ದಕ್ಷಿಣ ಭಾರತದಲ್ಲಿರುವ ಒಂದು ಪ್ರಾಂತ್ಯ ಕೊಡಗು. ಅನೇಕ ವರ್ಷಗಳಿಂದಲೂ ಇದು ಪ್ರತ್ಯೇಕವಾದ ಭೂಪ್ರದೇಶ. ಆದರೆ ೧೯೫೬ರಲ್ಲಿ ಮೈಸೂರು ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಅನಂತರ ಮೈಸೂರು ರಾಜ್ಯದ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದಾಯಿತು. ಕೊಡಗಿಗೆ ಬೇರೆಬೇರೆಯಾದ ಹೆಸರುಗಳಿವೆ. ಅವುಗಳೆಂದರೆ ‘ಕ್ರೊಡದೇಶ’, ‘ಮಲೆನಾಡು’, ಕೊಡಿಮಲೆಗಳ ನಾಡು, ಕೊಡಿಮಲೆ.

ಕೊಡಗು ಸೌಂದರ್ಯದ ತವರೂರು, ವೀರರನಾಡು, ಎರಡನೇ ಕಾಶ್ಮೀರವೆಂದೇ ಖ್ಯಾತಿ ಹೊಂದಿದೆ. ಬೆಟ್ಟ, ಗುಡ್ಡ, ಹಳ್ಳ-ಕೊಳ್ಳ ಶಿಕರ-ಪರ್ವತ ಶ್ರೇಣಿ, ಕೆರೆ-ಬಾವಿ, ಅಳವಾದ ಕಣಿವೆಗಳು, ಸದಾ ನಿರಂತರವಾಗಿ ಹರಿಯುವ ನದಿಗಳಿದ್ದು ಫಲವತ್ತಾದ ಭೂ ಪ್ರದೇಶವನ್ನೊಳಗೊಂಡಿದೆ. ಶತಶತಮಾನಗಳಿಂದಲೂ ಕೊಡಗು ಹೊರಜಗತ್ತಿನ ಸಂಪರ್ಕ ಕಡಿದುಕೊಂಡು ತನ್ನದೇ ಆದ ವಿಶಿಷ್ಟ ಅಂಶಗಳಿಂದ ಕೂಡಿದೆ ಆದರೆ ಭಾರತಕ್ಕೆ ಬ್ರಿಟಿಷರು ಆಗಮಿಸಿ ವಸಾಹತುಗಳನ್ನು ಸ್ಥಾಪಿಸಿದ ನಂತರದಲ್ಲೆ, ಕೊಡಗಿನ ಗಡಿಗಳಿಗೆ ತೆರೆಬಿದ್ದಿತು. ದೇಶವಿದೇಶಗಳ ನಡುವಣ ನಂಟು ಕ್ಷಣಕ್ಷಣಕ್ಕೂ ವೃದ್ದಿಸುತ್ತಾ, ಸಾಗುತ್ತಿರುವುದನ್ನು ಕಾಣಬಹುದು.

ಕೊಡಗು ಎಂದು ಉಚ್ಚರಿಸುವುದೇ ಸಂತಸ. ಇದರ ವಿಸ್ತೀರ್ಣ ೧೯೫೨ ಚ.ಮೈಲಿ. ಸುಮಾರು ೫೦೦ ಮೈಲಿಗಳಷ್ಟು ಅರಣ್ಯಮಯ.ಇದರ ದಕ್ಷಿಣಕ್ಕೆ ಬ್ರಹ್ಮಗಿರಿ ಬೆಟ್ಟವಿದ್ದು ತಲಕಾವೇರಿಯವರೆಗೂ ಚಾಚಿರುತ್ತದೆ. ಪೂರ್ವದಲ್ಲಿ ಪುಷ್ಪಗಿರಿ ಬೆಟ್ಟದ ಸಾಲು ಇದ್ದು ಆಕರ್ಷಣಿಯವಾಗಿದೆ. ಕೊಡಗಿನ ತಲಕಾವೇರಿ ಎಂಬ ಪ್ರದೇಶದಲ್ಲಿ ಇದು ಉದ್ಭವವಾಗುತ್ತದೆ, ಹಾಗೇಯೇ ವ್ಯವಸಾಯಕ್ಕೆ ಯೋಗ್ಯವಾಗಿದೆ. ಕೊಡಗಿನ ದಕ್ಷಿಣ ಭಾಗದ ‘ಇರ್ಪು’ ಎಂಬಲ್ಲಿ ಕಾವೇರಿ ನದಿಯ ಉಪನದಿಯಾದ ‘ಲಕ್ಷ್ಮಣತೀರ್ಥ’ ನದಿ ಹುಟ್ಟಿ ಹರಿಯುತ್ತದೆ. ಇವುಗಳಲ್ಲದೇ ಹೇಮಾವತಿ, ಹಾರಂಗಿ, ಬರಪೊಳ ಮುಂತಾದ ನದಿಗಳು ಕಾವೇರಿ ನದಿಗೆ ವಿಲೀನವಾಗುತ್ತದೆ.

ಕೊಡಗಿನ ಹವಾಗುಣ ಎಂತವರನ್ನು ಮೈನಡುಗಿಸುವಂತದ್ದು. ಕೊಡಗನ್ನು ವಾತಾವರಣಕ್ಕೆ ಅನುಗುಣವಾಗಿ ಮೂರು ರೀತಿಯಾಗಿ ಮಾಡಿಕೊಳ್ಳಬಹುದಾಗಿದೆ. ನವಂಬರ್ ತಿಂಗಳಿನಿಂದ ಫೆಬ್ರವರಿ ವರೆಗೆ ಚಳಿಗಾಲ, ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಬೇಸಿಗೆಕಾಲ ಮತ್ತು ಜುಲೈಯಿಂದ ಅಕ್ಟೋಬರ್ ತಿಂಗಳವರೆಗೆ ಮಳೆಗಾಲವಾಗಿರುತ್ತದೆ.

ದೇಶೀಯವಾಗಿ ಅನೇಕ ಜಾತಿ, ಜನಾಂಗ ವರ್ಗ, ವರ್ಣ, ವಿಶೇಷವರ್ಗ ಮತ್ತು ಬುಡಕಟ್ಟುಗಳಿಗೆ ಸಂಬಂಧಪಟ್ಟ ಜನಪದರಿದ್ದು ಅವರದೇ ಆದ ಭಾಷೆ, ಸಾಹಿತ್ಯ, ನುಡಿಗಟ್ಟು, ಅಚರಣೆ, ವೇಷಭೂಷಣಗಳು, ಊಟೋಪಚಾರ, ವಿವಾಹ, ಸಂಪ್ರದಾಯ, ಗಾದೆ, ಒಗಟು, ಲಾವಣಿ, ವಾಸ್ತುಶಿಲ್ಪ, ಸಂಗೀತ, ವಾದ್ಯ. ಹೀಗೆ ಹಲವಾರು ಆಚರಣೆಗಳಿದ್ದು ವೈವಿಧ್ಯಮಯವಾಗಿರುತ್ತವೆ. ಕೊಡಗು ಕೂಡ ಇವುಗಳಿಂದ ಹೊರತಾಗಿರುವುದಿಲ್ಲ. ಕೊಡಗಿನಲ್ಲಿ ಕೊಡವರ ಜೊತೆಗೆ ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರು, ಆರೆಭಾಷೆ ಗೌಡರು, ತಮಿಳರು, ಮಲೆಯಾಳದವರು, ಮುಸ್ಲಿಮರು, ತಳು, ಕೊಂಕಣಿ, ಕಾಪಾಳ, ಯರವ, ಮೇದ, ಕೆಂಬಟ್ಟಿ, ಐರಿ, ಹೆಗ್ಗಡೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ವಾಸಿಸುತ್ತಿದ್ದಾರೆ.

ಕೊಡವರ ಶರೀರ ರಚನೆ, ಆಹಾರ ಪದ್ಧತಿ, ವಿವಾಹ, ಕಲೆ, ಆಭರಣ, ವಾದ್ಯಗಳು, ಸಾಹಿತ್ಯ, ಬೇಟೆ, ಗೀತೆ, ಸಾವು, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು, ಸಾಮಾಜಿಕ, ರಾಜಕೀಯ, ಆರ್ಥಿಕಪದ್ದತಿ ಕೊಡಗಿನಲ್ಲಿಯೇ ನೆಲೆನಿಂತಿರುವ ಇತರ ಜನಾಂಗದವರಿಗಿಂತ ಭಿನ್ನವಾಗಿರುತ್ತವೆ.

ಕೊಡವರು : ಕೊಡವರ ಮೂಲವನ್ನು ತಡಕಾಡುವ ಸಲುವಾಗಿ ಅನೇಕ ಗ್ರಂಥಗಳು, ಕಾವ್ಯಗಳು ಮತ್ತು ಪುರಾಣಗಳನ್ನು, ಅವಲೋಕಿಸುವಾಗ ಪ್ರಶ್ನೆಗಳು ಎದುರಾದವು. ಕೊಡವರು ದೇಶಿಯರೆ, ವಿದೇಶಿಯರೇ, ಸ್ಥಳೀಯರೆ ಅಥವಾ ಬೇರೆ ಭೂಭಾಗದಿಂದ ಬಂದು ಕೊಡಗಿನಲ್ಲಿ ನೆಲೆಸಿದವರೆ ಎಂಬುದು. ಒಟ್ಟಿನಲ್ಲಿ ಇವರ ಮೂಲದ ಬಗ್ಗೆ ಸಾಕಷ್ಟು ವೈರುಧ್ಯಗಳಿವೆ. ಇವರ ಬಗ್ಗೆ ಕೆಲವು ಗ್ರಂಥಗಳು ಮಹಾಕಾವ್ಯಗಳು, ಪುಸ್ತಕಗಳು, ಲೇಖನಗಳು, ವಿದ್ವಾಂಸರ ಮತ್ತು ಕೊಡವ ಪೂರ್ವಜರ ಆಧಾರದ ಮೇಲೆ ಕೆಲವು ಅಭಿಪ್ರಾಯಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.

ಕೊಡವರು ಪಶ್ಚಿಮ ಭಾರತದಲ್ಲೇ ಕಂಡು ಬರುವ ಸಿಡಿಯೋ ದ್ರಾವಿಡ ಪಂಗಡಕ್ಕೆ ಸೇರಿದವರೆಂದು ಗುರುತಿಸಲಾಗಿದೆ. ‘ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಿ. ಎಲ್. ರೈಸ್ ಅವರು ಪಶ್ಚಿಮ ಭಾರತದಲ್ಲಿರುವ ಈ ಬುಡಕಟ್ಟಿನ ಜನರು ಕೊಡಗಿಗೆ ಬಂದು ನೆಲಸಿ ಅಲ್ಲಿಯ ಬೆಟ್ಟಗುಡ್ಡಗಳ ಪ್ರದೇಶ ಮತ್ತು ಹವಾಗುಣಕ್ಕೆ ಹೊಂದಿಕೊಂಡು ಕೊಡವರಾಗಿರುತ್ತಾರೆ.

ರಿಸ್ಲೆ : ಇವರು ಪ್ರಕಾರ ಆಧುನಿಕ ಭಾರತದ ಮಾನವ ಬುಡಕಟ್ಟುಗಳ ವಿಂಗಡಣೆಯ ಪಂಕ್ತಿಯಲ್ಲಿ ಕೊಡವರು ಸಿಡಿಯೋ ದ್ರಾವಿಡ ಬುಡಕಟ್ಟಿಗೆ ಸೇರಿದವರಾಗಿದ್ದಾರೆಂದು ತಿಳಿಸಿದ್ದಾರೆ.

ಡಿ. ಎನ್. : ಕೃಷ್ಣಯ್ಯ ಅವರು ಕೊಡವರ ಮೂಲಪುರುಷರು ಹಿಂದೂಸ್ತಾನದ ಸಿಂಧುನದಿ ಕಣಿವೆಯ ವಾಯುವ್ಯ ದಿಕ್ಕಿನಿಂದ ಮೊಹೆಂಜೊದಾರೊ ಮತ್ತು ಹರಪ್ಪಗಳು ಒಳ್ಳೆಯ ಸ್ಥಿತಿಯಲ್ಲಿದ್ದಾಗ ಬಂದು ನೆಲಸಿ, ಮುಂದಿನ ಶತಮಾನಗಳಲ್ಲಿ ಅವರ ಜನ ಸಂಖ್ಯೆ ಹೆಚ್ಚಾಗುತ್ತಾ ಮತ್ತು ಬೇರೆ ಕಾರಣಗಳಿಂದ ದಕ್ಷಿಣಕೊಡಗಿಗೆ ಬಂದರೆಂದು ಕೆಲವು ಪಾಶ್ಚಾತ್ಯ ವಿದ್ವಾಂಸರ ಅಭಿಪ್ರಾಯ ಎಂದಿದ್ದಾರೆ.

ಹೊನ್ನಾರವರು : ೧೮೧೭ರಲ್ಲಿ ಕೊಡಗು ಕುರಿತು ಕೊಡವರು ತಮ್ಮ ಮೂಲದ ಬಗ್ಗೆ ಪೂರ್ಣಮಾಹಿತಿ ಇಲ್ಲದವರಾಗಿರುತ್ತಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಐತಿಹಾಸಿಕ ಹಾಗೂ ಆಧಾರಾತ್ಮಕ ಅಂಶಗಳಿಲ್ಲದಿದ್ದರೂ, ಒಟ್ಟಿನಲ್ಲಿ ಕೊಡವರು ಕೊಡಗಿನ ಹಳೆಯಕಾಲದ ಜನಾಂಗವೆಂಬುದರಲ್ಲಿ ಸಂಶಯವಿಲ್ಲ. ಕೊಡಗು ದಟ್ಟಡವಿಯ ಭೂಪ್ರದೇಶ. ಹೊರಜಗತ್ತಿನ ಸಂಪರ್ಕವಿಲ್ಲದೇ ಅನ್ಯರು ಧಾಳಿ ಮಾಡುವಂತ ಆಕರ್ಷಕ ಅಂಶಗಳು ಇದ್ದಿರಲ್ಲಿಲ್ಲ, ಹಾಗೆಯೇ ಧಾಳಿ ಸುಲಭಸಾಧ್ಯವಿಲ್ಲದಾಗಿದ್ದು ಆ ಜನಾಂಗವು ತನ್ನ ವೈವಿಧ್ಯಮಯವಾದ ಸಂಸ್ಕೃತಿಯನ್ನು ತನ್ನ ದೈನಂದಿನ ದಿವಸಗಳಲ್ಲಿ ಉಳಿಸಿಕೊಂದು ಬಂದಿದೆ.

ಡಿ.ಎನ್. ಕೃಷ್ಣಯ್ಯ ಅವರು ಮೆಸ್ಸಿಡೋನಿಯಾದ ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದಾಗ ಕೊಡವರು ದಂಡಿನಲ್ಲಿದ್ದರು. ಅನಂತರ ದಕ್ಷಿಣದ ಕಡೆ ಪ್ರಯಾಣ ಬೆಳೆಸಿ, ಕೊಡಗಿನ ಸೌಂದರ್ಯ ಹಾಗೂ ಪ್ರಕೃತಿಯ ಸೊಬಗಿಗೆ ಆಕರ್ಷಿತರಾಗಿ ಉಳಿದುಕೊಂಡವರೇ ಕೊಡವರಾದರು.

ಅನೇಕ ವಿದ್ವಾಂಸರು, ಲೇಖಕರು, ಕೊಡವರ ಕುರಿತು ಹೀಗೆ ಪ್ರಸಂಶಿಸಿರುತ್ತಾರೆ. ಕೊಡವರು ಇಂಡೋ-ಆರ್ಯನ್ ಸಂತತಿಯವರೆಂದೂ, ಕ್ಷತ್ರಿಯರೆಂದೂ ಹಾಗೂ ಮಹಾಭಾರತದಲ್ಲಿ ಬರುವಂಥ ಪಾಂಡವರ ಸಂತತಿಯವರೆಂದಿದ್ದಾರೆ.

ಕೊಡವರ ಪೂರ್ವಜರ ಪ್ರಕಾರ, ಕೊಡವರಾದ ನಾವು ಎಲ್ಲಿಂದಲೂ ಬಂದವರಲ್ಲ. ಆದಿಮಕಾಲದಿಂದಲೂ ನಾವು ಕೊಡಗಿನಲ್ಲಿಯೇ ಹುಟ್ಟಿ ಬೆಳೆದು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ.

ಈ ಮೇಲಿನ ವ್ಯಾಖ್ಯೆಗಳನ್ನು ಗಮನಿಸಿದಾಗ ಕೊಡವರ ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸ್ಪಷ್ಟವೆಂದು ಹೇಳಬಹುದು. ಕೊಡವರ ಶಾರೀರಿಕ ರಚನೆಯಲ್ಲಿ ವ್ಯತ್ಯಾಸಗಳಿದ್ದು, ಇವರು ದಕ್ಷಿಣ ಭಾರತದ ಜನಾಂಗಗಳ ಗುಂಪಿಗೆ ಬಾರದೆ, ಮಹೆಂಜೊದಾರೊವಿನಲ್ಲಿ ಸಿಕ್ಕಿರುವ ಪುರಾವೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಕೊಡವರು ಬುಡಕಟ್ಟಿನ ಜನರಾಗಿದ್ದು, ಉತ್ತರ ಭಾರತದಿಂದ ದಕ್ಷಿಣಭಾರತಕ್ಕೆ ಬಂದು ಕೊಡಗಿನಲ್ಲಿ ನೆಲೆ ನಿಂತಿರಬಹುದೆಂದು ಹೇಳಬಹುದಾಗಿದೆ.

ಸಾಮಾಜಿಕತೆ : ಕೊಡವರು ಕೊಡಗಿನಾದ್ಯಂತ ಒಟ್ಟಾಗಿ ವಾಸಿಸುತ್ತಾ ಬಂದಿರುವುದಿಲ್ಲ. ಅದುದರಿಂದ ಇವರ ಗ್ರಾಮರಚನೆಯು ಇತರ ಜನಾಂಗದವರಿಗಿಂತ ಭಿನ್ನ. ಕೊಡವ ಕುಟುಂಬವು ಮತ್ತೊಂದು ಕುಟುಂಬದಿಂದ ಅರ್ಧ ಅಥವಾ ಒಂದು ಮೈಲಿ ದೂರದಲ್ಲಿ ಮನೆಕಟ್ಟಿಕೊಂಡು ಜೀವನ ನಡೆಸುವುದನ್ನು ಕಾಣಬಹುದಾಗಿದೆ.

ಸಾಮಾನ್ಯವಾಗಿ ಪ್ರತಿಯೊಂದು ಕುಟುಂಬವು ಅವರವರ ತೋಟ, ಗದ್ದೆ ಇರುವಲ್ಲಿ ಮನೆಕಟ್ಟಿಕೊಂಡಿರುತ್ತಾರೆ. ಹೆಚ್ಚು ಆಸ್ತಿ ಹೊಂದಿರುವ ಕೊಡವರು ಇತರ ಕೊಡವರಿಗಿಂತ ತುಂಬಾ ದೂರದಲ್ಲಿ ನೆಲೆಸಿದ್ದಾರೆ. ಹೀಗೆ ದೂರವಿರುವ ಅನೇಕ ಕುಟುಂಬಗಳು ಸೇರಿ ಒಂದು ಗ್ರಾಮ ರಚನೆಯಾಗಿರುತ್ತದೆ. ಅಲ್ಲದೆ ಇವರ ತೋಟ, ಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಅವರ ಜಮೀನಿನ ಪಕ್ಕದಲ್ಲೇ ಮನೆಗಳನ್ನು ಕಟ್ಟಿ ವಾಸಮಾಡಲು ಅನುಕೂಲ ಮಾಡಿಕೊಟ್ಟಿರುವರು.

ದೂರ ದೂರದಲ್ಲಿ ಕಟ್ಟಿಕೊಂಡಿರುವ ಮನೆಗಳೆಲ್ಲಾ ಸೇರಿಕೊಂಡು ಗ್ರಾಮವಾಗಿರುತ್ತದೆ. ಈ ಗ್ರಾಮಕ್ಕೆ ಒಬ್ಬ ‘ತಕ್ಕ’ನಿರುತ್ತಾನೆ. ಗ್ರಾಮದವರೆಲ್ಲ ಸೇರಿಕೊಂಡು ‘ತಕ್ಕ’ನನ್ನು ಆರಿಸುವರು. ಇವನ ಆದೇಶದಂತೆ ಗ್ರಾಮದ ಕೆಲಸ ಕಾರ್ಯಗಳು ಮುಂದುವರೆಯುತ್ತವೆ. ಊರ ದೇವಸ್ಥಾನ, ಬಯಲಿನಲ್ಲಿರುವ ದೇವರಮಂದ್, ಕೆರೆ, ಸೇತುವೆ, ಇನ್ನಿತರ ಅಭಿವೃದ್ದಿ ಕೆಲಸಕಾರ್ಯಗಳು ‘ತಕ್ಕ’ನಿಂದ ಜರುಗುತ್ತವೆ. ಅಲ್ಲದೆ ಬೇರೆ ಊರುಗಳಿಂದ ಬರುವಂಥ ಮುಖ್ಯ ಅತಿಥಿಗಳು, ಯಾತ್ರಿಕರು, ಪ್ರೇಕ್ಷಕರ ಮೇಲ್ವಿಚಾರಣೆ ಈತನಿಗೆ ಸೇರಿದ್ದಾಗಿರುತ್ತದೆ. ಈತನಿಗೆ ಪ್ರೋತ್ಸಾಹಿಸುವುದಕ್ಕಾಗಿ ಗ್ರಾಮಸ್ಥರು ವರ್ಷಕ್ಕೊಮ್ಮೆ ಹಣ ಅಥವಾ ಧಾನ್ಯದ ರೂಪದಲ್ಲಿ ಕೊಡವರು. ಕೊಡವರೊಳಗೆ ಜಗಳ, ಅಥವಾ ಕಷ್ಟಸಂಭವಿಸಿದರೆ ಬಗೆಹರಿಸುವುದರ ಜೊತೆಗೆ ಸಹಾಯವಾಗುವಂತೆ ‘ತಕ್ಕ’ನು ಮಾಡುವನು.

ಗ್ರಾಮದೊಳಗೆ ವಾಸಿಸುವಂಥ ಕೊಡವರು ಆ ಗ್ರಾಮದ ನಿಯಮಗಳಿಗೆ ಒಳಪಟ್ಟಿರುತ್ತಾರೆ. ಅವುಗಳನ್ನು ಮೀರುವಹಾಗಿಲ್ಲ, ಹಾಗೇನಾದರೂ ಆದರೆ ತಪ್ಪಿತಸ್ಥರೆಂದೂ ನಿರ್ಧರಿಸಿ ಅವರಿಗೆ ದಂಡ ಹಾಕಲಾಗುತ್ತದೆ, ಜೊತೆಗೆ ಅದಕ್ಕೆ ಗುರಿಯಾದ ವ್ಯಕ್ತಿಗೆ ಸಮಾಜದಲ್ಲಿ ಸ್ಥಾನ ಇರುವುದಿಲ್ಲ. ಸಾಮಾನ್ಯವಾಗಿ ದೇವರ ಕೆಲಸದಲ್ಲಿ ಭಾಗಿಯಾಗದಿದ್ದಾಗ, ನೃತ್ಯ, ಹಿಂಸೆ, ಬೇಟೆ, ಹಬ್ಬ, ಉತ್ಸವ, ಜಾತ್ರೆ, ಮತ್ತು ಬೇರೆ ಸ್ತ್ರೀಯೊಂದಿಗೆ ಸಂಪರ್ಕವಿರಿಸಿಕೊಂಡಿದ್ದಾಗ ಅಂತವರಿಗೆ ಶಿಕ್ಷೆ ವಿಧಿಸುವುದರ ಜೊತೆಗೆ ಅವರು ದಂಡ ತೆರಬೇಕಾಗುತ್ತದೆ. ಹೀಗೆ ಬಂದಂತಹ ಹಣದಿಂದ ಗ್ರಾಮದ ಪುರೋಭಿವೃದ್ಧಿಗೆ ಬಳಸುವರು.

ಮೇಲೆ ಹೇಳಲಾಗಿರುವ ಅಂಶಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಗ್ರಾಮದಿಂದ ಬಹಿಷ್ಕರಿಸಲಾಗುತ್ತದೆ. ಅಂತಹವರು ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ ಕ್ಷೌರಿಕ ಕ್ಷೌರಮಾಡಬಾರದು, ಮಡಿವಾಳ ಬಟ್ಟೆ ಒಗೆಯುವುದಾಗಲಿ, ಬೇರೆ ಕೊಡವರು ಅವನ ಮನೆಗೆ ಹೋಗುವಂತಿಲ್ಲ, ಹಾಗೆಯೇ ದನಕರುಗಳನ್ನು ಕೂಡ ಬಯಲುಗಳಿಗೆ ಬಿಡುವಂತಿಲ್ಲ. ತಪ್ಪುಮಾಡಿದವನು ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡು ಇನ್ನು ಮುಂದೆ ಹಾಗೆ ಮಾಡುವುದಿಲ್ಲವೆಂದು ಹೇಳಿದಾಗ ಗ್ರಾಮದವರೆಲ್ಲ ಒಗ್ಗೂಡಿ ಅವನಿಂದ ತಪ್ಪು ಕಾಣಿಕೆಯನ್ನು ತೆಗೆದುಕೊಂಡು, ಇನ್ನು ಮುಂದೆ ಹಾಗೆ ಮಾಡಬಾರದೆಂದು ಹೇಳಿ ತಮ್ಮ ಒಳಗೆ ಸೇರಿಸಿಕೊಳ್ಳುವರು. ಕೊಡವರು ಸ್ನೇಹಪರರು ಹಾಗೂ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರು ಪಾಶ್ಚಿಮಾತ್ಯ ಜೀವನ ಕ್ರಮವನ್ನು ರೂಢಿಸಿಕೊಂಡು ಬಂದವರಾಗಿರುವರು. ಕೊಡವರಲ್ಲಿ ಆರ್ಥಿಕವಾಗಿ ಹಿಂದುಳಿದವರು, ಕಡಿಮೆ ಅಸ್ತಿ ಉಳ್ಳವರು ತಮ್ಮ ತೋಟ, ಗದ್ದೆ ಕೆಲಸವನ್ನು ತಾವೇ ಮಾಡಿಕೊಳ್ಳುವರು. ಆಸ್ತಿ-ಪಾಸ್ತಿಗಳನ್ನು ಹೊಂದಿಲ್ಲದವರು ಕೊಡವ ಶ್ರೀಮಂತರ ಆಸ್ತಿಗಳಲ್ಲೆ ದುಡಿಯುತ್ತಾರೆ. ಇವರು ದನ, ಕರು ಕೋಳಿ, ಹಂದಿ, ನಾಯಿ ಇನ್ನೂ ಮುಂತಾದ ಪ್ರಾಣಿಗಳನ್ನು ಸಾಕುವರು. ಇವರ ಮುಖ್ಯ ಕಸಬು ವ್ಯವಸಾಯ. ಬತ್ತ. ಕಾಫಿ, ಕಿತ್ತಳೆ, ಏಲಕ್ಕಿ, ಮೆಣಸು ಬೆಳೆಯುವರು. ಸಂಬಾರು ಪದಾರ್ಥಗಳನ್ನು ಪಕ್ಕದ ಪಟ್ಟಣದಿಂದ ಅಥವಾ ಅಂಗಡಿಗಳಿಂದ ತರಿಸಿಕೊಳ್ಳುವರು. ಪ್ರಸ್ತುತ ದಿವಸಗಳಲ್ಲಿ ಬ್ರಿಟಿಷರ ಕಾಲದಲ್ಲಿದ್ದ ಅಧಿಕಾರತ್ವ, ಶಿಕ್ಷೆ, ದಬ್ಬಾಳಿಕೆ ಈಗಿಲ್ಲ. ಕಾಲಘಟ್ಟಗಳು ಕಳೆದಂತೆ ಇವರ ಸಾಮಾಜಿಕತೆಯಲ್ಲಿಯೂ ಏರು ಪೇರುಗಳು ಘಟಿಸಿ ಬದಲಾವಣೆಗಳು ಕೂಡ ಆಗಿರುತ್ತವೆ.

ಧಾರ್ಮಿಕತೆ : ಕೊಡವರು ಆಪಾರ ಭಕ್ತಿ ಮತ್ತು ನಂಬಿಕೆಯನ್ನು ದೈವಗಳಲ್ಲಿ ಇರಿಸಿರುವರು. ಇವರು ಕಾವೇರಿ, ಭಗವತಿ, ಇಗ್ಗುತಪ್ಪ, ಐಯ್ಯಪ್ಪ, ಬೀರ, ದುರ್ಗಾದೇವಿ, ಚಾಮುಂಡೇಶ್ವರಿ, ಗಣಪತಿ, ಸುಬ್ರಹ್ಮಣ್ಯ, ಗುಳಿಕ ಇನ್ನೂ ಮುಂತಾದ ದೇವದೇವತೆಯರನ್ನು ಪೂಜಿಸುವರು. ಇವರ ಆರಾಧ್ಯ ದೇವತೆ ತಲಕಾವೇರಿಮಾತೆ. ಕೊಡವರ ಮೂಲ ಪುರುಷ ‘ಗುರು’ ಅಥವಾ ‘ಕಾರಣ’ ಪ್ರತಿಯೊಂದು ಕುಟುಂಬದ ಮೂಲ ಪುರುಷನಿಗೆ ಒಂದು ದೇವರ ಕೋಣೆ ಇರುತ್ತದೆ. ಆ ಗುಡಿ ಅಥವಾ ಕೋಣೆಗೆ ಕೊಡವ ಭಾಷೆಯಲ್ಲಿ ‘ಕೈಮಡ’ ಎನ್ನುವರು. ವರ್ಷದ ಏಪ್ರಿಲ್ ೧೫ನೇ ತಾರೀಖಿನಂದು ಅಥವಾ ಆ ವಾರದಲ್ಲಿ ಆಯಾಯ ಸಾಂಪ್ರದಾಯಿಕ ಉಡುಗೆತೊಟ್ಟ ವ್ಯಕ್ತಿಯ ವಿಗ್ರಹವಿರುತ್ತದೆ. ಪೂಜೆ ಮಾಡುವವನು ಬ್ರಾಹ್ಮಣನಾಗಿರದೆ ಕೊಡವ ಕುಟುಂಬದ ಹಿರಿಯ ವ್ಯಕ್ತಿ ಪೂಜಾರಿ ಆಗಿ ಕೆಲಸ ಕಾರ್ಯ ನಿರ್ವಹಿಸುವನು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರತಿಯೊಂದು ಕುಟುಂಬದವರೂ ಅಂದಂದು ತಯಾರಿಸಿದ ಆಹಾರ ಪದಾರ್ಥಗಳನ್ನು ತಮ್ಮ ದೇವರ ಕೋಣೆಯಲ್ಲಿ ‘ಕಾರಣ’ ಅಥವಾ ‘ಗುರು’ವಿನ ಮುಂದೆ ಎಡೆ ಇಟ್ಟ ನಂತರವೇ ಊಟಮಾಡುವುದು ರೂಡಿ ನಾಗರಿಕತೆಯನ್ನು ಸ್ವೀಕರಿಸಿದ್ದರೂ ಈ ನಂಬಿಕೆ ಕೊಡವರಲ್ಲಿ ಜೀವಂತವಾಗಿದೆ. ಇಂದಿಗೂ ಒಲೆಬೆಂಕಿಯಿಂದ ಉಂಟಾದ ಬೂದಿಯನ್ನು ಪವಿತ್ರವೆಂದು ತಿಳಿದು ಹಣೆಗೆ ಇಟ್ಟುಕೊಳ್ಳುವರು., ಅದನ್ನು ಮುಟ್ಟಿ ನಮಸ್ಕರಿಸುವರು. ಒಲೆಯ ಬೆಂಕಿಗೆ ಅಪಾರವಾದ ಶಕ್ತಿ ಇದೆ ಎಂದು ಭಾವಿಸಿ ಕಾಲಿನಿಂದ ಮುಟ್ಟುವುದಿಲ್ಲ. ಒಲೆಕೆಂಡದಿಂದ ‘ತೆಳ್‌ನೀರ್ ‘ಮಾಡುವರು (ತಟ್ಟೆಯಲ್ಲಿ ನೀರು, ಬೆಂಕಿಕೆಂಡ ಹಾಗೂ ಅನ್ನದ ಮಿಶ್ರಣವಾಗಿರುತ್ತದೆ) ಇದಕ್ಕೆ ಯಾವುದೇ ಭೂತ, ಪ್ರೇತ, ತಟ್ಟುವುದಿಲ್ಲ ಎಂಬ ನಂಬಿಕೆ ಇದೆ. ಅಲ್ಲದೆ ಬೇಟೆಯಾಡಿ ಮಾಂಸ ತೆಗೆದುಕೊಂಡು ಬರುವವರು, ಶ್ಮಶಾನಕ್ಕೆ, ತವರು ಮನೆಗೆ ಹೆರಿಗೆಗೆ ಹೋಗಿ ಬರುವವರು ‘ತೆಳ್‌ನೀರ್’ ಮೈಮೇಲೆ ಚಿಮುಕಿಸಿಕೊಂಡು ಮನೆಯ ಒಳಗೆ ಹೋಗುವರು.

ಇವರು ನಡುಮನೆ ಪವಿತ್ರವೆಂದು ನಂಬಿ ಅಲ್ಲಿ ‘ನೆಲಕ್ಕಿನಡುಬಾಡೆ’ಯನ್ನು ಇಟ್ಟಿರುತ್ತಾರೆ. ಇಲ್ಲಿ ಸದಾ ಜೋತಿ ಉರಿಯುತ್ತಿರುತ್ತದೆ. ಸಂಸಾರದ ಯಾವುದೇ ತೀರ್ಮಾನ, ಹಾಗೂ ತೀರ್ಪು ಅಲ್ಲಿ ಜರುಗುತ್ತವೆ. ಅಲ್ಲಿ ಆಡಿದ ಮಾತುಗಳು ಅಷ್ಟೆ ಸತ್ಯ.

ಕುಟುಂಬ: ಇವರ ಕುಟುಂಬಗಳಿಗೆ ಮೂಲಸ್ಥಾಪಕರಿದ್ದಾರೆ. ಇಂತಹ ಕುಟುಂಬಗಳಿಂದ ಅಭಿವೃದ್ದಿ ಹೊಂದಿ ಬಂದ ಸಮೂಹವನ್ನು ‘ಒಕ್ಕ’ ಎನ್ನಲಾಗಿದೆ. ಒಂದೇ ಕುಟುಂಬದ ಮನೆ ಹೆಸರಿರುವವರೆಲ್ಲ ಒಂದೇ (ಗುಂಪು) ‘ಒಕ್ಕ’ ದವರಾಗಿರುತ್ತಾರೆ. ಪಿತೃಪ್ರಧಾನ ಪದ್ಧತಿ ಇದೆ. ತಂದೆಯೇ ಯಜಮಾನ ಇವನನ್ನು ‘ಕೊರವುಕರ’ ನೆಂತಲೂ, ಇವನ ಪತ್ನಿಯನ್ನೇ ‘ಕೊರವುಕಾರತಿ’ ಎಂದು ಕರೆಯುವರು. ಕುಟುಂಬದ ಮೇಲ್ವಿಚಾರಣೆ ಇಬ್ಬರಿಗೂ ಸೇರಿರುತ್ತದೆ. ಕುಟುಂಬ ಬಿಟ್ಟು ಹೋದವನಿಗೆ ಗೌರವವಾಗಲಿ ಸ್ಥಾನ ಮಾನಗಳಾಗಲೀ ಸಮಾಜದಲ್ಲಿ ಕಡಿಮೆ. ಒಂದೇ ‘ಒಕ್ಕ’ದ ಒಳಗೆ ವಿವಾಹ ಜರುಗುವುದಿಲ್ಲ, ಆಸ್ತಿಯನ್ನು ವಿಭಾಗ ಮಾಡುವ ಹಾಗೆ ಇಲ್ಲ. ಒಂದೇ ಒಕ್ಕದ ಮಕ್ಕಳಾಗಿ ಜನಿಸಿದ್ದರೆ ಮಾತ್ರ ಆಸ್ತಿಯ ಹಕ್ಕು ದೊರೆಯುತ್ತದೆ.

ಮದುವೆಗೆ ಇಚ್ಚಿಸದ ಅವರ ಕುಟುಂಬದ ಹೆಣ್ಣುಮಕ್ಕಳು ಅವರೊಳಗೆ ಇದ್ದು ಕೊಂಡು ಜೀವನ ಮುಂದುವರಿಸಬಹುದು. ಕಾರಣಾಂತರಗಳಿಂದ ಮತ್ತೊಂದು ‘ಒಕ್ಕ’ ದವನನ್ನು ಮದುವೆ ಆದರೂ, ಗಂಡ ಆಕೆಯನ್ನು ಬಿಟ್ಟರೂ ಅವಳು ಕುಟುಂಬದ ಸದಸ್ಯತ್ವವನ್ನು ಪಡೆಯುವಳು. ಒಂದು ‘ಒಕ್ಕ’ದ ಸದಸ್ಯರು ಮತ್ತೊಂದು ಕುಟುಂಬದ ಸದಸ್ಯರು ಪ್ರೀತಿಯಿಂದಿದ್ದು ಸ್ನೇಹಪರರಾಗಿದ್ದರೆ, ಅಂತಹ ಒಕ್ಕದವರನ್ನು ಕೊಡವ ಭಾಷೆಯಲ್ಲಿ ‘ಅರುವ’ಕುಟುಂಬ ಎನ್ನಲಾಗಿದೆ. ವಿವಾಹ, ಸಾವುನೋವು, ಕಷ್ಟ-ಸುಖ, ಹಬ್ಬ-ಹರಿದಿನಗಳಲ್ಲಿ ‘ಅರುವ’ ಕುಟುಂಬಗಳ ಸದಸ್ಯರು ಭಾಗಿಗಳಾಗುವರು.

ಆಭರಣಗಳು: ಪುರಷರಿಗಿಂತ ಸ್ತ್ರೀಯರು ಹೆಚ್ಚು ಆಭರಣಗಳನ್ನು ಧರಿಸುವರು. ಪುರುಷರು ಬಳಸುವ ಆಯುಧಗಳ ಸಂಕೇತವೇ ಆಭರಣಗಳಾಗಿವೆ. ಏಕೆಂದರೆ ನಾವು ಕ್ಷತ್ರಿಯರಾದ್ದರಿಂದ ನಮ್ಮ ಪೂರ್ವಿಕರು ಕುತ್ತಿಗೆಗೆ ಸರ, ಕೈಬಳೆ, ಬೆರಳುಂಗುರ ಧರಿಸುವರು. ಮದುವೆ ಆದವರು ಕಾಲುಂಗುರ ಹಾಕಿಕೊಳ್ಳುವರು, ಇದಕ್ಕೆ ಕೊಡವ ಭಾಷೆಯಲ್ಲಿ ‘ಕಾಮೋದಿರ’ ಎನ್ನಲಾಗಿದೆ. ಇವುಗಳಲ್ಲದೆ ಪೊಮ್ಮತಿ, ಪತ್ತಾಕ್, ಜೋಮಾಲೆ, ಜಡೆಬಿಲ್ಲೆ, ಕೊಕ್ಕೆತಾಲಿ, ಬೈತಲೆಬೊಟ್ಟು, ಡಾಬು. ಹಾಕಿಕೊಳ್ಳುವರು. ‘ಪತ್ತಾಕ್’ ಮತ್ತು ‘ಕಾಮೋದಿರ’ವನ್ನು ಮದುವೆ ಆದ ಹೆಣ್ಣು ಹಾಕಿದರೆ ಜೋಮಾಲೆ ಪೊಮ್ಮಲೆಗಳನ್ನು ವಧುವರರಿಬ್ಬರೂ ಕುತ್ತಿಗೆಗೆ ಹಾಕಿಕೊಳ್ಳುವರು.

ಕೊಕ್ಕೆತಾಲಿ ಚಿನ್ನದ ಸರವಾಗಿದ್ದು ಅದು ಅರ್ಧಚಂದ್ರಾಕಾರದ ಚಿನ್ನದ ಪದಕದಿಂದ ಕೊಡಿರುತ್ತದೆ. ‘ಪತ್ತಾಕ್’ ಧರಿಸಿದ ಕೊಡವತಿ ಮಾನ್ಯತೆ ಪಡೆದವಳಾಗಿದ್ದು ಅದು ಸದಾಅವಳ ಕುತ್ತಿಗೆಯಲ್ಲಿರುತ್ತದೆ. ಪುರುಷರು ಆಭರಣಗಳನ್ನು ವಿವಾಹವಲ್ಲದೆ ಹಬ್ಬ, ಉತ್ಸವ, ಜಾತ್ರೆ, ಸಾಂಸ್ಕೃತಿಕ ಮತ್ತು ವಿಶೇಷ ಸಂದರ್ಭದಲ್ಲಿ ಧರಿಸಿಕೊಳ್ಳುವ ಪದ್ಧತಿ ಇದೆ. ಪುರುಷರು ‘ಓಡಿಕತ್ತಿ’, ‘ಪೀಚೆಕತ್ತಿ’, ಕಟ್ಟಿಬಳೆ, ಚಿನ್ನದಸರ ಹಾಗೂ ‘ಪೊಮ್ಮಲೆ’ ಯನ್ನು ಕೊರಳಿಗೆ ಧರಿಸುವರು. ಕಟ್ಟಿಬಳೆ, ತೊಡಂಗ್, ಓಡಿಕತ್ತಿಗಳನ್ನು ವರ ವಿವಾಹ ಸಂದರ್ಭದಲ್ಲಿ ಧರಿಸುವನು. ‘ತೊಡಂಗ್’ ಬೆಳ್ಳಿಯದಾಗಿದ್ದು ಸೊಂಟಕ್ಕೆ ಕಟ್ಟಿರುವ ಸರಪಣಿ ಆಗಿರುತ್ತದೆ. ಇದರಲ್ಲೆ ಓಡಿಕತ್ತಿ ಇದ್ದು, ಅದನ್ನು ಉಕ್ಕಿನಿಂದ ಮಾಡಲಾಗಿರುತ್ತದೆ. ಇದು ಉದ್ದವಾಗಿದ್ದು ವಿವಾಹ ಸಂದರ್ಭದಲ್ಲಿ ಬಾಳೆ ಕಂಬಗಳನ್ನು ಕಡಿಯಲು ಬಳಸಲಾಗುತ್ತದೆ. ಅಲ್ಲದೇ ಪುರುಷ ಕಿವಿಗೆ ‘ಒಲೆ’ ಯನ್ನು ಧರಿಸುವನು. ಇದನ್ನು ಕೊಡವ ಭಾಷೆಯಲ್ಲಿ ‘ಕಡಕು’ ಎನ್ನುತ್ತಾರೆ. ಒಟ್ಟಿನಲ್ಲಿ ಕೊಡವ ಸ್ತ್ರೀ ಪುರುಷರು ಆಭರಣಗಳಲ್ಲಿ ಯಾಂತ್ರಿಕ ಶಕ್ತಿ ಅಡಗಿದೆ ಎಂದು ನಂಬಿದ್ದಾರೆ.

ಸಂಪ್ರದಾಯ : ಆರ್ಥಿಕವಗಿ ಮುಂದುವರೆದಿದ್ದರೂ ಸಂಪ್ರದಾಯಕ್ಕೆ ಹೊರತಾಗಿ ಜೀವನ ನಡೆಸುತ್ತಿಲ್ಲವೆನ್ನಬಹುದಾಗಿದೆ. ಇಂದಿಗೂ ಕೊಡವರಲ್ಲಿ ಗಂಡು ಮಗು ಜನಿಸಿದರೆ ಗುಂಡು ಹಾರಿಸಿ, ಜಗತ್ತಿಗೆ ಆಗಮವಾಗಿದೆ ಎಂದು ತಿಳಿಸುವರು. ಅನಂತರ ಹರಳುಗಿಡದಿಂದ ಬಿಲ್ಲು ಬಾಣಗಳನ್ನು ಮಾಡಿ ಮಗುವಿನ ಕೈಯಲ್ಲಿಟ್ಟು ಶಾಸ್ತ್ರ ಇತ್ಯಾದಿಗಳನ್ನು ಮಾಡುವರು. ಕಾರಣವೇನೆಂದರೆ ಮುಂದೆ ವೀರನಾಗಿ ಬದುಕಿ ಬಾಳಲಿ ಎಂದು. ಮಗು ಜನಿಸಿದ ಹನ್ನೊಂದು ದಿನದವರೆಗೂ ಸೂತಕ ಇರುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಬ್ಬ ಹರಿದಿನಗಳಲ್ಲಿ ಉತ್ಸವ, ದೇವರಪೂಜೆಯಲ್ಲಿ ಭಾಗಿ ಆಗುವ ಹಾಗಿಲ್ಲ ಹನ್ನೊಂದನೆಯ ದಿನ ದೇವರನ್ನು ಪೂಜೆಮಾಡಿ ತೀರ್ಥವನ್ನು ಪ್ರೋಕ್ಷಿಸಿದ ನಂತರವೇ ಇತರ ಕೆಲಸಕಾರ್ಯಗಳಲ್ಲಿ ತೊಡಗುವುದು. ಮಗು ಹುಟ್ಟಿದ ಹನ್ನೆರಡನೆ ದಿನವೇ ನಾಮಕರಣ. ಆ ದಿನ ತೊಟ್ಟಿಲನ್ನು ಶೃಂಗರಿಸಿ, ತೊಟ್ಟಿಲಿಗೆ ಹಾಕಿ ಮುತ್ತೈದೆಯರು ಜೋಗುಳಹಾಡುವರು. ಗಂಡುಮಗುವಿಗೆ ಕರಿಮಣಿ ದಾರವನ್ನು ಸೊಂಟಕ್ಕೆ, ಕಾಲು ಮತ್ತು ಕೈಗೆ ಹಾಗೂ ಹೆಣ್ಣುಮಗುವಾದರೆ ಕಾಲು ಮತ್ತು ಕೈಗಳಿಗೆ ಕಟ್ಟುವರು.

ಹೆಣ್ಣು ಮಗಳು ವಯಸ್ಸಿಗೆ ಬಂದು ಋತುಮತಿ ಆದರೆ ಹನ್ನೊಂದು ದಿನ ಆರೈಕೆ ಮಾಡುವರು. ಆ ದಿವಸಗಳಲ್ಲಿ ದೇವರನ್ನು ಪೂಜೆ ಮಾಡುವುದಾಗಲೀ, ಮನೆಬಿಟ್ಟು ಹೊರಗೆ ಹೊಗುವುದಾಗಲಿ ಮಾಡಬಾರದು. ಕೊನೆಯ ದಿವಸ ಮನೆಯನ್ನು ಸಾರಿಸಿ ಅಲಂಕಾರ ಮಾಡುತ್ತಾರೆ. ತಮ್ಮ ಬಂಧು ಬಳಗದವರಿಗೂ ಹಿರಿಯರಿಗೂ ಆಹ್ವಾನಿಸುವದು ಕ್ರಮ. ಋತುಮತಿಯಾದ ಹೆಣ್ಣು ಮಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡುವರು. ಅನಂತರ ಗಂಗೆಪೂಜೆ ಮಾಡಿಸಿ, ಮನೆಗೆ ಬಂದ ನಂತರ ನಡುಮನೆಯಲ್ಲಿ ಮೂರುಕಾಲಿನ ಮಣೆ ಮೇಲೆ ಕೂರಿಸಿ ಶಾಸ್ತ್ರ ಮಾಡಲಾಗುತ್ತದೆ. ಋತುಮತಿ ಆದ ಹೆಣ್ಣು ಮುತ್ತೈದೆಯರ ಪಾದಕ್ಕೆ ನಮಸ್ಕಾರ ಮಾಡುವಳು ಆಗ ಮುತ್ತೈದೆಯರು ಇತರರು ತಲೆ ಮೇಲೆ ಅಕ್ಕಿಕಾಳು ಹಾಕಿ ಆಶೀರ್ವದಿಸುವರು. ಅನಂತರ ಅವಳು ತನ್ನ ದಿನಿತ್ಯದ ಕೆಲಸ ಕಾರ್ಯದಲ್ಲಿ ತೊಡಗುವಳು. ಇಂದು ಗ್ರಾಮೀಣರಲ್ಲಿ ಹೆಚ್ಚಾಗಿದ್ದು, ಪಟ್ಟಣದಲ್ಲಿ ವಾಸಿಸುವವರಲ್ಲಿ ಕಡಿಮೆಯಾಗಿರುತ್ತದೆ.

ವೇಷಭೂಷಣಗಳು : ಕೊಡವರ ಉಡಿಗೆ-ತೊಡಿಗೆಗಳು ಬೇರೆ ಜಾತಿ, ಜನಾಂಗ ವರ್ಣಗಳಿಗಿನ್ನ ವಿಶಿಷ್ಟ ಮತ್ತು ಆಕರ್ಷಕ. ಪುರುಷರು ಅರ್ಧತೋಳಿನ ‘ವಿ’ (v) ಆಕಾರದ ಕುಪ್ಪಸ ಮೊಣಕಾಲು ಮುಚ್ಚುವವರೆಗೆ ಇರುತ್ತದೆ. ಇದರ ಬಣ್ಣ ಕಪ್ಪು ಉಣ್ಣೆಯಿಂದ ಮಾಡಿರುತ್ತಾರೆ. ಈ ಕುಪ್ಪಸಕ್ಕೆ ಆಧಾರವಾಗಿ ಸೊಂಟಕ್ಕೆ ಬಿಗಿಯಾಗಿ ಜೋಡಿಸಿ ಕಟ್ಟಲು ಬಳಸುತ್ತಾರೆ. ಇದನ್ನು ‘ದಟ್ಟಿ’ ಎನ್ನಲಾಗುತ್ತದೆ. ಕೊಡವ ಭಾಷೆಯಲ್ಲಿ ‘ಚೇಲೆ’ ಎಂದು ಹೇಳುವರು. ಇದಕ್ಕೆ ಹೆಚ್ಚು ಬೆಲೆ ಇದ್ದು ಇದರ ತುದಿಯಲ್ಲಿ ಕೆಂಪು ರೇಷ್ಮೆಯ ಜರತಾರಿ ಇರುತ್ತದೆ. ಇದರ ಅಂಚಿನಲ್ಲಿ ‘ಕುಚ್’ ಇದ್ದು ಆಕರ್ಷಕವಾಗಿ ಕಾಣುತ್ತದೆ. ಈ ಚೇಲೆಗೆ ಅಳವಡಿಸಿ ಸೊಂಟಕ್ಕೆ ಸರಿಯಾಗುವ ರೀತಿಯಲ್ಲಿ ಕಟ್ಟುವಂತೆ ಬೆಳ್ಳಿ ಹಾಗೂ ಚಿನ್ನದಿಂದ ರಚಿಸಲ್ಪಟ್ಟ ಪುಟ್ಟ ಕತ್ತಿಯೊಂದನ್ನು ತೂರಿಸಿಕೊಳ್ಳುವರು. ಕೊಡವ ಭಾಷೆಯಲ್ಲಿ ಇದಕ್ಕೆ ‘ಪೀಚೆಕತ್ತಿ’ ಎನ್ನುವರು. ಪುರುಷರು ತಲೆಗೆ ರುಮಾಲನ್ನು ತೊಡುವರು. ಇದಕ್ಕೆ ‘ಪಾನಿಮಂಡೆತುಣಿ’ ಎನ್ನಲಾಗಿದೆ. ಸ್ತ್ರೀಯರು ತೋಳು ತುಂಬುವಂತ ರವಿಕೆ ಧರಿಸುವರು. ತಲೆಗೆ ಕೆಂಪು ವಸ್ತ್ರವನ್ನು ತೊಡುವರು. ಇದಕ್ಕೆ ‘ಮಂಡೆಚೌಕ’ ಎನ್ನುವರು. ಈ ಮಂಡೆಚೌಕವು ಜರತಾರಿ ಅಂಚಿನಿಂದ ಕೊಡಿದ್ದು, ನೋಡಲು ಸುಂದರವಾಗಿರುತ್ತದೆ. ಸ್ತ್ರೀಯರು ಉಡುವ ಸೀರೆ ಪದ್ಧತಿಯು ಆಕರ್ಷಣೀಯವಾದದ್ದು. ವಿಧವೆಯವರು ಬಿಳಿ ಬಟ್ಟೆಗಳನ್ನೇ ಧರಿಸುವ ಸಂಪ್ರದಾಯವಿದೆ. ಸಾವು ಸಂಭವಿಸಿದರೆ ವಿವಾಹಿತ – ಅವಿವಾಹಿತ – ಉಳಿದವರೂ ಕೂಡ ಬಿಳಿ ಉಡುಪನ್ನು ಧರಿಸುವ ಪದ್ಧತಿ ಇಂದಿಗೂ ಇದೆ. ಹೆಣಕ್ಕೆ ಬಿಳಿ ಬಟ್ಟೆಯನ್ನೇ ತೊಡಿಸುವರು.

ವಿವಾಹ ಪದ್ಧತಿ : ವಿವಾಹ’ ಎಂಬ ‘ಶಬ್ದ’ ತನ್ನದೇ ಆದ ಮೌಲ್ಯ, ವ್ಯಾಪ್ತಿ, ಮತ್ತು ಶಕ್ತಿ ಪಡೆದಿದೆ. ಸರ್ವಸಾಮಾನ್ಯವಾಗಿ ಪ್ರತಿಯೊಂದು ಜಾತಿ, ವರ್ಣ, ಜನಾಂಗ, ವರ್ಗ, ವಿಶೇಷವರ್ಗ ಮತ್ತು ಬುಡಕಟ್ಟುಗಳಲ್ಲಿಯೂ ಅನೇಕ ದಶಕಗಳಿಂದಲೂ ರೂಢಿಸಿಕೊಂಡು ಬಂದಿರುವುದು ನಮಗೆ ಗೊತ್ತಿರುವ ವಿಷಯವೇ ಆಗಿದೆ. ಪ್ರತಿಯೊಂದು ಜನಾಂಗಗಳಲ್ಲಿ ವೈವಿಧ್ಯಮಯವಾದ ವಿವಾಹ ಆಚರಣೆಗಳಿವೆ. ಹಾಗೆಯೇ ಇವರಲ್ಲಿ ಹಲವಾರು ಬಗೆಯ ವಿವಾಹ ಪದ್ಧತಿಗಳಿವೆ. ಅದರಲ್ಲಿ ‘ನರಿಮಂಗಲವು’ ಒಂದು. ನರಿಮಂಗಲ ಆಚರಣೆಗಿಂತ ಮೊದಲು ಅವರಲ್ಲಿಯೇ ಇರುವ ವಿವಾಹ ಪದ್ಧತಿಗಳ ಬಗ್ಗೆ ಗಮನಹರಿಸಿ, ಆನಂತರ ‘ನರಿಮಂಗಲ’ ವಿಶಿಷ್ಟ ಆಚರಣೆ ಕುರಿತು ವಿಶ್ಲೇಷಣೆ ಕೊಡಲು ಪ್ರಯತ್ನಪಟ್ಟಿರುತ್ತೇನೆ.

ಕೊಡವ ಸ್ತ್ರೀಯರಿಗೆ ಒಂದೇ ವಿವಾಹವಾಗಬೇಕೆಂಬ ನಿಯಮವಿದ್ದು, ಪುರುಷ ಏಳು ರೀತಿಯ ವಿವಾಹಗಳನ್ನು ಮಾಡಿಕೊಳ್ಳುವ ಪದ್ಧತಿ ಇದೆ. ಇವು ಇತ್ತೀಚಿನ ದಿನಗಳಲ್ಲಿ ರೂಢಿಸಿಕೊಂಡು ಬಂದ ವಿವಾಹಗಳಲ್ಲ. ಶತಶತಮಾನಗಳಿಂದಲೂ ನಡೆಸಿಕೊಂಡು ಬಂದಿದ್ದು ಮನ್ನಣೆಯನ್ನು ಪಡೆದುಕೊಂಡಿರುತ್ತವೆ. ಆದರೆ ಇಂದು ಆ ವಿವಾಹಗಳೆಲ್ಲಾ ಕಣ್ಮರೆಯಾಗುತ್ತಿವೆ. ಅಧ್ಯಯನದ ಅನುಕೂಲತೆಗಾಗಿ ಎಂಟು ಅಥವಾ ಒಂಬತ್ತು ವಿವಾಹ ಪದ್ಧತಿಗಳನ್ನು ಗುರುತಿಸಿಕೊಂಡು ವರ್ಗೀಕರಿಸಿರುತ್ತೇನೆ. ಅವುಗಳು ಈ ಕೆಳಗಿನಂತಿವೆ.

೧. ಕನ್ನಿಮಂಗಲ ೨. ಕೂಡಾವಳಿ ೩. ಕೊದಿಮಂಗಲ ೪. ಮಕ್ಕಪರಿಜೆ ೫. ಕುಟ್ಟಪರಿಜೆ ೬. ಪೈತಾಂಡೆಕಳಿಪ ಮಂಗಲ ೭. ಒಕ್ಕಪರಿಜೆ ೮. ಕೆಮಿಕುತ್ತಿ ಮಂಗಲ ೯. ನರಿಮಂಗಲ ( ಹುಲಿವಿವಾಹ-ನರಿಮದುವೆ-ಪುಲಿಮಂಗಲ )

. ಕನ್ನಿಮಂಗಲ : ಸಾಂಪ್ರದಾಯಿಕ ವಿವಾಹಕ್ಕೆ ಕೊಡವರಲ್ಲಿ ಕನ್ನಿಮಂಗಲ ಎನ್ನುವರು. ಹುಡುಗ ಮತ್ತು ಹುಡುಗಿ ಪ್ರಾಯಕ್ಕೆ ಬಂದನಂತರವೇ ಏರ್ಪಡಿಸುವುದಾಗಿರುತ್ತದೆ. ಸಾಮಾನ್ಯವಾಗಿ ಹುಡುಗಿಯನ್ನು ಪ್ರಾರಂಭದಲ್ಲಿ ನೋಡುವುದು ಕುಟುಂಬದ ಹಿರಿಯರಾಗಿರುತ್ತಾರೆ. ಇವರು ಹುಡುಗಿ ಹಾಗೂ ಕುಟುಂಬದವರ ನಡೆ, ನುಡಿ, ಗೌರವ ಅಲ್ಲದೆ ಹುಡುಗಿಯ ಎಲ್ಲಾ ರೀತಿಯ ಅಂಶಗಳನ್ನು ಗಮನಿಸಿ ಹುಡುಗನಿಗೆ ಇಷ್ಟವಾದರೆ ಮಾತ್ರ ವಿವಾಹಕ್ಕೆ ಸಿದ್ಧರಾಗುವರು ಇಲ್ಲದಿದ್ದರೆ ಇಲ್ಲ, ಹಾಗೆಯೇ ಹುಡುಗಿಯ ಕಡೆಯವರು ಹುಡುಗನನ್ನು ಹಾಗೂ ಮನೆಯವರು ಇಷ್ಟಪಟ್ಟರೆ ಈ ವಿವಾಹ ನೆರೆವೇರುವುದು ಇಲ್ಲವಾದರೆ ನಡೆಯುವುದಿಲ್ಲ.

ಹುಡುಗ ಅಥವಾ ಹುಡುಗಿ ಒಪ್ಪಿದರೆ ಸಾಕಾಗುವುದಿಲ್ಲ. ಇಬ್ಬರ ಗಣ ಕೂಟಗಳು ಹೊಂದಿ ಜಾತಕ ಸರಿಹೊಂದಿದರೆ ಮಾತ್ರ ಮುಂದುವರಿಯುವುದು. ಎರಡು ಮನೆಯವರು ಇಷ್ಟಪಟ್ಟರೆ, ಹೆಣ್ಣು ಗಂಡಿನ ಕಡೆಯವರು ದೇವಸ್ಥಾನಕ್ಕೆ ಹೋಗಿ ದೇವರ ವಿಗ್ರಹಕ್ಕೆ ಹೂವನ್ನು ಮುಡಿಸಲಾಗುವುದು. ಆ ‘ಹೂ’ ಕೆಳಗೆ ಬಿದ್ದಾಗ ಯಾವ ಬಣ್ಣದ್ದು ಎಂದು ನೋಡುವರು. ಅವರಿಗೆ ಇಷ್ಟವಾದ ಹೂ ಬಿದ್ದರೆ ಈ ವಿವಾಹಕ್ಕೆ ದೇವರ ಒಪ್ಪಿಗೆ ಇದೆ ಎಂದು ಭಾವಿಸಿ ವಿವಾಹ ಮುಂದುವರಿಸಲಾಗುತ್ತದೆ (ಉದಾ : ಬಿಳಿ ಹೂ ಬಿದ್ದರೆ ಶುಭ, ಕೆಂಪು ಹೂ ಬಿದ್ದರೆ ಅಶುಭ ಎಂಬ ಕಲ್ಪನೆ ಇದೆ) ಇತ್ತೀಚಿಗೆ ಈ ಪದ್ಧತಿ ಸ್ವಲ್ಪ ಸಡಿಲವಾಗಿದೆ.

ಹೆಣ್ಣು ಗಂಡುಗಳ ಜಾತಕ ಸರಿಹೊಂದಿದಾಗ, ಎರಡು ಕಡೆಯವರು ಮನೆಯ ನಡುಮನೆಯಲ್ಲಿ ಸೇರಿಕೊಳ್ಳುವರು. ಅಲ್ಲಿ ‘ನೆಲಕ್ಕಿನಡುಬಾಡೆ ಯನ್ನು ವಿಜೃಂಭಣೆಯಿಂದ ಅಲಂಕರಿಸಿ ಜ್ಯೋತಿ ಹತ್ತಿಸಿರಲಾಗುತ್ತದೆ. ಅಲ್ಲಿ ‘ಅರುವರು’ (ಸ್ನೇಹ ಕುಟುಂಬದವರು) ಸೇರಿ ವಿವಿಧ ರೀತಿಯಲ್ಲಿ ಶಾಸ್ತ್ರೋಕ್ತವಾದ ಮಾತುಗಳನ್ನಾಡಿ ವಿವಾಹಕ್ಕೆ ಒಪ್ಪಂದ ಮಾಡಿಕೊಳ್ಳುವರು

ಗಂಡಿನ ಕಡೆಯವರು ಒಪ್ಪಂದ ಮಾಡಿಕೊಳ್ಳುವಾಗ ಜ್ಯೋತಿ ಹತ್ತಿರ ಕಾಣಿಕೆಯಾಗಿ ‘ಐದು ಹಣ’ ಅಂದರೆ ಒಂದೂವರೆ ರೂಪಾಯಿಗಳನ್ನೊ ಅಥವಾ ನೂರಾಒಂದು ರೂಪಾಯಿಗಳನ್ನೂ ಇಟ್ಟು ನಮಸ್ಕರಿಸಿದ ನಂತರದಲ್ಲೇ ಊಟೋಪಚಾರ ಮುಗಿಸುವರು. ಈ ಪದ್ಧತಿಗೆ ಕೊಡವ ಭಾಷೆಯಲ್ಲಿ ‘ಮಂಗಲ ಕುರಿಪೊ’ ಎಂದು ಪರಿಭಾಷಿಸಲಾಗಿದೆ. ಗಂಡು-ಹೆಣ್ಣಿಗೆ ನಿಶ್ಚಯಿಸಿದ ಮೇಲೆ ಇವರಿಬ್ಬರೂ ನದಿ ದಾಟಬಾರದೆಂಬ ನಂಬಿಕೆ ಇದೆ. ಅವರ ಊರಲ್ಲೇ ಬೇರೆ ಯಾರಾದರೂ ಸತ್ತರೆ ಆ ವಿಷಯವನ್ನು ಆಮನೆಯವರಿಗೆ ತಿಳಿಸುವ ಕ್ರಮವಿಲ್ಲ. ತಿಳಿದರೂ ಮದುವೆ ಒಪ್ಪಂದ ಆದವರ ಮನೆಯವರು ‘ಮಾದ’ ಕ್ಕೆ (ತಿಥಿ ಕರ್ಮ) ಹೋಗುವ ಪರಿಪಾಠವಿಲ್ಲ. ವಿವಾಹದ ಹಿಂದಿನ ದಿನ ಅವರ ಮನೆಯಲ್ಲಿಯೇ ಅಕಾಲ ಮರಣಕ್ಕೆ ತುತ್ತಾದರೆ ನಿಶ್ಚಯಿಸಲಾದ ಮದುವೆಯನ್ನು ಹನ್ನೊಂದು ದಿವಸಗಳವರೆಗೆ ನಿಲ್ಲಿಸುವರು. ಈ ರೀತಿ ಮಾಡುವುದಕ್ಕೆ ಕೊಡವ ಭಾಷೆಯಲ್ಲಿ ‘ಕರಿಕ್ ಮುರಿಪ’ (ಚಪ್ಪರ) ಎನ್ನುವರು. ಹನ್ನೊಂದು ದಿವಸಗಳು ಮುಗಿದ ನಂತರವೇ ಮದುವೆ. ಅವತ್ತು ನಡೆಯುವ ವಿವಾಹವನ್ನು ಅಲ್ಲೇ ಪಕ್ಕದವರ ಮನೆಯಲ್ಲಿ ನಡೆಸುತ್ತಾರೆ.

ಸಂಪ್ರದಾಯದಂತೆ ವಧು-ವರರ ಮುಹೂರ್ತ ಅವರವರ ಮನೆಯಲ್ಲಿಯೇ ನಡೆಸಲಾಗುತ್ತದೆ. ವಧುವಿನ ಮನೆಗೆ ವರ ಹೋದಾಗ ಇಬ್ಬರನ್ನು ಕೂರಿಸಿ ವರಮುಹೂರ್ತ ನಡೆಸಲಾಗುವುದು. ಅನಂತರ ‘ವರ’ ಬೆಳಗಾಗುವುದರೊಳಗೆ ತನ್ನ ಮನೆಗೆ ಕರೆದೊಯ್ಯತ್ತಾನೆ. ಬಾಕಿ ಉಳಿದ ಶಾಸ್ತ್ರಗಳು ವರನ ಮನೆಯಲ್ಲಿ ಮುಂದುವರೆಯುತ್ತವೆ. ಮದುವೆ ನಿಶ್ಚಯಿಸಿದಾಗ ಕರೆಯೋಲೆ ಮಾಡಿಸಲಾಗುತ್ತದೆ. ಇದನ್ನು ಕೊಡವ ಭಾಷೆಯಲ್ಲಿ ‘ಮಂಗಲಕಾಗದ’ ಎನ್ನುವರು. ತಮ್ಮ ಸಂಬಂಧಿಕರಿಗೆ ಹಾಗೂ ಊರಿನವರಿಗೆ ಹಂಚುವರು. ಗ್ರಾಮಸ್ಥರಿಗೆ ವಿವಾಹದ ಮನೆಯವರೆ ಪ್ರತಿಯೊಂದು ಮನೆಗೆ ಹೋಗಿ ಆಹ್ವಾನಿಸಬೇಕು. ಇದಕ್ಕೆ ‘ಮಂಗಲ ಎಣ್ಣವ್’ ಎನ್ನುತ್ತಾರೆ ಹೀಗೆ ಮನೆಯವರು ಹೋಗಿ ಹೇಳಿಬಾರದಿದ್ದರೆ ಅವರನ್ನು ಅಪರಾಧಿ ಎನ್ನಲಾಗುತ್ತದೆ. ಇಂದು ಇಂತಹ ಸ್ಥಿತಿ ಇಲ್ಲವೆನ್ನಬಹುದು.

ಕರಿಕ್ ಮುರಿಪ : ‘ಕರಿಕ್‌ಮುರಿಪ’ ಅಂದರೆ ‘ಚಪ್ಪರ’ ದಿನ ಎಂದರ್ಥ ವಿವಾಹದ ಹಿಂದಿನ ದಿನವನ್ನು ಹೀಗೆ ಕರೆಯುವುದು ರೂಢಿ. ಆ ಹಿಂದಿನ ದಿನ ಗ್ರಾಮದ ಪ್ರತಿಯೊಂದು ಮನೆಯಿಂದಲು ಸ್ತ್ರೀ, ಪುರುಷರು ಮದುವೆ ಮನೆಗೆ ಹೋಗುವ ಪರಿಪಾಠವಿದೆ. ಆ ಹಿಂದಿನ ದಿನ ಎಲ್ಲರೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗುವುದು ವಾಡಿಕೆ ಬೇರೆ ಬೇರೆ ಜಾತಿಯವರು ಭಾಗಿಗಳಾಗಿರುತ್ತಾರೆ. ಚಪ್ಪರಕ್ಕೆ ಏಳು ಕಂಬಗಳಾಗಿರುತ್ತವೆ. ಶಾಸ್ತ್ರದ ಪ್ರಕಾರ ಅವು ಹತ್ತಿ ಅಥವಾ ಹಾಲು ಬರುವ ಕಂಬಗಳನ್ನು ನೆಡುವರು. ಮದುವೆ ಮನೆಯ ಅಂಗಳಕ್ಕೆ ಅಂತಹ ಚಪ್ಪರವನ್ನು ಹಾಕುವುದು ರೂಢಿ. ಚಪ್ಪರದ ಮೇಲೆ ಮಾವಿನ ಅಥವಾ ಬೇರೆ ಜಾತಿಯ ಗಿಡದ ಸೊಪ್ಪನ್ನು ಹಾಕುವರು. ಆದರೆ ಕಂಬಗಳಿಗೆ ಮಾವಿನ ಮರದ ಸೊಪ್ಪನ್ನು ಅಲ್ಲಲ್ಲಿ ‘ಹೂ’ ಗಳನ್ನು ಸೇರಿಸಿ ಕಟ್ಟಿದ್ದು, ಚಪ್ಪರವು ನೋಡಲು ಅಂದವಾಗಿರುತ್ತದೆ. ಧಾರೆ ಎರೆಯುವಾಗ ನಡುಮನೆಯಲ್ಲಿ ಅಥವಾ ಹೊರಾಂಗಣವನ್ನು ಬಳಸಿಕೊಳ್ಳುವ ಪದ್ಧತಿ ಇದೆ. ಚಪ್ಪರ ಹಾಗೂ ಮಂಟಪವು ಬಿಳಿ ಬಟ್ಟೆಯಿಂದ ಅಲಂಕೃತಗೊಂಡಿರುತ್ತದೆ. ಚಪ್ಪರ ದಿನದಂದು ವರನು ಬಿಳಿ ಕುಪ್ಪಸ, ತಲೆಗೆ ಕೆಂಪು ವಸ್ತ್ರ ಧರಿಸಿದ್ದು ಹಿರಿಯರ ಪಾದ ಮುಟ್ಟಿ ನಮಸ್ಸಾರ ಮಾಡಿಕೊಳ್ಳುವನು. ವಧು ಹೊಸ ವಸ್ತ್ರಗಳನ್ನು ಧರಿಸಿ ಹಿರಿಯರ ಕಾಲಿಗೆ ಅಕ್ಷತೆ ಹಾಕಿ ಪಾದಕ್ಕೆ ಅಡ್ಡ ಬೀಳುವಳು.

ವಧುವರರು ನೀರು ಹಾಗೂ ನಿಂಬೆ ಹುಳಿಯಿಂದ ಮಿಶ್ರಮಾಡಿದ ಗೋರಂಟಿಯನ್ನು ಅವರವರ ಪಾದ ಅಂಗೈಗಳಿಗೆ ಹಚ್ಚಿಕೊಂಡು ಶೃಂಗರಿಸಿಕೊಂಡಿರುತ್ತಾರೆ. ಇವರಿಬ್ಬರನ್ನು ನಡುಮನೆಯಲ್ಲಿ ಇರುವ ‘ನಲ್ಲಕ್ಕಿನಡುಬಾಡಿಯ’ ಮುಂದೆ ಮೂರು ಕಾಲಿನ ಮಣೆ ಹಾಕಿ ಕೂರಿಸುವರು. ಮೂರು ಅಥವಾ ಐದು ಜನ ಮುತ್ತೈದೆಯರು ಅವರ ಇಬ್ಬರ ಪಾದ ಹಾಗೂ ಕೈಗಳಿಗೆ ಗೋರಂಟಿ ತಿಕ್ಕುವರು. ಇದನ್ನು ಕೊಟವ ಭಾಷೆಯಲ್ಲಿ ‘ತೇರಣ’ ಎನ್ನುವರು. ಆ ಸಂದರ್ಭದಲ್ಲಿ ಹಿರಿಯರು ದುಡಿ ಬಾರಿಸಿಕೊಡು ನಿಧಾನ ಗತಿಯಲ್ಲಿ ಬಡಿತಕ್ಕೆ ತಕ್ಕಂತೆ ಹಾಡುವರು. ಊರಿನಲ್ಲರುವ ಪ್ರತಿಯೊಂದು ‘ಒಕ್ಕಕ್ಕೂ’ ಐದು ಎಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಹುರಿಹಾಳುಗಳನ್ನು ಮದುವೆ ನಡೆಸುವ ಯಜಮಾನ ಕೊಡಬೇಕು. ಕೊಡವ ಭಾಷೆಯಲ್ಲಿ ಇದನ್ನು ‘ಊರಪತ್ತಿ’ ಎನ್ನುವರು. ಇದನ್ನು ತೆಗೆದುಕೊಂಡು ಹೋಗಿ ಹಿರಿಯರಿಗೆ ನಮಸ್ಕರಿಸಿ, ಚಪ್ಪರಕ್ಕೆ ಬಂದವರೆಲ್ಲ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾಗುತ್ತಾರೆ.

ಚಪ್ಪರದ ದಿನದ ರಾತ್ರಿ ತಮ್ಮ ಬಂಧುಗಳಿಗೆ, ಊರಿನವರಿಗೆ, ಒಂದು ಔತಣ ಕೂಟವನ್ನು ಏರ್ಪಡಿಸುವರು. ಅದಕ್ಕೆ ‘ಕರಿಕ್ ಮುರಿಪ’ ಎನ್ನುತ್ತಾರೆ ಅನಂತರ ತಮ್ಮ ಮನೆಗಳಿಗೆ ಹೋಗುವರು. ಮರುದಿನವೇ ಧಾರೆ ಮುಹೂರ್ತ. ಅಂದು ಬೆಳಿಗ್ಗೆ ಮದುವೆ ಮನೆಗೆ ಬಂದು ಕೆಲಸ ಕಾರ್ಯಗಳಲ್ಲಿ ತೊಡಗುವರು. ಧಾರೆಯ ದಿನದಂದು ಅಗಸ ಬಿಳಿ ಬಟ್ಟೆ ತಂದು ಚಪ್ಪರದ ಹೊರಗಿನಿಂದ ನಡುಮನೆಯವರೆಗೂ ಮಡಿ ಮೇಲ್ಕಟ್ಟು ಕಟ್ಟುತ್ತಾನೆ. ವಧುವರರನ್ನು ಕೂರಿಸುವ ಸ್ಥಳದಲ್ಲಿ ಮೇಲೆ ಕಟ್ಟಿದ ಬಟ್ಟೆ ಕೆಂಪು-ರೇಷ್ಮೆಯದಾಗಿರುತ್ತದೆ. ಕೆಂಪು ಕಟ್ಟಿನ ಮೂಲೆಗೆ ಬಾಳೆಗೊನೆ ಮತ್ತೊಂದು ತುದಿಗೆ ತೆಂಗಿನಕಾಯಿ ಇನ್ನೊಂದು ಕಡೆಗೆ ವೀಳ್ಳೆದೆಲೆ ಅಡಿಕೆ ಹೂಗಳನ್ನು ಕಟ್ಟಿರುತ್ತಾರೆ.