ಕರ್ನಾಟಕ ದೇವಾಲಯಗಳ ಕುರಿತು ಸಮಗ್ರ ಮಾಹಿತಿಯನ್ನು ಒಂದು ಕಡೆಗೆ ತರುವ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ವಿಶಿಷ್ಟವಾದ ಯೋಜನೆ ರೂಪಿಸಿ ಪ್ರಕಟಿಸುವ ಮಹತ್ವಕಾರ್ಯ ಕೈಗೊಂಡಿದೆ. ಸಾಂಸ್ಕೃತಿಕ ಅಧ್ಯಯನಗಳಲ್ಲಿ ವಿಶೇಷ ರೀತಿಯ ಸ್ಥಾನ-ಮಾನ ಹೊಂದಿರುವ ದೇವಾಲಯಗಳೂ ಹಾಗೂ ಪ್ರಾಚ್ಯಾವಶೇಷಗಳ ವಿವರಗಳನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಬರೆದು ಹೆಚ್ಚಿನ ಅಧ್ಯಯನಗಳಿಗೆ ಅನುಕೂಲವಾಗುವಂತೆ ಸಾದರಪಡಿಸುವುದು ಈ ಕಾರ್ಯದ ಪ್ರಮುಖ ಉದ್ದೇಶವಾಗಿದೆ. ಇತಿಹಾಸ-ಸಂಸ್ಕೃತಿಯ ರಚನೆಯಲ್ಲಿ ಕಳಚಿಹೋಗಿರುವ ಕೊಂಡಿಗಳನ್ನು ಹುಡುಕಿ ಸಾಧ್ಯವಾದ ಮಟ್ಟಿಗೆ ಮರು ಜೋಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿನ ಪ್ರಾಚ್ಯಸ್ಮಾರಕಗಳ ವಿವರ ಹಾಗೂ ಗತಕಾಲದ ಮಹತ್ವ ವಿಷಯಗಳನ್ನು ಆದಷ್ಟು ಸಂಕ್ಷಿಪ್ತ ಹಾಗೂ ಅರ್ಥಪೂರ್ಣವಾಗಿ ದಾಖಲಿಸುವ ಯತ್ನ ಮಾಡಲಾಗಿದೆ. ಪ್ರಮುಖವಾಗಿ ದೇವಾಲಯ, ಮೂರ್ತಿಶಿಲ್ಪ, ಕೋಟೆ-ಕೊತ್ತಲಗಳು, ಬುರುಜು-ಹುಡೇವುಗಳು, ಕೆರೆ-ಕಟ್ಟೆಗಳ ಹಾಗೂ ಪ್ರಕಟವಾಗಲಾರದ ಶಾಸನಗಳ ನಮೂದು ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಐತಿಹ್ಯಗಳ ಬಗೆಗಿನ ಪರಿಚಯ ಇಲ್ಲಿದೆ. ಒಟ್ಟಾರೆ ಕರ್ನಾಟಕ ಸಂಸ್ಕೃತಿಯ ರಚನೆಯಲ್ಲಿ ಮುಖ್ಯವಾಗಿ ಪರಿಗಣಿಸಲ್ಪಡುವ ಪ್ರಾಚೀನ ಅಭಿವ್ಯಕ್ತಗಳಾದ ಸ್ಮಾರಕ ಅವಶೇಷಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಹಾಗೂ ಅವುಗಳು ಇನ್ನು ಹೆಚ್ಚಿನ ಸಂಶೋಧನೆ, ಅಧ್ಯಯನಗಳಿಗೆ ಅವಶ್ಯಕ ವಿಷಯ ಆಧಾರಗಳಾಗಿ ಚರಿತ್ರೆಯಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಕಾಳಜಿಯನ್ನು ಹೊಂದಿ ಈ ಯೋಜನೆಯನ್ನು ರೂಪಿಸಿದ್ದೇವೆ.

ಕರ್ನಾಟಕ ದೇವಾಲಯ ಕೋಶ ಎಂಬ ಯೋಜನೆಯು ೧೯೯೯ರಲ್ಲಿ ರೂಪಿತವಾಗಿದೆ. ಸಂಸ್ಕೃತಿಯ ಸಂಶೋಧನೆಯಲ್ಲಿ ಅಪಾರ ಪ್ರೀತಿಯನ್ನು ಹೊಂದಿರುವ ಮಾನ್ಯ ವಿಶ್ರಾಂತ ಕುಲಪತಿಗಳಾದ ಡಾ.ಎಂ.ಎಂ. ಕಲಬುರ್ಗಿಯವರು ಇಂಥ ಯೋಜನೆಯನ್ನು ಪ್ರಾರಂಭಿಸಲು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ. ಅವರಿಗೆ ನಮ್ಮ ಗೌರವಪೂರ್ವಕ ವಂದನೆಗಳು ಸಲ್ಲುತ್ತವೆ. ಕರ್ನಾಟಕ ದೇವಾಲಯ ಕೋಶ ಯೋಜನೆಗೆ ೨೦೦೦ರಲ್ಲಿ ಮಾನ್ಯ ವಿಶ್ರಾಂತ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಮಂಜೂರಾತಿ ನೀಡಿದ್ದರು. ಕಾರಣಾಂತರಗಳಿಂದ ಪ್ರಸ್ತುತ ಯೋಜನೆಯು ನಿಂತುಹೋಗಿತ್ತು. ಮತ್ತೆ ಇದಕ್ಕೆ ಚಾಲನೆ ನೀಡಿ ಕಾರ್ಯಪೂರ್ಣಗೊಳಿಸಲು ಪ್ರೋತ್ಸಾಹಿಸಿದವರು ಈಗಿನ ಮಾನ್ಯ ಕುಲಪತಿಗಾಳದ ಡಾ. ಬಿ.ಎ. ವಿವೇಕ ರೈ ಅವರು. ಯೋಜನೆಯ ಕ್ಷೇತ್ರಕಾರ್ಯಕ್ಕೆ ವಿಶೇಷ ರಜೆ ಸೌಲಭ್ಯ ನೀಡಿ ಪ್ರಕಟಿಸಲು ಅನುಮತಿ ನೀಡಿದ್ದಾರೆ. ಅವರಿಗೆ ನಾವುಗಳೆಲ್ಲ ಗೌರವಪೂರ್ವಕವಾದ ನಮಸ್ಕಾರಗಳನ್ನು ಸಲ್ಲಿಸುತ್ತೇವೆ. ಆಡಳಿತಾತ್ಮಕವಾಗಿ ಸಹಕರಿಸಿದ ಹಿಂದಿನ ಕುಲಸಚಿವರಾಗಿದ್ದ ಡಾ. ಕರೀಗೌಡ ಬೀಚನಹಳ್ಳಿ ಹಾಗೂ ಈಗಿನ ಕುಲಸಚಿವರಾದ ಶ್ರೀ ವಿ.ಶಂಕರ್ ಅವರಿಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ಅಧ್ಯಯನಾಂಗ ನಿರ್ದೇಶಕಾರದ ಡಾ. ಟಿ.ಆರ್. ಚಂದ್ರಶೇಖರ ಅವರಿಗೆ ತುಂಬು ಹೃಹದಯ ನೆನೆಕೆಗಳು. ಪ್ರಾಧ್ಯಾಪಕಾರದ ಡಾ. ಕೆ.ವಿ. ನಾರಾಯಣ ಹಾಗೂ ಸಮಾಜ ವಿಜ್ಞಾನಗಳ ನಿಕಾಯದ ಡೀನ್, ಡಾ. ದೇವರಕೊಂಡಾರೆಡ್ಡಿ ಅವರು ಸದಾ ನಮ್ಮ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಯೋಜನೆಯನ್ನು ಪೂರೈಸಿ ಪ್ರಕಟಿಸುವ ಹೊತ್ತಿಗೆ ಪ್ರಸ್ತುತ ಗ್ರಂಥದ ಲೇಖಕರಲ್ಲಿ ಒಬ್ಬರಾದ ಡಾ. ಬಾಲಸುಬ್ರಮಣ್ಯ ಅವರು ಅಕಾಲ ಮರಣ ಹೊಂದಿದರು. ಹಿರಿಯ ಸಹೋದ್ಯೋಗಿಗಳ ಅಗಲಿಕೆ ನಮಗೆಲ್ಲಾ ತುಂಬಾ ವಿಷಾದದ ಹಾಗೂ ನೋವುಂಟು ಮಾಡಿದ ಸಂಗತಿಯಾಗಿದೆ. ನಮ್ಮನ್ನಗಲಿದ ಆ ಹಿರಿಯ ಚೇತನದ ಸಹಕಾರ ಎಂದೂ ಮರೆಯಲಾಗದು. ಈ ಸಂದರ್ಭದಲ್ಲಿ ಅವರು ಬರೆದಿಟ್ಟ ಎಲ್ಲ ಮಾಹಿತಿ ಹಾಗೂ ಛಾಯಾಚಿತ್ರಗಳನ್ನು ಅವರ ಪತ್ನಿ ಶ್ರೀಮತಿ ಅನುರಾಧ ಮತ್ತು ಮಕ್ಕಳಾದ ಬಿ. ಅನಿರುದ್ಧ ಹಾಗೂ ಬಿ. ಅಭಿಷೇಕ ಅವರು ನಮಗೆ ಕೊಟ್ಟು ಪ್ರಕಟಿಸಲು ಉಪಕಾರ ಮಾಡಿದ್ದಾರೆ ಅವರಿಗೆ ವಿಶೇಷವಾದ ಕೃತಜ್ಞತೆಗಳು.

ಈ ಕಾರ್ಯವನ್ನು ಪೂರೈಸಲು ಸಹಕರಿಸಿದ ವಿಭಾಗದ ಅಧ್ಯಾಪಕರುಗಳಾದ ಡಾ. ಸಿ. ಮಹದೇವ ಮತ್ತು ಡಾ. ವಾಸುದೇವ ಬಡಿಗೇರ ಅವಿರಗೆ ಹಾಗೂ ವಿಭಾಗದ ಸದಸ್ಯರಾದ ಶ್ರೀ ನಾಗಯ್ಯ ಬಿ.ಎಚ್. ಹಾಗೂ ಶ್ರೀ ರಮೇಶ ಅವರಿಗೆ ವಂದನೆಗಳು.

ಡಾ. ಕೆ.ಜಿ. ಭಟ್‌ಸೂರಿ, ಡಾ. ಡಿ.ವಿ. ಪರಮಶಿವಮೂರ್ತಿ ಹಾಗೂ ಜಿ. ಶಿವಕುಮಾರ ಅವರು ಯೋಜನೆಗೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ. ಅವಿರಗೆ ನಮ್ಮ ಧನ್ಯವಾದಗಳು. ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಬಿ. ಶ್ರೀಧರ, ಬಿ. ರಾಘವೇಂದ್ರ, ಡಾ. ಪಿ.ಎಲ್. ರಾಠೋಡ್, ಡಾ. ಜಿ.ಎಮ್. ದೊಡ್ಡಮನಿ, ಡಾ.ಹೆಚ್. ತಿಪ್ಪೇಸ್ವಾಮಿ ಮೋಹನ್, ಪಂಪಯ್ಯಸ್ವಾಮಿ, ಡಿ.ಜಿ. ಕುಲಕರ್ಣಿ, ಆರ್. ಮೂವೇಂದ್ರನ್ ಹಾಗೂ ಶರವನನ್ ಅವರಿಗೆ ವಂದನೆಗಳು. ಪ್ರಸಾರಾಂಗದಿಂದ ಪ್ರಕಟವಾಗುತ್ತಿರುವ ಈ ಪುಸ್ತಕ ವಿನ್ಯಾಸವನ್ನು ನಿರ್ವಹಿಸಿದ ಮಿತ್ರರಾದ ಎ.ಎಲ್. ರಾಜಶೇಖರ್ ಅವರಿಗೆ, ಮುಖಪುಟ ರಚಿಸಿದ ಕಲಾವಿದ ಮಿತ್ರ ಕೆ.ಕೆ., ಮಕಾಳಿ ಅವರಿಗೆ, ಅಕ್ಷರ ಜೋಡಣೆ ಮಾಡಿದ ಕೆ. ವೀರೇಶ ಮತ್ತು ಶ್ರೀನಿವಾಸ ಕೆ. ಕಲಾಲ್ ಅವರನ್ನು ನೆನೆಯದೆ ಇರಲಾಗದು. ಕ್ಷೇತ್ರಕಾರ್ಯಾವಧಿಯಲ್ಲಿ ವಸತಿ ಕಲ್ಪಿಸಿ ಸಹಾಯ ಮಾಡಿದ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ನಮ್ಮನ್ನೆಲ್ಲ ಪ್ರೀತಿಯಿಂದ ಕಂಡು ನಮಗೆ ಸಹಕಾರ ನೀಡಿದ ಗದಗ ಜಿಲ್ಲೆಯ ಮಹಾಜನತೆಗೆ ವಂದನೆಗಳನ್ನು ಸಲ್ಲಿಸುತ್ತೇವೆ.

ಸಿ.ಎಸ್. ವಾಸುದೇವನ್
ರಮೇಶ ನಾಯಕ