ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ೬೯ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರಿನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕನ್ನಡ ಜನತೆಯನ್ನು ಉದ್ದೇಶಿಸಿ ಶ್ರೀ ಅನಂತಮೂರ್ತಿಯವರು ರಚಿಸಿರುವ ನಾಡುನುಡಿಯನ್ನು ಕುರಿತ ವಿಚಾರ ಪ್ರಚೋದಕ ಪ್ರಬಂಧಗಳನ್ನೆಲ್ಲಾ ಒಂದು ಕಡೆ ತಂದು ಪ್ರಕಟಿಸುವ ವಿಚಾರವನ್ನು ಪರಿಷತ್ತು ಹಮ್ಮಿಕೊಂಡಿತು. ನಮ್ಮ ಈ ಆಶಯಕ್ಕೆ ಕೂಡಲೇ ಪ್ರತಿಸ್ಪಂದಿಸಿದ ಡಾ. ಯು.ಆರ್. ಅನಂತಮೂರ್ತಿಯವರು ತಮ್ಮ ಕೃತಿಗಳಿಂದ ತಾವೇ ಆಯ್ದ ಲೇಖನಗಳ ಸಂಗ್ರಹಗಳನ್ನು ಸಿದ್ಧಪಡಿಸಿದ್ದಾರೆ.

ಶ್ರೀ ಮೂರ್ತಿಯವರ ಲೇಖನಗಳು ನಮ್ಮ ಮನಸ್ಸನ್ನು ಮುಟ್ಟುವಂತೆ ಹೊಸ ವಿಚಾರ ಚಿಂತನೆಗೆ ದಾರಿ ಮಾಡಿದರೆ ನಮ್ಮ ಉದ್ದೇಶ ಸಾರ್ಥಕವಾದಂತೆ. ಈ ಲೇಖನಗಳನ್ನು ಆಯ್ದುಕೊಟ್ಟ ಡಾ. ಯು.ಆರ್. ಅನಂತಮೂರ್ತಿಯವರಿಗೂ, ಅವರಿಗೆ ಈ ಕೆಲಸದಲ್ಲಿ ನೆರವಾದ ಶ್ರೀ ಎಸ್. ರಾಮಲಿಂಗೇಶ್ವರ (ಸಿಸಿರಾ) ಅವರಿಗೂ, ಪ್ರಕಟಿಸಲು ನೆರವಾದ ಪ್ರಕಟಣಾ ಸಮಿತಿಗೂ, ಮುದ್ರಿಸಿದ ಬಿ.ಎಂ.ಶ್ರೀ ಅಚ್ಚುಕೂಟದ ಸಿಬ್ಬಂದಿಗಳಿಗೂ ನನ್ನ ವಂದನೆಗಳು.

ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು
ಅಧ್ಯಕ್ಷರು