ಐತಿಹಾಸಿಕವಾಗಿ ಶ್ರೀಮಂತಿಕೆ ಮೆರೆದ ಜಿಲ್ಲೆಯ ಗತಕಾಲದ ವೈಭವ ಮತ್ತು ಸಂಸ್ಕೃತಿ, ಸಾಮಾಜಿಕ, ಸಾಹಿತ್ಯಿಕ ಇತಿಹಾಸ ತಿಳಿದುಕೊಳ್ಳುವದು ಅತ್ಯಂತ  ಪ್ರಮುಖವಾದದ್ದು. ಈ ದಿಶೆಯಲ್ಲಿ  ತಿರುಳ್ಗನ್ನಡ ನಾಡು ಎಂದು ಪರಿಚಿತವಾದ ಕೊಪ್ಪಳ ಜಿಲ್ಲೆಯ ಬಗ್ಗೆ ಇಂದಿನ ಮಕ್ಕಳು ಯುವಜನಾಂಗ ಹಾಗೂ ನಾಗರಿಕ ಸಮುದಾಯ ತಿಳಿದುಕೊಳ್ಳಬೇಕಾದ ದೃಷ್ಟಿಯಿಂದ ಶಿಕ್ಷಣ ಇಲಾಖೆಯ ಚಿಣ್ಣರ ಜಿಲ್ಲಾ ದರ್ಶನ ಕಾರ್ಯಕ್ರಮ ಒಂದು ಸಣ್ಣ ಪ್ರಯತ್ನವಾಗಿದೆ. ಸರ್ವಧರ್ಮ ಸಮನ್ವಯತೆ, ಕರ್ನಾಟಕ ಇತಿಹಾಸದ ಹೆಗ್ಗುರುತು, ಕೆಚ್ಚೆದೆಯ ಹೋರಾಟಗಳು ಇಲ್ಲಿ ಕಾಣಸಿಗುತ್ತವೆ.

ಕಾವೇರಿಯಿಂದ ಮಾ ಗೋ  | ದಾವರಿವರ ಮಿರ್ದು ನಾಡದಾ ಕನ್ನಡದೊಳ್‌|
ಭಾವಿಸಿದ ಜನಪದಂ ವಸು |
ಧಾವಲಯವಿಲೀನ ವಿಶದ ವಿಷಯ ವಿಶೇಷಂ  | ಅದರೊಳಗಂ ಕಿಸುವೊಳಲಾ
ವಿದಿತ ಮಹಾಕೊಪಣಾನಗರದಾ  ಪುಲಿಗೆರೆಯಾ
ಸದಭಿಸ್ತುತಮ್ಪೊಂಕುಂ  ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಶ್ರೀ ವಿಜಯ ರಚಿಸಿರುವ ಕವಿರಾಜ ಮಾರ್ಗದ ಈ ನುಡಿ ಕೊಪ್ಪಳದ ಇತಿಹಾಸದ ಘನತೆಯನ್ನು ಹೇಳುತ್ತದೆ. ಇದು ಪ್ರಾಚೀನ ಕಾಲದ ಜೈನರ ಬೌದ್ದ ಧರ್ಮಗಳ ವಾಸಸ್ಥಳವಾಗಿತ್ತು ತರುವಾಯ ವೀರಶೈವ ಧರ್ಮದ ಛಾಪು ಬಂದಿದೆ ಅನೇಕ ಏಳು ಬೀಳನ್ನು ಈ ಸ್ಥಳ ಹೊಂದಿದೆ. ಪುರಾಣ ಕಾಲದಿಂದಲೂ ಅರ್ಜುನ ಶಿವನಿಂದ ಪಾಶುಪತಾಸ್ತ್ರ ಪಡೆದಿರುವ ಮತ್ತು ತಪಸ್ಸನ್ನು ಮಾಡಿರುವ ಇಂದ್ರಕೀಲ ಪರ್ವತ ಇಲ್ಲಿಯೇ ಇರುವದು. ಅರ್ಜುನನು ಮಳಲು ಲಿಂಗವನ್ನು ಪೂಜಿಸಲು ಈಶ್ವರನು ಪ್ರತ್ಯಕ್ಷನಾದನು. ಇದೇ ಇಂದು ಮಳೆ ಮಲ್ಲೇಶ್ವರ ಎಂದು ಪ್ರಸಿದ್ದಿಯಾಗಿದೆ. ಪಾಂಡವರು ಕೂಡಾ ಇಲ್ಲಿ ಬಿಡಾರ ಮಾಡಿದ್ದರು. ಇದನ್ನು ಪಾಂಡವರ ವಠಾರವೆಂದು ಇಂದಿಗೂ ಇದನ್ನು ಕರೆಯಲಾಗುತ್ತದೆ.

ಇಲ್ಲಿ ದೊರೆತ ತಲೆಬುರುಡೆ ಮಣ್ಣನ ಪಾತ್ರೆ ಆಯುಧ ಮೊದಲದ ಪ್ರಾಚೀನ ಕಾಲದ ಮಾನವರ ವಾಸಸ್ಥಾನವಾಗಿತ್ತೆಂದು ಸಾಕ್ಷಿ ಹೇಳುತ್ತದೆ. ಇಲ್ಲಿಯ ಸುಪ್ರಸಿದ್ಧವಾದ ಗವಿಮಠದ ಮೇಲಿನ ಗುಹೆಗಳಲ್ಲಿ ಶಿಲಾಯುಗದ ಆದಿ ಮಾನವರ ವರ್ಣರಂಜಿತ ಚಿತ್ರಗಳು ದೊರೆತಿವೆ ಮೌರ್ಯರ ಅಗಸಿಯ ಬಂಡೆಯ ಬಯಲುಶಾಸನ ಮೊದಲಾದವು ಈ ಸ್ಥಳದ ಇತಿಹಾಸವನ್ನು ಸಾರಿ ಹೇಳುತ್ತವೆ. ಇಲ್ಲಿ ದೊರೆಯುವ ಶಾಸನಗಳು ದೇವನಾಂಪ್ರಿಯಾ ಪ್ರೀಯದರ್ಶಿ ಎನ್ನುವ ಸಾರವನ್ನು ಅಶೋಕನ ಬಗ್ಗೆ ಸಾರಿ ಹೇಳುತ್ತವೆ. ಮೌರ್ಯರ ತರುವಾಯ ಈ ನಾಡು ಶಾತವಾಹನರ ಆಳ್ವಿಕೆ ಒಳಪಟ್ಟು ೫೫೦ ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದ್ದು ಇತಿಹಾಸದಲ್ಲಿ ದೊರೆತಿದೆ. ಕೃಷ್ಣ ಮಹಾರಾಷ್ಟ್ರದಿಂದ ಪೂರ್ವದವರೆಗೆ ಆಳಿದರೆಂದು ರಾಜಾಸೂಯಾ ಯಾಗವನ್ನು ಮಾಡಿದರೆಂದು ಹಿರೇಸಿಂದೋಗಿಯಲ್ಲಿ ಆಕಾಲದ ಬೆಳ್ಳಿ ನಾಣ್ಯದ ರಾಶಿಗಳಿಂದ ತಿಳಿದು ಬರುತ್ತದೆ.

ಕರ್ನಾಟಕದ ಇತಿಹಾಸಕ್ಕೆ ಒಂದು ನಿರ್ದಿಷ್ಟ ಇತಿಹಾಸವನ್ನು ಕೊಟ್ಟ ಎರಡನೇ ಪುಲಕೇಶಿಯ ಬಗ್ಗೆ ಹೋಯೆನ್ಸತಾಂಗ್ ಈ ಸ್ಥಳವನ್ನು ಕೊಂಕೊನ ಪೂಲೋವ್ ಎಂದು ಉಲ್ಲೇಖಿಸಿರುವನು ಇದು ಹಲಿಗೇರಿಯ ಶಾಸನದಿಂದ ತಿಳಿದು ಬರುವದು ಒಟ್ಟನಲ್ಲಿ ಕೊಪ್ಪಳದ ಬಗ್ಗೆ ಚಾಲುಕ್ಯರಲ್ಲಿ ಒಳ್ಳೆಯ ಆಡಳಿತವನ್ನು ನೀಡಿರುವ ವಿಜಯಾದಿತ್ಯನು ಉತ್ತಮವಾದ ಭಾವನೆಯನ್ನು ಹೊಂದಿದ್ದನು ಎಂದು ತಿಳಿದು ಬಂದಿದೆ.

ಚಾಲುಕ್ಯರ ತರುವಾಯ ಈ ನಾಡ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು ಅಮೋಘ ವರ್ಷ ನೃಪತುಂಗ ಶ್ರೀವಿಜಯ ಮುಂತಾದವವರು  ಈ ನಾಡನ್ನು ಹಾಡಿ ಹೊಗಳಿದ್ದಾರೆ ಆಳಿದ್ದಾರೆ.

ಇಲ್ಲಿರುವಂತಹ ಜನಪದ ಸಾಹಿತ್ಯದಲ್ಲಿ ಸುಪ್ರಸಿದ್ದ ಕೊಪ್ಪಳದ ಇತಿಹಾಸವು ಸಿಗುತ್ತದೆ. ಕಿಸುವೋಳಲ್, ಕೊಪ್ಪಣ ನಗರ, ಪುಲಿಗೇರಿ ಎನ್ನುವ ಊರುಗಳು ಈ ಸಾಹಿತ್ಯದಲ್ಲಿ ಸಿಗುತ್ತವೆ. ಈ ಊರುಗಳು ನಾಡಿನ ನಂದಾ ದೀವಿಗೆಯಾಗಿದ್ದವೆಂದು ಉಲ್ಲೇಖಿಸಲ್ಪಟ್ಟಿವೆ. ಕ್ರಿ,ಶ,೯೬೪ರಲ್ಲಿ ಉಪ್ಪಿನ ಬೆಟಗೇರಿಯ ಶಾಸನವು ರನ್ನನಿಂದ ಬರಯಲ್ಪಟ್ಟ ಶಾಸನದ ಪ್ರಕಾರ ಮಹಾಸಾಮಂತ ಪತಿಯಾದ ಶಂಕರ ಗಂಡನು ಕೊಪ್ಪಳದಲ್ಲಿ ಜಿನಾಲಯವನ್ನು ಕಟ್ಟಿಸಿದನೆಂದು ಹೇಳಿದೆ. ಆದ್ದರಿಂದ ರನ್ನನಿಗೆ ಜೈನ ಮತ ಪೋಷಕ ಎಂದು ಪಡೆದಿರುವದನ್ನು ಉಲ್ಲೇಖಿಸಬಹುದು. ಯಲಬುರ್ಗಿಯ ಸಿಂದ ಮನೆತನವು ಚಾಲುಕ್ಯರ ಸಾಮ್ರಾಜ್ಯವನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿ ಎರಡನೆಯ ಆಚರಸನು ವಿಷುವರ್ಧನನ್ನೆ ದೋರ ಸಮುದ್ರದ ವರೆಗೆ ಬೆನ್ನಟ್ಟಿಕೊಂಡು ಹೋದ ಬಗ್ಗೆ  ಇಲ್ಲಿ ಶಾಸನಗಳು ಸಾರಿ ಹೇಳುತ್ತವೆ.

ಕುಕನೂರಿನ ಶಾಸನವು ಚಾಲುಕ್ಯರ ಬಗ್ಗೆ ಮನತುಂಬಿ ವರ್ಣನೆಯನ್ನು ಮಾಡಿದೆ. ಇನ್ನೊಂದು ಶಾಸನವು ಮಾದಿನೂರಿ ನಲ್ಲಿದೆ ಕಲೆ ಸಂಸೃತಿಯೊಂದಿಗೆ ಗಾಢವಾದ ಸಂಬಂದವನ್ನು ಬೆಳೆಸಿಕೊಂಡ ಬಗ್ಗೆ ಶಾಂತಲೆ, ಗಂಗರಾಜನು ಗಂಗ ನಾಡಿ ೯೬ ಸಾಸಿರ ಕಲ್ಲು ಕೊಪಣವನ್ನು ಕಟ್ಟಿಸಿದನೆಂದು ನಾರಸಿಂಹನ ಮಂತ್ರಿಯಿಂದ ಇತಿಹಾಸದಲ್ಲಿ ಕೊಪ್ಪಳದ ಕೀರ್ತಿ ಪತಾಕೆಯು ಹಾರಿತೆಂದು ತಿಳಿದು ಬರುವದು. ಮುಸಲ್ಮಾನರ ದಾಳಿಯನ್ನು ಎದುರಿಸುವಲ್ಲಿ ನಾಡೆ ಒಗ್ಗಟ್ಟಾಗಿ ನಿಂತಿದ್ದಲ್ಲದೇ ಆನೆಗುಂದಿಯ ಕಂಪಿಲರಾಮ ಮತ್ತು ಅವರ ಮಗ ಕುಮಾರ ರಾಮರು ದೈರ್ಯವಾಗಿ ನಿಂತು ಹೋರಾಡಿದ್ದು ಐತಿಹಾಸಿಕ ಮಹ್ವತ್ವವಾಗಿದೆ. ಬಿಜಾಪುರದ ಆದಿಲ್ ಷಾಹಿ ಕಾಲದಲ್ಲಿ ಈ ಸ್ಥಳವನ್ನು ಮುಜಾಪರ್ ನಗರವೆಂದು ಕರೆಯುತ್ತಿದ್ದರು. ಎರಡನೆ ಆದಿಲ್‌ಷಾ ಆಡಳಿತದಲ್ಲಿ ಯಾಕೂಬ ನೆಂಬುವವನು ಈ ಭಾಗದ ಅಧಿಕಾರಿ ಇದ್ದನು, ಪ್ರತಿನಿಧಿ ಹುಸೇನ್‌ಮಿಯಾನನ್ನು ಬಂದಿಸಿ ಶಿವಾಜಿಯು ಕೊಪ್ಪಳ ಕೋಟೆಯನ್ನು ಬೇಡಿಕೆ ಇತ್ತಿದ್ದನು. ಮುಂದೆ ಶಿವಾಜಿ ಅದನ್ನು ಸುಭಾನ್ಜೀರಾವ್‌ನಿಗೆ ಕೊಟ್ಟನು

ಕ್ರಿಶ ೧೭೯೯ರಲ್ಲಿ ಕರ್ನಲ್ ಕಿಡ್‌ನು ಸವಣೂರು, ಕೊಪ್ಪಳ ಬೆಂಗಳೂರು ಪಟ್ಟಣ ಹಿಡಿದಕೊಂಡನು. ಮುಂದೆ ಈ ಭಾಗದಲ್ಲಿ ವೀರಪ್ಪನೆಂಬ ಜಮೀನ್ದಾರನು ಈಸ್ಟ್ ಇಂಡಿಯಾದ ವಿರುದ್ದ ಬಂಡೆದ್ದನು, ಮುಂಡರಗಿ ಭೀಮರಾಯ ಹಮ್ಮಗಿ ಕೆಂಚನ ಗೌಡರು ಬ್ರಿಟೀಷರ ವಿರುದ್ಧ ಹೋರಾಡಿದರು. ೧೮೫೭ರಲ್ಲಿ ಬ್ರಿಟೀಷರು ಇವರ ದಂಗೆಯನ್ನು ಬಗ್ಗು ಬಡಿದರು. ೧೮೬೧ರಲ್ಲಿ ಈ ಭಾಗವನ್ನು ಅವ್ವಲ್ನಿಗೆ ಜಾಗೀರಾಗಿ ಕೊಡಲ್ಪಟ್ಟಿತು. ಸ್ವತಂತ್ರ ದೊರೆಯುವವರೆಗೂ ಅವನ ಆದಿಪತ್ಯದಲ್ಲಿ ಇದ್ದಿತು. ಗವಿಮಠಕ್ಕೆ ಹೊಂದಿಕೊಂಡಿರುವ ಬೆಟ್ಟಗಳಲ್ಲಿ ಅಶೋಕನ ಶಾಸನವಿದ್ದು, ಇದರಿಂದ ಮೌರ್ಯರ ಸಾಮ್ರಾಜ್ಯ ವಿಸ್ತರಣೆ ತಿಳಿಯುತ್ತದೆ. ಶ್ರವಣಬೆಳಗೊಳದ ಶಾಸನಗಳು ಕೊಪ್ಪಳವನ್ನು ಆದಿತೀರ್ಥ ಮಹಾತೀರ್ಥ ಎಂದು ಬಣ್ಣಿಸಿವೆ. ತಪಸ್ಸಿಗೆಂದು, ಯಾತ್ರಗೆಂದು, ಸಲ್ಲೇಖನಕ್ಕೆಂದು ಬಂದವರು ಕೊಪಣಾಚಲದಲ್ಲಿ ಮುಕ್ತಿ ಹೊಂದದ್ದರೆಂದು ಚಾವುಂಡರಾಯ ಪುರಾಣದಲ್ಲಿ ಹೇಳಿದೆ. ಗವಿಮಠವು ಇರುವ ಬೆಟ್ಟವು ಕ್ರಿ,೧೫೬೦ರಲ್ಲಿ ಜೈನರ ಪ್ರಮುಖ ಸ್ಥಳವಾಗಿತ್ತು.

ಶಿಲ್ಪಕಲೆಯಲ್ಲಿ ಕೊಪ್ಪಳ ಜಿಲ್ಲೆ ಮಹತ್ವದ ಸ್ಥಾನವನ್ನು ಹೊಂದಿದೆ. ಕೋಟೆ ಕೊತ್ತಲಗಳು ಗಂಗರಾಜರ ಆದರ್ಶನಗರ ನಿರ್ಮಾಣಗಳ ಕಲ್ಪನೆಯಾಗಿದೆ. ಶಿವಾಲಯಗಳಲ್ಲಿ ಮಳೆಮಲ್ಲೇಶ್ವರ, ಗವಿಮಠ ಪ್ರಮುಖವಾದವು. ದೇವಾಲಯಗಳ ಚಕ್ರವರ್ತಿಎಂದು ಬಣ್ಣಿಸಿರುವ ಯಲಬುರ್ಗಾ ತಾಲೂಕಿನ ಇಟಗಿ ಮಹಾದೇವ ದೇವಾಲಯವು ಕೊಪ್ಪಳದಿಂದ ೨೦ ಕಿ.ಮಿ. ದೂರದಲ್ಲಿದೆ. ಹಳೆಬೀಡನ್ನು ಬಿಟ್ಟರೆ ಕರ್ನಾಟಕದಲ್ಲೆ ಅತ್ಯಂತ ಸುಂದರವಾದ ದೇವಾಲಯವೆಂದು ಇದನ್ನು ಕರೆಯಲಾಗಿದೆ. ಕುಕನೂರಿನ ಸುತ್ತ ಮುತ್ತ ಹಲವಾರು ದೇವಾಲಯಗಳಿದ್ದು ಬಿಜ್ಜಳನ ಹತ್ಯೆ ಮಾಡಿದ ಮೊಲ್ಲೆ ಬೊಮ್ಮಯ್ಯ ಯಲಬುರ್ಗಾ ತಾಲೂಕಿನ ರ‍್ಯಾವಣಕಿಯವರು. ಕಲ್ಲಿನಾಥ ದೇವಾಲಯವು ಕಲ್ಲೂರಿನಲ್ಲಿದೆ, ಕುಕನೂರಿನ ಗುದ್ನೆಪ್ಪನ ಮಠ ಐತಿಹಾಸಿಕವಾದುದಾಗಿದೆ.

ಆಗಿನ ಕಾಲದ ಅಗ್ರಹಾರಗಳು ಇಲ್ಲಿನ ಪ್ರಮುಖ ಶೈಕ್ಷಣಿಕ ತಾಣವಾಗಿದ್ದವು.

ಸಂಪನ್ಮೂಲಗಳು :

ಬೆಟ್ಟಗುಡ್ಡಗಳ ಸಾಲು, ಶಿಲಾಶಾಸನಗಳು, ಕೋಟೆಕೊತ್ತಲಗಳು ಹಾಗೂ ಉರಿಬಿಸಿಲು – ಕೊಪ್ಪಳ ಜಿಲ್ಲೆಯ ವೈಶಿಷ್ಟ್ಯ. ಕಬ್ಬಿಣದ ಅದಿರು, ಬೆಣಚು, ಬಳಪದ ಕಲ್ಲು , ಬೂದು ಹಾಗೂ ಕೆಂಪು ಬಣ್ಣದ ಗ್ರಾನೈಟ್ ಎಂದೇ ಖ್ಯಾತಿ ಪಡೆದಿರುವ ಸೀಣೆ ಕಲ್ಲುಗಣಿಗಳು (ಕುಕನೂರು ಬಳಿ ) ಇಲ್ಲಿನ ಖನಿಜ ಸಂಪತ್ತು.

ಜಿಲ್ಲೆಯಲ್ಲಿ ಕಪ್ಪು ಹಾಗೂ ಕೆಂಪು ಮಣ್ಣು ಹೇರಳವಾಗಿದ್ದು, ಹತ್ತಿ ಸೂರ್ಯಕಾಂತಿ, ಕಬ್ಬು, ಗೋದಿ, ಜೋಳ, ಗೋವಿನ ಜೋಳ, ನೆಲಗಡಲೆ, ದಾಳಿಂಬೆ, ಪಪ್ಪಾಯಿ ಹಣ್ಣುಗಳ ಜೊತೆಗೆ ತರಕಾರಿ ಬೆಳೆಗಳ ಜೊತೆಗೆ ನೀರಾವರಿ ಜಮೀನು ಇಲ್ಲಿದೆ. ತುಂಗಾಭದ್ರಾ ಜಲಾಶಯ, ಹಿರೇಹಳ್ಳ ನೀರಾವರಿ ಯೋಜನೆ, ಗ್ರಾಮೀಣ ಪ್ರದೇಶದಲ್ಲಿನ ಜಿನುಗು ಕೆರೆ, ಬಾವಿಗಳು ಈ ಭಾಗದ  ಜೀವಜಲವಾಗಿವೆ.

ಭಾರತದ ಬಹುತೇಕ ಜಾತಿಯ ಜನಾಂಗದ (ಬುಡಕಟ್ಟು ಹೊರತು ಪಡಿಸಿ) ಎಲ್ಲ ಜನರು ಕೊಪ್ಪಳ ಜಿಲ್ಲೆಯಲ್ಲಿ ಕಾಣಸಿಗುತ್ತಾರೆ. ವರ್ಷದ ಕೊನೆ ಮತ್ತು ಆರಂಭದಲ್ಲಿ ವಿದೇಶಿಯರಿಗಾಗೀಯೇ ಕೆಲ ತಾಣಗಳು ಇಲ್ಲಿವೆ. ಉಡುಗೆ – ತೊಡುಗೆ, ಆಚಾರ ಸಂಪ್ರದಾಯಗಳಲ್ಲಿ ಹೇಳಿಕೊಳ್ಳುವಂಥ ವೈಶಿಷ್ಟ್ಯವೇನಿಲ್ಲ. ಕೊಪ್ಪಳ  ಐತಿಹಾಸಿಕವಾಗಿ  ಗಳಿಸಿದಷ್ಟೇ ಖ್ಯಾತಿಯನ್ನು  ಸಾಹಿತ್ಯ ಹಾಗೂ ಸಾಂಸ್ಕೃತಿಕ  ಕ್ಷೇತ್ರದಲ್ಲಿ  ಉಳಿಸಿಕೊಂಡಿದೆ. ಡೊಳ್ಳುಕುಣಿತ, ಕರಡಿಮಜಲು, ವೀರಗಾಸೆ, ಅಶ್ವನೃತ್ಯ, ಗೀಗೀಪದ, ತತ್ವಪದ, ರಿವಾಯತ್ … ಹೀಗೆ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆದಿದೆ.

ಕಳೆದರಡು ವರ್ಷಗಳಿಂದ ಅನೇಕ ಕೈಗಾರಿಕೆಗಳು ಕೊಪ್ಪಳಕ್ಕೆ ವಲಸೆ ಬರುತ್ತಿರುವುದರಿಂದ ಕರ್ನಾಟಕದ ಜೆವ್‌ಷಡ್‌ಪುರ ಎಂದೂ ಕೊಪ್ಪಳವನ್ನು ಕರೆಯಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 13 ಹಾಗೂ 63 ಜಿಲ್ಲೆಯಲ್ಲಿ  ಹಾದುಹೋಗುತ್ತವೆ.  ಇತ್ತೀಚೆಗೆ  ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ  ಕಳೆದ ವರ್ಷಕ್ಕೆ  ಹೊಲಿಸಿದರೆ ಮೂರುಪಟ್ಟು ಹೆಚ್ಚಾಗಿದೆ. ಜಿಲ್ಲೆಯ ಗಿಣಗೇರಿ ಬಳಿ ಲಘುವಿಮಾನ ನಿಲ್ದಾಣ ಕೇಂದ್ರ ಹಾಗೂ ಖಾಸಗಿ ಎಂಎಸ್‌ಪಿ ಎಲ್ ಪ್ರೈಲಿ. ಯ ವಿಮಾನ ನಿಲ್ದಾಣ ಕೇಂದ್ರಗಳಿವೆ.

ಗಂಗಾವತಿ ಹಾಗೂ ಕುಷ್ಟಗಿ ತಾಲೂಕುಗಳು ವಾಣಿಜ್ಯೋದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಗುರುತುಸಿಕೊಂಡಿವೆ.  ಭತ್ತ ಹಾಗೂ ದಾಳಿಂಬೆ ರಫ್ತಿನಲ್ಲಿ ಮುಂಚೂಣಿಯಲ್ಲಿವೆ. ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕುಗಳು ಐತಿಹಾಸಿಕ ಶ್ರೀಮಂತಿಕೆ ಹೊಂದಿವೆ. ದೇವಾಲಯಗಳ ಚಕ್ರವರ್ತಿ ಎನಿಸಿಕೊಂಡಿರುವ ಇಟಗಿಯ ಮಹಾದೇವ ದೇವಾಲಯ ಯಲಬುರ್ಗಾ ತಾಲೂಕಿನಲ್ಲಿವೆ.

ಕೊಪ್ಪಳ ತಾಲೂಕಿನಲ್ಲಿ  ಅಶೋಕನ ಶಿಲಾಶಾಸನಗಳು, ಪಾಲ್ಕಿಗುಂಡು, ಕೋಟೆಗಳಿದ್ದು, ಭೌಗೋಳಿಕವಾಗಿ ಬಯಲು ಸೀಮೆಯಲ್ಲಿರುವ ಕೊಪ್ಪಳ ಜಿಲ್ಲೆಯ ಉತ್ತರ ಅಕ್ಷಾಂಶ 15-21, ಹಾಗೂ ಪೂರ್ವ ರೇಖಾಂಶದಲ್ಲಿ 76-100ಯಲ್ಲಿ ಹರಡಿಕೊಂಡಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣ 5559 ಚ. ಕಿ. ಮೀ.ಗಳು 552.495 ಹೆಕ್ಟೇರು ಅರಣ್ಯ ಪ್ರದೇಶವಿದೆ. 367.027 ಹೆಕ್ಟೇರು ನೀರಾವರಿ ಪ್ರದೇಶವನ್ನು ಈ ಜಿಲ್ಲೆ ಹೊಂದಿದೆ. ಉಳಿದಂತೆ ಬೀಳುಭೂಮಿ, ಗುಡ್ಡಗಾಡು ಪ್ರದೇಶವಿದೆ. ಜಿಲ್ಲೆಯ ಏಕೈಕ ಜೀವನದಿ ತುಂಗಭದ್ರೆಗೆ ಮುನಿರಾಬಾದ್  ಬಳಿ ಅಣೆಕಟ್ಟನ್ನು ಕಟ್ಟಲಾಗಿದ್ದು ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿ ಭಾಗಶಃ ನೀರಾವರಿಯನ್ನು ಕಲ್ಪಿಸಿದೆ. ಕೊಪ್ಪಳದಿಂದ 12 ಕಿ.ಮೀ.ದೂರದಲ್ಲಿ ಯಲಬುರ್ಗಾ ತಾಲೂಕಿನಲ್ಲಿ ಹಿರೇಹಳ್ಳ ಜಲಾಶಯ  ನಿರ್ಮಾಣಗೊಂಡಿದೆ. 32 ಹಳ್ಳಿಗಳಿಗೆ ನೀರುಣಿಸುತ್ತವೆ. ಅಲ್ಲಲ್ಲಿ ಇರುವ ಕೆರೆಗಳೂ ಸಹ  ಕೃಷಿ ಮೀನುಗಾರಿಕೆಗೆ ಹಾಗೂ ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಲ್ಲಿಂದ?… ಹೇಗೆ?… ಜಿಲ್ಲೆಯ ಪ್ರವಾಸ ಇರಲಿ ಹೀಗೆ

ರೈಲು ಸಂಪರ್ಕ ಕೇವಲ ಕೊಪ್ಪಳ ತಾಲೂಕಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ  ರಸ್ತೆ ಮಾರ್ಗವೇ ಪ್ರವಾಸಿಗರಿಗೆ ಒಳಿತು. ನಾಡಿನ ಬಹುತೇಕ ಜಿಲ್ಲೆಗಳ ಬಸ್‌ಗಳು ಇಲ್ಲಿ ಓಡಾಡುತ್ತವೆ.  ಮೊದಲು ಕೊಪ್ಪಳಕ್ಕೆ  ಬಂದು ಇಲ್ಲಿನ ಐತಿಹಾಸಿಕ  ತಾಣಗಳನ್ನು ನೋಡಬಹುದು.  ಬಳಿಕ ಗಿಣಗೇರಾ ಕೈಗಾರಿಕೆಗಳು,  ಹುಲಗಿ ಮಾರ್ಗವಾಗಿ ಶಿವಪುರದ ಮಾರ್ಕಂಡೇಶ್ವರ, ಹೊಸ ಬಂಡಿ ಹರ್ಲಾಪುರ ಭರೂಕಾ ವಿದ್ಯುತ್ ಕಾರ್ಪೊರೇಷನ್, ಸಾಣಾಪುರ ಮಾರ್ಗವಾಗಿ ಆನೆಗೊಂದಿ,  ವಿರೂಪಾಪುರಗಡ್ಡೆ, ಅಂಜನಾದ್ರಿಬೆಟ್ಟ, ಪಂಪಾಸರೋವರ ಮತ್ತಿತರ ತಾಣಗಳ ರಮ್ಯನೋಟ ಸವಿಯಬಹುದು. ನಂತರ ಅಗಳಕೇರಾವರೆಗೆ ಅದೇ ಮಾರ್ಗದಲ್ಲಿ ವಾಪಸ್ ಬಂದು ಹಿಟ್ನಾಳ ಮೂಲಕ ಮುನಿರಾಬಾದ್‌ನ ಪಂಪಾವನ, ಟಿ.ಬಿ. ಡ್ಯಾಂಗಳನ್ನು ನೋಡುಬಹುದು.  ಕೊಪ್ಪಳದಿಂದ ಯಲಬುರ್ಗಾ ತಾಲೂಕಿನ ಇಟಗಿ, ಮಂಡಲಗಿರಿ, ಕುಕನೂರು, ಕಲ್ಲೂರು ಯಲಬುರ್ಗಾದ ಐತಿಹಾಸಿಕ ಸ್ಥಳಗಳನ್ನು ನೋಡಬಹುದು. ಅಲ್ಲಿಂದ ಮಂಗಳೂರು ಮೂಲಕ ಕುಷ್ಟಗಿ ತಾಲೂಕು ಪ್ರವಾಸಿ ಹನುಮಸಾಗರದ ಅಭಿನವ ತಿರುಪತಿ ಘೇ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕಪಿಲತಿೀರ್ಥ (ಮಳೆಗಾಲದಲ್ಲಿ ಮಾತ್ರ), ಚಂದಾಲಿಂಗೇಶ್ವರ ದೇವಸ್ಥಾನಗಳಿಗೆ ತೆರಳಬಹುದು. ಗಂಗಾವತಿ ತಾಲೂಕಿನ ಆನೆಗುಂದಿ, ಕನಕಗಿರಿ, ಹೇಮಗುಡ್ಡದ ಕೋಟೆ ಮತ್ತು  ಹಿರೇಬೆಣಕಲ್ ಬಳಿ ಇರುವ ಶಿಲಾಸಮಾಧಿ— (ನಗಾರಿ ಗುಡ್ಡ) ಇವಿಷ್ಟು ಕೊಪ್ಪಳ ಜಿಲ್ಲೆಯ ಪ್ರವಾಸಿತಾಣಗಳು.

ಕೊಪ್ಪಳದ ಕೋಟೆ, ಗವಿಮಠ, ಶಿಲಾಶಾಸನ, ಇಂದ್ರಕೀಲ ಪರ್ವತ ನೋಡಲು  ಒಂದು  ದಿನ  ಬೇಕಾಗುತ್ತದೆ. ಬಳಿಕ ಆನೆಗೊಂದಿ  ಹಾಗೂ  ಸುತ್ತಲಿನ  ತಾಣಗಳನ್ನು ನೋಡಲು ಒಂದು ದಿನ ಬೇಕಾಗುತ್ತದೆ ಬಳಿಕ  ಮುನಿರಾಬಾದ್‌ನ ಡ್ಯಾಂ, ಪಂಪಾವನ, ಇಟಗಿ ನೋಡಲು ಒಂದು ದಿನ ಹಾಗೂ ಕುಷ್ಟಗಿ ಜಿಲ್ಲೆಯ  ಐತಿಹಾಸಿಕ ಪರಂಪರೆ, ಜಲ್ಲೆಯ ಶ್ರೀಮಂತಿಕೆ, ಬೆಳೆ, ತಿನಿಸು, ಉಡುಗೆ – ತೊಡುಗೆ  … ಎಲ್ಲವನ್ನು  ಅರಿತುಕೊಳ್ಳಬಹುದು. ಯಾವುದೇ ಸ್ಥಳಗಳಿಗೂ ಗೈಡ್ ವ್ಯವಸ್ಥೆ  ಕೊಪ್ಪಳ ಜಿಲ್ಲೆಯಲ್ಲಿ  ಇಲ್ಲ. ಮಾರ್ಗ ಪರಿಚಯವಿದ್ದರೆ ಸಾಕು. ಎಲ್ಲ ತಾಣಗಳ  ಸೊಗಸು ಸವಿಯಬಹುದು.

ಗುಡ್ಡಗಳು  ಚಿನ್ನದ  ಬೆಲೆ  ಹೊಂದಿದ್ದು  ಗ್ರಾನೈಟ್ ಗಣಿ ಉದ್ಯಮ  ಹಾಗೂ ಕಟ್ಟಡಕ್ಕಾಗಿ ಕಲ್ಲಿನ ಉದ್ಯಮಕ್ಕೆ ದಾರಿ ಮಾಡಿಕೊಟ್ಟಿವೆ. ಜಿಲ್ಲೆಯಲ್ಲಿರುವ 744 ಗ್ರಾಮಗಳ ಪೈಕಿ 531 ಗ್ರಾಮಗಳ  ಕುಡಿಯುವ ನೀರು ಪ್ಲೋರೈಡ್, ಅಧಿಕ ಲವಣಾಂಶ ಹಾಗೂ ಕಬ್ಬಿಣಾಂಶದಿಂದ ಕೂಡಿದೆ.

ಶೇ. 55. 02 ರಷ್ಟು ಸಾಕ್ಷರತಾ ಪ್ರಮಾಣ ಹೊಂದಿರುವ ಕೊಪ್ಪಳ  ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸಂಸ್ಥಗಳನ್ನು ಕಾಣಬಹುದಾಗಿದೆ. ದೇವಾಲಯಗಳು, ಸ್ಮಾರಕಗಳು, ಗುಹೆಗಳು, ಕೋಟೆಗಳು, ಶಾಸನಗಳು, ಕೆರೆಗಳು, ಉದ್ಯಾನವನಗಳು, ಬಸದಿಗಳು, ಮಠಗಳು ಇತ್ಯಾದಿ ಹೇರಳವಾಗಿ ಸಿಕ್ಕುತ್ತವೆ.

ಕಣ್ಣಿದ್ದವರು ನೋಡಲೇಬೇಕಾದ  ಕಲೆಯ ಬೀಡು ಕನಕಗಿರಿ. ಅಂತಾರಾಷ್ಟ್ರೀಯ  ಖ್ಯಾತಿ ಪಡೆದ  ಕಿನ್ನಾಳಗೊಂಬೆ ಕಲೆ, ವೀರತ್ವ ವೈಭವದ ತಾಣ ಆನೆಗೊಂದಿ, ಪವಿತ್ರ ಪಂಪಾ ಸರೋವರ,  ಕಿಷ್ಕಿಂಧೆ,  ಕೋಟಿಲಿಂಗಗಳ  ತಾಣ ಪುರ, ಜಿಲ್ಲೆಯ  ಏಕ  ಮೇವ ಜಲಪಾತ – ಕಪಿಲ  ತೀರ್ಥ (ಕಪಿಲೆಪ್ಪ),  ಬಿಸಿಲು ಬೀಳದ ಬಾವಿ ಹೆಸರಿಲ್ಲದ ಮರ ಖ್ಯಾತಿಯ ಚಂದಾಲಿಂಗ, ಮಿನಿಗೋಲಗುಂಬಜ್, ಮಿನಿ  ತಾಜಮಹಲ್, ಕಲ್ಲುಬಾವಿ ಖ್ಯಾತಿಯ  ಗಂಗಾವತಿ, ಕುಮಾರರಾಮನ ಕಮ್ಮಟದುರ್ಗ  ಮನಸೆಳೆಯುವ  ತಾಣಗಳು.

ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು  ಯಲಬುರ್ಗಾ ತಾಲೂಕುಗಳಿವೆ.

ಇತರೆ ಕೆಲವು ಪ್ರಮುಖ ಸ್ಥಳಗಳು

ಹುಲಗಿ, ಪಂಪಾವನ, ಸಿಮೆಂಟ್ ಮತ್ತಿತರ ಕೈಗಾರಿಕೆಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಜಿಲ್ಲಾಡಳಿತ ಭವನ,  ಬಹದ್ದೂರಬಂಡಾ ಕೋಟೆ, ಕೊಪ್ಪಳದ ಕೋಟೆ, ಶಿಲಾಯುಗದ ಚಿತ್ರಗಳು, ಜೈನ ಬಸದಿಗಳು, ಇಟಗಿಯ ಮಹಾದೇವ ದೇವಾಲಯಗಳು, ದೋಟಿಹಾಳದ ಶುಕುಮುನೇಶ್ವರ ಹನುಮಸಾಗರದ ಘೇಲಕ್ಷ್ಮೀವೆಂಕಟೇಶ್ವರ (ಅಭಿನವ ತಿರುಪತಿ) ದೇವಸ್ಥಾನ ಮುಂತಾದ ಅನೇಕ ತಾಣಗಳು  ಮಕ್ಕಳಿಗೆ  ಸಂಪೂರ್ಣ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ವೈಭವವನ್ನು ಪರಿಚಯ ಮಾಡಿಕೊಡುತ್ತವೆ.