಮೇರೆಯನ್ನೆ ಆ ಪದದ ನಿಷ್ಪತ್ತಿ ಎಂದು ತಪ್ಪಾಗಿ ಅರ್ಥ್ಯೆಸಿದರು.

ಎಡೆದೊರೆ ಪದದ ನಿಷ್ಪತ್ತಿ :

ಎಡೆದೊರೆ ಹೆಸರಿನ ಇನ್ನು ಕೆಲವು ವಿಭಾಗಗಳು ಪ್ರಾಚಿನ ಕರ್ನಾಟಕದಲ್ಲಿ ಆಡಳಿತ ವಿಭಾಗಗಳಾಗಿದ್ದುದು ಶಾಸನಗಳಿಂದ ತಿಳಿಯುತ್ತದೆ. ಅವುಗಳು ಎರಡು ನದಿಗಳ ಮಧ್ಯದಲ್ಲಿದ್ದುದು ಆಕಸ್ಮಿಕವೆ ಸರಿ. ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಎಡೆದೊರೆ-೧೦೦೦ ವಿಭಾಗವು ಕಾವೇರಿ ಮತ್ತು ಕಪಿಲಾ ನದಿಗಳ ಮಧ್ಯದಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಬರುವ ಎಡೆದೊರೆ ೭೦ ಉಪವಿಭಾಗವು ತುಂಗ ಮತ್ತು ಭದ್ರಾನದಿಗಳ ಮಧ್ಯದಲ್ಲಿವೆ. ಆದರೆ ಎಡೆದೊರೆ ಪದದ ಮೂಲಕ್ಕೆ ಅವು ಕಾರಣರಲ್ಲ. ಏಕೆಂದರೆ ಅವುಗಳಲ್ಲಿ ಒಂದು ನದಿಯು ಎರಡೂ ದಂಡೆಯ ವ್ಯಾಪ್ತಿಯನ್ನು ಆ ವಿಭಾಗಗಳು ಹೊಂದಿವೆ. ಆದ್ದರಿಂದ ಎಡೆದೊರೆ ಪದವನ್ನು  ಎರಡು + ತೊರೆ ಅಥವಾ ಪಿರಿದು + ತೊರೆ > ಪೆರ್ದೊರೆ > ಎರ್ದೊರೆ > ಎಡೆದೊರೆ ಎಂದು  ವಿಗ್ರಹಿಸುವುದು ಸರಿಯಲ್ಲ.[3] ಏಕೆಂದರೆ ಎರಡು + ತೊರೆ ಎಂಬುದು ಇರ್ದೊರೆಯಾಗಿ ಮತ್ತು ಪೆರ್ದೊರೆ ಎಂಬುದು ಹೆದ್ದೊರೆಯಾಗಿ ಬದಲಾವಣೆ ಹೊಂದುತ್ತದೆ. ಆದ್ದರಿಂದ  ಈ ಪದವನ್ನು ಎಡೆಯ + ತೊರೆ > ಎಡೆದೊರೆ ಎಂದು ವಿಗ್ರಹಿಸುವುದೇ ಸರಿ. ಇಲ್ಲಿ ‘ತೊರೆ’ ಪದದ ಅರ್ಥ ಸ್ಪಷ್ಟವಿದೆ. ಆದರೆ ಎಡೆ ಅಥವಾ ಎಡೆಯ ಎಂಬುದಕ್ಕೆ ಸ್ಥಳ, ದಂಡೆ, ಹತ್ತಿರ, ಕುರುಬ[4], ಮಧ್ಯ ಮೊದಲಾದ ಅರ್ಥಗಳಿವೆ. ಇತರ ದ್ರಾವಿಡ ಭಾಷೆಗಳಲ್ಲಿ ಎಡೆ ಪದವು ಇಡೈ (ತಮಿಳು) ಇಡೆ (ತುಳು, ಮಲೆಯಾಳ), ಎಡೆ-ಎಡ (ಕನ್ನಡ, ತೆಲುಗು) ಎಂದು ಬಳಕೆಯಾಗಿದೆ. ಇವುಗಳು ಮೇಲಿನ ಅರ್ಥಗಳಲ್ಲಿ ಬಳಕೆಯಾಗಿವೆ. ಆದ್ದರಿಂದ ಎಡೆಯ ಪದಕ್ಕೆ ದಂಡೆ, ಹತ್ತಿರ, ಸ್ಥಾನ ಎಂದು ಅರ್ಥ ಹೇಳುವುದೇ ಸರಿ ಎನಿಸುತ್ತದೆ.

ಎಡೆದೊರೆನಾಡಿನ ವ್ಯಾಪ್ತಿ :

ತುಂಗಭದ್ರಾ ನದಿಯ ದಂಡೆಯ ಮೇಲಿರುವ ಸಿಂಧನೂರು ತಾಲೂಕಿನ ಮುಕ್ಕುಂದೆಯು ಎಡೆದೊರೆ ನಾಡಿನಲ್ಲಿ  ಸಮಾವೇಶಗೊಂಡಿತ್ತು. ಏವೂರು ಶಾಸನವು “ಪೊಡವಿಗದೆ ತಾನೆ ಮುಖಮೆನಿಪೆಡೆದೊಱೆ ನಾಡಿಂಗೆ ತಿಳಕದನ್ದದಿನೊಪ್ಪಂ ಬಡೆದಿರ್ಕು ಮೆಸೆವ ಕಿೞುದೊಱೆದಡಿಯೊಳ್ ಮುಕ್ಕುನ್ದೆಯೆಂಬ ವಿಪ್ರಗ್ರಾಮಂ” ಎಂದು ಹೇಳಿದೆ[5] ಕೊಪ್ಪಳ ತಾಲೂಕಿನ ಮಾದಿನೂರು ಶಾಸನವು “ಎಡೆದೊಱೆಯಿರ್ಚ್ಛಾಸಿರದ ಬಳಿಯ [ಕೆಳವಾಡಿ ಮುನೂೞಕ್ಕಂ ತಿಳಕದ] ಪ್ಪಂತಿರಿ ಪ್ಪಗ್ಗದಗ್ರಹಾರಂ ಮೊದೆಯನೂರು” ಎಂದು ಹೇಳಿದೆ[6] ಆದರೆ ಇದೇ ತಾಲೂಕಿನ ಕವಲೂರು[7] ಮತ್ತು ತಳಕಲ್ಲು[8] ಗ್ರಾಮಗಳು ಕ್ರಮವಾಗಿ ಪುಲಿಗೆರೆ ೩೦೦ ರ ಉಪವಿಭಾಗವಾದ ಮಾಸವಾಡಿ ೧೪೦ ಮತ್ತು ಬೆಳ್ವೊಲ ನಾಡಿನ ಉಪವಿಭಾಗವಾದ ಕುಕ್ಕನೂರು ೩೦ ರಲ್ಲಿ ಸಮಾವೇಶಗೊಂಡಿದ್ದವು.

ಯಲಬುರ್ಗಿ ತಾಲೂಕಿನ ಬೆಣಕಲ್ಲು[9] ಮತ್ತು ಮುಧೋಳ[10] ಗ್ರಾಮಗಳು ಕ್ರಮವಾಗಿ ಬೆಳ್ವೊಲ ನಾಡಿನ ಕುಕ್ಕನೂರು ೩೦ ಹಾಗೂ ನರೆಯಂಗಲ್-೧೨ರಲ್ಲಿದ್ದವು ಆದ್ದರಿಂದ ಯಲಬುರ್ಗಿ ಗ್ರಾಮವೂ ಸೇರಿ ಈ ತಾಲೂಕಿನ ಪಶ್ಚಿಮ ಭಾಗವು ಬೆಳ್ವೊಲ ನಾಡಿನಲ್ಲಿದ್ದಿತೆಂದು ಹೇಳಬಹುದು. ಇಂದಿನ ಬಾಗಲಕೋಟೆ ಜಿಲ್ಲೆಯ ಹುನಗುಂದವು[11] ಬೆಳ್ವೊಲ ನಾಡಿಗೆ ಸೇರಿದ್ದಿತು.ಆದರೆ ಇದೇ ತಾಲೂಕಿನ ನಂದವಾಡಿಗೆಯ[12] ಎಡೆದೊರೆ ನಾಡಿನಲ್ಲಿತ್ತು.

ಸುರಪುರ ತಾಲೂಕಿನ ತಿಂಥಿಣಿಯ ಒಂದು ಶಾಸನವು “ಎಡೆದೊರೆ ವಿಷಯ ಪ್ರತಿವ(ಬ)ದ್ಧ ಸಗರ ತ್ರಿಶತಮಧ್ಯವರ್ತಿನಿ ಕೃಷ್ಣವೆಣ್ಣಾ ನದ್ಯುತ್ತರ ತೀರೋಪಾಶ್ಯತೆತಿನ್ತಿಣಿ ಸಿರಿವರ ನಾಮನಿಮಹಾನಾಮ ಸ್ಯಾಗ್ರಹಾರೆ” ಎಂದು ಹೇಳಿದೆ.[13] ಲಿಂಗಸೂಗೂರು ತಾಲೂಕಿನ ಎರಡೋಣಿ ಶಾಸನವು “(ಎಡೆದೊಱೆಯಿರ್ಚ್ಛಾ) ಸಿರದ ಭಾಗಂ ಸಗರ ಮುನೂೞು” ಎಂದು ಹೇಳಿದೆ.[14] ಅಂದರೆ ಸಗರ -೩೦೦ ವಿಭಾಗವು ಎಡೆದೊರೆ ನಾಡಿನ ಉಪವಿಭಾಗವಾಗಿತ್ತೆಂದು ಹೇಳಬಹುದು. ಆದ್ದರಿಂದ ಉತ್ತರದಲ್ಲಿ  ಇಂದಿನ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾವಿ ಮತ್ತು ಶಹಪುರ ತಾಲೂಕಿನ ದೋರನಹಳ್ಳಿ; ಪೂರ್ವದಲ್ಲಿ ಸುರಪುರ ತಾಲೂಕಿನ ಯಾಳಗಿ, ಅರಕೇರಿ ಮತ್ತು ಕಕ್ಕೇರಿ ಗ್ರಾಮಗಳು ಎಡೆದೊರೆ ನಾಡಿನ ಸಗರ-೩೦೦ ರಲ್ಲಿ ಸಮಾವೇಶಗೊಂಡಿದ್ದವೆಂದು ಹೇಳಬಹುದು. ಆದರೆ ಸುರಪುರ ತಾಲೂಕಿನ ರಾಜನಕೋಳೂರು ಮತ್ತು ಹಗರಟಿಗಿ ಗ್ರಾಮಗಳು ಹಗರಟಿಗಿ  – ೩೦೦ರಲ್ಲಿದ್ದವು. ಪೂರ್ವದಲ್ಲಿ ಮಾನ್ವಿ ತಾಲೂಕಿನ ಕುರಡಿ ಮತ್ತು ದೇವದುರ್ಗ ತಾಲೂಕಿನ ಗೊಬ್ಬೂರು ಗ್ರಾಮಗಳು ಎಡೆದೊರೆನಾಡಿನ ಅಯ್ಯಣವಾಡಿ ನಾಡಿನ ಉಪವಿಭಾಗದಲ್ಲಿದ್ದವು.

ಅಂದಿನ ಆಡಳಿತ ವಿಭಾಗಗಳ ಹಿನ್ನೆಲೆಯಲ್ಲಿ ಎಡೆದೊರೆನಾಡಿನ ಮೇರೆಗಳನ್ನು ಗುರುತಿಸುವುದು ಸುಲಭಸಾಧ್ಯ. ಉತ್ತರದಲ್ಲಿ ಅಳಂದೆ-೧೦೦೦ ಮಾಡಿನ ಉಪವಿಭಾಗ ಅತ್ತಿನೂರು-೮೦. ಈಶಾನ್ಯದಲ್ಲಿ ಅರಲು-೩೦೦, ಪೂರ್ವದಲ್ಲಿ ಅಯಿಜೆ-೩೦೦, ಆಗ್ನೇಯಕ್ಕೆ ಸಿಂದವಾಡಿನಾಡಿನ ಮಂಚಾಲ (ಮಂತ್ರಾಲಯ)-೩೬, ದಕ್ಷಿಣದಲ್ಲಿ ಬಲ್ಲಕುಂದೆ ನಾಡಿನ ತೆಕ್ಕೆಕಲ್ಲು-೧೨ ಮತ್ತು ನೆಲ್ಲುಡಿ-೧೨ ನೈರುತ್ಯದಲ್ಲಿ ಪುಲಿಗೆರೆ-೩೦೦ರ ಉಪವಿಭಾಗ ಮಾಸವಾಡಿ -೧೪೦, ಪಶ್ಚಿಮದಲ್ಲಿ ಬೆಳ್ವೊಲನಾಡಿನ ಕುಕ್ಕನೂರು-೩೦, ಕಿಸುಕಾಡು-೭೦ ಮತ್ತು ಹುನಗುಂದ-೩೦ ಹಾಗೂ ತರ್ದವಾಡಿ ನಾಡಿನ ನಲವತ್ತುಬಾಡ (ನಾಲತವಾಡ), ವಾಯುವ್ಯದಲ್ಲಿ ತರ್ದವಾಡಿ ನಾಡಿನ ಸಿಂದಗಿ-೧೨ ಮತ್ತು ನರಿಯೆಂಬೊಳೆ-೭೦ ವಿಭಾಗಗಳು ಎಡೆದೊರೆನಾಡಿನ ಬಾಹ್ಯ ಮೇರೆಗಳಾಗಿದ್ದವು.

ಎಡೆದೊರೆನಾಡಿನ ರಾಜಧಾನಿ :

ಆಡಳಿತ ವಿಭಾಗಗಳನ್ನು ಸಾಮಾನ್ಯವಾಗಿ ಆಯಾ ವಿಭಾಗಗಳ ಮುಖ್ಯ ಸ್ಥಳಗಳ ಹೆಸರಿನಿಂದಲೆ ಕರೆಯಲಾಗುತ್ತಿತ್ತು. ಉದಾ :- ಕೋಗಳಿನಾಡು, ಬಲ್ಲಕುಂದೆನಾಡು, ತರ್ದವಾಡಿನಾಡು ಇತ್ಯಾದಿ. ಆದರೆ ಜನಾಂವಾಚಿ ಮತ್ತು ಪ್ರಕೃತಿವಾಚಿ ಆಡಳಿತ ವಿಭಾಗಗಳ ಮುಖ್ಯ ಸ್ಥಳಗಳನ್ನು ಶಾಸನಗಳ ನೇರ ಉಲ್ಲೇಖವಿಲ್ಲದಿದ್ದರೆ ಗುರುತಿಸುವುದು ಕಷ್ಟಸಾಧ್ಯ.  ಉದಾ : ನೊಳಂಬವಾಡಿ, ಸಿಂದವಾಡಿ, ಬೆಳ್ವೋಲ-೩೦೦ ಇತ್ಯಾದಿ. ಎಡೆದೊರೆಯೂ ಇದೇ ಸಾಲಿಗೆ ಸೇರಿದೆ. ಕೃಷ್ಣಾ ಇಲ್ಲವೆ ತುಂಗಭದ್ರಾನದಿಯ ದಂಡೆಯ (=ಎಡೆಯ) ಮೇಲೆ ಜನವಸತಿ ನೆಲೆಸಿ ಅದು ಎಡೆಯ ಊರಾಗಿ ಬೆಳೆದಿರಬೇಕು. ಇದುವೆ ಮುಂದೆ ಎರಡು ಸಾವಿರ ನಾಡಿಗೆ ಮುಖ್ಯ ಪಟ್ಟಣವಾಗಿರಬೇಕು. ಹಿಂದೆ ಉಲ್ಲೇಖಿಸಿದ ಮ್ಯೆಸೂರು ಜಿಲ್ಲೆಯ ಎಡೆದೊರೆ-೧೦೦೦ ವಿಭಾಗಕ್ಕೆ ಅದೇ ಹೆಸರಿನ ಗ್ರಾಮವು ರಾಜದಾನಿಯಾಗಿತ್ತು[15] ಇಂದಿನ ಚಾಮರಾಜನಗರದ ಪ್ರಾಚೀನ ಹೆಸರು ಎಡೆದೊರೆಯಾಗಿದೆ. ಆದ್ದರಿಂದ ರಾಯಚೂರು ಜಿಲ್ಲೆಯ ಎಡೆದೊರೆ-೨೦೦೦ ವಿಭಾಗಕ್ಕೆ ಅದೇ ಹೆಸರಿನ ಗ್ರಾಮವು ರಾಜದಾನಿಯಾಗಿರಬೇಕು. ಇಂದಿನ ರಾಯಚೂರು, ಕೊಪ್ಪಳ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಎಡೆಯಪುರ ಮತ್ತು ಎಡೆಯಹಳ್ಳಿ ಹೆಸರಿನ ಅನೇಕ ಊರುಗಳು ಸಿಗುತ್ತವೆ. ಆದರೆ ಅವುಗಳಲ್ಲಿ ಯಾವುದು ಈ ನಾಡಿನ ರಾಜಧಾನಿಯಾಗಿತ್ತೆಂಬುದು ತಿಳಿಯುವುದಿಲ್ಲ.

ರಾಜಧಾನಿಯನ್ನು ಆಡಳಿತದ ಅನುಕೂಲಕ್ಕಾಗಿ ಒಂದು ಗ್ರಾಮದಿಂದ ಮತ್ತೊಂದಕ್ಕೆ ಸ್ಥಳಾಂತರಿಸಿರುವುದನ್ನು ಶಾಸನಗಳು ಉಲ್ಲೇಖಿಸಿವೆ.[16] ಎಡೆದೊರೆ ನಾಡಿಗೂ ಆರಂಭದಲ್ಲಿ ಅದೇ ಹೆಸರಿನ ಗ್ರಾಮವು ರಾಜಧಾನಿಯಾಗಿದ್ದು, ಮುಂದೆ ಅದು ಮಸ್ಕಿಗೆ ಸ್ಥಳಾಂತರಗೊಂಡಿರಬೇಕು. ಮಸ್ಕಿಯ ಮೂರು ಶಾಸನಗಳು ಅದನ್ನು ‘ರಾಜಧಾನಿ ಪಿರಿಯಮೊಸಂಗಿ’ ಎಂದು ಕರೆದಿವೆ.[17] ಆದರೆ ಇದು ಯಾವ ವಿಭಾಗದ ರಾಜಧಾನಿಯಾಗಿತ್ತೆಂಬುದು ಅವುಗಳಿಂದ ಸ್ಪಷ್ಟವಾಗುವುದಿಲ್ಲ. ಮಸ್ಕಿಗೆ ಹತ್ತಿರದಲ್ಲಿರುವ ಕರಡುಕಲ್ಲು-ಮುದುಗಲ್ಲುಗಳು ಕ್ರಮವಾಗಿ ಕರಡಿಕಲ್ಲು ನಾಡಿನ ರಾಜಧಾನಿಗಳಾಗಿದ್ದವು. ಸಿಂಧನೂರು ತಾಲೂಕಿನ ದೇವರಗುಡಿ ಮತ್ತು ಬಳಗಾನೂರು ಗ್ರಾಮಗಳು ಕ್ರಮವಾಗಿ ಕೆಳವಾಡಿ ಮತ್ತು ಮೊರಟನಾಡಿನಲ್ಲಿದ್ದವು. ಅಲ್ಲದೆ ಅವುಗಳಿಗೆ ಪ್ರತ್ಯೇಕ ರಾಜಧಾನಿಗಳಿದ್ದುದು ಶಾಸನಗಳಿಂದ ತಿಳಿಯುತ್ತದೆ. ಹ್ಯೆಹಯವಂಶದ ಮಹಾಮಂಡಳೇಶ್ವರ ಜೋಯಿಮಯ್ಯರಸನು ‘ರಾಜಧಾನಿ ಪಿರಿಯಮೊಸಂಗಿಯ ನೆಲೆವೀಡಿ’ನಿಂದ ಎಡೆದೊರೆನಾಡನ್ನು ಆಳುತ್ತಿದ್ದನೆಂದು ಗುತ್ತಿಯ ಶಾಸನ ಹೇಳಿದೆ.[18] ಆದ್ದರಿಂದ ಇಂದಿನ ಲಿಂಗಸೂಗೂರು ತಾಲೂಕಿನ ಮಸ್ಕಿಯು ಚಾಲುಕ್ಯರ ಕಾಲದಲ್ಲಿ ಎಡೆದೊರೆನಾಡಿನ ರಾಜಧಾನಿಯಾಗಿತ್ತೆಂದು ಹೇಳಬಹುದು.

ಉಪವಿಭಾಗಗಳು :

ಆಡಳಿತದ ಅನುಕೂಲಕ್ಕಾಗಿ ಎರಡು ಸಾವಿರ ಹಳ್ಳಿಗಳ ಎಡೆದೊರೆ ನಾಡನ್ನು ಮತ್ತೆ ಕೆಲವು ಉಪವಿಭಾಗಗಳನ್ನಾಗಿ ವಿಂಗಡಿಸಲಾಗಿತ್ತು. ಇಲ್ಲಿಯ ಶಾಸನಗಳು ಉಲ್ಲೇಖಿಸುವ ಆ ವಿಭಾಗಗಳೆಂದರೆ ಕರಡಿಕಲ್ಲು -೩೦೦, ಕೆಳವಾಡಿ-೩೦೦, ಅಯ್ಯಣವಾಡಿ-೩೦೦, ಮೊರಟ-೩೦೦, ಮೊಸಳೆಕಲ್ಲು-೩೦೦, ಮತ್ತು ಸಗರ-೩೦೦. ಇವುಗಳಲ್ಲಿ ಮತ್ತೆ ಕೆಲವು ಉಪವಿಭಾಗಗಳಿದ್ದುದು ಶಾಸನಗಳಿಂದ ತಿಳಿಯುತ್ತದೆ. ಒಂದು ನಾಡಿನ ಆಡಳಿತದ ವ್ಯವಸ್ಥೆ ಎಷ್ಟು ಸುವ್ಯವಸ್ಥಿವಾಗಿ ನಡೆಯುತ್ತಿತ್ತೆಂಬುದಕ್ಕೆ ಅಲ್ಲಿ ಮಾಡಲಾಗಿರುವ ಉಪವಿಭಾಗಗಳೇ ಸಾಕ್ಷಿ.

ಕರಡಿಕಲ್ಲು೩೦೦ : ಇಂದಿನ  ಲಿಂಗಸೂಗೂರು ತಾಲೂಕಿನ ಚಿಕ್ಕ ಹಳ್ಳಿಯಾದ ಕರಡಕಲ್ಲು ಈ ವಿಭಾಗದ ಮುಖ್ಯ ಪಟ್ಟಣವಾಗಿದೆ. ಇದರ ಅತ್ಯಂತ ಪ್ರಾಚಿನ ಉಲ್ಲೇಖ ಕ್ರಿ. ಶ. ೯೨೭ರ ಎರಡೋಣಿ ಶಾಸನವಾಗಿದೆ.[19] ಶಾಸನವು ಅದನ್ನು ‘ಕರಡಿಕಲ್ನಾಡು’ ಎಂದು ಕರೆದಿದೆ. ಮುಂದೆ  ಕ್ರಿ.ಶ. ೧೦೪೬ರ ವೇಳೆಗೆ ಅದು ಮೂರುನೂರು ಹಳ್ಳಿಗಳ ವಿಭಾಗವಾಗಿ ರೂಪುಗೊಂಡಿತು.[20] ಕ್ರಿ.ಶ. ೧೧೯೧ರ ವೇಳೆಗೆ ಈ ವಿಭಾಗದ ರಾಜಧಾನಿಯು ಮುದಗಲ್ಲು ಪಟ್ಟಣಕ್ಕೆ ಸ್ಥಳಾಂತರವಾಯಿತು.[21]

ಅಗ್ರಹಾರವಾಗಿದ್ದ ಬನ್ನಿಗೋಳ, ಭತ್ತಗ್ರಾಮವಾದ ಲಿಂಗಸೂಗೂರು, ತೆಂಗೊಳ, ಎರಡೋಣಿ, ನಂದವಾಡಿಗೆ, ಕೆಲ್ಲೂರು ಮತ್ತು ಮಸ್ಕಿ ಗ್ರಾಮಗಳು ಈ ವಿಭಾಗದಲ್ಲಿದ್ದವು. ಆದ್ದರಿಂದ ಇಂದಿನ ಲಿಂಗಸೂಗೂರು ತಾಲೂಕಿನ ಎಲ್ಲ ಹಳ್ಳಿಗಳು ಮತ್ತು ಕುಷ್ಟಗಿ, ಹುನಗುಂದ, ಮಾನ್ವಿ ಹಾಗೂ ಸಿಂಧನೂರು ತಾಲೂಕಿನ ಕೆಲವು ಹಳ್ಳಿಗಳು ಈ ವಿಭಾಗದಲ್ಲಿ ಸಮಾವೇಶಗೊಂಡಿದ್ದವೆಂದು ಹೇಳಬಹುದು. ಆದರೆ ಈ ನಾಡಿನ ಉಪವಿಭಾಗಗಳು ಇದುವರೆಗೆ ಲಭ್ಯವಾದ ಶಾಸನಗಳಿಂದ ತಿಳಿಯುವುದಿಲ್ಲ.

ಕೆಳವಾಡಿ೩೦೦ : ಕೆಳವಾಡಿನಾಡು ಇಂದಿನ ಮುಧೋಳ, ಬಾಗಲಕೋಟೆ ಮತ್ತು ಬಾದಾಮಿ ತಾಲೂಕಿನ ವ್ಯಾಪ್ತಿಯನ್ನು ಹೊಂದಿತ್ತೆಂದು  ಡಾ. ಜೆ. ಎಂ. ನಾಗಯ್ಯನವರು ಹೇಳಿದ್ದಾರೆ.[22] ಇಂದಿನ ಬಾದಾಮಿ ತಾಲೂಕಿನ ಕೆಳವಾಡಿಗ್ರಾಮವೆ ಈ ವಿಭಾಗದ ಮುಖ್ಯ ಪಟ್ಟಣವಾಗಿದೆಯೆಂದು ಡಾ. ಬಿ. ವ್ಹಿ. ಶಿರೂರ ಅವರು ಊಹಿಸಿದ್ದಾರೆ.[23] ಆದರೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಶಾಸನಗಳು ಇವರ ಮಾತನ್ನು ಸಮರ್ಥಿಸುವುದಿಲ್ಲ.

ಕೊಪ್ಪಳ ತಾಲೂಕಿನ ಮಾದಿನೂರು ಶಾಸನವು “ಎಡೆದೊರೆಯುರ್ಚ್ಛಾಸಿರದ ಬಳಿಯ ಕೆಳವಾಡಿ ಮುನೂರು” ಎಂದು ಹೇಳಿದೆ.[24] ಸಿಂಧನೂರು ತಾಲೂಕಿನ ದೇವರಗುಡಿ ಶಾಸನವು “ಕುನ್ತಳಕಾನ್ತೆಗೆ ನೋಡಕಿನ್ತಿದೇ ಕನ್ನಡಿಯನಿಪ್ಪ ಕೆಳವಾಡಿಯೊಳತ್ಸನ್ತಮಿತ ನಿಳಯ ಗೌರೀಕಾನ್ತಂ ಶ್ರೀ ಹುಳಿಯಮೇಶ್ವರಂ ನೆಲಸಿರ್ದ್ದೋನ್” ಎಂದು ಹೇಳಿದೆ.[25] ಅಲ್ಲದೆ ದೇವರಗುಡಿಯ ಮತ್ತೊಂದು ಶಾಸನವು “ಕೆಳವಾಡಿ-೩೦೦ ೞ ರಾಜಧಾನಿ ಕಲುಕೆಱೆ” ಎಂದು ಸ್ಪಷ್ಟವಾಗಿ ಹೇಳಿದೆ[26] ಆದ್ದರಿಂದ ಇಂದಿನ ಸಿಂಧನೂರು, ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗಿ ತಾಲೂಕಿನ ವ್ಯಾಪ್ತಿಯನ್ನು  ಹೊಂದಿತ್ತೆಂದು ಹೇಳಬಹುದು. ಈ ತಾಲೂಕುಗಳ ವ್ಯಾಪ್ತಿಯಲ್ಲಿ ಕಾಣಸಿಗುವ ಚಿಕ್ಕ ಚಿಕ್ಕ ವಿಭಾಗಗಳು ಈ ಕೆಳವಾಡಿ ನಾಡಿನ ಉಪವಿಭಾಗಗಳಾಗಿರಬೇಕು.

ಕುಡಿಯಹರವಿ೭೦ : ಬಾಗಳಿಯ ಕ್ರಿ.ಶ. ೧೦೧೮ರ ಎರಡು ಶಾಸನಗಳು  “ಎಡೆದೊಱೆಯಿಚ್ಛಾಸಿರದೊಳಗಣ ಕುದಿಹಾರಯೆೞ್ವತ್ತು” ವಿಭಾಗವನ್ನು ಉಲ್ಲೇಖಿಸಿವೆ.[27] ಈ ವಿಭಾಗವು ಶಾಸನಗಳಲ್ಲಿ ಕುದಿಯ ಪರವಿ, ಕುದಿಯಹರವಿ, ಕುಡಿಹಾರ ಮೊದಲಾದ ರೂಪಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಇದು ಎಡೆದೊರೆನಾಡಿನ ಯಾವ ಉಪವಿಭಾಗದಲ್ಲಿ ಸಮಾವೇಶಗೊಂಡಿತ್ತೆಂಬುದು ಶಾಸನಗಳಿಂದ ತಿಳಿಯುವುದಿಲ್ಲ.

ಕುದಿಯಹರವಿ ವಿಭಾಗವನ್ನು ಕ್ರಿ.ಶ. ೧೦೧೭ರಿಂದ ೧೦೫೪ರವರೆಗೆ ನೊಳಂಬಪಲ್ಲವ ವಂಶದ ಅರಸರು ಆಳುತ್ತಿದ್ದರು. ಇವರು ಕೋಗಳಿ, ಬಲ್ಲಕುಂದೆ ಮೊದಲಾಗಿ ನೊಳಂಬವಾಡಿ-೩೨೦೦೦ ನಾಡುಗಳ ಜೊತೆಗೆ ಕುದಿಯಹರವಿ ವಿಭಾಗವನ್ನೂ ಆಳುತ್ತಿದ್ದುದು ಶಾಸನಗಳಿಂದ ತಿಳಿಯುತ್ತದೆ. ಕೋಗಳಿ ಮತ್ತು ಬಲ್ಲಕುಂದೆನಾಡುಗಳು ತುಂಗಾಭದ್ರಾನದಿಯ ಬಲದಂಡೆಯಲ್ಲಿವೆ. ಆದ್ದರಿಂದ ಕುದಿಯಹರವಿ ವಿಭಾಗವು ಈ ನದಿಯ ಎಡದಂಡೆಯಲ್ಲಿರಬೇಕು. ಕೋಗಳಿ ಮತ್ತು ಬಲ್ಲಕುಂದೆನಾಡುಗಳಿಗೆ ಹೊಂದಿಕೊಂಡು ತುಂಗಭದ್ರಾ ನದಿಯ ಎಡದಂಡೆಯಲ್ಲಿ ಕೆಳವಾಡಿ-೩೦೦ ವಿಭಾಗವು ವ್ಯಾಪಿಸಿತ್ತು. ಆದ್ದರಿಂದ ಕುದಿಯಹರವಿಯು ಕೆಳವಾಡಿ ನಾಡಿನ ಉಪವಿಭಾಗವಾಗಿದೆಯೆಂದು ಹೇಳಬಹುದು. ಇಂದಿನ ಯಲಬುರ್ಗಿ ತಾಲೂಕಿನ ಪೂರ್ವ ಭಾಗವು ಎಡೆದೊರೆನಾಡಿನ ಕೆಳವಾಡಿ-೩೦೦ರಲ್ಲಿ ಸಮಾವೇಶಗೊಂಡಿತ್ತು ಬಹುಶಃ ಈ ತಾಲೂಕಿನ ‘ವಟಪರವಿ’ ಗ್ರಾಮವೇ ಪ್ರಾಚೀನ ಕುಡಿಯಹರವಿ-೭೦ರ ಮುಖ್ಯ ಪಟ್ಟಣವಾಗಿರಬೇಕು. ಈ ಉಪವಿಭಾಗಗಳಲ್ಲಿ ಯಲುಬುರ್ಗಿ ಮತ್ತು ಕೊಪ್ಪಳ ತಾಲೂಕಿನ ಕೆಲವು ಹಳ್ಳಿಗಳು ಸಮಾವೇಶಗೊಂಡಿರಬೇಕು.

ಪರವರಿ೭೬ : ಸಿಂಧನೂರು ತಾಲೂಕಿನ ದೇವರಗುಡಿ ಶಾಸನಗಳಲ್ಲಿ ಈ ವಿಭಾಗದ ಉಲ್ಲೇಖವಿದೆ. ಹಿಂದೆಯೇ ನೋಡಿದಂತೆ ದೇವರಗುಡಿಯು ಕೆಳವಾಡಿನಾಡಿನಲ್ಲಿ ಸಮಾವೇಶಗೊಂಡಿತ್ತು. ಆದ್ದರಿಂದ “ಆ ಊರೊಡೆಯ ಪರವರಿ ಯೆರ್ಪ್ಪತ್ತಾರ ಬಳಿಯ ಬಾಡಂ ಕಡ್ಡರನೂರ”ವೆಂಬ ಶಾಸನೋಕ್ತಿಯನ್ನು ದೇವರಗುಡಿ ಗ್ರಾಮವು ಕೆಳವಾಡಿ ನಾಡಿನ ಪರವರಿ-೭೬ರಲ್ಲಿ ಸಾಮಾವೇಶಗೊಂಡಿತ್ತೆಂದು ಅರ್ಥ್ಯೆಸಬಹುದು. ಆದರೆ ಇಲ್ಲಿಯ ಪರವರಿ ಮತ್ತು ಕಡ್ಡರನೂರು ಗ್ರಾಮಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

ನಿಟ್ಟರವೆ೭೦ : ಸಾಲಗುಂದೆಯ ಕ್ರಿ.ಶ.೧೦೬೩ರ ಶಾಸನವು “ಎಡೆದೊರೆನಾಳ್ಕೆ ತೊಡವಿದನಂತೊರ್ಪಿ ತೋರ್ಪ ನಿಟ್ಟರವೆಯರ್ಪ್ಪತ್ತರಗ್ರಹಾರಮದು ಶಾಶ್ವತ ನಿಳಯಂ ಸಾಲಗುಂದೆ”. ಎಂದು ಹೇಳಿದೆ.[28] ರೌಡಕುಂದೆಯ ಕ್ರಿ. ಶ. ೧೦೫೩ರ ಶಾಸನದಲ್ಲಿಯೂ ಈ ವಿಭಾಗದ ಉಲ್ಲೇಖವಿದೆ.[29] ಆದರೆ ಇಲ್ಲಿಯ ನಿಟ್ಟರವೆ ಗ್ರಾಮವನ್ನು ಗುರುತಿಸಲು ಸಾಧ್ಯವಾಗಿಲ್ಲ.

ಸಾಲಗುಂದೆ೭೦ : ಕ್ರಿ .ಶ. ೧೧೫೩ರ ಸಾಲಗುಂದೆ ಶಾಸನವು “ಎಡೆದೊರೆ ಯೆಚ್ಛಾವಿರ ನಾಡೊಳಗೆ  ಸೋಭೆವೆತಿರ್ಪ x ಭೂದೇವ ಕುಳೋತ್ತಮರಿಂದಂ ಕೇವಳವೆ ಸಾಲಗುಂದೆ ಯಪ್ಪತ್ತರೊಳು” ಎಂದು ಹೇಳಿದೆ.[30] ಅದ್ದರಿಂದ ಇದು ಹಿಂದೆ ನೋಡಿದ ನಿಟ್ಟರವೆ ವಿಭಾಗಕ್ಕಿಂತ ಭಿನ್ನವೆಂಬುದು ಸ್ಪಷ್ಟ. ಆರಂಭದಲ್ಲಿ ನಿಟ್ಟರವೆ ನಾಡಿನ ಅಗ್ರಹಾರವಾಗಿದ್ದ ಸಾಲಗುಂದೆಯು ಕ್ರಿ. ಶ. ೧೧೫೩ರ ವೇಳೆಗೆ ಸ್ವತಂತ್ರ ವಿಭಾಗವಾಗಿ ರೂಪುಗೊಂಡಿತು.

ಹೀಗೆ ಕೆಳವಾಗಿ-೩೦೦ರಲ್ಲಿ ಕುಡಿಯಹರವಿ-೭೦, ಪರವರಿ-೭೬, ನಿಟ್ಟರವೆ-೭೦ ಮತ್ತು ಸಾಲಗುಂದೆ-೭೦ ವಿಭಾಗಗಳು ಸೇರಿ ಒಟ್ಟು ಎರಡುನೂರಾ ಎಂಬತ್ತಾರು ಹಳ್ಳಿಗಳ ಲೆಕ್ಕ ಸಿಗುತ್ತದೆ. ಉಳಿದ ಹದಿನಾಲ್ಕು ಹಳ್ಳಿಗಳ ವಿಭಾಗವನ್ನು ಗುರುತಿಸ ಬೇಕಾಗಿದೆ.

ಅಯ್ಯಣವಾಡಿ೩೦೦ : ಕುರಡಿಯ ಕ್ರಿ.ಶ. ೧೦೭೯ರ ಶಾಸನವು “ನೆಗಳ್ದಯ್ಯಣವಾಡಿ ನಾಳ್ಕಾಳಂ ಕ್ರಿತಿಯೆನಿಸಿದ ರೂಡಿ” ಎಂದು ಹೇಳಿದೆ.[31] ಗೊಬ್ಬೂರು ಶಾಸನವು “ಸೊಗಯಿಸುತಿರ್ಕುಮಿದು ನಡುನಾಡೊಳಗಯ್ಯಣವಾಡಿಯಲ್ಲಿ ತಾಂ ಮಿಗಿಲೆನಿಸಿಪ್ಪ ಗೋಪುರದ ವಿಪ್ರಜನಂಗಳ ವೇದ ಘೋಷಣಂ”ಗಳಿಂದ ಶೋಭಿಸುತ್ತಿತ್ತೆಂದು ಹೇಳಿದೆ.[32] ಅಂದರೆ ಇಂದಿನ ಮಾನ್ವಿ ತಾಲೂಕಿನ ಕುರಡಿ ಮತ್ತು ದೇವದುರ್ಗ ತಾಲೂಕಿನ ಗೊಬ್ಬೂರು ಗ್ರಾಮಗಳು ಅಯ್ಯಣವಾಡಿ ನಾಡಿನ ಪ್ರಸಿದ್ದ ಅಗ್ರಹಾರಗಳಾಗಿದ್ದವು. ಆದ್ದರಿಂದ ಈ ವಿಭಾಗವು ಇಂದಿನ ಮಾನ್ವಿ, ದೇವದುರ್ಗ ಮತ್ತು ರಾಯಚೂರು ತಾಲೂಕಿನ ಹಳ್ಳಿಗಳ ವ್ಯಾಪ್ತಿ ಹೊಂದಿತ್ತೆಂದು ಹೇಳಬಹುದು. ಆದರೆ ಈ ನಾಡಿನ ಉಪವಿಭಾಗಗಳು ಇದುವರೆಗೆ ಲಭ್ಯವಾದ ಶಾಸನಗಳಲ್ಲಿ ಉಲ್ಲೇಖವಾಗಿಲ್ಲ.

ಮೊರಟ೩೦೦ : ಇಂದಿನ ಮಾನ್ವಿ ತಾಲೂಕಿನ ಮಲ್ಲಟಗ್ರಾಮವೆ ಈ ವಿಭಾಗದ ಮುಖ್ಯ ಪಟ್ಟಣವಾಗಿದೆ. ಆಂಧ್ರ ಪ್ರದೇಶದ  ಚಿನ್ನತುಂಬಳ ಶಾಸನದಲ್ಲಿ ಉಲ್ಲೇಖವಾಗಿರುವ ‘ಮಾಱಾಟ ಮುನೂರು’, ‘ಮಾಱಾಟನಾಡು’ಗಳು ಇಲ್ಲಿಯ ಮಲ್ಲಟವೆ ಆಗಿದೆ.[33] ಚಿಮ್ನಹಳ್ಳಿ ಶಾಸನವು “ಮಾಱಾಟ ಮೂನೂೞೞ ಮನ್ನೆಯ ಬೆನ್ನರಸ”ನನ್ನು ಮತ್ತು “ಮಾೞಟನಾಡ ಬಳಿಯಲಾ ಬಾಯಿನೂರ” ಗ್ರಾಮವನ್ನು ಉಲ್ಲೆಖಿಸಿದೆ[34]. ಅದು ಇಂದಿನ ಮಾನ್ವಿ ತಾಲೂಕಿನ ಬೇವಿನೂರು ಗ್ರಾಮವಾಗಿದೆ. ಕ್ರಿ. ಶ. ೧೧೯೧ರಲ್ಲಿ ಈ ವಿಭಾಗದ ರಾಜಧಾನಿಯು ಸಿರಿವಾರಗ್ರಾಮಕ್ಕೆ ಸ್ಥಳಾಂತರವಾಯಿತು.[35] ಆದರೆ ಈ ವಿಭಾಗದ ಉಪವಿಭಾಗಗಳು ಇದುವರೆಗೆ ಲಭ್ಯವಾದ ಶಾಸನಗಳಲ್ಲಿ ಉಲ್ಲೇಖವಾಗಿಲ್ಲ. ಮೊರಟನಾಡು ಇಂದಿನ ಮಾನ್ವಿ ಮತ್ತು ಸಿಂಧನೂರು ತಾಲೂಕಿನ ಕೆಲವು ಹಳ್ಳಿಗಳ ವ್ಯಾಪ್ತಿ ಪಡೆದಿತ್ತು.

ಮೊಸಳೆಕಲ್ಲು೩೦೦ : ಇಂದಿನ ದೇವದುರ್ಗ ತಾಲೂಕಿನ ಚಿಕ್ಕಹಳ್ಳಿಯಾದ ಮಸರಕಲ್ಲು ಈ ವಿಭಾಗದ ಮುಖ್ಯಪಟ್ಟಣವಾಗಿದೆ. ಕ್ರಿ. ಶ. ೧೦೩೫ರ ನುಗಡೋಣಿ ಶಾಸನವು “ಎಡೆದೊರೆ ೨೦೦೦ರದೊಳಗಣ ಮೊಸಳಿಕಲ್ಲು ೩೦೦ ೞ ಬಳಿಯ ಭತ್ತಗ್ರಾಮ ಬಳ್ಳನಿಟ್ಟಗೆ”ಯನ್ನು ಉಲ್ಲೇಖಿ[36]ಸಿದೆ. ಆದ್ದರಿಂದ ಇಂದಿನ ದೇವದುರ್ಗ ಮತ್ತು ಮಾನ್ವಿ ತಾಲೂಕಿನ ಹಳ್ಳಿಗಳು ಈ ವಿಭಾಗದಲ್ಲಿ ಸಮಾವೇಶಗೊಂಡಿದ್ದವೆಂದು ಹೇಳಬಹುದು.

ಗೋರಿಕಲ್ಲು೧೨ : ಮೊಸಳಿಕಲ್ಲು ನಾಡಿನ ಉಪವಿಭಾಗವಾದ ಇದರ ಉಲ್ಲೇಖ ಕಪಗಲ್ಲು ಶಾಸನದಲ್ಲಿದೆ[37]. ಕಪಗಲ್ಲು ಗ್ರಾಮವು ಈ ವಿಭಾಗದಲ್ಲಿಯ ಒಂದು ಭತ್ತಗ್ರಾಮವಾಗಿತ್ತು. ಇಂದಿನ ಮಾನ್ವಿ ತಾಲೂಕಿನ ಗೋರ್ಕಲ್ಲು ಗ್ರಾಮವೆ ಪ್ರಾಚೀನ ಗೋರಿಕಲ್ಲು-೧೨ರ ಮುಖ್ಯ ಪಟ್ಟಣವಾಗಿದೆ. ಆದರೆ ಈ ವಿಭಾಗದ ಇನ್ನುಳಿದ ೧೦ ಹಳ್ಳಿಗಳ ವಿವರ ಶಾಸನಗಳಿಂದ ತಿಳಿಯುವುದಿಲ್ಲ.

ಹೀಗೆ ಮೊಸಳೆಕಲ್ಲು-೩೦೦ರಲ್ಲಿ ಇದುವರೆಗೆ ಕೇವಲ ಹನ್ನೆರಡು ಹಳ್ಳಿಗಳ ಒಂದು ಉಪವಿಭಾಗವನ್ನು ಗುರುತಿಸಲು ಸಾಧ್ಯವಾಗಿದೆ. ಉಳಿದ ೨೮೮ ಹಳ್ಳಿಗಳನ್ನು ಮತ್ತು ಅವು ಸಮಾವೇಶಗೊಂಡಿದ್ದ ವಿಭಾಗಗಳನ್ನು ಗುರುತಿಸಬೇಕಾಗಿದೆ.

ಸಗರ೩೦೦ : ಇಂದಿನ ಶಹಪುರ ತಾಲೂಕಿನ ಸಗರ ಗ್ರಾಮವೆ ಈ ವಿಭಾಗದ ಮುಖ್ಯಪಟ್ಟಣವಾಗಿದೆ. ತಿಂಥಿಣಿಯ ಕ್ರಿ. ಶ. ೧೦೭೧ರ  ಶಾಸನವು “ಎಡೆದೊರೆ ವಿಷಯ ಪ್ರತಿವ(ಬ)ದ್ಧ ಸಗರ ತ್ರಿಶತಮಧ್ಯವರ್ತ್ತಿನಿ ಕೃಷ್ಣವೆಣ್ಣಾನದ್ಯುತ್ತರ ತೀರೋಪಾಶ್ಯತೇ ತಿನ್ತಿಣಿ ಸಿರಿವರ ನಾಮನಿಮಹಾನಾಮ ಸ್ಯಾಗ್ರಹಾರೇ” ಎಂದು ಹೇಳಿದೆ. ಆದ್ದರಿಂದ ಸಗರ ನಾಡು ಎಡೆದೊರೆ-೨೦೦೦ ನಾಡಿನ ಉಪವಿಭಾಗವಾಗಿತ್ತೆಂದು ಹೇಳಬಹುದು. ಇದಲ್ಲದೆ ಕ್ರಿ.ಶ. ೯೨೭ರ ಎರಡೋಣಿ ಶಾಸನವು “xxxxxx ಸಿರದ ಭಾಗಂ ಸಗರ ಮುನೂೞು” ಎಂದು ಹೇಳಿದೆ. ಇಲ್ಲಿಯ ತ್ರುಟಿತ ಭಾಗವನ್ನು “ಎಡೆದೊರೆಯಿರ್ಚ್ಛಾಸಿರದ ಭಾಗಂ ಸಗರ ಮುನೂೞು” ಎಂದು ಕಟ್ಟಿಕೊಡಬಹುದು.

ಸಗರ ನಾಡು ಕ್ರಿ.ಶ. ೯೨೭ರಿಂದ ೧೧೦೬ರವರೆಗೆ ಮೂರುನೂರು ಹಳ್ಳಿಗಳ ವಿಭಾಗವಾಗಿತ್ತು. ಮುಂದೆ ಕ್ರಿ.ಶ. ೧೧೩೦ರಿಂದ ಅದು ಐದುನೂರು ಹಳ್ಳಿಗಳ ವಿಭಾಗವಾಗಿ ರೂಪುಗೊಂಡಿತು. ಆಗ ಈ ನಾಡಿನ ವಿಸ್ತಾರವು ಇಂದಿನ ಜೇವರ್ಗಿ ತಾಲೂಕಿನವರೆಗೆ ವ್ಯಾಪಿಸಿರಬೇಕು.

ಸಗರನಾಡು ಇಂದಿನ ಸುರಪುರ, ಶಹಪುರ ಮತ್ತು ಜೇವರ್ಗಿ ತಾಲೂಕಿನ ಕೆಲವು ಹಳ್ಳಿಗಳ ವ್ಯಾಪ್ತಿ ಹೊಂದಿತ್ತು. ಸುರಪುರ ತಾಲೂಕಿನ ಏವೂರು, ಯಾಳಗಿ, ಅರಕೇರಿ, ನಗರವುರ, ಚಣ್ಡವುರ, (ಚೆನ್ನೂರು), ಹುಣಸಗಿ, ಶಿವಪುರ, ತಿಂಥಿಣಿ, ಕೆಂಭಾವಿ, ಪಿರಿಯ ಬೆಳ್ಳುಂಬಟ್ಟಿ, ಕಚಕನೂರು, ಎಡೆಯಪುರ : ಶಹಪುರ ತಾಲೂಕಿನ ದೋರನಹಳ್ಳಿ, ಸಿರಿವಾಳ, ಕೋಬಾಳ ಗುಂಡುಲೂರು, ಸೂಗೂರು, ಹೋತಗಲ್ಲು  ಮತ್ತು ಜೇವರ್ಗಿ ತಾಲೂಕಿನ ಎಳರಾವೆ (ಯಡ್ರಾವಿ), ಮಲ್ಲಾಬಾದ ಗ್ರಾಮಗಳು ಸಗರನಾಡಿನಲ್ಲಿ ಸಮಾವೇಶಗೊಂಡಿದ್ದವು.

ಇದುವರೆಗೆ ಸಗರನಾಡಿನ ಎಳರಾವೆ-೫೦ ಮತ್ತು ಕೆಂಬಾವಿ -೨೪ ಉಪವಿಭಾಗಗಳು ತಿಳಿದು ಬಂದಿವೆ.

ಎಳರಾವೆ೫೦ : ಇಂದಿನ ಜೇವರ್ಗಿ ತಾಲೂಕಿನ ಯಡ್ರಾವಿಯೆ ಪ್ರಾಚೀನ ಎಳರಾವೆಯ ಮುಖ್ಯ ಪಟ್ಟಣವಾಗಿದೆ. ಕ್ರಿ.ಶ. ೧೧೩೬ರ ಮಲ್ಲಬಾದ ಶಾಸನದಲ್ಲಿ ಈ ವಿಭಾಗದ ಉಲ್ಲೇಖವಿದೆ.[38] ಆದರೆ ಯಡ್ರಾವಿ ಮತ್ತು ಮಲ್ಲಾಬಾದ ಬಿಟ್ಟರೆ ಈ ವಿಭಾಗದ ಇತರ ಹಳ್ಳಿಗಳ ವಿವರ ತಿಳಿಯುವುದಿಲ್ಲ.

ಕೆಂಭಾವಿ-೨೪ : ಇಂದಿನ ಸುರಪುರ ತಾಲೂಕಿನ ಕೆಂಭಾವಿ ಈ ವಿಭಾಗದ ಮುಖ್ಯ ಪಟ್ಟಣವಾಗಿದೆ. ಕೆಂಭಾವಿಯ ಶಾಸನವು “ಕೆಂಭಾವಿ ೨೪ರ ಬಳಿಯ ಕರಡಿಕಲ್ಕೂಡಲಿಗೆ” ಎಂದು ಹೇಳಿದೆ.[39] ಇದಲ್ಲದೆ ಮುದನೂರು, ಬೈಚಬಾಳ, ದೇವಪುರ, ಕೆಂದಲಗೆ ಗ್ರಾಮಗಳೂ ಈ ಉಪವಿಭಾಗದಲ್ಲಿ ಸೇರಿದ್ದವು. ಇವುಗಳ ಜೊತೆಗೆ ಕೆಂಭಾವಿ, ಕರಡಿಕಲ್ಲು ಮತ್ತು ಕೂಡಲಗಿ ಸೇರಿ ಈ ವಿಭಾಗದ ಏಳು ಹಳ್ಳಿಗಳನ್ನು ಗುರುತಿಸಲು ಸಾಧ್ಯವಾಗಿದೆ. ಉಳಿದ ೧೭ ಹಳ್ಳಿಗಳನ್ನು ಗುರುತಿಸಬೇಕಾಗಿದೆ.

ಹೀಗೆ ಸಗರ-೩೦೦ರಲ್ಲಿ ಎಳರಾವೆ-೫೦ ಮತ್ತು ಕೆಂಭಾವಿ-೨೪ ಉಪವಿಭಾಗಗಳು ಸೇರಿ ೭೪ ಹಳ್ಳಿಗಳನ್ನು ಗುರುತಿಸಲು ಸಾಧ್ಯವಾಗಿದೆ. ಉಳಿದ ೨೨೬ ಹಳ್ಳಿಗಳ ಉಪವಿಭಾಗಗಳನ್ನು ಗುರುತಿಸಬೇಕಾಗಿದೆ.

ಒಟ್ಟಿನಲ್ಲಿ ಎಡೆದೊರೆ-೨೦೦೦ ನಾಡಿನಲ್ಲಿ ಇದುವರೆಗೂ ಕರಡಿಕಲ್ಲು-೩೦೦, ಕೆಳವಾಡಿ-೩೦೦, ಮೊರಟ-೩೦೦, ಅಯ್ಯಣವಾಡಿ-೩೦೦ ಮೊಸಳಿಕಲ್ಲು-೩೦೦ ಮತ್ತು ಸಗರ-೩೦೦ ಸೇರಿ ಒಟ್ಟು ೧೮೦೦ ಹಳ್ಳಿಗಳ ಲೆಕ್ಕ ಸಿಗುತ್ತದೆ. ಕ್ರಿ.ಶ. ೧೧೩೦ ರಿಂದ ಸಗರನಾಡು ೫೦೦ ಹಳ್ಳಿಗಳ ವಿಭಾಗವಾಗಿ ರೂಪಗೊಂಡಿರುವುದನ್ನು ಹಿಂದೆಯೇ ಪ್ರಸ್ತಾಪಿಸಿದ್ದೇವೆ. ಆದ್ದರಿಂದ ಈ ಎರಡುನೂರು ಹಳ್ಳಿಗಳನ್ನು ಸೇರಿಸಿಕೊಂಡರೆ ಎಡೆದೊರೆ ನಾಡಿನ ಎಲ್ಲ ಎರಡು ಸಾವಿರ ಹಳ್ಳಿಗಳ ಲೆಕ್ಕ ಸಿಕ್ಕಂತಾಗುತ್ತದೆ.


[1] ARSIE. B.NO. 551/61-62   ಕ್ರಿ,ಶ. ಸು.   891-92,  ಬೋಗಾವತಿ, ಮಾನ್ವಿ (ತಾ)

[2] EI  12, No.32, Notes by Fleet, p. 296

[3] ಡಾ. ಬಸವಲಿಂಗ ಸೊಪ್ಪಿಮಠ, ಆಕರ, ಪು, 18 ಅಲ್ಲದೆ ಎಡ ಎಂಬುದು ನದಿಯ ಎಡ ಭಾಗವೆಂದು ಹೇಳುವುದೂ ಸರಿಯಲ್ಲ. ನೋಡಿ. ಎಡೆನಾಡು-ಒಂದು ಆಡಳಿತಾಂಗ ವಿಭಾಗ. ಇತಿಹಾಸ ದರ್ಶನ -12, ಪು.157-58.

[4] ಈ ಅರ್ಥದ ಕಡೆಗೆ ನನ್ನ ಗಮನ ಸೆಳೆದವರು ವಿದ್ಯಾಗುರುಗಳಾದ ಡಾ. ಎಂ. ಎಂ. ಕಲಬುರ್ಗಿ ಅವರು. ಆದರೆ ‘ಎಡೆ’ ಹೆಸರಿನಿಂದ ಮೊದಲಾಗುವ ಊರುಗಳಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರೆಂಬುದು ಖಚಿತವಾಗಬೇಕಾಗಿದೆ. ಇದು ನಿಜವಾದರೆ ‘ಎಡೆದೊರೆ’ ಪದವನ್ನು ಎಡೆಯರ (ಜನಾಂಗ)+ತೊರೆ ಎಂದು ವಿಗ್ರಹಿಸಬಹುದು.

[5] ಸುರಪುರ ತಾಲೂಕಿನ ಶಾಸನಗಳು (ಸಂ) ಹನುಮಾಕ್ಷಿಗೋಗಿ, ಶಾಸನ ಸಂಖ್ಯೆ. 8, ಕ್ರಿ. ಶ. 1077 ಆಗಸ್ಟ್ 6, ಏವೂರು.

[6] H.A.S.18,  No 11, ಕ್ರಿ.ಶ. 1136, ಮಾದಿನೂರು, ಕೊಪ್ಪಳ (ತಾ)

[7] ಶಾಸನ ಪರಿಚಯ (ಸಂ), ಡಾ. ಪಿ. ಬಿ. ದೇಸಾಯಿ, ಶಾ. ಸಂ. 22, ಕ್ರಿ. ಶ. 1889, ಕೌಲೂರು, ಕೊಪ್ಪಳ (ತಾ)

[8] ಅದೇ ಶಾ. ಸಂ.23, ಕ್ರಿ. ಶ. 991, ತಳಕಲ್ಲು, ಕೊಪ್ಪಳ (ತಾ)

[9] ಜೆ. ಎಂ. ನಾಗಯ್ಯ, ಆರನೆ ವಿಕ್ರಮಾದಿತ್ಯನ ಶಾಸನಗಳು ಪು. 105

[10] ಶಾಸನ ಪರಿಚಯ No. 32, ಕ್ರಿ.ಶ. 897 ಮಾರ್ಚ್ 14, ಮುಧೋಳ, ಯಲಬುರ್ಗಿ (ತಾ)

[11] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪುಟ 209, ಶಾ. ಸಂ 17, ನಾರಿಹಳ್ಳ (ತಾರನಗರ), ಸಂಡೂರು (ತಾ) “ವಿಲ್ವೊಲ ವಿಷಯಾನ್ತರ್ಗತ ಪೊನ್ನಗುಂದೆ ತ್ರಿಂಶನ್ಮಧ್ಯಗತಾಗ್ರಹಾರ ವೇಹುರೆ”.

[12] S I I 6, 558, ಹೇಮಾವತಿ, ಮಡಕಶಿರ (ತಾ)

[13] ಪೂರ್ವೋಕ್ತ ಸುರಪುರ ತಾಲೂಕಿನ ಶಾಸನಗಳು, ನಂ. 37, ಕ್ರಿ.ಶ. 1071 ಡಿಸೆಂಬರ್ 24, ತಿಂಥಿಣಿ, ಸುರಪುರ (ತಾ)

[14] ನೋಡಿ EC III Nj. 175, 193,  ಕ್ರಿ. ಸ. 8 ನೇ ಶತಮಾನ, ಬಸವನ ಪುರ ಮತ್ತು ಮಾಡಹಳ್ಳಿ ಅದೇ 220, ಕ್ರಿ. ಶ. 1196, ಸುತ್ತೂರು.

[15] ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು (ಸಂ) ಡಾ. ಚನ್ನಬಸವ ಹಿರೇಮಠ, ಮಸ್ಕಿ 1999, ಶಾ. ಸಂ. 6, ಕ್ರಿ.ಶ. 927, ಎರಡೋಣೀ, ಲಿಂಗಸೂಗೂರು (ತಾ)

[16] ಬಲ್ಲಕುಂದೆ-300 ವಿಭಾಗಕ್ಕೆ ಆರಂಭದಲ್ಲಿ ಬಲ್ಲಕುಂದೆ ಗ್ರಾಮವೆ ರಾಜಧಾನಿಯಾಗಿದ್ದು, ಮುಂದೆ ಅದು ಕುರುಗೋಡು ಪಟ್ಟಣಕ್ಕೆ ಸ್ಥಳಾಂತರಗೊಂಡಿತು.

[17] H. A. S 18 No 2 ಕ್ರಿ. ಶ. 1010 ನವೆಂಬರ್ 10, ಮಸ್ಕಿ, ಲಿಂಗಸೂಗೂರು (ತಾ) ಅದೇ No. 3, ಕ್ರಿ. ಶ. 1027 ಡಿಸೆಂಬರ್ 24, ಮಸ್ಕಿ ಅದೇ No. 4, ಕ್ರಿ. ಶ. 1032 ಫೆಬ್ರುವರಿ 21 ಮಸ್ಕಿ.

[18] S.I.I. 9(1) ಕ್ರಿ.ಶ.1085,ಗುತ್ತಿ, ಗುತ್ತಿ(ತಾ) ಅನಂತಪುರ (ಜಿ)

[19] ಪೂರ್ವೋಕ್ತ, ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು ಶಾ.ಸಂ. 6 ಕ್ರಿ. ಶ. 927, ಎರಡೋಣಿ, ಲಿಂಗಸೂರು (ತಾ), ರಾಯಚೂರು (ಜಿ)

[20] E.I. 35, No. 2, ಕ್ರಿ.ಶ. 1046 ಡಿಸೆಂಬರ್ 24, ಕೀಲಾರಟ್ಟಿ , ಲಿಂಗಸೂರು (ತಾ), ಮತ್ತು ಬನ್ನಿಕೊಳ (1055), ಕುರಡಿ (1119), ಆದರೆ ಲಿಂಗಸೂರು ತಾಲೂಕಿನ ಎರಡು ಶಾಸನಗಳಲ್ಲಿ (1077 & 1124) “ಕರಡಿಕಲ್ನಾನೂಱ” ಪದ ಬಳಕೆಯಾಗಿದೆ. ಮುಂದೆ ಮುದುಗಲ್ಲು ಶಾಸನ (1215)ದಲ್ಲಿ “ಕರಡಿಕಲ್ಮುಂನೂಱಱ” ಉಲ್ಲೇಖವಿದೆ. ಆದ್ದರಿಂದ ಶಾಸನ ರೂವಾರಿಯ ಅವಜ್ಞೆ ಇಲ್ಲವೆ ವಿದ್ವಾಂಸರ ತಪ್ಪು ಓದಿನ ದೋಷ ಕಾರಣವಾಗಿ ‘ಕರಡಿಕಲ್ಮೂ’ ದ ಬದಲಾಗಿ ‘ಲ್ನಾ’  ಶಬ್ದವು ಸೇರಿಕೊಂಡಿದೆಯೆಂದು ಹೇಳಬಹುದು.

[21] HAS  18 No. 16 ಕ್ರಿ.ಶ. 1191 ಜೂನ್ 23, ಕರಡಿಕಲ್ಲು, ಲಿಂಗಸೂರು (ತಾ) ಕರಡಿಕಲ್ಲು ವಿಭಾಗವನ್ನು ಆಳುತ್ತಿದ್ದ ಕದಂಬ ವಂಶದ ಬಿಜ್ಜರಸನು “ರಾಜಧಾನಿ ಮುದುಗಲ್ಲ ಪಟ್ಟಣದೊಳು ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯತ್ತಿ” ದ್ದನೆಂದು ಶಾಸನವು ಸ್ಪಷ್ಟವಾಗಿ ಹೇಳಿದೆ.

[22] ಜೆ. ಎಂ. ನಾಗಯ್ಯ, ಆರನೇ ವಿಕ್ರಮಾದಿತ್ಯನ ಶಾಸನಗಳು -ಒಂದು ಅಧ್ಯಯನ, 1992, ಪು. 109.

[23] ಡಾ. ಬಿ. ವ್ಹಿ. ಶಿರೂರು, ಯಲಬುರ್ಗಿಯ ಸಿಂದರು, ಕವಿವಿ ಧಾರವಾಡ,1977 ಪು.3 ಮತ್ತು ಪೂರ್ವೋಕ್ತ ಆರನೆ ವಿಕ್ರಮಾದಿತ್ಯನ ಶಾಸನಗಳು, ಪು.109

[24] HAS 18 No 11 ಕ್ರಿ. ಶ.1136, ಮಾದಿನೂರು ಕೊಪ್ಪಳ (ತಾ)

[25] ಡಾ. ಚನ್ನಬಸವಯ್ಯ ಹಿರೇಮಠ, ಕುರುಗೋಡು ಸಿಂದರು – ಒಂದು ಅಧ್ಯಯನ, 1995, ಪು.333, ಶಾ. ಸಂ.22 , ಕ್ರಿ.ಶ. 1101, ದೇವರಗುಡಿ, ಸಿಂಧನೂರು (ತಾ)

[26] ARIE, B.No 100/85-86, ಕ್ರಿ.ಶ.1202, ದೇವರಗುಡಿ ಸಿಂಧನೂರು (ತಾ)

[27] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-1, ಪು. 554-55, ಶಾ.ಸಂ 97, ಕ್ರಿ. ಶ. 1018, ಬಾಗಳಿ, ಹರಪನಹಳ್ಳಿ (ತಾ), ದಾವಣಗೆರೆ (ಜಿ) ಮತ್ತು ಅದೇ ಪು. 603-4, ಶಾ.ಸಂ. 136, ಕ್ರಿ. ಶ. 1018 ಡಿಸೆಂಬರ್ 23, ಬಾಗಳಿ, ಹರಪನಹಳ್ಳಿ (ತಾ).

[28] ಪೂರ್ವೋಕ್ತ ಕುರುಗೋಡು ಸಿಂದರು, ಪು, 336, ಶಾ.ಸಂ. 24, ಕ್ರಿ.ಶ. 1063, ಸಾಲಗುಂದೆ, ಸಿಂದನೂರು (ತಾ).

[29] ಅದೇ ಪು. 335, ಶಾ.ಸಂ.23, ಕ್ರಿ.ಶ. 1053 ಏಪ್ರಿಲ್ 24, ರೌಡಕುಂದೆ, ಸಿಂಧನೂರು (ತಾ), ದೇವರಗುಡಿಯ ಕ್ರಿ.ಶ. 23, ಕ್ರಿ.ಶ. 1101ರ ಶಾಸನ “ಕೆಳವಾಡಿನಾಡ  xxxxxx ನಾಡೊಳಲ್ಲಿ ಚೆಲ್ವೆನಿಸೆ ಮಷ್ಟಾರವೆಯೆ [ಪ್ಪತ್ತು]” ಎಂದು ಸ್ಪಷ್ಟವಾಗಿ ಹೇಳಿದೆ ಅದೇ ಪು. 333.

[30] ಅದೇ. ಪು. 340  ಶಾ.ಸಂ. 26 ಕ್ರಿ.ಶ. 1153, ಸಾಲಗುಂದೆ, ಸಿಂಧನೂರು (ತಾ).

[31] ARSIE, B No 578/61-62, ಕ್ರಿ.ಶ.1079, ಕುರಡಿ, ಮಾನ್ವಿ (ತಾ).

[32] ಗವಿದೀಪ್ತಿ (ಸಂ) ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಮತ್ತು ಇತರರು, ಕೊಪ್ಪಳ, 1976, ಪು. 136 ಡಾ. ಶ್ರೀನಿವಾಸ ರಿತ್ತಿ ಅವರ ‘ಕೊಪ್ಪಳನಾಡಿನ ಶಾಸನಗಳು’ ಲೇಖನ.

[33] S.II 9(1) 155, ಕ್ರಿ.ಶ. 1086 ಡಿಸೆಂಬರ್ 25, ಚಿನ್ನತುಂಬಳ, ಆದೋನಿ (ತಾ).

[34] ಕ. ವಿ. ವಿ. ಶಾ ಸಂ -1, ಪು. 292, ಶಾಸಂ. 30, ಕ್ರಿ. ಶ. 1086 ಡಿಸೆಂಬರ್ 25, ಚಿಮ್ನಹಳ್ಳಿ, ಹರಪನಹಳ್ಳಿ (ತಾ), ದಾವಣಗೆರೆ (ಜಿ) ಮೇಲಿನ ಚಿನ್ನತುಂಬಳ ಶಾಸನದಲ್ಲಿಯೂ ಬೇವಿನೂರಿನ ಉಲ್ಲೇಖವಿದೆ.

[35] HAS – 18,  No. 15 , ಕ್ರಿ. ಶ. 1191 ಅಕ್ಟೋಬರ್ 31, ಬಳಗಾನೂರು, ಸಿಂಧನೂರು (ತಾ)  ಹೈಹಯವಂಶದ ಮಹಾಮಂಡಳೇಶ್ವರ ಮಲ್ಲಿದೇವರಸನು “ಲಕ್ಷ್ಮೀನಿಳಯ ಮದನ ಸಿರಿಊರ ರಾಜಧಾನಿಯೊಳು ಸುಖಸಂಕಥಾ ವಿನೋದದಿಂ”ದ ಆಳುತ್ತಿದ್ದನೆಂದು ಶಾಸನವು ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ಕವಿತಾಳ ಶಾಸನ (ARIE No. 380/57-58) ವು. ಕ್ರಿ. ಶ. 1217ರಲ್ಲಿ ಇಮ್ಮಡಿ ಮಲ್ಲಿದೇವನು ಅಯ್ಯಣ ಸಿರಿವುರದಿಂದ ಆಳುತ್ತಿದ್ದನೆಂದು ಹೇಳಿದೆ.

[36] ARSIE B No. 825/62-63, ಕ್ರಿ.ಶ. ೧೦೩೫, ನುಗಡೋಣಿ, ಮಾನ್ವಿ (ತಾ)

[37] ಅದೇ B.No. 570/61-62, ಕ್ರಿ. ಶ. 1069, ಕಪಗಲ್ಲು, ಮಾನ್ವಿ (ತಾ)

[38] ಕಲ್ಬುರ್ಗಿ ಜಿಲ್ಲೆಯ ಶಾಸನಗಳು (ಸಂ) ಹನುಮಾಕ್ಷಿಗೋಗಿ, ಶಾ ಸಂ. ೪೮, ಕ್ರಿ. ಶ. 1136, ಮಲ್ಲಾಬಾದ, ಜೇವರ್ಗಿ (ತಾ).

[39] ಪೂರ್ವೋಕ್ತ ಸುರುಪುರ ತಾಲೂಕಿನ ಶಾಸನಗಳು, ಶಾ ಸಂ. 31, ಕ್ರಿ. ಶ.1054, ಕೆಂಬಾವಿ.