ಮಹಾಕಾವ್ಯವೆಂದರೆ ಹೀಗೇ ಇರಬೇಕು ಎಂಬ ಕಟ್ಟುಪಾಡಿನ ಕಾಲವೊಂದಿತ್ತು. ಸದ್ವಂಶಜನಾದ ಒಬ್ಬ ನಾಯಕ, ಉದಾತ್ತಗುಣಸ್ವಭಾವದ ರಾಜ, ಸದಾ ಕೆಟ್ಟದ್ದನೇ ಬಯಸುವ ಪ್ರತಿನಾಯಕರು ಅಷ್ಟಾದಶ ವರ್ಣನೆ ಇತ್ಯಾದಿಗಳೆಲ್ಲ ಒಂದು ಕಾವ್ಯಕ್ಕೆ ಇರಲೇಬೇಕಾದ ಕಡ್ಡಾಯ ಅಂಶಗಳಾಗಿದ್ದವು. ಇದುವರೆಗೆ ಮಹಾಕಾವ್ಯವನ್ನು ಕುರಿತ ಚರ್ಚೆ ಕನ್ನಡದಲ್ಲೂ ನಡೆದಿವೆ. ಕಾವ್ಯ ಮೀಮಾಂಸಕರು ಮತ್ತು ಸಾಹಿತ್ಯ ವಿಮರ್ಶಕರು ಮಹಾ ಕಾವ್ಯದ ಗೊತ್ತು ಗುರಿಗಳನ್ನು ಹಾಗೂ ಸ್ವರೂಪವನ್ನು ಕುರಿತು ಚರ್ಚಿಸಿದ್ದಾರೆ. ಕನ್ನಡದ ಮಹಾಕಾವ್ಯಗಳು ಮತ್ತು ಭಾರತೀಯ ಮಹಾಕಾವ್ಯಗಳಲ್ಲದೆ ಪಾಶ್ಚಾತ್ಯ ಮಹಾಕಾವ್ಯಗಳನ್ನು ಕುರಿತ ವ್ಯಾಪಕ ಚರ್ಚೆ ನಡೆಯುತ್ತಲೇ ಇದೆ. ಮಹಾಕಾವ್ಯವೆಂದರೆ ಹೀಗಿರಬೇಕೆಂಬ ನಿರ್ದಿಷ್ಟ ಕಲ್ಪನೆಯಲ್ಲಿಯೇ ಯೋಚಿಸಿದ ಇವರೆಲ್ಲ ಕೇವಲ ಶಿಷ್ಟಕಾವ್ಯಗಳನ್ನು ಕುರಿತಾದ ಏಕಮುಖ ಚರ್ಚೆಯನ್ನು ಮಾತ್ರ ಬೆಳೆಸುವ ಮೂಲಕ ಸಾಂಸ್ಕೃತಿಕ ವಲಯದ ಬಹುಮುಖ್ಯ ಭಾಗವಾದ ಮೌಖಿಕ ಮಹಾಕಾವ್ಯಗಳನ್ನು ಮರೆತರು ಎಂದೇ ಹೇಳಬಹುದು. ಅಥವಾ ಈ ಮೌಖಿಕ ಪರಂಪರೆ ಅವರಿಗೆ ಮುಖ್ಯವಾಗಿ ಕಂಡಿಲ್ಲದಿರಲೂಬಹುದು. ಆದರೆ ಪಾಶ್ಚಾತ್ಯ ಮಹಾಕಾವ್ಯಗಳೆನಿಸಿದ ಕಲೇವಾಲಾ, ಗಿಲ್ಗಮಿಷ್ ಮತ್ತು ಬೋವುಲ್ಫ್‌ಗಳಂಥ ಕಾವ್ಯಗಳನ್ನು ಅಪ್ಪಟ ಕಾವ್ಯ ಹೌದು ಎಂದು ಪರಿಗಣಿಸಿದ ಪಾಶ್ಚಾತ್ಯ ವಿದ್ವಾಂಸರು ಆ ಸಾಲಿನಲ್ಲಿ ಅವುಗಳನ್ನು ಸ್ಪಷ್ಟವಾಗಿ ದಾಖಲಿಸಿದರು. ಬಹುರ್ಶ ಇಂಥ ನಿಷ್ಪಕ್ಷಪಾತ ಧೋರಣೆಯಿದ್ದುದರಿಂದಲೇ ಸಿ.ಎಂ. ಬೋವ್ರನಂಥ ಒಬ್ಬ ಪ್ರಮುಖ ವಿದ್ವಾಂಸ ಈ ಮೌಖಿಕ ಮಹಾಕಾವ್ಯ ಮತ್ತು ಶಿಷ್ಟ ಮಹಾಕಾವ್ಯದ ಸ್ವರೂಪದ ಬಗ್ಗೆ ಚರ್ಚಿಸುತ್ತಾ “ ಈ ಎರಡು ಬಗೆಯ ಮಹಾಕಾವ್ಯಗಳಲ್ಲಿ ವಾಚಿಕ ಮಹಾಕಾವ್ಯವೇ (Oral Epic) ಶುದ್ಧವಾದ, ಸಹಜಸ್ಫೂರ್ತವಾದ, ನೇರವಾದ, ನಿರರ್ಗಳವಾದ ನಾಗರೀಕತೆಯಿಂದ ಕಲುಚಿತವಾಗದ ಕವಿವಾಣಿ” ಎಂದು ಘೋಷಿಸಿದ. ಆದರೆ ನಮ್ಮಲ್ಲಿ ಇಂಥ ಅರಿವು ಮೂಡಲು ತಡವಾದದ್ದಾದರೂ ಯಾಕೆ? ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಮಾತ್ರ ನಮ್ಮ ದೇಶದ ಮಹಾಕಾವ್ಯಗಳು ಎಂಬ ಸಾರ್ವತ್ರಿಕ ಅಭಿಪ್ರಾಯ ನಮ್ಮದಾಗಿತ್ತು. ಈ ಎರಡೂ ಮೇರು ಕೃತಿಗಳಷ್ಟೇ ಇಡೀ ಭರತ ಖಂಡದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥ ಶಕ್ತಿಯನ್ನು ಪಡೆದುಕೊಂಡಿವೆ ಎಂಬ ನಂಬಿಕೆ ನಮ್ಮದಾಗಿತ್ತು. ಭಾರತದಾದ್ಯಂತ ಅನೇಕ ಬುಡಕಟ್ಟುಗಳು ತಮ್ಮದೇ ಆದ ರಾಮಾಯಣ ಮಹಾಭಾರತಗಳನ್ನು ಹಾಡಿಕೊಳ್ಳುತ್ತಿದ್ದರಾದರೂ ಸ್ಥಾಪಿತ ಮೌಲ್ಯಗಳಿಗೆ ಅವು ವಿರುದ್ಧವಾಗಿದ್ದುದರಿಂದಾಗಿ ಅವುಗಳನ್ನು ಮಾವ್ಯ ಮಾಡಲಿಲ್ಲ. ಮಹಾಕಾವ್ಯವೆಂದರೆ ಅದು ನೂರಾರು ಘಟನೆಗಳ ಮೊತ್ತವಾದ್ದರಿಂದ ಅಕ್ಷರ ಬಲ್ಲವನು ಮಾತ್ರ ಅಂಥದ್ದನ್ನು ರಚಿಸಬಲ್ಲರೆಂದು ತಿಳುವಳಿಕೆಯೂ ಈ ನಿರ್ಲಕ್ಷಕ್ಕೆ ಕಾರಣವಿರಬಹುದು. ಇಡೀ ಭಾರತಕ್ಕೆ ಒಂದು ಸ್ಕೃತಿ ಇದೆ, ಅದೇ ‘ಭಾರತೀಯ ಸಂಸ್ಕೃತಿ’ ಎಂಬ ಏಕಮುಖೀ ಚಿಂತನೆ ಈ ಅಭಿಪ್ರಾಯಕ್ಕೆ ಕಾರಣವಾಗಿರಬಹುದು. ಆದರೆ, ಈಗ ಒಂದು ದೇಶಕ್ಕೆ ಒಂದೇ ಸಂಸ್ಕೃತಿ ಎಂಬುದಿರುವುದಿಲ್ಲ, ಅದರಲ್ಲೂ ಭಾರತದಂಥ ದೇಶ ಬಹುಮುಖೀ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಸಂಕೀರ್ಣ ಭೂಪ್ರದೇಶವಾಗಿದ್ದು ಕೆಲವರು ಊಹಿಸುವಂಥ ಒಂದೇ ಸಂಸ್ಕೃತಿ ಇರಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಗಟ್ಟಿಗೊಳ್ಳುತ್ತಿದೆ. ಪ್ರತಿಯೊಂದು ನೆಲದ ವಿವಿಧ ಭಾಷೆಗಳು, ಅಲ್ಲಿನ ಜನ, ಅವರ ಆಚಾರ ವಿಚಾರಗಳು, ರೂಢಿಸಿಕೊಂಡ ಮೌಲ್ಯ, ಅವರ ಲೋಕದೃಷ್ಟಿ ಇತ್ಯಾದಿಗಳನ್ನು ಅವಲೋಕಿಸಿದಾಗ ಸಾವಿರಾರು ಸಂಸ್ಕೃತಿ ವಿಶೇಷಗಳು ಕಣ್ಣ ಮುಂದೆ ತಾಕಲಾಡಿ ನಮ್ಮಲ್ಲಿ ದಿಗ್ಭ್ರಮೆ ಹುಟ್ಟಿಸುತ್ತವೆ. ವಾಸ್ತವವಾಗಿ ಸ್ಥಳೀಯವಾದ, ನೆಲದ ಗುಣ ಪಡೆದ, ಆಯಾ ಜನತೆಯ ಉರಿರಿನೊಡನೆ ಬೆಳೆದು ಬಂದು ಈ ಸಾಂಸ್ಕೃತಿಕ ವಿಶೇಷಗಳು ಭಾರತೀಯ ಸಂಸ್ಕೃತಿಯ ಜೀವಕೋಶಗಳೇ ಹೊರತು ‘ಭಾರತಕ್ಕೆ ಒಂದೇ ಸಂಸ್ಕೃತಿ’ ಎಂಬುದು ಸುಳ್ಳು ಎಂದೇ ಹೇಳಬೇಕಾಗುತ್ತದೆ.

ಭಾರತದ ಬಹುಮುಖ್ಯ ಕಾವ್ಯಗಳೆಂದು ಪರಿಗಣಿಸಲ್ಪಟ್ಟ ರಾಮಾಯಣ ಮಹಾಭಾರತಗಳು ಒಬ್ಬ ಕರ್ತೃವಿನಿಂದ ರಚಿಸಲ್ಪಟ್ಟ ಕೃತಿಗಳಾದರೂ ಜನಸಾಮಾನ್ಯರ ನಡುವೆ ಅವು ವಿಸ್ತಾರಗೊಂಡ ರೀತಿ ವಿಸ್ಮಯ ಹುಟ್ಟಿಸುವಂಥದ್ದೇ. ಮೂಲತಃ ದೇವ ಭಾಷೆ ಎಂದು ಪರಿಗಣಿಸಲ್ಪಟ್ಟ, ಆದರೆ ಜನಸಾಮಾನ್ಯರ ನಡುವೆ ಇಂದು ಇಲ್ಲವಾಗಿರುವ ಭಾಷೆಗಳಲ್ಲಿ ರಚಿಸಲ್ಪಟ್ಟ, ಈ ಕಾವ್ಯಗಳನ್ನು ವಿವಿಧ ದೇಶ ಭಾಷೆಗಳು ಅನುವಾದಿಸಿಕೊಂಡವು ಅಥವಾ ಪುನರ್ ಸೃಷ್ಟಿ ಮಾಡಿಕೊಂಡವು. ಆಯಾ ನೆಲದ ಗುಣ ಸ್ವಭಾವಗಳನ್ನು ತಮ್ಮ ತಮ್ಮ ಶಕ್ತ್ಯಾನುಸಾರ ಕವಿಗಳು ಈ ಕಾವ್ಯಗಳಲ್ಲಿಯೇ ಪ್ರತಿಬಿಂಬಿಸಿದರಾದರೂ ತಮ್ಮವರಲ್ಲದ, ಇನ್ನೊಂದು ಭಿನ್ನ ಪ್ರದೇಶದ ವೈದಿಕ ವೀರರ ಕಥನವನ್ನಾಗಲೀ, ದಶಾವತಾರದ ಹಿನ್ನೆಲೆಯನ್ನಾಗಲೀ, ಆರ್ಯ ಸಂಸ್ಕೃತಿಯ ಗುಣ ವಿಶೇಷಗಳನ್ನಾಗಲೀ ಅಥವಾ ಅವರ ಸ್ಥಾಪಿತ ಮೌಲ್ಯಗಳನ್ನಾಗಲೀ ಬದಲಿಸಲು ಸಾಧ್ಯವಾಗಲಿಲ್ಲ. ‘ಅಖಿಲ ಭಾರತ’ ಪರಂಪರೆಯಲ್ಲಿ ಹರಿದುಬಂದ ಈ ಎರಡು ಪುರಾಣಗಳು ಆಳುವ ವರ್ಗಗಳ ನಡುವಿನ ದ್ವೇಷ ವೈಷಮ್ಯಗಳನ್ನು, ಪ್ರೀತಿ ಪ್ರೇಮಗಳನ್ನು, ಆ ಮೂಲಕ ಸಾಮ್ರಾಜ್ಯಶಾಹಿ ವಿಸ್ತರಣೆಯನ್ನು ಕೇಂದ್ರವಾಗಿ ಇಟ್ಟುಕೊಂಡವುಗಳು. ಇವುಗಳನ್ನೇ ಮೌಲ್ಯಗಳೆಂದು ಒಪ್ಪಿ ನಮ್ಮ ದೇಶಾ ಭಾಷಾ ಕಾವ್ಯಗಳೂ ಪೋಷಿಸಿಕೊಂಡು ಬಂದವು. ಪಂಪನ ಭಾರತದಿಂದ ಹಿಡಿದು ಕುವೆಂಪುರವರ ರಾಮಾಯಣ ದರ್ಶನದವರೆಗೆ ಈ ಮಾತು ನಿಜ ಎಂದೇ ನನ್ನ ನಂಬಿಕೆ.

ಆದರೆ, ಅದಕ್ಕೆ ಪ್ರತಿಯಾಗಿ ಸ್ಥಳೀಯ ಸಾಂಸ್ಕೃತಿಕ ವೀರರ ಕಥನಗಳನ್ನು, ಪವಾಡ ಪುರುಷರು, ಬೈರಾಗಿಗಳು, ಸಾಧಕರ ಮಹಿಮೆಗಳನ್ನು, ಅವರ ಜೀವನ ಪ್ರೀತಿಯ ವಿಷಯಗಳೆನಿಸಿದ ಮದ್ಯ, ಮಾಂಸ, ಮೈಥುನ, ಭಂಗಿಸೇವನೆಯಂಥ ನಿರಾಕರಿಸಲಾಗದ ವಿಚಾರಗಳನ್ನು, ಸ್ತ್ರೀ ಪ್ರಧಾನವಾದ ದ್ರಾವಿಡ ಮೂಲ ಮೌಲ್ಯಗಳನ್ನು ಹಾಗೂ ಈ ಮೂಲಕ ತಮ್ಮದೇ ನೆಲದ ಗುಣವನ್ನು ಸಹಜವಾಗಿ ಹೊರಸೂಸುವ ದೀರ್ಘ ಕಥಾನಕಗಳು. ನಮ್ಮಲ್ಲಿವೆ. ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ನಿರೂಪಿಸಬಲ್ಲಂಥ ಶಕ್ತಿಪಡೆದವುಗಳು. ರಾಜಮಹಾರಾಜರ ಆಳ್ವಿಕೆಯ ವಿಧಾನಗಳೇ ನಮ್ಮ ಭವ್ಯ ಇತಿಹಾಸ ಎಂದು ಸಾರುತ್ತ ಬಂದಿರುವ ನಮ್ಮ ಬಹುಪಾಲು ಇತಿಹಾಸಕಾರರ ಕಣ್ಣು ತೆರಸಿ ಜನಸಾಮಾನ್ಯರ ಇತಿಹಾಸಕ್ಕಾಗಿ ಒತ್ತಾಯಿಸಬಲ್ಲ, ಆ ಬಗೆಗಿನ ಅರಿವು ಮೂಡಿಸಬಲ್ಲ ಶಕ್ತಿ ಈ ಕಥನಗಳಿದೆ. ಪರಂಪರಾಗತವಾದ ಶಿಷ್ಟ ಮನಸ್ಸಿನ ನಂಬಿಕೆಗಳಿಗೆ ತದ್ವಿರುದ್ಧವಾದ ಈ ಕಥನಗಳು ತಮ್ಮದೇ ಮೌಲ್ಯಗಳನ್ನು, ಜೀವನ ದೃಷ್ಟಿಯನ್ನು ಆ ಮೂಲಕ ಒಂದು ನಿರ್ದಿಷ್ಟ ನೆಲದ ಲೋಕ ದೃಷ್ಟಿಯನ್ನು ಹಾಗೂ ಅವರ ವಿವೇಕವನ್ನು ಹೇಳುತ್ತವೆ. ಜನಸಾಮಾನ್ಯರ ನಡುವಿನ ಸರಳ ವ್ಯಕ್ತಿತ್ವದ ಈ ಕಥನಗಳ ನಾಯಕರು ಸಂದರ್ಭ ಬಂದಾಗ ಉಗ್ರವಾಗಿ ಪ್ರತಿಭಟಿಸಿ ನಿಲ್ಲಬಲ್ಲವರು. ಸ್ವಾಭಿಮಾನಕ್ಕೆ ಕುಂದು ಬಂದಾಗ ಉಗ್ರವಾಗಿ ಪ್ರತಿಭಟಿಸಿ ನಿಲ್ಲಬಲ್ಲವರು. ಈ ನಾಯಕರಾದರೂ ಎಂಥವರು? ಮಾದಿಗನೆಂದು ಹೇಳಲಾಗುವ ಮಾದಪ್ಪ, ಹೊಲೆಯನೆಂದು ಕರೆಯಲಾಗುವ ಮಂಟೇಸ್ವಾಮಿ, ದನ ಕಾಯುವ ಅನಾಥ ಜುಂಜಪ್ಪ, ಕುರಿ ಕಾಯುವ ಮೈಲಾರಲಿಂಗ! ಕಾಡು ಮತ್ತು ನಡುವೆ ಸಂಬಂಧ ಸ್ಥಾಪಿಸಿಕೊಳ್ಳಬಲ್ಲ ಇವರು ಪ್ರಕೃತಿಯಲ್ಲಿನ ದುಷ್ಟ ಮೃಗಗಳನ್ನು ಒಲಿಸಿಕೊಂಡು ಅವುಗಳನ್ನು ಸ್ನೇಹದಿಂದ ಕಾಣಬಲ್ಲವರು, ಬೇಟೆಗಾರರಂತೂ ಅಲ್ಲ. ನಾಗರಿಕ ಸಮಾಜದ ಅಥವಾ ಪ್ರಭುತ್ವದ ದಬ್ಬಾಳಿಕೆಯಿಂದ ತಮ್ಮನ್ನು ನಂಬಿದ ಜನವರ್ಗಗಳನ್ನು ರಕ್ಷಿಸಬಲ್ಲವರು, ರಾಜ್ಯ ಆಳುವವರಂತೂ ಅಲ್ಲ. ದುಷ್ಟರು ಅಥವಾ ಹೆಡ್ಡರನ್ನು ಪಳಗಿಸಬಲ್ಲವರು, ಕೊಲ್ಲುವವರಲ್ಲ.

ಮಲೆಮಾದೇಶ್ವರ ಕಾವ್ಯದ ಮಾದಪ್ಪನದು ಸದಾ ಪಯಣದ ಬದುಕು. ಭಿಕ್ಷೆ ಬೇಡುವುದೇ ಅವನ ವೃತ್ತಿ. ಆದರೆ ಅವನಿಗೆ ಒಬ್ಬ ಸಾಮಾನ್ಯ ವ್ಯಕ್ತಿಗಿರಬಹುದಾದ ಆಸೆಗಳಿವೆ. ತನ್ನ ಒಕ್ಕಲುಗಳನ್ನು ಹೆಚ್ಚಿಸಿಕೊಂಡು ಒಂದು ಕಡೆ ನೆಲೆ ನಿಲ್ಲಬೇಕೆಂಬ ತವಕ ಅವನದು. ಈ ಆಸೆಯಿಂದಲೇ ಹಲವು ಜನವರ್ಗಗಳ ಪ್ರಮುಖರನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಹೂಡುತ್ತಾನೆ. ಫಲಿಸದಿದ್ದಾಗ ಮಾಟ ಮಂತ್ರಗಳ ಕಡೆಗೆ ವಾಲುತ್ತಾನೆ. ಅಂತೂ ಹೇಗೋ ಗೆಲ್ಲಬೇಕು. ಅವರನ್ನು ತನ್ನ ಪರಿಧಿಗೆ ಸೇರಿಸಿಕೊಂಡು ಅವನ ಜೀವನ ಹಸನುಗೊಳಿಸಬೇಕು ಎಂಬುದು ಅವನ ಉದ್ದೇಶ. ಮಂಟೇಸ್ವಾಮಿ ಜಗತ್ತನ್ನೇ ಸೃಷ್ಟಿಸಬಲ್ಲ ಒಬ್ಬ ಪವಾಡಕಾರ. ಆದರೆ ಸದಾ ನಡೆದಾಡುತ್ತಾ ಭಂಗಿ ಸೇವಿಸುತ್ತಾ ತಿರುಗುವ ಈ ಭೈರಾಗಿ, ಕಟ್ಟುವ ಲಿಂಗದ ಬದಲಾಗಿ ಆತ್ಮಲಿಂಗದ ಶ್ರೇಷ್ಠತೆಯನ್ನು ಸಾರುವ ಒಬ್ಬ ಜ್ಯೋತಿ ಪುರುಷ. ಎಂಥ ಕಟುಕರನ್ನೂ ಕರಗಿಸಬಲ್ಲ ಆತ್ಮಬಲ ಪಡೆದವನು. ತನಗೆ ತಕ್ಕನಾದ ಶಿಶುಮಗನನ್ನು ಪಡೆದನಂತರ ಪಾತಾಳ ಬಾವಿಯಲ್ಲಿ ಪ್ರಾಣನೀಗುವ ತವಕ ಅವನಿಗೆ. ಜುಂಜಪ್ಪನ ಅನಾಥತೆ, ಆ ಸ್ಥಿತಿಯೇ ಅವನನ್ನು ಸ್ವಾಭಿಮಾನಿಯನ್ನಾಗಿ ಬೆಳೆಸುವ ರೀತಿ ಅನನ್ಯವಾದದ್ದು. ಮೈಲಾರಲಿಂಗ ಕೊಮಾಲೆಯನ್ನು ಪಡೆಯುವ ಬಗೆಯಾಗಲಿ, ಕುರುಬರ ಮಾಳವ್ವನನ್ನು ಅಪಹರಿಸುವುದಾಗಲಿ ಅತ್ಯಂತ ಸಹಜ ಕ್ರಿಯೆಗಳು. ಮೈಲಾರಲಿಂಗ ಕುರುಬರ ಮಾಳವ್ವನನ್ನು ಪಡೆಯಲು ಶ್ರೀರಾಮನಂತೆ ಆಗಸದಲ್ಲಿ ತಿರುಗುವ ಮೀನಿಗೆ ಬಾಣ ಬಿಡುವುದಿಲ್ಲ. ಶಿಷ್ಟ ಮಹಾಕಾವ್ಯಗಳಲ್ಲಿ ಹೀಗೆ ಹೆಣ್ಣುಗಳನ್ನು ಅಪಹರಿಸಿಕೊಂಡು ಹೋಗುವ ಸಂದರ್ಭಗಳಿಲ್ಲ ಎಂದಲ್ಲ. ಮಹಾಭಾರತದಲ್ಲಿ ಈ ಪ್ರಸಂಗಗಳು ಹೇರಳವಾಗಿ ಬರುತ್ತವೆ. ಭೀಷ್ಮ ಅಂಬೆ-ಅಂಬಾಲಿಕೆಯರನ್ನು ಸೆರೆ ಹಿಡಿದು ತರುತ್ತಾನೆ. ಕೃಷ್ಣ ರುಕ್ಮಿಣಿಯನ್ನು ಅಪಹರಿಸುತ್ತಾನೆ. ಅರ್ಜುನ ವೇಷ ಮರೆಸಿ ಸುಭದ್ರೆಯನ್ನು ಲಪಟಾಯಿಸುತ್ತಾನೆ. ಆದರೆ ಇಲ್ಲೆಲ್ಲಾ ಅವರು ಮೈಲಾರಲಿಂಗನಂತೆ ಹೆಣ್ಣಿಗಾಗಿ ಗಂಟು ಬೀಳುವವರಲ್ಲ. ಕೃಷ್ಣ-ಅರ್ಜುನರೆಲ್ಲ ಶ್ರೇಷ್ಠ ನಾಯಕರಾದುದರಿಂದ ಅಪಹರಿಸಲ್ಪಡುವವರು ಈಗಾಗಲೇ ಅಪಹರಿಸುವವರ ಪರವಾಗಿರುತ್ತಾರೆ. ಆದರೆ ಮೈಲಾರನ ಪರಿಸ್ಥಿತಿಯೇ ಬೇರೆ. ಒಬ್ಬ ಕುರಿಕಾಯುವ ಅಮಾಯಕ ತನ್ನ ಆಸೆ ನೆರವೇರಿಸಿಕೊಳ್ಳಲು ಅತ್ಯಂತ ಸಹಜವಾಗಿ ಒಂದು ಹೆಣ್ಣಿಗೆ ಗಂಟು ಬಿದ್ದಿದ್ದಾನೆ. ಉಗಿದರೆ ಉಗಿಸಿಕೊಳ್ಳುತ್ತಾನೆ, ಒದೆದರೆ ಒದೆಸಿಕೊಳ್ಳುತ್ತಾನೆ. ಆದರೂ ಅವಳು ಸಿಗುವವರೆಗೂ ಬಿಡುವವನಲ್ಲ. ಲಿಖಿತ ಮಹಾಕಾವ್ಯಗಳು ಒಪ್ಪಿಕೊಂಡಿರುವ ಅಷ್ಟಾದಶ ವರ್ಣನೆ ಜನಪದ ಕಾವ್ಯದ ಉದ್ದೇಶವಲ್ಲ; ಕಂಡದ್ದನ್ನು ಕಂಡ ಹಾಗೆ ಹೇಳುವ ಪರಿಪಾಠ ಇವರದು. ಇದು ಬಾಣನ ‘ಕಾದಂಬರಿ’ ಕಾವ್ಯ ಲೋಕವಲ್ಲ. ಹಾಗೆಯೇ ಕುವೆಂಪು ಅವರ ಲಂಕೆಯ ವರ್ಣನೆಯೂ ಅಲ್ಲ. ಬದಲಾಗಿ ಕಾಡಿನ ಜನರ ಅವಿಭಾಜ್ಯ ಅಂಗವಾದ ಬೇಟೆ, ಆಹಾರ ಸಂಗ್ರಹಣೆ, ಪಶುಸಂಗೋಪನೆ, ಹುಲಿ, ಚಿರತೆ, ಹಾವು, ಚೇಳುಗಳ ಸಹಜಲೋಕ. ಇಷ್ಟೆಲ್ಲದರ ಹಿನ್ನೆಲೆಯಲ್ಲಿ ಒಂದು ಮಾತು ಹೇಳುವ ಅವಶ್ಯಕತೆ ಇದೆ. ಇಡೀ ರಾಮಾಯಣ ಒಂದು ಸಾಮ್ರಾಜ್ಯದ ವಿಸ್ತರಣೆಗೆ ಸಂಬಂಧಿಸಿದ್ದು. ರಾಮನ ಪಯಣವೇ ಸಾಮ್ರಾಜ್ಯ ವಿಸ್ತರಣೆಯ ತವಕದಿಂದ ಕೂಡಿದ್ದು. ಮಹಾಭಾರತ ಅಂಥ ಒಂದು ಸಾಮ್ರಾಜ್ಯವನ್ನು ಹಂಚಿಕೊಳ್ಳುವ ತವಕಕ್ಕೆ ಸಂಬಂಧಿಸುತ್ತದೆ. ಒಂದು ಕಡೆ ನೆಲೆಗೊಂಡು ಒಂದು ನಾಗರಿಕತೆಯನ್ನು ಕಟ್ಟಿದ ನಂತರದ ಸ್ಥಿತಿಯನ್ನು ರಾಮಾಯಣ ಮಹಾಭಾರತಗಳು ಹೇಳುತ್ತವೆ. ಆದರೆ, ಈ ಮೌಖಿಕ ಮಹಾಕಾವ್ಯಗಳಲ್ಲಿನ ಮೂಲತಃ ಅಲೆಮಾರಿಗಳೂ ಭೈರಾಗಿಗಳೂ ಆದ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರರು ಒಂದು ಕಡೆ ನೆಲೆಗೊಳ್ಳುವ ತವಕದಲ್ಲಿ ಇರುವವರು. ಹೀಗಾಗಿ ಈ ಮಹಾಕಾವ್ಯಗಳ ವಸ್ತುವೇ ಒಂದು ಕಡೆ ನೆಲೆಗೊಳ್ಳುವ ಪೂರ್ವದ ಸ್ಥಿತಿಯನ್ನೂ ಮತ್ತು ಆ ಸಂದರ್ಭದ ಘರ್ಷಣೆಗಳನ್ನೂ ಹೇಳುವಂಥದ್ದು. ಇರುವುದನ್ನು ವೈಭವಿಸುವ ಲಿಖಿತ ಮಹಾಕಾವ್ಯಗಳು ಕಾವ್ಯ ಸತ್ಯದ ಕಡೆಗೆ ಹೆಚ್ಚು ಗಮನ ಕೊಟ್ಟರೆ, ಇಲ್ಲದಿರುವುದಕ್ಕೆ ತುಡಿಯುವ ಜನಪದ ಮಹಾಕಾವ್ಯಗಳು ಜೀವನ ಸತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿವೆ ಎನ್ನಿಸುತ್ತದೆ.

* * *

ಕುಮಾರರಾಮ ಐತಿಹಾಸಿಕ ವ್ಯಕ್ತಿಯಾದರೂ ಆ ವೀರನನ್ನು ನಮ್ಮ ಜನಪದರು ಕಂಡ ಬಗೆ ಬೇರೆ. ಬಹುಶಃ ವಿಜಯನಗರ ಇತಿಹಾಸದಲ್ಲಿ ಕುಮಾರರಾಮನಷ್ಟು ಜನಮನದಲ್ಲಿ ಉಳಿದು ಪುರಾಣದ ವ್ಯಕ್ತಿಯಾದ ವೀರ ಇನ್ನೊಬ್ಬನಿಲ್ಲ. ಬಳ್ಳಾರಿಜಿಲ್ಲೆಯ ಬುಡಗ ಜಂಗಾಲರು ಅಥವಾ ವೇಷಗಾರರು ತಮ್ಮ ಬುರ್ರ ಕಥಾ ಮಾದರಿಯಲ್ಲಿ ಕನ್ನಡದಲ್ಲಿ ಹಾಡಿರುವ ಈ ಕಾವ್ಯ ಅತ್ಯಂತ ವಿಶಿಷ್ಟವಾದದ್ದು. ಜಟ್ಟಂಗೇಶ್ವರ ನೀಡುವ ಬಾಳೆ ಹಣ್ಣಿನ ವರ ಪ್ರಸಾದಕ್ಕೆ ಇಬ್ಬರು ವೀರರು ಜನ್ಮಿಸುತ್ತಾರೆ. ಹಣ್ಣು ತಿಂದ ರಾಣಿಯ ಹೊಟ್ಟೆಯಲ್ಲಿ ಕುಮಾರರಾಮ ಹುಟ್ಟಿದರೆ, ಹೋಲಿಕೆ ರಾಮ ಸಿಪ್ಪೆ ತಿಂದ ದಾಸಿಯ ಹೊಟ್ಟೆಯಲ್ಲಿ ಹುಟ್ಟುತ್ತಾನೆ. ಆರಂಭದಲ್ಲಿಯೇ ಅಪವಾದಕ್ಕೆ ಗುರಿಯಾಗುವ ದಾಸಿ ಅದನ್ನು ಪರಿಹರಿಸಿಕೊಳ್ಳುತ್ತಾಳೆ. ಆದರೆ ಅವಳ ಮಗ ಹೋಲಿಕೆರಾಮ, ಕುಮಾರರಾಮನಷ್ಟೇ ವೀರನಾದರೂ ದಾಸಿಯ ಮಗನಾದ ಕಾರಣಕ್ಕೆ ಹಲವು ರೀತಿಯ ಶೋಷಣೆಗೆ ಒಳಗಾಗುತ್ತಲೇ ಹೋಗುತ್ತಾನೆ. ವಿಜಯನಗರ ಸಾಮ್ರಾಜ್ಯದ ಸಂದರ್ಭದ ಹಲವು ಬುಡಕಟ್ಟುಗಳು ಕುಮಾರ ರಾಮನನ್ನು ತಮ್ಮ ಸಾಂಸ್ಕೃತಿಕ ವೀರನನ್ನಾಗಿ ಪರಿಗಣಿಸಿ ಅವನ ಅಣತಿಯಂತೆ ನಡೆಯುತ್ತಾರೆ. ಇವತ್ತಿಗೂ ಅನೇಕ ಕೆಳವರ್ಗಗಳಿಂದ ಪೂಜೆಗೊಳ್ಳುತ್ತಿರುವ ಕುಮಾರರಾಮ ಹಾಗೂ ದೊಂಬರ ಕನ್ಯೆ ಎಂದು ಹೇಳಲಾಗುವ ರತ್ನಾಜಿ ಹಾಗೂ ಅವಳಸುತ್ತ ಹೆಣೆದ ಕಾಮದ ಕಥೆ ಈ ಕಾವ್ಯದಲ್ಲಿ ಭಿನ್ನರೂಪದಲ್ಲಿ ಪ್ರಸ್ತಾಪಿಸಲ್ಪಡುತ್ತವೆ. ಇತಿಹಾಸದ ಘಟನೆ ಜನಪದರ ಬಾಯಲ್ಲಿ ಕಾವ್ಯವಾದಾಗ ಸಹಜವಾಗಿ ಅದು ಜನಸಾಮಾನ್ಯರ ಪರ್ಯಾಯ ಇತಿಹಾಸದಂತೆ ಕಂಡುಬರುತ್ತದೆ. ಇಂಥ ಒಂದು ಪರ್ಯಾಯ ಇತಿಹಾಸದ ಆಶಯ ಹೊತ್ತ ಈ ಕಾವ್ಯ ಹಲವು ಜನವರ್ಗಗಳು ವಿಜಯನಗರದ ಜೊತೆಗೆ ಇಟ್ಟುಕೊಂಡ ಸಂಬಂಧ ಮತ್ತು ಭಾವನೆಗಳನ್ನು ಪ್ರತಿಬಿಂಬಿಸುತ್ತದೆ.

ಕೃಷ್ಣಗೊಲ್ಲರ ಕಾವ್ಯ ಇನ್ನೊಂದು ರೀತಿಯದು. ಚಾಮರಾಜ, ಕಾಂಬೋಜರಾಜ ಮತ್ತು ಶರಬಂಧ ರಾಜರೆಂಬ ಮೂರು ತಲೆಮಾರಿನ ಅರಸರ ಕಥೆ ಇದಾದರೂ ಈ ಅರಸರು ಜನಸಾಮಾನ್ಯರ ಪ್ರತಿನಿಧಿಗಳಂತೆ ಚಿತ್ರಿತವಾಗಿದ್ದಾರೆ. ಜನಪದ ಕಥೆ ಅಥವಾ ಕಥನ ಕಾವ್ಯಗಳನ್ನು ಕಂಡು ಬರುವಂತೆ ಮಾಯ, ಮಾಟ, ಮಂತ್ರ, ಶೌರ್ಯ, ಸಾಹಸಗಳ ಸರಮಾಲೆಯನ್ನೇ ಚಿತ್ರಿಸುವ ಈ ಕಾವ್ಯ ಸುದೀರ್ಘವಾಗಿ ಸಾಗುತ್ತದೆ. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿವೆ. ಚಾಮರಾಜನೆಂಬ ಅರಸ ಬೇಟೆಗಾಗಿ ಕಾಡಿಗೆ ಹೊರಟವನು ಬೇಟೆ ಸಿಗದೆ ನಿರಾಶನಾಗಿ ಹಿಂತಿರುಗುವ ಸಂದರ್ಭದಲ್ಲಿ ದೇವಲೋಕದಿಂದ ಇಳಿದು ಬಂದು ಭೂಲೋಕದ ಪ್ರಶಾಂತ ವನವೊಂದರಲ್ಲಿ ಹಸುರೂಪದ ಕಾಮದೇವತಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣುತ್ತಾನೆ. ಯಾವುದೋ ಪ್ರಾಣಿ ಗೋಚರಿಸಿದಂತಾಗಿ ಬಾಣ ಬಿಡುತ್ತಾನೆ. ರೆಕ್ಕೆಗಳುಳ್ಳ ಕಾಮದೇವತಿ ಅಂತರಿಕ್ಷಕ್ಕೆ ಹಾರುವ ಸಾಹಸ ಮಾಡಿದರೂ ಹಾರಲಾರದೆ ಕೆಳಗೆ ಉರುಳುತ್ತದೆ. ಅದರ ಹೊಟ್ಟೆಯಲ್ಲಿ ಮಗುವೊಂದು ಬೆಳೆಯುತ್ತಿರುತ್ತದೆ. ಅದು ಭೂಲೋಕ ನೋಡಿ ಬರುತ್ತೇನೆಂದು ಹೊರಟಾಗಲೇ ಶಿವ ಅದಕ್ಕೆ ಭೂಲೋಕದ ಮನುಷ್ಯರ ಕೆಟ್ಟತನದ ಬಗ್ಗೆ ಹೇಳಿರುತ್ತಾನೆ. ಪ್ರಾಣ ಬಿಡುವ ಮೊದಲು ಅದು ಮನುಷ್ಯ ಮಾತ್ರರಾದವರ ಹೀನ ಬುದ್ಧಿಯನ್ನು ಜರಿದು ಶಾಪಕೊಟ್ಟು ಸಾಯುತ್ತದೆ. ಹೀಗೆ ಇಡೀ ಕಾವ್ಯದ ತುಂಬ ಬರುವ ವಿವಿಧ ಪ್ರಾಣಿ ಪಕ್ಷಿಗಳು, ಗಿಳಿ ಗೊರವಂಕಗಳು ಮನುಷ್ಯರಷ್ಟೇ ಮುಖ್ಯವಾದ ಜೀವಿಗಳಾಗಿ ಕಾಣಿಸಿಕೊಳ್ಳುತ್ತವೆ. ಜಗತ್ತಿನ ಸಕಲ ಚರಾಚರ ಜೀವ ಜಂತುಗಳೂ ಪ್ರಕೃತಿಯ ಮಡಿಲಲ್ಲಿ ಸಮಾನ ಎಂಬ ಬುಡಕಟ್ಟು ಸಮಾಜವಾದವೊಂದು ಇಲ್ಲಿ ಇಣುಕುಹಾಕುತ್ತದೆ.

ಕಾಂಭೋಜರಾಜನಿಗೆ ಮಕ್ಕಳಾಗದೇ ಪರಿತಪಿಸುವಾಗ, ಬರಡಾದ ಭೂಮಿಯಲ್ಲಿ ವನ-ಮಠಗಳನ್ನು ನಿರ್ಮಾಣ ಮಾಡಿದರೆ ಮಕ್ಕಲಾಗುತ್ತವೆ ಎಂದು ಹೇಳಲಾಗುತ್ತದೆ. ರಾಜನಾದರೂ ಸ್ವತಃ ಗುದ್ದಲಿ ಹಿಡಿದು, ತನ್ನ ರಾಣಿಯರ ತಲೆಯ ಮೇಲೆ ಮಣ್ಣು ಹೊರಿಸಿ ತೀರಾ ಒಬ್ಬ ಸಾಮಾನ್ಯನಂತೆ ಕಾಂಭೋಜರಾಜ ಸುಂದರ ವನವೊಂದನ್ನು ನಿರ್ಮಾಣಮಾಡಿ ಅಲ್ಲಿ ವಿವಿಧ ಗಿಡಮರಗಳನ್ನು ಬೆಳೆಯುತ್ತಾನೆ. ಆ ವನದ ಹಣ್ಣು ಹಂಪಲುಗಳನ್ನು ತಿಂದು ಹಕ್ಕಿಪಕ್ಷಿಗಳು ಇಂಚರಗೈಯುತ್ತವೆ. ಹೀಗೆ ಸಕಲ ಪ್ರಾಣಿಗಳೂ ಸಂತೋಷಗೊಂಡು ಆಶೀರ್ವದಿಸಿದ ಮೇಲೆ ಕಾಂಭೋಜ ರಾಜನಿಗೆ ಮಕ್ಕಳಾಗುವುದು. ಪ್ರಕೃತಿ ಪ್ರೇಮವನ್ನು ಮೆರೆಯುವ ಈ ಕಾವ್ಯವನ್ನು ಇವತ್ತಿನ ಹೊಸ ಪೀಳಿಗೆಯ ಪರಿಸರದ ಕಲ್ಪನೆಯೇ ಇಲ್ಲದ ಜನ ಒದಲೇ ಬೇಕು.

ಕಾಂಬೋಜರಾಜನ ಬೆನ್ನು ಹುಣ್ಣನ್ನು ಮಾಯಿಸುವ ಔಷಧಿಗಾಗಿ ಏಳು ಸಮುದ್ರ ದಾಟಿ ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ಕಡೆಗೂ ಔಷಧಿಯ ಜೊತೆಗೆ ಹಲವು ಪತ್ನಿಯರನ್ನು ಪಡೆದು ಹಿಂತಿರುಗುವ ಕಾಂಭೋಜರಾಜನ ಮಗನಾದ ಶರಬಂಧ ರಾಜನ ಸಾಹಸವೇ ಈ ಕಾವ್ಯದ ಮುಖ್ಯ ಭಾಗ. ವಾಸ್ತವವಾಗಿ ಶರಬಂಧರಾಜನೇ ಈ ಕಾವ್ಯದ ನಾಯಕ. ಇವನು ಇಷ್ಟೆಲ್ಲ ಹೆಂಡತಿಯನ್ನು ಪಡೆದುಬಂದರೂ ಕೊನೆಯವಳಾಗಿ ಅವರ ‘ಕೃಷ್ಣಗೊಲ್ಲ’ ಬುಡಕಟ್ಟಿನ ಹೆಣ್ಣುಮಗಳನ್ನು ಮದುವೆಯಾಗಬೇಕಾಗುತ್ತದೆ. ಈ ಮದುವೆಯ ವರ್ಣನೆ ನಿಜವಾಗಿಯೂ ಒಂದು ಬುಡಕಟ್ಟಿನ ಸಂಪ್ರದಾಯವನ್ನು ಕಣ್ಣ ಮುಂದೆ ನಿಲ್ಲಿಸುತ್ತದೆ.

ಇದು ‘ಕೃಷ್ಣಗೊಲ್ಲರ’ ಕಾವ್ಯ ಹಾಡಿದವರು ಬುಡಗ ಜಂಗಾಲರು. ಕೃಷ್ಣಗೊಲ್ಲರೆಂದರೆ ಯಾರು? ಕೃಷ್ಣಗೊಲ್ಲರು ಎಂಬ ಒಂದು ಬುಡಕಟ್ಟು ಜನವರ್ಗ ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿದ್ದಾರೆ. ಈ ಚಾಮರಾಜ, ಕಾಂಭೋಜರಾಜ ಹಾಗೂ ಶರಬಂಧ ರಾಜರು ಈ ಬುಡಕಟ್ಟಿನವರು ಎಂಬುದು ನಮ್ಮ ಕಲಾವಿದೆ ಈರಮ್ಮನ ನಂಬಿಕೆ. ಇದು ಹಲವರ ನಂಬಿಕೆಯೂ ಹೌದು. ಆದ್ದರಿಂದ ಈ ಮೂರು ತಲೆಮಾರಿನ ರಾಜರ ಕಥೆಯನ್ನು ಇವರು ‘ಕೃಷ್ಣಗೊಲ್ಲರ ಕಥೆ’ ಎಂದೇ ಕರೆಯುತ್ತಾರೆ.

ಈ ಕಾವ್ಯಗಳನ್ನು ನಿರರ್ಗಳವಾಗಿ ಹಾಡಿದ ಬಳ್ಳಾರಿ ಜಿಲ್ಲೆ. ಹಳೇ ದರೋಜಿಯ ಈರಮ್ಮ ಒಬ್ಬ ಪ್ರತಿಭಾವಂತ ಕಲಾವಿದೆ. ಸಂಭಾಷಣಾಯುಕ್ತವಾದ ಕಾವ್ಯ ಮಿಶ್ರಿತ ಗದ್ಯವನ್ನು ಸೊಗಸಾಗಿ ಸ್ಪಷ್ಟವಾಗಿ ಉಚ್ಛರಿಸುತ್ತಾ ಮಧ್ಯೆ ಮಧ್ಯೆ ಹಲವು ರಾಗಗಳಲ್ಲಿ ಪಲ್ಲವಿಗಳನ್ನು ಹಾಡುವ ಈರಮ್ಮ ಒಂದು ರೀತಿಯಲ್ಲಿ ಏಕಪಾತ್ರಾಭಿನಯವನ್ನೇ ಮಾಡುತ್ತಾರೆ. ಆಂಧ್ರದ ಬುರ್ರ ಕಥೆಯಂತೆಯೇ ಸೊಗಸಾದ ಇಂಪಾದ ಈ ಕನ್ನಡ ಕಾವ್ಯಗಳು ತೆಲುಗಿನಿಂದ ಬಳುವಳಿಯಾಗಿ ಬಂದ ಕನ್ನಡ ರೂಪ ಎಂದರೆ ತಪ್ಪಲ್ಲ. ಈ ಎರಡು ಕಾವ್ಯಗಳನ್ನು ಮೊಟ್ಟ ಮೊದಲ ಬಾರಿಗೆ ಸಂಗ್ರಹಿಸಿ ಪ್ರಕಟಿಸಿದ ಕೀರ್ತಿ ನಮ್ಮ ಬುಡಕಟ್ಟು ವಿಭಾಗದ್ದು.

ಕೆಲವು ವಿದ್ವಾಂಸರ ಪ್ರಕಾರ, ಹಲವು ಗಾಯಕರಿಂದ ಹಲವು ಪಠ್ಯಗಳನ್ನು ಸಂಗ್ರಹಿಸಿ ಬೇರೆ ಬೇರೆ ಪಠ್ಯರ ಉತ್ತಮಾಂಶಗಳನ್ನು ಹೆಕ್ಕಿ ಒಂದು ಕಾವ್ಯವನ್ನಾಗಿ ಸಂಪಾದಿಸಿ ಉಳಿಕೆ ಭಾಗಗಳನ್ನು ಅನುಬಂಧದಲ್ಲಿ ನೀಡುವುದು ಅಧ್ಯಯನದ ದೃಷ್ಟಿಯಿಂದ ಉತ್ತಮವಂತೆ. ಆದರೆ ನಿಜವಾಗಿಯೂ ಸಂಬಂಧಪಟ್ಟ ಪರಂಪರೆಯ ಅತ್ಯುತ್ತಮ ಗಾಯಕರನ್ನು ಗುರುತಿಸಿ ಒಂದೇ ಪಠ್ಯವನ್ನು ಸಮಗ್ರವಾಗಿ ಸಂಪಾದಿಸಿದಾಗ ಅಧ್ಯಯನಕ್ಕೆ ಆಗುವ ಅನುಕೂಲ ನಿಜಕ್ಕೂ ಹೆಚ್ಚು ಎಂದು ನನ್ನ ನಂಬಿಕೆ. ಇಂಥ ಸಮಗ್ರ ಪಠ್ಯಗಳು ನಾಲ್ಕಾರು ಪ್ರಕಟವಾದರೆ ಸಂಶೋಧನೆ ನಡೆಸುವವರು ಅವೆಲ್ಲವನ್ನು ಬಳಸಿಕೊಳ್ಳಹುದಲ್ಲವೇ?

ಈ ಮೌಖಿಕ ಮಹಾಕಾವ್ಯಗಳನ್ನು ಜನಪದ ಮಹಾಕಾವ್ಯಗಳು ಎಂತಾಗಲೀ ಇಲ್ಲವೆ ‘ಬುಡಕಟ್ಟು ಮಹಾಕಾವ್ಯ’ಗಳು ಎಂತಾಗಲೀ ಏಕೆ ಕರೆಯುತ್ತೀರಿ. ಹೀಗೆ ಕರೆಯುವುದೇ ಕೀಳರಿಮೆ, ಬದಲಾಗಿ ಕನ್ನಡದ ಮಹಾಕಾವ್ಯಗಳೆಂದೇ ಏಕೆ ಪರಿಗಣಿಸಬಾರದು ಎಂದು ಕೆಲವು ಗೆಳೆಯರು ವಾದಿಸುತ್ತಾರೆ. ಜನಪದ ಕಾವ್ಯಗಳ ಬಗ್ಗೆ ಹಲವರ ತಾತ್ಸಾರ ಇದ್ದ ಸಂದರ್ಭದಲ್ಲಿ ಕೀಳರಿಮೆ ಇದ್ದುದು ನಿಜ. ಆದರೆ, ಈಗ ಅಂಥ ಸ್ಥಿತಿ ಇಲ್ಲ. ಆದರೆ ಆಯಾ ಕಾವ್ಯಗಳಿಗೆ ಇರುವ ಅನನ್ಯತೆಯ ದೃಷ್ಟಿಯಿಂದ ಹೀಗೆ ಕರೆದರೆ ತಪ್ಪೇನಾಗುತ್ತದೆ> ಜನಪದ ಕಾವ್ಯವೆಂದರೆ ಅದೊಂದು ಮೌಖಿಕ ಪರಂಪರೆಯಿಂದ ಬದುಂದಾಗಿದ್ದು, ಜನಸಾಮಾನ್ಯರ ಪರವಾದದ್ದು ಅನ್ನುವ ಕಾರಣಕ್ಕಾದರೂ ನಾವು ಹಾಗೆ ವಿಂಗಡಿಸಿ ಹೇಳಬೇಕೇ ಹೊರತು ಕೀಳರಿಮೆಯ ಕಾರಣಕ್ಕೆ ಖಂಡಿತ ಅಲ್ಲ.

ಇನ್ನೊಂದು ಮುಖ್ಯ ವಿಚಾರ, ಇವುಗಳನ್ನು ‘ಬುಡಕಟ್ಟು ಮಹಾಕಾವ್ಯ’ ಎಂದು ನಾವು ಕರೆದಿರುವುದಕ್ಕೆ ಕೂಡ ಕಾರಣಗಳಿವೆ. ಬುಡಕಟ್ಟು ಜನರೇ ಹಾಡಿದ ಕಾವ್ಯ ಬುಡಕಟ್ಟು ಕಾವ್ಯವಾಗುತ್ತದೆ, ನಿಜ. ಆಗೆಯೇ ಯಾವುದೇ ಕಾವ್ಯದಲ್ಲಿ ಬುಡಕಟ್ಟು ಸಂಸ್ಕೃತಿಯ ಹೇರಳವಾದ ಅಂಶಗಳಿದ್ದಲ್ಲಿ ಅದು ಬುಡಕಟ್ಟು ಕಾವ್ಯ ಆಗುವುದಿಲ್ಲವೇ? ಈ ಹಿನ್ನೆಲೆಯಲ್ಲಿ ಮಲೆಮಾದೇಶ್ವರ ಕಾವ್ಯವಾಗಲೀ, ಮಂಟೇಸ್ವಾಮಿ ಕಾವ್ಯವಾಗಲೀ, ಜುಂಜಪ್ಪನ ಕಾವ್ಯವಾಗಲೀ, ಕುಮಾರರಾಮ ಅಥವಾ ಸಿರಿ ಕಾವ್ಯವಾಗಲೀ ಒಂದು ಕಾಲದ ಬುಡಕಟ್ಟು ಸಂಸ್ಕೃತಿಗಳ ನಡುವಿನ ಮೌಲ್ಯಗಳ ಸಂಘರ್ಷದ ಕಥಾನಕಗಳೇ ಆಗಿವೆ. ನಾವು ಸಂಗ್ರಹಿಸುತ್ತಿರುವ ಇತರ ಕಥನಗಳು ಕೂಡ ಇದೇ ತಿಳುವಳಿಕೆಯ ಮೇಲೆ ಸಂಗ್ರಹಿತವಾಗುತ್ತಿವೆ. ಹಾಗೆಂದಾಕ್ಷಣ ಇವು ಕೇವಲ ಬುಡಕಟ್ಟ ಸಂಸ್ಕೃತಿಗೆ ಸಂಬಂದಿಸಿದವುಗಳು ಎಂದು ಹೇಳಬೇಕಾಗಿಲ್ಲ. ಆಯಾ ಪರಿಸರದ ಇತರೆಲ್ಲ ಅಂಶಗಳೂ ಇಲ್ಲಿ ಬಂದೇ ಬರುತ್ತವೆ. ನಮ್ಮ ವಿಭಾಗದ ಅಧ್ಯಯನದ ದೃಷ್ಟಿಯಿಂದ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಕಾವ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ ಅಷ್ಟೆ. ದಕ್ಷಿಣ ಭಾಗರ ಸೋಲಿಗರು, ಕುರುಬರು, ಬೇಡರು, ಉಪ್ಪಾರರು, ಮಾದಿಗರು ಮಲೆಮಾದೇಶ್ವರ ಮತ್ತು ಮಂಟೇಸ್ವಾಮಿ ಕಥನಕ್ಕೆ ಸಂಬಂಧಿಸಿದ ಜನ ವರ್ಗಗಳಾದರೆ, ಮಧ್ಯ ಕರ್ನಾಟಕದ ಕಾಡು ಗೊಲ್ಲರು ಜುಂಜಪ್ಪನ ಕಾವ್ಯಕ್ಕೆ ಸಂಬಂಧಿಸಿದವರು. ಕುಮಾರರಾಮ. ಹಾಗೂ ಕೃಷ್ಣಗೊಲ್ಲರ ಕಾವ್ಯ ಹಾಡಿದವರು ಬಳ್ಳಾರಿ ಜಿಲ್ಲೆಯ ಬುಡಗ ಜಂಗಾಲರು ಅಥವಾ ವೇಶಗಾರರು. ‘ಸಿರಿ’ ಕಾವ್ಯವನ್ನು ಹಾಡಿದಾಕೆ ದಕ್ಷಿಣ ಕನ್ನಡದ ಮೇರರ ಹೆಣ್ಣು ಮಗಳು. ಈ ಐದು ಮಹಾಕಾವ್ಯಗಳಲ್ಲದೆ, ಉತ್ತರ ಕನ್ನಡ ಗೊಂಡರು, ಹಾಲಕ್ಕಿ ಒಕ್ಕಲಿಗರು, ಕೊಡಗಿನ ಯರವರು ಹಾಗೂ ಅರೆಮಾರಿಗಳಾದ ಕಿನ್ನರಿ ಜೋಗಿಗಳು ಹಾಗೂ ಮೈಲಾರಲಿಂಗನ ಭಕ್ತರಿಂದಲೂ ಕಥಾನಕಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಮ್ಮ ವಿಭಾಗ ತೊಡಗಿದೆ. ಇದೀಗ ಮೊದಲ ಹಂತವಾಗಿ ಐದು ಮಹಾಕಾವ್ಯಗಳು ಬೃಹತ್ ರೂಪದಲ್ಲಿ ಹೊರಬರುತ್ತಿವೆ. ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರು ಸ್ವತಃ ಕವಿಗಳು ಹಾಗೂ ಸಹೃದಯರು. ಅವರ ತೀವ್ರಾಸಕ್ತಿಯೇ ನಮಗೆ ಚೈತನ್ಯ ಮತ್ತು ಶಕ್ತಿಯನ್ನು ತುಂಬಿದೆ. ಇಂಥ ಒಂದು ಉತ್ತಮ ಯೋಜನೆ ಕಾರ್ಯಗತಗೊಳ್ಳುವುದು ಅಷ್ಟು ಸುಲಭವಲ್ಲ. ಸಂಗ್ರಹಿಸಿದರೂ ಪ್ರಕಟಿಸುವುದು ಮತ್ತೂ ಕಷ್ಟವಾದ ಕೆಲಸ. ಆದರೆ ಇಂಥ ಮೌಲ್ಯಯುತ ಕೆಲಸಗಳ ಮೂಲಕವೇ ಕನ್ನಡ ವಿಶ್ವವಿದ್ಯಾಲಯಕ್ಕೆ ದೇಶಾದ್ಯಂತ ಖ್ಯಾತಿ ತಂದುಕೊಟ್ಟ ನಮ್ಮ ಮೊದಲ ಕುಲಪತಿ ಚಂದ್ರಶೇಖರ ಕಂಬಾರರ ಸೇಜನಶೀಲ ಗುಣ ಈ ಕಾವ್ಯಗಳ ಪ್ರಕಟಣೆಗೆ ಕಾರಣವಾಯಿತು ಎಂದರೆ ಅದು ಅತಿಶಯೋಕ್ತಿ ಆಗಲಾರದು. ಕಾವ್ಯಾಸಕ್ತರಿಗೆ, ಅಧ್ಯಯನಕಾರರಿಗೆ ಹಾಗೂ ಸಂಸ್ಕೃತಿ ಚಿಂತಕರಿಗೆ ಈ ಕಾವ್ಯ ಒಂದು ಮಹತ್ವದ ಆಕರವಾಗಬಲ್ಲದು ಎಂಬುದು ನಮ್ಮೆಲ್ಲರ ಆಶಯ. ಅಷ್ಟಾದರೆ ಈ ಶ್ರಮ ಸಾರ್ಥಕ.

ಹಿ.ಚಿ. ಬೋರಲಿಂಗಯ್ಯ