ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ, ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯ ಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಕಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕರಿತು ಅಧ್ಯಯನ ಮಾಡುವ, ಸಂಶೊಧಿಸುವ ಮತ್ತು ಅದರ ಅಧ್ಯಯನದ ಫಲಿತಾಂಶಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗ್ಗೆಯನ್ನು ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥೀಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗುದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೆ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವ ನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ  ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವ ವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವ್ಕಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕರ್ನಾಟಕದ ವೈವಿಧ್ಯ ಮುಖಿಯಾದ ಮೌಖಿಕ ಸಾಹಿತ್ಯ ಸಂಪತ್ತಿನಲ್ಲಿ ಜನಪದ ಸಾಹಿತ್ಯ ಅವಗಣಿಸಲಾಗದ ಅಪಾರ ಸೃಜನಶೀಲ ಹಾಗೂ ಸಮಾಜಶೀಲ ಹೊಳಹುಗಳನ್ನು ಒಳಗೊಂಡಿದೆ ಎಂಬುದು ಈಗಾಗಲೇ ನಿಸ್ಸಂದೇಹವಾಗಿ ಸಾಬೀತಾಗಿದೆ. ಶಿಷ್ಟ ಸಾಹಿತ್ಯದಷ್ಟೇ ಸಮೃದ್ಧಿ, ವೈಫುಲ್ಯ ಹಾಗೂ ವಿವಿಧತೆಗಳನ್ನು ಒಳಗಂಡಿರುವ ಈ ಸಾಹಿತ್ಯ ಇಂದು ಆಧುನಿಕ ಸಾಹಿತ್ಯ ಧಾರಣ ಮಾಡಬಹುದಾದ ಎಲ್ಲ ಬಗೆಯ ವಿಮರ್ಶಾ ಸಿದ್ಧಾಂತಗಳಿಗೆ ಇಂಬುಗೊಡುವ ನಿತ್ಯ ಹರಿದ್ವರ್ಣದ ಸಾಹಿತ್ಯವಾಗಿ ಪರಿಣಮಿಸಿದೆ. ಜನಪದರು ಮುಗ್ಧರು ನಿಜ. ಪುರಾಣ ಮತ್ತು ಆ ಪುರಾಣಗಳಲ್ಲಿ  ಉಕ್ತರಾದ ದೇವಾನುದೇವತೆಗಳ ಸಾಹಸ ಮತ್ತು ಮಹಿಮೆಗಳನ್ನು ಮೈದುಂಬಿ ವಿವರಿಸುವ ಮತ್ತು ಅವುಗಳ ನಿರ್ದೇಶನದ ಮೂಲಕವಾಗಿಯೇ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮನೋಧರ್ಮ ಅವರದು. ಪರಲೋಕದ ಸೆಳೆತವುಳ್ಳ ಈ ಜನ ಅದೇ ಕಾಲಕ್ಕೆ ಇಹಲೋಕದ ಸೆಳೆತಗಳಿಂದ ಮತ್ತು ಅಲ್ಲಿನ ಜೀವನಮುಖಿಯಾದ ಆನಂದದಿಂದ ತಪ್ಪಿಸಿಕೊಳ್ಳಲು ಎಳೆಸಲಿಲ್ಲ. ಆದ್ದರಿಂದ ದೇವರ ನಾನಾ ಮುಖ ಮಹಿಮೆಗಳನ್ನು ತಮ್ಮ ಅಪ್ಪಟ ಸೃಜನಶೀಲ ಪ್ರತಿಭೆಯಿಂದ ಹೇಗೆ ಸಹಜವಾಗಿ, ಸಲೀಲವಾಗಿ, ಸತ್ವಪೂರ್ಣವಾಗಿ ವರ್ಣಿಸಿದ್ದಾರೆಯೋ ಹಾಗೆಯೇ ತಮ್ಮ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ಐತಿಹಸಿಕ, ಸಾಮಾಜಿಕ ಸಂಗತಿಗಳ ಬಗೆಗೂ ಅಷ್ಟೇ ಒತ್ತನ್ನು ಮತ್ತು ಮೌಲಿಕತೆಯನ್ನು ನೀಡಿದ್ಧಾರೆ ಎಂಬುದಕ್ಕೆ ಜನಪದ ಸಾಹಿತ್ಯದಲ್ಲಿ ದೊರಕುವ ಕಾವ್ಯಗಳು ಹಾಗೂ ಲಾವಣಿಗಳು ಸಾಕ್ಷಿ ನುಡಿಯುತ್ತವೆ. ತಮ್ಮನ್ನಾಳುವ ದೊರೆಗಳ ಬಗ್ಗೆ ಅವರ ಪ್ರಜಾಸೇವೆಯ ಬಗ್ಗೆ ಅವರು ಎಷ್ಟು ಕೃತಜ್ಞತೆಯಿಂದ ಮೈಮರೆತು ಹಾಡುತ್ತಾರೋ ಅಷ್ಟೇ ಮಟ್ಟಿಗೆ ತಮ್ಮ ದಿನನಿತ್ಯದ ಬದುಕನ್ನು ಹಸನುಗೊಳಿಸುವ ಕೆರೆ, ಕಾಲುವೆ, ರಸ್ತೆ, ದೇವಾಲಯ, ಮುಂತಾದವುಗಳನ್ನು ನಿರ್ಮಿಸಿದ ಹಾಗು ದೇಶಕ್ಕಾಗಿ ತ್ಯಾಗ ಮಾಡಿದ ಸಾಮಾನ್ಯ ಜೀವಿಗಳ ಯಶೋಗಾಥೆಯನ್ನೂ ಸಹ ಅಷ್ಟೇ ನಿಷ್ಠೆ ಯಿಂದ ಅವರು ಹಾಡುತ್ತಾರೆ. ಹೀಗಾಗಿ ಜನಪದ ಸಾಹಿತ್ಯದಲ್ಲಿ ಪುರಾಣಲೋ, ಇತಿಹಾಸ ಲೋಕಗಳು ವರ್ಣನೆ ಮತ್ತು ಉತ್ಪ್ರೇಕ್ಷೆಗಳ ಮೂಲಕ ಮೈದೋರುವಂತೆ ಸಾಮಾನ್ಯರ ಅಸಮಾನ ತ್ಯಾಗ, ಜನಸೇವೆ, ಸಮಾಜ ಕಾರ್ಯ ಮುಂತಾದ ಅಂಶಗಳು ಅಲ್ಲಿ ಕಾವ್ಯವಾಗಿ ಮೆರೆಯುತ್ತಿವೆ. ಜನಪದವೆಂಬುದು ಕಟ್ಟುಕತೆಯೆಂಬ ಮತ್ತು ಅದರಲ್ಲಿ ತಥ್ಯವೇನೂ ಇಲ್ಲವೆಂಬ ಚರಿತ್ರಕರರ ಸೀಮಿ ದೃಷ್ಟಿಯನ್ನು ಜನಪದ ಕಾವ್ಯಗಳ ಐತಿಹಾಸಿಕ ಮತ್ತು ಸಾಮಾಜಿಕ ಅಂಶಗಳ ಗಾಢತೆ ತಿದ್ದುತ್ತಲಿದೆ. ಶುದ್ಧ ಇತಿಹಾಸ ಗುರುತಿಸಲಾಗದ ಜನಜೀವನದ ಒಳಾಂಶಗಳ ಮಹತ್ವವನ್ನು ಜನಪದ ಸಾಹಿತ್ಯದ ಮೂಲಕ ಇಂದು ಗುರುತಿಸಲಾಗುತ್ತಿದೆ. ಇತಿಹಾಸ ಮೌನವಾದ ಮತ್ತು ಸೋತ ಸಂದರ್ಭಗಳ ಪಿಗ್ಗನ್ನು ತುಂಬಲು, ಅವುಗಳ ಬಿಟ್ಟುಹೋದ ನಿಜಾಂಶಗಳನ್ನು ಗುರುತು ಹಚ್ಚಲು ಸಾಮಾನ್ಯ ಜನತೆಯ ಸೃಜನಶೀಲ ಸಾಹಿತ್ಯ ನೆರವಾಗುತ್ತಿದೆ. ಜನಪದರ ಕಲ್ಪನೆಯ ಗರ್ಭದಲ್ಲಿ ಶುದ್ಧ ಇತಿಹಾಸದ ಅಂಶಗಳು ಮಗ್ಗವಾಡುತ್ತಿರುವ ಬಗೆಯನ್ನು ಇತ್ತೀಚಿನ ವಿಮರ್ಶೆ ತೋರಿಸಿಕೊಟ್ಟಿದೆ. ಆದ್ದರಿಂದ ಒಂದು ನಾಡಿನ ಮತ್ತು ಜನಾಂಗದ ಸಮಗ್ರ ಇತಿಹಾಸವನ್ನು ಸಂಪೂರ್ಣವಾಗಿ ಕಟ್ಟಿಕೊಡುವಲ್ಲಿ ಲಿಖಿತ ಇತಿಹಾಸದ ಜೊತೆಗೆ ಅಲಿಖಿತವಾದ ಮೌಖಿಕ ಇತಿಹಾಸವನ್ನು ಒಂದು ಮುಖ್ಯ ಆಕಾರವೆಂದು ಸಂಶೋಧಕರು ಪರಿಗಣಿಸುತ್ತಿದ್ದಾರೆ. ಆದ್ದರಿಂದ ಜನಪದ ಇತಿಹಾಸ ಕಥನಗಳು ಲಿಖಿತ ಇತಿಹಾಸಕ್ಕೆ ಹೊಸ ಬೆರಗನ್ನು, ಬೆಡಗನ್ನು ಮತ್ತು ತುಂಬುತನವನ್ನು ತಂದುಕೊಡುತ್ತಿವೆ. ಆದರೆ, ಇಂತಹ ಅಲಿಖಿತ ಐತಿಹಾಸಿಕ ಪರಂಪರೆಯನ್ನು ನಿಸ್ವಾರ್ಥವಾದ ಮತ್ತು ಸತ್ಯ ಶೋಧಕವಾದ ನೆಲೆಯಿಂದ ಮತ್ತಷ್ಟು ಸಂಗ್ರಹಿಸುವ ಅಗತ್ಯ ಹೆಚ್ಚಾಗಿದೆ.

ಮೇಲಿನ ಹಿನ್ನೆಲೆಯಲ್ಲಿ “ಕನ್ನೀರಾಂಬೆಯ ಕಥೆ” ಎಂಬ ಈ ಪುಟ್ಟ ಸಾಂಗತ್ಯ ಕೃತಿ ಒಂದು ಮಹತ್ವದ ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಾದ್ಯಂತ ಹರಡಿಕೊಂಡಿರುವ ಜನೋಪಯೋಗಿಯಾದ ರಸ್ತೆ, ದೇವಸ್ಥಾನಗಳ ನಿರ್ಮಾಣ, ಸಾಲುಮರಗಳ ನೆಡುವಿಕೆ, ಕೆರೆ, ಕುಂಟೆ, ಬಾವಿ, ಕೊಳಗಳ ತೋಡಿಕೆ ಇವೆಲ್ಲ ಅಧಿಕಾರ ಸಂಪನ್ನ, ರಾಜ ಮಹರಾಜರುಗಳ ಜಕೊಡುಗೆಯಾಗಿರುವುದಕ್ಕಿಂತ ಹೆಚ್ಚಾಗಿ ಹಳ್ಳಿಯ ಸಾಮಂತರು, ಶ್ರೀಮಂತರು, ಉದಾರ ಹೃದಯಿಗಳಾದ ಜನಸಾಮಾನ್ಯರು ನೀಡಿದ ಕೊಡುಗೆಗಳಾಗಿವೆ. ತಮ್ಮ ಬದುಕಿಗೆ ಕೃತಕೃತ್ಯತೆಯನ್ನು ಕಲ್ಪಿಸಿಕೊಳ್ಳಲು, ತಮ್ಮ ಸುತ್ತಮುತ್ತಲಿನ ಜನ ದೈನಂದಿನ ಮುಖ್ಯ ಅಗತ್ಯಗಳಿಂದ ವಂಚಿತರಾಗದಿರುವಂತೆ ನೋಡಿಕೊಳ್ಳಲು ಈ ಗ್ರಾಮೀಣ ಔದಾರ್ಯಶೀಲ ಶ್ರೀಮಂತರು ಸತತವಾಗಿ ಶ್ರಮಿಸಿದ್ದಾರೆ. ತಮ್ಮ ಗ್ರಾಮಸೇವೆ ಮತ್ತು ಜನಸೇವೆಗಳು ದೇವಸೇವೆಗಿಂತ ಮಿಗಿಲೆಂಬ ಶ್ರದ್ಧಾನ್ವಿತ ನಂಬಿಕೆ ಅವರದಾಗಿದೆ. ಈ ಕಾರಣದಿಂದ ರಾಜರ ಆಸ್ಥಾನದ ಆಶೀರ್ವಾದವನ್ನು ಪಡೆದ ಶ್ರೀಮಂತರ ಜೊತೆಗೆ ಹಳ್ಳಿ ಹಳ್ಳಿಗಳ ಹಣವಂತ ಜನ ಕೆರೆ, ಕಟ್ಟೆಗಳ ನಿರ್ಮಾಣದ ಜಲಸೇವೆಗೆ ಕಂಕಣಕಟ್ಟಿ ದುಡಿದು ಸಾಮಾನ್ಯರ ಬದುಕನ್ನು ಹಸನುಮಾಡಿದ ಸರಳವಾದರೂ ರೋಚಕವಾದ ಕಥೆಗಳು ನಮ್ಮ ಸಾಗಿತ್ಯದಲ್ಲಿ  ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. “ಕನ್ನೀರಾಂಬೆಯ ಕಥೆ” ಇಂತಹ ಒಂದು ಇತಿಹಾಸ ಮತ್ತು ಜನಪದಗಳ ಸಂಗಮದಿಂದ ಹುಟ್ಟಿದ ಕಾವ್ಯ. ಮದಗದ ಕೆರೆ, ಸೊಳೆಕೆರೆ, ಹೊನ್ನಮ್ಮನ ಕೆರೆ ಮುಂತಾದ ಕೆರೆಗಳ ನಿರ್ಮಾನದ ಹಿನ್ನೆಲೆಯ ಸ್ತ್ರೀಯರ ತ್ಯಾಗಮಯವಾದ ಅನನ್ಯ ಸಾಹಿತ್ಯ ನಮ್ಮಲ್ಲಿ ಹೇರಳವಾಗಿದೆ. ವಿಜಯನಗರದ ಕಾಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ಅಂಶಗಳ ಹೆಣಿಗೆಯ ಜೊತೆಗೆ ಸಾರ್ವಕಾಲಿಕವಾದ ಲೋಕೋಪಕಾರಿಯಾದ ಜೀವತ್ಯಾಗದ ಕಥೆ ಇಲ್ಲಿ ಮೈದುಂಬಿಕೊಂಡಿದೆ. ಮುದ್ದ ಪ್ಪನಾಯಕ ಕಟ್ಟಿಸಿದ ಕೆರೆಯಲ್ಲಿ ನೀರು ತುಂಬದಿದ್ದಾಗ ಏಳು ವರ್ಷದ ಬ್ರಾಹ್ಮಣ ಕನ್ಯೆಯನ್ನು ಆಹುತಿಯಗಿ ನೀಡಿದ ಕರುಳು ಕರಗುವ ಕಥೆ ಇಲ್ಲಿದೆ. ಕೆರೆಯ ನಿರ್ಮಾತೃವಿನ ನಿಸ್ವಾರ್ಥವಾದ ತ್ಯಾಗ ಮನೋಭಾವ, ಕೆರೆ ಕಟ್ಟಿಸಿಯೂ ನೀರು ತುಂಬದಿದ್ದಾಗ ಆತ ಪಡುವ ಯಾತನೆ, ಚಿಕ್ಕ ವಯಸ್ಸಿನ ಕನ್ಯಯೊಬ್ಬಳ್ಳನ್ನು ಬಲಿ ಕೊಡಬೇಕೆಂಬುದರ ಪ್ರಸ್ತಾವ, ಆ ಕನ್ಯೆಯ ಕೌಟುಂಬಿಕ ಸಂದರ್ಭಗಳು, ವೈಯಕ್ತಿಕವಾದ ಸಾಂಸಾರಿಕ ಮೋಹವನ್ನು ಗೆದ್ದು ಸಮಾಜ ಬದುಕಲಿ ಎಂಬ ದಿವ್ಯ ಆಕಾಂಕ್ಷೆಯಿಂದ ವೈಯಕ್ತಿಕ ಬದುಕನ್ನು ಬಲಿಕೊಡುವ ಬಗೆ ಈ ಎಲ್ಲ ಆರ್ದ್ರವಾದ ಕರುಣಪೂರ್ಣವಾದ ಅಭಿವ್ಯಕ್ತಿಯನ್ನು ಇಲ್ಲಿ ಪಡೆದಿವೆ. “ತ್ಯಾಗವೇ ಬದುಕು, ಸ್ವಾರ್ಥವೇ ಸಾವು” ಎಂಬುದನ್ನು ಪ್ರಸ್ತುತಪಡಿಸಿ ಜನಮಾನಸದಲ್ಲಿ ತ್ಯಾಗ ಗುಣವನ್ನು ಉದ್ದೀಪಿಸುವ ಮತ್ತು ಗ್ರಾಮ ಸೇವೆ, ಸಮಾಜ ಸೇವೆಯೇ ದೈವ ಸೇವೆ ಎಂಬ ಆಚಲವಾದ ನಂಬಿಕೆ ಇಲ್ಲಿ ಹೃದ್ಯವಾದ ಅಭಿವ್ಯಕ್ತಿಯನ್ನು ಪಡೆದಿದೆ. ಜನಪ್ರಿಯವದ ಸಾಂಗತ್ಯದ ಛಂದಸ್ಸಿನಲ್ಲಿ ಮೂಡಿಬಂದಿರುವ ಈ ಚಿಕ್ಕಕಾವ್ಯ ತನ್ನ ರಸಾರ್ದ್ರತೆಯಿಂದ ಮೌಲಿಕ ಜೀವನ ಪ್ರತಿಪಾದನೆಯಿಂದ ಹಾಗೂ ಭಾಷೆಯ ಸಹಜ ಸೊಗಡಿನಿಂದ ಕಂಗೊಳಿಸುತ್ತದೆ. ಇದೇ ಆಶಯವನ್ನುಳ್ಳ, ಈಗಾಗಲೇ ಪ್ರಕಟವಾಗಿರುವ ಇತರ ಕಾವ್ಯಗಳ ಜೊತೆಗೆ ತೌಲನಿಕವಾಗಿ ಅಭ್ಯಾಸ ಮಾಡಲು ಈ ಕೃತಿ ಸಹಾಯಕವಾಗಿದೆ. ಇಂತಹದೊಂದು ಕೃತಿಯನ್ನು ಸಂಗ್ರಹಿಸಿ ಸಾಂಪಾದಿಸಿಕೊಟ್ಟ ಪ್ರೊ. ಎಂ. ಧ್ರುವನಾರಾಯಣ ಅವರ ಪರಿಶ್ರಮವನ್ನು ಪ್ರೀತಿಯಿಂದ ನೆನೆಯುತ್ತೇನೆ.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು