ಸಂಪ್ರದಾಯಸ್ಥ ನರಸಿಂಹ ಅಯ್ಯಂಗಾರ್-ರುಕ್ಮಮ್ಮ ದಂಪತಿಗಳ ಕಡೆಯ ಪುತ್ರಿಯಾಗಿ, ಐದು ಜನ ಅಕ್ಕಂದಿರು, ನಾಲ್ವರು ಅಣ್ಣಂದಿರುಗಳ ವಾತ್ಸಲ್ಯದ ಸೋದರಿಯಾಗಿ ೧೮-೯-೧೯೨೨ರಲ್ಲಿ ಜನಿಸಿದವರು ಚೊಕ್ಕಮ್ಮ. ಅಕ್ಕ-ಭಾವನ ಅಕ್ಕರೆಯಲ್ಲಿ ಬೆಳೆದ ಇವರಿಗೆ ಮನೆಯ ವಾತಾವರಣದಲ್ಲಿ ಬೆರೆತು ಹೋಗಿದ್ದ ಸಂಗೀತ ಕಲೆಯಲ್ಲಿ ಸಹಜವಾಗಿಯೇ ಆಸಕ್ತಿ ಇತ್ತು. ಮೊದಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಆರಂಭಿಸಿ ಸ್ವರಮೂರ್ತಿ ವಿ.ಎನ್‌.ರಾವ್‌ ನಂತರ ಡಾ||ಬಿ. ದೇವೇಂದ್ರಪ್ಪ, ಟಿ. ಪುಟ್ಟಸ್ವಾಮಯ್ಯ, ಕೆ. ವಾಸುದೇವಾಚಾರ್, ತಿಟ್ಟೆ ಕೃಷ್ಣಯ್ಯಂಗಾರ್, ಡಿ. ಶೇಷಪ್ಪ ಇವರುಗಳ ಮಾರ್ಗದರ್ಶನ ಹೊಂದಿ ಸತತ ಅಭ್ಯಾಸದಿಂದ ವೀಣೆ ನುಡಿಸುತ್ತ ಅದರೊಡನೆ ಮಧುರವಾದ ತಮ್ಮ ಧ್ವನಿ ಸೇರಿಸಿ ಹಾಡುವುದನ್ನು ಕರಗತ ಮಾಡಿಕೊಂಡರು. ೧೯೩೮ರಿಂದಲೂ ಆಕಾಶವಾಣಿಯಿಂದ ಇವರ ಕಾರ್ಯಕ್ರಮಗಳು ಮೂಡಿ ಬರುತ್ತಿವೆ. ನಾಡಿನ ಮತ್ತು ಹೊರ ನಾಡುಗಳ ಹಲವೆಡೆಗಳಲ್ಲಿ ಕಛೇರಿ ಮಾಡಿ ಜನರ ಮೆಚ್ಚುಗೆ ಗಳಿಸಿರುವ ಹಿರಿಮೆ ಇವರದು. ಹಿಂದಿ, ಸಂಸ್ಕೃತ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ಇವರು ಅನೇಕ ಸಂಘ-ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ.

‘ಸ್ವರ ಕಿನ್ನರಿ’, ‘ವೀಣಾ ವಾದನ ಚತುರೆ’, ‘ಕರ್ನಾಟಕ ಕಲಾ ತಿಲಕ’, ‘ಗಾನ ಕಲಾ ಭೂಷಣ’ ಮುಂತಾದ ಬಿರುದುಗಳನ್ನು ಗಳಿಸಿರುವ ಚೊಕ್ಕಮ್ಮನವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ದಿನವೂ ವೀಣೆ ನುಡಿಸುವುದು, ಆಕಾಶವಾಣಿ ಧ್ವನಿಸುರುಳಿಗಳ ಮೂಲಕ ಸಂಗೀತ ಆಲಿಸುವುದು ಚೊಕ್ಕಮ್ಮನವರ ಇಂದಿನ ಇಳಿ ವಯಸ್ಸಿನ ದಿನಗಳಲ್ಲಿನ ಪ್ರಿಯವಾದ ಹವ್ಯಾಸವಾಗಿದೆ.