ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯೆಂಬುದು ಕರ್ನಾಟಕವನ್ನು ೧೯೫೬ ರಿಂದಲೂ ಕಾಡುತ್ತಿರುವ ಬಾಲಗ್ರಹ ಪೀಡೆಯಾಗಿದೆ. ಕರ್ನಾಟಕದ ಹುಟ್ಟಿನೊಂದಿಗೆ ಜನ್ಮ ತಳೆದ ರೋಗ ಇದಾಗಿದೆ. ವಾಸ್ತವವಾಗಿ ಇದು ಕರ್ನಾಟಕಕ್ಕೆ ವಿಶಿಷ್ಟವಾದ ಸಮಸ್ಯೆಯೇನಲ್ಲ.

ಆಂಧ್ರಪ್ರದೇಶದಲ್ಲಿ (ತೆಲಗಾಣ), ಮಹಾರಾಷ್ಟ್ರದಲ್ಲಿ (ಮರಾಠವಾಡ), ಗುಜರಾತಿನಲ್ಲಿ (ಕಚ್ ಪ್ರದೇಶ) ಒರಿಸ್ಸಾದಲ್ಲಿ (ಪಶ್ಚಿಮಭಾಗ) ಇಂತಹ ಸಮಸ್ಯೆಯಿರುವುದು ಕಂಡುಬರುತ್ತದೆ. ಕರ್ನಾಟಕದಲ್ಲಿನ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ಚಾರಿತ್ರಿಕವಾಗಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಇಂದು ನಾವು ಯಾವ ಜಿಲ್ಲೆಗಳನ್ನು ಅತ್ಯಂತ ಹಿಂದುಳಿದ ಜಿಲ್ಲೆಗಳೆಂದು ವರ್ಗೀಕರಿಸುತ್ತಿದ್ದೇವೆಯೋ ಅವು ಒಂದು ರೀತಿಯ ಚಾರಿತ್ರಿಕ ವಿಕಲತೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ವಸಾಹತುಶಾಹಿ ಆಡಳಿತಕ್ಕೆ ಮತ್ತು ಅಭಿವೃದ್ಧಿಗೆ ಒಳಪಡದಿದ್ದ ಪ್ರದೇಶಗಳೇ ಇಂದು ಹಿಂದುಳಿದಿರುವ ಸ್ಥಿತಿಯಲ್ಲಿವೆ.

ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದ ಉಗ್ರ ಚಳುವಳಿಯ ಕಾರಣವಾಗಿ ೧೯೫೩ರಲ್ಲಿ ಆಂಧ್ರ ಪ್ರಾಂತವನ್ನು ರಚಿಸಲಾಯಿತು. ಆದರೆ ತೆಲಗು ಮಾತನಾಡುವ ಒಂದು ಪ್ರದೇಶವು (ತೆಲಗಾಣ) ಹೈದರಾಬಾದ್ ನಿಜಾಮ ಸಂಸ್ಥಾನದಲ್ಲಿತ್ತು. ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸ್ಸಿಗನುಣವಾಗಿ ೧೯೫೬ರಲ್ಲಿ ನಿಜಾಮ ಪ್ರಾಂತವನ್ನು ಮೂರು ಭಾಗಗಳನ್ನಾಗಿ ವಿಭಜಿಸಲಾಯಿತು. ನಿಜಾಮ್ ಪ್ರಾಂತದಿಂದ ಮರಾಠಿ ಮಾತನಾಡುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಹೀಗೆ ಮಹಾರಾಷ್ಟ್ರಕ್ಕೆ ನಿಜಾಮ ಪ್ರಾಂತದಿಂದ ವರ್ಗಾವಣೆಯಾದ ಪ್ರದೇಶವನ್ನು ಇಂದು ಇಲ್ಲಿ ಮರಾಠವಾಡ ಪ್ರದೇಶವೆಂದು ಕರೆಯಲಾಗುತ್ತಿದೆ. ನಿಜಾಮ್ ಪ್ರಾಂತದಿಂದ ಕನ್ನಡ ಮಾತನಾಡುವ ಪ್ರದೇಶವನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು. ಅದನ್ನು ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಯಲಾಗುತ್ತಿದೆ. ತೆಲಗು ಮಾತನಾಡುವ ತೆಲಂಗಾಣ ಪ್ರದೇಶವನ್ನು ಆಂಧ್ರದ ಜೊತೆ ವಿಲೀನಗೊಳಿಸಲಾಯಿತು. ಹೀಗೆ ನಿಜಾಮ್ ಪ್ರಾಂತದಿಂದ ವರ್ಗಾವಣೆಯಾದ ಪ್ರದೇಶಗಳೆಲ್ಲವೂ ಸಂಬಂಧಿಸಿದ ರಾಜ್ಯಗಳಲ್ಲಿ ಹಿಂದುಳಿದ ಪ್ರದೇಶಗಳಾಗಿ ಇಂದಿಗೂ ದುಸ್ಥಿತಿ ಅನುಭವಿಸುತ್ತಿವೆ. ಮಹಾರಾಷ್ಟ್ರದಲ್ಲಿ ಪಶ್ಚಿಮ ಕರಾವಳಿ ಪ್ರದೇಶ, ಪೂನಾ-ಮುಂಬೈ ಪ್ರದೇಶವು ವಸಾಹತುಶಾಹಿ ಆಡಳಿತದ ಅನುಕೂಲ ಪಡೆದುಕೊಂಡಿದ್ದರಿಂದ ೧೯೫೬ರಲ್ಲಿ ಅದರ ಅಭಿವೃದ್ಧಿ ಸ್ಥಿತಿಯು ವಸಾಹತುಶಾಹಿ ಆಡಳಿತದ ಅನುಕೂಲ ಪಡೆಯದ ಮರಾಠವಾಡ ಪ್ರದೇಶಕ್ಕಿಂತ ಉತ್ತಮವಾಗಿತ್ತು. ಅದೇ ರೀತಿ ವಸಾಹತುಶಾಹಿ ಆಡಳಿತದ ಅನುಕೂಲ ಪಡೆದ ಆಂಧ್ರ ಕರಾವಳಿ ಪೂರ್ವಭಾಗವು ಪಶ್ಚಿಮದ ತೆಲಂಗಾಣ ಪ್ರದೇಶಕ್ಕಿಂತ ಅಭಿವೃದ್ಧಿಯಲ್ಲಿ ಮುಂದುವರಿದಿತ್ತು. ಕರ್ನಾಟಕದಲ್ಲಿ ವಸಾಹತುಶಾಹಿ ಆಡಳಿತದ ಅನುಕೂಲ ಪಡೆದಿದ್ದ ಮುಂಬೈ ಕರ್ನಾಟಕ ಹಾಗೂ ಪ್ರಗತಿಗಾಮಿ ಮೈಸೂರು ರಾಜ ಸಂಸ್ಥಾನ ಪ್ರದೇಶಗಳು ಹೈದರಾಬಾದ್ ಕರ್ನಾಟಕದ ಪ್ರದೇಶಕ್ಕಿಂತ ಅಭಿವೃದ್ಧಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದವು. ಈ ಬಗೆಯ ಚಾರಿತ್ರಿಕ ವಿಕಲತೆಯಿಂದಾಗಿ, ಭಾಷೆಗೆ ಸಂಬಂಧಿಸಿದ ತಬ್ಬಲಿತನದಿಂದಾಗಿ ಮತ್ತು ಪುರೋಗಾಮಿ ಆಡಳಿತದ ಕೊರತೆಯಿಂದಾಗಿ ಹೈದರಾಬಾದ್ – ಕರ್ನಾಟಕ ಪ್ರದೇಶವು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಕರ್ನಾಟಕದೊಳಗೆ ವಿಲೀನಗೊಂಡಿತು. ಒಂದು ದೇಶ / ಪ್ರದೇಶ ಉನ್ನತ ಮಟ್ಟದ ಅಭಿವೃದ್ಧಿಯನ್ನು ಸಾಧಿಸಿಕೊಂಡರೆ ಪ್ರಾದೇಶಿಕ ಅಸಮಾನತೆಯೆಂಬುದು ಸಮಾನತೆಯಾಗಿ ಪರಿವರ್ತನೆಯಾಅಲು ತೀವ್ರಗತಿಯ ಅಭಿವೃದ್ಧಿಯೊಂದೇ ಪರಿಹಾರವೆಂದು ಸರ್ಕಾರಗಳು ನಂಬಿರುವಂತೆ ಕಾಣುತ್ತದೆ. ಇಂತಹ ನಂಬಿಕೆಗಳು ನಿಜವಾಗುವುದಕ್ಕೆ ಪ್ರತಿಯಾಗಿ ಹುಸಿಯಾಗಿವೆ. ಅಭಿವೃದ್ಧಿಯು ತೀವ್ರಗತಿಯನ್ನು ಗಳಿಸಿಕೊಂಡಂತೆ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದಿದ್ದರೆ ಸಮಾನತೆಗೆ ಪ್ರತಿಯಾಗಿ ಅಸಮಾನತೆ ತೀವ್ರಗೊಳ್ಳುವುದು ಖಚಿತ. ಪ್ರಾದೇಶಿಕವಾಗಿ ಅಭಿವೃದ್ಧಿ ಸಂಬಂಧಿ ಸಮಾನತೆ ಸಾಧಿಸಿಕೊಳ್ಳಲು ಪ್ರಜ್ಞಾಪೂರ್ವಕ ಪ್ರಯತ್ನ ಬೇಕು. ಇಲ್ಲಿ ಸರ್ಕಾರದ ಪಾತ್ರವು ನಿರ್ಣಾಯಕವಾಗಿರುತ್ತದೆ. ಅಭಿವೃದ್ಧಿಯಿಂದ ವಂಚಿತ ಜನವರ್ಗಗಳಿರುತ್ತವೆ. ಅದರಿಂದ ವಂಚಿತವಾದ ಪ್ರದೇಶಗಳಿರುತ್ತದೆ. ಅಂತಹ ಜನವರ್ಗಗಳಿಗೆ ಹಾಗೂ ಪ್ರದೇಶಗಳಿಗೆ ಅಭಿವೃದ್ಧಿಯ ಫಲ ಹರಿಯುವಂತೆ ಮಾಡಬೇಕಾಗುತ್ತದೆ. ಅಭಿವೃದ್ಧಿಯ ಸಹಜ ಗುಣವೆಂದರೆ ಅದು ಕೆಲವು ಪ್ರಶಸ್ತ ಪ್ರದೇಶಗಳಲ್ಲಿ ಮುಡಗಟ್ಟಿಕೊಳ್ಳುವುದಾಗಿದೆ. ಅದು ಮಡುಗಟ್ಟಿಕೊಳ್ಳುವುದಕ್ಕೆ ಪ್ರತಿಯಾಗಿ ಪಸರಿಸುವಂತೆ ಮಾಡುವ ಕ್ರಮಗಳು ತುಂಬಾ ಮುಖ್ಯ.

ಕರ್ನಾಟಕದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆಯಿರುವುದನ್ನು ಅನೇಕ ಅಧ್ಯಯನಗಳು ದೃಢಪಡಿಸಿವೆ. ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಪ್ರಕಟಿಸಿರುವ ‘ಕರ್ನಾಟಕ ಮಾನವ ಅಭಿವೃದ್ಧಿ, ಕುರಿತ ಎರಡು ವರದಿಗಳು (೧೯೯೯ ಮತ್ತು ೨೦೦೬) ಇಂದು ನಮ್ಮ ಮುಂದಿದೆ. ಕೇಂದ್ರ ಯೋಜನಾ ಆಯೋಗ ೨೦೦೬ರಲ್ಲಿ ಪ್ರಕಟಿಸಿರುವ ‘ಕರ್ನಾಟಕ ಅಭಿವೃದ್ಧಿ ವರದಿ’ ನಮ್ಮ ಮುಂದಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಕುರಿತಂತೆ ಅಧ್ಯಯನ ನಡೆಸಲು ಸರ್ಕಾರವು ೨೦೦೦ರಲ್ಲಿ ನೇಮಿಸಿದ್ದ ಉನ್ನತಾಧಿಕಾರ ಸಮಿತಿ (ಡಾ. ಎಂ. ನಂಜುಂಡಪ್ಪ ಸಮಿತಿ) ವರದಿ (೨೦೦೨) ನಮಗೀಗ ಲಭ್ಯವಿದೆ. ಜನಗಣತಿ ವರದಿಗಳಿವೆ. ಇವೆಲ್ಲವೂ ಕರ್ನಾಟಕದಲ್ಲಿ ಪ್ರಾದೆಶಿಕ ಅಸಮಾನತೆಯಿರುವುದನ್ನು ದೃಢಪಡಿಸಿದೆ.

ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಹೇಗೆ? ರಾಜ್ಯದ ಹಿಂದುಳಿದ ಜಿಲ್ಲೆಗಳಾದ ಬೀದರ್, ಬಳ್ಳಾರಿ, ಬಿಜಾಪುರ, ಗುಲಬರ್ಗಾ, ರಾಯಚೂರು, ಕೊಪ್ಪಳ, ಚಾಮರಾಜನಗರ, ಬಾಗಲಕೋಟೆ ಇವುಗಳ ಅಭಿವೃದ್ಧಿ ಮಟ್ಟವು ರಾಜ್ಯದ ಅಭಿವೃದ್ಧಿ ಮಟ್ಟಕ್ಕೆ ಸಮನಾಗುವಂತೆ ಮಾಡಲು ಏನು ಮಾಡಬೇಕು? ಒಂದೇ ರಾಜ್ಯದಲ್ಲಿ ಶೇ. ೪೦ರಷ್ಟು ಸಾಕ್ಷರತೆಯಿರುವ ತಾಲ್ಲೂಕುಗಳು ಹಾಗೂ ಶೇ. ೮೦ರಷ್ಟು. ಸಾಕ್ಷರತೆಯಿರುವ ತಾಲ್ಲೂಕುಗಳು ಒಟ್ಟಿಗೆ ಇರುವುದು ಹೇಗೆ ಸಾಧ್ಯ? ತಲಾ ಆದಾಯ ಒಂದು ಜಿಲ್ಲೆಯಲ್ಲಿ ರೂ. ೪೦,೦೦೦ ಮತ್ತೊಂದು ಜಿಲ್ಲೆಯಲ್ಲಿ ರೂ. ೧೩,೦೦೦ದಷ್ಟಿರುವುದು ಸಾಧ್ಯವೆ? ಭೂರಹಿತ ದಿನಗೂಲಿಗಳ ಪ್ರಮಾಣ ಹಿಂದುಳಿದ ಜಿಲ್ಲೆಗಳಲ್ಲಿ ಶೇ. ೪೦ರಷ್ಟಿದ್ದರೆ ಮುಂದುವರಿದ ಜಿಲ್ಲೆಗಳಲ್ಲಿ ಅದು ಶೇ. ೨೦ರಷ್ಟಿದೆ. ಸಮಾನತೆಗೆ ಬದ್ಧವಾದ ಸಮಾಜದಲ್ಲಿ ಇಂತಹ ಅಂತರ ಅಸಮಾನತೆಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಈ ಬಗ್ಗೆ ಉನ್ನತಾಧಿಕಾರ ಸಮಿತಿಯ ವರದಿ ನಮಗೆ ಮಾರ್ಗಸೂಚಿಯಾಗಿದೆ. ಅದರ ವಿವಿಧ ಆಯಾಮಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಬಹಳ ಮುಖ್ಯವಾಗಿ ರಾಜ್ಯದ ಬಹಳ ಹಿಂದುಳಿದಿರುವ ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳ ಅಭಿವೃದ್ಧಿ ಸ್ಥಿತಿಗತಿಯನ್ನು ವರದಿ ಹೇಗೆ ಗುರುತಿಸದೆ? ಅದರ ಪರಿಹಾರಕ್ಕೆ ಅದು ಸೂಚಿಸಿರುವ ಕಾಯಕಲ್ಪ ಯಾವ ಬಗೆಯದು? ಇಂತಹ ಸಂಗತಿಗಳನ್ನು ರಾಜ್ಯದ ಹಿಂದುಳಿದ ಜಿಲ್ಲೆಗಳಿಗೆ ಸೇರಿದವರು ಮತ್ತು ಸೇರಿದವರು- ಹೀಗೆ ಎಲ್ಲರೂ ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ವರದಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಈ ವರದಿಯ ಆಧಾರದ ಮೇಲೆ ಹಿಂದುಳಿದ ಗುಲಬರ್ಗಾ ವಿಭಾಗಕ್ಕೆ ಸಂಬಂಧಿಸಿದಂತೆ ನಾವು ನ್ಯಾಯವನ್ನು ಒತ್ತಾಯಿಸಬಹುದಾಗಿದೆ. ಈ ಒಂದು ಉದ್ದೇಶದಿಂದ ಪ್ರಸ್ತುತ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ.

ಈ ಹೊತ್ತಿಗೆಯಲ್ಲಿ ಪ್ರಸ್ತಾವನೆ ಬಿಟ್ಟು ಐದು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಉನ್ನತಾಧಿಕಾರಿ ಸಮಿತಿ ವರದಿಯ ಸ್ಥೂಲ ವಿವರವನ್ನು ನೀಡಲಾಗಿದೆ. ಈ ವರದಿಯ ವಿಶಿಷ್ಟ ಲಕ್ಷಣಗಳನ್ನು ಇಲ್ಲಿ ಗುರುತಿಸಲಾಗಿದೆ. ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ವರದಿಯು ಹಿಡಿದಿಟ್ಟಿರುವ ನೆಲೆಗಳನ್ನು ಇಲ್ಲಿ ಅನಾವರಣ ಮಾಡಲಾಗಿದೆ. ಎರಡನೆಯ ಭಾಗದಲ್ಲಿ ವರದಿಯನ್ನು ಮುಖ್ಯ ಆಕರವನ್ನಾಗಿಟ್ಟುಕೊಂಡು ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳು ಹಾಗೂ ಮೂವತ್ತೊಂದು ತಾಲ್ಲೂಕುಗಳ ಅಭಿವೃದ್ಧಿ, ದುಸ್ಥಿತಿ ಸ್ವರೂಪವನ್ನು ವಿವರಿಸಲಾಗಿದೆ. ಉನ್ನತಾಧಿಕಾರ ಸಮಿತಿ ರೂಪಿಸಿರುವ ಸೂಚ್ಯಂಕದ ಜೊತೆ ಮಾನವ ಅಭಿವೃದ್ಧಿ ಸೂಚ್ಯಂಕ, ವರಮಾನದ ವಿವರ, ದುಡಿಯುವ ವರ್ಗದ ಹಂಚಿಕೆ ಮುಂತಾದ ಸಂಗತಿಗಳನ್ನು ಇಲ್ಲಿ ಚರ್ಚೆಗೆ ಬಳಸಿಕೊಳ್ಳಲಾಗಿದೆ. ಕೈಪಿಡಿಯ ಮೂರನೆಯ ಭಾಗದಲ್ಲಿ ಉನ್ನತಾಧಿಕಾರ ಸಮಿತಿಯ ಶಿಫಾರಸ್ಸುಗಳನ್ನು ಗುಲಬರ್ಗಾ ವಿಭಾಗವನ್ನು ಅನುಲಕ್ಷಿಸಿ ಚರ್ಚಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಉನ್ನತಾಧಿಕಾರ ಸಮಿತಿಯ ಬಹುಮುಖ್ಯ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ವಿವರ ಹಾಗೂ ಅನುದಾನ ಹಂಚಿಕೆಗೆ ಸಮಿತಿ ರೂಪಿಸಿರುವ ಸಂಚಯಿತ ದುಸ್ಥಿತಿ ಸೂಚ್ಯಂಕದ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

ಐದನೆಯ ಭಾಗದಲ್ಲಿ ಗುಲಬರ್ಗಾ ವಿಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ, ದುಸ್ಥಿತಿ ನಿವಾರಣೆಗೆ ಸಂಬಂಧಿಸಿದಂತೆ, ಸಾಕ್ಷರತೆ-ಶಿಕ್ಷಣ ಕುರಿತತೆ ಏನು ಮಾಡಬಹುದು, ಏನು ಮಾಡಬೇಕು ಎಂಬುದನ್ನು ಕುರಿತಂತೆ ಚರ್ಚಿಸಲಾಗಿದೆ. ಈ ಹೊತ್ತಿಗೆಯನ್ನು ಮೂಲವಾಗಿಟ್ಟುಕೊಂಡು ಗುಲಬರ್ಗಾ ವಿಭಾಗದ ಜನತೆ ತಮ್ಮ ತಮ್ಮ ನೆಲೆಗಳಲ್ಲಿ ಏನು ಮಾಡಬಹುದು-ಮಾಡಬೇಕು ಎಂಬುದರ ಬಗ್ಗೆ ಯೋಚಿಸಬಹುದು. ಗುಲಬರ್ಗಾ ವಿಭಾಗದಲ್ಲಿ ಅಭಿವೃದ್ಧಿ ಕುರಿತಂತೆ, ಪ್ರಾದೇಶಿಕ ಅಸಮಾನತೆ ಕುರಿತಂತೆ, ದುಸ್ಥಿತಿ ಕುರಿತಂತೆ, ಹಿಂದುಳಿದಿರುವಿಕೆ ಬಗ್ಗೆ ಒಂದು ಬಗೆಯ ಜಾಗೃತಿಯನ್ನು ಉಂಟು ಮಾಡುವುದು ಪ್ರಸ್ತುತ ಅಧ್ಯಯನದ ಉದ್ದೇಶವಾಗಿದೆ. ಇದೊಂದು ಬಗೆಯ ಕ್ರಿಯಾತ್ಮಕ ಸಂಶೋಧನೆಯ ಸ್ವರೂಪದ ಪ್ರಬಂಧವಾಗಿದೆ. ಈ ಹೊತ್ತಿಗೆಯಲ್ಲಿ ಅಧ್ಯಯನದಿಂದ ಕಂಡುಕೊಂಡ ತಥ್ಯಗಳಿವೆ ಹಾಗೂ ಪ್ರಾಯೋಗಿಕವಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಸ್ಥೂಲ ವಿವರಗಳಿವೆ. ಈ ಕುರಿತಂತೆ ಪ್ರಸ್ತುತ ಹೊತ್ತಿಗೆಯನ್ನು ತರಬೇತಿ ಕೈಪಿಡಿಯಂತೆ ಬಳಸಬಹುದಾಗಿದೆ.

ಭಾಗ ೧-ಉನ್ನತಾಧಿಕಾರಿ ಸಮಿತಿ ವರದಿ – ಒಂದು ಸ್ಥೂಲನೋಟ

ಪ್ರಾದೇಶಿಕ ಅಸಮಾನತೆಯನ್ನು ಕುರಿತಂತೆ ಅಧ್ಯಯನ ನಡೆಸಿ ಅದರ ನಿವಾರಣೆಗೆ ಯೋಜನೆಯೊಂದನ್ನು ರೂಪಿಸಿಕೊಡುವ ಉದ್ದೇಶದಿಂದ ೨೦೦೦ದಲ್ಲಿ ಕರ್ನಾಟಕ ಸರ್ಕಾರವು ಡಾ. ಡಿ.ಎಂ. ನಂಜುಡಪ್ಪ ಅವರ ನೇತತ್ವದಲ್ಲಿ ಉನ್ನತಾಧಿಕಾರ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿಯು ಎರಡು ವರ್ಷಗಳ ಕಾಲ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಸಮಸ್ಯೆಯನ್ನು ಅಧ್ಯಯನ ಮಾಡಿ, ೨೦೦೨ರಲ್ಲಿ ಸರ್ಕಾರಕ್ಕೆ ತನ್ನ ವರದಿಯನ್ನು-ಬೃಹತ್ ವರದಿಯನ್ನು – ಸಲ್ಲಿಸಿತು. ಒಟ್ಟು ೩೪ ಅಧ್ಯಾಯಗಳಲ್ಲಿ ಹಾಗೂ ಸಾವಿರ ಪುಟಗಳಲ್ಲಿ ವರದಿ ಹರಡಿಕೊಂಡಿದೆ.

ಅಭಿವೃದ್ದಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆಯನ್ನು, ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸುವುದೇ ತುಂಬಾ ಕ್ಲಿಷ್ಟವಾದ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಹಾಗೂ ದೇಶದ ವಿವಿಧ ಪ್ರಾಂತಗಳು ನೇಮಿಸಿರುವ ಸಮಿತಿಗಳು ವಿವಿಧ ರೀತಿಯಲ್ಲಿ ಹಿಂದುಳಿದಿರುವಿಕೆಯನ್ನು ಗುರುತಿಸಲು ಪ್ರಯತ್ನಿಸಿವೆ. ಹಿಂದುಳಿದಿರುವಿಕೆ ಹಾಗೂ ಪ್ರಾದೇಶಿಕ ಅಸಮಾನತೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಒಂದು ಮತ್ತೊಂದಕ್ಕೆ ಕಾರಣವಾಗುವ, ಪರಿಣಾಮವಾಗುವ ಸಾಧ್ಯತೆಯಿದೆ. ಬಹಳ ಕುತೂಹಲಕರ ಸಂಗತಿಯೆಂದರೆ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ಪ್ರೋತ್ಸಾಹಿಸುವ ಸಿದ್ಧಾಂತಗಳು ನಮ್ಮ ಮುಂದಿವೆ. ಏಕೆಂದರೆ ಪ್ರಶಸ್ತವಾದ, ಸಂಪನ್ಮೂಲಗಳಿಂದ ಸಮೃದ್ಧವಾದ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಅದರ ಲಾಭ ಪ್ರಸರಣಾ ಪರಿಣಾಮವಾಗಿ ಹಿಂದುಳಿದ, ಸಂಪನ್ಮೂಲ ಕೊರತೆ ಎದುರಿಸುವ ಪ್ರದೇಶಗಳಿಗೂ ಲಭ್ಯವಾಗುತ್ತದೆ ಎನ್ನಲಾಗಿದೆ. ಈಗಾಗಲೇ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ, ಮೂಲ ಸೌಲಭ್ಯಗಳು ಲಭ್ಯವಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು ಸುಲಭ. ಆದ್ದರಿಂದ ಮೊದಲು ಅವು ಅಭಿವೃದ್ಧಿ ಸಾಧಿಸಿಕೊಳ್ಳಲಿ, ಒಮ್ಮೆ ಅಲ್ಲಿ ಅಭಿವೃದ್ಧಿಯ ಮಟ್ಟ ಹಾಗೂ ಗತಿ ಉನ್ನತವಾಗಿಬಿಟ್ಟರೆ, ಪ್ರಾದೇಶಿಕ ಅಸಮಾನತೆಯು ಪ್ರಸರಣಾ ಪರಿಣಾಮವಾಗಿ ನಿವಾರಣೆಯಾಗಿ ಬಿಡುತ್ತದೆ ಎಂದು ಸೈದ್ಧಾಂತಿಕವಾಗಿ ವಾದಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಹಾಗೆ ನಡೆದ ನಿದರ್ಶನಗಳು ನಮಗೆ ದೊರೆಯುವುದಿಲ್ಲ.

ಅಭಿವೃದ್ಧಿ ಘಟಕ – ತಾಲ್ಲೂಕು

ನಮ್ಮ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ದುಸ್ಥಿತಿಯ ಮಾಪನಕ್ಕೆ ಜಿಲ್ಲೆಯನ್ನು ಘಟಕವನ್ನಾಗಿ ಬಳಸುತ್ತಾ ಬರಲಾಗಿದೆ. ಆದರೆ ನೀತಿ-ನಿರೂಪಣೆ ದೃಷ್ಟಿಯಿಂದ ತಾಲ್ಲೂಕು ಅಭಿವೃದ್ಧಿ ಘಟಕವಾಗಿ ಸೂಕ್ತವಾದುದು ಎಂಬ ಸಂಗತಿ ಇಂದು ದೃಢವಾಗುತ್ತದೆ. ಈ ಹಿನ್ನೆಲೆಯಲ್ಲಿ ಉನ್ನತಾಧಿಕಾರ ಸಮಿತಿಯು ಅಭಿವೃದ್ಧಿ-ದುಸ್ಥಿತಿ ಅಳೆಯಲು ತಾಲ್ಲೂಕನ್ನು ಘಟಕವನ್ನಾಗಿ ಬಳಸಲು ತೀರ್ಮಾನಿಸಿತು.

ಅಭಿವೃದ್ಧಿ-ದುಸ್ಥಿತಿಯನ್ನು ಅಳೆಯಲು ಸಮಿತಿಯು ಐದು ವಲಯಗಳಿಗೆ ಸಂಬಂಧಿಸಿದ ೩೫ ಸೂಚಿಗಳನ್ನು ಆಯ್ಕೆ ಮಾಡಿಕೊಂಡಿತು. ಅದರ ವಿವರ ಇಲ್ಲಿದೆ.

I ಕೃಷಿ ಮತ್ತು ತತ್ಸಂಬಂಧಿ ವಲಯ

೧. ಒಟ್ಟು ಸಾಗುವಳಿ ಪ್ರದೇಶದಲ್ಲಿ ನಿವ್ವಳ ಸಾಗುವಳಿ ಪ್ರದೇಶ

೨. ಒಟ್ಟು ಸಾಗುವಳಿ ಪ್ರದೇಶದಲ್ಲಿ ಆಹಾರ ಬೆಳೆಗಳ ಪ್ರದೇಶ

೩. ಒಟ್ಟು ಸಾಗುವಳಿ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ

೪. ಒಟ್ಟು ಸಾಗುವಳಿ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಪ್ರದೇಶ

೫. ನಿವ್ವಳ ಸಾಗುವಳಿ ಪ್ರದೇಶದಲ್ಲಿ ನಿವ್ವಳ ನೀರಾವರಿ ಪ್ರದೇಶ

೬. ಪ್ರತಿ ಹೆಕ್ಟೇರಿನಲ್ಲಿ ಬಳಸುವ ರಾಸಾಯನಿಕ ಗೊಬ್ಬರ (ಎನ್‍ಪಿಕೆ) ಬಳಕೆ ಪ್ರಮಾಣ

೭. ಪ್ರತಿ ಸಾವಿರ ಹೆಕ್ಟೇರು ಸಾಗುವಳಿ ಪ್ರದೇಶದಲ್ಲಿನ ಟ್ರಾಕ್ಟರ್‌ಗಳ ಸಂಖ್ಯೆ

೮. ಪ್ರತಿ ಲಕ್ಷ ಗ್ರಾಮೀಣ ಜನಸಂಖ್ಯೆಗೆ ಸಾಕು ಪ್ರಮಾಣ

೯. ಕೃಷಿಕ್ಷೇತ್ರದಲ್ಲಿನ ತಲಾ ಬ್ಯಾಂಕ್ ಸಾಲ (ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕುಗಳು)

II ಕೈಗಾರಿಕೆ, ವ್ಯಾಪಾರ ಮತ್ತು ಹಣಕಾಸು ವಲಯ

೧. ಪ್ರತಿ ಲಕ್ಷ ಜನಸಂಖ್ಯೆಗೆ ಕೈಗಾರಿಕಾ ಘಟಕಗಳ ಸಂಖ್ಯೆ

೨. ಒಟ್ಟು ದುಡಿಮೆಗಾರರಲ್ಲಿ ಕೈಗಾರಿಕಾ ದುಡಿಮೆಗಾರರ ಪ್ರಮಾಣ

೩. ಬ್ಯಾಂಕುಗಳ ತಲಾ ಅಭಿವೃದ್ಧಿ ಸಾಲ

೪. ಪ್ರತಿ ಲಕ್ಷ ಜನಸಂಖ್ಯೆಗೆ ಬ್ಯಾಂಕ್ ಶಾಖೆಗಳು

೫. ಪ್ರತಿ ಲಕ್ಷ ಜನಸಂಖ್ಯೆಗೆ ವ್ಯಾಪಾರ, ಹೋಟೆಲು ಮತ್ತು ಸಾರಿಗೆಯಲ್ಲಿ ನಿರತವಾದ ಉದ್ದಿಮೆ ಘಟಕಗಳ ಸಂಖ್ಯೆ.

III. ಮೂಲ ಸೌಲಭ್ಯಗಳು – ಆರ್ಥಿಕ

೧. ಪ್ರತಿ ಲಕ್ಷ ಜನಸಂಖ್ಯೆಗೆ ಅಂಚೆ ಕಚೇರಿಗಳ ಸಂಖ್ಯೆ

೨. ಪ್ರತಿ ಲಕ್ಷ ಜನಸಂಖ್ಯೆಗೆ ದೂರವಾಣಿಗಳ ಸಂಖ್ಯೆ

೩. ಪ್ರತಿ ನೂರು ಕಿ.ಮೀ.ಗೆ ರಸ್ತೆಗಳ ಉದ್ದ (ಕಿ.ಮೀ.ಗಳಲ್ಲಿ)

೪. ಸರ್ವ ಋತು ರಸ್ತೆ ಸೌಲಭ್ಯ ಪಡೆದ ಹಳ್ಳಿಗಳ ಪ್ರಮಾಣ

೫. ಪ್ರತಿ ಸಾವಿರ ಚದರ ಕಿ.ಮೀ.ಗೆ ರೈಲು ಮಾರ್ಗಗಳ ಉದ್ದ (ಕಿ.ಮೀ.ಗಳಲ್ಲಿ)

೬. ಪ್ರತಿ ಲಕ್ಷ ಜನಸಂಖ್ಯೆಗೆ ಮೋಟಾರು ವಾಹನಗಳ ಸಂಖ್ಯೆ

೭. ಪ್ರತಿ ಲಕ್ಷ ಜನಸಂಖ್ಯೆಗೆ ಸಹಕಾರಿ ಸಾಲ ಸೊಸೈಟಿಗಳ ಸಂಖ್ಯೆ

೮. ಒಟ್ಟು ಹಳ್ಳಿಗಳು ಮತ್ತು ಜನವಸತಿಗಳಲ್ಲಿ ವಿದ್ಯುತ್ ಸಂಪರ್ಕ ಪಡೆದ ಹಳ್ಳಿಗಳ ಮತ್ತು ವಸತಿಗಳ ಪ್ರಮಾಣ

೯. ಪ್ರತಿ ಲಕ್ಷ ಜನಸಂಖ್ಯೆಗೆ ನಿಯಂತ್ರಿತ ಪ್ರಧಾನ ಮತ್ತು ಉಪ ಮಾರುಕಟ್ಟೆಗಳ ಸಂಖ್ಯೆ.

IV. ಮೂಲ ಸೌಲಭ್ಯಗಳು – ಸಾಮಾಜಿಕ

೧. ಪ್ರತಿ ಹತ್ತು ಸಾವಿರ ಜನಸಂಖ್ಯೆ ವೈದ್ಯರ (ಖಾಸಗಿ ಮತ್ತು ಸರ್ಕಾರಿ) ಸಂಖ್ಯೆ

೨. ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಸರ್ಕಾರಿ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ

೩. ಸಾಕ್ಷರತಾ ಪ್ರಮಾಣ (ಶೇಕಡ)

೪. ವಿದ್ಯಾರ್ಥಿ – ಶಿಕ್ಷಕರ ಅನುಪಾತ (ಒಂದರಿಂದ ಹತ್ತನೆಯ ತರಗತಿ)

೫. ಶಾಲೆಯಿಂದ ಹೊರಗಿರುವ ೬-೧೪ ವಯೋಮಾನದ ಮಕ್ಕಳ ಪ್ರಮಾಣ

೬. ಪ್ರತಿಲಕ್ಷ ಜನಸಂಖ್ಯೆಗೆ ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ

೭. ನಲವತ್ತು ಅಥವಾ ಅದಕ್ಕಿಂತ ಅಧಿಕ ಲೀಟರುಗಳ ಕುಡಿಯುವ ನೀರಿನ ಸೌಲಭ್ಯ ಪಡೆದ ಜನವಸತಿಗಳ ಪ್ರಮಾಣ.

V. ಜನಸಂಖ್ಯಾ ಲಕ್ಷಣಗಳು

೧. ಲಿಂಗ ಅನುಪಾತ

೨. ಒಟ್ಟು ಜನಸಂಖ್ಯೆಯಲ್ಲಿ ನಗರವಾಸಿಗಳ ಪ್ರಮಾಣ

೩. ಒಟ್ಟು ಜನಸಂಖ್ಯೆಯಲ್ಲಿ ಪ.ಜಾ. ಮತ್ತು ಪ.ಪಂ.ಗಳ ಪ್ರಮಾಣ

೪. ಒಟ್ಟು ದುಡಿಮೆಗಾರರಲ್ಲಿ ಕೃಷಿಯೇತರ ದುಡಿಮೆಗಾರರ ಪ್ರಮಾಣ

೫. ಒಟ್ಟು ದುಡಿಮೆಗಾರರಲ್ಲಿ ಕೃಷಿ ದುಡಿಮೆಗಾರರ ಪ್ರಮಾಣ

ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ

ಈ ೩೫ ಸೂಚಿಗಳನ್ನು ಆಧರಿಸಿ ಕರ್ನಾಟಕ ಪ್ರತಿಯೊಂದು ತಾಲ್ಲೂಕಿನ ಅಭಿವೃದ್ಧಿಯನ್ನು ಅಳೆಯಲು ಸಮಿತಿಯು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವೆಂಬ ಮಾಪನವನ್ನು ರೂಪಿಸಿದೆ. ಈ ಸೂಚ್ಯಂಕದ ಆಧಾರದ ಮೇಲೆ ಸಮಿತಿಯು ಅಭಿವೃದ್ಧಿ ಅಥವಾ ಹಿಂದುಳಿದಿರುವಿಕೆಯನ್ನು ಗುರುತಿಸಿದೆ.

೧. ಈ ಯಾವ ತಾಲ್ಲೂಕಿನ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ರಾಜ್ಯ ಮಟ್ಟದ ಅಭಿವೃದ್ಧಿ ಮತ್ತು ಒಂದಕ್ಕಿಂತ ಅಧಿಕ ವಿರುತ್ತದೋ ಆ ತಾಲ್ಲೋಕನು ಅಭಿವೃದ್ಧಿ ಹೊಂದಿದ ತಾಲ್ಲೂಕ್ಕೆಂದು ತೀರ್ಮಾನಿಸಲಾಗಿದೆ.

೨. ಈ ಯಾವ ತಾಲ್ಲೂಕಿನ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ರಾಜ್ಯ ಮಟ್ಟದ ಅಭಿವೃದ್ಧಿ ಮಟ್ಟ ಒಂದಕ್ಕಿಂತ ಕಡಿಮೆಯಿದೆಯೋ ಆ ತಾಲ್ಲೂಕನ್ನು ಅಭಿವೃದ್ಧಿ ಹೊಂದದ ತಾಲ್ಲೂಕ್ಕೆಂದು ತೀರ್ಮಾನಿಸಲಾಗಿದೆ.

ಸಮಿತಿಯ ಪ್ರಕಾರ ರಾಜ್ಯದ ೧೭೫ ತಾಲ್ಲೂಕುಗಳಲ್ಲಿ ೬೧ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಾಗಿದ್ದರೆ, ೧೧೪ ಅಭಿವೃದ್ಧಿ ಹೊಂದದ ತಾಲ್ಲೂಕುಗಳಾಗಿವೆ.

ಅಭಿವೃದ್ಧಿ ಹೊಂದದ ತಾಲ್ಲೂಕುಗಳ ವರ್ಗೀಕರಣ

ಅಭಿವೃದ್ಧಿ ಹೊಂದದ ೧೧೪ ತಾಲ್ಲೂಕುಗಳನ್ನು ಅವುಗಳ ಹಿಂದುಳಿದಿರುವಿಕೆಯ ತೀವ್ರತೆಯನ್ನು ಪರಿಗಣಿಸಿ ಮೂರು ಗುಂಪುಗಳನ್ನಾಗಿ ಸಮಿತಿಯು ವರ್ಗೀಕರಿಸಿತು.

೧. ಹಿಂದುಳಿದ ತಾಲ್ಲೂಕುಗಳು – ೩೫

ಯಾವ ತಾಲ್ಲೂಕುಗಳ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ೦.೮೯ರಿಂದ ೦.೯೯ರವರೆಗೆ ಇದೆಯೋ ಅಂತಹ ತಾಲ್ಲೂಕುಗಳು ‘ಹಿಂದುಳಿದಿರುವ’ ತಾಲ್ಲೂಕುಗಳು. ಅಂತಹ ತಾಲ್ಲೂಕುಗಳ ಸಂಖ್ಯೆ ೩೫.

೨. ಅತಿ ಹಿಂದುಳಿದ ತಾಲ್ಲೂಕುಗಳು – ೪೦

ಯಾವ ತಾಲ್ಲೋಕುಗಳ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ೦.೮೦ರಿಂದ ೦.೮೮ರವರೆಗೆ ಇದೆಯೋ ಅಂತಹ ತಾಲ್ಲೂಕುಗಳನ್ನು ‘ಅತಿ ಹಿಂದುಳಿದ’ ತಾಲ್ಲೂಕುಗಳೆಂದು ಕರೆಯಲಾಗಿದೆ. ಅಂತಹ ತಾಲ್ಲೂಕುಗಳ ಸಂಖ್ಯೆ ೪೦

೩. ಅತ್ಯಂತ ಹಿಂದುಳಿದ ತಾಲ್ಲೂಕುಗಳು – ೩೯

ಯಾವ ತಾಲ್ಲೂಕುಗಳ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕವು ೦.೫೩ರಿಂದ – .೭೯ರವರೆಗೆ ಇದೆಯೋ ಅಂತಹ ತಾಲ್ಲೂಕುಗಳನ್ನು ‘ಅತ್ಯ್ಂತ ಹಿಂದುಳಿದ’ ತಾಲ್ಲೂಕುಗಳೆಂದು ಸಮಿತಿ ಗುರುತಿಸಿದೆ. ಅಂತಹ ತಾಲ್ಲೂಕುಗಳ ಸಂಖ್ಯೆ ೩೯. ಒಟ್ಟು ಅಭಿವೃದ್ಧಿ ಹೊಂದದ ತಾಲ್ಲೂಕುಗಳು ೧೧೪.

ತಾಲ್ಲೂಕುಗಳ ವಿಭಾಗವಾರು ಮತ್ತು ಜಿಲ್ಲಾವಾರು ಹಂಚಿಕೆ

ಕೋಷ್ಟಕ ೧

ವಿಭಾಗ ತಾಲ್ಲೂಕುಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳು ಅತಿ ಹಿಂದುಳಿದ ತಾಲ್ಲೂಕುಗಳು ಅತ್ಯಂತ ಹಿಂದುಳಿದ ತಾಲ್ಲೂಕುಗಳು ಒಟ್ಟು ತಾಲ್ಲೂಕುಗಳು
ಬೆಂಗಳೂರು ವಿಭಾಗ ೧೮ ೧೩ ೧೧ ೫೧
೧. ಬೆಂಗಳೂರು (ನ)
೨.ಬೆಂಗಳೂರು(ಗ್ರಾ)
೩. ಚಿತ್ರದುರ್ಗ
೪. ದಾವಣೆಗೆರೆ
೫. ಕೋಲಾರ ೧೧
೬. ಶಿವಮೊಗ್ಗ
೭. ತುಮಕೂರು ೧೦
ಮೈಸೂರು ವಿಭಾಗ ೨೨ ೧೦ ೧೦ ೪೪
೧.ಚಾಮರಾಜನಗರ
೨. ಚಿಕ್ಕಮಗಳೂರು
೩. ದಕ್ಷಿಣ ಕನ್ನಡ
೪. ಹಾಸನ
೫. ಕೊಡಗು
೬. ಮಂಡ್ಯ
೭. ಮೈಸೂರು
೮. ಉಡುಪಿ
ದಕ್ಷಿಣ ಕರ್ನಾಟಕ ೪೦ ೧೯ ೨೩ ೧೩ ೯೫
ಬೆಳಗಾವಿ ವಿಭಾಗ ೧೮ ೧೪ ೧೨ ೪೯
೧. ಬಾಗಲಕೋಟೆ
೨. ಬೆಳಗಾವಿ ೧೦
೩. ವಿಜಾಪುರ
೪. ಧಾರವಾಡ
೫. ಗದಗ
೬. ಹಾವೇರಿ
೭. ಉತ್ತರ ಕನ್ನಡ ೧೧
ಗುಲಬರ್ಗಾ ವಿಭಾಗ ೨೧ ೩೧
೧. ಬಳ್ಳಾರಿ
೨. ಬೀದರ್
೩. ಗುಲಬರ್ಗಾ ೧೦
೪. ಕೊಪ್ಪಳ
೫. ರಾಯಚೂರು
ಉತ್ತರ ಕರ್ನಾಟಕ ೨೧ ೧೬ ೧೭ ೨೬ ೮೦
ಕರ್ನಾಟಕ ೬೧ ೩೫ ೪೦ ೩೯ ೧೭೫

ಈ ಕೋಷ್ಟಕದಿಂದ ತಿಳಿದುಬರುವ ಸಂಗತಿಗಳು ಹೀಗಿವೆ.

೧. ಇಡೀ ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಸಂಖ್ಯೆ ೬೧

೨. ಜಿಲ್ಲೆಯೊಂದರಲ್ಲಿ ಎಲ್ಲ ತಾಲ್ಲೂಕುಗಳು ಅಭಿವೃದ್ಧಿ ಹೊಂದಿರುವ ಜಿಲ್ಲೆಗಳ ಸಂಖ್ಯೆ ೩

೩. ಅತ್ಯಂತ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ೩೯

೪. ಇವುಗಳಲ್ಲಿ ಗುಲಬರ್ಗಾ ವಿಭಾಗಕ್ಕೆ ಸೇರಿದ ತಾಲ್ಲೂಕುಗಳ ಸಂಖ್ಯೆ ೨೧

೫. ಅತಿ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ೪೦

೬. ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ೩೫

೭. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಹಿಂದುಳಿದಿರುವ ಸ್ಥಿತಿಯಲ್ಲಿರುವ ಜಿಲ್ಲೆಗಳ ಸಂಖ್ಯೆ ನಾಲ್ಕು, ಎಲ್ಲ ತಾಲ್ಲೂಕುಗಳು ಹಿಂದುಳಿದಿರುವ ಸ್ಥಿತಿಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಮೂರು ಗುಲಬರ್ಗಾ ವಿಭಾಗಕ್ಕೆ ಸೇರಿವೆ. (ಗುಲಬರ್ಗಾ, ರಾಯಚೂರು, ಕೊಪ್ಪಳ).

ಈ ಎಲ್ಲ ವಿವರಗಳಿಂದ ತಿಳಿದುಬರುವ ಸಂಗತಿಯೆಂದರೆ ಏಕೀಕರಣದ ನಂತರ ಅಭಿವೃದ್ಧಿಯು ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಮಡುಗಟ್ಟಿಕೊಳ್ಳುತ್ತಾ ನಡೆದಿದ್ದರೆ ಉತ್ತರ ಕರ್ನಾಟಕ ಪ್ರದೇಶದ ಗುಲಬರ್ಗಾ ವಿಭಾಗದಲ್ಲಿ ದುಸ್ಥಿತಿಯು ಮಡುಗಟ್ಟಿಗೊಳ್ಳುತ್ತಾ ನಡೆದಿದೆ.

೧. ರಾಜ್ಯದ ಅಭಿವೃದ್ಧಿ ಹೊಂದಿದ ೬೧ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ಕೇವಲ ಶೇ.೪.೯೨

೨. ರಾಜ್ಯದ ಅತ್ಯಂತ ಹಿಂದುಳಿದ ೩೯ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ಶೇ.೫೩.೮೫

ಪ್ರಾದೇಶಿಕ ಅಸಮಾನತೆ ನಿವಾರಣಾ ಅಧ್ಯಯನದ ಉನ್ನತಾಧಿಕಾರ ಸಮಿತಿಯು ರಾಜ್ಯದಲ್ಲಿ ಪ್ರಥಮಬಾರಿಗೆ ಪ್ರಾದೇಶಿಕ ಅಸಮಾನತೆ-ಹಿಂದುಳಿದಿರುವಿಕೆ ಕುರಿತಂತೆ ವಿವರವಾದ ಮಾಹಿತಿಯನ್ನು, ನಿರ್ದಿಷ್ಟ ಮಾಪನವನ್ನು ಒದಗಿಸಿಕೊಟ್ಟಿದೆ. ಇದರ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳ ಜನರು ಪ್ರಾದೇಶಿಕ ಸಮಾನತೆ ನ್ಯಾಯವನ್ನು ಒತ್ತಾಯಿಸಬಹುದಾಗಿದೆ.