ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನದ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಲಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ಕೆಲವು ತಿಂಗಳುಗಳು ಹಿಂದೆ ನಾನು ಎಂ.ಎಸ್.ಐ.ಎಲ್.ಗೆ ಭೇಟಿ ನೀಡೆದ್ದೆ. ಆ ಸಂದರ್ಭದಲ್ಲಿ ಅದರ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ಬಿ.ವಿ. ಕುಲಕರ್ಣಿ ಅವರ ಪರಿಚಯವಾಯಿತು. ಕನ್ನಡ ವಿಶ್ವವಿದ್ಯಾಲಯದ ಉದ್ದೇಶ ಮತ್ತು ಪ್ರಗತಿಯ ಬಗ್ಗೆ ಮಾತನಾಡುತ್ತ ಅವರು ಶ್ರೀ ಕೃಷ್ಣಕುಮಾರ ಕಲ್ಲೂರ ಅವರ ಹೆಸರನ್ನು ಪ್ರಸ್ತಾಪಿಸಿ ಅವರು ಈ ಹಿಂದೆ ಬರೆದಿದ್ದ ‘ಕನ್ನಡ ನಾಡಿನ ಸಂಚಾರ – ಸಂಪರ್ಕ’ ಎಂಬ ಪ್ರಬಂಧ ಕರ್ನಾಟಕದ ಬಹುಮುಖಿ ಅಭಿವೃದ್ಧಿಯ ಬಗ್ಗೆ ಅಸಕ್ತರಾದವರಿಗೆ ವಿಶಿಷ್ಟ ತಿಳುವಳಿಕೆಯನ್ನು ನೀಡುವ ಸತ್ವವನ್ನು ಒಳಗೊಂಡಿದೆ ಎಂದೂ ಅದನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದರೆ ಕನ್ನಡ ನಾಡಿನ ಬಗ್ಗೆ ಆಸಕ್ತಿ ಇರುವವರಿಗೆ ಒಳ್ಳೆಯ ಮಾಹಿತಿ ದೊರೆಯುವುದೆಂದು ಸೂಚಿಸಿದರು. ಈ ಸೂಚನೆ ನನ್ನ ಆಸಕ್ತಿಯನ್ನು ಅರಳಿಸಿತು. ಈ ಹಿಂದೆ ಶ್ರೀ ಕೃಷ್ಣಕುಮಾರ ಕಲ್ಲೂರ ಅವರ ಹೆಸರನ್ನು ಕೇಳಿದ್ದೆ ಮತ್ತು ಮೈಸೂರು ರಾಜ್ಯ ಸಂಪುಟದಲ್ಲಿ ಅವರ ಲೇಖನವನ್ನು ಓದಿದ ನೆನಪು ಮಸುಕಾಗಿತ್ತು. ಅದನ್ನು ದೊರಕಿಸಿಕೊಂಡು ಪರಿಶೀಲಿಸಿ ಪ್ರಕಟಿಸುವುದಾಗಿ ಅವರಿಗೆ ಭರವಸೆಯಿತ್ತು ಬಂದೆ. ಮಿತ್ರರಾದ ಪ್ರೊ. ಕೆ.ವಿ. ನಾರಾಯಣ ಅವರೊಡನೆ ಈ ವಿಷಯವನ್ನು ಪ್ರಸ್ತಾಪಿಸಿದೆ. ಅವರು ಈ ಬಗ್ಗೆ ವಿಶೇಷ ಆಸಕ್ತಿ ತಳೆದು ಅದನ್ನು ಶ್ರಮವಹಿಸಿ ಹುಡುಕಿಸಿಕೊಟ್ಟರು. ಅದನ್ನು ಮತ್ತೊಮ್ಮೆ ನಾವು ಓದಿದ ನಂತರ ಹೆಚ್ಚು ಕಡಿಮೆ ಅರ್ಧ ಶತಮಾನದ ಹಿಂದೆ ಶ್ರೀ ಕಲ್ಲೂರ ಅವರು ಬರೆದ ಈ ಅಧ್ಯಯನಪೂರ್ಣ ಪ್ರಬಂಧ ಇಂದಿಗೂ ಪ್ರಸ್ತುತವೆನಿಸಿತು. ಅದರ ಫಲಿತವೇ ಈ ಪುನರ್ ಮುದ್ರಿತ ಪುಸ್ತಕ.

ಈಗ್ಗೆ ೪೫ ವರ್ಷಗಳ ಹಿಂದೆ ಕರ್ನಾಟಕ ಏಕೀಕರಣವಾದ ಐತಿಹಾಸಿಕ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕದ ಸಮಗ್ರ ಆಯಾಮಗಳನ್ನು ಕುರಿತ ವಿಷಯ ಸಮೃದ್ಧವೂ ಸಂಶೋಧನಾತ್ಮಕವೂ ಆದ ವಿದ್ವತ್ ಪ್ರಬಂಧಗಳನ್ನು ಪ್ರಕಟಿಸಿತು. ಕರ್ನಾಟಕದ ‘ಮೈಸೂರು ರಾಜ್ಯ’ ಎಂಬ ಹೆಸರಿನಲ್ಲಿ ಸಂಪುಟವೊಂದನ್ನು ಪ್ರಕಟಿಸಿತು. ಕರ್ನಾಟಕದ ವಿವಿಧಮುಖೀ ಅಭಿವೃದ್ಧಿಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ಗಂಭೀರ ಚಿಂತನೆಯ ಬರಹಗಳನ್ನು ಒಳಗೊಂಡ ಆ ಸಂಪುಟ ಒಂದು ವಿಶಿಷ್ಟ ಆಕರ ಗ್ರಂಥ. ಈ ಸಂಪುಟದಲ್ಲಿ ಆಡಕವಾಗಿದ್ದ ‘ಕನ್ನಡ ನಾಡಿನ ಸಂಚಾರ – ಸಂಪರ್ಕ’ ಎಂಬ ಈ ಪ್ರಬಂಧ ಹಲವು ದೃಷ್ಟಿಗಳಿಂದ ವಿಶಿಷ್ಟವಾದದ್ದು. ಕರ್ನಾಟಕ ಏಕೀಕರಣವಾದ ಸಂದರ್ಭದಲ್ಲಿ ಕರ್ನಾಟಕದ ಉದ್ದಗಲಕ್ಕೂ ಭಾವುಕವಾದ, ಅಭಿಮಾನದಿಂದ ಕೂಡಿದ ಉತ್ಸವಗಳು, ಸಮಾರಂಭಗಳು ನಡೆದವು, ಪುಸ್ತಕಗಳೂ ಪ್ರಕಟವಾದವು. ನಾಡೆಲ್ಲ ಒಂದಾದವೆಂಬ ಸಂಭ್ರಮದಲ್ಲಿ ಬೀಗಿತು. ಆ ಸಂಭ್ರಮದ ಆಶಾವಾದದ ಕಲ್ಪನೆಯ, ಭಾವುಕತೆಯ ಪ್ರವಾಹದಲ್ಲಿ ಕರ್ನಾಟಕದ ಬಗೆಗೆ ಮಿತಿಮೀರಿದ ಅವೇಶಪೂರ್ಣವಾದ ಬಣ್ಣದ ಬರಹಗಳು ಬಹುಪಾಲು ಪ್ರಕಟವಾದರೂ ಅವುಗಳಲ್ಲಿ ಕೆಲವಾದರೂ ಅತ್ಯಂತ ಆಳವೂ ವಿಸ್ತೃತವೂ ಆದ ಗಂಭೀರ ಚಿಂತನಾತ್ಮಕ ವಿಶ್ಲೇಷಣಾತ್ಮಕ ಮತ್ತು ಸಂಶೋಧನಾತ್ಮಕ ಲೇಖನಗಳು ಮತ್ತು ಕೃತಿಗಳು ಪ್ರಕಟವಾಗಿದ್ದು, ಆಗಿನ ಆಶೋತ್ತರಗಳನ್ನು ಮತ್ತು ವಿಚಾರಶೀಲತೆಯನ್ನು ಸಾದರಪಡಿಸುತ್ತವೆ. ಅಂತಹ ಒಂದು ಮುಖ್ಯ ಪ್ರಬಂಧ ಇದು. ಶ್ರೀ ಕೃಷ್ಣಕುಮಾರ ಕಲ್ಲೂರ ಅವರು ಕನ್ನಡ ನಾಡಿನ ಬಗೆಗಿನ ಅವೇಶಪೂರ್ಣ ಅಭಿಮಾನದ ನೆಲೆಯನ್ನಷ್ಟೆ ಆಧರಿಸಿ ಈ ಪ್ರಬಂಧವನ್ನು ರಚಿಸಿಲ್ಲ. ನಾಡಿನ ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಯ ಬಗ್ಗೆ ನಿರ್ದಿಷ್ಟವಾದ ಕಲ್ಪನೆ ಮತ್ತು ಚಿಂತನೆಗಳನ್ನು ಆಧಾರಭೂತವಾಗಿ ಇಲ್ಲಿ ಅವರು ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆಯಲ್ಲಿ ಸಮಗ್ರ ಕರ್ನಾಟಕದ ಬಗೆಗಿನ ಅವರ ವಿಶಾಲವೂ ನಿಶಿತವೂ ಆದ ದೂರದೃಷ್ಟಿ ಮತ್ತು ಅಧ್ಯಯನಶೀಲತೆ ಅರಳುಗಟ್ಟಿದೆ. ಈ ಪ್ರಬಂಧದ ಶೀರ್ಷಿಕೆ ಸಂಚಾರ, ಸಂಪರ್ಕವನ್ನು ಕುರಿತದ್ದಾಗಿದ್ದರೂ ನಾಡಿನ ಅಭಿವೃದ್ಧಿಯ ಬಗೆಗಿನ ಅವರ ಆಳವಾದ ಶ್ರದ್ಧೆ ಮತ್ತು ಬದ್ಧತೆಗಳು ಹಾಗೂ ಕಾರ್ಯಶೀಲ ಆಶಾವಾದಗಳು ಇಲ್ಲಿ ಮೈವೆತ್ತಿವೆ. ನಾಡು, ನುಡಿ, ಶಿಕ್ಷಣ, ಕೈಗಾರಿಕೆ, ಭೌಗೋಳಿಕ ಪರಿವೇಷ, ವ್ಯಾಪಾರ, ವಾಣಿಜ್ಯ, ಉದ್ಯೋಗ, ಅಂತರ ರಾಜ್ಯ ಸಂಬಂಧಗಳು, ಸಾಂಸ್ಕೃತಿಕ ಆಶಯಗಳು, ಗಡಿ ಚಿಂತನೆಗಳು, ಯೋಜನೆಗಳು ಮುಂತಾಗಿ ಹಲವು ಮುಖಗಳ ಸೂಕ್ಷ್ಮವೂ ಮತ್ತು ಅಧ್ಯಯನ ನಿಷ್ಠವೂ ಆದ ಚಿಂತನೆಗಳು ಇಲ್ಲಿ ಮೈಮುರಿಯುತ್ತಿವೆ. ಇದರೊಂದಿಗೆ ವಿಶಿಷ್ಟವಾಗಿ ಹಂಪಿಯ ಬಗೆಗಿನ ಅವರ ಶೋಧನಾ ದೃಷ್ಟಿ ಮತ್ತು ಸಾಂಸ್ಕೃತಿಕ ನಿಷ್ಠೆ ಹಾಗೂ ಕನಸುಗಳು ಇಲ್ಲಿ ತುಂಬ ಅರ್ಥವತ್ತಾಗಿ ನಿರೂಪಣೆಗೊಂಡಿವೆ. ಹೀಗಾಗಿ ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಅವರ ಮನದಾಳದ ಸಕಾರಣ ತುಡಿತ ಮತ್ತು ಮಿಡಿತಗಳು ಈ ಪ್ರಬಂಧದ ಮೂಲಕ ನಮಗೆ ಕೇಳಿಸುವಷ್ಟು ಹತ್ತಿರವಾಗುತ್ತವೆ. ಕರ್ನಾಟಕದ ಸಮಗ್ರಾಭಿವೃದ್ಧಿಯ ಬಗ್ಗೆ ಗಂಭೀರಾಸಕ್ತಿಯುಳ್ಳ ಪ್ರತಿಯೊಬ್ಬರೂ ಓದಬೇಕಾದ ಮನನ ಮಾಡಬೇಕಾದ, ಆಕೃತಿಯಲ್ಲಿ ಪುಟ್ಟದಾದರೂ ಆಶಯದಲ್ಲಿ ಮಹತ್ವವಾದ ಕೃತಿಯಿದು. ಈ ಪುಸ್ತಕದ ಸಂಪಾದಕರಾದ ಟಿ.ಆರ್. ಚಂದ್ರಶೇಖರ್ ಅವರು ವಿಸ್ತಾರವಾದ ಪ್ರಸ್ತಾವನೆಯನ್ನು ಬರೆದು ಈ ಕೃತಿಯ ಮಹತ್ವವನ್ನು ಮತ್ತು ಸಮಕಾಲೀನತೆಯನ್ನು ಎತ್ತಿಹಿಡಿದಿದ್ದಾರೆ. ಇದನ್ನು ಪ್ರಕಟಿಸುವುದು ವಿಶ್ವವಿದ್ಯಾಲಯಕ್ಕೆ ಅಭಿಮಾನದ ವಿಷಯವಷ್ಟೇ ಆಗಿರದೆ ಅಗತ್ಯದ ವಿಷಯವೂ ಆಗಿದೆ.

ಇಂಥದೊಂದು ಕೃತಿಯ ಬಗ್ಗೆ ಪ್ರಸ್ತಾಪಿಸಿ ನನ್ನ ಆಸಕ್ತಿಯನ್ನು ಕೆರಳಿಸಿದ ಶ್ರೀ ಪಿ.ವಿ. ಕುಲಕರ್ಣಿ ಅವರಿಗೆ ಮತ್ತು ಇದನ್ನು ಅಚ್ಚುಕಟ್ಟಾಗಿ ಸಂಪಾದಿಸಿಕೊಟ್ಟ ಟಿ.ಆರ್. ಚಂದ್ರಶೇಖರ್ ಅವರಿಗೆ ಮತ್ತು ಪುಸ್ತಕ ಪ್ರಕಟನೆಗೆ ಅನುಮತಿ ನೀಡಿದ ಕೃಷ್ಣಕುಮಾರ ಕಲ್ಲೂರ ಅವರ ಕುಟುಂಬ ವರ್ಗದವರಿಗೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು